
ಕಳೆದ ಹಲವಾರು ವಾರಗಳಿಂದ, ಶ್ವೇತ ಭವನ ಗಾಜಾದಲ್ಲಿ ಕದನ ವಿರಾಮ ಒಪ್ಪಂದವನ್ನು ಜಾರಿಗೊಳಿಸಿ, ಅದರ ಮೂಲಕ ಗಾಜಾದಲ್ಲಿ ಒತ್ತೆಯಾಳುಗಳಾಗಿರುವವರನ್ನು ಬಿಡುಗಡೆಗೊಳಿಸಬಹುದು ಎಂಬ ನಿರೀಕ್ಷೆ ಹೊಂದಿತ್ತು. ಇದಕ್ಕಾಗಿ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಜುಲೈ ತಿಂಗಳಲ್ಲಿ ಸರಳ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದರು. ಅಂದಿನಿಂದ ಅಮೆರಿಕನ್ ಅಧಿಕಾರಿಗಳು ಈ ಪ್ರದೇಶಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದ್ದು, ಇಸ್ರೇಲ್ ಮತ್ತು ಹಮಾಸ್ ಎರಡು ಪಕ್ಷಗಳನ್ನೂ ಒಪ್ಪಂದಕ್ಕೆ ಬರುವಂತೆ ಒಪ್ಪಿಸಲು ಪ್ರಯತ್ನ ನಡೆಸಿದ್ದಾರೆ. ಇವೆಲ್ಲದರ ಹೊರತಾಗಿಯೂ, ಯಾವುದೇ ಒಪ್ಪಂದವನ್ನು ರೂಪಿಸಲು ಸಾಧ್ಯವಾಗಿಲ್ಲ.
ಮೇ ತಿಂಗಳ ಆರಂಭದಲ್ಲಿ, ಹಮಾಸ್ ಸಂಘಟನೆ ಮಾತುಕತೆಯನ್ನು ವಿಳಂಬಗೊಳಿಸುತ್ತಿದೆ ಎಂದು ಅಮೆರಿಕನ್ ಅಧಿಕಾರಿಗಳು ಆರೋಪಿಸಿದ್ದರು. ಆ ಸಮಯದಲ್ಲಿ, ಇಸ್ರೇಲ್ ಗಾಜಾದೊಳಗೆ ತನ್ನ ಚೆಕ್ ಪಾಯಿಂಟ್‌ಗಳನ್ನು ಕಡಿಮೆಗೊಳಿಸಲೂ ಒಪ್ಪಿಗೆ ಸೂಚಿಸಿ, ತನ್ನ ಬೇಡಿಕೆಗಳನ್ನು ತಗ್ಗಿಸಿತ್ತು. ಆದರೆ, ಕಳೆದ ತಿಂಗಳಿನಿಂದ ಹಮಾಸ್ ತನ್ನ ನಿಲುವನ್ನು ಮೃದುಗೊಳಿಸಿ, ಒಂದಷ್ಟು ರಾಜಿ ಮಾಡಿಕೊಂಡು, ಮುಂದುವರಿಯುವ ಸಂಕೇತ ನೀಡಿತ್ತು. ಇದೆಲ್ಲದರ ನಡುವೆ, ಈಗ ಒಪ್ಪಂದಕ್ಕೆ ಬರಲು ಇರುವ ಅತಿದೊಡ್ಡ ಅಡೆತಡೆಯೆಂದರೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಎಂದು ವಾಷಿಂಗ್ಟನ್ ಭಾವಿಸಿದೆ.
