ಇರುಳು-ನೆರಳಿನ ಜೀವನ ನಡೆಸಿ ಕೊನೆಗೂ ಸಾವಿಗೀಡಾದ ಫೌದ್ ಶುಕರ್: ಮಧ್ಯಪ್ರಾಚ್ಯವನ್ನು ನಲುಗಿಸಿದ ಹೆಜ್ಬೊಲ್ಲಾ ಮುಖಂಡನ ಹತ್ಯೆ (ಜಾಗತಿಕ ಜಗಲಿ)

ಕಳೆದ 40 ವರ್ಷಗಳ ಕಾಲ, ಶುಕರ್ ಅಮೆರಿಕಾದ ಬಂಧನಕ್ಕೆ ಒಳಗಾಗದಂತೆ ಜೀವನ ನಡೆಸಿದ್ದ. ಲೆಬನಾನ್ ರಾಜಧಾನಿ ಬೈರುತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 241 ಜನ ಅಮೆರಿಕನ್ ಯೋಧರು ಸಾವನ್ನಪ್ಪಿದ್ದರು.
Fouad Shukr
ಫೌದ್ ಶುಕರ್ (ಸಂಗ್ರಹ ಚಿತ್ರ)online desk
Updated on

ಹೆಜ್ಬೊಲ್ಲಾ ಸಂಘಟನೆಯ ಕಮಾಂಡರ್ ಆಗಿದ್ದ ಫೌದ್ ಶುಕರ್ ಅತ್ಯಂತ ರಹಸ್ಯಮಯವಾದ ಜೀವನವನ್ನು ನಡೆಸುತ್ತಿದ್ದ. ಆತನ ನಡೆಗಳು ಅದೆಷ್ಟು ರಹಸ್ಯಾತ್ಮಕವಾಗಿದ್ದವೆಂದರೆ, ಆತನ ಚಲನವಲನಗಳ ಕುರಿತು ಬೆರಳೆಣಿಕೆಯ ಜನರಿಗಷ್ಟೇ ಮಾಹಿತಿಗಳಿದ್ದವು. ಆದರೆ, ಅಂತಿಮವಾಗಿ ಫೌದ್ ಶುಕರ್ ವಾಯುದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದು, ಮಧ್ಯ ಪೂರ್ವದಲ್ಲಿ ಈಗಾಗಲೇ ಇದ್ದ ಉದ್ವಿಗ್ನತೆಗಳನ್ನು ಯುದ್ಧದ ಅಂಚಿಗೆ ತಳ್ಳಿದೆ.

ಕಳೆದ 40 ವರ್ಷಗಳ ಕಾಲ, ಶುಕರ್ ಅಮೆರಿಕಾದ ಬಂಧನಕ್ಕೆ ಒಳಗಾಗದಂತೆ ಜೀವನ ನಡೆಸಿದ್ದ. ಲೆಬನಾನ್ ರಾಜಧಾನಿ ಬೈರುತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 241 ಜನ ಅಮೆರಿಕನ್ ಯೋಧರು ಸಾವನ್ನಪ್ಪಿದ್ದರು. ಈ ದಾಳಿಯನ್ನು ಆಯೋಜಿಸಲು ಹೆಚ್ಚಿನ ಸಹಾಯ ಮಾಡಿದವನು ಫೌದ್ ಶುಕರ್ ಎಂದು ಅಮೆರಿಕನ್ ಅಧಿಕಾರಿಗಳು ಆರೋಪಿಸಿದ್ದರು. ಜುಲೈ ತಿಂಗಳ ಕೊನೆಯಲ್ಲಿ ಆತನನ್ನು ಇಸ್ರೇಲ್ ವಾಯುದಾಳಿ ಪಡೆ ಜನವಸತಿ ಕಟ್ಟಡವೊಂದರ ಏಳನೇ ಮಹಡಿಯಲ್ಲಿ ಗುರುತಿಸಲು ಯಶಸ್ವಿಯಾಗಿತ್ತು.

