ಜಗತ್ತಿನ ಪ್ರಥಮ ಟ್ರಿಲಿಯನೇರ್ ಹುಟ್ಟಿಗೂ AI ಕಾರಣ? ಬಿಲಿಯನೇರ್ ಗಳಿಗೆ ಕಳವಳ ಏಕೆ? (ಹಣಕ್ಲಾಸು)

ಅಮೆರಿಕಾದ ನೆಬ್ರಸ್ಕಾ ರಾಜ್ಯ, ಒಮಾಹಾ ನಗರದಲ್ಲಿ ವಾರದ ಹಿಂದೆ ಬೆರ್ಕ್ಶೈರ್ ಹಾತ್ವೇ ಷೇರುದಾರರ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ 93 ರ ಹರಯದ ವಾರೆನ್ ಬಫೆಟ್ ಒಂದು ಮಾತನ್ನು ಆಡಿದ್ದಾರೆ (ಹಣಕ್ಲಾಸು-411)
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)online desk

ಅಮೆರಿಕಾದ ನೆಬ್ರಸ್ಕಾ ರಾಜ್ಯ, ಒಮಾಹಾ ನಗರದಲ್ಲಿ ವಾರದ ಹಿಂದೆ ಬರ್ಕ್‌ಷೈರ್‌ ಹಾಥ್‌ವೇ ಷೇರುದಾರರ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ 93ರ ಹರಯದ Warren Buffet ಒಂದು ಮಾತನ್ನು ಆಡಿದ್ದಾರೆ. ಅವರು 'ನಾವು ನ್ಯೂಕ್ಲಿಯರ್ ವೆಪನ್ (nuclear weapon) ತಯಾರಿಸಿದಾಗ ಬಾಟಲ್ನಲ್ಲಿ ಬಂಧಿಯಾಗಿದ್ದ ಜೀನಿಯನ್ನು ಹೊರಗೆ ಬಿಟ್ಟಂತೆ ಆಗಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (artificial intelligence) ಕೂಡ ಅದೇ ಆತಂಕದ ವಾತಾವರಣವನ್ನು ಸೃಷ್ಟಿಸಿದೆ' ಎಂದಿದ್ದಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸುವುದರಿಂದ ಬಹಳಷ್ಟು ಕೆಲಸಗಳು ಸುಲಭವಾಗುತ್ತದೆ ಎನ್ನುವುದು ಗೊತ್ತಿದೆ. ಅದೇ ಸಮಯದಲ್ಲಿ ಅದರಿಂದ ಆಗಬಹುದಾದ ಅನಾಹುತಗಳನ್ನು ನೆನೆದು ಭಯವೂ ಆಗುತ್ತದೆ ಎನ್ನುವ ಮಾತುಗಳನ್ನು ಹೂಡಿಕೆ ಲೋಕದ ಹಿರಿಯಜ್ಜ ಆಡಿದ್ದಾರೆ. ಈ ರೀತಿಯ ಹೊಸ ತಂತ್ರಜ್ಞಾನದ ಬಗ್ಗೆ ಬಫೆಟ್ ಈ ರೀತಿಯ ಮಾತನಾಡಿರುವುದು ಇದೆ ಮೊದಲೇನಲ್ಲ. ತಂತ್ರಜ್ಞಾನದ ಹೆಚ್ಚೆಚ್ಚು ಬಳಕೆಯನ್ನು ಬಫೆಟ್ ಒಪ್ಪುವುದಿಲ್ಲ. ಟೆಕ್ನಾಲಜಿ ಬೇಕು ಆದರೆ ಅದೇ ಎಲ್ಲವೂ ಆಗಬಾರದು ಎನ್ನುವುದು ಅವರ ಅಭಿಮತ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ಈ ರೀತಿ ಹೇಳಿ ಅವರು ಒಂಟಿಯಾಗಿ ಉಳಿದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಕೆಳೆದ ವರ್ಷ YALE ಸಿಇಓ ಸಮ್ಮಿಟ್ ನಲ್ಲಿ ಭಾಗಿಯಾಗಿದ್ದ 119 ಸಿಇಓ ಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಗ್ಗೆ ಅಭಿಪ್ರಾಯವನ್ನು ಕೇಳಲಾಗಿತ್ತು. ಅದರಲ್ಲಿ 42 ಪ್ರತಿಶತ ಸಿಇಓ ಗಳು ಈ AI ಮುಂದಿನ 5 ರಿಂದ 10 ವರ್ಷದಲ್ಲಿ ಡೆಸ್ಟ್ರಾಯರ್ ಆಫ್ ಹ್ಯೂಮನಿಟಿ ಎನ್ನುವ ಅಭಿಪ್ರಾಯವನ್ನು ನೀಡಿದ್ದಾರೆ. ಹೀಗೆ ಭಾಗವಹಿಸಿದ್ದ ಸಿಇಓ ಗಳು ಐಟಿ ಇಂಡಸ್ಟ್ರಿಯಿಂದ AI ತನಕ ಎಲ್ಲಾ ವಲಯಗಳಲ್ಲಿ ಕಾರ್ಯ ಮಾಡುತ್ತಿರುವವರು ಎನ್ನುವುದು ವಿಶೇಷ. ಹೇಗೆ ವೈದ್ಯರು ಯಾವುದಾದರೂ ಕಷ್ಟದ ಆಪರೇಷನ್ ಮಾಡುವಾಗ ರೋಗಿ ಮತ್ತು ರೋಗಿಗೆ ಸಂಬಂಧ ಪಟ್ಟವರಿಂದ ಆಕಸ್ಮಿಕವಾಗಿ ಹೆಚ್ಚು ಕಡಿಮೆಯಾಗಿ ಪ್ರಾಣಾಪಾಯವಾದರೆ ಅದಕ್ಕೆ ವೈದ್ಯರು ಅಥವಾ ಆಸ್ಪತ್ರೆ ಜವಾಬ್ದಾರಿಯಲ್ಲ ಎನ್ನುವ ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ, ಥೇಟ್ ಹಾಗೆ ಹಲವಾರು AI ಸಂಸ್ಥೆಗಳು ತಮ್ಮ ಬಳಿ ಕೆಲಸದಲ್ಲಿ ಕೈ ಜೋಡಿಸಿದ ಎಲ್ಲರ ಬಳಿ, ಅಂದರೆ ಜಾಹಿರಾತಿಗೆ ಮಾಡಲ್ ಆಗಿ ಬಂದಿರುವ ಸೆಲೆಬ್ರೆಟಿಯಿಂದ ಕೋಡ್ ಬರೆಯುವವರೆಗೆ, ಆಲ್ಮೋಸ್ಟ್ ಎಲ್ಲರೊಂದಿಗೆ ಇದೆ ತರಹದ ಕಾಂಟ್ರಾಕ್ಟ್ ಗೆ ಸಹಿ ಹಾಕಿಸಿಕೊಂಡಿದೆ. ಅದರ ಸಾರ ಇಷ್ಟೇ , ಈ ಕೆಲಸದ ಕಾರಣ ಮುಂದೊಮ್ಮೆ ಮನುಷ್ಯ ಈ ಭೂಮಂಡಲದಿಂದ ಅಳಿದು ಹೋಗುವ ಸಾಧ್ಯತೆಯಿದೆ ಎನ್ನುವುದು.

ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಜಾಗತಿಕವಾಗಿ 40 ಪ್ರತಿಶತ ಕೆಲಸಗಳನ್ನು ಇಲ್ಲವಾಗಿಸುವ ಎಲ್ಲಾ ಶಕ್ತಿ ಮತ್ತು ಕ್ಷಮತೆಯನ್ನು ಹೊಂದಿವೆ. ಮೆಡಿಸಿನ್, ಫೈನಾನ್ಸ್, ಮ್ಯೂಸಿಕ್ ಹೀಗೆ ಎಲ್ಲಾ ವಲಯದಲ್ಲೂ ಇದು ತನ್ನ ಛಾಪನ್ನು ಒತ್ತಲು ಸಿದ್ಧವಿದೆ. ಕಳೆದ ಹನ್ನೆರಡು ತಿಂಗಳಲ್ಲಿ AI ಗೆ ಸಂಬಂಧಿಸಿದ ಸಂಸ್ಥೆಗಳ ಷೇರು ಮೌಲ್ಯ ಆಗಸಕ್ಕೆ ಜಿಗಿಯುತ್ತಿವೆ. ಕೆಲವು ಸಂಸ್ಥೆಗಳ ಮೌಲ್ಯ 200 ಪ್ರತಿಶತ ಹೆಚ್ಚಳವನ್ನು ದಾಖಲಿಸಿವೆ.

(ಸಾಂಕೇತಿಕ ಚಿತ್ರ)
ಈ ಆರು ಗುಣಗಳು ಇದ್ದರೆ ಶ್ರೀಮಂತರಾಗುವುದು ಕಷ್ಟವೇನಲ್ಲ! (ಹಣಕ್ಲಾಸು)

ಜೆಪಿ ಮಾರ್ಗನ್ (JP morgan) ಸಂಸ್ಥೆಯ ಸಿಇಓ ಹೈಮೆ ದಿಮೊನ್ ಕೂಡ ಬಫೆಟ್ ಅವರ ಮಾತನ್ನು ಅನುಮೋದಿಸುವ ರೀತಿಯಲ್ಲಿ ಹೇಳಿದ್ದಾರೆ. ನೂರಾರು ವರ್ಷದಿಂದ ಇದ್ದ ಪ್ರಿಟಿಂಗ್, ಸ್ಟೀಮ್ ಎಂಜಿನ್, ಎಲೆಕ್ರಿಸಿಟಿ ಇತ್ತೀಚಿನ ಕಂಪ್ಯೂಟಿಂಗ್, ಇಂಟರ್ನೆಟ್ ಎಲ್ಲವೂ ಬದಲಾಗಿ ಹೋಗಲಿದೆ. ಇವೆ ಬದಲಾದ ಮೇಲೆ ಇನ್ನ್ಯಾವುದು ಉಳಿದೀತು? AI ಗೆ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಇದರಿಂದ ಆಗುವ ಪರಿಣಾಮ ಅಡ್ಡಪರಿಣಾಮ ಮತ್ತೂ ಹಾನಿಕಾರವಾಗಿರಲಿದೆ ಎನ್ನುತ್ತಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮನುಷ್ಯರು ಹತ್ತಾರು ದಿನ ಮಾಡುವ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವುದಲ್ಲದೆ ಮನುಷ್ಯರು ಮಾಡುವ ತಪ್ಪುಗಳನ್ನು ಮಾಡುವುದಿಲ್ಲ. AI ಆಯ್ದ ಕೆಲವು ವಲಯಗಳಲ್ಲಿ ಮಾತ್ರ ಮಾಡಿಕೊಂಡರೆ ಅದು ನಿಜಕ್ಕೂ ಲಾಭದಾಯಕ. ಅಂದರೆ ಅಷ್ಟೇನೂ ಬಲಿಷ್ಠವಲ್ಲದ AI ಬಳಕೆಯಿಂದ ಯಾವುದೇ ತೊಂದರೆಯಿಲ್ಲ. ಆದರೆ ಈಗ ನಾವು ಬಲಿಷ್ಠ AI ಮತ್ತು ಮನಷ್ಯನ ಚಿಂತನೆಯನ್ನು, ಅವನು ನೀಡಿದ ಸೂಚನೆಯನ್ನು ಮೀರಿ ಚಿಂತಿಸುವ AI ತಯಾರಿಕೆಯಲ್ಲಿ ಮತ್ತು ಬಳಕೆಯಲ್ಲಿ ತೊಡಗಿದ್ದೇವೆ. ಅದು ಯಾವ ರೀತಿಯ ಬದಲಾವಣೆಯನ್ನು ಮಾಡಬಹುದು ಎನ್ನುವುದು ಇಂದಿಗೆ ಅತಿದೊಡ್ಡ ಪ್ರಶ್ನೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಉಪಯೋಗಿಸುತ್ತಿರುವ AI ಗಳಿಂದ ಈಗಾಗಲೇ ಕೆಲಸ ಕಡಿತ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ. ಹ್ಯಾಕರಗಳ ಸಂಖ್ಯೆ ಹೆಚ್ಚಾಗಿದೆ, ನಿತ್ಯವೂ ಡೀಪ್ ಫೇಕ್ ಎನ್ನುವ ತಂತ್ರಜ್ಞಾನ ಬಳಸಿ ಜನರನ್ನು ಸುಲಿಯುವ, ಅವರ ಪ್ರೈವೆಸಿಗೆ ಧಕ್ಕೆ ತರುವ ಕೆಲಸಗಳಾಗುತ್ತಿವೆ. ಅಭಿವೃದ್ಧಿ, ಇಂಪ್ರೂವ್ಮೆಂಟ್ ಎನ್ನುವುದು ಒಳಿತಿಗೆ, ಮನುಷ್ಯನ ಬದುಕಿನಲ್ಲಿ ಇನ್ನಷ್ಟು ನೆಮ್ಮದಿ ತರಲು ಆದರೆ ಅದಕ್ಕೊಂದು ಘನತೆ ಮತ್ತು ಅರ್ಥವಿರುತ್ತದೆ. ಈ ರೀತಿಯ ಅಭಿವೃದ್ದಿಯಿಂದ ಅವನತಿಯೇ ಹೊರತು ಅಭಿವೃದ್ಧಿಯಾಗುವುದಿಲ್ಲ.

2023ರಲ್ಲಿ ಜಾಗತಿಕವಾಗಿ 200 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ಹೊಂದಿರುವ ಈ ವಲಯ 2030 ರ ವೇಳೆಗೆ ಹತ್ತಿರ ಹತ್ತಿರ ಎರಡು ಟ್ರಿಲಿಯನ್ ಮುಟ್ಟಲಿದೆ ಎನ್ನುತ್ತದೆ ಅಂಕಿ-ಅಂಶ. ಹಾಗೆ ಭಾರತದಲ್ಲಿ 2027 ರ ವೇಳೆಗೆ 17ಬಿಲಿಯನ್ ವಹಿವಾಟು ಹೊಂದಲಿದೆ, ಜೊತೆಗೆ ಪ್ರತಿ ವರ್ಷ 35 ಪ್ರತಿಶತ ಹೆಚ್ಚಳವನ್ನು ಕಾಣಲಿದೆ ಎನ್ನುವುದು ಕೇವಲ ಅಂದಾಜು ಸಂಖ್ಯೆ. AI ಬಳಕೆಯ ವೇಗ ನೋಡಿದರೆ ಈ ಸಂಖ್ಯೆಗಳನ್ನು ಬೇಗ ದಾಟುವ ಸಾಧ್ಯತೆಯನ್ನು ಅಲ್ಲಗಳೆಯಲು ಬಾರದು.

(ಸಾಂಕೇತಿಕ ಚಿತ್ರ)
ಭಾರತಕ್ಕೆ ಬಾರದೆ ಎಲಾನ್ ಮಸ್ಕ್ ನೀಡುತ್ತಿರುವ ಸಂದೇಶವೇನು?

ಆರ್ಟಿಫಿಸಿಷಿಯಲ್ ಇಂಟೆಲಿಜೆನ್ಸಿ ತನಗೆ ವಹಿಸಿದ ಕೆಲಸದ ಜೊತೆಗೆ ಸಮಯ ಮತ್ತು ಸಂದರ್ಭವನ್ನು ಅರಿತು ಅದಕ್ಕೆ ತಕ್ಕಂತೆ ಕೂಡ ಕಾರ್ಯ ನಿರ್ವಹಿಸುವ, ಲಾಜಿಕಲ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆಯನ್ನು ಹೊಂದಲಿವೆ. ಇದಕ್ಕೆ ಬೇಕಾಗುವುದು ಜಗತ್ತಿನ ಜನಸಂಖ್ಯೆಯ ಬೆರಳೆಣಿಕೆಯ ಜನ ಮಾತ್ರ. ಉಳಿದವರಿಗೆ ಕೆಲಸವೇ ಇರುವುದಿಲ್ಲ. ಇದು ಸಾಧ್ಯವೇ? ಖಂಡಿತ ಇದು ಸಾಧ್ಯ ಆದರೆ ಪ್ರಶ್ನೆ ಇರುವುದು ಇದು ಸಾಧುವೆ? ಇವತ್ತಿನ ವರ್ಲ್ಡ್ ಆರ್ಡರ್ ಧೂಳಿಪಟ ಮಾಡುವುದು ಕ್ಷಣದ ಕೆಲಸ ಆದರೆ ಅದರಿಂದ ಉಂಟಾಗುವ ಪರಿಣಾಮವನ್ನು ಹೇಗೆ ನಿಭಾಯಿಸುವುದು. ಇಂದಿನ ವ್ಯವಸ್ಥೆಗೆ ಪರ್ಯಾಯ ಕಲ್ಪಿಸದೆ ಹೊಸ ವ್ಯವಸ್ಥೆ ಸೃಷ್ಟಿಸಿದರೆ ಅದರಿಂದ ಅಪಾಯವೇ ಹೆಚ್ಚು. ಷೇರು ಮಾರುಕಟ್ಟೆಯಲ್ಲಿನ ನಿಮ್ಮ ಹೂಡಿಕೆ ಸದ್ದಿಲ್ಲದೇ ಮಂಗಮಾಯವಾಗಬಹದು, ಬ್ಯಾಂಕಿನಲ್ಲಿಟ್ಟ ಹಣ ಆವಿಯಾಗಿ ಹೋಗಬಹುದು. ಹೀಗೆಲ್ಲ ಆಗುವುದಕ್ಕೆ ಬಹಳಷ್ಟು ಸಮಯವಿದೆ ಎನ್ನುವ ನಮ್ಮ ಭಾವನೆ ಅವರ ಬಂಡವಾಳ. ಸದ್ದಿಲ್ಲದೇ ನಮ್ಮ ಮೇಲಿನ ಹೆಚ್ಚಿನ ನಿಯಂತ್ರಣ ಲಾಗೂ ಆಗುತ್ತಿದೆ. ಚೀನಾ, ಅಮೇರಿಕಾದಲ್ಲಿ ಫೇಸ್ ರೆಕಗ್ನಿಷನ್ ಎನ್ನುವ ಮಹಾಮಾರಿ ಟೆಕ್ನಾಲಜಿ ಆಗಲೇ ಎಲ್ಲರನ್ನೂ ಹಿಡಿತಕ್ಕೆ ತೆಗೆದುಕೊಂಡಿದೆ. ಚೀನಾ ಅಮೇರಿಕಾ ದೇಶಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ನಿರೀಶ್ವರ ವಾದವನ್ನ ಯುವಜನತೆಯಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಕೈಲಿರುವ ಕಲಿಕೆಯ ಟ್ಯಾಬ್ ಮೂಲಕ ಮಕ್ಕಳೇನು ಕಲಿಯಬೇಕು? ಏನು ಕಲಿಯುತ್ತಿದ್ದಾರೆ ಎನ್ನುವುದನ್ನ ನಿಯಂತ್ರಣ ಮಾಡಲಾಗುತ್ತಿದೆ.

ಕೊನೆಮಾತು: ಟೆಕ್ನಾಲಜಿ ಜಗತ್ತಿನಲ್ಲಿ ಅತಿ ದೊಡ್ಡ ಶ್ರೀಮಂತರನ್ನು ಸೃಷ್ಟಿಸಿತು. ಜಾಗತಿಕವಾಗಿ ಕಂಡು ಕೇಳಿರದ ಮಟ್ಟಿನ ಹಣವನ್ನು ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಶೇಖರಿಸಲು ತಂತ್ರಜ್ಞಾನ ಸಹಾಯ ಮಾಡಿತು. ಇದರಿಂದ ಸಾಮಾನ್ಯ ಜನರಿಗೆ ಲಾಭವಾಗಿಲ್ಲವೇ ಎನ್ನುವ ಪ್ರಶ್ನೆ ಅಪ್ರಸ್ತುತ. ಯಾವಾಗಲೂ ಸಾಮಾನ್ಯನಿಗೆ ಕೊಡುವುದು ಅಲ್ಪ, ಅವರಿಂದ ದೋಚುವುದು ಅಪಾರ. ಬಿಲಿಯನೇರ್ಗಳನ್ನು ಸೃಷ್ಟಿಸಿದ ತಂತ್ರಜ್ಞಾನ ಇದೀಗ ಇನ್ನೊಂದು ಮಟ್ಟಕ್ಕೆ ಏರಲಿದೆ ಜಗತ್ತು ಇಲ್ಲಿಯವರೆಗೆ ಕಾಣದ ಪ್ರಥಮ ಟ್ರಿಲಿಯನೇರ್ ವ್ಯಕ್ತಿ AI ಸಂಸ್ಥೆಯ ಅಧಿಪತ್ಯವನ್ನು ಹೊಂದಿರುವನೇ ಆಗಿರುತ್ತಾನೆ ಎನ್ನುವುದು ಅಂದಾಜಿಸುವುದು ಕಷ್ಟವೇನಲ್ಲ. ಆದರೆ ಕುಳಿತ ರಂಬೆಯನ್ನೇ ಕಡಿಯುವ ಬುದ್ದಿವಂತರು ನಾವು ಹೀಗಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಸೃಷ್ಟಿಸಿದ್ದೇವೆ ಎನ್ನುವುದು ಕೂಡ ಕಹಿಸತ್ಯ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com