ವಾಸ್ತವವಾಗಿ, ಮಾತುಕತೆಗೆ ಬರಲು ಇದು ಹಮಾಸ್‌ಗೆ ಸೂಕ್ತ ಸಮಯವಾಗಿದೆ. ಹಮಾಸ್ ಒಂದಷ್ಟು ಮಿಲಿಟರಿ ಸಾಮರ್ಥ್ಯ ಉಳಿಸಿಕೊಂಡಿದ್ದರೂ, ಅದರ ಮೊದಲಿನ ಸಾಮರ್ಥ್ಯ ಬಹುಪಾಲು ಕಡಿಮೆಯಾಗಿದೆ. ಹಮಾಸ್‌ನ ಅಪಾರ ಸಂಖ್ಯೆಯ ಯೋಧರು ಮತ್ತು ಉನ್ನತ ಕಮಾಂಡರ್‌ಗಳು ಈಗಾಗಲೇ ಸಾವಿಗೀಡಾಗಿದ್ದು, ಸಂಘಟನೆಯ ನಾಯಕ ಯಾಹ್ಯಾ ಸಿನ್ವರ್ ಈಗ ಇತರ ನಾಯಕರಿಂದ ದೂರಾಗಿದ್ದಾರೆ. ಅದರೊಡನೆ, ಗಾಜಾದ ಜನರಲ್ಲಿ ಹಮಾಸ್ ಕುರಿತು ಅಸಮಾಧಾನ ಮನೆ ಮಾಡಿರುವ ಕುರಿತು ವರದಿಗಳು ಬಂದಿವೆ. ಹಮಾಸ್ ಸಂಘಟನೆ ಗಾಜಾದ ನಾಗರಿಕ ಆಡಳಿತವನ್ನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದು, ರಾಜಿ ಮಾತುಕತೆಗೆ ಅದರ ಸನ್ನದ್ಧತೆಯನ್ನು ಪ್ರದರ್ಶಿಸಿದೆ.
ಆದರೆ ಇಸ್ರೇಲ್ ಇತ್ತೀಚೆಗೆ ಹಮಾಸ್ ರಾಜಕೀಯ ಮುಖಂಡರು ಮತ್ತು ಮಧ್ಯಸ್ಥಿಕೆದಾರರನ್ನು ಹತ್ಯೆಗೈದಿದೆ. ಇದರಿಂದ ಅಸಮಾಧಾನಗೊಂಡಿರುವ ಹಮಾಸ್ ಅಧಿಕಾರಿಗಳು, ನಾವು ಮೊದಲಾಗಿ ಆರಂಭಿಸಿರುವ ಮಾತುಕತೆಗಳನ್ನು ಇನ್ನೂ ಮುಂದುವರಿಸಲು ಸಿದ್ಧರಿಲ್ಲ ಎಂದಿದ್ದಾರೆ. ಆದರೆ, ಅಮೆರಿಕನ್ ಅಧಿಕಾರಿಗಳು ಹಮಾಸ್ ಧೋರಣೆ ಬದಲಾಗಬಹುದು ಎಂದು ಭಾವಿಸಿದ್ದು, ಅದು ಕತಾರ್ ಮತ್ತು ಈಜಿಪ್ಟಿನ ಮಧ್ಯಸ್ಥಿಕೆದಾರರೊಡನೆ ಮಾತುಕತೆಗೆ ಮುಂದಾಗಲಿದೆ ಎಂದು ನಂಬಿದ್ದಾರೆ.
ಇಸ್ರೇಲ್ ಮಿಲಿಟರಿ ಕ್ರಮದ ಮೂಲಕ ಏನೇನು ಸಾಧಿಸಬಹುದೋ, ಆ ಮಿತಿಯನ್ನು ಈಗಾಗಲೇ ತಲುಪಿರುವಂತೆ ಕಂಡುಬರುತ್ತಿದೆ. ಗಾಜಾದ ಬಹುತೇಕ ಎಲ್ಲ ಮೂಲೆಗಳಿಗೂ ಇಸ್ರೇಲಿ ಬಾಂಬ್‌ಗಳು ಅಪ್ಪಳಿಸಿದ್ದು, ಇಸ್ರೇಲ್ ಸೇನೆ ಗಾಜಾದಲ್ಲಿ ಎಲ್ಲಿ ಬೇಕಾದರೂ ಕಂಡುಬರುವ, ಸ್ಥಳೀಯ ಜನರೊಡನೆ ಸುಲಭವಾಗಿ ಬೆರೆಯುವ ಹಮಾಸ್ ಯೋಧರನ್ನು ಕಂಡಲ್ಲಿ ಹೊಸಕಿಹಾಕುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇಂತಹ ಮುಂದುವರಿದ ಮಿಲಿಟರಿ ಕಾರ್ಯಾಚರಣೆಯಿಂದ ಇಸ್ರೇಲ್‌ಗೆ ಹೇಳಿಕೊಳ್ಳುವಂತಹ ಯಾವುದೇ ಪ್ರಯೋಜನಗಳಿಲ್ಲ ಎಂದು ಅಮೆರಿಕನ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಜನರೊಡನೆ ಬೆರೆತಿರುವ, ಇನ್ನುಳಿದ ಹಮಾಸ್ ಯೋಧರನ್ನು ಹುಡುಕುವುದು ಒಂದೆಡೆ ಇಸ್ರೇಲ್‌ಗೆ ಕಷ್ಟಕರವಾಗಿದ್ದರೆ, ಇನ್ನೊಂದೆಡೆ ಈಗಾಗಲೇ ಯುದ್ಧದಿಂದ ಜರ್ಜರಿತವಾಗಿರುವ ಪ್ಯಾಲೆಸ್ತೀನಿ ನಾಗರಿಕರಿಗೆ ಇನ್ನಷ್ಟು ಹೆಚ್ಚು ಸಂಕಷ್ಟಗಳು ಎದುರಾಗಿವೆ. ಸ್ಥಳೀಯ ಆರೋಗ್ಯ ಸಚಿವಾಲಯದ ಪ್ರಕಾರ, ಯುದ್ಧದಲ್ಲಿ ಈಗಾಗಲೇ ನಾಗರಿಕರು, ಯೋಧರು ಸೇರಿದಂತೆ 40,005 ಗಾಜನ್ನರು ಸಾವಿಗೀಡಾಗಿದ್ದಾರೆ.