ಫೌದ್ ಶುಕರ್ ಅಮೆರಿಕಾ ಉಗ್ರಗಾಮಿ ಸಂಘಟನೆ ಎಂದು ಗುರುತಿಸಿರುವ 'ಹೆಜ್ಬೊಲ್ಲಾ' ಸಂಘಟನೆಯ ಸ್ಥಾಪಕ ಸದಸ್ಯ, ಹಿರಿಯ ಯೋಧನಾಗಿದ್ದ. ಹೆಜ್ಬೊಲ್ಲಾ ಮುಖಂಡ ಹಸನ್ ನಸ್ರಲ್ಲಾಗೆ ಆಪ್ತನಾಗಿದ್ದ ಶುಕರ್, ಹೆಜ್ಬೊಲ್ಲಾ ಸಂಘಟನೆ ಅಪಾರ ಪ್ರಮಾಣದ ಕ್ಷಿಪಣಿ ಸಂಗ್ರಹ ಹೊಂದಲು ನೆರವಾಗಿದ್ದ. ಇಂದು ಹೆಜ್ಬೊಲ್ಲಾ ಸಂಘಟನೆ ಅತ್ಯಧಿಕ ಪ್ರಮಾಣದಲ್ಲಿ ಕ್ಷಿಪಣಿ ಸಂಗ್ರಹ ಹೊಂದಿರುವ, ಯಾವುದೇ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸದ ಸಶಸ್ತ್ರ ಸಂಘಟನೆ ಎಂಬ ಕುಖ್ಯಾತಿ ಗಳಿಸಿದೆ. ಕಳೆದ ಹತ್ತು ತಿಂಗಳ ಕಾಲ, ಇಸ್ರೇಲ್ ಗಡಿಯಾದ್ಯಂತ ಇಸ್ರೇಲ್‌ ವಿರುದ್ಧ ಹೆಜ್ಬೊಲ್ಲಾ ಹೆಚ್ಚಿನ ಕಾರ್ಯಾಚರಣೆ ನಡೆಸುವಲ್ಲಿ ಫೌದ್ ನೇತೃತ್ವ ವಹಿಸಿದ್ದ.

ಹೆಜ್ಬೊಲ್ಲಾ ಸಂಘಟನೆಯ ಇತಿಹಾಸದಲ್ಲಿ ಶುಕರ್ ಓರ್ವ ಮಹತ್ವದ ವ್ಯಕ್ತಿಯಾಗಿದ್ದರೂ, ಆತ ಯಾರ ಕಣ್ಣಿಗೂ ಕಾಣಿಸಿಕೊಳ್ಳದಂತೆ ಕಾರ್ಯಾಚರಿಸುತ್ತಿದ್ದ. ಆತ ತಾನು ಅಪಾರ ನಂಬಿಕೆ ಹೊಂದಿದ್ದ ಹಿರಿಯ ಯೋಧರ ಜೊತೆಗಿನ ಸಣ್ಣ ಪುಟ್ಟ ಸಭೆಗಳಲ್ಲಿ ಮಾತ್ರವೇ ಭಾಗವಹಿಸುತ್ತಿದ್ದ. ಈ ವರ್ಷದ ಆರಂಭದಲ್ಲಿ, ಇಸ್ರೇಲ್ ವಿರುದ್ಧ ಸೆಣಸುವಾಗ ಪ್ರಾಣ ಕಳೆದುಕೊಂಡಿದ್ದ ತನ್ನ ಸೋದರಳಿಯನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಫೌದ್ ಶುಕರ್ ಸಾರ್ವಜನಿಕವಾಗಿ ಕೆಲವು ಕ್ಷಣಗಳಿಗೆ ಮಾತ್ರ ಕಾಣಿಸಿಕೊಂಡಿದ್ದ.

ಶುಕರ್ ಮುಖವನ್ನೂ ಕಂಡಿರಲಿಲ್ಲ ಜಗತ್ತು!

