ಪ್ಯಾನಿಕ್ ಅಟ್ಯಾಕ್ ಅಥವಾ ಆತಂಕಾಘಾತ; ಲಕ್ಷಣಗಳು, ತಡೆಗಟ್ಟುವ ವಿಧಾನ... (ಕುಶಲವೇ ಕ್ಷೇಮವೇ)
ಉದಾಹರಣೆ 1
ಐಟಿ ಕಂಪನಿ ಉದ್ಯೋಗಿ ರಾಘವ ಅಪ್ಪ, ಅಮ್ಮ, ಪತ್ನಿ ಮತ್ತು ಮೂರು ವರ್ಷದ ಮಗನೊಂದಿಗೆ ಕಾರಿನಲ್ಲಿ ನಗರದಿಂದ 60 ಕಿಲೋಮೀಟರ್ ರೆಸಾರ್ಟೊಂದಕ್ಕೆ ಹೋಗಿ ಖುಷಿಯಿಂದ ವಾರಾಂತ್ಯ ಕಳೆದು ಬರೋಣ ಎಂದು ಹೊರಟಿದ್ದ. ಹೈವೇಯಲ್ಲಿ ಕಾರು ಓಡಿಸುತ್ತಿರುವಾಗ ದುರದೃಷ್ವವಶಾತ್ ಹಿಂದಿನಿಂದ ಇನ್ನೊಂದು ಕಾರು ಢಿಕ್ಕಿ ಹೊಡೆಯಿತು. ಅವರೆಲ್ಲರಿಗೂ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗಳಾದವು. ತನ್ನವರು ಗಾಯಗೊಂಡದ್ದನ್ನು ನೋಡಿ ರಾಘವನಿಗೆ ತೀರಾ ಭಯವಾಯಿತು.
ಅವನ ಹೃದಯ ಬಡಿತ ಅತ್ಯಂತ ಜೋರಾಯಿತು. ಅವನು ಇದ್ದಕ್ಕಿದ್ದಂತೆ ಬೆವರತೊಡಗಿದನು. ಅಪ್ಪ, ಅಮ್ಮ, ಹೆಂಡತಿ ಮತ್ತು ಮಗ ನೋವಿನಿಂದ ಚೀರುವುದನ್ನು ಕೇಳಿ ‘ಅಯ್ಯೋ ನನ್ನೊಬ್ಬನನ್ನೇ ಬಿಟ್ಟು ಎಲ್ಲರೂ ಸಾಯುತ್ತಿದ್ದಾರಾ? ನನ್ನ ಮುದ್ದಿನ ಮಗು ಸತ್ತಿತಾ?’ ಎಂದು ಚಿಂತಾಕ್ರಾಂತನಾಗಿ ದಿಕ್ಕೇ ತೋಚದಂತಾಯಿತು. ಅವನಿಗೆ ಉಸಿರಾಡಲು ಆಗಲಿಲ್ಲ ಮತ್ತು ದಿಗ್ಭ್ರಮೆಯಿಂದ ಕೈಕಾಲುಗಳು ಆಡಲಿಲ್ಲ. ಅವನ ದು:ಖ ನಿಲ್ಲಲೇ ಇಲ್ಲ. ತಕ್ಷಣ ಅವನ ಸಹಾಯಕ್ಕೆ ಧಾವಿಸಿದ ತುರ್ತು ಸೇವಾ ಸಿಬ್ಬಂದಿ ನೀರು ಕುಡಿಸಿ ಅವನಿಗೆ ಸಮಾಧಾನ ಮಾಡಿ ಸ್ವಲ್ಪ ಹೊತ್ತಿನಲ್ಲಿ ಸಾಮಾನ್ಯ ಸ್ಥಿತಿಗೆ ತಂದರು. ನಂತರ ಕೆಲವು ದಿನಗಳಲ್ಲಿ ಸೂಕ್ತ ಚಿಕಿತ್ಸೆ ದೊರೆತು ಎಲ್ಲರೂ ಗುಣವಾದರು.
