
ಭಾರತ ಮತ್ತು ಸಿರಿಯಾಗಳು ಐತಿಹಾಸಿಕವಾಗಿ ಉತ್ತಮ ರಾಜಕೀಯ ಮತ್ತು ಸಾಂಸ್ಕೃತಿಕ ಬಾಂಧವ್ಯ ಹೊಂದಿವೆ. ಸಿರಿಯಾದ ಅಂತರ್ಯುದ್ಧದ ಅವಧಿಯಲ್ಲೂ, ಭಾರತ ಸಿರಿಯಾದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸಿ, ಸಿರಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಗಳನ್ನು ಕೈಗೊಂಡಿತು.
1957ರಲ್ಲಿ, ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಅಮೆರಿಕಾಗೆ ತೆರಳುವಾಗ ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಭೇಟಿ ನೀಡಿದ್ದರು. ನೆಹರೂ ಭೇಟಿಯ ಏಳು ವರ್ಷಗಳ ಹಿಂದೆ ಭಾರತ ಮತ್ತು ಸಿರಿಯಾಗಳ ರಾಜತಾಂತ್ರಿಕ ಸಂಬಂಧ ಆರಂಭಗೊಂಡಿತ್ತು. ಈ ಸ್ನೇಹವನ್ನು ಗೌರವಿಸುವ ಸಲುವಾಗಿ, ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಉಮ್ಮಯದ್ ಚೌಕದ ಬಳಿಯ ರಸ್ತೆಗೆ 'ಜವಾಹರಲಾಲ್ ನೆಹರೂ ರಸ್ತೆ' ಎಂದು ನಾಮಕರಣ ಮಾಡಲಾಯಿತು.
ಆದರೆ, ಸಿರಿಯಾದಲ್ಲಿ ಕಂಡುಬಂದಿರುವ ಇತ್ತೀಚಿನ ರಾಜಕೀಯ ಬದಲಾವಣೆಗಳು, ಮಧ್ಯ ಪೂರ್ವದ ಕುರಿತಂತೆ ಭಾರತದ ಒಟ್ಟಾರೆ ಕಾರ್ಯತಂತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರನ್ನು ಇಸ್ಲಾಮಿಕ್ ಬಂಡುಕೋರರು ಪದಚ್ಯುತಗೊಳಿಸಿದ್ದು, ಇದು ಸಿರಿಯಾದೊಡನೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನಾಗರಿಕ ಸಂಪರ್ಕಗಳ ಆಧಾರದಲ್ಲಿ ಉತ್ತಮ ಸ್ನೇಹ ಹೊಂದಿರುವ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಅಸ್ಸಾದ್ ಆಡಳಿತದಲ್ಲಿ ಭಾರತ - ಸಿರಿಯಾ ಸಂಬಂಧ ಇನ್ನಷ್ಟು ಉತ್ತಮವಾಗಿ ಹೊರಹೊಮ್ಮಿತ್ತು.
ಸಿರಿಯಾದಲ್ಲಿ ಇನ್ನು ಅಧಿಕಾರಕ್ಕೆ ಬರುವ ಹೊಸ ರಾಜಕೀಯ ವ್ಯವಸ್ಥೆ ಸಿರಿಯಾದೊಡನೆ ಭಾರತದ ಸಂಬಂಧದ ಮೇಲೂ ಪರಿಣಾಮ ಬೀರಬಲ್ಲದು. ಮಧ್ಯ ಪೂರ್ವದ ರಾಜಕೀಯದಲ್ಲಿ ಸಿರಿಯಾ ಅತ್ಯಂತ ಮುಖ್ಯ ಪಾತ್ರವನ್ನು ನಿರ್ವಹಿಸುವುದರಿಂದ, ಅಲ್ಲಿ ಕಂಡುಬರುವ ಬದಲಾವಣೆಗಳು ಒಟ್ಟಾರೆಯಾಗಿ ಮಧ್ಯ ಪೂರ್ವ ಪ್ರದೇಶದಲ್ಲಿ ಭಾರತದ ಸ್ಥಾನ ಮತ್ತು ಯೋಜನೆಗಳ ಮೇಲೆ ಪರಿಣಾಮ ಬೀರಬಲ್ಲವು.
ಸಿರಿಯಾದ ಪರಿಸ್ಥಿತಿಯ ಕುರಿತು ಭಾರತ ಡಿಸೆಂಬರ್ 9, ಸೋಮವಾರದಂದು ಹೇಳಿಕೆ ನೀಡಿದ್ದು, ಸಿರಿಯಾದ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದೆ. ಸಿರಿಯಾದ ನಾಗರಿಕರ ನೇತೃತ್ವದಲ್ಲಿ, ಸಿರಿಯಾದ ಪ್ರತಿಯೊಬ್ಬ ಪ್ರಜೆಗಳನ್ನೂ ಒಳಗೊಂಡಂತೆ, ಸಿರಿಯಾದ ಬಿಕ್ಕಟ್ಟಿಗೆ ಪರಿಹಾರ ಲಭಿಸಬೇಕೆಂದು ಭಾರತ ಹೇಳಿದೆ.
ಭಾರತ ಮತ್ತು ಸಿರಿಯಾಗಳು ಹಲವಾರು ವರ್ಷಗಳಿಂದ ಒಂದು ಬಲವಾದ, ಸ್ನೇಹಮಯ ಸಂಬಂಧ ಹೊಂದಿವೆ. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಇರುವುದರಿಂದ, ಅವುಗಳ ನಡುವೆ ಉನ್ನತ ಹಂತದ ಮಾತುಕತೆಗಳು ನಡೆದಿವೆ.
ಅಸ್ಸಾದ್ ನೇತೃತ್ವದ ಸಿರಿಯನ್ ಸರ್ಕಾರ ಮತ್ತು ಸರ್ಕಾರ ವಿರೋಧಿ ಬಂಡುಕೋರರು ಸಿರಿಯಾದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದನ್ನು ಭಾರತ ಖಂಡಿಸಿದೆ. ಈ ಮೂಲಕ, ಭಾರತ ತಾನು ಯಾವ ಪಕ್ಷಕ್ಕೂ ಬೆಂಬಲ ನೀಡುತ್ತಿಲ್ಲ ಎಂದು ಸೂಚಿಸಿದ್ದು, ಉಭಯ ಪಕ್ಷಗಳು ಜನರಿಗೆ ಉಂಟುಮಾಡಿರುವ ಹಾನಿಯನ್ನು ಖಂಡಿಸಿದೆ.
ಹಲವಾರು ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತ ಸಿರಿಯಾ ಪರವಾಗಿ ನಿಂತಿದೆ. ಇದರಲ್ಲಿ ವಿವಾದಾತ್ಮಕ ಸ್ಥಳವಾದ ಗೋಲನ್ ಹೈಟ್ಸ್ ಕುರಿತಂತೆ ಸಿರಿಯಾದ ನಿಲುವನ್ನು ಬೆಂಬಲಿಸುವುದು ಮತ್ತು ಪ್ಯಾಲೆಸ್ತೀನ್‌ಗೆ ಸಿರಿಯಾ ಬೆಂಬಲ ನೀಡಿರುವುದನ್ನು ಅನುಮೋದಿಸಿದೆ.
ಇನ್ನೊಂದೆಡೆ, ಅಸ್ಸಾದ್ ಕುಟುಂಬದ ಆಡಳಿತದಲ್ಲಿದ್ದ (ಮೊದಲಿಗೆ ಹಫೀಜ್ ಅಲ್ ಅಸ್ಸಾದ್, ಬಳಿಕ ಬಶರ್ ಅಲ್ ಅಸ್ಸಾದ್) ಹಲವಾರು ವಿಚಾರಗಳಲ್ಲಿ ಭಾರತವನ್ನು ಬೆಂಬಲಿಸಿವೆ. ಅದರಲ್ಲೂ, ಕಾಶ್ಮೀರ ವಿಚಾರದಲ್ಲಿ ಸಿರಿಯಾ ಭಾರತಕ್ಕೆ ಬೆಂಬಲ ನೀಡಿತ್ತು. ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರೆ, ಭಾರತವನ್ನು ಬೆಂಬಲಿಸಿದ ಕೆಲವೇ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಸಿರಿಯಾ ಸಹ ಒಂದಾಗಿತ್ತು. ಭಾರತಕ್ಕೆ ತನ್ನ ಆಂತರಿಕ ವಿಚಾರಗಳನ್ನು ತಾನೇ ನಿರ್ವಹಿಸುವ ಹಕ್ಕಿದೆ ಎಂದು ಸಿರಿಯಾ ಅಭಿಪ್ರಾಯ ಪಟ್ಟಿತ್ತು. ಅಸ್ಸಾದ್ ಸರ್ಕಾರದ ಜಾತ್ಯತೀತ ನಿಲುವು ಭಾರತದ ಮೌಲ್ಯಗಳನ್ನು ಹೋಲುತ್ತಿದ್ದು, ಉಭಯ ರಾಷ್ಟ್ರಗಳ ನಡುವೆ ಬಲವಾದ, ಪರಸ್ಪರ ಸಹಕಾರಿ ಸಂಬಂಧವನ್ನು ಬೆಳೆಸಲು ನೆರವಾಯಿತು.
