ಮೋದಿ ಸರ್ಕಾರದ ವಿರುದ್ಧ ಗ್ರಾಮೀಣ ಭಾರತದಲ್ಲಿ ಆಕ್ರೋಶವಿದೆಯಾ? Prashant Kishor ಹೇಳಿಕೆಯ ಬೆನ್ನೇರಿ… (ತೆರೆದ ಕಿಟಕಿ)

ಈಗಿರುವ ಪ್ರಶ್ನೆ- ಹೌದೇ? ಭಾರತದಲ್ಲಿ ಹೀಗೊಂದು ಗ್ರಾಮೀಣ ಸಂಕಟ ತಲೆಎತ್ತಿದೆಯೇ? ಕೇಂದ್ರದಲ್ಲಿರುವ ಸರ್ಕಾರವೊಂದನ್ನು ಬದಲಿಸಬಹುದಾದ ಮಟ್ಟದಲ್ಲಿ ಗ್ರಾಮೀಣ ಜನರ ಬದುಕು ಮೋದಿ ಸರ್ಕಾರದ ದಶಕದವಧಿಯ ಆಡಳಿತದಲ್ಲಿ ಕುಲಗೆಟ್ಟುಬಿಟ್ಟಿದೆಯೇ?
Prashant Kishor
ಪ್ರಶಾಂತ ಕಿಶೋರ್ online desk
Updated on

ಒಂದು ಕಾಲದ ವೃತ್ತಿಪರ ಚುನಾವಣಾ ಸಂಘಟಕ ಹಾಗೂ ಈಗಿನ ರಾಜಕೀಯ ಕಾರ್ಯಕರ್ತ ಪ್ರಶಾಂತ ಕಿಶೋರ್ (Prashant Kishor) ಅವರ ಸಂದರ್ಶನಗಳು ಕಳೆದೊಂದು ವಾರದಲ್ಲಿ ವ್ಯಾಪಕವಾಗಿ ಬಿತ್ತರವಾಗಿವೆ. ಇಂಗ್ಲಿಷ್-ಹಿಂದಿ ಸುದ್ದಿವಾಹಿನಿಗಳು ಹಾಗೂ ಹಲವು ಯೂಟ್ಯೂಬ್ ವಾಹಿನಿಗಳಲ್ಲಿ ಪ್ರಶಾಂತ ಕಿಶೋರ್ ಅವರ ಸಂಭಾವ್ಯ ಚುನಾವಣೆ ಫಲಿತಾಂಶದ ಕುರಿತ ಮಾತುಗಳದ್ದೇ ಭರಾಟೆ. 

ಹಾಗೆ ನೋಡಿದರೆ ಅವರ ವಿಶ್ಲೇಷಣೆಗಳಲ್ಲಿ ವಿರೋಧಾಭಾಸ ಢಾಳಾಗಿದೆ. ಆದರೇನಂತೆ, ಅವರ ಮಾತುಗಳು ವಿಪರೀತ ಚರ್ಚೆಯಲ್ಲಿವೆ. ಹಲವು ವಾಹಿನಿಗಳಲ್ಲಿ ತಾಸುಗಟ್ಟಲೇ ವಿಸ್ತರಿಸಿಕೊಂಡಿರುವ ಪ್ರಶಾಂತ ಕಿಶೋರ್ ಮಾತಿನ ಸಾರಸಂಗ್ರಹ ಹೇಳುವುದಾದರೆ- “ಈ ಬಾರಿ ಮೋದಿ ಜನಪ್ರಿಯತೆ ಕುಗ್ಗಿದೆ. ಹತ್ತು ವರ್ಷಗಳ ನಂತರ ನರೇಂದ್ರ ಮೋದಿಯವರ ಬಗ್ಗೆ ಜನರಲ್ಲಿ ಅಸಮಾಧಾನ ಶುರುವಾಗಿದೆ. ಆದರೆ ಇವನ್ನೆಲ್ಲ ಪ್ರತಿಪಕ್ಷಗಳು ಸಮರ್ಥವಾಗಿ ಉಪಯೋಗಿಸಿಕೊಂಡಿಲ್ಲವಾದ್ದರಿಂದ ಹಿಂದಿನ ಬಾರಿಗಿಂತ ತುಸು ಹೆಚ್ಚು ಸ್ಥಾನಗಳೊಂದಿಗೆ ಎನ್ ಡಿ ಎ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ.”

