
ಅಮೆರಿಕನ್ ರಾಜಕಾರಣದಲ್ಲಿ ಹೊಸದೊಂದು ಅಲೆ ಆರಂಭವಾಗುವ ಸೂಚನೆಗಳು ಇತ್ತೀಚೆಗೆ ಕಂಡುಬಂದಿವೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್, ಜೆ ಡಿ ವ್ಯಾನ್ಸ್ (j.d vance) ಅವರನ್ನು ತನ್ನ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
1984ರ ಆಗಸ್ಟ್ 2ರಂದು ಜನಿಸಿದ ಜೇಮ್ಸ್ ಡೇವಿಡ್ ವ್ಯಾನ್ಸ್ ಓರ್ವ ಅಮೆರಿಕನ್ ರಾಜಕಾರಣಿ, ನ್ಯಾಯವಾದಿ, ಲೇಖಕರಾಗಿ ಜನಪ್ರಿಯರಾಗಿದ್ದಾರೆ. ವ್ಯಾನ್ಸ್ ಈ ಹಿಂದೆ ಅಮೆರಿಕಾದ ಮರೀನ್ ಕಾರ್ಪ್ಸ್ ಯೋಧನಾಗಿಯೂ ಸೇವೆ ಸಲ್ಲಿಸಿದ್ದಾರೆ. ವ್ಯಾನ್ಸ್ ಅವರು ಓಹಿಯೋದ ಜ್ಯೂನಿಯರ್ ಸೆನೇಟರ್ ಆಗಿ 2023ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಪಬ್ಲಿಕನ್ ಪಕ್ಷದ ಸದಸ್ಯರಾಗಿರುವ ಜೆ ಡಿ ವ್ಯಾನ್ಸ್, 2024ರಲ್ಲಿ ನಡೆಯಲಿರುವ ಅಮೆರಿಕಾದ ಉಪಾಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಅಮೆರಿಕಾದ ಸಂಸತ್ತಾದ 'ಕಾಂಗ್ರೆಸ್'ನಲ್ಲಿ ಜೆ ಡಿ ವ್ಯಾನ್ಸ್ ಅವರು ನಡೆದುಕೊಂಡಿರುವ ರೀತಿ 'ಅಮೆರಿಕಾ ಫಸ್ಟ್' ಎಂಬ ವಿದೇಶಾಂಗ ನೀತಿಗೆ ಅವರು ಬದ್ಧರಾಗಿದ್ದಾರೆ ಎನ್ನುವುದನ್ನು ಪ್ರದರ್ಶಿಸಿದೆ. ಅಮೆರಿಕಾ ಫಸ್ಟ್ ವಿದೇಶಾಂಗ ನೀತಿಯನ್ನು ವ್ಯಾನ್ಸ್ ಅವರು ಸೆನೇಟ್‌ನಲ್ಲಿ ಮತ್ತು ಕಳೆದ ವಾರ ನಡೆದ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್‌ನಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.
Vance - ಆ್ಯಕ್ಷನ್ ಇನ್ ಕಾಂಗ್ರೆಸ್:
'ಆ್ಯಕ್ಷನ್ಸ್ ಇನ್ ಕಾಂಗ್ರೆಸ್' ಎಂದರೆ ಓರ್ವ ಅಮೆರಿಕನ್ ಕಾಂಗ್ರೆಸ್‌ನ ಸದಸ್ಯ ವಿವಿಧ ವಿಚಾರಗಳು ಮತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳು ಮತ್ತು ಚಲಾಯಿಸಿದ ಮತಗಳನ್ನು ಪ್ರತಿನಿಧಿಸುತ್ತವೆ. ಈ ಕ್ರಮಗಳಲ್ಲಿ, ಕಾಂಗ್ರೆಸ್ ಸದಸ್ಯರು ತಮ್ಮ ಸಂಸದೀಯ ಸದಸ್ಯತ್ವದ ಅವಧಿಯಲ್ಲಿ ಹೇಗೆ ವಿವಿಧ ವಿಧೇಯಕಗಳನ್ನು ಬೆಂಬಲಿಸಿದ್ದಾರೆ ಅಥವಾ ವಿರೋಧಿಸಿದ್ದಾರೆ ಎನ್ನುವುದೂ ಸೇರಿದೆ.
