ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಿಫಾ ವೈರಸ್ ಸೋಂಕು: ಲಕ್ಷಣಗಳು, ಚಿಕಿತ್ಸೆ (ಕುಶಲವೇ ಕ್ಷೇಮವೇ)

ಮಲೇಷ್ಯಾದ ಸುಂಗೈ ನಿಫಾ ಎಂಬ ಗ್ರಾಮದಲ್ಲಿ ಈ ಸೋಂಕು 1998ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದರಿಂದ ಇದಕ್ಕೆ ನಿಫಾ ಎಂಬ ಹೆಸರನ್ನೇ ಇಡಲಾಗಿದೆ. ಆಗ ಇದು ಹಲವರಲ್ಲಿ ಮಿದುಳಿನ ಊತ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿತ್ತು.
Published on

ಕೇರಳದಲ್ಲಿ ಇತ್ತೀಚೆಗೆ ಮತ್ತೆ ನಿಫಾ ವೈರಾಣು ಸೋಂಕು ಕಾಣಿಸಿಕೊಂಡಿರುವುದರಿಂದ ನಮ್ಮ ರಾಜ್ಯದ ಗಡಿಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಿಫಾ ಸೋಂಕು ಹೇಗೆ ಬರುತ್ತದೆ?

ಹಣ್ಣು ತಿನ್ನುವ ಬಾವಲಿಗಳು ನಿಫಾ ವೈರಸ್ಸಿನ ಮೂಲ ಮತ್ತು ಅವುಗಳೇ ನಿಫಾ ವೈರಸ್ ಹರಡಲು ಕಾರಣ ಎಂದು ನಂಬಲಾಗಿದೆ. ಹೀಗಾಗಿ ಕೇರಳ ರಾಜ್ಯದಲ್ಲಿ ಬಾವಲಿಗಳನ್ನು ಪರೀಕ್ಷೆ ಮಾಡಿದಾಗ ಕೆಲವು ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಈ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹಬ್ಬುತ್ತದೆ.

ಈ ಹಿಂದೆ 2018ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಸೋಂಕು ಬೆಳಕಿಗೆ ಬಂದಿತು. ಇದಾದ ಬಳಿಕ 2021 ಮತ್ತು 2023ರಲ್ಲಿ ಸೋಂಕು ಆ ರಾಜ್ಯದಲ್ಲಿ ಕಾಣಿಸಿಕೊಂಡಿತ್ತು.

ಮಲೇಷ್ಯಾದ ನಿಫಾ ಗ್ರಾಮದಲ್ಲಿ ಪತ್ತೆಯಾಗಿದ್ದ ಸೋಂಕು
ಮಲೇಷ್ಯಾದ ಸುಂಗೈ ನಿಫಾ ಎಂಬ ಗ್ರಾಮದಲ್ಲಿ ಈ ಸೋಂಕು 1998ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದರಿಂದ ಇದಕ್ಕೆ ನಿಫಾ ಎಂಬ ಹೆಸರನ್ನೇ ಇಡಲಾಗಿದೆ. ಆಗ ಇದು ಹಲವರಲ್ಲಿ ಮಿದುಳಿನ ಊತ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿತ್ತು.

ಪರಾಗ ಮತ್ತು ಮಕರಂದ ತಿನ್ನುವ ಬಾವಲಿಗಳಲ್ಲಿ ಈ ವೈರಸ್ ಸಾಮಾನ್ಯವಾಗಿ ಕಂಡುಬರುತ್ತದೆ. ಬಾವಲಿಗಳ ಮೂತ್ರ ಮತ್ತು ಲಾಲಾರಸ ಸ್ಪರ್ಶಿಸುವ ಮೂಲಕ ಇದು ನೇರವಾಗಿ ನಾಯಿ, ಬೆಕ್ಕು, ಮೇಕೆ, ಕುದುರೆ,ಕುರಿ ಮುಂತಾದ ಪ್ರಾಣಿಗಳು ಮತ್ತು ನಂತರ ಮನುಷ್ಯರಿಗೆ ಈ ವೈರಾಣು ಸೋಂಕು ತರುತ್ತದೆ.

ನಿಫಾ ವೈರಾಣು ಸೋಂಕಿನ ಲಕ್ಷಣಗಳು

ನಿಫಾ ಒಂದು ಸಾಂಕ್ರಾಮಿಕ ವೈರಾಣುವಾಗಿದೆ. ಈ ವೈರಾಣು ಸೋಂಕು ತಗುಲಿದ ಐದು ದಿನಗಳು ಅಥವಾ ಎರಡು ವಾರಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ವೈರಸ್ಸಿನ ಪ್ರಮುಖ ಸಮಸ್ಯೆ ಎಂದರೆ ಇದು ಗಂಭೀರ ಪ್ರಮಾಣದಲ್ಲಿ ಮಿದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ.

