ಚೀನಾದ ಡೆಟ್ ಟ್ರ್ಯಾಪ್ ಸುಳಿಯಲ್ಲಿರುವ ಮಾಲ್ಡಿವ್ಸ್ ಗೆ ಭಾರತದ ಸಹಾಯ ಬೇಕಿದೆ! (ಹಣಕ್ಲಾಸು)

ಹಣಕ್ಲಾಸು-395-ರಂಗಸ್ವಾಮಿ ಮೂಕನಹಳ್ಳಿ
ಮಾಲ್ಡೀವ್ಸ್
ಮಾಲ್ಡೀವ್ಸ್

ನಮ್ಮ ನೆರೆ ರಾಷ್ಟ್ರ ಪುಟಾಣಿ ಮಾಲ್ಡಿವ್ಸ್ ನಮ್ಮ ಮೇಲೆ ಗುಟುರು ಹಾಕುತ್ತಿದೆ. ಇದು ಹೇಗಾಯ್ತು ಎಂದರೆ ಮಕ್ಕಳು ಪೋಷಕರ ಮೇಲೆ ಸಿಟ್ಟುಗೊಂಡಂತೆ! ಹೆತ್ತು ಹೊತ್ತು ಸಾಕಿ ಬೆಳೆಸಿದ ಪೋಷಕರನ್ನು ಕೆಲವು ಮಕ್ಕಳು ನಿಂದಿಸಲು ಶುರು ಮಾಡುತ್ತಾರೆ. ತಮ್ಮ ಅಸ್ತಿತ್ವಕ್ಕೆ ಕಾರಣರು ಅವರು ಎನ್ನುವುದನ್ನು ಮರೆತು ಬಿಡುತ್ತಾರೆ. ಮಾಲ್ಡಿವ್ಸ್ ಮಾಡುತ್ತಿರುವುದು ಕೂಡ ಅದೇ ತಪ್ಪು. ನಿಮಗೆಲ್ಲಾ ಗೊತ್ತಿದೆ, ಕೆಲವು ದಿನಗಳ ಹಿಂದಿನಿಂದ ಮದ್ದುಗುಂಡು ಸಿಡಿದಿಲ್ಲ ಎನ್ನುವುದನ್ನು ಬಿಟ್ಟರೆ ಅಪರೋಕ್ಷವಾಗಿ ನಾವು ಮಾಲ್ಡಿವ್ಸ್ ಜೊತೆಯಲ್ಲಿ ಯುದ್ಧದಲ್ಲಿದ್ದೇವೆ. ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ, ಭಾರತ ಮಾಲ್ಡಿವ್ಸ್ ಎನ್ನುವ ಪುಟಾಣಿ ದೇಶವನ್ನು ಹೇಗೆ ಸಲಹಿದೆ ಎನ್ನುವುದನ್ನು ಸ್ವಲ್ಪ ನೋಡೋಣ.

ಮಾಲ್ಡಿವ್ಸ್ ಬ್ರಿಟಿಷರಿಂದ ರಾಜಕೀಯ ಸ್ವಂತಂತ್ರ್ಯವನ್ನು ಪಡೆದದ್ದು  1965 ರಲ್ಲಿ, ಆದರೆ ಅದು ತನ್ನನ್ನು ತಾನು ಗಣರಾಜ್ಯ ಎಂದು ಘೋಷಿಸಿಕೊಂಡದ್ದು 1968 ರಲ್ಲಿ, ಆದರೂ ಬ್ರಿಟಿಷರ ಕೊನೆಯ ಸೈನಿಕ ಅಲ್ಲಿಂದ ಹೊರಟದ್ದು 1976 ರಲ್ಲಿ ಎಂದರೆ ಬ್ರಿಟಿಷರ ಪಾರುಪತ್ಯದ ಅರಿವು ನಿಮಗಾದೀತು. ಮಾಲ್ಡಿವ್ಸ್ ಗಣಾರಾಜ್ಯ ಎಂದು ಘೋಷಿಸಿಕೊಂಡ ತಕ್ಷಣ ಅದನ್ನು ಒಪ್ಪಿ, ಅದಕ್ಕೊಂದು ಸ್ಥಾನಮಾನ ಕೊಟ್ಟ ಮೊದಲ ಕೆಲವು ದೇಶಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗಾಗಿ ಭಾರತಕ್ಕೆ ಫಸ್ಟ್ ರೆಸ್ಪಾಂಡೆಂಟ್ ಎನ್ನುವ ಹೆಸರು ಬಂದಿದೆ. ಇದಿಷ್ಟೇ ಅಲ್ಲ, ಮಾಲ್ಡಿವ್ಸ್ ಯಾವಾಗೆಲ್ಲಾ ತೊಂದರೆಯಲ್ಲ ಸಿಲುಕಿದೆ ಆಗೆಲ್ಲಾ ಭಾರತ ಅವರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಮುಂದಿದೆ.