'ಕಾಂಗ್ರೆಸ್' ಎಂದರೆ ಅಮೆರಿಕಾ ಸರ್ಕಾರದ ಶಾಸಕಾಂಗ ವಿಭಾಗವಾಗಿದೆ. ಇದು ಸೆನೇಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಹೊಸ ಕಾನೂನುಗಳನ್ನು ರಚಿಸುವ, ವಿವಿಧ ನೀತಿಗಳನ್ನು ಕುರಿತು ಚರ್ಚಿಸುವ, ಮತ್ತು ಸಾರ್ವಜನಿಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಜವಾಬ್ದಾರಿಗಳನ್ನು ಹೊಂದಿದೆ.
ನೂತನ ಉಪಾಧ್ಯಕ್ಷ ಅಭ್ಯರ್ಥಿಯ ಆಯ್ಕೆ
ಜೆ ಡಿ ವ್ಯಾನ್ಸ್ ಅವರು ಈಗ ಮೊದಲನೇ ಬಾರಿಗೆ ಸೆನೇಟರ್ ಆಗಿ ಆಯ್ಕೆಯಾಗಿದ್ದಾರೆ. ಆದರೆ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ವ್ಯಾನ್ಸ್ ಅವರನ್ನೇ ತನ್ನ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆರಿಸಿಕೊಂಡಿದ್ದಾರೆ. ವ್ಯಾನ್ಸ್ ಅವರು ಬಿಡೆನ್ ಆಡಳಿತದ ವಿದೇಶಾಂಗ ನೀತಿಯ ಕಟು ಟೀಕಾಕಾರರಾಗಿದ್ದು, ಮಧ್ಯ ಪೂರ್ವ ಪ್ರದೇಶದಲ್ಲಿ ಅಮೆರಿಕಾ ತೀಕ್ಷ್ಣ ಕ್ರಮಗಳನ್ನು ಕೈಗೊಳ್ಳಬೇಕು, ಇಸ್ರೇಲ್ ಜೊತೆಗೆ ಇನ್ನೂ ಉತ್ತಮ ಬಾಂಧವ್ಯ ಸಾಧಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿದೇಶಾಂಗ ನೀತಿಯ ಕುರಿತು ವ್ಯಾನ್ಸ್ ನಿಲುವು
"ನಾವು ಮತ್ತು ನಮ್ಮ ಸಹಯೋಗಿಗಳು (ನ್ಯಾಟೋ ಸದಸ್ಯರು ಮತ್ತು ಇತರ ಸಹಯೋಗಿ ರಾಷ್ಟ್ರಗಳು) ಜಾಗತಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿರಂತರ ಕೊಡುಗೆ ನೀಡಲಿದ್ದೇವೆ. ಅಮೆರಿಕಾದ ತೆರಿಗೆದಾರರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ದೇಶಗಳಿಗೆ ನಾವು ಇನ್ನು ಮುಂದೆ ಸಹಾಯಹಸ್ತ ಚಾಚುವುದಿಲ್ಲ. ಅತ್ಯಂತ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರವೇ ನಾವು ನಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಲಿದ್ದೇವೆ. ಹಿಂದೆ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಐಸಿಸ್ ಸಂಘಟನೆಯನ್ನು ಸೋಲಿಸಿದ್ದು ಮತ್ತು ಇತರ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದು ನಾವು ಯಾವುದೇ ಕ್ರಮ ಕೈಗೊಂಡರೂ ಅದನ್ನು ಪರಿಣಾಮಕಾರಿಯಾಗಿ ಕೈಗೊಳ್ಳುತ್ತೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ" ಎಂದು ವ್ಯಾನ್ಸ್ ಜುಲೈ 17ರಂದು ಆರ್‌ಎನ್‌ಸಿಯಲ್ಲಿ (ರಿಪಬ್ಲಿಕನ್ ನ್ಯಾಷನಲ್ ಕಮಿಟಿ) ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
2023ರಲ್ಲಿ ವ್ಯಾನ್ಸ್ ಕಾಂಗ್ರೆಸ್‌ಗೆ ನೇಮಕಗೊಂಡಿದ್ದು, ಒಂದು ವರ್ಷ ಮತ್ತು ಏಳು ತಿಂಗಳ ಅವಧಿಗೆ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಇಷ್ಟೊಂದು ಕಡಿಮೆ ಅವಧಿಯಲ್ಲೇ ಜ್ಯೂನಿಯರ್ ಸೆನೇಟರ್ ಆಗಿರುವ ವ್ಯಾನ್ಸ್ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಒಂದು ವೇಳೆ ಟ್ರಂಪ್ ಏನಾದರೂ ಅಧ್ಯಕ್ಷರಾಗಿ ಪುನರಾಯ್ಕೆಯಾದರೆ ಮಧ್ಯ ಪೂರ್ವ ನೀತಿಯ ಕುರಿತು ತಾನು ಎಂತಹ ಪ್ರಭಾವ ಬೀರಬಲ್ಲೆ ಎಂಬುದನ್ನು ಪ್ರದರ್ಶಿಸಿದ್ದಾರೆ.