ಅಮೆರಿಕನ್ ಮಾಧ್ಯಮಗಳ ವರದಿಯ ಪ್ರಕಾರ, ಶುಕರ್ ಅತ್ಯಂತ ರಹಸ್ಯಮಯ ಜೀವನ ನಡೆಸಿದ್ದ. ಲೆಬಾನೀಸ್ ಮಾಧ್ಯಮಗಳು ಆತನ ಸಾವಿನ ಸುದ್ದಿ ಪ್ರಕಟಿಸಿದಾಗ, ಶುಕರ್‌ನದು ಎಂದು ಬೇರೆ ಇನ್ನಾರದೋ ಛಾಯಾಚಿತ್ರ ಪ್ರಕಟಿಸಿದ್ದವು. ಹೆಜ್ಬೊಲ್ಲಾ ಅಧಿಕಾರಿಯೊಬ್ಬರ ಪ್ರಕಾರ, ಸಂಘಟನೆಯ ಕಮಾಂಡರ್ ಆಗಿದ್ದ ಫೌದ್ ಶುಕರ್ ತನ್ನ ಅಂತಿಮ ದಿನವಾದ ಜುಲೈ 30ನ್ನು ದಕ್ಷಿಣ ಬೈರುತ್‌ನ ವಸತಿ ಸಮುಚ್ಚಯವೊಂದರ ಎರಡನೇ ಮಹಡಿಯಲ್ಲಿದ್ದ ಕಚೇರಿಯಲ್ಲೇ ಕಳೆದಿದ್ದ. ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ, ಅದೇ ಕಟ್ಟಡದ ಏಳನೇ ಮಹಡಿಯಲ್ಲಿ ವಾಸವಾಗಿದ್ದ.

ಹೆಜ್ಬೊಲ್ಲಾ ಪ್ರತಿನಿಧಿಗಳು, ಅಂದು ಸಂಜೆ ಶುಕರ್‌ಗೆ ಐದು ಮಹಡಿಗಳಷ್ಟು ಮೇಲಿದ್ದ ಆತನ ಮನೆಗೆ ತೆರಳುವಂತೆ ಸೂಚಿಸಿ ದೂರವಾಣಿ ಕರೆಯೊಂದು ಬಂದಿತ್ತು ಎಂದಿದ್ದರು. ಸಂಜೆ ಅಂದಾಜು 7 ಗಂಟೆ ಸುಮಾರಿಗೆ ಇಸ್ರೇಲಿ ಬಾಂಬ್‌ಗಳು ಆತನ ಅಪಾರ್ಟ್ಮೆಂಟ್ ಮತ್ತು ಮೂರು ಮಹಡಿ ಕೆಳಗೆ ಅಪ್ಪಳಿಸಿದವು. ಈ ದಾಳಿಯಲ್ಲಿ ಶುಕರ್, ಆತನ ಪತ್ನಿ, ಇತರ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸಾವಿಗೀಡಾದರು. ಲೆಬನಾನ್ ಆರೋಗ್ಯ ಸಚಿವಾಲಯ ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿತ್ತು.

ಹೆಜ್ಬೊಲ್ಲಾದ ಆಂತರಿಕ ಸಂವಹನಕ್ಕೆ ಕಿವಿಗೊಡುತ್ತಿದ್ದ ಯಾರೋ ಇಸ್ರೇಲಿ ಏಜೆಂಟರು ಶುಕರ್‌ಗೆ ಆತನ ಕಚೇರಿಯಿಂದ ಐದು ಮಹಡಿ ಮೇಲೆ, ಏಳನೇ ಮಹಡಿಯಲ್ಲಿದ್ದ ಮನೆಗೆ ತೆರಳಲು ಸೂಚಿಸಿರಬಹುದು. ಆ ಮೂಲಕ ಆತನನ್ನು ಸುಲಭವಾಗಿ ಗಮನಿಸಿ, ದಾಳಿ ನಡೆಸಲು ಸಾಧ್ಯವಾಗಿರಬಹುದು ಎಂದು ಹೆಜ್ಬೊಲ್ಲಾ ಆರೋಪಿಸಿದೆ. ಇರಾನ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳು ಇಂದಿಗೂ ತಮ್ಮ ಗುಪ್ತಚರ ವೈಫಲ್ಯದ ಕುರಿತು ಪರಿಶೀಲನೆ ನಡೆಸುತ್ತಿವೆಯಾದರೂ, ಇಸ್ರೇಲ್ ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೈಬರ್ ದಾಳಿಗಳ ಮೂಲಕ ಇರಾನ್ ಮತ್ತು ಹೆಜ್ಬೊಲ್ಲಾಗಳನ್ನು ಮೂರ್ಖರನ್ನಾಗಿಸಿದೆ ಎಂದು ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.

