ಸಿಕಲ್ ಸೆಲ್ ಅನೀಮಿಯಾ ಅಥವಾ Sickle cell anemia (ಕುಶಲವೇ ಕ್ಷೇಮವೇ)

ಕುಡಗೋಲು ಕಣ ರಕ್ತಹೀನತೆಯ ಪ್ರಮುಖ ಲಕ್ಷಣ ಅಸಹಜ ಹಿಮೋಗ್ಲೋಬಿನ್ ಉತ್ಪಾದನೆ. ಇದರಿಂದ ಕೆಂಪು ರಕ್ತ ಕಣಗಳು ಕಠಿಣ, ಜಿಗುಟಾದ ಮತ್ತು ಕುಡಗೋಲು ಅಥವಾ ಅರ್ಧಚಂದ್ರಾಕೃತಿಯ ಆಕಾರವನ್ನು ಪಡೆಯುತ್ತವೆ.
Sickle Cell anemia
ಸಿಕಲ್ ಸೆಲ್ ಅನೀಮಿಯಾonline desk

ಸಿಕಲ್ ಸೆಲ್ ಅನೀಮಿಯಾ (ಕುಡುಗೋಲು ಕಣ ರಕ್ತಹೀನತೆ) ಒಂದು ಅನುವಂಶೀಯ ರಕ್ತಹೀನತೆ ಕಾಯಿಲೆ. ಈ ರೋಗ ಬಂದಾಗ ಕೆಂಪು ರಕ್ತ ಕಣಗಳು ಕುಡುಗೋಲಿನ (ಇಂಗ್ಲೀಷಿನಲ್ಲಿ Sickle) ಆಕಾರಕ್ಕೆ ಬದಲಾಗುವುದರಿಂದ ಇದನ್ನು ಸಿಕಲ್ ಸೆಲ್ ಅನೀಮಿಯಾ ಎನ್ನಲಾಗುತ್ತದೆ.

ಆರೋಗ್ಯವಂತರಲ್ಲಿ ಸಾಮಾನ್ಯವಾಗಿ 120 ದಿನಗಳ ಕಾಲ ಬದುಕುವ ಕೆಂಪು ರಕ್ತ ಕಣಗಳು ಈ ಕಾಯಿಲೆಪೀಡಿತರಲ್ಲಿ ಕೇವಲ 10ರಿಂದ 12 ದಿನಗಳಲ್ಲೇ ನಾಶವಾಗುತ್ತವೆ. ಆದ್ದರಿಂದ ಅವರಲ್ಲಿ ಅಧಿಕ ರಕ್ತಹೀನತೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದ ಅಂಗಾಂಗಗಳ ಸುಗಮ ಕಾರ್ಯಕ್ಕೆ ಬೇಕಾದಷ್ಟು ರಕ್ತ ಪೂರೈಕೆಯಾಗದೇ ಅವುಗಳ ಕಾರ್ಯಕ್ಷಮತೆ ಕ್ರಮೇಣವಾಗಿ ಕ್ಷೀಣಿಸಿ ಅಂಗಾಂಗ ವೈಫಲ್ಯ ಉಂಟಾಗಬಹುದು. ಅನೇಕ ಜನರಿಗೆ ಈ ಕಾಯಿಲೆ ಇದೆ ಎಂದು ಗೊತ್ತಾಗದೇ ಸಕಾಲಕ್ಕೆ ವೈದ್ಯಕೀಯ ನೆರವು ಸಾಯುತ್ತಿದ್ದಾರೆ.

ಪ್ರಾಜೆಕ್ಟ್ ಚಂದನ

ನಮ್ಮ ರಾಜ್ಯದ ಮೈಸೂರು, ಚಾಮರಾಜನಗರ ಮತ್ತು ಕೊಡಗಿನ ಬುಡಕಟ್ಟು ಜನರಲ್ಲಿ ಈ ಕಾಯಿಲೆ ಹೆಚ್ಚು ಕಂಡುಬಂದಿರುವುದರಿಂದ ಸರ್ಕಾರವು ಈ ಜಿಲ್ಲೆಗಳಲ್ಲಿ ‘ಪ್ರಾಜೆಕ್ಟ್ ಚಂದನ’ ಎಂಬ ಹೆಸರಿನ ಯೋಜನೆಯನ್ನು ಈ ರೋಗದ ಪತ್ತೆ, ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿ ಇತ್ತೀಚೆಗೆ ಜೂನ್ 19ರಂದು ಆರಂಭಿಸಿದೆ. ಆದಿವಾಸಿ ಸಮುದಾಯಗಳ ಜನರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆಯನ್ನು 2047ರೊಳಗೆ ನಿರ್ಮೂಲ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅದರಂತೆ ಹಲವಾರು ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಿಕಲ್ ಸೆಲ್ ಅನೀಮಿಯಾ ಲಕ್ಷಣಗಳು