ಉದಾಹರಣೆ 2
ಇತ್ತೀಚೆಗೆ ಭಾರೀ ಮಳೆಗೆ ತುತ್ತಾದ ವಯನಾಡಿನಲ್ಲಿ ಮಾಯಾಗೆ ತನ್ನ ಮನೆ ಅಲುಗಾಡುತ್ತಿರುವಂತೆ ಭಾಸವಾಯಿತು. ಮೊದಲಿಗೆ ಅವಳು ಹೆಚ್ಚು ಭಯಗೊಳ್ಳದೇ ಶಾಂತವಾಗಿದ್ದಳು. ಆದರೆ ಮನೆಯ ಅಲುಗಾಡುವಿಕೆ ತೀವ್ರಗೊಂಡಂತೆ ಅವಳಿಗೆ ಭಯ ಹೆಚ್ಚಾಯಿತು. ‘ನನ್ನ ಮನೆ ಇನ್ನೇನು ನಮ್ಮ ಮೇಲೆ ಬಿದ್ದೇ ಹೋಗಲಿದೆ, ನಾವೆಲ್ಲ ಸತ್ತುಹೋದರೆ ಏನು ಗತಿ? ಕೈಕಾಲು ಮುರಿದೇ ಹೋದರೂ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ?’ ಎಂದುಕೊಂಡಳು. ಈ ದಿಗಿಲಿನಿಂದ ಅವಳ ಹೃದಯ ಬಡಿತ ಹೆಚ್ಚಾಯಿತು. ಭಯ ಹೆಚ್ಚಾಗಿ ಉಸಿರಾಡಲು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ತಕ್ಷಣ ಅವಳು ಕುಸಿದು ಬಿದ್ದಳು. ತಕ್ಷಣ ಎದ್ದು ನಿಲ್ಲಲು ಪ್ರಯತ್ನಿಸಿದಳು. ಆದರೆ ಅವಳ ಕಾಲುಗಳು ದುರ್ಬಲವಾದವು.
ದೇಹದ ಸಮತೋಲನ ಕಳೆದುಕೊಂಡ ಅವಳು ಕೆಳಗೆ ಬಿದ್ದಳು. ಕುರ್ಚಿಯನ್ನು ಹಿಡಿದು ಎದ್ದೇಳಲು ಪ್ರಯತ್ನಿಸಿದಳು. ಆದರೆ ಏಳಲು ಆಗಲಿಲ್ಲ. ಮೈ ಕಂಪಿಸಲು ಆರಂಭಿಸಿತು. ಮನೆ ಕೆಲವು ಸೆಕಂಡುಗಳ ಕಾಲ ಮಾತ್ರ ಅಲ್ಲಾಡಿತಾದರೂ ಅವಳ ಭಯ ಇನ್ನೂ ಇತ್ತು. ಮನೆಯವರು ಆಕೆಯನ್ನು ಹಿಡಿದು ಸಂತೈಸಿ ನಂತರ ಸುಧಾರಿಸಿದರು. ನಂತರ ವೈದ್ಯರಲ್ಲಿಗೆ ಕರೆದೊಯ್ದು ತೋರಿಸಿ ಚಿಕಿತ್ಸೆ ಕೊಡಿಸಿದರು.
ಈ ರೀತಿಯ ಆತಂಕ/ಭಯದ ಸ್ಥಿತಿಯನ್ನು ಆತಂಕಾಘಾತ (ಪ್ಯಾನಿಕ್ ಅಟ್ಯಾಕ್) ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಕಟಗೊಳ್ಳುವ ಭಯ ಅಥವಾ ಅಸ್ವಸ್ಥತೆಯ ತೀವ್ರ ಮತ್ತು ಹಠಾತ್ ಆಕ್ರಮಣವೇ ಆತಂಕಾಘಾತ. ಇದು ಸಾಮಾನ್ಯವಾಗಿ ಅನಿರೀಕ್ಷಿತವಾಗಿರುತ್ತದೆ ಮತ್ತು ಭಯ ಹುಟ್ಟಿಸುತ್ತದೆ. ಆತಂಕಾಘಾತವಾದಾಗ ಜನರು ಸ್ಪಲ್ಪ ಹೊತ್ತು (ಕೆಲವು ನಿಮಿಷಗಳ ತನಕ) ತನಕ ತಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ.
ಅಪಘಾತ, ಭೂಕಂಪ, ಕಚೇರಿಯಲ್ಲಿ ಅತಿ ಹೆಚ್ಚು ಕೆಲಸದ ಪರಿಸ್ಥಿತಿ ಇಂತಹ ನಿರ್ದಿಷ್ಟ ಸನ್ನಿವೇಶಗಳು ಆತಂಕಾಘಾತಕ್ಕೆ ಪ್ರಚೋದನೆ ನೀಡಬಹುದು. ಆ ಸಮಯದಲ್ಲಿ ದೇಹ "ಹೋರಾಟ ಅಥವಾ ಪಲಾಯನ" ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಅಡ್ರಿನಲಿನ್ ತರಹದ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ದೈಹಿಕವಾಗಿ ತೊಂದರೆಯ ಲಕ್ಷಣಗಳಿಗೆ ಕಾರಣವಾಗಬಹುದು.