ಮೋದಿ ಜನಪ್ರಿಯತೆ ಕುಗ್ಗಿದೆ ಎಂದಾದರೆ 2019ರ ಚುನಾವಣೆಯ ಬಹುಮತದ ಸಂಖ್ಯೆಗಳನ್ನು ಈ ಬಾರಿ ಬಿಜೆಪಿ- ಎನ್ ಡಿ ಎ ಉತ್ತಮಪಡಿಸಿಕೊಳ್ಳುವುದಾದರೂ ಹೇಗೆ, ಈ ಹೇಳಿಕೆಯೇ ವಿರೋಧಾಭಾಸವಲ್ಲವೇ ಎಂಬರ್ಥದ ಪ್ರಶ್ನೆಗಳು ಬಂದಾಗ ಪ್ರಶಾಂತ ಕಿಶೋರ್ ಹೇಳುತ್ತಿರುವ ಉತ್ತರ- ಮೋದಿ ವಿರುದ್ಧ ಅಸಮಾಧಾನವಿದೆ, ಆದರೆ ಅವೆಲ್ಲ ಮೋದಿ ವಿರುದ್ಧದ ಮತವಾಗಬೇಕಾದರೆ ಪ್ರತಿಪಕ್ಷಗಳು ಸರಿಯಾಗಿ ಕೆಲಸ ಮಾಡಬೇಕಲ್ಲ…ಅದಾಗಿಲ್ಲ ಅನ್ನೋದು. ಮುಂದುವರಿದು ಪ್ರಶಾಂತ್ ಕಿಶೋರ್ ಕಟ್ಟಿಕೊಡುವ ವ್ಯಾಖ್ಯಾನ ಎಂದರೆ, ಗ್ರಾಮೀಣ ಭಾರತದಲ್ಲೊಂದು ಆಕ್ರೋಶ ಮಡುಗಟ್ಟುತ್ತಿದೆ. ಅದಕ್ಕೊಂದು ಚಾಲನಾಶಕ್ತಿಯನ್ನು ಕೊಟ್ಟರೆ ಮುಂದಿನ ದಿನಗಳಲ್ಲಾದರೂ ಮೋದಿಯವರನ್ನು ಸೋಲಿಸಬಹುದಾದ ಮಾರ್ಗ ತೆರೆದುಕೊಳ್ಳುತ್ತದೆ ಎನ್ನೋದು. ನೋಟು ಅಮಾನ್ಯೀಕರಣದ ನಡೆಯಿಂದಲೇ ಈ Rural Distress ಶುರುವಾಯಿತೆಂಬ ಪ್ರತಿಪಾದನೆ ಅವರದ್ದು.

Prashant Kishor
ಭವಿಷ್ಯದಲ್ಲಿ ಹೇಗಿರಲಿದೆ ಭಾರತದ ಕೃಷಿ-ತಂತ್ರಜ್ಞಾನದ ಜುಗಲ್ಬಂದಿ? Smart Tractor ನವೋದ್ದಿಮೆ ಕೊಡುತ್ತಿದೆ ಕ್ಲೂ! (ತೆರೆದ ಕಿಟಕಿ)