ಕುಡಗೋಲು ಕಣ ರಕ್ತಹೀನತೆಯ ಪ್ರಮುಖ ಲಕ್ಷಣ ಅಸಹಜ ಹಿಮೋಗ್ಲೋಬಿನ್ ಉತ್ಪಾದನೆ. ಇದನ್ನು ಹಿಮೋಗ್ಲೋಬಿನ್ ಎಸ್ ಎಂದು ಕರೆಯಲಾಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳು ಕಠಿಣ, ಜಿಗುಟಾದ ಮತ್ತು ಕುಡಗೋಲು ಅಥವಾ ಅರ್ಧಚಂದ್ರಾಕೃತಿಯ ಆಕಾರವನ್ನು ಪಡೆಯುತ್ತವೆ. ಈ ಅನಿಯಮಿತ ಆಕಾರದ ಕೆಂಪು ರಕ್ತದ ಜೀವಕೋಶಗಳು ಸಣ್ಣ ರಕ್ತನಾಳಗಳಲ್ಲಿ ಸಿಲುಕಿಕೊಳ್ಳಬಹುದು, ದೇಹದ ಭಾಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕದ ಪೂರೈಕೆಯನ್ನು ನಿಧಾನಗೊಳಿಸಬಹುದು ಅಥವಾ ನಿರ್ಬಂಧಿಸಬಹುದು. ಹೀಗಾದಾಗ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಕುಡಗೋಲು ರಕ್ತ ಕಣಗಳು ಸುಲಭವಾಗಿ ಒಡೆಯುತ್ತವೆ ಮತ್ತು ಸಾಯುತ್ತವೆ, ಇದರಿಂದ ರಕ್ತದಲ್ಲಿ ಕೆಂಪು ರಕ್ತ ಕಣಗಳ ಕೊರತೆಗೆ ಉಂಟಾಗುತ್ತದೆ.

ಈ ಕಾಯಿಲೆಯ ಲಕ್ಷಣಗಳು ಹಲವಾರಿವೆ. ಕುಡಗೋಲು ರಕ್ತ ಕಣಗಳ ಕಾರಣದಿಂದ ದೇಹದ ರಕ್ತ ಪರಿಚಲನೆಯಲ್ಲಿ ಏರುಪೇರು ಉಂಟಾದಾಗ ಎದೆ, ಹೊಟ್ಟೆ, ಕೀಲುಗಳು ಮತ್ತು ಮೂಳೆಗಳಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತದೆ. ರಕ್ತ ಪೂರೈಕೆ ಸರಿಯಾಗಿ ಆಗದೇ ಇದ್ದಾಗ ಕೈ ಮತ್ತು ಕಾಲುಗಳು ಊದಿಕೊಳ್ಳುತ್ತವೆ. ಜ್ವರವೂ ಬರಬಹುದು. ಕುಡಗೋಲು ಕೋಶಗಳು ಗುಲ್ಮವನ್ನು ಹಾನಿಗೊಳಿಸಬಹುದು, ಗುಲ್ಮವು ಸೋಂಕಿನ ವಿರುದ್ಧ ಹೋರಾಡುವ ಅಂಗವಾಗಿದ್ದು ಇದಕ್ಕೆ ಹಾನಿಯುಂಟಾದರೆ ಸೋಂಕು ತಗುಲುವ ಅಪಾಯ ಹೆಚ್ಚಾಗುತ್ತದೆ. ಕೆಂಪು ರಕ್ತ ಕಣಗಳು ದೇಹಕ್ಕೆ ಆಮ್ಲಜನಕ ಮತ್ತು ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಶಿಶುಗಳಲ್ಲಿ ಈ ಕಾಯಿಲೆ ಕಂಡುಬAದರೆ ಅವುಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಹದಿಹರೆಯದವರಿಗೆ ಈ ರೋಗ ಬಂದರೆ ಅವರು ಪ್ರೌಢರಾಗಿ ಬೆಳೆಯುವುದಕ್ಕೆ ಅಡ್ಡಿಯುಂಟುಮಾಡುತ್ತದೆ. ಕಣ್ಣುಗಳಿಗೆ ರಕ್ತ ಪೂರೈಸುವ ಸಣ್ಣ ರಕ್ತನಾಳಗಳಲ್ಲಿ ಕುಡಗೋಲು ಕೋಶಗಳು ಸೇರಿಕೊಂಡು ರಕ್ತದ ಹರಿವಿಗೆ ಧಕ್ಕೆ ಉಂಟುಮಾಡಿದರೆ ದೃಷ್ಟಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಿಕಲ್ ಸೆಲ್ ಅನೀಮಿಯಾಗೆ ಚಿಕಿತ್ಸೆಗಳು

ಕುಡಗೋಲು ಕಣ ರಕ್ತಹೀನತೆಗೆ ಔಷಧಿಗಳು, ನೋವುನಿವಾರಕಗಳು, ಜೀವಿರೋಧಕಗಳು, ರಕ್ತ ವರ್ಗಾವಣೆ ಮತ್ತಿತರ ಚಿಕಿತ್ಸಾ ಆಯ್ಕೆಗಳಿವೆ. ಮೂಳೆಮಜ್ಜೆಯ ಕಸಿ ಈ ಕಾಯಿಲೆಗಿರುವ ಏಕೈಕ

ಸಂಭಾವ್ಯ ಚಿಕಿತ್ಸೆ. ಆದರೆ ಈ ಚಿಕಿತ್ಸೆಯ ಅಪಾಯ ಮತ್ತು ಸೂಕ್ತವಾದ ಮೂಳೆ ಮಜ್ಜೆದಾನಿಯನ್ನು ಹುಡುಕುವ ತೊಂದರೆಯಿಂದಾಗಿ ಕಷ್ಟಸಾಧ್ಯ ಎನಿಸಿದೆ.

ಸಿಕಲ್ ಸೆಲ್ ಅನೀಮಿಯಾ ತಡೆಯಲು ಸಾಧ್ಯವೇ?

ಕುಡಗೋಲು ಕಣ ರಕ್ತಹೀನತೆ ಅನುವಂಶಿಕವಾದುದರಿಂದ ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ, ಆದರೆ ಕೆಲವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ರೋಗಲಕ್ಷಣಗಳ ತೀವ್ರತೆ ಮತ್ತು ಪರಿಣಾಮವನ್ನು ಆದಷ್ಟೂ ಕಡಿಮೆ ಮಾಡಬಹುದು. ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಆರೈಕೆಯು ರೋಗಲಕ್ಷಣಗಳು ಮತ್ತು ತೊಡಕುಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಸೋಂಕು ನಿವಾರಕ ಲಸಿಕೆಗಳನ್ನು ತಪ್ಪದೇ ತೆಗೆದುಕೊಳ್ಳುವುದರಿಂದ ಸಂಭಾವ್ಯ ರೋಗಗಳನ್ನು ತಡೆಗಟ್ಟಬಹುದು.

ತಾಜಾ ಹಣ್ನು, ತರಕಾರಿ, ಹಸಿರು ಸೊಪ್ಪು ಮತ್ತು ಬೇಳೆಕಾಳಿರುವ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಧೂಮಪಾನವನ್ನು ತಪ್ಪಿಸುವುದರೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಇದರ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ಕುಡಗೋಲು ಕಣಗಳ ತೊಂದರೆಯನ್ನು ತಡೆಯಲು ಸಹಾಯ ಮಾಡುತ್ತದೆ. ತೀವ್ರತರವಾದ ಶೀತ ಅಥವಾ ಶಾಖಕ್ಕೆ ಒಡ್ಡಿಕೊಳ್ಳುವುದು ಈ ಕಾಯಿಲೆಯನ್ನು ಪ್ರಚೋದಿಸಬಹುದು. ಆದ್ದರಿಂದ ಇಂತಹ ಪರಿಸ್ಥಿತಿಗಳಲ್ಲಿ ಹುಷಾರಾಗಿರಬೇಕು. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದಿನಚರಿಯ ಭಾಗವಾಗಿ ದೈಹಿಕ ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು. ಒಟ್ಟಾರೆಯಾಗಿ ಹೇಳುವುದಾದರೆ ಕುಡಗೋಲು ಕಣ ರಕ್ತಹೀನತೆಯೊಂದಿಗೆ ಜೀವಿಸುವುದು ರೋಗಲಕ್ಷಣಗಳನ್ನು ನಿರ್ವಹಿಸುವುದು, ತೊಡಕುಗಳನ್ನು ತಡೆಗಟ್ಟುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವುದು ಎಂದು ಅರ್ಥ ಮಾಡಿಕೊಳ್ಳುವುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com