ದೇಶಕ್ಕೆ ಅಂಬಾನಿ ಮನೆಯವರ ಕೊಡುಗೆಯೇನು? ಎನ್ನುವ ಮುನ್ನ.... (ಹಣಕ್ಲಾಸು)

ಇವರು ದೇಶಕ್ಕೆ ನೀಡುತ್ತಿರುವ ತೆರಿಗೆ, ಅವು ಮಾಡುತ್ತಿರುವ ಸಮಾಜಮುಖಿ ಕೆಲಸದ ಬಾಬತ್ತು ಬೇರೆಯದು. ಜಾಗತಿಕವಾಗಿ ಸೆಣೆಸಾಡಲು ನಮಗೆ ಇಂತಹ ದೊಡ್ಡ ಸಂಸ್ಥೆಗಳು ಬೇಕು. ಇದೆ ಕೆಲಸವನ್ನು ಬೇರೊಂದು ವಿದೇಶಿ ಸಂಸ್ಥೆ ಮಾಡಿ ಲಾಭಗಳಿಸಿ ಅವರ ದೇಶದಲ್ಲಿ ಅವರು ಇದೆ ರೀತಿ ಖರ್ಚು ಮಾಡಿದ್ದರೆ ಅದನ್ನು ಯಾರೂ ಪ್ರಶ್ನಿಸಲಾಗುತ್ತಿರಲಿಲ್ಲ. (ಹಣಕ್ಲಾಸು-419)
Anant Ambani wedding (file pic)
ಅನಂತ್ ಅಂಬಾನಿ ವಿವಾಹ (ಸಂಗ್ರಹ ಚಿತ್ರ)online desk
Updated on

ಅಂಬಾನಿ ಮನೆಯ ಮದುವೆ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅವರ ಮನೆಯ ಸಂಸ್ಕಾರ, ಹಿಂದುತ್ವವನ್ನು ಹಾಡಿ ಹೊಗಳುತ್ತಿದ್ದಾರೆ. ಅನಂತ್ ಅಂಬಾನಿ ಗುರು ಹಿರಿಯರ ಕಾಲಿಗೆ ಬಿದ್ದದ್ದೂ ಸುದ್ದಿ!

ಇನ್ನು ಕೆಲವರು ಕೆಟ್ಟದಾಗಿ ದುಡಿದ ಹಣದ ಮದ, ತಮ್ಮ ಹಣಬಲವನ್ನು ಪ್ರದರ್ಶಿಸುತ್ತಿದ್ದಾರೆ, ಭಾರತಕ್ಕೆ ಇವರ ಕೊಡುಗೆಯೇನು? ಜಿಯೋ ಮೊದಲಿಗೆ ಫ್ರೀ ಕೊಟ್ಟಿದ್ದರು. ಈಗ ಅಚಾನಕ್ಕಾಗಿ ಬೆಲೆ ಹೆಚ್ಚಿಸಿದ್ದಾರೆ ಎನ್ನುವ ಪ್ರಲಾಪದ ಜೊತೆಗೆ ಇನ್ನೂ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಂಬಾನಿ ಮಗನ ಮದುವೆಗೆ ನನ್ನ 150 ರೂಪಾಯಿ ದೇಣಿಗೆ ಇದೆ, ಇತ್ಯಾದಿ ಬರೆದು ಪೋಸ್ಟ್ ಮಾಡುತ್ತಿದ್ದಾರೆ.

ಎಲ್ಲರಿಗೂ ಅವರದೇ ಆದ ಅಭಿಪ್ರಾಯವಿದೆ. ಅದನ್ನು ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಈ ಜಗತ್ತಿನಲ್ಲಿ ಸ್ಥೂಲವಾಗಿ ಜನರನ್ನು ನಾಲ್ಕು ವರ್ಗಗಳಲ್ಲಿ ವಿಭಾಗಿಸಬಹುದು. ಇಲ್ಲಿ ಲಿಂಗ ಬೇಧವಿಲ್ಲ.