"ಅಮೆರಿಕಾದ ಉಪಾಧ್ಯಕ್ಷರಾಗಿರುವವರಿಗೆ ಒಂದು ಮಹತ್ವದ ಅನುಕೂಲವಿದೆ. ಅದೇನೆಂದರೆ, ಅಮೆರಿಕನ್ ಅಧ್ಯಕ್ಷರು ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳುವ ಮುನ್ನ, ಅಂತಿಮ ಚರ್ಚೆಯನ್ನು ಉಪಾಧ್ಯಕ್ಷರ ಜೊತೆಗೇ ನಡೆಸುತ್ತಾರೆ. ಆ ಬಳಿಕವಷ್ಟೇ ತೀರ್ಮಾನಗಳು ಜಾರಿಗೆ ಬರುತ್ತವೆ" ಎಂದು ಟ್ಯುನೀಶಿಯಾದಲ್ಲಿನ ಅಮೆರಿಕಾದ ಮಾಜಿ ರಾಯಭಾರಿ ಮತ್ತು ಇರಾಕ್‌ನ ಅಮೆರಿಕನ್ ರಾಯಭಾರ ಕಚೇರಿಯ ಹಿರಿಯ ಸಲಹೆಗಾರರಾಗಿರುವ ಪ್ರೊಫೆಸರ್ ಗಾರ್ಡನ್ ಗ್ರೇ ಅವರು ಉಪಾಧ್ಯಕ್ಷ ಹುದ್ದೆಯ ಮಹತ್ವವನ್ನು ವಿವರಿಸಿದ್ದಾರೆ.
ಇರಾಕ್ ಯುದ್ಧದ ಕುರಿತು ಭ್ರಮನಿರಸನಗೊಂಡ ಮಾಜಿ ಯೋಧ
39ರ ಹರೆಯದ ಜೆ ಡಿ ವ್ಯಾನ್ಸ್, ಎರಡು ದಶಕಗಳ ಹಿಂದೆ ಇರಾಕ್‌ನಲ್ಲಿ ಯುಎಸ್ ಮರೀನ್ ಆಗಿ ಸೇವೆ ಸಲ್ಲಿಸಿದ್ದರು. ಆದರೆ, ಈಗ ಅಮೆರಿಕನ್ ಕಾಂಗ್ರೆಸ್‌ನಲ್ಲಿ 2003ರ ಅಮೆರಿಕಾದ ಇರಾಕ್ ಆಕ್ರಮಣದ ಕುರಿತು ಕಟು ಟೀಕೆ ನಡೆಸುವ ರಿಪಬ್ಲಿಕನ್ ಪಕ್ಷದ ಸದಸ್ಯರಲ್ಲಿ ಜೆ ಡಿ ವ್ಯಾನ್ಸ್ ಪ್ರಮುಖರಾಗಿದ್ದಾರೆ. ಹಿಂದೆ ಹಲವಾರು ರಿಪಬ್ಲಿಕನ್ ಸಂಸದರು ಅಂತಾರಾಷ್ಟ್ರೀಯ ವಿವಾದಗಳ ಕುರಿತು ತೀವ್ರಗಾಮಿ ನಿಲುವುಗಳನ್ನು ಹೊಂದಿದ್ದರು. ಆದರೆ, ವ್ಯಾನ್ಸ್ ಅವರು ಅದಕ್ಕೆ ಸಾಕಷ್ಟು ವ್ಯತಿರಿಕ್ತವಾದ ನಿಲುವನ್ನು ಪ್ರತಿಪಾದಿಸುತ್ತಿದ್ದಾರೆ.