ಪ್ಯಾನಿಕ್ ಅಟ್ಯಾಕ್ ಲಕ್ಷಣಗಳು
ಆತಂಕಾಘಾತ ಸಾಮಾನ್ಯವಾಗಿ ಹಠಾತ್ತಾಗಿ ಪ್ರಾರಂಭವಾಗುತ್ತದೆ ಮತ್ತು ಒಂದೆರಡು ನಿಮಿಷಗಳಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದರ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೂ ಕೆಲವು ಸಾಮಾನ್ಯ ದೈಹಿಕ ಮತ್ತು ಮಾನಸಿಕ ಲಕ್ಷಣಗಳು ಹೀಗಿವೆ:
ದೈಹಿಕ ಲಕ್ಷಣಗಳು
ಹೃದಯ ಬಡಿತ: ಸಾಮಾನ್ಯಕ್ಕಿಂತ ಅತಿಯಾಗಿ ಹೃದಯ ಬಡಿದುಕೊಳ್ಳುತ್ತದೆ.
ಬೆವರು: ತಂಪಾದ ಸ್ಥಿತಿಯಲ್ಲಿಯೂ ಸಹ ಆತಂಕಾಘಾತವಾದರೆ ಅತಿಯಾದ ಬೆವರುವಿಕೆ ಕಂಡುಬರುತ್ತದೆ.
ನಡುಕ: ಅನಿಯಂತ್ರಿತ ಅಲುಗಾಡುವಿಕೆ ಅಥವಾ ನಡುಗುವಿಕೆ.
ಉಸಿರಾಟದ ತೊಂದರೆ: ಆತಂಕದಿಂದ ಉಸಿರುಗಟ್ಟುವಿಕೆ ಅಥವಾ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ.
ಎದೆನೋವು: ಆತಂಕಾಘಾತದಲ್ಲಿ ಉಂಟಾಗುವ ಎದೆನೋವು ತೀಕ್ಷ್ಣವಾದ ನೋವಾಗಿರಬಹುದು.
ವಾಕರಿಕೆ ಅಥವಾ ಕಿಬ್ಬೊಟ್ಟೆಯ ಅಸ್ವಸ್ಥತೆ: ಹೊಟ್ಟೆನೋವು ಅಥವಾ ಹೊಟ್ಟೆ ಸೆಳೆತವಾಗುವುದು.
ತಲೆತಿರುಗುವಿಕೆ: ತಲೆ ತಿರುಗಿದಂತಾಗಿ ಅಸ್ಥಿರತೆ ಉಂಟಾಗುತ್ತದೆ ಮತ್ತು ಮೂರ್ಛೆ ಹೋಗುವ ಸಂವೇದನೆಯ ಅನುಭವವಾಗುತ್ತದೆ.
ಅಧಿಕ ಉಷ್ಣತೆ: ಆತಂಕಾಘಾತವಾದಾಗ ದೇಹದ ಉಷ್ಣತೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ.
ಮೈ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ: ಸಾಮಾನ್ಯವಾಗಿ ಕೈಗಳು, ಪಾದಗಳು ಅಥವಾ ಮುಖ ಮರಗಟ್ಟಿದಂತಾಗುತ್ತದೆ ಅಥವಾ ಜುಮ್ಮೆನಿಸುತ್ತದೆ.
ಮಾನಸಿಕ ಲಕ್ಷಣಗಳು
ಭಯ: ಏನೋ ಭಯಾನಕ ವಿದ್ಯಮಾನ ಸಂಭವಿಸಲಿದೆ ಎಂಬ ಭಾವನೆ ಮೂಡಿ ಮನಸ್ಸಿನ ಮೇಲೆ ನಿಯಂತ್ರಣ ಕೆಲಕಾಲ ಕಳೆದುಹೋಗುತ್ತದೆ.
ಸಾಯುವ ಭಯ: ತಾನು ಸತ್ತೆ ಎಂದು ಅಗಾಧ ಭಯ ಬರುತ್ತದೆ. ಒಬ್ಬನು ಸಾಯಲಿದ್ದಾನೆ ಎಂಬ ಹಠಾತ್ ಮತ್ತು ಅಗಾಧ ಭಯ.
ವಾಸ್ತವತೆಯಿಂದ ಬೇರ್ಪಡುವಿಕೆ: ತನ್ನಿಂದ ಅಥವಾ ಸುತ್ತಮುತ್ತಲಿನ ಪ್ರದೇಶದಿಂದ ಬೇರ್ಪಟ್ಟ ಭಾವನೆ ಉಂಟಾಗುತ್ತದೆ.