ಸಂಪೂರ್ಣ ಹಮಾಸ್ ಸಂಘಟನೆಯನ್ನೇ ನಾಮಾವಶೇಷಗೊಳಿಸುತ್ತೇನೆ ಎಂಬ ನೆತನ್ಯಾಹು ಅವರ ಗುರಿ ಈಡೇರಿಸುವುದು ಒಂದು ರೀತಿ ಅಸಾಧ್ಯ ಎಂದು ಇಸ್ರೇಲಿ ಭದ್ರತಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇನ್ನೂ ಗಾಜಾದಲ್ಲಿ ಒತ್ತೆಯಾಳುಗಳಾಗಿ ಉಳಿದುಕೊಂಡಿರುವ 115 ಜನರನ್ನು ಜೀವಂತವಾಗಿ, ಅಥವಾ ಶವವಾಗಿಯಾದರೂ ಮರಳಿ ಪಡೆಯಲು ಮಾತುಕತೆಯೊಂದೇ ಪರಿಹಾರ ಎಂದು ಅವರು ಭಾವಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳಿಂದ ಏಳು ಒತ್ತೆಯಾಳುಗಳು ಬಿಡುಗಡೆಯಾಗಿದ್ದರೆ, ಮಾತುಕತೆಗಳಿಂದ 100ಕ್ಕೂ ಹೆಚ್ಚು ಜನರನ್ನು ಯಶಸ್ವಿಯಾಗಿ ಬಿಡುಗಡೆಗೊಳಿಸಲಾಗಿದೆ. ಗಾಜಾದಲ್ಲಿ ಬಾಕಿಯಾಗಿರುವ ಒತ್ತೆಯಾಳುಗಳನ್ನು ಪತ್ತೆಹಚ್ಚುವುದು ಇಸ್ರೇಲಿ ಕಮಾಂಡೋಗಳಿಗೆ ಅಸಂಭವವೇ ಆಗಿದ್ದು, ಅವರನ್ನು ಗಾಜಾದ ಸುರಂಗಗಳೊಳಗೆ ಆಳದಲ್ಲಿ ಬಚ್ಚಿಟ್ಟಿರುವ ಸಾಧ್ಯತೆಗಳಿದ್ದು, ಅವರನ್ನು ಹಮಾಸ್ ನಾಯಕರನ್ನು ರಕ್ಷಿಸಲು ಮಾನವ ಗುರಾಣಿಗಳಂತೆ ಬಳಸುವ ಸಾಧ್ಯತೆಗಳಿವೆ.