2002ರಲ್ಲಿ ಜಾರಿಗೆ ತಂದ ಹೊಸ ಕಾನೂನು ಅಮೆರಿಕನ್ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರಿಗೆ ಇರಾಕ್ ಮೇಲೆ ಆಕ್ರಮಣ ನಡೆಸಿ, ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್‌ರನ್ನು ಪದಚ್ಯುತಗೊಳಿಸಲು ಅನುವು ಮಾಡಿಕೊಟ್ಟಿತ್ತು. ಆದರೆ, ಜೆ ಡಿ ವ್ಯಾನ್ಸ್ ಈ ಕಾನೂನನ್ನು ರದ್ದುಗೊಳಿಸಬೇಕು ಎಂದು ಮತ ಚಲಾಯಿಸಿದ್ದಾರೆ. ಸೆನೇಟ್ ನಲ್ಲಿ ಮಾತನಾಡಿದ ವ್ಯಾನ್ಸ್ ಅಮೆರಿಕಾದ ವಿದೇಶಾಂಗ ನೀತಿ ಮತ್ತು ಜಗತ್ತಿನಾದ್ಯಂತ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬ ಅದರ ಗುರಿಯ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾನು ನನ್ನ ದೇಶವಾದ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಗೌರವಯುತವಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ, ನಾನು ಇರಾಕ್ ಯುದ್ಧಕ್ಕೆ ತೆರಳಿದಾಗ ನಮ್ಮನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎನ್ನುವುದು ನನ್ನ ಅರಿವಿಗೆ ಬಂತು. ಅಮೆರಿಕಾದ ವಿದೇಶಾಂಗ ನೀತಿಯನ್ನು ರೂಪಿಸಿದ ನಾಯಕರು ಆ ಅವಧಿಯಲ್ಲಿ ಹುಸಿ ಭರವಸೆಗಳನ್ನೇ ಸಾಲಾಗಿ ನೀಡುತ್ತಿದ್ದರು" ಎಂದು ವ್ಯಾನ್ಸ್ ಏಪ್ರಿಲ್‌ನಲ್ಲಿ ಹೇಳಿದ್ದರು.
ಇರಾಕ್ ಮೇಲಿನ ಆಕ್ರಮಣವನ್ನು ವ್ಯಾನ್ಸ್ ಗಂಭೀರವಾಗಿ ಖಂಡಿಸುತ್ತಾ ಬಂದಿದ್ದಾರೆ. ಈ ತಿಂಗಳು ಕ್ವಿನ್ಸಿ ಇನ್ಸ್ಟಿಟ್ಯೂಟ್ ನಲ್ಲಿ ಭಾಷಣ ಮಾಡಿದ ವ್ಯಾನ್ಸ್, ಇರಾಕ್ ಮೇಲೆ ಅಮೆರಿಕಾ ಅನಗತ್ಯವಾಗಿ ಆಕ್ರಮಣ ನಡೆಸಿ, ಮಧ್ಯ ಪೂರ್ವದಲ್ಲಿ ಇರಾಕ್ ರೂಪದಲ್ಲಿ ಇರಾನ್‌ಗೆ ಹೊಸ ಬೆಂಬಲಿಗನನ್ನು ಸೃಷ್ಟಿಸಿತು ಎಂದು ಅಭಿಪ್ರಾಯ ಪಟ್ಟಿದ್ದರು. ಇರಾನ್ ಇಸ್ರೇಲ್ ಮೇಲೆ ಆಕ್ರಮಣ ನಡೆಸಿರುವುದರಿಂದ, ಮಧ್ಯ ಪೂರ್ವದಲ್ಲಿ ಇನ್ನಷ್ಟು ತೀವ್ರವಾದ ಕದನ ನಡೆಯುವ ಸಾಧ್ಯತೆಗಳಿವೆ ಎಂದು ವ್ಯಾನ್ಸ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾ ಈ ಉದ್ವಿಗ್ನತೆಯನ್ನು ಹತೋಟಿಯಲ್ಲಿಡಲು ಪ್ರಯತ್ನ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಸ್ರೇಲ್‌ನ ಪ್ರಬಲ ಬೆಂಬಲಿಗ - ಜೆ ಡಿ ವ್ಯಾನ್ಸ್
ಜೆ ಡಿ ವ್ಯಾನ್ಸ್ ಇಸ್ರೇಲ್‌ನ ಪ್ರಬಲ ಬೆಂಬಲಿಗನಾಗಿದ್ದಾರೆ. ಆದರೂ, ಕಳೆದ ಏಪ್ರಿಲ್ ತಿಂಗಳಲ್ಲಿ ಇಸ್ರೇಲ್‌ಗೆ ತುರ್ತು ಮಿಲಿಟರಿ ಬೆಂಬಲ ನೀಡುವ ನಿರ್ಣಯದ ವಿರುದ್ಧ ವ್ಯಾನ್ಸ್ ಮತ ಚಲಾಯಿಸಿದ್ದರು.