ಈಗಿರುವ ಪ್ರಶ್ನೆ- ಹೌದೇ? ಭಾರತದಲ್ಲಿ ಹೀಗೊಂದು ಗ್ರಾಮೀಣ ಸಂಕಟ ತಲೆಎತ್ತಿದೆಯೇ? ಕೇಂದ್ರದಲ್ಲಿರುವ ಸರ್ಕಾರವೊಂದನ್ನು ಬದಲಿಸಬಹುದಾದ ಮಟ್ಟದಲ್ಲಿ ಗ್ರಾಮೀಣ ಜನರ ಬದುಕು ಮೋದಿ ಸರ್ಕಾರದ ದಶಕದವಧಿಯ ಆಡಳಿತದಲ್ಲಿ ಕುಲಗೆಟ್ಟುಬಿಟ್ಟಿದೆಯೇ? ಗ್ರಾಮೀಣ ಭಾರತದ ಬಗ್ಗೆ ರಾಜಕಾರಣಿಗಳ ಮಾತನ್ನು ಸ್ವಲ್ಪ ಪಕ್ಕ ಇರಿಸಿದರೆ, ಹಳ್ಳಿ ಎಂದರೆ ಅದು ಕಡುಕಷ್ಟಗಳ ಕೂಪ ಎಂಬ ಕಲ್ಪನಾತ್ಮಕ ನಂಬಿಕೆಗಳಿಂದ ನೀವು ದೂರ ಬರುವುದಕ್ಕೆ ಸಾಧ್ಯವಾಗುವುದಾದರೆ, ಗ್ರಾಮೀಣ ಭಾರತಕ್ಕೆ ಸಂಬಂಧಿಸಿದ ಕೆಲವು ಟ್ರೆಂಡ್ ಹಾಗೂ ಅಂಕಿ-ಅಂಶಗಳನ್ನಿಲ್ಲಿ ನೋಡೋಣ.

2022-23 ಗ್ರಾಮೀಣ ಮನೆಗಳ ಉಪಭೋಗ ಸಮೀಕ್ಷೆ ನಡೆಸಲಾಯಿತು. ಅಂದರೆ, ಯಾವೆಲ್ಲ ವಸ್ತುಗಳ ಮೇಲೆ ಹಳ್ಳಿಗರ ಖರ್ಚಿದೆ ಎಂಬುದನ್ನು ಗೊತ್ತುಮಾಡುವಂಥ ಸಮೀಕ್ಷೆ. ಈ ಸರ್ವೇ ಕೊನೆಯ ಬಾರಿಗೆ ಆಗಿದ್ದು 2011-12ರಲ್ಲಿ. ಆ ಸರ್ವೇ ಜತೆಗೆ ಈಗಿನದ್ದನ್ನು ಹೋಲಿಸಿ ನೋಡಿದಾಗ ಹೊರಬಿದ್ದ ಪ್ರಮುಖಾಂಶ ಎಂದರೆ ಗ್ರಾಮೀಣ ಮನೆಗಳಲ್ಲಿ ಧಾನ್ಯಕ್ಕಾಗಿ ವ್ಯಯಿಸುತ್ತಿರುವ ಖರ್ಚು ಗಣನೀಯವಾಗಿ ಇಳಿದಿದೆ ಅನ್ನೋದು. ಮೋದಿ ಸರ್ಕಾರವು 80 ಕೋಟಿ ಜನರಿಗೆ ಪಡಿತರ ಕೊಡುತ್ತಿರುವುದರಿಂದ ಅವರು ಧಾನ್ಯದ ಮೇಲಿನ ಖರ್ಚನ್ನು ಬೇರೆಡೆ ವ್ಯಯಿಸುತ್ತಿದ್ದಾರೆ ಎಂದು ತಕ್ಷಣಕ್ಕೆ ನಿರ್ಧಾರಕ್ಕೆ ಬರುವಂತಿಲ್ಲ. ಹೀಗೆ ಉಚಿತ ಕೊಡುವುದಕ್ಕೆ ಮೌಲ್ಯ ಕಟ್ಟಿ ಲೆಕ್ಕಾಚಾರ ಮಾಡಿದ ಮೇಲೂ ಜನರಲ್ಲಿ ಆಹಾರ ಹೊರತುಪಡಿಸಿ ಬೇರೆಡೆ ವ್ಯಯಿಸುವುದಕ್ಕೆ ಹಣ ಗಣನೀಯ ಪ್ರಮಾಣದಲ್ಲಿ ಉಳಿಯುತ್ತಿದೆ ಎಂಬುದು ಪಕ್ಕಾ ಆಗಿದೆ. 1990ರಿಂದೀಚೆ ಇದೇ ಮೊದಲ ಬಾರಿಗೆ ಧಾನ್ಯ-ಬೇಳೆಕಾಳು ಇವೆಲ್ಲದರ ಮೇಲೆ ವ್ಯಯಿಸುವ ಖರ್ಚು ಒಟ್ಟಾರೆ ಖರ್ಚಿನ ಶೇ. 50ಕ್ಕಿಂತ ಕಡಿಮೆಗೆ ಬಂದಿದೆ. 