ಹೆಜ್ಬೊಲ್ಲಾಗೆ ದೊಡ್ಡ ಹಿನ್ನಡೆ ತಂದ ಶುಕರ್ ಹತ್ಯೆ

ಶುಕರ್ ಹೆಜ್ಬೊಲ್ಲಾ ಸಂಘಟನೆಯ ಮುಖ್ಯ ಕಾರ್ಯತಂತ್ರಜ್ಞನಾಗಿದ್ದು, ಆತನ ಸಾವು ಹೆಜ್ಬೊಲ್ಲಾಗೆ ಬಹುದೊಡ್ಡ ನಷ್ಟ ಉಂಟುಮಾಡಿದೆ ಮತ್ತು ಸಂಘಟನೆಯ ಚಟುವಟಿಕೆಗಳೊಳಗೆ ಇಸ್ರೇಲ್ ಪ್ರವೇಶ ಪಡೆದಿರುವುದನ್ನು ತೋರಿಸಿಕೊಟ್ಟಿದೆ. ಹಮಾಸ್ ಸಂಘಟನೆಯ ರಾಜಕೀಯ ಮುಖಂಡ ಇಬ್ರಾಹಿಂ ಹನಿಯೆಹ್ ಟೆಹರಾನ್‌ನಲ್ಲಿ ಸಾವನ್ನಪ್ಪಿದ್ದು, ಇದಕ್ಕೂ ಇಸ್ರೇಲಿ ದಾಳಿ ಕಾರಣ ಎನ್ನಲಾಗಿದೆ. ಅದರೊಡನೆ ಹೆಜ್ಬೊಲ್ಲಾದ ಉನ್ನತ ಕಾರ್ಯತಂತ್ರಜ್ಞ ಫೌದ್ ಶುಕರ್‌ ಸಹ ಇಸ್ರೇಲ್ ಕೈಯಲ್ಲಿ ಹತ್ಯೆಯಾಗಿದ್ದು, ಮಧ್ಯಪೂರ್ವ ಪ್ರದೇಶದಲ್ಲಿ ಉದ್ವಿಗ್ನತೆಗಳು ಹೆಚ್ಚಾಗಿ, ಯಾವುದೇ ಕ್ಷಣದಲ್ಲಾದರೂ ಪ್ರಾದೇಶಿಕ ಯುದ್ಧ ತಲೆದೋರಬಲ್ಲ ಪರಿಸ್ಥಿತಿ ನಿರ್ಮಾಣವಾಗಿದೆ.

ಟೆಲ್ ಅವೀವ್‌ನ ಇನ್ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್ ಸಂಸ್ಥೆಯಲ್ಲಿ ಹೆಜ್ಬೊಲ್ಲಾ ಕುರಿತ ತಜ್ಞರಾದ ಕಾರ್ಮಿಟ್ ವ್ಯಾಲೆನ್ಸಿ ಅವರು ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ಇಸ್ರೇಲ್ ಈ ರೀತಿ ತನ್ನ ಗುರಿಗಳನ್ನು ಆಯ್ಕೆ ಮಾಡಿಕೊಂಡು ಹತ್ಯೆಗೈದಿರುವುದು ಖಂಡಿತವಾಗಿಯೂ ಶತ್ರು ಸಂಘಟನೆಗಳ ಕಾರ್ಯಾಚರಣಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ ಎಂದಿದ್ದಾರೆ. ಶುಕರ್ ಓರ್ವ ಜ್ಞಾನ ಹೊಂದಿದ್ದ ವ್ಯಕ್ತಿಯಾಗಿದ್ದು, ಆತ ಹೆಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಜೊತೆ ಪರಿಣಾಮಕಾರಿಯಾಗಿ ಸಂವಹನ ನಡೆಸಬಲ್ಲ ಮತ್ತು ಕಾರ್ಯಾಚರಿಸಬಲ್ಲ ವ್ಯಕ್ತಿಯಾಗಿದ್ದ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ನಸ್ರಲ್ಲಾ ಮತ್ತು ಶುಕರ್ ಪರಸ್ಪರರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಉತ್ತಮ ಬಾಂಧವ್ಯ ಹೊಂದಿ ಕಾರ್ಯಾಚರಿಸುತ್ತಿದ್ದರು.