ವಿಶ್ವಸಂಸ್ಥೆಯಲ್ಲಿ ಸಿರಿಯಾಗೆ ನಿರ್ಬಂಧ ಹೇರುವ ನಿರ್ಣಯವನ್ನು ಬೆಂಬಲಿಸದಿರಲು ಭಾರತ ನಿರ್ಧರಿಸಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಂತೂ ಸಿರಿಯಾ ಮೇಲಿನ ನಿರ್ಬಂಧಗಳು ಸಿರಿಯಾದ ಜನತೆಗೆ ತೊಂದರೆಗಳನ್ನು ಉಂಟುಮಾಡಿ, ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತಿದ್ದರಿಂದ, ಈ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಭಾರತ ಆಗ್ರಹಿಸಿತ್ತು.
2011ರಲ್ಲಿ ಸಿರಿಯಾದ ಅಂತರ್ಯುದ್ಧ ಆರಂಭಗೊಂಡ ಬಳಿಕ, ಭಾರತ ಅದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವುದರ ಪರವಾಗಿತ್ತು. ಮಿಲಿಟರಿ ಬಲವನ್ನು ಬಳಸದೆ, ಸಿರಿಯನ್ ನಾಗರಿಕರ ನೇತೃತ್ವದಲ್ಲಿ ಶಾಂತಿಯುತ ಮಾತುಕತೆ ಮತ್ತು ರಾಜಕೀಯ ಕ್ರಮಗಳ ಮೂಲಕವೇ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತ ಸಲಹೆ ನೀಡಿತ್ತು.
ಅಂತರ್ಯುದ್ಧದ ಅತ್ಯಂತ ಕೆಟ್ಟ ಸನ್ನಿವೇಶಗಳಲ್ಲಿ ಹಲವಾರು ದೇಶಗಳು ಸಿರಿಯಾದೊಡನೆ ಸಂಬಂಧ ಕಡಿದುಕೊಂಡರೂ, ಸಿರಿಯಾವನ್ನು ಅರಬ್ ಲೀಗ್‌ನಿಂದ ಹೊರಹಾಕಿದರೂ, ಭಾರತ ಸಿರಿಯಾದೊಡನೆ ತನ್ನ ಸಂಬಂಧವನ್ನು ಮುಂದುವರಿಸಿತ್ತು. ಭಾರತ ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಮುಂದುವರಿಸಿ, ಆ ದೇಶದ ಜೊತೆಗಿನ ಬಾಂಧವ್ಯವನ್ನು ಹಾಗೆಯೇ ಉಳಿಸಿಕೊಂಡಿತ್ತು.
ಹಲವಾರು ವರ್ಷಗಳ ಅಂತರ್ಯುದ್ಧದ ಬಳಿಕ, ಸಿರಿಯಾ 2023ರಲ್ಲಿ ಮರಳಿ ಅರಬ್ ಲೀಗ್‌ಗೆ ಸೇರ್ಪಡೆಯಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ, ಸಿರಿಯಾ ಅರಬ್ ಲೀಗ್‌ಗೆ ಸೇರಿದ ಬಳಿಕ ಭಾರತ ಸಿರಿಯಾದೊಡನೆ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಿತು. ಜುಲೈ 2023ರಲ್ಲಿ, ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾಗಿದ್ದ ವಿ ಮುರಳೀಧರನ್ ಅವರು ಡಮಾಸ್ಕಸ್‌ಗೆ ಒಂದು ಮಹತ್ವದ ಭೇಟಿ ನೀಡಿ, ಉಭಯ ದೇಶಗಳ ಸಂಬಂಧಕ್ಕೆ ಉತ್ತೇಜನ ನೀಡಿದರು.