ಹಾಗಾದರೆ, ಈ ಹಣವನ್ನು ಗ್ರಾಮ ಭಾರತದ ಮನೆಗಳು ಇನ್ನೆಲ್ಲಿ ವ್ಯಯಿಸುತ್ತಿವೆ ಎಂಬ ಪ್ರಶ್ನೆ ಹಾಕಿಕೊಂಡಾಗ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ- ಸಂಚಾರ ವ್ಯವಸ್ಥೆಗೆ ಮತ್ತು ಸಂಸ್ಕರಿತ ಆಹಾರ ಮತ್ತು ಹೊಟೇಲ್ ಊಟಗಳಿಗೆ ವ್ಯಯಿಸುತ್ತಿದ್ದಾರೆ. ಇಲ್ಲೂ ಸಹ, ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿನ ಖರ್ಚು ಹೆಚ್ಚಾಗಿದೆ ಎಂದು ತೀರ್ಮಾನಕ್ಕೆ ಬರುವಂತಿಲ್ಲ. ಏಕೆಂದರೆ ಸಮೀಕ್ಷೆಯು ಅಂಥ ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡು ಮೈನಸ್ ಮಾಡಿಯೇ ಅಂತಿಮ ಲೆಕ್ಕಾಚಾರ ಹಾಕಿದೆ.

ಇವೆಲ್ಲವಕ್ಕೆ ನೀವು ಸರ್ಕಾರಿ ಸಮೀಕ್ಷೆಯನ್ನೇ ನಂಬಬೇಕು ಅಂತಿಲ್ಲ. ಈ ಸಮೀಕ್ಷೆಯಲ್ಲಿ ಬಂದಿರುವ ಅಂಶಗಳೇ ಕಾರ್ಪೋರೇಟ್ ವಲಯದಲ್ಲೂ ಪ್ರತಿಬಿಂಬಿತವಾಗುತ್ತಿವೆ. 2023-24ರ ವಿತ್ತೀಯ ವರ್ಷದಲ್ಲಿ ಭಾರತದಲ್ಲಿ 40 ಲಕ್ಷ ಕಾರುಗಳು ಮಾರಾಟವಾಗಿವೆ. ಇದೊಂದು ದಾಖಲೆಯ ವಾರ್ಷಿಕ ವಹಿವಾಟು. ಇದು ಸಾಧ್ಯವಾಗುವುದಕ್ಕೆ ಭಾರತದ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾದ ಕಾರು ಮಾರಾಟವೇ ಕಾರಣ ಅಂತ ವಾಹನೋತ್ಪಾದಕರೆಲ್ಲ ಹೇಳಿದ್ದಾರೆ. ತನ್ನ ಮಾರಾಟದ ಶೇ. 40 ಭಾಗ ಬಂದಿರುವುದು ಗ್ರಾಮೀಣ ಮಾರುಕಟ್ಟೆಯಿಂದಲೇ ಅಂತ ಟಾಟಾ ಮೋಟಾರ್ಸ್ ಹೇಳಿದೆ. ನಮ್ಮ ಗ್ರಾಮೀಣ ಮಾರುಕಟ್ಟೆಯಲ್ಲಿ 500 ಕೇಂದ್ರಗಳಿದ್ದದ್ದನ್ನು 830ಕ್ಕೆ ಹೆಚ್ಚಿಸಿದ್ದೇವೆ ಅಂತ ಟಾಟಾ ಮೋಟಾರ್ಸ್ ಹೇಳಿದ್ದರೆ, ನಮ್ಮ 1,363 ಸೇಲ್ಸ್ ಪಾಯಿಂಟ್ ಪೈಕಿ 562 ಕೇಂದ್ರಗಳಿರುವುದು ಗ್ರಾಮೀಣ ಭಾರತದಲ್ಲೇ ಅಂತ ಹ್ಯೂಂಡೈ ಮೋಟಾರ್ಸ್ ಇಂಡಿಯಾ ಹೇಳಿದೆ. 2023-24ರ ವಿತ್ತೀಯ ವರ್ಷದಲ್ಲಿ ಹ್ಯೂಂಡೈ ಮೋಟಾರ್ಸ್ ಇಂಡಿಯಾದ ಕಾರು ಮಾರಾಟದ ಪೈಕಿ ಶೇ. 60 ಎಸ್ ಯು ವಿಗಳೇ ಆಗಿವೆ. ಈ ಎಸ್ ಯು ವಿ ವಿಭಾಗದಲ್ಲಿ ಸಹ ಶೇ. 20ರಷ್ಟು ಕಾರುಗಳು ಮಾರಾಟವಾಗಿರುವುದು ಗ್ರಾಮೀಣ ಭಾಗದಲ್ಲಿ. 

ಇನ್ನು, ದಿನನಿತ್ಯದ ಬಳಕೆಯ ಸೋಪು, ಶಾಂಪೂ, ಖಾದ್ಯತೈಲ, ಪ್ಯಾಕೆಟ್ ತಿನಿಸು ಇತ್ಯಾದಿಗಳ ಎಫ್ ಎಂ ಸಿ ಜಿ (Fast Moving Consumer Goods- ತ್ವರಿತ ಬಿಕರಿಯಾಗುವ ಗ್ರಾಹಕ ವಸ್ತುಗಳು) ಮಾರುಕಟ್ಟೆ ಈವರೆಗೆ ನಗರವನ್ನೇ ಹೆಚ್ಚು ಅವಲಂಬಿಸಿತ್ತು. ಆದರೆ ನೈಲ್ಸನ್ ಎಂಬ ಮಾರುಕಟ್ಟೆ ಸಂಶೋಧನೆ ಸಂಸ್ಥೆಯ ವರದಿಯ ಪ್ರಕಾರ ಎಫ್ ಎಂ ಸಿ ಜಿಯ ಶೇ. 39ರಷ್ಟು ಆದಾಯ ಗ್ರಾಮೀಣ ಭಾರತದಿಂದ ಬರುತ್ತಿದ್ದು, ಇಲ್ಲಿಯ ಬೆಳವಣಿಗೆ ದರ ಏರುಮುಖದಲ್ಲೇ ಇದೆ ಎಂದು ಹೇಳಿದೆ. 

Prashant Kishor
Indian spices: ಮಸಾಲೆ ಪದಾರ್ಥಗಳ ರಫ್ತು ಮಾರುಕಟ್ಟೆಗೆ ಮಾರಕವಾಗುತ್ತಿದೆ MRL; ಆರೋಗ್ಯಕ್ಕೂ ಅಪಾಯ ತಪ್ಪಿದ್ದಲ್ಲ! (ತೆರೆದ ಕಿಟಕಿ)