ಶುಕರ್ ತನ್ನ ಜೀವನದ ಬಹುಪಾಲು ಸಮಯವನ್ನು ಹೆಜ್ಬೊಲ್ಲಾ ಚಟುವಟಿಕೆಗಳು ಮತ್ತು ನಿರ್ಣಯ ಕೈಗೊಳ್ಳುವುದರಲ್ಲೇ ಕಳೆದಿದ್ದ. ಹೆಜ್ಬೊಲ್ಲಾ ಸಂಘಟನೆ ತನ್ನ ಪ್ರಮುಖ ಬೆಂಬಲಿಗನಾದ ಇರಾನ್ ಜೊತೆ ಸಂಪರ್ಕ ಹೊಂದುವಂತೆ ಮಾಡುವಲ್ಲಿ ಶುಕರ್ ಹೆಚ್ಚಿನ ಪಾತ್ರ ವಹಿಸಿದ್ದ. 1982ರಲ್ಲಿ ತನ್ನ 20ರ ಹರೆಯದಲ್ಲಿದ್ದ ಶುಕರ್, ಬೈರುತ್‌ನಲ್ಲಿದ್ದ ಶಿಯಾ ಬಂಡುಕೋರ ಹೋರಾಟಗಾರರನ್ನು ಸಮನ್ವಯಗೊಳಿಸಲು ನೆರವಾಗಿ, ಅಂತರ್ಯುದ್ಧದ ಸಮಯದಲ್ಲಿ ಇಸ್ರೇಲ್ ಲೆಬನಾನನ್ನು ಅತಿಕ್ರಮಿಸದಂತೆ ತಡೆಯಲು ಪ್ರಯತ್ನಿಸಿದ್ದ.

ಆದರೆ ಇಸ್ರೇಲ್ ಸೇನೆ ಬೈರುತ್ ನಗರದ ಮೇಲೆ ಮುತ್ತಿಗೆ ಹಾಕಿದ ಬಳಿಕ, ಪ್ರತಿರೋಧಿ ಗುಂಪು ಪೂರ್ವ ಲೆಬನಾನಿನ ಬೆಕಾ ಕಣಿವೆಯ ಕಡೆಗೆ ತೆರಳಿತು. ಅಲ್ಲಿ ಅವರು ಸಿರಿಯಾ ಮೂಲಕ ಆಗಮಿಸಿದ್ದ ಬಹುತೇಕ 1,500 ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಸಂಪರ್ಕ ಹೊಂದಿದರು. ಶುಕರ್ ಜೊತೆ 1980ರ ದಶಕದಿಂದಲೂ ಸಂಪರ್ಕ ಹೊಂದಿದ್ದ, ರಾಜಕೀಯ ತಜ್ಞರಾದ ಕಾಸಿಮ್ ಕಾಸಿರ್ ಅವರು ಇರಾನಿನ ಅಧಿಕಾರಿಗಳ ನಿಯೋಗವನ್ನು ಸಿರಿಯನ್ ಗಡಿಯಿಂದ ಬೈರುತ್ ರಾಯಭಾರ ಕಚೇರಿಗೆ ಕರೆದೊಯ್ಯುವಂತೆ ಶುಕರ್ ಬಳಿ ಮನವಿ ಮಾಡಲಾಗಿತ್ತು ಎಂದಿದ್ದಾರೆ.

ಆದರೆ, ಈ ಪ್ರಯಾಣದ ವೇಳೆ ಸಶಸ್ತ್ರ ಕ್ರೈಸ್ತ ಪಡೆಯಾದ ಲೆಬಾನೀಸ್ ಫೋರ್ಸಸ್ ಇರಾನಿನ ರಾಜತಾಂತ್ರಿಕರನ್ನು ಅಪಹರಿಸಿತು ಎನ್ನಲಾಗಿದ್ದು, ಅವರನ್ನು ಬಳಿಕ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ದೇಶದ ಭದ್ರತಾ ಪಡೆಯಲ್ಲಿ ಕೆಲಸ ಮಾಡಿದ್ದ ಫೌದ್ ಶುಕರ್‌ನನ್ನು ಬಿಡುಗಡೆಗೊಳಿಸಲಾಯಿತು. ಹಜ್ಜ್ ಮೊಹ್ಸಿನ್ ಎಂದು ಕರೆಯಲ್ಪಟ್ಟಿದ್ದ ಫೌದ್ ಶುಕರ್, ಇರಾನಿಯನ್ನರು ಮತ್ತು ಬೆಕಾ ಕಣಿವೆಯಲ್ಲಿ ಸ್ಥಾಪಿಸಿದ್ದ ಹೆಜ್ಬೊಲ್ಲಾ ಯೋಧರ ತರಬೇತಿ ಕೇಂದ್ರದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಎನ್ನುತ್ತಾರೆ ಕಾಸಿರ್.

Fouad Shukr
ಮೋದಿ ಕಾರ್ಯತಂತ್ರ: ಪಾಶ್ಚಾತ್ಯ ಸಹಯೋಗಿಗಳನ್ನು ಸಮಾಧಾನಿಸಲು ಉಕ್ರೇನ್‌ ಕಡೆ ಮೋದಿ ನಡೆ! (ಜಾಗತಿಕ ಜಗಲಿ)

ಅಕ್ಟೋಬರ್ 23, 1983ರ ಮುಂಜಾನೆ, ಬೈರುತ್‌ನ ಅಮೆರಿಕನ್ ಮರೀನ್‌ಗಳ ವಸತಿಯ ಬಳಿ ಬೃಹತ್ ಟ್ರಕ್ ಬಾಂಬ್ ಸ್ಫೋಟಿಸಿತು. ಅಂದಾಜು 12,000 ಪೌಂಡ್‌ಗಳಷ್ಟು ಟಿಎನ್‌ಟಿ ಹೊಂದಿದ್ದ ಬಾಂಬ್, ವ್ಯಾಪಕ ಹಾನಿ ಮತ್ತು ಸಾವುನೋವುಗಳನ್ನು ಉಂಟುಮಾಡಿತ್ತು. ಆ ವೇಳೆಗೆ ಇನ್ನೂ ಹೆಜ್ಬೊಲ್ಲಾ ಸಂಘಟನೆ ತನ್ನ ಉಪಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಇಸ್ಲಾಮಿಕ್ ಜಿಹಾದ್ ಎಂಬ ಸಂಘಟನೆ ದಾಳಿಯ ಹೊಣೆ ಹೊತ್ತಿತ್ತು. ಅಮೆರಿಕನ್‌ ಸರ್ಕಾರ ಬಳಿಕ ಈ ಸಂಚು ಮತ್ತು ದಾಳಿಯಲ್ಲಿ ಶುಕರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ ಎಂದು ಹೇಳಿಕೆ ನೀಡಿತ್ತು.

1985ರಲ್ಲಿ ಮೇಲೆ ಬಂದ ಹೆಜ್ಬೊಲ್ಲಾ

ಹೆಜ್ಬೊಲ್ಲಾ ಸಂಘಟನೆ 1985ರಲ್ಲಿ ಅಧಿಕೃತವಾಗಿ ತನ್ನ ಸ್ಥಾಪನೆಯನ್ನು ಘೋಷಿಸಿತು. ಆ ವೇಳೆ ಶುಕರ್‌ನನ್ನು ಸಂಘಟನೆಯ ಆರಂಭಿಕ ಮಿಲಿಟರಿ ಮುಖಂಡನಾಗಿ ನೇಮಿಸಲಾಗಿತ್ತು. ಇಸ್ರೇಲಿ ಪಡೆಗಳು 2000ನೇ ಇಸವಿಯಲ್ಲಿ ಸಂಪೂರ್ಣವಾಗಿ ತೆರಳುವ ತನಕ ಆತ ದಕ್ಷಿಣ ಪ್ರದೇಶದಲ್ಲಿ ಅವರ ವಿರುದ್ಧ ಗೆರಿಲ್ಲಾ ಕಾರ್ಯಾಚರಣೆ ನಡೆಸಿದ್ದ. ಕಾರ್ಯತಂತ್ರದ ಯೋಜನಾ ಕೌಶಲ ಮತ್ತು ಪ್ರದೇಶದ ಕುರಿತ ಸಂಪೂರ್ಣ ಅರಿವು ಹೊಂದಿದ್ದ ಕಾರಣದಿಂದ ಶುಕರ್ ವ್ಯಾಪಕ ಪ್ರಶಂಸೆಗೆ ಪಾತ್ರನಾದ.