  1. 1988 ರಲ್ಲಿ ಮಾಲ್ಡಿವ್ಸ್ ನಲ್ಲಿ ಆಂತರಿಕ ಗಲಭೆ ಉಂಟಾಗುತ್ತದೆ. ಅದನ್ನು ಶಮನಗೊಳಿಸಲು ನೆರವಿನ ಹಸ್ತ ಚಾಚಿದ್ದು ಭಾರತ.
  2. 2004 ರಲ್ಲಿ ಅಪ್ಪಳಿಸಿದ ಸುನಾಮಿಗೆ ಹಲವು ದೇಶಗಳು ತತ್ತರಗೊಂಡವು. ನಮ್ಮ ಭಾರತದಲ್ಲಿ ಕೂಡ ಅದರ ವಿಪ್ಲವವನ್ನು ನಾವು ಕಂಡಿದ್ದೇವೆ. ಆಗ ಕೂಡ ಅನ್ನ, ಆಹಾರ, ಬಟ್ಟೆ, ವೈದ್ಯಕೀಯ ನೆರೆವು ನೀಡಿದ್ದು ಮತ್ತು ಅದರ ಪುನರ್ನಿರ್ಮಾಣಕ್ಕೆ ಸಹಾಯ ಮಾಡಿದ್ದು ಭಾರತ.
  3. 2014 ರಲ್ಲಿ ಮಾಲ್ಡಿವ್ಸ್ ತೀವ್ರ ನೀರಿನ ಅಭಾವವನ್ನು ಎದರಿಸುತ್ತದೆ. ಅಲ್ಲಿ ಉಂಟಾದ ಅಗ್ನಿ ಅವಘಡದಿಂದ ಕುಡಿಯುವ ನೀರಿನ ಸರಬರಾಜು ನಿಲ್ಲುತ್ತದೆ. ಆಗ ಕೆಲವೇ ಗಂಟೆಗಳಲ್ಲಿ ಸುಷ್ಮಾ ಸ್ವರಾಜ್ ನೇತೃತ್ವದ ತಂಡ ಸಾವಿರಾರು ಗಟ್ಟಲೆ ನೀರನ್ನು 'ಆಪರೇಷನ್ ನೀರ್' ಎನ್ನುವ ಅಡಿಯಲ್ಲಿ ಭಾರತೀಯ ನೌಕಾದಳದ ಸಹಾಯದಿಂದ ಒದಗಿಸುತ್ತಾರೆ. ಕನಿಷ್ಠ ಒಂದೂವರೆ ಲಕ್ಷ ಜನರನ್ನು ಸಂಭಾವ್ಯ ಅಪಾಯದಿಂದ ಪಾರು ಮಾಡುತ್ತಾರೆ.