ಪ್ಯಾನಿಕ್ ಅಟ್ಯಾಕ್ ಗೆ ಚಿಕಿತ್ಸೆ
ಆತಂಕಾಘಾತದ ಚಿಕಿತ್ಸೆಯು ಸಾಮಾನ್ಯವಾಗಿ ಅರಿವಿನ ವರ್ತನೆಯ ಚಿಕಿತ್ಸೆ (CBT - cognitive behavioral therapy) ಮತ್ತು ಔಷಧಿಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. CBT ಆತಂಕ ಪ್ರಚೋದಿಸುವ ಆಲೋಚನಾ ಮಾದರಿಗಳನ್ನು ಗುರುತಿಸಲು ಮತ್ತು ಬದಲಾಯಿಸಲು ಸಹಾಯ ಮಾಡುತ್ತದೆ.
ಯಾರಿಗಾದರೂ ಪ್ಯಾನಿಕ್ ಅಟ್ಯಾಕ್ ಉಂಟಾದಾಗ ಅವರ ಮನೆಯವರು ಅಥವಾ ಹತ್ತಿರದವರು ಯಾರಾದರೂ ಇರಲಿ ಅವರನ್ನು ವೈದ್ಯರ ಹತ್ತಿರ ಅಥವಾ ಆಸ್ಪತ್ರೆಗೆ ಕರೆದೊಯ್ಯಬೇಕು.
ಪ್ಯಾನಿಕ್ ಅಟ್ಯಾಕ್ ತಡೆಗಟ್ಟುವ ವಿಧಾನಗಳು
ಜೀವನಶೈಲಿಯ ಕೆಲವು ಬದಲಾವಣೆಗಳು ಆತಂಕಾಘಾತವನ್ನು ತಡೆಗಟ್ಟಲು ಸಹಾಯ ಸಹಾಯ ಮಾಡುತ್ತವೆ. ನಿಯಮಿತ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಸಮತೋಲಿತ ಆಹಾರ, ಕಡಿಮೆ ಕೆಫೀನ್ ಮತ್ತು ಸಕ್ಕರೆ ಸೇವನೆ ಮನಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಕಷ್ಟು ನಿದ್ರೆ ಮಾಡುವುದು ಆತಂಕವನ್ನು ಬಹಳ ಕಡಿಮೆ ಮಾಡುತ್ತದೆ. ಯೋಗ ಮತ್ತು ಧ್ಯಾನ ಕೂಡ ಸಹಾಯಕಾರಿ ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ಆತಂಕವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಆತಂಕ ನಿರ್ವಹಣೆಯನ್ನು ಎಲ್ಲರೂ ಕಲಿಯಲೇಬೇಕು. ದೀರ್ಘ ಉಸಿರಾಟದ ಅಭ್ಯಾಸ ನರಮಂಡಲವನ್ನು ಶಾಂತಗೊಳಿಸಿ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಂದಿಗೂ ಆಯಾಸವಾಗುವ ಮಟ್ಟಿಗೆ ಕೆಲಸ ಮಾಡಬಾರದು. ದೀರ್ಘ ಕಾಲ ಕೆಲಸ ಮಾಡುವಾಗ ವಿಶ್ರಾಂತಿ ತೆಗೆದುಕೊಳ್ಳಬೇಕು.
ಸಮಯ ನಿರ್ವಹಣೆ, ಹವ್ಯಾಸಗಳು ಮತ್ತು ವಿಶ್ರಾಂತಿ ತಂತ್ರಗಳ ಮೂಲಕ ಒತ್ತಡವನ್ನು ಗುರುತಿಸುವುದು ಮತ್ತು ನಿರ್ವಹಿಸುವುದು ಆತಂಕಾಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸ್ನೇಹಿತರು, ಕುಟುಂಬ, ಅಥವಾ ಬಂಧುಗಳೊಂದಿಗೆ ಸೌಹಾರ್ದಮಯ ಸಂಬಂಧ ಹೊಂದಿದ್ದರೆ ಆತಂಕ ಅಷ್ಟೊಂದು ಕಾಡುವುದಿಲ್ಲ. ಭಯ, ಆತಂಕ, ಯೋಚನೆಗಳು ಅಥವಾ ಒತ್ತಡದ ವಿಷಯಗಳನ್ನು ಆಪ್ತರೊಂದಿಗೆ ಚರ್ಚಿಸಿದರೆ ಉತ್ತಮ.