ಪ್ರಸ್ತಾಪಿತ ನಿರ್ಣಯದಲ್ಲಿ, ಅಮೆರಿಕನ್ ಕಾಂಗ್ರೆಸ್ ಗಾಜಾ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ 26 ಬಿಲಿಯನ್ ಡಾಲರ್ ಒದಗಿಸುವ ಜೊತೆಗೆ, ರಷ್ಯಾ ವಿರುದ್ಧ ಸೆಣಸುತ್ತಿರುವ ಉಕ್ರೇನ್‌ಗೂ 61 ಬಿಲಿಯನ್ ಡಾಲರ್ ಯುದ್ಧ ಸಹಾಯ ನೀಡುವುದಾಗಿ ನಿರ್ಧರಿಸಿತ್ತು. ಈ ಕಾರಣಕ್ಕಾಗಿ ವ್ಯಾನ್ಸ್ ನಿರ್ಣಯವನ್ನು ವಿರೋಧಿಸಿದ್ದರು.
ವ್ಯಾನ್ಸ್ ಸೇರಿದಂತೆ, ಹಲವಾರು ರಿಪಬ್ಲಿಕನ್ ಪಕ್ಷದ ಸೆನೇಟ್ ಸದಸ್ಯರು ಇಸ್ರೇಲ್‌ಗೆ ತುರ್ತು ನೆರವು ನೀಡಲು ಪ್ರತ್ಯೇಕ ನಿಲುವಳಿ ಘೋಷಿಸಲು ವಿಫಲ ಪ್ರಯತ್ನ ನಡೆಸಿದ್ದರು.
"ಇಸ್ರೇಲನ್ನು ಚೌಕಾಶಿಯ ಸಾಧನವಾಗಿ ಬಳಸಿಕೊಳ್ಳುವುದರ ಬದಲು, ಉಕ್ರೇನ್ ಕುರಿತು ಅಧ್ಯಕ್ಷರ ನೈಜ ನಿಲುವೇನು ಎಂಬ ಕುರಿತು ನಾವು ಒಂದು ಪ್ರಾಮಾಣಿಕ ಚರ್ಚೆ ನಡೆಸಬೇಕು. ಇಸ್ರೇಲ್‌ನಲ್ಲಿ ಈಗಾಗಲೇ ತೀವ್ರ ಬಿಕ್ಕಟ್ಟು ತಲೆದೋರಿದೆ, ಸಾವಿರಾರು ಇಸ್ರೇಲಿಗರು ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಉಕ್ರೇನ್ ಕುರಿತ ನೀತಿಗೆ ಇಸ್ರೇಲನ್ನು ಗುರಾಣಿಯಾಗಿ ಬಳಸುವುದು ಅಮೆರಿಕಾ ಅಧ್ಯಕ್ಷರಿಗೆ ನಾಚಿಕೆಗೇಡಿನ ವಿಚಾರ! ಒಂದು ವೇಳೆ ನಿಮಗೆ ಉಕ್ರೇನ್ ನೀತಿಗೆ ಸಹಾಯ ಮಾಡಬೇಕು ಎಂಬ ಉದ್ದೇಶವಿದ್ದರೆ, ನೇರವಾಗಿ ಉಕ್ರೇನ್‌ಗೆ ಸಹಾಯ ಮಾಡಿ. ಆದರೆ ಇಸ್ರೇಲ್‌ಗೆ ನೀಡಬೇಕಾದ ನೆರವು ಮುಂದುವರಿಯಲಿ. ಅದು ಇಂದೇ ಜಾರಿಗೆ ಬರಲಿ" ಎಂದು ವ್ಯಾನ್ಸ್ ನವೆಂಬರ್ 2023ರಲ್ಲಿ ಅಭಿಪ್ರಾಯ ಪಟ್ಟಿದ್ದರು.
ಇಂದು ಅಮೆರಿಕಾದ ಸೆನೇಟ್ ಸದಸ್ಯರು ಉಕ್ರೇನ್‌ಗೆ ಬೆಂಬಲ ನೀಡುತ್ತಿರುವುದು 2003ರಲ್ಲಿ ನಾಚಿಕೆಗೇಡಿನ ಸುಳ್ಳು ಕತೆಗಳನ್ನು ಸೃಷ್ಟಿಸಿ, ಇರಾಕ್ ಮೇಲೆ ಆಕ್ರಮಣ ನಡೆಸಲು ಕಾರಣವಾದುದಕ್ಕೆ ಸಮವಾಗಿದೆ ಎಂದು ವ್ಯಾನ್ಸ್ ಟೀಕಿಸಿದ್ದಾರೆ.
"ರಷ್ಯನ್ನರ ವಿರುದ್ಧ ತೀವ್ರವಾಗಿ ಹೋರಾಟ ನಡೆಸುತ್ತಿರುವ ಉಕ್ರೇನಿಯನ್ನರನ್ನು ನಾನು ನಿಜಕ್ಕೂ ಶ್ಲಾಘಿಸುತ್ತೇನೆ. ಆದರೆ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಯಾವತ್ತೂ ಮುಗಿಯುವ ಯುದ್ಧದಂತೆ ಕಾಣುತ್ತಿಲ್ಲ. ಇಂತಹ ಮುಗಿಯದ ಯುದ್ಧಕ್ಕೆ ಹಣ ಒದಗಿಸುವುದು ಅಮೆರಿಕಾದ ಜವಾಬ್ದಾರಿ ಖಂಡಿತಾ ಅಲ್ಲ!" ಎಂದು ಕ್ವಿನ್ಸಿ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಿದ ಭಾಷಣದಲ್ಲಿ ವ್ಯಾನ್ಸ್ ಹೇಳಿದ್ದರು.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ, ಇಸ್ರೇಲ್‌ಗೆ ಜೇಕಬ್ ಲ್ಯೂ ಅವರನ್ನು ಅಧ್ಯಕ್ಷ ಬಿಡನ್ ಅವರ ರಾಯಭಾರಿಯಾಗಿ ಖಾತ್ರಿಪಡಿಸುವುದರ ವಿರುದ್ಧ ವ್ಯಾನ್ಸ್ ಮತ ಚಲಾಯಿಸಿದ್ದರು. ಕೆಲವು ರಿಪಬ್ಲಿಕನ್ ಸದಸ್ಯರು ಅಮೆರಿಕಾ - ಇಸ್ರೇಲ್ ಸಂಬಂಧದ ಇಂತಹ ಪ್ರಮುಖ ಅವಧಿಯಲ್ಲಿ ಅಧ್ಯಕ್ಷರ ಪ್ರತಿನಿಧಿಯ ಸ್ಥಾನ ಖಾಲಿ ಇರಬಾರದು ಎಂದು ಅಭಿಪ್ರಾಯ ಪಟ್ಟು, ಲ್ಯೂ ಅವರ ಪರ ಮತ ಚಲಾಯಿಸಿದ್ದರು. ಆದರೆ, ವ್ಯಾನ್ಸ್ ಸೇರಿದಂತೆ 43 ರಿಪಬ್ಲಿಕನ್ ಸದಸ್ಯರು ಲ್ಯೂ ವಿರುದ್ಧ ಮತ ಚಲಾಯಿಸಿದ್ದರು.
ಪ್ಯಾಲೆಸ್ತೀನಿಯನ್ ನಿರಾಶ್ರಿತರಿಗೆ ಬೆಂಬಲ ಮತ್ತು ನೆರವು
ವ್ಯಾನ್ಸ್ ಅವರು ಅಮೆರಿಕಾ ಅಧ್ಯಕ್ಷ ಬಿಡನ್ ಅವರಿಗೆ ಪತ್ರ ಬರೆದಿದ್ದು, ಗಾಜಾದಲ್ಲಿ ಯುದ್ಧದ ನಡುವೆ ಅಲ್ಲಿಂದ ತೆರಳಲು ಪ್ರಯತ್ನ ನಡೆಸುತ್ತಿರುವ ಪ್ಯಾಲೆಸ್ತೀನಿಯನ್ನರಿಗೆ ವಿಶೇಷ ಭದ್ರತೆ ನೀಡಬಾರದು ಎಂದು ಆಗ್ರಹಿಸಿದ್ದರು. "ನಾವು ಅಮೆರಿಕಾದಲ್ಲಿ ಭಯೋತ್ಪಾದಕರ ಬೆಂಬಲಿಗರ ಸಂಖ್ಯೆ ಕಡಿಮೆಯಾಗುವಂತೆ ನೋಡಿಕೊಳ್ಳಬೇಕೇ ಹೊರತು, ಹೆಚ್ಚಾಗುವಂತೆ ಮಾಡಬಾರದು" ಎಂದು ಅವರು ಒತ್ತಾಯಿಸಿದ್ದರು.