  4. ಇನ್ನು 2019 ರಲ್ಲಿ ಕೋವಿಡ್ ತಂದ ಸಂಕಷ್ಟವನ್ನು ಯಾರೂ ಮರೆಯುವಂತಿಲ್ಲ. ಮಾಲ್ಡಿವ್ಸ್ ಎನ್ನುವ ಪುಟಾಣಿ ದೇಶ ನಿಂತಿರುವುದು ಟೂರಿಸಂ ಮೇಲೆ, ಕೋವಿಡ್ ಸಮಯದಲ್ಲಿ ಎಲ್ಲವೂ ಸ್ಥಬ್ದವಾಗಿತ್ತು. ಆ ಸಮಯದಲ್ಲಿ ಭಾರತ ನೀಡಿದ, ಫೈನಾನ್ಸಿಯಲ್ ಏಡ್, ಮೆಡಿಕಲ್ ಏಡ್, ಮತ್ತು ಲಾಜಿಸ್ಟಿಕಲ್ ಸಪೋರ್ಟ್ ನ ಕಾರಣ ಮಾಲ್ಡಿವ್ಸ್ ಜಗತ್ತಿಗೆ ಇಂದಿಗೂ ತೆರೆದುಕೊಂಡು ನಿಂತಿದೆ.

ಮೇಲಿನ ಅತಿ ಪ್ರಮುಖ ನಾಲ್ಕು ಘಟನೆಗಳಲ್ಲಿ ಭಾರತ ಮಾಲ್ಡಿವ್ಸ್ ದೇಶದ ಸಂಕಷ್ಟಕ್ಕೆ ಸ್ಪಂದಿಸಿದ ಪ್ರಥಮ ದೇಶವಾಗಿದೆ. ಹೀಗಾಗಿ ಫಸ್ಟ್ ರೆಸ್ಪಾಂಡೆನ್ಟ್ ಎನ್ನುವ ಮಾತು ಭಾರತಕ್ಕೆ ಒಪ್ಪುತ್ತದೆ. ಇಷ್ಟೆಲ್ಲಾ ಸಹಾಯ ಪಡೆದು ಕೂಡ ಮಾಲ್ಡಿವ್ಸ್ ಹೀಗೆ ನಮ್ಮ ಮೇಲೆ ತಿರುಗಿ ಬೀಳಲು ಕಾರಣವೇನು? ಗಮನಿಸಿ ನೋಡಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿಕೊಳ್ಳುತ್ತಿರುವ ಹೆಸರು , ಮನ್ನಣೆ ಚೀನಾದ ಪಾಲಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದು ಭಾರತವನ್ನು ತೀವ್ರ ಪ್ರತಿಸ್ಪರ್ಧಿ ಎನ್ನುವಂತೆ ನೋಡುತ್ತದೆ. ಇದರ ಜೊತೆಗೆ ಅದು ಭಾರತದ ಮೇಲೆ ನೇರವಾಗಿ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ. ಭಾರತದಂತಹ ಅತಿ ದೊಡ್ಡ ದೇಶದ ಮೇಲೆ ಕಾಲು ಕೆರೆದು ಜಗಳ ಮಾಡುವುದು ಸುಲಭವೂ ಅಲ್ಲ. ಹೀಗಾಗಿ ಭಾರತದ ಸುತ್ತಮುತ್ತ ಇರುವ ಸಣ್ಣಪುಟ್ಟ ದೇಶಗಳ ಮೇಲೆ ಅಧಿಪತ್ಯವನ್ನು ಸ್ಥಾಪಿಸಿ ಅವುಗಳನ್ನು ಅದು ಭಾರತ ವಿರುದ್ಧ ಎತ್ತಿಕಟ್ಟುತ್ತದೆ. ಮಾಲ್ಡಿವ್ಸ್ ವಿಷಯದಲ್ಲೂ ಆಗಿರುವುದು ಇಷ್ಟೇ. ಚೀನಾ ಬೀಸಿರುವ ಸಾಲದ ಖೆಡ್ಡಾದಲ್ಲಿ ಮಾಲ್ಡಿವ್ಸ್ ಬಿದ್ದಿದೆ. ಈಗಿರುವ ಸರಕಾರ ಪೂರ್ಣವಾಗಿ ಚೀನಾ ದೇಶಕ್ಕೆ ಶರಣಾಗಿದೆ. ಇದರ ಹಿಂದಿನ ಸರಕಾರ ಭಾರತದ ಪರ ನಿಲುವನ್ನು ಹೊಂದಿತ್ತು. ಇಂದಿನ ಸರಕಾರ ಚೀನಾದ ಬಲೆಯಲ್ಲಿ ಬಿದ್ದಿದೆ. ಚೀನಾ ಮೂಲಭೂತ ಸೌಕರ್ಯ ವೃದ್ಧಿಗೆ ಎಂದು ಹೇಳಿ ನೀಡಿರುವ ಸಾಲದ ಹಣವನ್ನು ಅವರು ತೀರಿಸುವ ಶಕ್ತಿ ಇಲ್ಲವಾಗಿದೆ. ಹೀಗಾಗಿ ಚೀನಾದ ತಾಳಕ್ಕೆ ಕುಣಿಯದೆ ಬೇರೆ ದಾರಿಯಲ್ಲಿ ಎನ್ನುವಂತಾಗಿದೆ. ನಿಮಗೆಲ್ಲಾ ಗೊತ್ತಿರಲಿ ಚೀನಾದ ಡೆಟ್ ಟ್ರ್ಯಾಪ್ ಗೆ ಬಲಿಯಾಗಿರುವ ಅನೇಕ ದೇಶದದಲ್ಲಿ ಮಾಲ್ಡಿವ್ಸ್ ಕೂಡ ಒಂದು.

ಹಣಕಾಸು ಲೆಕ್ಕಾಚಾರದಲ್ಲೂ ಭಾರತ ಮಾಲ್ಡಿವ್ಸ್ ಪಾಲಿಗೆ ಫಸ್ಟ್ ರೆಸ್ಪಾಂಡೆನ್ಟ್ ಎನ್ನುವುದನ್ನು ಕೆಳಗಿನ ಅಂಕಿ ಅಂಶಗಳು ಸಾಬೀತು ಪಡಿಸುತ್ತವೆ.

  1. ಮಾಲ್ಡಿವ್ಸ್ ಜಿಡಿಪಿ ಆರೂವರೆ ಬಿಲಿಯನ್ ಡಾಲರ್. ಅದರಲ್ಲಿ 380 ಮಿಲಿಯನ್ ಡಾಲರ್ ಭಾರತದ ಪ್ರವಾಸಿಗರು ಅಲ್ಲಿ ಖರ್ಚು ಮಾಡುವುದರ ಮೂಲಕ ಸಿಗುತ್ತಿದೆ. ಅಂದರೆ ಗಮನಿಸಿ ಹತ್ತಿರತ್ತಿರ ಐದೂವರೆ ಪ್ರತಿಶತ ಮಾಲ್ಡಿವ್ಸ್ ಜಿಡಿಪಿಗೆ ನಾವು ದೇಣಿಗೆ ನೀಡುತ್ತಿದ್ದೇವೆ.
  2. ಭಾರತದಿಂದ 2023 ರಲ್ಲಿ ಮಾಲ್ಡಿವ್ಸ್ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಎರಡು ಲಕ್ಷ ನಲವತ್ತು ಸಾವಿರ. ಇದು ಮಾಲ್ಡಿವ್ಸ್ ಗೆ ಭೇಟಿ ನೀಡುವ ಒಟ್ಟು ಪ್ರವಾಸಿಗರ 11.2 ಪ್ರತಿಶತವಾಗಿದೆ. ಈ ಸಂಖ್ಯೆಯೊಂದಿಗೆ ಭಾರತ ಪ್ರಥಮ ಸ್ಥಾನದಲ್ಲಿದೆ. ಇಲ್ಲಿಗೆ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿಗರ ಪಟ್ಟಿಯಲ್ಲಿ  ರಷ್ಯಾ ಎರಡನೇ ಸ್ಥಾನವನ್ನು ಮತ್ತು ಚೀನಾ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.
  3. ಈ ದೇಶದ 50 ಪ್ರತಿಶತಕ್ಕೂ ಹೆಚ್ಚು ಎಕಾನಮಿ ಪ್ರಸೋದ್ಯಮದ ಮೇಲೆ ಅವಲಂಬಿತವಾಗಿದೆ. ಇದರ ಜೊತೆಗೆ ಇಲ್ಲಿನ 70 ಪ್ರತಿಶತ ಕೆಲಸಗಳು ಇರುವುದು ಟೂರಿಸಂ ಇಂಡಸ್ಟ್ರಿ ಕಾರಣ. ಭಾರತದ ಪ್ರವಾಸಿಗರು ಇಲ್ಲಿಗೆ ಹೋಗಲು ನಿಲ್ಲಿಸಿದರೆ ಸಾಕು ಮಾಲ್ಡಿವ್ಸ್ ಜಿಡಿಪಿ ಕನಿಷ್ಠ ಆರು ಪ್ರತಿಶತ ಕುಸಿತವನ್ನು ಕಾಣುತ್ತದೆ. ಇದರ ಫಲಿತಾಂಶ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೂಡ ಆಗುತ್ತದೆ.
  4. ಮಾಲ್ಡಿವ್ಸ್ ಯುವಜನತೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಭಾರತವನ್ನು ಅವಲಂಬಿಸಿದ್ದಾರೆ. ಇದರ ಜೊತೆಗೆ ವೈದ್ಯಕೀಯ ಸೇವೆಗಳಿಗೆ ಕೂಡ ಅವರು ಭಾರತವನ್ನು ಅವಲಂಬಿಸಿದ್ದಾರೆ.ಭಾರತವನ್ನು ಬಿಟ್ಟು ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯ.

ಗಮನಿಸಿ ನೋಡಿ ಭಾರತ ತನ್ನ ನೆರೆಹೊರೆ ರಾಷ್ಟ್ರಗಳು ಕೂಡ ಉತ್ತಮ ಬದುಕು ಕಟ್ಟಿಕೊಳ್ಳಲಿ ಎನ್ನುವ ಮನೋಭಾವದಿಂದ ಸಹಾಯ ನೀಡುತ್ತದೆ. ಆದರೆ ಚೀನಾ ದೀರ್ಘಕಾಲದಲ್ಲಿ ನೆರೆ ಹೊರೆ ರಾಷ್ಟ್ರಗಳನ್ನು ಗುಲಾಮರಂತೆ ನಡೆಸಿಕೊಳ್ಳುವ ಹವಣಿಕೆಯಲ್ಲಿರುತ್ತದೆ. ಈ ಸೂಕ್ಷ್ಮವನ್ನು ಮಾಲ್ಡಿವ್ಸ್ ಮರೆತಿದೆ. ಈ ಕಾರಣದಿಂದ ಇದು ಬಹು ದೊಡ್ಡ ಬೆಲೆಯನ್ನು ತೆರಲಿದೆ.

ನಾವು ಮಾಲ್ಡಿವ್ಸ್ ಹೊರತಾಗಿ ಕೂಡ ಬದುಕಬಹುದು ಎನ್ನುವುದನ್ನು ತೋರಿಸಲು ಭಾರತದ ಪ್ರಧಾನಿ ಲಕ್ಷದ್ವೀಪಕ್ಕೆ ಹೋಗುತ್ತಾರೆ. ಅಲ್ಲಿನ ಸುಂದರ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಅವರು ಎಲ್ಲಿಯೂ ಮಾಲ್ಡಿವ್ಸ್ ಹೆಸರು ತರುವುದಿಲ್ಲ. ಆದರೆ ಕೆಲವು ಮಾಲ್ಡಿವ್ಸ್ ರಾಜತಾಂತ್ರಿಕ ವರ್ಗದವರು ಮತ್ತು ಸಚಿವರು ಇದನ್ನು ಲೇವಡಿ ಮಾಡುತ್ತಾರೆ. ಹಸುವಿನ ಸಗಣಿ ವಾಸನೆ ಹೋಗಲಾಡಿಸಲಾದೀತೇ? ಎಂದು ಹಂಗಿಸುತ್ತಾರೆ. ಪರಿಣಾಮ ಅವರು ಕೆಲಸ ಕಳೆದುಕೊಳ್ಳುತ್ತಾರೆ. ನಮ್ಮ ನೆಟ್ಟಿಗರು ಬಾಯ್ಕಾಟ್ ಮಾಲ್ಡಿವ್ಸ್ ಅಭಿಯಾನ ಶುರು ಮಾಡುತ್ತಾರೆ. ಭಾರತದ ಶಕ್ತಿ ಎಂತಹುದು ಎನ್ನುವುದರ ಅರಿವು ಮಾಲ್ಡಿವ್ಸ್ ಗೆ ಗೊತ್ತಾಗುತ್ತದೆ.

ಕೊನೆಮಾತು: ಮಾಲ್ಡಿವ್ಸ್ ಇರಲಿ ಬೇರೆ ಯಾವ ದೇಶವೇ ಇರಲಿ, ಭಾರತದ ಬಗ್ಗೆ ಹಗುರಾಗಿ ಮಾತನಾಡಿದಾಗ ಅವರಿಗೆ ಸರಿಯಾಗಿ ಬುದ್ದಿ ಕಲಿಸುವುದು ನಮ್ಮೆಲ್ಲರ ಕರ್ತವ್ಯ ಅದನ್ನು ಭಾರತದ ಜನತೆ, ನೆಟ್ಟಿಗರು ಸರಿಯಾಗಿ ಮಾಡಿದ್ದಾರೆ. ಆದರೆ ನಮ್ಮಲ್ಲಿರುವ ಪ್ರವಾಸಿ ತಾಣಗಳನ್ನು ಇನ್ನಷ್ಟು ಹೆಚ್ಚು ಅಭಿವೃದ್ಧಿ ಪಡಿಸಲು ಸರಕಾರವನ್ನು ಒತ್ತಾಯಿಸುವುದು ಮತ್ತು ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ನಮ್ಮ ಕೆಲಸ. ಅದನ್ನು ಕೂಡ ನಾವು ನಿಷ್ಠೆಯಿಂದೆ ಮಾಡಬೇಕಿದೆ. ಹೀಗಾದಲ್ಲಿ ಕೇವಲ ಮಾಲ್ಡಿವ್ಸ್ ಮಾತ್ರವಲ್ಲ, ಸ್ವಿಸ್ ಒಳಗೊಂಡಂತೆ ಬೇರೆ ದೇಶಗಳಿಗೆ ಶೂಟಿಂಗ್, ಪ್ರವಾಸ ಇತ್ಯಾದಿಗಳಿಗೆ ಹೋಗುವುದು ಕಡಿಮೆಯಾಗುತ್ತದೆ. ನಾವು ಯಾರಿಗೂ ಕಡಿಮೆಯಿಲ್ಲ ಎನ್ನುವ ಆತ್ಮಾಭಿಮಾನ ನಾವು ಬೆಳಸಿಕೊಳ್ಳದೆ ಇದ್ದಲ್ಲಿ ಮಾಲ್ಡಿವ್ಸ್ ನಂತಹ ಪುಟಾಣಿ ದೇಶಗಳು ಕೂಡ ನಮ್ಮ ಸ್ವಚ್ಛತೆಯ ಬಗ್ಗೆ ಲೇವಡಿ ಮಾಡುವುದು ತಪ್ಪುವುದಿಲ್ಲ. ನಾವು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com