ಸಿರಿಯನ್ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರ ಪದಚ್ಯುತಿ ಮತ್ತು ಅದರ ಪರಿಣಾಮವಾಗಿ ಸಿರಿಯಾದಲ್ಲಿ ತಲೆದೋರಿರುವ ಅಸ್ಥಿರತೆ ಈ ಪ್ರದೇಶದಲ್ಲಿ ಭಾರತದ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ತೊಂದರೆ ಉಂಟುಮಾಡಬಹುದು. ಒಂದು ಕಾಲದಲ್ಲಿ ಉಗ್ರಗಾಮಿ ಸಂಘಟನೆ ಅಲ್ ಖೈದಾ ಜೊತೆ ಸಂಬಂಧ ಹೊಂದಿದ್ದ, ತೀವ್ರವಾದಿ ಧೋರಣೆಗಳೊಡನೆ ಜೋಡಿಸಿಕೊಂಡಿರುವ ಹಯಾತ್ ತಹ್ರಿರ್ ಅಲ್ ಶಮ್ (ಎಚ್‌ಟಿಎಸ್) ಎಂಬ ಗುಂಪು ಸಿರಿಯಾದ ನಿಯಂತ್ರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಇರುವುದು ಭಾರತಕ್ಕೆ ಕಳವಳದ ವಿಚಾರವಾಗಿದೆ. ಅದರೊಡನೆ, ಉಗ್ರಗಾಮಿ ಸಂಘಟನೆ ಐಸಿಸ್ ಸಹ ಮರಳಿ ಶಕ್ತಿ ಪಡೆದುಕೊಂಡು, ಮಧ್ಯ ಪೂರ್ವದಲ್ಲಿ ಇನ್ನಷ್ಟು ಕೋಲಾಹಲ ಮತ್ತು ಅಸುರಕ್ಷತೆಗಳಿಗೆ ಹಾದಿ ಮಾಡಿಕೊಡುವ ಆತಂಕಗಳು ಮೂಡಿವೆ. ಇದು ಕೇವಲ ಸಿರಿಯಾ ಮೇಲೆ ಮಾತ್ರ ಪರಿಣಾಮ ಬೀರದೆ, ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಪರಿಣಾಮ ಉಂಟುಮಾಡಿ, ಭಾರತದಂತಹ ದೇಶಗಳಿಗೆ ಹೆಚ್ಚಿನ ಸವಾಲುಗಳನ್ನು ಒಡ್ಡಬಹುದು.
ಭಾರತದ ಸಿರಿಯಾದ ತೈಲ ಉದ್ಯಮದಲ್ಲಿ ಎರಡು ಬಹುಮುಖ್ಯ ಹೂಡಿಕೆಗಳನ್ನು ನಡೆಸಿದೆ. ಮೊದಲನೆಯದಾಗಿ, 2004ರಲ್ಲಿ, ಭಾರತದ ಒಎನ್‌ಜಿಸಿ (ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್) ಸಿರಿಯಾದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲದ ಅನ್ವೇಷಣೆ ನಡೆಸಲು ಐಪಿಆರ್ ಇಂಟರ್ನ್ಯಾಷನಲ್ ಸಂಸ್ಥೆಯೊಡನೆ ಸಹಯೋಗ ಸ್ಥಾಪಿಸಿತು. ಇನ್ನು ಎರಡನೇ ಯೋಜನೆಯಲ್ಲಿ, ಭಾರತದ ಒಎನ್‌ಜಿಸಿ ಮತ್ತು ಚೀನಾದ ಸಿಎನ್‌ಪಿಸಿ ಸಂಸ್ಥೆಗಳು ಸಿರಿಯಾದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಕೆನಡಾದ ಸಂಸ್ಥೆಯೊಂದರ 37% ಪಾಲನ್ನು ಖರೀದಿಸಿದವು. ಈ ಹೂಡಿಕೆಗಳು, ಸಿರಿಯಾದ ಶಕ್ತಿ ಸಂಪನ್ಮೂಲಗಳ ಅನ್ವೇಷಣೆಯಲ್ಲಿ ಭಾರತ ಹೊಂದಿರುವ ಆಸಕ್ತಿಯನ್ನು ತೋರಿಸಲು, ಮತ್ತು ಮಧ್ಯ ಪೂರ್ವದ ತೈಲ ಉದ್ಯಮದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಲು ಭಾರತ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿವೆ.
ಕಳೆದ ಹಲವಾರು ವರ್ಷಗಳಿಂದ, ಭಾರತ ಸಿರಿಯಾದ ಅಭಿವೃದ್ಧಿಗೆ ಹಲವು ರೀತಿಯಲ್ಲಿ ನೆರವಾಗಿದೆ. ಇದರಲ್ಲಿ, ಸಿರಿಯಾದಲ್ಲಿ ವಿದ್ಯುತ್ ಘಟಕದ ಸ್ಥಾಪನೆಗೆ ಭಾರತ 240 ಮಿಲಿಯನ್ ಡಾಲರ್ ಮೊತ್ತವನ್ನು ಒದಗಿಸಿದ್ದು, ಐಟಿ ಮೂಲಭೂತ ವ್ಯವಸ್ಥೆ, ಉಕ್ಕಿನ ಘಟಕಗಳ ಆಧುನೀಕರಣ, ಮತ್ತು ತೈಲ ಉದ್ಯಮಕ್ಕೆ ಭಾರತ ನೆರವಾಗಿದೆ. ಅದರೊಡನೆ, ಅವಶ್ಯಕ ವಸ್ತುಗಳಾದ ಅಕ್ಕಿ, ಔಷಧ ಮತ್ತು ವಸ್ತ್ರಗಳನ್ನು ಸಿರಿಯಾಗೆ ರಫ್ತು ಮಾಡುವ ಮೂಲಕವೂ ಭಾರತ ಸಿರಿಯಾಗೆ ನೆರವಾಗಿದೆ.
ಇನ್ನು ಭಾರತ ತನ್ನನ್ನು ಕೊಲ್ಲಿ ರಾಷ್ಟ್ರಗಳೊಡನೆ ಸಂಪರ್ಕಿಸುವ, ಸೂಯೆಜ್ ಕಾಲುವೆಯ ಮೂಲಕ ಹಾದುಹೋಗುವ, ಅಂತಿಮವಾಗಿ ಮೆಡಿಟರೇನಿಯನ್ ಪ್ರಾಂತ್ಯದ ಮೂಲಕ ಯುರೋಪ್ ತಲುಪುವ ಹೊಸ ವ್ಯಾಪಾರ ಮಾರ್ಗದ ಅಭಿವೃದ್ಧಿಗೂ ಭಾರೀ ಹೂಡಿಕೆ ನಡೆಸಲು ಯೋಜನೆ ರೂಪಿಸುತ್ತಿದೆ. ಈ ವ್ಯಾಪಾರ ಮಾರ್ಗ ಸಿರಿಯಾವನ್ನೂ ತನ್ನ ಪ್ರಮುಖ ತಾಣಗಳಲ್ಲಿ ಒಂದಾಗಿಸಿದೆ.
ಡಮಾಸ್ಕಸ್ ಜೊತೆಗೆ ಭಾರತ ಹೊಂದಿರುವ ಆತ್ಮೀಯ ಸಂಬಂಧ, ಮಧ್ಯ ಪೂರ್ವದ ಇತರ ದೇಶಗಳೊಡನೆ ಭಾರತದ ಸಂಬಂಧವನ್ನು ಉತ್ತಮಗೊಳಿಸಲು ನೆರವಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸಿರಿಯಾ ಜೊತೆಗಿನ ಸಂಬಂಧ ಭಾರತಕ್ಕೆ ಇತರ ದೇಶಗಳೊಡನೆ ದೃಢ ಸಂಬಂಧ ಹೊಂದಿ, ಮಧ್ಯ ಪೂರ್ವದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಿದೆ.
ಸಿರಿಯಾದ ಬಂಡುಕೋರರಿಗೆ ಟರ್ಕಿ ಮತ್ತು ಅದರ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ ಅವರು ಬೆಂಬಲ ನೀಡಿದ್ದಾರೆ. ಸಿರಿಯಾದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ, ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಎರ್ದೋಗನ್ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸದೆ ಸುಮ್ಮನಿದ್ದರು. ಭಾರತ ಮತ್ತು ಟರ್ಕಿಯ ಸಂಬಂಧವನ್ನು ಉತ್ತಮಪಡಿಸುವಲ್ಲಿ ಇದೊಂದು ಧನಾತ್ಮಕ ಹೆಜ್ಜೆ ಎಂದು ತಜ್ಞರು ಭಾವಿಸಿದ್ದಾರೆ.
ಸದ್ಯದ ಮಟ್ಟಿಗೆ ಸಿರಿಯಾದ ರಾಜಕೀಯ ಪರಿಸ್ಥಿತಿ ಅಸ್ಪಷ್ಟವಾಗಿಯೇ ಮುಂದುವರಿದಿದೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ವಿವಿಧ ಬಂಡುಕೋರ ಗುಂಪುಗಳು ಜೊತೆಯಾಗಿ ಕಾರ್ಯಾಚರಿಸಲು ಕಷ್ಟಪಡುತ್ತಿವೆ. ಭಾರತ ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬದಲಾಗುತ್ತಿರುವ ಸಿರಿಯಾದಲ್ಲಿನ ಸವಾಲುಗಳನ್ನು ನಿಭಾಯಿಸಲು ತನ್ನ ಕಾರ್ಯತಂತ್ರಗಳನ್ನು ಬದಲಾಯಿಸುವ ಅವಶ್ಯಕತೆ ಎದುರಾಗುವ ಸಾಧ್ಯತೆಗಳಿವೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement