
ಹೆಣ್ಣು ಮಕ್ಕಳಿಗೆ ತಿಂಗಳಿಗೊಮ್ಮ ಮುಟ್ಟಿನ ಸಮಯ ಸವಾಲಿನ ದಿನಗಳು. ಈ ಸಮಯದಲ್ಲಿ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲುತ್ತಾರೆ. ಮುಟ್ಟಾಗುವ ಮೂರುನಾಲ್ಕು ದಿನಗಳ ಮೊದಲು ಆರಂಭವಾಗುವ ದೇಹದಲ್ಲಿನ ಬದಲಾವಣೆಗಳು ಮುಟ್ಟಾದ ಒಂದು ವಾರದವರೆಗೂ ಅವರು ಬಳಲುವಂತೆ ಮಾಡುತ್ತದೆ.
ಡಿಸ್ಮೆನೊರಿಯಾ ಮುಟ್ಟಿನ ನೋವಿನ ಅವಧಿಯನ್ನು ವಿವರಿಸಲು ಬಳಸುವ ವೈದ್ಯಕೀಯ ಪದವಾಗಿದೆ. ಇದು ಸಂತಾನೋತ್ಪತ್ತಿ ವಯಸ್ಸಿನ ಅನೇಕ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸ್ಥಿತಿಯಾಗಿದೆ, ವಿವಿಧ ಹಂತಗಳ ತೀವ್ರತೆಯೊಂದಿಗೆ ಈ ಅಸ್ವಸ್ಥತೆಯು ಸಾಮಾನ್ಯವಾಗಿ ಮುಟ್ಟಿನ ಮೊದಲು ಅಥವಾ ಸಮಯದಲ್ಲಿ ಸಂಭವಿಸುತ್ತದೆ. ಕೆಲವರಿಗೆ ಇದು ದೈನಂದಿನ ಚಟುವಟಿಕೆಗಳು ಮತ್ತು ಜೀವನದ ಗುಣಮಟ್ಟಕ್ಕೆ ಅಡ್ಡಿಪಡಿಸಬಹುದು. ಆದ್ದರಿಂದ ಡಿಸ್ಮೆನೊರಿಯಾವನ್ನು ಜಾಗರೂಕತೆಯಿಂದ ನಿಭಾಯಿಸಬೇಕು.
ಡಿಸ್ಮೆನೊರಿಯಾದಲ್ಲಿ ಎರಡು ವಿಧಗಳಿವೆ: ಪ್ರಾಥಮಿಕ (ಪ್ರೈಮರಿ) ಡಿಸ್ಮೆನೊರಿಯಾ ಮತ್ತು ಮಾಧ್ಯಮಿಕ (ಸೆಕಂಡರಿ) ಡಿಸ್ಮೆನೊರಿಯಾ. ಪ್ರಾಥಮಿಕ ಡಿಸ್ಮೆನೊರಿಯಾ ಸ್ಥಿತಿಯಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುತ್ತದೆ. ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಸ್ಥಿತಿಯೊಂದಿಗೆ ಸೆಕಂಡರಿ ಡಿಸ್ಮೆನೊರಿಯಾವು ಹೆಚ್ಚಾಗಿ ಸಂಬಂಧಿಸಿದೆ. ಇದರಿಂದ ಉರಿಯೂತ, ಅಸಹಜ ಅಂಗಾಂಶ ಬೆಳವಣಿಗೆ ಅಥವಾ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಅಸಹಜತೆಗಳು ಉಂಟಾಗಬಹುದು. ಹೀಗಾಗಿ ಮುಟ್ಟಿನ ಸಮಯದಲ್ಲಿ ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ.
ಡಿಸ್ಮೆನೊರಿಯಾ ಸಾಮಾನ್ಯ ಲಕ್ಷಣಗಳು
ನೋವಿನ ಸೆಳೆತ: ಹೊಟ್ಟೆಯ ಕೆಳಭಾಗದಲ್ಲಿ ನೋವಿನ ಸೆಳೆತವು ಡಿಸ್ಮೆನೊರಿಯಾದ ವಿಶಿಷ್ಟ ಲಕ್ಷಣವಾಗಿದೆ. ನೋವು ಸೌಮ್ಯ ಅಥವಾ ತೀವ್ರವಾಗಿರಬಹುದು ಮತ್ತು ಕೆಳ ಬೆನ್ನು ಮತ್ತು ತೊಡೆಗಳಿಗೆ ಹರಡಬಹುದು.
ವಾಕರಿಕೆ ಮತ್ತು ವಾಂತಿ: ಕೆಲವರಿಗೆ ಮುಟ್ಟಿನ ಸಮಯದಲ್ಲಿ ನೋವು ಹೆಚ್ಚಾಗಿದ್ದರೆ ವಾಕರಿಕೆ, ವಾಂತಿ ಅಥವಾ ತಲೆತಿರುಗುವಿಕೆ ಕಾಣಿಸಿಕೊಳ್ಳಬಹುದು.
ತಲೆನೋವು: ಮುಟ್ಟಿಗೆ ಸಂಬAಧಿಸಿದ ಹಾರ್ಮೋನುಗಳ ಬದಲಾವಣೆಗಳು ಡಿಸ್ಮೆನೊರಿಯಾದ ತಲೆನೋವು ಅಥವಾ ಮೈಗ್ರೇನನ್ನು ಪ್ರಚೋದಿಸಬಹುದು.
ಆಯಾಸ: ಮುಟ್ಟಿನ ಸಮಯದಲ್ಲಿ ದೈಹಿಕ ಅಸ್ವಸ್ಥತೆ ಮತ್ತು ಹಾರ್ಮೋನಿನ ಏರುಪೇರುಗಳು ಆಯಾಸ ಮತ್ತು ಆಲಸ್ಯದ ಭಾವನೆಗಳಿಗೆ ಕಾರಣವಾಗಬಹುದು.
ಅತಿಸಾರ ಅಥವಾ ಮಲಬದ್ಧತೆ: ಅತಿಸಾರ ಅಥವಾ ಮಲಬದ್ಧತೆಯಂತಹ ಜಠರಗರುಳಿನ ಲಕ್ಷಣಗಳು ಕೆಲವು ಸಂದರ್ಭಗಳಲ್ಲಿ ಮುಟ್ಟಿನ ನೋವಿನ ಸೆಳೆತದೊಂದಿಗೆ ಏಕಕಾಲದಲ್ಲಿ ಸಂಭವಿಸಬಹುದು.
ಭಾವನಾತ್ಮಕ ಬದಲಾವಣೆಗಳು: ಮುಟ್ಟಿನ ಸಮಯದಲ್ಲಿ ಅದರಲ್ಲಿಯೂ ವಿಶೇಷವಾಗಿ ತೀವ್ರವಾದ ಡಿಸ್ಮೆನೋರಿಯಾ ಹೊಂದಿರುವವರಲ್ಲಿ ಮಾನಸಿಕವಾಗಿ ಭಾವನಾತ್ಮಕ ಬದಲಾವಣೆಗಳು ಮತ್ತು ಕಿರಿಕಿರಿ ಉಂಟಾಗುವುದು ಸಾಮಾನ್ಯವಾಗಿದೆ.
ಡಿಸ್ಮೆನೊರಿಯಾ ನಿರ್ವಹಣೆ
ಡಿಸ್ಮೆನೊರಿಯಾವನ್ನು ಸೂಕ್ತವಾಗಿ ನಿರ್ವಹಿಸುವುದು ಒಂದು ಸವಾಲಾಗಿದ್ದರೂ, ಹಲವಾರು ರೀತಿಗಳಲ್ಲಿ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.
ನೋವು ನಿವಾರಕ ಔಷಧಿಗಳು: ತಜ್ಞವೈದ್ಯರು ನೀಡುವ ನೋವು ನಿವಾರಕ ಔಷಧಿಗಳು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಜನನ ಹಾರ್ಮೋನ್ ನಿಯಂತ್ರಣ: ಗರ್ಭನಿರೋಧಕ ಮಾತ್ರೆಗಳು, ಪ್ಯಾಚ್‌ಗಳು ಅಥವಾ ಗರ್ಭಾಶಯದ ಒಳಗಿನ ಸಾಧನಗಳು ಸೇರಿದಂತೆ ಹಾರ್ಮೋನ್ ಗರ್ಭನಿರೋಧಕಗಳು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅಂಡೋತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ಡಿಸ್ಮೆನೊರಿಯಾದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಹೀಟ್ ಥೆರಪಿ: ಹೀಟಿಂಗ್ ಪ್ಯಾಡ್ ಅಥವಾ ಬೆಚ್ಚಗಿನ ಸ್ನಾನದ ಮೂಲಕ ಹೊಟ್ಟೆಯ ಕೆಳಭಾಗಕ್ಕೆ ಶಾಖವನ್ನು ಕೊಡುವುದರಿಂದ ಗರ್ಭಾಶಯದ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಮತ್ತು ಮುಟ್ಟಿನ ನೋವಿನ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶಾಖ ಚಿಕಿತ್ಸೆಯು ನೋವು ನಿರ್ವಹಣೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪೂರಕ ವಿಧಾನವಾಗಿದೆ.
ನಿಯಮಿತ ವ್ಯಾಯಾಮ: ವಾಕಿಂಗ್, ಈಜು ಅಥವಾ ಯೋಗದಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತೇಜಿಸುವ ಮೂಲಕ ಮತ್ತು ನೈಸರ್ಗಿಕ ನೋವು ನಿವಾರಕಗಳಾದ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ.
ಆಹಾರ ಪದ್ಥತಿಯಲ್ಲಿ ಮಾರ್ಪಾಡುಗಳು: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಹಾರ್ಮೋನುಗಳ ಸಮತೋಲನಕ್ಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದ ಕೆಫೀನ್, ಆಲ್ಕೋಹಾಲ್ ಮತ್ತು ಸಕ್ಕರೆ ಆಹಾರಗಳನ್ನು ಮಿತವಾಗಿ ಸೇವಿಸುವುದು ಸಹ ಪ್ರಯೋಜನಕಾರಿಯಾಗಿದೆ. ನೋವು ಕಾಣಿಸಿಕೊಂಡಾಗ ಒಂದು ಲೋಟ ನೀರಿಗೆ ಒಂದು ಚಮಚ ಧನಿಯಾ (ಕೊತ್ತಂಬರಿ ಬೀಜ), ಅರ್ಧ ಚಮಚ ಜೀರಿಗೆ ಮತ್ತು ಬೆಲ್ಲವನ್ನು ಹಾಕಿ ಕುದಿಸಿ ಸೋಸಿ ಕಷಾಯ ಮಾಡಿಕೊಂಡು ಕುಡಿದರೆ ಉತ್ತಮ. ಇದರಿಂದ ನೋವು ಶಮನವಾಗುತ್ತದೆ.
ಒತ್ತಡ ನಿರ್ವಹಣೆ: ಆಳವಾದ ಉಸಿರಾಟ, ಪ್ರಾಣಾಯಾಮ, ಧ್ಯಾನ ಅಥವಾ ಸಾವಧಾನತೆಯಂತಹ ತಂತ್ರಗಳನ್ನು ಅಭ್ಯಾಸ ಮಾಡುವುದು ಒತ್ತಡವನ್ನು ನಿವಾರಿಸಲು ಮತ್ತು ಮಾನಸಿಕ ಕಿರಿಕಿರಿಯನ್ನು ಪರಿಹರಿಸಲು ಸಹಾಯ ಮಾಡುತ್ತವೆ. ಈ ಸಮಯದಲ್ಲಿ ಮನೆಯಲ್ಲಿದ್ದವರು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಕಚೇರಿಯಲ್ಲಿ ಕೆಲಸ ಮಾಡುವವರು ಮಹಿಳೆಯರಿಗೆ ವಿಶ್ರಾಂತಿಗಾಗಿಯೇ ಮೀಸಲಾದ ಕೊಠಡಿಯಲ್ಲಿ ನೋವುಂಟಾದಾಗ ವಿಶ್ರಾಂತಿ ಪಡೆಯಬೇಕು.
ಒಟ್ಟಾರೆ ಹೇಳುವುದಾದರೆ ಡಿಸ್ಮೆನೊರಿಯಾ ಮುಟ್ಟಿನ ದಿನಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಮಾನ್ಯ ಆದರೆ ಸವಾಲಿನ ಸ್ಥಿತಿಯಾಗಿದೆ. ಇದರ ಲಕ್ಷಣಗಳನ್ನು ಕಂಡುಕೊಂಡು ಮತ್ತು ನಿರ್ವಹಣಾ ತಂತ್ರಗಳನ್ನು ಪಾಲಿಸುವ ಮೂಲಕ ಈ ಸವಾಲನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
Advertisement