ಜೂನ್ 14, 1985ರಂದು ಅಪಹರಣಾಕಾರರ ಗುಂಪೊಂದು ಅಥೆನ್ಸ್‌ನಿಂದ ಹೊರಟಿದ್ದ ಟಿಡಬ್ಲ್ಯುಎ ಫ್ಲೈಟ್ 847 ವಿಮಾನವನ್ನು ಅಪಹರಿಸಿತು. ಅವರು ಅಪಹರಿಸಿದ ವಿಮಾನವನ್ನು ಮೂರು ದಿನಗಳ ಕಾಲ ಬೈರುತ್ ಮತ್ತು ಅಲ್ಗೀರ್ಸ್ ನಡುವೆ ಸಂಚರಿಸಿ, ಇಸ್ರೇಲ್ ಬಂಧನದಲ್ಲಿದ್ದ 700 ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿತು. ಈ ಯೋಜನೆಯನ್ನು ರೂಪಿಸಲು ನೆರವಾಗಿದ್ದ ಶುಕರ್ ಜನಪ್ರಿಯತೆ ಇದರಿಂದ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿ, ಆತ ಭೂಗತನಾಗಿ ಜೀವಿಸಲು ಆರಂಭಿಸಿದ. ಬಳಿಕ ಆತ ಸಂಪೂರ್ಣವಾಗಿ ಜನರ ಕಣ್ಣಿನಿಂದ ಮರೆಯಾದ.

ಶುಕರ್ ಖಾಸಗಿ ಜೀವನ ಆತನ ಮೇಲೆ ಭಾರೀ ಪರಿಣಾಮ ಬೀರಿತ್ತು. ಆತನಿಗೆ ತನ್ನ ಸ್ನೇಹಿತರು ಮತ್ತು ಬಂಧುಗಳ ಜೊತೆ ಯಾವಾಗಲೂ ಸಮಯ ಕಳೆಯುವುದು ಸಾಧ್ಯವಿಲ್ಲದ್ದರಿಂದ, ಅವಕಾಶ ಸಿಕ್ಕಾಗ ಅವರಿಗೆ ಹೆಚ್ಚಿನ ಕಾಳಜಿ ತೋರುತ್ತಿದ್ದ. ಆತ ತಾನು ಸಣ್ಣ ವಯಸ್ಸಿನಿಂದಲೂ ಬೆಳೆದು ಬಂದ ಗೆಳೆಯರ ಗುಂಪಿನೊಡನೆ ಮಾತ್ರ ಆತ್ಮೀಯನಾಗಿದ್ದ. ಈ ಗುಂಪಿನಲ್ಲಿ, ಆತನ ಸ್ನೇಹಿತ, 1992ರಲ್ಲಿ ಇಸ್ರೇಲ್ ದಾಳಿಯಿಂದ ಹೆಜ್ಬೊಲ್ಲಾ ಮುಖ್ಯಸ್ಥನ ಸಾವಿನ ಬಳಿಕ ಆ ಸ್ಥಾನ ವಹಿಸಿಕೊಂಡಿದ್ದ ನಸ್ರಲ್ಲಾ ಸಹ ಇದ್ದ.

