ನ್ಯುಮೋನಿಯಾ ಎಂಬ ಶ್ವಾಸಕೋಶದ ಸೋಂಕು (ಕುಶಲವೇ ಕ್ಷೇಮವೇ)

ನಾವು ಆಮ್ಲಜನಕವನ್ನು ಉಸಿರಾಡುತ್ತಿರುವುದರಿಂದಲೇ ಬದುಕಿದ್ದೇವೆ. ನಮ್ಮ ದೇಹದಲ್ಲಿ ಉಸಿರಾಟ ಮೂಗಿನ ಮೂಲಕವೇ ಆದರೂ ಶ್ವಾಸಕೋಶದಲ್ಲಿಯೇ ಇದರ ಬಹುಮುಖ್ಯ ಕ್ರಿಯೆ ನಡೆಯುವುದು.
ನ್ಯುಮೋನಿಯಾ
ನ್ಯುಮೋನಿಯಾ

ನಾವು ಆಮ್ಲಜನಕವನ್ನು ಉಸಿರಾಡುತ್ತಿರುವುದರಿಂದಲೇ ಬದುಕಿದ್ದೇವೆ. ನಮ್ಮ ದೇಹದಲ್ಲಿ ಉಸಿರಾಟ ಮೂಗಿನ ಮೂಲಕವೇ ಆದರೂ ಶ್ವಾಸಕೋಶದಲ್ಲಿಯೇ ಇದರ ಬಹುಮುಖ್ಯ ಕ್ರಿಯೆ ನಡೆಯುವುದು. ನಾವು ಉಸಿರಾಡುವ ಗಾಳಿಯು ಶ್ವಾಸಕೋಶವನ್ನು ತಲುಪಿ ಅಲ್ಲಿಂದ ಆಮ್ಲಜನಕ ಹೀರಿಕೆಯಾಗಿ ಅಶುದ್ಧ ಇಂಗಾಲದ ಡೈ ಆಕ್ಸೈಡ್ ಮೂಗಿನ ಮೂಲಕ ಹೊರಹಾಕಲ್ಪಡುತ್ತದೆ. ಶ್ವಾಸಕೋಶವು ದೇಹದ ಇತರ ಅಂಗಗಳಂತೆ ಹಲವಾರು ಸೋಂಕು ಮತ್ತು ಸಮಸ್ಯೆಗಳಿಗೆ ಒಳಗಾಗುತ್ತದೆ.

ನ್ಯುಮೋನಿಯಾ ಹೇಗೆ ಉಂಟಾಗುತ್ತದೆ?

ನ್ಯುಮೋನಿಯಾ ಶ್ವಾಸಕೋಶದ ಸೋಂಕಿನ ಒಂದು ವಿಧವಾಗಿದೆ. ಇದು ಕೆಲವೊಮ್ಮೆ ಎರಡೂ ಶ್ವಾಸಕೋಶಗಳ ಮೇಲೆ ತೀವ್ರ ಪರಿಣಾಮ ಬೀರಬಹುದು. ನ್ಯೂಮೋನಿಯಾ ಉಂಟಾದಾಗ ಶ್ವಾಸಕೋಶದಲ್ಲಿರುವ ಗಾಳಿ ಚೀಲಗಳು ಸೋಂಕಿನಿಂದಾಗಿ ದ್ರವದಿಂದ ತುಂಬಿಕೊಳ್ಳುತ್ತವೆ. ಆದ್ದರಿಂದ ಈ ಕಾಯಿಲೆ ಬಂದವರು ಕೆಮ್ಮು, ಜ್ವರ, ನೆಗಡಿ ಮತ್ತು ಉಸಿರಾಟದ ತೊಂದರೆಯೂ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.

ನ್ಯುಮೋನಿಯಾ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರಗಳು ಅಥವಾ ಇತರ ಸೂಕ್ಷ್ಮಾಣುಜೀವಿಗಳಿಂದ ಉಂಟಾಗಬಹುದು. ಇದು ಸೌಮ್ಯ ಅಥವಾ ತೀವ್ರವಾಗಿರುವುದರಿಂದ ಜಾಗತಿಕ ಆರೋಗ್ಯ ಕಾಳಜಿಯಾಗಿದೆ. ನ್ಯುಮೋನಿಯಾ ವಯಸ್ಸಾದವರು, ಚಿಕ್ಕ ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಇರುವವರ ಮೇಲೆ ಬೇಗ ದುಷ್ಪರಿಣಾಮ ಬೀರುತ್ತದೆ.