ಸದ್ಯದ ಸನ್ನಿವೇಶದಲ್ಲಿ ಒಂದು ಶಾಶ್ವತ ಕದನ ವಿರಾಮ ಘೋಷಿಸಲು ಇಸ್ರೇಲ್ ಪ್ರಧಾನಿ ನೆತನ್ಯಾಹು ಸಿದ್ಧವಿರುವಂತೆ ಕಾಣುತ್ತಿಲ್ಲ. ಕಳೆದ ತಿಂಗಳು ಕಾಂಗ್ರೆಸ್ ಅನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ, ನೆತನ್ಯಾಹು ಕದನ ವಿರಾಮಕ್ಕೆ ಒಂದು ಒಪ್ಪಂದವನ್ನು ಅಂತಿಮಗೊಳಿಸಬಹುದು ಎಂದು ಅಮೆರಿಕನ್ ಅಧಿಕಾರಿಗಳು ವಿಶ್ವಾಸ ಹೊಂದಿದ್ದರು. ಆದರೆ, ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ನೆತನ್ಯಾಹು ಅವರು ಕದನ ವಿರಾಮದ ಜಾರಿಗೆ ಸಂಬಂಧಿಸಿದಂತೆ ಹೊಸ ಷರತ್ತುಗಳನ್ನು ವಿಧಿಸಿದ್ದಾರೆ. ಅವರು ಗಾಜಾದ ದಕ್ಷಿಣ ಗಡಿಯ ಭದ್ರತೆಯನ್ನು ಇಸ್ರೇಲ್ ನಿರ್ವಹಿಸಬೇಕು ಮತ್ತು ಉತ್ತರ ಗಾಜಾದ ನಾಗರಿಕರು ತಮ್ಮ ಕೆಲಸ ಮುಗಿಸಿ ಮರಳುವ ಮುನ್ನ ಅವರ ಬಳಿ ಆಯುಧಗಳಿವೆಯೇ ಎಂದು ಪರೀಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಇವೆರಡು ಷರತ್ತುಗಳನ್ನು ಇಸ್ರೇಲ್ ಬಹಳಷ್ಟು ಹಿಂದೆಯೇ ಕೈಬಿಟ್ಟಿದೆ ಎಂದು ಮಧ್ಯಸ್ಥಿಕೆದಾರರು ಭಾವಿಸಿದ್ದರು.
ಕದನ ವಿರಾಮದ ವಿಳಂಬಕ್ಕೆ ಒಂದು ಕಾರಣ ರಾಜಕೀಯವಾಗಿರಬಹುದು. ಮಧ್ಯಮ ಪಂಥೀಯರು ಈಗಾಗಲೇ ಸರ್ಕಾರದಿಂದ ಹೊರನಡೆದಿದ್ದು, ಈಗ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರೆ ನೆತನ್ಯಾಹು ನೇತೃತ್ವದ ಬಲಪಂಥೀಯ ಸರ್ಕಾರ ಒಡೆದುಹೋಗುವ ಸಾಧ್ಯತೆಗಳಿವೆ. ಪಕ್ಷದೊಳಗಿನ ಬಹುದೊಡ್ಡ ನೆತನ್ಯಾಹು ಸಮರ್ಥಕರಾದ, ಇಸ್ರೇಲ್ ರಕ್ಷಣಾ ಸಚಿವರಾದ ಗ್ಯಾಲಂಟ್ ಅವರು ಸಂಪೂರ್ಣ ವಿಜಯ ಸಾಧಿಸುತ್ತೇವೆ ಎನ್ನುವುದು ಕಾರ್ಯಸಾಧ್ಯವಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಅವರ ಅಭಿಪ್ರಾಯವನ್ನು ನೆತನ್ಯಾಹು ಕಟುವಾಗಿ ಟೀಕಿಸಿದ್ದು, ಅವರು ಇಸ್ರೇಲ್ ವಿರೋಧಿ ನೋಟವನ್ನು ಪ್ರಚುರಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಗ್ಯಾಲಂಟ್ ಸೋಮವಾರ ಜನಪ್ರತಿನಿಧಿಗಳ ಖಾಸಗಿ ಭದ್ರತಾ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಒಂದುವೇಳೆ ನೆತನ್ಯಾಹು ನೇತೃತ್ವದ ಮೈತ್ರಿಕೂಟ ಒಡೆಯದಿದ್ದರೂ, ಯುದ್ಧವೇನಾದರೂ ಮುಕ್ತಾಯ ಕಂಡರೆ ಹೊಸದಾಗಿ ಚುನಾವಣೆ ನಡೆಸುವಂತೆ ಒತ್ತಡಗಳು ಎದುರಾಗಬಹುದು. ಅಕ್ಟೋಬರ್ 7, 2023ರ ಹಮಾಸ್ ಆಕ್ರಮಣ ಭದ್ರತಾ ವೈಫಲ್ಯವನ್ನು ತೋರಿಸಿಕೊಟ್ಟಿದ್ದರಿಂದ, ಇಸ್ರೇಲಿ ಮತದಾರರು ನೆತನ್ಯಾಹು ಅವರನ್ನು ಮರಳಿ ಅಧಿಕಾರಕ್ಕೆ ತರುವುದು ಕಷ್ಟಸಾಧ್ಯ. ಜೂನ್ 17ರ ವರದಿಗಳ ಪ್ರಕಾರ, ನೆತನ್ಯಾಹು ತನ್ನ ಆರು ಮಂದಿ ಸದಸ್ಯರ ಯುದ್ಧ ಸಚಿವ ಸಂಪುಟವನ್ನು ವಿಸರ್ಜಿಸಿದ್ದಾರೆ. ಅದರ ಒಂದು ವಾರದ ಹಿಂದೆ, ಯುದ್ಧ ಸಚಿವ ಸಂಪುಟದ ಏಕೈಕ ಮಧ್ಯಮ ಪಂಥೀಯ ಸದಸ್ಯ ಬೆನ್ನಿ ಗ್ಯಾಂಟ್ಜ್ ಸಂಪುಟದಿಂದ ಹೊರನಡೆದ ಬೆನ್ನಲ್ಲೇ ನೆತನ್ಯಾಹು ಈ ನಿರ್ಧಾರಕ್ಕೆ ಬಂದಿದ್ದರು.
ಕದನ ವಿರಾಮವನ್ನು ಇನ್ನಷ್ಟು ವಿಳಂಬಗೊಳಿಸಿದರೆ, ಅಕ್ಟೋಬರ್ 7ರ ದಾಳಿಯ ಸಂಚುಕೋರ ಯಾಹ್ಯಾ ಸಿನ್ವರ್‌ನ ಹತ್ಯೆ ನಡೆಸಲು ಇಸ್ರೇಲ್‌ಗೆ ಇನ್ನೊಂದು ಅವಕಾಶ ಲಭಿಸಲಿದೆ. ಹಾಗೇನಾದರೂ ಆದರೆ, ನೆತನ್ಯಾಹು ಅವರಿಗೆ ತನ್ನ ಪ್ರತಿಷ್ಠೆಯನ್ನು ಮರಳಿ ಸಂಪಾದಿಸಲು ಸಾಧ್ಯವಾಗಬಹುದು. ಒಂದೊಮ್ಮೆ ಮಾತುಕತೆಗಳು ಇನ್ನಷ್ಟು ಸುದೀರ್ಘವಾದರೆ, ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಅಮೆರಿಕಾದ ಅಧ್ಯಕ್ಷರಾಗಿ, ಆ ಮೂಲಕ ಅಮೆರಿಕಾ ಇನ್ನೂ ಹೆಚ್ಚು ನೆತನ್ಯಾಹು ಜೊತೆ ನಿಲ್ಲುವ ಸಾಧ್ಯತೆಗಳಿವೆ.
ಪ್ರಸ್ತುತ ಯುದ್ಧದಲ್ಲಿ ಇಸ್ರೇಲ್ ಇಟ್ಟಿರುವ ಹೆಜ್ಜೆ ನಿಜಕ್ಕೂ ಅಪಾಯಕಾರಿಯಾಗಿದೆ. ಇಲ್ಲಿಯತನಕ ಕನಿಷ್ಠ 40 ಜನ ಒತ್ತೆಯಾಳುಗಳು ಬಂಧನದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಅವರು ಇನ್ನೆಷ್ಟು ಕಾಲ ಬದುಕುಳಿಯಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ. ಈಗಲೇ ಕದನ ವಿರಾಮ ಒಪ್ಪಂದವೇನಾದರೂ ಜಾರಿಗೆ ಬಂದರೆ, ಇಸ್ರೇಲ್ ನಡೆಸಿದ ಇತ್ತೀಚಿನ ಗುರುತರ ಹತ್ಯೆಗಳಿಗೆ ಪ್ರತಿಯಾಗಿ, ಇರಾನ್ ಮತ್ತು ಹೆಜ್ಬೊಲ್ಲಾಗಳು ಇಸ್ರೇಲ್ ಮೇಲೆ ದಾಳಿ ನಡೆಸದಿರುವ ಒಂದು ಸಣ್ಣ ಸಾಧ್ಯತೆಯಿದೆ.