ಜೋ ಬಿಡನ್ ಆಡಳಿತ ಗಾಜಾಗೆ ಮಾನವೀಯ ನೆರವು ಒದಗಿಸಲು ಗಾಜಾ ಕಡಲ ತೀರದಲ್ಲಿ ಪಿಯರ್ ಒಂದನ್ನು ನಿರ್ಮಿಸಿತ್ತು. ಸೆನೇಟರ್ ಟೆಡ್ ಕ್ರೂಸ್ ಅವರು ಈ ಹಡಗುಕಟ್ಟೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದು, ಅದಕ್ಕೆ ವ್ಯಾನ್ಸ್ ಮತ್ತು ಇತರ ರಿಪಬ್ಲಿಕನ್ ಸದಸ್ಯರು ಬೆಂಬಲ ನೀಡಿದ್ದರು. ಪಿಯರ್ ಎಂದರೆ ಸಮುದ್ರದ ನೀರಿನ ಒಳಗೆ ಸಾಗುವ ಹಡಗುಕಟ್ಟೆಯ ರೀತಿಯ ರಚನೆಯಾಗಿದ್ದು, ಹಡಗುಗಳು ಲಂಗರು ಹಾಕಿ, ವಸ್ತುಗಳನ್ನು ಇಳಿಸಲು ತುಂಬಿಸಲು ನೆರವಾಗುತ್ತದೆ. ಇದರಿಂದಾಗಿ ವಸ್ತುಗಳ ಪೂರೈಕೆ ಸುಗಮವಾಗಿಸುತ್ತದೆ.
ಸೆನೇಟರ್ ಬರ್ನೀ ಸ್ಯಾಂಡರ್ಸ್ ಅವರು ಅಂತಾರಾಷ್ಟ್ರೀಯ ಮಾನವ ಹಕ್ಕುಗಳನ್ನು ಇಸ್ರೇಲ್ ಹೇಗೆ ಪಾಲಿಸುತ್ತಿದೆ ಎಂಬ ಕುರಿತು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ಅಮೆರಿಕನ್ ಕಾಂಗ್ರೆಸ್‌ಗೆ ಮಾಹಿತಿ ನೀಡುವಂತೆ ಮಾಡುವ ವಿಧೇಯಕವೊಂದನ್ನು ಮಂಡಿಸಿದ್ದರು. ಆದರೆ ವ್ಯಾನ್ಸ್ ಈ ವಿಧೇಯಕದ ವಿರುದ್ಧವೂ ಮತ ಚಲಾಯಿಸಿದ್ದರು. ಬಳಿಕ ಬಿಡನ್ ಆಡಳಿತ ಎನ್ಎಸ್ಎಂ-20 ಎಂಬ ರಾಷ್ಟ್ರೀಯ ಭದ್ರತಾ ವಿಧೇಯಕವನ್ನು ಜಾರಿಗೆ ತಂದಿತು. ಈ ವಿಧೇಯಕವೂ ವ್ಯಾನ್ಸ್ ವಿರೋಧಿಸಿದ ವಿಧೇಯಕದ ರೀತಿಯ ಅಂಶಗಳನ್ನೇ ಒಳಗೊಂಡಿತ್ತು.
ಮಧ್ಯ ಪೂರ್ವದಲ್ಲಿ ನಡೆದ ಯುದ್ಧಗಳ ಸೂಕ್ಷ್ಮ ನಿರ್ವಹಣೆಯನ್ನು (ಮೈಕ್ರೋ ಮ್ಯಾನೇಜಿಂಗ್) ಅಮೆರಿಕಾ ಸಮರ್ಪಕವಾಗಿ ನಡೆಸಿಲ್ಲ ಎಂದು ವ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಯುದ್ಧಕ್ಕೆ ಸಂಬಂಧಿಸಿದಂತೆ, ಅಮೆರಿಕಾದ ಒತ್ತಡವಿಲ್ಲದೆ ಇಸ್ರೇಲ್ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಬೇಕು ಎಂದು ವ್ಯಾನ್ಸ್ ಹೇಳಿದ್ದಾರೆ. ಈ ಯುದ್ಧದಲ್ಲಿ ಅಪಾರ ಪ್ರಮಾಣದಲ್ಲಿ ಪ್ಯಾಲೆಸ್ತೀನಿಯನ್ನರ ಸಾವು ಸಂಭವಿಸಿದ್ದು, ಇದಕ್ಕೆ ಹಮಾಸ್ ನೇರ ಹೊಣೆಗಾರ ಎಂದು ಅವರು ಆರೋಪಿಸಿದ್ದಾರೆ. "ಇಸ್ರೇಲಿಗರು ಅಮೆರಿಕಾದ ಸಹಯೋಗಿಗಳು. ಅವರಿಗೆ ಯಾವುದು ಸರಿ ಎನಿಸುತ್ತದೋ, ಅದೇ ರೀತಿಯಲ್ಲಿ ಅವರು ಯುದ್ಧವನ್ನು ನಿರ್ವಹಿಸಲು ಅನುವು ಮಾಡಬೇಕು" ಎಂದು ವ್ಯಾನ್ಸ್ ಮೇ ತಿಂಗಳಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅದೇ ಸಂದರ್ಶನದಲ್ಲಿ, ವ್ಯಾನ್ಸ್ 'ಹೊಸ ಮಧ್ಯ ಪೂರ್ವ'ದ (ನ್ಯೂ ಮಿಡಲ್ ಈಸ್ಟ್) ಕುರಿತು ಮಾತನಾಡಿದ್ದು, ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಉತ್ತಮ ಸಂಬಂಧ ಸ್ಥಾಪನೆಗೆ ಅಮೆರಿಕಾದ ಪ್ರಯತ್ನಗಳನ್ನೂ ಪ್ರಸ್ತಾಪಿಸಿದ್ದರು.