ನ್ಯುಮೋನಿಯಾ ಉಂಟಾಗಲು ಕಾರಣಗಳು

ನ್ಯುಮೋನಿಯಾಕ್ಕೆ ಸಾಮಾನ್ಯ ಕಾರಣವೆಂದರೆ ಬ್ಯಾಕ್ಟೀರಿಯಾದ ಸೋಂಕು, ಅದರಲ್ಲಿಯೂ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಈ ಕಾಯಿಲೆ ಕಾಣಿಸಿಕೊಳ್ಳಲು ಪ್ರಧಾನ ಕಾರಣ. ಹಿಮೋಫಿಲಸ್ ಇನ್ಫ್ಲುಯೆಂಜಾ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯಾದಂತಹ ಇತರ ಬ್ಯಾಕ್ಟೀರಿಯಾಗಳು ಸಹ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಇದಲ್ಲದೇ ಶಿಲೀಂಧ್ರ ಮತ್ತು ಪರಾವಲಂಬಿ ಸೋಂಕುಗಳು ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ನ್ಯುಮೋನಿಯಾ ನೇರವಾಗಿ ಶ್ವಾಸಕೋಶದ ಕಾರ್ಯಕ್ಕೆ ತೊಂದರೆಯನ್ನುಂಟುಮಾಡುತ್ತದೆ.

ನ್ಯುಮೋನಿಯಾ ಲಕ್ಷಣಗಳು

ನ್ಯುಮೋನಿಯಾದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೂ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ, ಎದೆ ನೋವು ಮತ್ತು ಆಯಾಸ ಇದರ ಸಾಮಾನ್ಯ ಲಕ್ಷಣಗಳಾಗಿವೆ. ತೀವ್ರತರವಾದ ಪ್ರಕರಣಗಳಲ್ಲಿ ಉಸಿರಾಟದ ವೈಫಲ್ಯ ಮತ್ತು ಅಂಗಗಳ ಸಾಮಾನ್ಯ ಕ್ರಿಯೆಗಳ ತೊಡಕುಗಳಿಗೆ ಕಾರಣವಾಗಬಹುದು. ಕಡಿಮೆ ರಕ್ತದ ಒತ್ತಡ ಅಥವಾ ಲೋ ಬಿಪಿ, ಹೃದಯದ ಬಡಿತ ತುಂಬಾ ಹೆಚ್ಚಾಗಿರುವುದು, ವೇಗವಾಗಿ ಉಸಿರಾಡುವುದು, ಚಳಿ ಇಲ್ಲದಿದ್ದರೂ ಮೈ ಕೈ ನಡುಗುವುದು, ವಿಪರೀತ ಗೊಂದಲ, ಹೊಟ್ಟೆ ಕೆಟ್ಟು ಹೋಗುವುದು (ವಾಕರಿಕೆ, ವಾಂತಿ ಮತ್ತು ಭೇದಿ), ವಿಪರೀತ ತಲೆನೋವು ಕಾಡುವುದು, ಮೈ ಬೆವರುವುದು, ಕಫ ಉತ್ಪತ್ತಿ ಮಾಡುವ ಕೆಮ್ಮು, ಹೊಟ್ಟೆ ಹಸಿವು ಇಲ್ಲದಂತಾಗಿ, ದೇಹಕ್ಕೆ ಹೆಚ್ಚಿನ ಆಯಾಸ ಉಂಟಾಗುವುದು ಮತ್ತು ಕೆಮ್ಮಿದಾಗ ಎದೆ ನೋವು ಬರುವುದು ಹೀಗೆ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಸಮಯೋಚಿತ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯು ನ್ಯುಮೋನಿಯಾವನ್ನು ತಡೆಗಟ್ಟಲು ಮತ್ತು ಇದರಿಂದ ಬೇಗ ಚೇತರಿಸಿಕೊಳ್ಳಲು ಮುಖ್ಯವಾಗಿದೆ.

ನ್ಯುಮೋನಿಯಾ ರೋಗನಿರ್ಣಯ ಹೇಗೆ?

ನ್ಯುಮೋನಿಯಾ ರೋಗನಿರ್ಣಯವು ಸಾಮಾನ್ಯವಾಗಿ ವೈದ್ಯಕೀಯ ಮೌಲ್ಯಮಾಪನ, ಇತಿಹಾಸ ಮತ್ತು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಎದೆಯ ಎಕ್ಸ್-ರೇಯನ್ನು ಸಾಮಾನ್ಯವಾಗಿ ಶ್ವಾಸಕೋಶದಲ್ಲಿ ಏನಾಗಿದೆ ಎಂದು ಮತ್ತು ಉರಿಯೂತ ಪ್ರದೇಶಗಳನ್ನು ಗುರುತಿಸಲು ಬಳಸಲಾಗುತ್ತದೆ. ನ್ಯುಮೋನಿಯಾಗೆ ಕಾರಣವಾಧ ನಿರ್ದಿಷ್ಟ ಸೂಕ್ಷ್ಮಾಣುವನ್ನು ನಿರ್ಧರಿಸಲು ರಕ್ತ ಪರೀಕ್ಷೆಗಳನ್ನು ನಡೆಸಬಹುದು, ನ್ಯುಮೋನಿಯಾ ಬಂದವರು ಮಾಸ್ಕ್ ಧರಿಸಲೇಬೇಕು. ಇಲ್ಲದಿದ್ದರೆ ಅವರು ಕೆಮ್ಮಿದಾಗ ರೋಗಾಣುಗಳ ಗಾಳಿಯಲ್ಲಿ ಬೆರೆತು ಬೇರೆಯವರಿಗೂ ರೋಗ ಹರಡುವ ಸಾಧ್ಯತೆ ಇರುತ್ತದೆ.