ವಾಸ್ತವವಾಗಿ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ, ಅಂದಾಜು 1,200 ಜನರನ್ನು ಹತ್ಯೆಗೈದು, ಸಾಕಷ್ಟು ಜನರನ್ನು ಒತ್ತೆಯಾಳುಗಳನ್ನಾಗಿಸುವ ಮೂಲಕ ಹಮಾಸ್ ಯುದ್ಧಕ್ಕೆ ನಾಂದಿ ಹಾಡಿತು. ಕದನ ವಿರಾಮ ಒಪ್ಪಂದ ಬಹುತೇಕ ರೂಪುಗೊಂಡಾಗ ಹಮಾಸ್ ಅದನ್ನು ತಿರಸ್ಕರಿಸಿತು. ಮುಂದೊಮ್ಮೆ ನೆತನ್ಯಾಹು ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದರೂ, ಹಮಾಸ್ ಅದರಿಂದ ಹಿಂದೇಟು ಹಾಕುವ ಸಾಧ್ಯತೆಗಳೂ ಇವೆ.
ಕದನ ವಿರಾಮದ ಜಾರಿ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಪ್ಯಾಲೆಸ್ತೀನಿಯನ್ ರಾಜ್ಯದ ಸ್ಥಾಪನೆಗೆ ಪ್ರತಿಯಾಗಿ ಹಮಾಸ್ ಒಂದಷ್ಟು ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗುವ ಸಾಧ್ಯತೆಗಳೂ ಇವೆ. ಆದರೆ ನೆತನ್ಯಾಹು ಶಾಂತಿ ಸ್ಥಾಪನೆಗೆ ಒಪ್ಪದಿದ್ದರೆ, ಇಸ್ರೇಲ್ ಯುದ್ಧವನ್ನು ನಿಲ್ಲಿಸುವ ಒಂದು ಅವಕಾಶವನ್ನು ಕಳೆದುಕೊಂಡಂತಾಗಲಿದೆ. ಅದರ ಪರಿಣಾಮವಾಗಿ, ಒತ್ತೆಯಾಳುಗಳಾಗಿರುವ ಒಂದಷ್ಟು ಜನರು ಮತ್ತೆ ಇಸ್ರೇಲಿಗೆ ಎಂದೂ ಮರಳದಿರುವ ಸಾಧ್ಯತೆಗಳಿವೆ. ಇದು ಯುದ್ಧದಲ್ಲಿ ಇನ್ನೊಂದು ದುರಂತ ಅಧ್ಯಾಯವಾಗಲಿದೆ.
ತನ್ನ ನ್ಯೂಜೆರ್ಸಿ ಗಾಲ್ಫ್ ಕ್ಲಬ್‌ನಲ್ಲಿ, ಡೊನಾಲ್ಡ್ ಟ್ರಂಪ್ ಅವರು ಭಯೋತ್ಪಾದನೆಯ ವಿರುದ್ಧದ ಇಸ್ರೇಲ್ ಪ್ರಯತ್ನಗಳಿಗೆ ಬೆಂಬಲ ಸೂಚಿಸಿದ್ದಾರೆ. ತಾನು ನೆತನ್ಯಾಹು ಬಳಿ ಯುದ್ಧವನ್ನು ಶೀಘ್ರವಾಗಿ ಮುಗಿಸಲು ಆಗ್ರಹಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಕಮಲಾ ಹ್ಯಾರಿಸ್ ಅವರು ಇಸ್ರೇಲ್‌ಗೆ ಆಯುಧ ಪೂರೈಕೆ ನಡೆಸುವುದನ್ನು ಸ್ಥಗಿತಗೊಳಿಸಲು ಬೆಂಬಲ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದು, ಕಮಲಾ ಗೆದ್ದರೆ ಇಸ್ರೇಲ್ ಕತೆ ಮುಗಿಯಿತು ಎಂದಿದ್ದಾರೆ. ಡೆಮಾಕ್ರಟಿಕ್ ಮುಖಂಡ, ಸ್ವತಃ ಯಹೂದಿ ಆಗಿರುವ ಸೆನೇಟರ್ ಚಕ್ ಶುಮಾಕರ್ ಅವರನ್ನು ಟ್ರಂಪ್ ಪ್ಯಾಲೆಸ್ತೀನಿಯನ್ನರಿಗೆ ಹೋಲಿಸಿದ್ದಾರೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement