image for representation purpose only
ಸಾಂಕೇತಿಕ ಚಿತ್ರonline desk

ಬದುಕಿನ ಪಥ ಬದಲಾಯಿಸುವ ಹಣಕಾಸು ನಿರ್ಧಾರಗಳಿಗೆ ಸರಳ ಸೂತ್ರಗಳು... (ಹಣಕ್ಲಾಸು)

ಸಾಮಾಜದ ಅಂಜಿಕೆಗೆ, ಮನೆಯ ಹಲವು ಸದಸ್ಯರ ಒತ್ತಾಯಕ್ಕೆ ಕಟ್ಟು ಬಿದ್ದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅವುಗಳು ದೀರ್ಘಕಾಲದಲ್ಲಿ ಯಾವ ಪರಿಣಾಮ ಬೀರುತ್ತದೆ ಎನ್ನುವುದರ ಅರಿವು ನಮಗೆ ನಿರ್ಧಾರ ತೆಗೆದುಕೊಳ್ಳುವಾಗ ಇರುವುದಿಲ್ಲ. (ಹಣಕ್ಲಾಸು-418)

ನಿರ್ಧಾರಗಳು ಸಂಸ್ಥೆಯ ಮತ್ತು ವ್ಯಕ್ತಿಯ ಪಥವನ್ನು ನಿರ್ಧರಿಸುತ್ತವೆ. ಬದಲಿಸುತ್ತವೆ. ಉನ್ನತಿಯೊ , ಅವನತಿಯೋ ಎನ್ನುವುದನ್ನು ಅವು ನಿರ್ಧರಿಸುತ್ತವೆ. ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳು ಎಂದ ತಕ್ಷಣ ನಮಗೆ ಸಂಸ್ಥೆಗಳಲ್ಲಿ ಇರುವ ಸಿಎಫ್ಓ, ಫೈನಾನ್ಸಿಯಲ್ ಮ್ಯಾನೇಜರ್ ಅಥವಾ ಅಕೌಂಟ್ಸ್ ಮ್ಯಾನೇಜರ್ , ಇನ್ವೆಸ್ಟ್ಮೆಂಟ್ ಮ್ಯಾನೇಜರ್ ನೆನಪಿಗೆ ಬರುತ್ತಾರೆ. ಒಂದು ಸಂಸ್ಥೆಯ ಹಣಕಾಸು ನಿರ್ಧಾರಗಳನ್ನು ಇವರು ತೆಗೆದುಕೊಳ್ಳುತ್ತಾರೆ.

ಸಂಸ್ಥೆಯ ಅಳಿವು, ಉಳಿವು, ಅಭಿವೃದ್ಧಿ ಎಲ್ಲವೂ ಹಣಕಾಸು ನಿರ್ಧಾರಗಳ ಮೇಲೆ ನಿಂತಿರುತ್ತದೆ. ಒಂದು ತಪ್ಪು ನಿರ್ಧಾರ ತೇಲುತ್ತಿರುವ ಹಡಗನ್ನು ಮುಳುಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಾವು ಎಲ್ಲವನ್ನೂ ಸ್ಥೂಲವಾಗಿ ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳು ಎಂದು ಹೇಳಿ ಬಿಡುತ್ತೇವೆ. ಆದರೆ ಅವುಗಳಲ್ಲೂ ಹಲವು ವಿಧವಿದೆ. ಎಲ್ಲಕ್ಕೂ ಮೊದಲಿಗೆ ಫೈನಾನ್ಸಿಯಲ್ ನಿರ್ಧಾರಗಳು, ಎರಡನೆಯದು ಇನ್ವೆಸ್ಟ್ಮೆಂಟ್ ನಿರ್ಧಾರಗಳು ಮತ್ತು ಗಳಿಕೆಯ ನಿರ್ಧಾರಗಳು. ಇವುಗಳ ಒಳಹೊಕ್ಕಾಗ ಇನ್ನೊಂದು ಪ್ರಪಂಚ ತೆಗೆದುಕೊಳ್ಳುತ್ತಾ ಹೋಗುತ್ತದೆ. ಖರೀದಿ ಮಾಡುವ ನಿರ್ಧಾರ, ಮಾರುವ ನಿರ್ಧಾರ, ಡಿಸ್ಕೌಂಟ್ ಕೊಡುವ ನಿರ್ಧಾರ ಅಥವಾ ಕೊಡದಿರುವ ನಿರ್ಧಾರ, ಸಪ್ಪ್ಲೈರ್ ಬದಲಿಸುವ ನಿರ್ಧಾರ, ಬೆಲೆ ಹೆಚ್ಚಿಸುವ ಅಥವಾ ಇಳಿಸುವ ನಿರ್ಧಾರ, ಹೊಸ ಪದಾರ್ಥ ಮಾರುಕಟ್ಟೆಗೆ ತರುವ ನಿರ್ಧಾರ, ಮಾರುಕಟ್ಟೆಯಿಂದ ಪದಾರ್ಥವನ್ನು ಹಿಂತೆಗೆದು ಕೊಳ್ಳುವ ನಿರ್ಧಾರ. ಪ್ರತಿಸ್ಪರ್ಧಿ ಸಂಸ್ಥೆಯೊಂದಿಗೆ ಸೆಣಸುವ ಅಥವಾ ಹೊಂದಾವಣಿಕೆ ಮಾಡಿಕೊಳ್ಳುವ ನಿರ್ಧಾರ. ಜಾಹಿರಾತು ನೀಡುವ ನಿರ್ಧಾರ. ಹೀಗೆ ಒಂದಲ್ಲ ನೂರಾರು ನಿರ್ಧಾರಗಳು ಪ್ರತಿ ನಿತ್ಯ ಒಂದು ಸಂಸ್ಥೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಈ ನೂರಾರು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಪೂರಕವಾಗುವಂತೆ ಮತ್ತೂ ನೂರಾರು ನಿರ್ಧಾರಗಳನ್ನು ತೆಗೆದುಕೊಂಡಿರಬೇಕಾಗುತ್ತದೆ.

ಕೆಲವು ನಿರ್ಧಾರಗಳನ್ನು ಪ್ರಜ್ಞಾಪೂರ್ವಕ ನಿರ್ಧಾರಗಳು ಎನ್ನುತ್ತೇವೆ. ಇನ್ನು ಕೆಲವು ಅಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡು ಬಿಡುತ್ತೇವೆ. ಮೊದಲನೆಯ ವಿಧದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರವನ್ನು ಅಳೆದು ತೂಗಿ, ಅದರಿಂದ ಆಗಬಹುದಾದ ಪರಿಣಾಮಗಳನ್ನು ಯೋಚಿಸಿ ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ ಸಂಸ್ಥೆಗೆ ಬೇಕಾದ ಪದಾರ್ಥವನ್ನು ತಯಾರಿಸದೆ ಅದನ್ನು ಹೊರಗಿನಿಂದ ಕೊಳ್ಳುವ ನಿರ್ಧಾರ. ಟೀಮ್ ಮೀಟಿಂಗ್ನಲ್ಲಿ ಎಲ್ಲರಿಗೂ ತಿಂಡಿ, ಕಾಫಿ ಸಿದ್ದಪಡಿಸಿ ಸಿಗುವಂತೆ ಮಾಡುವುದು ಅಪ್ರಜ್ಞಾಪೂರ್ವಕ ಎನ್ನಿಸಿಕೊಳ್ಳುತ್ತದೆ. ಪ್ರಜ್ಞಾ ಪೂರ್ವಕ ನಿರ್ಧಾರದಲ್ಲಿ ತಪ್ಪಾದರೆ ಅದರಲ್ಲಿನ ಫಲಿತಾಂಶಗಳು ಸಂಸ್ಥೆಯ ಅಂಕಿಅಂಶದ ಮೇಲೆ ಪರಿಣಾಮ ಬೀರುತ್ತದೆ. ಅಪ್ರಜ್ಞಾಪೂರ್ವಕ ನಿರ್ಧಾರಗಳು ಅಂತಹ ದೊಡ್ಡ ಮಟ್ಟದ ಪರಿಣಾಮವನ್ನು ಬೀರುವುದಿಲ್ಲ.

ಈಗ ನೀವೇ ಗಮನಿಸಿ ನೋಡಿ, ನಿರ್ಧಾರ ದೊಡ್ಡದು ಅಥವಾ ಚಿಕ್ಕದು. ಮುಖ್ಯವೋ, ಅಮುಖ್ಯವೋ ಒಟ್ಟಿನಲ್ಲಿ ಎಲ್ಲಾ ನಿರ್ಧಾರಗಳೂ ಕೊನೆಗೆ ಹಣದ ಬುಡಕ್ಕೆ ಬಂದು ಕೂರುತ್ತವೆ. ಪ್ರತಿ ನಿತ್ಯದ ಕಾಫಿ, ತಿಂಡಿ ಖರ್ಚಿನ ಕಡೆಗೆ ಗಮನ ಕೊಡದಿದ್ದರೆ ವರ್ಷದಲ್ಲಿ ಗೊತ್ತಿಲ್ಲದೇ ಲಕ್ಷಾಂತರ ರೂಪಾಯಿ ಪೋಲಾಗುವ ಸಾಧ್ಯತೆಯಿದೆ. ದೊಡ್ಡ ಸಂಸ್ಥೆಯಲ್ಲಿ ಸ್ಟೇಷನರಿ ಮ್ಯಾನೇಜ್ಮೆಂಟ್ ಸರಿಯಾಗಿ ಆಗದಿದ್ದರೆ ಅಲ್ಲೂ ಲಕ್ಷಗಳು ಮಾಯವಾಗಿ ಬಿಡುತ್ತದೆ. ಹೀಗೆ ನೇರವಾಗಿ ಹಣಕಾಸಿಗೆ ಸಂಬಂಧಪಡೆದೆ ಇದ್ದರೂ ಒಟ್ಟಾರೆ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಸಣ್ಣ ಸಣ್ಣ ನಿರ್ಧಾರಗಳು ದೊಡ್ಡ ಮಟ್ಟದ ಬದಲಾವಣೆಯನ್ನು ಖಂಡಿತ ತರಬಲ್ಲವು.

image for representation purpose only
ಹೂಡಿಕೆಯಲ್ಲಿ ಅಪಾಯ ಗ್ರಹಿಸುವುದು ಹೇಗೆ? (ಹಣಕ್ಲಾಸು)

ಈಗ ನಮ್ಮ focus ಸಂಸ್ಥೆಯಿಂದ ಕುಟುಂಬದ ಕಡೆಗೆ, ವೈಯಕ್ತಿಕ ಹಣಕಾಸಿನ ಕಡೆಗೆ ಒಂದಷ್ಟು ಹರಿಸೋಣ. ನಿಮಗೆಲ್ಲಾ ಆಶ್ಚರ್ಯ ಎನ್ನಿಸುತ್ತದೆ. ಆದರೆ ನಿಮಗೆಲ್ಲಾ ನೆನಪಿರಲಿ ಇಲ್ಲಿ ಯಾವ ಸರ್ಟಿಫೈಡ್ ಅಕೌಂಟೆಂಟ್, ಪ್ಲಾನರ್ ಇರುವುದಿಲ್ಲ. ಅದೆಲ್ಲವೂ ಇಲ್ಲಿ ನೀವೇ! ಅಲ್ಲದೆ ಥೇಟ್ ಸಂಸ್ಥೆಯಲ್ಲಿ ಯಾವೆಲ್ಲಾ ನಿರ್ಧಾರಗಳನ್ನು ತೆಗೆದುಕೊಂಡೆವು ಅವೆಲ್ಲವೂ ಇಲ್ಲೂ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲೊಂದು, ಇಲ್ಲೊಂದು ಸಣ್ಣ ಬದಲಾವಣೆ ಇರುತ್ತದೆ ಎನ್ನುವುದನ್ನು ಬಿಟ್ಟರೆ, ಮಿಕ್ಕೆಲವೂ ಸೇಮ್! ಕುಟುಂಬ, ವೈಯಕ್ತಿಕ ಆದಾಯ ಕೂಡ ಸಂಸ್ಥೆಯ ಆಯಾ ವ್ಯಯ ದಂತೆ ಪರಿಶೀಲಿಸ ಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ ಮೊದಲಿಗೆ ಲೆಕ್ಕ ಇಟ್ಟಿರಬೇಕಾಗುತ್ತದೆ.

ಸಾಮಾಜದ ಅಂಜಿಕೆಗೆ, ಮನೆಯ ಹಲವು ಸದಸ್ಯರ ಒತ್ತಾಯಕ್ಕೆ ಕಟ್ಟು ಬಿದ್ದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅವುಗಳು ದೀರ್ಘಕಾಲದಲ್ಲಿ ಯಾವ ಪರಿಣಾಮ ಬೀರುತ್ತದೆ ಎನ್ನುವುದರ ಅರಿವು ನಮಗೆ ನಿರ್ಧಾರ ತೆಗೆದುಕೊಳ್ಳುವಾಗ ಇರುವುದಿಲ್ಲ. ಯಾವುದೇ ನಿರ್ಧಾರವಾದರೂ ಅದನ್ನು ನಿಧಾನವಾಗಿ ತೆಗೆದುಕೊಳ್ಳಬೇಕು. ಆತುರದಲ್ಲಿ ತೆಗೆದುಕೊಂಡ ನಿರ್ಧಾರಗಳು ಒಳಿತಿಗಿಂತ ಕೆಡುಕನ್ನು ಹೆಚ್ಚು ಮಾಡುತ್ತವೆ. ಸಂಸ್ಥೆಯೇ ಇರಲಿ ಅಥವಾ ವ್ಯಕ್ತಿ ನಿರ್ಧಾರಗಳು ಗಟ್ಟಿಯಾಗಿರಬೇಕು. ತೆಗೆದುಕೊಂಡ ನಿರ್ಧಾರಕ್ಕೆ ಹೊಣೆಗಾರಿಕೆ ಪ್ರದರ್ಶಿಸುವ ಜಾಯಮಾನ ನಮ್ಮದಾಗಿರಬೇಕು.

ವೈಯಕ್ತಿಕ ನೆಲಗಟ್ಟಿನಲ್ಲಿ ನಾವು ಹೆಚ್ಚು ವಿಚಾರವನ್ನು ಮಾಡೋಣ. ಸಾಮಾನ್ಯವಾಗಿ ನಮ್ಮಲ್ಲಿ ಎದುರಾಗುವ ಸಮಸ್ಯೆ ಅಥವಾ ನಿರ್ಧಾರ ತೆಗೆದುಕೊಳ್ಳಬೇಕಾದ ಅಂಶಗಳಲ್ಲಿ ಪ್ರಮುಖವಾಗಿ;

  • ಸ್ವಂತ ಮನೆ ಕಟ್ಟುವುದು

  • ಜಾಗ ಖರೀದಿಸುವುದು

  • ಇನ್ವೆಸ್ಟ್ಮೆಂಟ್ ಗೆ ಎಂದು ಇನ್ನೊಂದು ಜಾಗ ಅಥವಾ ಅಪಾರ್ಟ್ಮೆಂಟ್ ಖರೀದಿಸುವುದು

  • ಕಾರು ಖರೀದಿಸುವುದು

  • ಮದುವೆ

  • ಆರೋಗ್ಯ

  • ವಿದ್ಯಾಭ್ಯಾಸ

  • ಕೆಲಸ ಬದಲಾವಣೆ

image for representation purpose only
ಷೇರುಮಾರುಕಟ್ಟೆ ಕುಸಿದಾಗ ಹೂಡಿಕೆದಾರನು ಏನು ಮಾಡಬೇಕು? (ಹಣಕ್ಲಾಸು)

ಮೇಲಿನ ಅಷ್ಟೂ ಅಂಶವನ್ನು ನೀವು ಗಮನಿಸಿ ನೋಡಿ ಇವುಗಳಲ್ಲಿ ಒಂದರಲ್ಲಿ ನಾವು ತಪ್ಪು ನಿರ್ಧಾರ ಮಾಡಿದರೆ ಅದು ಕೆಲವು ವರ್ಷಗಳನ್ನು ನಮ್ಮಿಂದ ಕಸಿದು ಬಿಡುತ್ತವೆ. ಉದಾಹರಣೆ ನೋಡೋಣ, ಅವಶ್ಯಕತೆ ಇಲ್ಲದ ಕಾರು ಖರೀದಿ ಹತ್ತಾರು ಲಕ್ಷ ರೂಪಾಯಿಯನ್ನು ಒಂದೆಡೆ ಬ್ಲಾಕ್ ಮಾಡುತ್ತದೆ, ಜೊತೆಗೆ ಅಪರ್ಚುನಿಟಿ ಕಾಸ್ಟ್ ಅದಕ್ಕಿಂತ ದೊಡ್ಡದಾಗುತ್ತದೆ. ನಮ್ಮ ಮುಂದೆ ಬಂದು ನಿಲ್ಲುವ ಉತ್ತಮ ಅವಕಾಶದಲ್ಲಿ ಹೂಡಿಕೆ ಮಾಡಲು ಹಣವಿಲ್ಲ ಎನ್ನುವ ಸನ್ನಿವೇಶವನ್ನು ನಾವೇ ಸೃಷ್ಟಿ ಮಾಡಿಕೊಳ್ಳುತ್ತೇವೆ. ಇನ್ನು ಮನೆ, ಜಾಗದಂತಹ ವಿಷಯದಲ್ಲಿ ಆತುರ ಮತ್ತು ತಪ್ಪು ನಿರ್ಧಾರ ಮಾಡಿದರೆ ಅದು ಹತ್ತಾರು ವರ್ಷವನ್ನು ನುಂಗಿ ಬಿಡುತ್ತದೆ. ಅಂದರೆ ಮುಂದಿನ ಹತ್ತು ಅಥವಾ ಹದಿನೈದು ವರ್ಷ ಮಾಡಿದ ತಪ್ಪಿಗೆ ಕಂತು ಕಟ್ಟುತ್ತಾ ಜೀವನ ನಡೆಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಇಂತಹ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳನ್ನು ಬರೆದಿಟ್ಟುಕೊಳ್ಳುವುದು ಉತ್ತಮ. ಹತ್ತಾರು ಕಡೆಗಳಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಣೆ ಮಾಡುವುದು ಕೂಡ ಮಾಡಬೇಕು. ಕನಿಷ್ಠ ವಾರ ಅಥವಾ ಹತ್ತು ದಿನ ತೆಗೆದುಕೊಂಡ ತೀರ್ಮಾನದ ಜೊತೆಗೆ ಜೀವಿಸಬೇಕು. ನಿಮ್ಮ ಫೈನಾನ್ಸಿಯಲ್ ಅಡ್ವೈಸರ್ ಬಳಿ ಇದರ ಕುರಿತು ಚರ್ಚಿಸಬೇಕು. ಸರಿ ಎನ್ನಿಸಿದಾಗ ಕಾರ್ಯೋನ್ಮುಖರಾಗಬೇಕು.

ಇದರ ಜೊತೆಗೆ ದಿನ ನಿತ್ಯದ ಸಣ್ಣ ಪುಟ್ಟ ನಿರ್ಧಾರಗಳು ಕೂಡ ದೀರ್ಘಕಾಲದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಉದಾಹರಣೆಗೆ ಮಗುವನ್ನು ಶಾಲೆಯ ವಾಹನದಲ್ಲಿ ಕಳಿಸುವುದೋ ಅಥವಾ ನಾವೇ ಕಾರಿನಲ್ಲಿ ಅಥವಾ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗಬೇಕೋ ಎನ್ನವುದು ತೀರಾ ಸಾಧಾರಣ, ಮಹತ್ವವಲ್ಲದ ನಿರ್ಧಾರ ಎನ್ನಿಸುತ್ತದೆ. ಆದರೆ ನಾವೇ ಶಾಲೆಗೆ ಬಿಡುವ ನಿರ್ಧಾರ ದೀರ್ಘಕಾಲದಲ್ಲಿ ಶಾಲೆಯ ವಾಹನಕ್ಕಿಂತ ಹತ್ತಾರು ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ. ಜೊತೆಗೆ ನಮ್ಮ ವೇಳೆಯೂ ಅಲ್ಲಿ ಅಪಮೌಲ್ಯ ಹೊಂದುತ್ತದೆ. ಇದರರ್ಥ ಮಕ್ಕಳನ್ನು ಶಾಲೆಗೆ ಪೋಷಕರು ಬಿಡಬಾರದು ಎಂದಲ್ಲ. ನೀವು ಬದುಕಿನ ಯಾವ ಹಣತದಲ್ಲಿದ್ದೀರಿ ಎನ್ನುವುದರ ಮೇಲೆ ಈ ನಿರ್ಧಾರ ಸರಿ ಅಥವಾ ತಪ್ಪು ಎನ್ನುವುದನ್ನು ನಿರ್ಧರಿಸಬಹುದು. ಹೀಗೆ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ರೆಸ್ಟುರೆಂಟ್ನಲ್ಲಿ ಊಟ ಮಾಡುವ ನಿರ್ಧಾರ, ಸಿಗರೇಟು, ಮಧ್ಯಪಾನ, ಮನರಂಜನೆಗೆ ವ್ಯಯಿಸುವ ಹಣ, ಎಲ್ಲವೂ ಲೆಕ್ಕವನ್ನು ಹಳಿ ತಪ್ಪಿಸುವ ಶಕ್ತಿ ಹೊಂದಿರುತ್ತವೆ. ಇವುಗಳನ್ನು ಸರಿಯಾಗಿ ಬಜೆಟ್ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

image for representation purpose only
ಇಂಗ್ಲೆಂಡ್: ನೋ ಮೋರ್ ಎ ವಂಡರ್ ಲ್ಯಾಂಡ್! ಯುಎಇಯತ್ತ ಆಕರ್ಷಣೆ ಏಕೆ? (ಹಣಕ್ಲಾಸು)

ಈಗ ನೀವು ನಿಮ್ಮ ಸುತ್ತಮುತ್ತಲಿನ ಜಗತ್ತನ್ನು ಒಮ್ಮೆ ಗಮನಿಸಿ ನೋಡಿ. ಅವರಲ್ಲಿ ಮುಕ್ಕಾಲು ಪಾಲು ಜನ ಹಣವಿಲ್ಲ, ಹಣದ ಕೊರತೆ ಎನ್ನುವ ಮಾತುಗಳನ್ನು ಸದಾ ಆಡುತ್ತಿರುತ್ತಾರೆ. ಈ ರೀತಿ ಏಕೆ ಆಗಿರುತ್ತದೆ ಎಂದರೆ ಅವರಿಗೆ ಸರಿಯಾದ ಹಣಕಾಸು ಮಾಹಿತಿ ಸಿಗದ ಕಾರಣ ತಪ್ಪು ಆಯ್ಕೆಗಳನ್ನು ಮಾಡಿಕೊಂಡಿರುತ್ತಾರೆ. ಇನ್ಫೋರ್ಮೆಡ್ ಚಾಯ್ಸ್ ಮಾಡಿದಾಗ ಅದರಲ್ಲಿ ತಪ್ಪುಗಳ ಸಾಧ್ಯತೆ ಕಡಿಮೆ ಇರುತ್ತದೆ.

ಇಂದಿಗೂ ನಿಮಗೆ ಸಮಯ ಮೀರಿಲ್ಲ. ನಿಮ್ಮ ವಯಸ್ಸು ಎಷ್ಟು ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ . ನೀವಿನ್ನೂ ಹಣಕಾಸಿನ ಆಟದಿಂದ ಹೊರಬಂದಿಲ್ಲ ಎಂದರೆ ಇದು ನಿಮಗೆ ಅನ್ವಯ. ಹೀಗಾಗಿ ಹಣಕಾಸಿನ ಮೂಲಭೂತ ನಿಯಮಗಳನ್ನು ಕಲಿಯಲು ಪ್ರಾರಂಭಿಸಿ. ಹಣ ಏನಿದು ನಿನ್ನ ವಿಚಿತ್ರಗುಣ ಮತ್ತು ಸಿರಿವಂತಿಕೆಗೆ ಸರಳ ಸೂತ್ರಗಳು ಎನ್ನುವ ಪುಸ್ತಕಗಳಲ್ಲಿ ಇವುಗಳ ಬಗ್ಗೆ ಬಹಳಷ್ಟು ಚರ್ಚೆಯಾಗಿದೆ. ಅಲ್ಲಿರುವ ನಿಯಮಗಳನ್ನು ಬದುಕಿಗೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ. ಯಾವುದೊ ನಾವೆಂದು ಕೊಂಡಷ್ಟು ಸುಲಭವಾಗಿ ನಮಗೆ ದಕ್ಕುವುದಿಲ್ಲ, ಅದೇ ಸಮಯದಲ್ಲಿ ನಾವೆಂದು ಕೊಂಡಷ್ಟು ಕಷ್ಟವೂ ಆಗಿರುವುದಿಲ್ಲ. ಒಟ್ಟಾರೆ ಸರಳವಾಗಿ ಹೇಳಬೇಕೆಂದರೆ ನಾವು ದಿನ ನಿತ್ಯ ತೆಗೆದುಕೊಳ್ಳುವ ಅತಿ ಸಾಧಾರಣ ನಿರ್ಧಾರಗಳು ಕೂಡ ಹಣಕಾಸಿನ ನಿರ್ಧಾರವೇ ಆಗಿರುತ್ತದೆ. ಹೀಗಾಗಿ ದೊಡ್ಡದು, ಚಿಕ್ಕದು ಎನ್ನುವುದಕ್ಕಿಂತ ದೀರ್ಘಕಾಲದಲ್ಲಿ ಅವುಗಳು ಮಾಡಬಹುದಾದ ಪರಿಣಾಮವನ್ನು ಅವಲಂಬಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು .

image for representation purpose only
ನಾವು ಹೂಡಿಕೆ ಮಾಡಿರುವ stockbroker ಸಂಸ್ಥೆ ಮುಚ್ಚಿ ಹೋದರೆ ಮುಂದೇನು? (ಹಣಕ್ಲಾಸು)

ಸರಳವಾಗಿ ಹೇಳಬೇಕೆಂದರೆ ಕೆಳಗಿನ ಅಂಶಗಳನ್ನು ತಪ್ಪದೆ ಪಾಲಿಸುವುದು ಎಲ್ಲಾ ಸಮಸ್ಯೆಗಳಿಗೆ ರಾಮಬಾಣ.

  • ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡದಿರುವುದು.

  • ತೀರಿಸಲಾಗದ ಸಾಲ ಮಾಡದೆ ಇರುವುದು

  • ನಾಳಿನ ಬಗ್ಗೆ ಒಂದು ಕಣ್ಣಿಟ್ಟಿರುವುದು

  • ಇಂದಿನ ಸುಖ, ನಮ್ಮನ್ನು ನಾವು ಖುಷಿಯಾಗಿ ಇಟ್ಟುಕೊಳ್ಳುವುದು ಕೂಡ ಮರೆಯಬಾರದು

  • ಯಾವುದೇ ಖರೀದಿಗೆ ಮುಂಚೆ ಕಾಸ್ಟ್ ಮತ್ತು ಬೆನಿಫಿಟ್ ಲೆಕ್ಕ ಹಾಕುವುದು

  • ಉಳಿಕೆ ಮತ್ತು ಹೂಡಿಕೆಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಬೇರೆಯದಕ್ಕೆ ಖರ್ಚು ಮಾಡದೆ ಇರುವುದು

  • ಹಣಕಾಸು ಶಿಸ್ತು ಎನ್ನುವುದು ಒಂದು ದಿನ, ವಾರ, ತಿಂಗಳು ಮಾಡಿ ಬಿಡುವ ಕೆಲಸವಲ್ಲ. ಅದು ಜೀವನಶೈಲಿ ಎನ್ನುವುದನ್ನು ಮನನ ಮಾಡಿಕೊಳ್ಳುವುದು.

  • ಅಸ್ಥಿರ ಸಮಾಜದಲ್ಲಿ ಉಂಟಾಗುವ ಬದಲಾವಣೆಗೆ ಸದಾ ಸಿದ್ಧವಾಗಿರುವುದು. ಕಲಿಕೆ ಮರೆಯದಿರುವುದು.

  • ನಿಖರವಾದ ಹಣಕಾಸು ಗುರಿಯನ್ನು ಇಟ್ಟುಕೊಳ್ಳುವುದು

  • ಆದ್ಯತೆಗಳನ್ನು ಸಮಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು.

ಹೋಗುವ ಮುನ್ನ: ಅತಿ ಚಿಕ್ಕ ನಿರ್ಧಾರದಿಂದ, ದೊಡ್ಡ ನಿರ್ಧಾರದವರೆಗೆ ಎಲ್ಲವೂ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಹಣಕಾಸಿಗೆ ಸಂಬಂಧಿಸಿರುತ್ತವೆ. ಹುಟ್ಟಿದ ಕ್ಷಣದಿಂದ ಸಾಯುವವರೆಗೆ ಸಂಖ್ಯೆಗಳ ಆಟ ಬದುಕಿನಲ್ಲಿ ಬಹಳ ದೊಡ್ಡದು. ಆ ಸಂಖ್ಯೆಗಳನ್ನು ನಾವು ನಮ್ಮ ಒಳಿತಿಗೆ ಬಳಸಿಕೊಳ್ಳಬೇಕು. ಅದಕ್ಕಾಗಿ ನಾವು ನಮ್ಮ ಮೆದುಳನ್ನು ಟ್ರೈನ್ ಮಾಡಬೇಕು. ಬೇಕೆನ್ನಿಸಿದ್ದನ್ನು ಬೇಕಾದ ಹಾಗೆ ಮಾಡಲು ಬಿಡುತ್ತ ಹೋದರೆ ಬದುಕು ಸೂತ್ರ ಕಿತ್ತ ಗಾಳಿಪಟವಾಗುತ್ತದೆ. ಹೀಗಾಗಿ ಬದುಕಿಗೆ ನಿಯಮಗಳು ಅನ್ವಯವಾಗುತ್ತವೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

X

Advertisement

X
Kannada Prabha
www.kannadaprabha.com