
ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಎಲ್ಲರೂ ಒಪ್ಪುವ ಬಜೆಟ್ ಮಂಡಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಾ, ಪ್ರತಿ ಬಾರಿಯೂ ಮಧ್ಯಮವರ್ಗದ ಜನರಿಗೆ ಬೀಳುವ ಪೆಟ್ಟಿನ ಬಗ್ಗೆ ಒಂದಷ್ಟು ಮಾತನಾಡೋಣ.
ಭಾರತದಲ್ಲಿ ಒಟ್ಟಾರೆ 2022-23ನೇ ಸಾಲಿನಲ್ಲಿ ತೆರಿಗೆಯನ್ನು ಕಟ್ಟಿದ ಜನರ ಸಂಖ್ಯೆ 2 ಕೋಟಿ 24 ಲಕ್ಷ. ಭಾರತದ ಜನಸಂಖ್ಯೆಗೆ ಹೋಲಿಸಿದರೆ ಇದು ಬಹಳ ಕಡಿಮೆ. ಅದನ್ನು ಒಪ್ಪೋಣ. ಆದರೆ ಈ 2 ಕೋಟಿ 24 ಲಕ್ಷದಲ್ಲಿ ಕಾರ್ಪೊರೇಟ್ ಟ್ಯಾಕ್ಸ್ ಗಳು ಕೂಡ ಸೇರಿಕೊಂಡಿವೆ. 2022-23 ರ ಅಂಕಿ-ಅಂಶದ ಪ್ರಕಾರ ಕಾರ್ಪೊರೇಟ್ ಸಂಸ್ಥೆಗಳು ಕಟ್ಟುವ ತೆರಿಗೆ ಹಣಕ್ಕಿಂತ ವೈಯಕ್ತಿಕವಾಗಿ ಜನರು ಕಟ್ಟುವ ತೆರಿಗೆ ಹಣ ಪ್ರಥಮ ಬಾರಿಗೆ ಹೆಚ್ಚಾಗಿದೆ.
ಅಂದರೆ ವಾಣಿಜ್ಯ ವಹಿವಾಟಿನಿಂದ ಗಳಿಸಿದ ಲಾಭದ ಮೇಲಿನ ತೆರಿಗೆ ಹಣಕ್ಕಿಂತ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಹಣದಿಂದ ವಸೂಲಾದ ಮೊತ್ತ ಹೆಚ್ಚಾಗಿದೆ ಎಂದರ್ಥ. ಇನ್ನೊಂದು ಅಂಕಿ-ಅಂಶ ಕೂಡ ಚಕಿತಗೊಳಿಸುತ್ತದೆ. ಪರೋಕ್ಷ ಅಥವಾ ಇಂಡೈರೆಕ್ಟ್ ಟ್ಯಾಕ್ಸ್ ನಿಂದ ಸಂಗ್ರಹವಾಗುತ್ತಿದ್ದ ಹಣದ ಮೊತ್ತಕ್ಕಿಂತ ಡೈರೆಕ್ಟ್ ಟ್ಯಾಕ್ಸ್ ಅಥವಾ ನೇರ ಆದಾಯ ತೆರಿಗೆ ಮೂಲಕ ಸಂಗ್ರಹವಾಗಿರುವ ಹಣ ಹೆಚ್ಚಾಗಿದೆ. ಇಲ್ಲಿಯವರೆಗಿನ ಭಾರತದ ಕಥೆ ಬೇರೆಯದಿತ್ತು. ಇಲ್ಲಿ ಕಾರ್ಪೊರೇಟ್ ಟ್ಯಾಕ್ಸ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ನಿಂದ ಹಣದ ಸಂಗ್ರಹಣೆ ಹೆಚ್ಚಾಗುತ್ತಿತ್ತು. ಆದರೆ 2022-23 ರಿಂದ ಇದು ಉಲ್ಟಾ ಆಗಿದೆ. ವಾಣಿಜ್ಯ ವಹಿವಾಟಿನ ಮೂಲಕ ಅತಿ ಹೆಚ್ಚು ಲಾಭ ಗಳಿಸುವ ಸಂಸ್ಥೆಗಳು ನೀಡುವ ತೆರಿಗೆಗಿಂತ, ಭಾರತದ ಉಳಿದ 138 ಕೋಟಿ ಜನ ನೀಡುವ ಪರೋಕ್ಷ ತೆರಿಗೆ ಹಣಕ್ಕಿಂತ ಹೆಚ್ಚು ಹಣವನ್ನು ಮಧ್ಯಮ ವರ್ಗ ನೇರ ತೆರಿಗೆ ಮೂಲಕ ಕಟ್ಟುತ್ತಿದೆ. ಯಾವುದೇ ದೇಶವಿರಲಿ ಅದರ ಒಟ್ಟಾರೆ ಜನಸಂಖ್ಯೆಯ ಕೇವಲ ಎರಡು ಪ್ರತಿಶತದ ಮೇಲೆ ಈ ಮಟ್ಟಿನ ಹೊರೆಯನ್ನು ಹೊರಿಸುವುದು ಮಹಾತಪ್ಪು.
ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಇವರು ನಿಜವಾದ ಅಲ್ಪಸಂಖ್ಯಾತರು. ಭಾರತದ ನಿಜವಾದ ಯಶೋಗಾಥೆಗೆ ಮುನ್ನುಡಿ ಬರೆಯುತ್ತಿರುವರು. ಹೆಚ್ಚು ತೆರಿಗೆ ಕಟ್ಟುತ್ತಿರುವವರು. ಇವರೇ ಷೇರು ಮಾರುಕಟ್ಟೆಯಲ್ಲಿ ಕೂಡ ಹೂಡಿಕೆ ಮಾಡುತ್ತಿರುವುದು. ನೀವು ಷೇರು ಮಾರುಕಟ್ಟೆಯನ್ನು ಗಮನಿಸುವವರಾಗಿದ್ದರೆ ಈ ವರ್ಷ ಪ್ರತಿ ತಿಂಗಳೂ ಹತ್ತಾರು ಸಾವಿರ ಕೋಟಿ ರೂಪಾಯಿ ಹಣವನ್ನು ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಹೊರತೆಗೆದಿದ್ದಾರೆ. ಆದರೂ ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಕಾಣದೆ ಇರಲು ಸಹಾಯ ಮಾಡಿದ್ದು ಇದೆ ಮಧ್ಯಮವರ್ಗದ ಹೂಡಿಕೆ. ಭಾರತದ ಬೆನ್ನೆಲುಬು ಸಣ್ಣ ಉಳಿತಾಯ. ಅಲ್ಲಿ ಕೂಡ ಹಣವನ್ನು ಹೂಡುತ್ತಿದ್ದದ್ದು ಇದೆ ಮಧ್ಯಮವರ್ಗ. ಇಂತಹ ಮಧ್ಯಮವರ್ಗವನ್ನು ಷೇರು ಮಾರುಕಟ್ಟೆಯ ಕಡೆಗೆ ಹೊರಳುವಂತೆ ಮಾಡಿದ್ದು ಇದೆ ಕೇಂದ್ರ ಸರಕಾರದ ಅವೈಜ್ಞಾನಿಕ ಬಡ್ಡಿ ದರ ಕಡಿಮೆ ಮಾಡುವ ನೀತಿಗಳು. ಆ ಮಧ್ಯಮವರ್ಗ ಪ್ರಜೆ ಒಂದಷ್ಟು ಹೆಚ್ಚಿನ ಹಣದ ಆಸೆಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಅಪಾಯವನ್ನು ಒಪ್ಪಿಕೊಂಡು ಹೂಡಿಕೆ ಮಾಡಲು ಶುರು ಮಾಡಿದ. ಅಲ್ಲಿ ಕಲಿತು ಒಂದಷ್ಟು ಹಣವನ್ನು ಕೂಡ ನೋಡತೊಡಗಿದ. ಇತ್ತ ಬ್ಯಾಂಕುಗಳಲ್ಲಿ ಹಣ ಇಲ್ಲದೆ ಅಲ್ಲಿ ಲಿಕ್ವಿಡಿಟಿ ಸಮಸ್ಯೆ ಶುರುವಾಯ್ತು. ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರಕಾರ ಮತ್ತೆ ಇದೆ ಮಧ್ಯಮವರ್ಗದ ಜನರಿಗೆ ಚಾಟಿಯೇಟು ಬೀಸಿದೆ. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೈನ್ (Short term capital gain) ಅಂದರೆ ವರ್ಷದ ಒಳಗೆ ಕೊಂಡು ಮಾರುವ ಕ್ರಿಯೆ. ಇದಕ್ಕೆ 15 ಪ್ರತಿಶತವಿದ್ದ ತೆರಿಗೆಯನ್ನು 20 ಪ್ರತಿಶತಕ್ಕೆ ಹೆಚ್ಚಳ ಮಾಡಿದೆ. ಇನ್ನು ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಎಂದರೆ ವರ್ಷದ ನಂತರ ಮಾರುವ ಕ್ರಿಯೆ. ಇದಕ್ಕೆ 10 ಪ್ರತಿಶತವಿದ್ದ ತೆರಿಗೆಯನ್ನು 12.5 ಪ್ರತಿಶತಕ್ಕೆ ಏರಿಸಲಾಗಿದೆ. ಅಂದರೆ ಗಮನಿಸಿ ಮಾರುಕಟ್ಟೆಯ ಎಲ್ಲಾ ಅಪಾಯಗಳು ನಮ್ಮವು ಆದರೆ ಅದರಲ್ಲಿ ಲಾಭ ಮಾಡಿದರೆ ಸರಕಾರ ಸದ್ದಿಲ್ಲದೇ 20 ಪ್ರತಿಶತ ಹಣವನ್ನು ದೋಚುತ್ತದೆ. ಇಷ್ಟೇ ಅಲ್ಲ ಇದಕ್ಕೆ ಮುಂಚೆ ನಾವು ಮಾಡುವ ಪ್ರತಿ ಟ್ರಾನ್ಸಾಕ್ಷನ್ ಮೇಲೆ ಜಿಎಸ್ಟಿ, ಸೆಸ್ಸ್, ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಇತ್ಯಾದಿ ಜಡಿಯುತ್ತದೆ. ಈ ಎಲ್ಲಾ ಲೆಕ್ಕಾಚಾರ ನೋಡಿದರೆ ನೂರು ರೂಪಾಯಿ ಲಾಭದಲ್ಲಿ 23/24 ರೂಪಾಯಿ ಸರಕಾರ ಕಸಿದುಕೊಳ್ಳುತ್ತದೆ.
ಮಧ್ಯಮ ವರ್ಗದ ಬವಣೆ ಇಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ ಇಲ್ಲಿಯವರೆಗೆ ಕೊಟ್ಟ ಲೆಕ್ಕಾಚಾರ ನೇರ ತೆರಿಗೆಯದ್ದು ಮಾತ್ರ! ಪರೋಕ್ಷ ತೆರಿಗೆ ಎಂದರೆ ನೀವು ಯಾವುದೇ ಪದಾರ್ಥವನ್ನು ಕೊಂಡರೂ ಅದರ ಮೇಲೆ ಜಿಎಸ್ಟಿ ಹಾಕಲಾಗುತ್ತದೆ. ಯಾರೆಲ್ಲಾ ನೇರವಾಗಿ ವೈಯಕ್ತಿಕ ತೆರಿಗೆಯನ್ನು ಕಟ್ಟಿಲ್ಲ ಅವರಿಗೆಲ್ಲಾ ಇದನ್ನು ವಿಧಿಸುವುದು ಸಾಧು. ಆದರೆ ಮಧ್ಯಮವರ್ಗ ಪ್ರಶ್ನಿಸದೆ ಇರುವ ಕಾರಣ ನಾವು ಸುಮ್ಮನೆ ಇದನ್ನು ಕೂಡ ಕಟ್ಟುತ್ತಿದ್ದೇವೆ. ಉದಾಹರಣೆಗೆ ನೀವು ಟಿವಿ, ವಾಷಿಂಗ್ ಮಷೀನ್ ಇತ್ಯಾದಿ ಕೊಂಡರೆ ಅದರ ಮೇಲೆ ಜಿಎಸ್ಟಿ ಕಟ್ಟಬೇಕು. ನೀವು ನೇರವಾಗಿ ತೆರಿಗೆ ಕಟ್ಟಿದ್ದರೂ ಇದನ್ನು ಕಟ್ಟಬೇಕು. ಅದೇ ನೇರವಾಗಿ ತೆರಿಗೆ ಕಟ್ಟದವನಿಗೆ ಇದು ಕೇವಲ ಒಂದು ತೆರಿಗೆ ಮಾತ್ರ ಹಾಕಿದಂತಾಯ್ತು. ಹೀಗಾಗಿ ನಿಜವಾದ ಮಧ್ಯಮವರ್ಗ ಎರಡು ಬಾರಿ ತೆರಿಗೆಯನ್ನು ಕಟ್ಟುತ್ತಿದೆ. ಇದು ಸರಕಾರಕ್ಕೆ ತಿಳಿಯುವುದಿಲ್ಲವೇ? ತಿಳಿಯುತ್ತದೆ. ಆದರೆ ಎಲ್ಲಿಯವರೆಗೆ ಆದಾಯ ಬರುತ್ತಿರುತ್ತದೆ. ಎಲ್ಲಿಯವರೆಗೆ ನಾವು ಪ್ರಶ್ನಿಸುವುದಿಲ್ಲ ಅಲ್ಲಿಯವರೆಗೆ ಅವರು ಇದನ್ನು ಮುಂದುವರಿಸುತ್ತಾರೆ.
ಸಣ್ಣ ಉಳಿತಾಯದ ಮೇಲೆ ಕೊಡಲಿ ಪ್ರಹಾರ ಮಾಡಿ, ಈಗ ಷೇರು ಮಾರುಕಟ್ಟೆಯ ಹೂಡಿಕೆಯ ಮೇಲಿನ ಲಾಭದಲ್ಲೂ ಹೆಚ್ಚಿನ ತೆರಿಗೆ ವಿಧಿಸಿರುವುದು ಸರಕಾರ ಚಿನ್ನದ ಮೊಟ್ಟೆ ಇಡುವ ಮಧ್ಯಮವರ್ಗದ ಕಟ್ಟು ಕುಯ್ಯಲು ಸರಕಾರ ಹೊರಟಂತೆ ಕಾಣುತ್ತದೆ. ಇದರ ಜೊತೆಗೆ ಹಳೆ ಟ್ಯಾಕ್ಸ್ ರಿಜಿಮ್ ಮತ್ತು ಹೊಸ ಟ್ಯಾಕ್ಸ್ ರಿಜಿಮ್ ಎನ್ನುವ ನಾಟಕ ಕೂಡ ನಡೆಯುತ್ತಿದೆ. ಇದೇನು ಈ ವರ್ಷದ ಹೊಸ ನಾಟಕವಲ್ಲ. ಇಲ್ಲಿಯೂ ಗಮನಿಸಬೇಕಾದ ಒಂದು ಅಂಶವಿದೆ. ಹಳೆ ಟ್ಯಾಕ್ಸ್ ರಿಜಿಮ್ನಲ್ಲಿ ಉಳಿತಾಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿತ್ತು. ಹೊಸ ರಿಜಿಮ್ನಲ್ಲಿ ಉಳಿಕೆಯ ಮಾತಿಲ್ಲ. ಕೇಂದ್ರ ಸರಕಾರ ಉಳಿತಾಯ ಮಾಡುವವರನ್ನು ಶಿಕ್ಷಿಸುತ್ತಿದೆ. ಎಲ್ಲರನ್ನೂ ವ್ಯಾಪಾರ ಅಥವಾ ವಹಿವಾಟಿನಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಬೇರೆ ದಾರಿಯಿಲ್ಲ ಎನ್ನುವ ಮಟ್ಟಕ್ಕೆ ದೂಡಿದೆ. ಒಮ್ಮೆ ಅಲ್ಲಿ ಹೂಡಿಕೆ ಮಾಡಿದ ನಂತರ ತೆರಿಗೆಯನ್ನು ಹೆಚ್ಚಿಸುತ್ತಿದೆ. ಉಳಿತಾಯ ಏಕೆ ಮಾಡಬೇಕು ಎಂದು ಮುಂದಿನ ಜನಾಂಗ ಕೇಳುವ ಮಟ್ಟಕ್ಕೆ ಬದುಕನ್ನು ಬದಲಾಯಿಸಿದೆ. ಸಾಲ ಮಾಡಿಯಾದರೂ ಖರ್ಚು ಮಾಡುತ್ತಿರಬೇಕು ಎನ್ನುವ ಅಮೆರಿಕನ್ ಎಕಾನಮಿ ಮಂತ್ರವನ್ನು ಕೇಂದ್ರ ಸರಕಾರ ಕಳೆದ 8 ವರ್ಷಗಳಲ್ಲಿ ಬಹಳ ಚೆನ್ನಾಗಿ ಜಾರಿಗೆ ತಂದಿದೆ. ಸಾಲ ಕೊಡಲಾದರೂ ಒಂದಷ್ಟು ಜನ ಉಳಿಸಬೇಕು ಎನ್ನುವ ಪರಿಜ್ಞಾನ ಅದೇಕೆ ನೀತಿಗಳನ್ನು ರಚಿಸುವರಿಗೆ ತಿಳಿದಿಲ್ಲ ಎನ್ನುವುದು ತಿಳಿಯುತ್ತಿಲ್ಲ.
ಹೋಗುವ ಮುನ್ನ: ಕಳೆದ 7/8 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಇಳಿಸಿದಾಗ ಎಚ್ಚರ ಮುಂದೊಂದು ದಿನ ಬ್ಯಾಂಕಿನಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾಗಬಹುದು ಎನ್ನುವ ಲೇಖನವನ್ನು ಬರೆದಿದ್ದೆ. ಇದೀಗ ಮತ್ತದೇ ಎಚ್ಚರಿಕೆಯ ಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ. ಎಚ್ಚರ ಚಿನ್ನದ ಕೋಳಿಮೊಟ್ಟೆ ಇಡುತ್ತಿರುವ ಮಧ್ಯಮವರ್ಗ ಎನ್ನುವ ಕೋಳಿಯ ಕತ್ತನ್ನು ಕುಯ್ಯಬೇಡಿ...
Advertisement