ಈ ಎಲ್ಲ ಟ್ರೆಂಡುಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣವೇನು? ಮೊದಲನೆಯದಾಗಿ ಯಾವೆಲ್ಲ ಮೂಲ ಸೌಕರ್ಯವನ್ನು ಒದಗಿಸಿಕೊಳ್ಳುವುದರಲ್ಲಿ ಗ್ರಾಮೀಣ ಭಾರತವು ತನ್ನ ಸಮಯ ಮತ್ತು ಹಣವನ್ನು ವ್ಯಯಿಸಿಕೊಂಡಿರುತ್ತಿತ್ತೋ ಈ ಹತ್ತು ವರ್ಷಗಳಲ್ಲಿ ಅಲ್ಲೆಲ್ಲ ಸಮರೋಪಾದಿಯಲ್ಲಿ ಕೆಲಸಗಳಾಗಿವೆ. 10 ಕೋಟಿ ಗ್ಯಾಸ್ ಸಿಲಿಂಡರ್ ಸಂಪರ್ಕ, 11 ಕೋಟಿ ಗ್ರಾಮೀಣ ಮನೆಗಳಲ್ಲಿ ಶೌಚಾಲಯ, 3 ಕೋಟಿ ಆವಾಸ್ ಯೋಜನೆ ಮನೆಗಳು ಇವೆಲ್ಲ ಆಗಿವೆ. 2019ರಲ್ಲಿ 3.23 ಕೋಟಿ (16.8 ಶೇಕಡ) ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಇದ್ದದ್ದು, ಜನವರಿ 2024ಕ್ಕೆ ಇನ್ನೂ 10 ಕೋಟಿ ಮನೆಗಳನ್ನು ಮುಟ್ಟಿ 14.21 ಕೋಟಿ ಗ್ರಾಮೀಣ ಮನೆಗಳು (73.76 ಶೇಕಡ) ನೀರಿನ ಸಂಪರ್ಕ ಪಡೆದಿವೆ. 

ಹೀಗೆ ಬೇಸಿಕ್ಸ್ ಈಡೇರಿಸಿಕೊಂಡಿದ್ದರಿಂದ ಖರ್ಚಿಗೆ ಹಣ ಮಿಕ್ಕುವುದಲ್ಲದೇ, ಅಂತರ್ಜಾಲ ಮತ್ತು ಉತ್ತಮ ರಸ್ತೆ-ರೈಲು-ವಿಮಾನಮಾರ್ಗಗಳ ವಿಸ್ತರಣೆಗಳು ಗ್ರಾಮೀಣ ಭಾಗಕ್ಕೂ ಹೊಸ ಅವಕಾಶಗಳನ್ನು ತೆರೆದಿರಿಸಿವೆ.

ಇಷ್ಟೆಲ್ಲದರ ನಡುವೆಯೂ ಪ್ರಶಾಂತ ಕಿಶೋರ್ ಹಾಗೂ ಕಾಂಗ್ರೆಸ್ ಮತ್ತದರ ಮೈತ್ರಿಗಳು ಗ್ರಾಮೀಣ ಗೋಳಾಟ ಅರ್ಥಾತ್ Rural Distress ಕತೆ ಹೇಳುವಾಗ ಉಲ್ಲೇಖಿಸುವ ಅಂಶ ಎಂದರೆ, ಮೋದಿ ಸರ್ಕಾರ ಬಂದ ನಂತರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ (MGNREGA) ಕಡಿಮೆ ಹಣ ಕೊಟ್ಟು, ಹಲವು ತಡೆಗಳನ್ನು ನಿರ್ಮಿಸಿ ಗ್ರಾಮೀಣ ಭಾಗದ ಜನಕ್ಕೆ ಕೆಲಸ ಕೊಡುತ್ತಿದ್ದ ಯೋಜನೆಯನ್ನು ದುರ್ಬಲಗೊಳಿಸಿಬಿಟ್ಟಿದೆ ಅನ್ನೋದು. 

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೇಳುತ್ತಿರುವುದು, ರಾಜ್ಯಗಳು ಉದ್ಯೋಗ ಖಾತ್ರಿ ಯೋಜನೆಗೆ ಹಿಂದಿನ ಕಂತಿನಲ್ಲಿ ಕಳುಹಿಸಿದ ಹಣವು ಉದ್ದೇಶಿತ ಕಾರ್ಯಕ್ಕೆ ಖರ್ಚಾದ ಪ್ರಮಾಣಪತ್ರ ಕೊಡದಿದ್ದಾಗ ನಂತರದ ಕಂತಿನ ಬಿಡುಗಡೆಗಳಲ್ಲಿ ವಿಳಂಬವಾಗಿದೆ ಎಂದು. ಅದಲ್ಲದೇ, ಉದ್ಯೋಗ ಖಾತ್ರಿ ಯೋಜನೆಯ ಖೊಟ್ಟಿ ಕಾರ್ಡುಗಳು, ಡುಪ್ಲಿಕೇಟ್ ಕಾರ್ಡುಗಳು, ವ್ಯಕ್ತಿಯ ಮರಣದ ನಂತರವೂ ಬಳಕೆಯಾಗುತ್ತಿದ್ದ ಕಾರ್ಡುಗಳು ಇತ್ಯಾದಿಗಳನ್ನೆಲ್ಲ ಆಧಾರ್ ಮೂಲಕ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರವು ಏಪ್ರಿಲ್ 2022 ಮತ್ತು ಫೆಬ್ರವರಿ 2024ರ ನಡುವೆ ಸುಮಾರು 3 ಕೋಟಿ ಕಾರ್ಡುಗಳನ್ನು ರದ್ದುಗೊಳಿಸಿದೆ ಎಂದು ಲೋಕಸಭೆಗೆ ನೀಡಿರುವ ಉತ್ತರವೊಂದರಲ್ಲಿ ಹೇಳಲಾಗಿದೆ. 