  • ಕೆಲಸಗಾರ, ಅಥವಾ ಬೇರೊಬ್ಬರ ಬಳಿ ದುಡಿಯುವ ಜನ: ಇವರನ್ನು ನಾವು ವರ್ಕಿಂಗ್ ಕ್ಲಾಸ್, ಎಂಫ್ಲೋಯೆಡ್ ಕ್ಲಾಸ್ ಎಂದು ಕರೆಯಬಹುದು. ಇದೊಂದು ಮನಸ್ಥಿತಿ. ಈ ವರ್ಗದ ಜನರಿಗೆ ಹೆಚ್ಚಿನ ಅಪಾಯವನ್ನು ಎದುರಿಸುವ ಕ್ಷಮತೆ ಇರುವುದಿಲ್ಲ. ಅಚಾನಕ್ಕಾಗಿ ಎದುರಾಗುವ ಹೊಸ ಸವಾಲು, ಅನಿಶ್ಚಿತತೆ ಇವುಗಳನ್ನು ನಿಭಾಯಿಸುವ ಮನೋಭಾವ ಕೂಡ ಇರುವುದಿಲ್ಲ. ಹೀಗಾಗಿ ತನಗೆ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ತಿಂಗಳ ಕೊನೆಗೆ ಸಿಗುವ ವೇತನಕ್ಕೆ ಕಾಯುವ ಮನೋಭಾವ ಇವರದ್ದಾಗಿರುತ್ತದೆ. ಇದ್ದುದರಲ್ಲೆ ಬದುಕುವ , ದೊಡ್ಡ ಕನಸುಗಳು ಮನಸ್ಸಿನಲ್ಲಿ ಹುಟ್ಟಿದರೂ ಅದರ ಹಿಂದೆ ಹೋದರೆ ಎದುರಾಗುವ ಸವಾಲುಗಳನ್ನು ಅಪಾಯವನ್ನು ನೆನೆದು, ಆ ಕನಸ್ಸುಗಳನ್ನು ಬೆಚ್ಚಗೆ ಹೊದ್ದಿಸಿ ಮನಸ್ಸಿನಲ್ಲೇ ಮಲಗಿಸಿ ಬಿಡುತ್ತಾರೆ. ಮಾಸಿಕ ವೇತನ ಎನ್ನುವುದು ಕೂಡ ಅಡ್ಡಿಕ್ಷನ್. ಜೊತೆಗೆ ಬದುಕಿನ ಅತಿ ದೊಡ್ಡ ಖೆಡ್ದಾ. ಇದೊಂದು ಕಂಫರ್ಟ್ ಜೋನ್ ಸೃಷ್ಟಿಸಿ ಬಿಡುತ್ತದೆ. ಹೀಗಾಗಿ ಇದೊಂದು ಹ್ಯಾಬಿಟ್ ಆಗಿ ಬದಲಾಗುತ್ತದೆ. ಹೊಸತಿಗೆ, ಬದಾಲಾವಣೆಗೆ ಈ ವರ್ಗದ ಜನ ಬಹಳ ಹೆದರುತ್ತಾರೆ. ಹೇಗೋ ಬದುಕು ಸಾಗುತ್ತಿದೆ ಇದನ್ನು ಅಲ್ಲಾಡಿಸುವುದು, ಬದಲಿಸುವುದು ಬೇಡ. ಹೀಗೆ ನಡೆದರೆ ಸಾಕು ಎನ್ನುವ ಮನಸ್ಥಿತಿಯ ಒಡೆಯರಿವರು. ಈ ವರ್ಗವನ್ನು ನಾವು ಕೀಳು ಎನ್ನುವಂತಿಲ್ಲ. ಏಕೆಂದರೆ ಜಗತ್ತಿನ ಬಹುತೇಕ ಜನರ ಮನಸ್ಥಿತಿ ಇದೆ ಆಗಿದೆ. ಸಮಾಜ ನಡೆಯಲು ಎಲ್ಲಾ ವರ್ಗದ ಜನರೂ ಬೇಕು.

  • ಸ್ವಯಂ ಉದ್ಯೋಗಸ್ಥರು, ಉದ್ಯೋಗ ಸೃಷ್ಟಿ ಕರ್ತರು, ವ್ಯಾಪಾರಸ್ಥರು: ಈ ವರ್ಗದಲ್ಲಿನ ಜನ ಬದುಕಿನ ಒಂದು ಹಂತದಲ್ಲಿ ವರ್ಕಿಂಗ್ ಕ್ಲಾಸ್ ನಲ್ಲಿದ್ದವರು ಆಗಿರುತ್ತಾರೆ. ಇನ್ನಷ್ಟು ಜನ ಹುಟ್ಟಿನಿಂದ ವ್ಯಾಪಾರಸ್ಥರು! ಇದು ಕೂಡ ಒಂದು ಮನಸ್ಥಿತಿ. ಮಾಸಿಕ ವೇತನ ಎನ್ನುವುದು ಸಣ್ಣ ಅಕ್ವೇರಿಯಂ ಇದ್ದ ಹಾಗೆ, ಈ ವರ್ಗದ ಜನರಿಗೆ ಅಲ್ಲಿ ಈಜಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಮಾಸಿಕ ನಿಗದಿತ ವೇತನವಿರುವುದಿಲ್ಲ. ಈ ತಿಂಗಳು ಗಳಿಸಿದ ಆದಾಯ ಮುಂದಿನ ತಿಂಗಳು ಕೂಡ ಸಿಗುತ್ತದೆ ಎನ್ನುವುದರ ಗ್ಯಾರಂಟಿ ಇರುವುದಿಲ್ಲ. ಇಲ್ಲಿನ ಸಮಸ್ಯೆ, ಸವಾಲುಗಳನ್ನು ಎದುರಿಸುವ ಮಾನಸಿಕತೆಯನ್ನು ಇವರು ಬೆಳಸಿಕೊಂಡಿರುತ್ತಾರೆ. ಈ ವರ್ಗದಲ್ಲಿ ಕೆಲವರು ತಮಗೆ ಕೆಲಸವನ್ನು ಸೃಷ್ಟಿಸಿಕೊಂಡರೆ, ಇನ್ನಷ್ಟು ಜನ ತಮ್ಮ ಜೊತೆಗೆ ಹತ್ತಾರು ಜನರಿಗೆ ಕೆಲಸವನ್ನು ಸೃಷ್ಟಿಸುತ್ತಾರೆ. ಕೆಲವರು ಲಕ್ಷಾಂತರ ಕೆಲಸವನ್ನು, ಅವಕಾಶವನ್ನು ಸೃಷ್ಟಿಸುತ್ತಾರೆ. ಅನಿಶ್ಚಿತತೆ ಎನ್ನುವುದು ಸದಾ ನೆರಳಿನಂತೆ ಇಲ್ಲಿ ಹಿಂಬಾಲಿಸುತ್ತದೆ. ಹೀಗಾಗಿ ಇಲ್ಲಿ ಯಾವುದಕ್ಕೂ ಫಾರ್ಮ್ಯಾಟ್ ಇಲ್ಲ, ಸೆಟ್ ಫಾರ್ಮುಲಾಗಳು ಇಲ್ಲ. ವೇತನಕ್ಕೆ ದುಡಿಯುವ ಜನರ ಬದುಕು ಸರಳ ರೇಖೆಯಲ್ಲಿ ಸಾಗುತ್ತದೆ. ಇಲ್ಲಿನ ಬದುಕು ರೋಲರ್ ಕೋಸ್ಟರ್!