ಆರಂಭಿಕ ಹಂತದಲ್ಲಿ ಸಾಮಾನ್ಯ ಶೀತದಂತಹ ಲಕ್ಷಣಗಳಾದ ಜ್ವರ, ತಲೆಸುತ್ತುವಿಕೆ ಮತ್ತು ಗಂಭೀರ ತಲೆನೋವು ಕಂಡುಬರುತ್ತವೆ. ಕೆಲವೊಮ್ಮೆ ಉಸಿರಾಟದ ತೊಂದರೆಗಳು, ನಡುಕ, ನಿದ್ರಾಲಸ್ಯಗಳು ಕಾಣಿಸಿಕೊಳ್ಳುತ್ತವೆ. ನಂತರ ಗೊಂದಲ, ಅಮಲೇರಿದ ಸ್ಥಿತಿ ಮತ್ತು ಪ್ರಜ್ಞಾಹೀನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಒಂದೆರಡು ದಿನದಲ್ಲಿ ರೋಗಿಗಳು ಕೋಮಾಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಇದೊಂದು ಮಾರಾಣಾಂತಿಕ ರೋಗವಾಗಿದೆ. ನಿಫಾ ಸೋಂಕಿಗೆ ಒಳಗಾದವರಲ್ಲಿ ಸಾವಿನ ದರ ಶೇಕಡಾ 70ರಷ್ಟಿದೆ ಎಂಬುದು ಆತಂಕದ ಸಂಗತಿಯಾಗಿದೆ.

ಸಾಂದರ್ಭಿಕ ಚಿತ್ರ
ಮೆದುಳು ತಿನ್ನುವ ಅಮೀಬಾ ಅಥವಾ Amebic Meningo encephalitis (ಕುಶಲವೇ ಕ್ಷೇಮವೇ)

ನಿಫಾ ಸೋಂಕಿಗೆ ಚಿಕಿತ್ಸೆ

ಸದ್ಯಕ್ಕೆ ನಿಫಾ ವೈರಸ್ಸಿಗೆ ಯಾವುದೇ ಲಸಿಕೆಗಳಿಲ್ಲ. ಹಾಗೆಯೇ ಈ ಸೋಂಕು ಶಮನಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಮತ್ತು ಔಷಧೋಪಚಾರಗಳು ಇಲ್ಲ. ಆದ್ದರಿಂದ ವೈದ್ಯರು ಸೋಂಕಿನ ಲಕ್ಷಣಗಳನ್ನು ಆಧರಿಸಿ ಅವುಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಚಿಕಿತ್ಸೆಯನ್ನು ನೀಡುತ್ತಾರೆ. ನಿಫಾ ವೈರಾಣು ಸೋಂಕಿತರನ್ನು ಯಾರ ಸಂಪರ್ಕಕ್ಕೂ ಒಳಗಾಗದಂತೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಅವರನ್ನು ತುರ್ತು ಕೊಠಡಿಯಲ್ಲಿ ಚಿಕಿತ್ಸೆಗೆ ಒಳಪಡಿಸಿ ಅವರ ಅಂಗಾಂಗ ಕಾರ್ಯಾಚರಣೆಯನ್ನು ಪರೀಕ್ಷಿಸಲಾಗುತ್ದದೆ. ರೋಗಿಗಳಿಗೆ ಆಗಾಗ್ಗೆ ತೀವ್ರ ನಿಗಾ ಬೆಂಬಲ ಬೇಕಾಗುತ್ತದೆ.

ಮೊದಲಿಗೆ ಜ್ವರ, ಉಸಿರಾಟದ ತೊಂದರೆ ಮತ್ತು ನರವೈಜ್ಞಾನಿಕ ತೊಡಕುಗಳಂತಹ ರೋಗಲಕ್ಷಣಗಳನ್ನು ನಿಯಂತ್ರಿಸಲು ವೈದ್ಯರು ಚಿಕಿತ್ಸೆ ನೀಡುತ್ತಾರೆ. ಈ ಸಮಯದಲ್ಲಿ ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ನಿರ್ವಹಿಸುವುದು ನಿರ್ಣಾಯಕವಾಗಿರುತ್ತದೆ. ಆಂಟಿವೈರಲ್ ಥೆರಪಿ ಇಲ್ಲಿ ಬಹುಮುಖ್ಯ.

ಸಾಂದರ್ಭಿಕ ಚಿತ್ರ
ಶ್ವಾಸಕೋಶದ ಕ್ಯಾನ್ಸರ್: ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ನಿಫಾ ಸೋಂಕು ತಗುಲುವುದನ್ನು ತಡೆಯುವುದು ಹೇಗೆ?

ನಿಫಾ ವೈರಾಣು ಸೋಂಕು ತಗುಲುವುದನ್ನು ತಪ್ಪಿಸಲು ಬಾವಲಿಗಳು ಮತ್ತು ಹಂದಿಗಳೊಂದಿಗೆ ಸಂಪರ್ಕವನ್ನು ಮಿತಿಗೊಳಿಸಬೇಕು. ಈ ಪ್ರಾಣಿಗಳಿರುವ ಪ್ರದೇಶಗಳಿಂದ ದೂರವಿರಬೇಕು. ಪ್ರಾಣಿ ಉತ್ಪನ್ನಗಳನ್ನು ಸೇವಿಸುವ ಮುನ್ನ ಎಚ್ಚರಿಕೆಯಿರಬೇಕು. ಅವುಗಳನ್ನು ಸರಿಯಾಗಿ ಬೇಯಿಸಿಯೇ ಖಾದ್ಯಗಳನ್ನು ತಯಾರಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ವೈಯಕ್ತಿಕ ಸ್ವಚ್ಛತೆ ಆರೋಗ್ಯದ ರಹದಾರಿ. ಆದ್ದರಿಂದ ಹೊರಗೆ ಹೋಗಿ ಮನೆಗೆ ಬಂದಾಗ ಸೋಪ್ ಮತ್ತು ನೀರಿನಿಂದ ನಿಯಮಿತವಾಗಿ ಕೈ ತೊಳೆಯಬೇಕು. ವಿಶೇಷವಾಗಿ ಅನಾರೋಗ್ಯದ ವ್ಯಕ್ತಿಗಳು ಅಥವಾ ಪ್ರಾಣಿಗಳ ಸಂಪರ್ಕದ ನಂತರ ಕೈ ಸ್ವಚ್ಛಮಾಡಿಕೊಳ್ಳುವುದನ್ನು ಮರೆಯಬಾರದು. ಊಟತಿಂಡಿ ಮಾಡುವ ಮೊದಲು ಕಡ್ಡಾಯವಾಗಿ ಕೈ ಚೆನ್ನಾಗಿ ತೊಳೆಯಬೇಕು. ಸಾಕುಪ್ರಾಣಿಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಮತ್ತು ತಾವೂ ಶುಚಿಯನ್ನು ಕಾಪಾಡಿಕೊಳ್ಳಬೇಕು. ಸೋಂಕಿತ ರೋಗಿಗಳನ್ನು ನೋಡಿಕೊಳ್ಳುವಾಗ ಆರೈಕೆದಾರರು ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸಬೇಕು. ವೈರಸ್ ಹರಡುವುದನ್ನು ತಡೆಯಲು ಸೋಂಕಿತ ವ್ಯಕ್ತಿಗಳನ್ನು ಪ್ರತ್ಯೇಕಿಸಬೇಕು.

ಸಾಂದರ್ಭಿಕ ಚಿತ್ರ
ಇಲಿ ಜ್ವರ ಅಥವಾ Rat Fever (ಕುಶಲವೇ ಕ್ಷೇಮವೇ)

ನಿಫಾ ವೈರಸ್ ಸೋಂಕಿನ ಅಪಾಯಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ. ಜೊತೆಗೆ ವೈರಾಣು ಸೋಂಕಿತ ಪ್ರದೇಶಗಳಿಗೆ ಪ್ರಯಾಣ ಮಾಡಬಾರದು. ವೈರಾಣು ಪೀಡಿತ ಪ್ರದೇಶಗಳಿಂದ ಹಿಂದಿರುಗುವ ಪ್ರಯಾಣಿಕರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಯಾವುದೇ ರೀತಿಯ ರೋಗಲಕ್ಷಣಗಳು ಕಾಣಿಸಿಕೊಂಡರೆ ಅವರು ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಬೇಕು.

ನಿಫಾ ವೈರಸ್ ಸೋಂಕನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ಚಿಕಿತ್ಸೆ, ಸಾರ್ವಜನಿಕ ಆರೋಗ್ಯದ ರೀತಿನೀತಿ ನಿಯಮಗಳು ಮತ್ತು ವೈಯಕ್ತಿಕ ಮುನ್ನೆಚ್ಚರಿಕೆಗಳು ಬಹಳ ಮುಖ್ಯ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com