ಮತ್ತೊಮ್ಮೆ ಮುಖ್ಯ ಪಾತ್ರ ವಹಿಸಿದ ಶುಕರ್

2006ರ ಲೆಬನಾನ್ ಯುದ್ಧದ ಸಂದರ್ಭದಲ್ಲಿ ಶುಕರ್ ಮತ್ತೊಮ್ಮೆ ಮುಖ್ಯ ಪಾತ್ರ ನಿರ್ವಹಿಸಿದ್ದ. ಆತ ದಕ್ಷಿಣ ಇಸ್ರೇಲನ್ನು ಪ್ರವೇಶಿಸಿದ್ದ ಉಗ್ರರ ನೇತೃತ್ವ ವಹಿಸಿದ್ದ. ಈ ದಾಳಿಯಲ್ಲಿ ಅವರು ಎಂಟು ಯೋಧರನ್ನು ಹತ್ಯೆಗೈದು, ಇಬ್ಬರನ್ನು ಅಪಹರಿಸಿದ್ದರು. ಇದರ ಪರಿಣಾಮವಾಗಿ ಇಸ್ರೇಲ್ ತಿಂಗಳಾದ್ಯಂತ ಆಕ್ರಮಣ ನಡೆಸಿ, ಲೆಬನಾನ್‌ನಲ್ಲಿ ವ್ಯಾಪಕ ವಿಧ್ವಂಸಕ್ಕೆ ಕಾರಣವಾಯಿತು.

ಈ ಯುದ್ಧದ ಬಳಿಕ, ಶುಕರ್‌ಗೆ ಹೆಜ್ಬೊಲ್ಲಾದ ಆಯುಧ ಸಾಮರ್ಥ್ಯವನ್ನು ಹೆಚ್ಚಿಸುವ ಜವಾಬ್ದಾರಿ ನೀಡಲಾಯಿತು. ಆ ವೇಳೆ ಹೆಜ್ಬೊಲ್ಲಾ ಬಳಿ 15,000 ರಾಕೆಟ್‌ ಮತ್ತು ಕ್ಷಿಪಣಿಗಳಿದ್ದು, ಶುಕರ್ ಅದನ್ನು 1,50,000 ರಾಕೆಟ್‌ಗಳಿಗೆ ಹೆಚ್ಚಿಸಿದ. ಇದರಲ್ಲಿ ವಿವಿಧ ರೀತಿಯ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ರಾಕೆಟ್‌ಗಳು (ಆ್ಯಂಟಿ ಶಿಪ್ ಮತ್ತು ಕ್ರೂಸ್ ಕ್ಷಿಪಣಿಗಳು) ಸೇರಿವೆ. ಜುಲೈ ತಿಂಗಳ ಕೊನೆಯ ವೇಳೆಗೆ ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನ ಮಜ್ದಾಲ್ ಶಮ್ಸ್ ಪ್ರದೇಶದಲ್ಲಿ ಫುಟ್‌ಬಾಲ್ ಮೈದಾನವೊಂದಕ್ಕೆ ರಾಕೆಟ್ ನುಗ್ಗಿ, 12 ಯುವಕರ ಸಾವಿಗೆ ಕಾರಣವಾಯಿತು. ಈ ಬಳಿಕ ಶುಕರ್ ಇಸ್ರೇಲ್‌ನ ಮುಖ್ಯ ಗುರಿಯಾದ.

Fouad Shukr
ಹಿನ್ನಡೆ ಕಂಡ ನೆತನ್ಯಾಹು ಕಾರ್ಯತಂತ್ರ; ದುಬಾರಿಯಾದೀತೇ ಕದನ ವಿರಾಮ ವಿಳಂಬದ ತಂತ್ರ? (ಜಾಗತಿಕ ಜಗಲಿ)

ಶುಕರ್ ಸಾವು ಆತನನ್ನು ಮತ್ತೊಮ್ಮೆ ಚರ್ಚೆಯ ವಿಷಯವಾಗಿಸಿದೆ. ಆತನ ಅಂತಿಮ ಸಂಸ್ಕಾರದ ವೇಳೆ, ದೊಡ್ಡ ದೊಡ್ಡ ಪರದೆಗಳಲ್ಲಿ ಆತನ ಮುಖವನ್ನು ಪ್ರದರ್ಶಿಸಲಾಗಿತ್ತು. ಆತನ ಮಿಲಿಟರಿ ಸಾಧನೆಗಳ ವೀಡಿಯೋ ಚಿತ್ರಣಗಳನ್ನು ಪ್ರಸಾರ ಮಾಡಿ, ಆತನನ್ನು ಹೊಗಳುವ ಘೋಷಣೆಗಳನ್ನು ಮೊಳಗಿಸಲಾಯಿತು. ಅಂತಿಮವಾಗಿ ಆತನನ್ನು ಬೈರುತ್‌ನ ಸಾರ್ವಜನಿಕ ಸ್ಮಶಾನದಲ್ಲಿ ಹೂಳಲಾಯಿತು.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com