Prashant Kishor
ಇಂಡೋನೇಷ್ಯ, ಥಾಯ್ಲ್ಯಾಂಡ್, ಮಲೇಷ್ಯ ಭವಿಷ್ಯದ AI ಹಬ್?: ಭಾರತ ಖುಷಿಪಡಬೇಕು ಏಕೆ ಗೊತ್ತೇ? (ತೆರೆದ ಕಿಟಕಿ)

ನಿಜ. ಇತ್ತೀಚಿನ ವರ್ಷಗಳಲ್ಲಿ ಮಾನ್ಸೂನ್ ಸರಿಯಾಗದಿರುವಿಕೆ, ತಾಪಮಾನ ಹೆಚ್ಚಳ, ಪ್ರವಾಹ ಇತ್ಯಾದಿ ಕಾರಣಗಳಿಂದ ಮುಖ್ಯವಾಗಿ ಉತ್ತರದ ಗಂಗಾ ಹರಿವಿನ ಕೃಷಿ ಪ್ರದೇಶಗಳು ನಷ್ಟಕ್ಕೆ ಎಡೆಯಾಗಿದ್ದು ಹೌದು. ಇದರಲ್ಲಿ ಯಾವುದೇ ಸರ್ಕಾರದ ಪಾತ್ರ ತುಂಬ ದೊಡ್ಡದೇನಲ್ಲ, ಮತ್ತಿದಕ್ಕಾಗಿ ತಮ್ಮ ರೋಷವನ್ನು ಇಡಿಇಡಿಯಾಗಿ ಸರ್ಕಾರದ ಕಡೆ ರೈತರು ತಿರುಗಿಸಿಬಿಡುತ್ತಾರೆ ಎಂದು ಹೇಳುವುದಕ್ಕೆ ತರ್ಕಗಳಿಲ್ಲ. ಹಾಗಾದರೆ, ಪ್ರಶಾಂತ ಕಿಶೋರ್ ಹುಟ್ಟುಹಾಕಲು ಯತ್ನಿಸುತ್ತಿರುವ ಗ್ರಾಮೀಣ ಗೋಳಾಟ ಅಥವಾ ಆಕ್ರೋಶಿತ ಗ್ರಾಮ ಭಾರತದ ಕತೆಗೆ ಅಡಿಪಾಯವೆಲ್ಲಿದೆ? ಕೆಲವು ಕಷ್ಟ-ನಷ್ಟದ ಉದಾಹರಣೆಗಳು ಮತ್ತು ಇನ್ನೂ ಹೆಚ್ಚು ಸಿಗಬೇಕಿತ್ತೆಂಬ ಅಪೇಕ್ಷೆಗಳು ಗ್ರಾಮೀಣ ಭಾರತದಲ್ಲಿ ಇದ್ದಿರಬಹುದು. ಆದರೆ, ಒಂದಿಡೀ ಗ್ರಾಮ ಭಾರತವು ಮೋದಿ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿಕೊಳ್ಳುತ್ತಿದೆ ಅಂತ ನಿಮಗೇನಾದರೂ ಅನ್ನಿಸುತ್ತಿದೆಯಾ?

-ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com