  • ಅರೆಕಾಲಿಕ ಕೆಲಸಗಾರ, ಉದ್ಯೋಗಸ್ಥ ಅಥವಾ ವ್ಯಾಪಾರಸ್ಥ: ಈ ವರ್ಗದ ಜನರಲ್ಲಿ ಕಾಣ ಸಿಗುವ ಒಂದು ಸಾಮಾನ್ಯ ಅಂಶವೇನೆಂದರೆ, ಇವರು ಯಾವುದನ್ನೂ ದೀರ್ಘಾವಧಿಗೆ ಮಾಡುವುದಿಲ್ಲ. ಎಲ್ಲವೂ ಟೆಂಪರರಿ. ಕೆಲಸಗಾರರಾಗಿದ್ದರೆ ತಮಗೆ ಬೇಕಾದ ಸಮಯದಲ್ಲಿ ಒಂದಷ್ಟು ತಿಂಗಳು ಮಾಡುವುದು ನಂತರ ಒಂದಷ್ಟು ಸಮಯವನ್ನು ವೃಥಾ ಹರಣ ಮಾಡುವುದು ಮಾಡುತ್ತಾರೆ. ವ್ಯಾಪಾರವಾದರೂ ಅಷ್ಟೇ, ಮನಸಿದ್ದಾಗ ಒಂದಷ್ಟು ದಿನ, ಆಯಾ ಸಮಯಕ್ಕೆ ತಕ್ಕಹಾಗೆ ಮಾಡುವುದು ನಂತರದ ಸಮಯವನ್ನು ಸುಮ್ಮನೆ ಕಳೆಯುವುದು. ಇವರಿಗೆ ಕೆಲಸದ ಅಥವಾ ವ್ಯಾಪಾರದ ಕೊರತೆ ಇರುತ್ತದೆ ಅದಕ್ಕೆ ಹೀಗೆ ಮಾಡುತ್ತಾರೆ ಎನ್ನುವಂತಿಲ್ಲ. ಇದು ಕೂಡ ಮನಸ್ಥಿತಿ. ಈ ವರ್ಗದ ಜನರಿಗೆ ದೀರ್ಘಕಾಲ ಯಾವುದನ್ನೂ ಮಾಡುವ ಮನಸ್ಸಿರುವುದಿಲ್ಲ. ಮನಸ್ಥಿತಿ ಬದಲಾಯಿಸಿ ಕೊಂಡರೆ ಎಲ್ಲವೂ ಸಾಧ್ಯವಿದೆ.

  • ಆಸೆ ಬೆಟ್ಟದಷ್ಟು ಆದರೂ ಏನೂ ಮಾಡದೆ ಓಡಾಡಿಕೊಂಡಿರುವ ವರ್ಗ: ಈ ವರ್ಗದ ಜನ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಸದಾ ಅವರಿವರ ಬಗ್ಗೆ ಮಾತನಾಡುತ್ತ, ತಮ್ಮ ಹಣೆಬರಹವನ್ನು ಹಳಿಯುತ್ತಾ, ಸಾಹುಕಾರರ ಮನೆಯಲ್ಲಿ ಹುಟ್ಟಿದ್ದರೆ, ಹಣವಿದ್ದಿದರೆ ಅದೇನೋ ಸಾಧಿಸಿ ಬಿಡುತ್ತಿದ್ದೆ ಎಂದು ಹೇಳಿಕೊಂಡು ತಿರುಗುತ್ತಾರೆ. ನಿತ್ಯ ಬದುಕಿಗೆ ಬೇಕಾಗುವ ಎಫರ್ಟ್ ಕೂಡ ಇವರು ಹಾಕುವುದಿಲ್ಲ. ಕಷ್ಟ ಪಡದೆ ಎಲ್ಲವೂ ಅವರಿಗೆ ದಕ್ಕಬೇಕು ಎನ್ನುವ ಮನಸ್ಥಿತಿ ಇವರದು. ಯಾರಾದರೂ ಬುದ್ದಿ ಹೇಳಿ ಕೆಲಸಕ್ಕೆ ಹಚ್ಚಿದರೂ ವಾರದಲ್ಲಿ ಮತ್ತೆ ತಮ್ಮ ಅಡ್ಡದಲ್ಲಿ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ. ಈ ವರ್ಗದ ಜನರನ್ನು ಬದಲಿಸುವುದು ಬಹಳ ಕಷ್ಟ. ಆದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಸಣ್ಣ ಪುಟ್ಟ ಜಯಗಳು ಬದುಕನ್ನು ಬದಲಿಸಬಲ್ಲವು. ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಅಷ್ಟೇ

ಎರಡನೇ ವರ್ಗದ ಜನರಿಗೆ ನಮ್ಮ ಸಮಾಜದಲ್ಲಿ ಸಿಗಬೇಕಾದ ಮರ್ಯಾದೆ ಮತ್ತು ಮನ್ನಣೆ ಸಿಗುತ್ತಿಲ್ಲ. ಗಮನಿಸಿ ನೋಡಿ ಅವರು ಹೆಚ್ಚು ಅಪಾಯವನ್ನು ತೆಗೆದುಕೊಂಡು ಉದ್ಯಮವನ್ನು ಶುರು ಮಾಡುತ್ತಾರೆ. ಅದರಲ್ಲಿ ಅವರು ಸೋತರೆ ಸಮಾಜ ಅವರನ್ನು ನೋಡುವ ದೃಷ್ಟಿ ಹೇಗಿರುತ್ತದೆ ಎನ್ನುವುದನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಅವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ ಬಿಡುತ್ತದೆ.

ಅವರು ತಮ್ಮ ವೆಂಚರ್ನಲ್ಲಿ ಗೆದ್ದು ಹಣವಂತರಾದರೆ ಅವರನ್ನು ಕಳ್ಳ, ಸುಳ್ಳ, ವಂಚಕ ಎನ್ನುವಂತೆ ನೋಡುತ್ತದೆ. ಅತಿ ದೊಡ್ಡ ಉದ್ಯಮಿ, ಶ್ರೀಮಂತರಾದರೆ ಅದರಲ್ಲೂ ಅಂಬಾನಿ, ಅದಾನಿಯಂತಹ ಮಟ್ಟಕ್ಕೆ ಏರಿದರೆ ಅಲ್ಲಿಗೆ ಕಥೆ ಮುಗಿಯಿತು. ಅವರನ್ನು ಹಂಗಿಸುವುದು, ಟೀಕಿಸುವುದು ಸಮಾಜ ತಮ್ಮ ಜನ್ಮ ಸಿದ್ದ ಹಕ್ಕು ಎಂದು ಭಾವಿಸಿಬಿಡುತ್ತದೆ. ಅವರು ಮಾಡಿದ ತಪ್ಪೇನು? ರಿಲಯನ್ಸ್ ಗ್ರೋಪ್ ನೇರವಾಗಿ ಭಾರತದಾದ್ಯಂತ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿದೆ.

Anant Ambani wedding (file pic)
ಬದುಕಿನ ಪಥ ಬದಲಾಯಿಸುವ ಹಣಕಾಸು ನಿರ್ಧಾರಗಳಿಗೆ ಸರಳ ಸೂತ್ರಗಳು... (ಹಣಕ್ಲಾಸು)

ಪರೋಕ್ಷವಾಗಿ ಸೃಷ್ಟಿಯಾಗಿರುವ ಉದ್ಯೋಗವನ್ನು ಇನ್ನೊಂದು ನಾಲ್ಕು ಲಕ್ಷ ಎಂದು ಸರಾಗವಾಗಿ ಹೇಳಬಹುದು. ಇನ್ನು ಇವರು ದೇಶಕ್ಕೆ ನೀಡುತ್ತಿರುವ ತೆರಿಗೆ, ಅವು ಮಾಡುತ್ತಿರುವ ಸಮಾಜಮುಖಿ ಕೆಲಸದ ಬಾಬತ್ತು ಬೇರೆಯದು. ಜಾಗತಿಕವಾಗಿ ಸೆಣೆಸಾಡಲು ನಮಗೆ ಇಂತಹ ದೊಡ್ಡ ಸಂಸ್ಥೆಗಳು ಬೇಕು. ಇದೆ ಕೆಲಸವನ್ನು ಬೇರೊಂದು ವಿದೇಶಿ ಸಂಸ್ಥೆ ಮಾಡಿ ಲಾಭಗಳಿಸಿ ಅವರ ದೇಶದಲ್ಲಿ ಅವರು ಇದೆ ರೀತಿ ಖರ್ಚು ಮಾಡಿದ್ದರೆ ಅದನ್ನು ಯಾರೂ ಪ್ರಶ್ನಿಸಲಾಗುತ್ತಿರಲಿಲ್ಲ.

ಅವರ ಖರ್ಚು 4 ಸಾವಿರದಿಂದ 5 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿದೆ. ಅದರಲ್ಲಿ ಕನಿಷ್ಠ ಪಕ್ಷ 2 ಸಾವಿರ ಕೋಟಿ ರೂಪಾಯಿ ಇಲ್ಲಿನ ವ್ಯಾಪಾರಸ್ಥರಿಗೆ ಹೋಗುತ್ತದೆ. ಹೂವು, ಡೆಕೋರೇಷನ್, ಊಟ ತಿಂಡಿ, ಓಡಾಟ ಹೀಗೆ ಹಣ ಇಲ್ಲೇ ಖರ್ಚಾಗುತ್ತದೆ. ಇಷ್ಟೆಲ್ಲಾ ವಹಿಸಿಟ್ಟುಕೊಳ್ಳುವ ಸಂದರ್ಭ ಬರಬಾರದು. ಏಕೆಂದರೆ ಸಿನಿಮಾ ನಟರು ಉದಾಹರಣೆಗೆ ದೀಪಿಕಾ ಮತ್ತು ರಣವೀರ್ ಬೇರೊಂದು ದೇಶದಲ್ಲಿ ಹೋಗಿ ಮದುವೆ ಮಾಡಿಕೊಂಡರು. ಆಗ ಯಾರೂ ಪ್ರಶ್ನಿಸಲಿಲ್ಲ. ಒಬ್ಬ ಬಿಸಿನೆಸ್ ಮ್ಯಾನ್ ತನ್ನದೇ ದೇಶದಲ್ಲಿ ಹಣ ಖರ್ಚು ಮಾಡಿದರೂ ಪ್ರಶ್ನೆಗಳು ಏಳುತ್ತವೆ. ಇದು ನಮ್ಮಲ್ಲಿ ಆಳವಾಗಿ ಬೇರೂರಿವೆ 'ವ್ಯಾಪಾರಂ ದ್ರೋಹ ಚಿಂತನಂ' ಎನ್ನುವ ನಂಬಿಕೆ ಕಾರಣ. ವಾಪಾರಿ ಎಂದ ತಕ್ಷಣ ಅವನ ಸಂಪತ್ತು ಜನರಿಂದ ಲೂಟಿ ಮಾಡಿದ್ದು ಎನ್ನುವ ನಿರ್ಧಾರಕ್ಕೆ ಬರುವ ಮುನ್ನ ಬದಲಾದ ಸನ್ನಿವೇಶವನ್ನು ಗಮನದಲ್ಲಿಟ್ಟು ಕೊಳ್ಳುವುದು ಒಳ್ಳೆಯದು.

Anant Ambani wedding (file pic)
ನಾವು ಹೂಡಿಕೆ ಮಾಡಿರುವ stockbroker ಸಂಸ್ಥೆ ಮುಚ್ಚಿ ಹೋದರೆ ಮುಂದೇನು? (ಹಣಕ್ಲಾಸು)
Summary

ಕೊನೆಮಾತು: ರೈತ, ಸೈನಿಕರಿಗೆ ಸಿಕ್ಕ ಮರ್ಯಾದೆ ಕೂಡ ಎಲ್ಲಾ ವ್ಯಾಪಾರಸ್ಥರಿಗೂ ಸಿಗಬೇಕು.ರೈತ ಅನ್ನವನ್ನು ಬೆಳೆದು ಕೊಡುತ್ತಾನೆ. ಸೈನಿಕ ನಮ್ಮ ರಕ್ಷಣೆಯನ್ನು ಮಾಡುತ್ತಾನೆ. ವ್ಯಾಪಾರಸ್ಥ ಕೆಲಸವನ್ನು ಸೃಷಿ ಮಾಡುತ್ತಾನೆ. ಸಮಾಜದ ಬಹುತೇಕರಿಗೆ ಖರೀದಿಸುವ ಶಕ್ತಿ ನೀಡುತ್ತಾನೆ. ತೆರಿಗೆ ಕಟ್ಟುವ ಮೂಲಕ ದೇಶವನ್ನು ಕೂಡ ಕಟ್ಟುತ್ತಿದ್ದಾನೆ. ನಿಜ ಹೇಳಬೇಕಂದರೆ ಬದಲಾದ ಸನ್ನಿವೇಶದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ದೇಶದ ಬೆನ್ನೆಲುಬು, ದೊಡ್ಡ ವ್ಯಾಪಾರಸ್ಥರು ದೇಹಕ್ಕೆ ಕಾಲುಗಳಿಂದಂತೆ, ದೇಹದಂತೆ ದೇಶ ಸುಸ್ಥಿರವಾಗಿ ನಡೆಯಲು ವ್ಯಾಪಾರಸ್ಥರು ಬೇಕು. ನಮ್ಮ ಸಮಾಜ ಅವರಿಗೆ ನೀಡಬೇಕಾದ ಗೌರವವನ್ನು ಮನ್ನಣೆಯನ್ನು ಇನ್ನು ಮುಂದಾದರೂ ನೀಡುವಂತಾಗಲಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com