ನ್ಯುಮೋನಿಯಾಗೆ ಚಿಕಿತ್ಸೆ

ನ್ಯುಮೋನಿಯಾಗೆ ಚಿಕಿತ್ಸೆಯು ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಬ್ಯಾಕ್ಟೀರಿಯಾದಿಂದ ಉಂಟಾದ ನ್ಯುಮೋನಿಯಾವನ್ನು ಗುಣಪಡಿಸಲು ಹೆಚ್ಚಾಗಿ ಆಂಟಿಬಯಾಟಿಕ್ಸ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ, ಆದರೆ ವೈರಲ್ ನ್ಯುಮೋನಿಯಾಕ್ಕೆ ಆಂಟಿವೈರಲ್ ಔಷಧಿಗಳನ್ನು ಶಿಫಾರಸು ಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಬಹುದು, ಸೂಕ್ತ ಲಸಿಕೆಗಳನ್ಜು ತೆಗೆದುಕೊಳ್ಳುವುದು ಮತ್ತು ಔಷಧೋಪಚಾರದ ಚಿಕಿತ್ಸೆಯನ್ನು ಈ ರೋಗವನ್ನು ವಾಸಿ ಮಾಡಲು ಸಾಧ್ಯ.

ನ್ಯುಮೋನಿಯಾದ ಅಪಾಯವನ್ನು ಕಡಿಮೆ ಮಾಡುವಲ್ಲಿ ತಡೆಗಟ್ಟುವ ಕ್ರಮಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ನ್ಯುಮೋಕೊಕಲ್ ಮತ್ತು ಇನ್‌ಫ್ಲುಯೆಂಜಾ ಲಸಿಕೆಗಳು ಸಾಮಾನ್ಯ ಬ್ಯಾಕ್ಟೀರಿಯಾ ಮತ್ತು ವೈರಲ್ ರೋಗಕಾರಕಗಳ ವಿರುದ್ಧ ಹೋರಾಡುತ್ತವೆ. ಶುದ್ಧ ವಾತಾವರಣದಲ್ಲಿರುವುದು, ಆಗಾಗ್ಗೆ ಕೈ ತೊಳೆಯುವುದು ಮತ್ತು ಅನಾರೋಗ್ಯದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು ಉಸಿರಾಟದ ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿವೆ. ಕೆಲವೊಮ್ಮೆ ಅನಾರೋಗ್ಯಕರ ಜೀವನಶೈಲಿಯು ನ್ಯುಮೋನಿಯಾಗೆ ಕಾರಣವಾಗಬಹುದು. ಧೂಮಪಾನವನ್ನು ನಿಲ್ಲಿಸುವುದು, ಒಟ್ಟಾರೆ ಉತ್ತಮ ನೈರ್ಮಲ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಆರೋಗ್ಯಕ್ಕಾಗಿ ಅಗತ್ಯ ಲಸಿಕೆಗಳನ್ನು ತೆಗೆದುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ, ನಡಿಗೆಯ ಅಭ್ಯಾಸ ಇಟ್ಟುಕೊಳ್ಳುವುದು, ಕಲುಷಿತ ವಾತಾವರಣದಿಂದ ದೂರ ಇರುವುದು, ಜೊತೆಗೆ ಈಗಾಗಲೇ ಶುಗರ್, ಬಿಪಿ ಮತ್ತಿತರ ರೋಗಗಳಿದ್ದರೆ ಅವುಗಳ ಸಮರ್ಪಕ ನಿರ್ವಹಣೆ ಮತ್ತು ಉಸಿರಾಟದ ಸೋಂಕುಗಳಿಗೆ ತ್ವರಿತ ವೈದ್ಯಕೀಯ ಆರೈಕೆಯನ್ನು ಪಡೆಯುವುದು ನ್ಯುಮೋನಿಯಾ ಬರದಿರುವಂತೆ ತಡೆಯುತ್ತದೆ. ಕೋವಿಡ್ ವೈರಸ್ ಬಂದ ಮೇಲೆ ಬಿಪಿ, ಶುಗರಿನಂತಹ ಸಹ ಅಸ್ವಸ್ಥತೆಗಳಿದ್ದವರು ಈ ಬಗ್ಗೆ ಆದಷ್ಟು ಎಚ್ಚರಿಕೆಯಿಂದ ಇರಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com