"ಮಧ್ಯ ಪೂರ್ವಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಗುರಿ ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಸೌಹಾರ್ದ ಸಂಬಂಧ ಸ್ಥಾಪಿಸಲು ನೆರವಾಗುವುದಾಗಬೇಕು. ಆದರೆ, ಇಸ್ರೇಲ್ ಹಮಾಸ್ ಜೊತೆಗಿನ ಸಮರವನ್ನು ಪೂರ್ಣಗೊಳಿಸದೆ ಇಂತಹ ಬೆಳವಣಿಗೆಗಳು ನಡೆಯಲು ಸಾಧ್ಯವಿಲ್ಲ" ಎಂದು ವ್ಯಾನ್ಸ್ ಹೇಳಿದ್ದಾರೆ.
ಆದರೆ, ಟ್ಯುನೀಶಿಯಾದ ಮಾಜಿ ಅಮೆರಿಕನ್ ರಾಯಭಾರಿ ಗ್ರೇ ಅವರು ಶ್ವೇತ ಭವನದಲ್ಲಿ ಟ್ರಂಪ್ - ವ್ಯಾನ್ಸ್ ಜೋಡಿ ಏನಾದರೂ ಅಧಿಕಾರಕ್ಕೆ ಬಂದರೆ, ಅವರೂ ಹಿಂದಿನ ಆಡಳಿತಗಾರರ ರೀತಿಯಲ್ಲೇ ವರ್ತಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರ ಚುನಾವಣಾ ಪ್ರಚಾರ ಯಾವ ರೀತಿಯಲ್ಲಿದ್ದರೂ, ಆಡಳಿತಾರೂಢ ವರ್ತನೆಗಳು ಭಿನ್ನವಾಗಿರುತ್ತವೆ ಎಂದಿದ್ದಾರೆ.
"ಅಮೆರಿಕಾದ ಅಧ್ಯಕ್ಷರು ಡೆಮಾಕ್ರಟಿಕ್ ಪಕ್ಷದವರಾಗಿರಲಿ, ಅಥವಾ ರಿಪಬ್ಲಿಕನ್ ಪಕ್ಷದವರಾಗಿರಲಿ, ಅವರು ಮಧ್ಯ ಪೂರ್ವದ ಕುರಿತು ಆಸಕ್ತಿ ತೋರದಿದ್ದರೂ, ಮಧ್ಯ ಪೂರ್ವ ಸದಾ ಅವರ ಬಗ್ಗೆ ಆಸಕ್ತಿ ತೋರುತ್ತದೆ!" ಎಂದು ಗ್ರೇ ಹೇಳಿದ್ದಾರೆ.
ಉಷಾ ವ್ಯಾನ್ಸ್: ಪ್ರಭಾವಿ ಹಿನ್ನೆಲೆ
ಜೆ ಡಿ ವ್ಯಾನ್ಸ್ ಅವರ ಪತ್ನಿ, 38 ವರ್ಷದ ಉಷಾ ಚಿಲುಕುರಿ ವ್ಯಾನ್ಸ್ ಅವರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವಂತಹ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಉಷಾ ಅವರ ಹೆತ್ತವರು ಅಮೆರಿಕಾದಲ್ಲಿ ನೆಲೆಸಿದ ಭಾರತೀಯ ವಲಸಿಗರಾಗಿದ್ದು, ಉಷಾ ಸ್ಯಾನ್ ಡಿಯಾಗೋದ ಉಪನಗರ ಪ್ರದೇಶದಲ್ಲಿ ಬೆಳೆದಿದ್ದಾರೆ. ಉಷಾ ಅವರು ರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ನ್ಯಾಯವಾದಿಯಾಗಿದ್ದು, ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನೂ ಹೊಂದಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿ ಪಡೆದಿದ್ದು, ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಎಂಫಿಲ್ ಪಡೆದಿದ್ದಾರೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement