ರಾಜ್ಯಸಭೆ ಚುನಾವಣೆ: ಐದನೇ ಅಭ್ಯರ್ಥಿ ಕಣಕ್ಕೆ? ಮೂರೂ ಪಕ್ಷಗಳಲ್ಲಿ ತಲ್ಲಣ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಕರ್ನಾಟಕ ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುತ್ತಾರಾ?
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಹೆಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಹೆಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಕರ್ನಾಟಕ ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುತ್ತಾರಾ?

ಅಂಥದ್ದೊಂದು ಪ್ರಶ್ನೆ ಈಗ ಚರ್ಚೆಗೆ ಕಾರಣವಾಗಿದೆ. ಬರುವ  27 ರಂದು ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಕರ್ನಾಟಕ ವಿಧಾನಸಭೆಯ 224 ಸದಸ್ಯರು ಈ ಚುನಾವಣೆಗೆ ಮತದಾರರಾಗಿದ್ದಾರೆ. ಹಾಲಿ ಸದಸ್ಯರಾದ ಕೇಂದ್ರ ಮಂತ್ರಿ ರಾಜೀವ್ ಚಂದ್ರಶೇಖರ್( ಬಿಜೆಪಿ) ಡಾ. ಎಲ್.ಹನುಮಂತಯ್ಯ, ಜಿ.ಸಿ.ಚಂದ್ರ ಶೇಖರ್, ಹಾಗೂ ಸಯ್ಯದ್ ನಸೀರ್ ಹುಸೆನ್ (ಮೂವರೂ ಕಾಂಗ್ರೆಸ್) ಏಪ್ರಿಲ್ ನಲ್ಲಿ ನಿವೃತ್ತರಾಗಲಿದ್ದು ಈ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. 

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 136, ಬಿಜೆಪಿಯ 66 ಹಾಗೂ ಜೆಡಿಎಸ್ ನ 19 ಶಾಸಕರು ಇದ್ದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಮೂವರು ಪಕ್ಷೇತರ ಶಾಸಕರು ಇದ್ದಾರೆ. ಆಡಳಿತ ಕಾಂಗ್ರೆಸ್ ನಿಂದ ರಾಜ್ಯ ಸಭೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ತೀವ್ರ ಪೈಪೋಟಿ ನಡೆದಿದೆ. ಸದ್ಯ ನಾಲ್ಕೂ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಅವಕಾಶ ಇದೆಯಾದರೂ ಐದನೇ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಗಳೂ ಇವೆ. 

ಬಿಜೆಪಿ ಹಾಗೂ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಾನ ಹಂಚಿಕೆಯ ಮೂಲಕ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ವಿಶೇಷವಾಗಿ ಈ ಚುನಾವಣೆ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ನಡೆಯಲಿರುವುದರಿಂದ ಮೊದಲನೇ ಪ್ರಾಶಸ್ತ್ಯದ ಮತಗಳಿಂದಲೇ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲ್ಲುವುದು ಸುಲಭವಾಗಿದೆ.ಇದು ಹೊರತಾಗಿ  ಕಾಂಗ್ರೆಸ್ ಅಥವಾ ಬಿಜೆಪಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆಗ ಚುನಾವಣಾ ಕಣ ರಂಗೇರುತ್ತದೆ.

ಇತ್ತೀಚೆಗೆ ಆಡಳಿತ ಕಾಂಗ್ರೆಸ್ ನಲ್ಲಿ ನಾನಾ ಕಾರಣಗಳಿಗಾಗಿ ಅತೃಪ್ತರಾಗಿರುವ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ರಚನೆಯಾಗಿ ಒಂದು ವರ್ಷ ಸಮೀಪಿಸುತ್ತ ಬಂದರೂ ಸಚಿವ ಸಂಪುಟ ರಚನೆ, ಅನುದಾನ ಹಂಚಿಕೆ, ನಿಗಮ- ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಶಾಸಕರ ನೇಮಕದ ವಿಚಾರಗಳಲ್ಲಿ ಅತೃಪ್ತಿ ಕುದಿಯುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡವರ ಪೈಕಿ ಕೆಲವು ಶಾಸಕರು ಮಂತ್ರಿಗಿರಿ ಕೊಡಿ ಇಲ್ಲದಿದ್ದರೆ ಈ ಸ್ಥಾನವೂ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಇದು ಕಾಂಗ್ರೆಸ್ ಗೆ ದೊಡ್ಡ ತಲೆ ನೋವು ತಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹಿಂದಿನಷ್ಟೇ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದು ಚುನಾವಣೆಯ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂಬ ಮಾಹಿತಿಯೂ  ಆಡಳಿತ ಪಕ್ಷದ ಶಾಸಕರ ಚಿಂತೆಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಯೇ ಅಂತಿಮವಾದರೆ ಅಡ್ಡ ಮತದಾನ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ಪ್ರತಿಪಕ್ಷದ ಒಂದು ಸ್ಥಾನವೂ ಸೇರಿದಂತೆ ನಾಲ್ಕೂ ಸ್ಥಾನಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆಯಲಿ ಎಂಬ ನಿಲುವು ಹೊಂದಿದ್ದಾರೆ. ಆದರೆ ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಲುವೇ ಬೇರೆಯದಾಗಿದೆ. ಅಗತ್ಯ ಎನಿಸಿದರೆ ಕಾಂಗ್ರೆಸ್ ನಿಂದ ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ಅವರದ್ದು

ಕಾಂಗ್ರೆಸ್ ಮತಗಳ ಜತೆಗೇ ಜೆಡಿಎಸ್ ನಿಂದ 10 ಶಾಸಕರು ಹಾಗೂ ಬಿಜೆಪಿಯ ಕೆಲವು ಶಾಸಕರಿಂದ ಅಡ್ಡ ಮತದಾನ ನಡೆಸಿದರೆ ಕಾಂಗ್ರೆಸ್ ನ ಮತ್ತೊಬ್ಬ ಅಭ್ಯರ್ಥಿ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆಲ್ಲಲು ಸಾಧ್ಯ ಎಂಬ ಲೆಕ್ಕಾಚಾರ ಅವರದ್ದು. ಆದರೆ ನಾಲ್ಕನೇ ಅಭ್ಯರ್ಥಿ ಯಾರೆಂಬುದ ತೀರ್ಮಾನ ಆದಂತಿಲ್ಲ. ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಗಳು ನಡೆಯಲಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ಇದು ಧಕ್ಕೆ ತರಲೂ ಬಹುದು ಎಂಬ ನಿರೀಕ್ಷೆಯಲ್ಲಿರುವ ಬಿಜೆಪಿ ಅದಕ್ಕೆ ಮುನ್ನವೇ ಮಹತ್ವದ ರಾಜಕೀಯ ಬೆಳವಣಿಗೆಗೆ ರಾಜ್ಯ ಸಭಾ ಚುನಾವಣೆಯನ್ನು ವೇದಿಕೆ ಮಾಡಿಕೊಳ್ಳಲು ಬಯಸಿದೆ.

ಈಗಾಗಲೇ ದಿಲ್ಲಿಗೆ ಪಕ್ಷದ ವರಿಷ್ಠರ ಭೇಟಿಗೆ ತೆರಳಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಈ ವಿಚಾರದ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ಕೇಂದ್ರ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ಬೇಕಿಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ಕೇಂದ್ರ ಸರ್ಕಾರದ ತೆರಿಗೆ ಅನುದಾನ ಹಂಚಿಕೆ ತಾರತಮ್ಯ ನೀತಿ ವಿರುದ್ಧಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಗಮನ ಸೆಳೆದಿದೆ.

ಇದೊಂದು ರೀತಿಯಲ್ಲಿ ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದಲ್ಲಿ ಹೊಸ ಹುಮ್ಮಸ್ಸು ತಂದು ಕೊಟ್ಟಿದೆ. ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಯ ನಂತರ ಇಡೀ ದೇಶದಲ್ಲಿ ತನ್ನ ಮತ ಬ್ಯಾಂಕ್ ಭದ್ರ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದ ಬಿಜೆಪಿಗೆ ದಿಲ್ಲಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ನ ಪ್ರತಿಭಟನೆ ಭಾರೀ ಗಲಿಬಿಲಿ ಮೂಡಿಸಿದೆ. 

ಇಂತಹ ರಾಜಕೀಯ ಬೆಳವಣಿಗೆಗಳನ್ನು ಇನ್ನಷ್ಟು ಬೆಳೆಯಲು ಬಿಟ್ಟರೆ ದಕ್ಷಿಣ ಭಾರತದಲ್ಲಿ ಸಂಫೂರ್ಣ ಅಸ್ತಿತ್ವ ಸ್ಥಾಪಿಸುವ ತನ್ನ ಮಹತ್ವಾಕಾಂಕ್ಷೆಗೆ ಕಾಂಗ್ರೆಸ್ ಪಕ್ಷವೇ ಅಡ್ಡಿಯಾಗಬಹುದು ಎಂಬ ಆತಂಕವೂ ಬಿಜೆಪಿ ಕೇಂದ್ರ ನಾಯಕರಿಗೆ ಇದೆ. 

ಆ ಹಿನ್ನಲೆಯಲ್ಲೇ ರಾಜ್ಯ ಸಭಾ ಚುನಾವಣೆಯ ಸಂದರ್ಭವನ್ನೇ ಬಳಸಿಕೊಂಡು ಕರ್ನಾಟಕ ಕಾಂಗ್ರೆಸ್ ನಲ್ಲಿ ಅಸ್ಥಿರತೆ ಹುಟ್ಟು ಹಾಕಿದರೆ ಅದರಿಂದ ದೂರಗಾಮಿ ಲಾಭ ಆಗಬಹುದು ಎಂಬ ಲೆಕ್ಕಾಚಾರವೂ ಈ ನಾಯಕರಲ್ಲಿ ಇದೆ. ರಾಜ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ಜತೆ ಲೋಕಸಭೆ ಚುನಾವಣೆಗೆ ಮೈತ್ರಿಗೆ ಮುಂದಾಗಿರುವ ಹಂತದಲ್ಲೇ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ ನ ನೆರವನ್ನೂ ಪಡೆದು ಕಾಂಗ್ರೆಸ್ ನ ಭಿನ್ನಮತದ ಲಾಭವನ್ನೂ ಪಡೆದರೆ ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಗೆಲ್ಲಬಹುದು.

ಬಹುಮತವಿದ್ದು ರಾಜ್ಯ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನವನ್ನು ಕಳೆದುಕೊಂಡರೆ ಅದರ ಪರಿಣಾಮದಿಂದ ಉಂಟಾಗಬಹುದಾದ ಭಿನ್ನಮತ ಲಾಭ ಪಡೆಯುವುದು ಮೈತ್ರಿ ಕೂಟದ ನಾಯಕರ ಲೆಕ್ಕಾಚಾರ. 

ಈ ವಿಚಾರದಲ್ಲಿ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯ ನಾಯಕರ ಪ್ರಸ್ತಾವನೆಗೆ ಅಸ್ತು ಎಂದಿದ್ದಾರೆ.

ಈ ಬೆಳವಣಿಗೆಗಳಿಂದಾಗಿ ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನವಾಗುವ ಸನ್ನಿವೇಶ ನಿರ್ಮಾಣವಾದರೆ ಬಿಜೆಪಿ ಜತೆಗೂಡಿ ಮೈತ್ರಿ ಸರ್ಕಾರ ರಚನೆಯ ಚಿಂತನೆಯೂ ಜೆಡಿಎಸ್ ನಾಯಕತ್ವಕ್ಕಿದೆ. ಹೀಗಾಗೇ ರಾಜ್ಯದಲ್ಲಿ ಕಾಂಗ್ರೆಸ್ ನ್ನು ಮಣಿಸುವ ಯಾವುದೇ ಸನ್ನಿವೇಶ ಸೃಷ್ಟಿಯಾದರೂ ಅದನ್ನು ತನ್ನದಾಗಿಸಿಕೊಳ್ಳಲು ಜೆಡಿಎಸ್ ಹವಣಿಸುತ್ತಿದೆ. ಇದೆಲ್ಲವೂ ಸದ್ಯದಲ್ಲಿ ಎರಡೂ ಪಕ್ಷಗಳಲ್ಲಿ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರ. 

ರಾಜ್ಯ ಸಭೆಗೆ ಬಿಜೆಪಿಯಿಂದ ಸ್ಪರ್ಧಿಸುವ  ಮೊದಲನೆ ಅಭ್ಯರ್ಥಿ ಯಾರು ಎಂಬುದೇ ಇನ್ನೂ ನಿಗದಿಯಾಗಿಲ್ಲ.  ಹಾಲಿ ಸದಸ್ಯ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಿಂದ  ಸ್ಪರ್ಧಿಸುವ ಸಾಧ್ಯತೆಗಳಿವೆ. ಅವರು ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯಾಗುವುದಿಲ್ಲ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಸದಸ್ಯ ಡಾ. ಎಲ್.ಹನುಮಂತಯ್ಯ ಅವರ ಮರು ಆಯ್ಕೆಗೆ ಸಹಮತ ಇದೆ. ಇನ್ನುಳಿದಂತೆ ಸದಸ್ಯರಾದ ಜೆ.ಸಿ ಚಂದ್ರಶೇಖರ್ ಮತ್ತು ಸಯ್ಯದ್ ನಾಸಿರ್ ಹುಸೇನ್ ವಿಚಾರದಲ್ಲಿ ಅಂತಹ ಒಲವು ನಾಯಕರಲ್ಲಿ ಕಾಣುತ್ತಿಲ್ಲ. ಒಂದು ಮೂಲದ ಪ್ರಕಾರ ಮರು ಆಯ್ಕೆ ಬಯಸಿರುವ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ರಾಜ್ಯದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಇನ್ನುಳಿದ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. 

ಕಾಂಗ್ರೆಸ್ ನಿಂದ ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದ್ದು ಕಾಂಗ್ರೆಸ್ ನ ಎರಡನೇ ಪ್ರಾಶಸ್ತ್ಯದ ಮತಗಳ ಜತೆಗೆ ಜೆಡಿಎಸ್ ಮತ್ತು ಬಿಜೆಪಿ ಯಲ್ಲಿರುವ ಅತೃಪ್ತ ಶಾಸಕರ 10 ಮೊದಲನೇ ಪ್ರಾಶಸ್ತ್ಯದ ಮತಗಳನ್ನು ಪಡೆಯುವಲ್ಲಿ ಸಫಲವಾದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ದುರ್ಬಲಗೊಳಿಸಿದಂತಾಗುತ್ತದೆ. ಜೆಡಿಎಸ್ ದುರ್ಬಲವಾದರೆ ಅದರಿಂದ ಬಹುಮುಖ್ಯವಾಗಿ ತನಗೆ ಲಾಭ ಎಂಬ ಲೆಕ್ಕಾಚಾರ ಅವರದ್ದು.

ಈ ತಂತ್ರಗಾರಿಕೆ ಯಶಸ್ವಿಯಾಗಲು ಕಾಂಗ್ರೆಸ್ ನ ಶಾಸಕರಿಂದಲೂ ಅಡ್ಡ ಮತದಾನ ನಡೆಯದಂತೆ ನೋಡಿಕೊಳ್ಳಬೇಕು. ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 45 ಮೊದಲನೇ ಪ್ರಾಶಸ್ತ್ಯದ ಮತಗಳು ಬೇಕು. ವಿಧಾನಸಭೆಯಲ್ಲಿ ಈಗಿರುವ ವಿವಿಧ ಪಕ್ಷಗಳ ಸಂಖ್ಯಾಬಲದಲ್ಲಿ ಚುನಾವಣೆ ನಡೆದರೆ 66 ಶಾಸಕರ ಬಲ ಹೊಂದಿರುವ ಬಿಜೆಪಿಗೆ 45 ಮತಗಳ ಚಲಾವಣೆ ನಂತರವೂ 21 ಮತಗಳು ಹೆಚ್ಚುವರಿಯಾಗಿ ಉಳಿಯುತ್ತದೆ. ಮಿತ್ರ ಪಕ್ಷ ಜೆಡಿಎಸ್ ನ 19 ಮತಗಳ ಜತೆಗೆ  ಮೂವರು ಪಕ್ಷೇತರರು ಹಾಗೂ ಕಾಂಗ್ರೆಸ್ ನಿಂದ ಒಂದಷ್ಟು ಮತಗಳನ್ನು ಪಡೆದರೆ ಎರಡನೇ ಅಭ್ಯರ್ಥಿಯನ್ನು ಮೊದಲ ಪ್ರಾಶಸ್ತ್ಯದ ಮತಗಳ ಆಧಾರದಲ್ಲೇ ಗೆಲ್ಲಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. 

ಜೆಡಿಎಸ್ ನ ಶ್ರೀಮಂತ ರಾಜಕಾರಣಿ, ಕುಪೇಂದ್ರ ರೆಡ್ಡಿ ಮೈತ್ರಿಕೂಟದ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿದೆ. ಹಾಗೇನಾದರೂ ಆದರೆ ಚುನಾವಣೆ ರಂಗೇರಲಿದೆ. ಮತ್ತೊಂದು ಕಡೆ ಜೆಡಿಎಸ್ ನ 19 ಶಾಸಕರ ಪೈಕಿ ಕೆಲವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪರ್ಕಿಸಿದ್ದಾರೆ. ಬಿಜೆಪಿಯ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಈಗಾಗಲೇ ಒಂದು ಕಾಲು ಪಕ್ಷದಿಂದ ಹೊರಗಿಟ್ಟಿದ್ದಾರೆ. ಯಾವುದೇ ಪಕ್ಷದ ಶಾಸಕರು ವಿಪ್ ಉಲ್ಲಂಘಿಸಿ ಅಡ್ಡ ಮತದಾನ ನಡೆಸಿದರೆ ಅದರಿಂದ ಸದಸ್ಯತ್ವಕ್ಕೇನೂ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಘಟನೆಗಳು ರಾಜ್ಯದಲ್ಲಿ ಹೊಸ ರಾಜಕೀಯ ವಿದ್ಯಮಾನಗಳಿಗೆ ದಾರಿಯಾಗಲೂಬಹುದು.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com