536 ಕೋಟಿ ರುಪಾಯಿ: ಮುಟ್ಟುಗೋಲಾದ ಈ ಸಂಪತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶವನ್ನು ಬದಲಿಸಬಲ್ಲದೇ?

ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೂ ಮಹಾರಾಷ್ಟ್ರದ ಮಟ್ಟಿಗೆ ಸ್ವಂತಬಲದಲ್ಲಿ ಅಧಿಕಾರಕ್ಕೆ ಬರಲಾರವು. ಶಿವಸೇನೆ ಮತ್ತು ಎನ್ ಸಿ ಪಿ ಎಂಬ ಎರಡು ಪ್ರಾದೇಶಿಕ ಬಲಗಳ ಸಾಮರ್ಥ್ಯಪ್ರದರ್ಶನದ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗುತ್ತದೆ.
Maharashtra Elections (file pic)
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (ಸಂಗ್ರಹ ಚಿತ್ರ)online desk
Updated on

ನವೆಂಬರ್ 20ಕ್ಕೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ. ಆಡಳಿತಾರೂಢ ಮಹಾಯುತಿ ಹಾಗೂ ಪ್ರತಿಪಕ್ಷ ಮಹಾ ವಿಕಾಸ ಅಗಡಿ ಕಣದಲ್ಲಿದ್ದಾವೆ ಎಂದು ಹೇಳಿದರೆ ಹೆಚ್ಚೇನೂ ಹೇಳಿದಂತಾಗುವುದಿಲ್ಲ. ಏಕೆಂದರೆ, 2019ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಅಲ್ಲಿನ ಪಕ್ಷಗಳಲ್ಲಿ ಇನ್ನಿಲ್ಲದ ಕಲಸುಮೇಲೋಗರವಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೂ ಮಹಾರಾಷ್ಟ್ರದ ಮಟ್ಟಿಗೆ ಸ್ವಂತಬಲದಲ್ಲಿ ಅಧಿಕಾರಕ್ಕೆ ಬರಲಾರವು. ಶಿವಸೇನೆ ಮತ್ತು ಎನ್ ಸಿ ಪಿ ಎಂಬ ಎರಡು ಪ್ರಾದೇಶಿಕ ಬಲಗಳ ಸಾಮರ್ಥ್ಯಪ್ರದರ್ಶನದ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗುತ್ತದೆ. ಆದರೆ ಈ ಬಾರಿ ಇವೆರಡೂ ಪಕ್ಷಗಳೂ ಹೋಳಾಗಿ ಆಡಳಿತಾರೂಢರು ಮತ್ತು ವಿಪಕ್ಷದವರ ನಡುವೆ ಹಂಚಿಹೋಗಿವೆ. 

ಕಾಂಗ್ರೆಸ್-ಶರದ್ ಪವಾರ್ ಎವರ ಎನ್ ಸಿ ಪಿ ಬಣ- ಉದ್ಧವ ಠಾಕ್ರೆಯವರ ಶಿವಸೇನೆ ಬಣ ಸೇರಿಕೊಂಡು ಮಹಾ ವಿಕಾಸ ಅಗಡಿ. ಇದೇ ವರ್ಷದಲ್ಲಿ ಈ ಹಿಂದೆ ಆದ ಲೋಕಸಭೆ ಚುನಾವಣೆಯಲ್ಲಿ ಈ ಬಣದ್ದೇ ಮೇಲುಗೈ. ಹಾಗೆಂದೇ, ವಿಧಾನಸಭೆಯಲ್ಲಿ ಸಹ ಬಿಜೆಪಿ ನೇತೃತ್ವದ ಮಹಾಯುತಿ ಪಾಳೆಯದಿಂದ ಅಧಿಕಾರ ಕಿತ್ತುಕೊಳ್ಳುವ ಹುಮ್ಮಸ್ಸು ಈ ಪಾಳೆಯಕ್ಕೆ. ಆದರೆ ಆಡಳಿತಾರೂಢರು ಕೊನೆಕ್ಷಣದಲ್ಲಿ ಅನುಷ್ಠಾನಕ್ಕೆ ತಂದಿರುವ ಲಡ್ಕಿ ಬೆಹನ್ ಯೋಜನೆಯಂಥ ನಗದು ಜಮಾವಣೆ ದಾರಿಗಳಿಂದ ಲೋಕಸಭೆಯಲ್ಲಿದ್ದ ವಾತಾವರಣ ಈಗಿಲ್ಲ ಎಂಬಂತಿದೆ. 

ಬಿಜೆಪಿ-ಶಿವಸೇನೆಯ ಶಿಂಧೆ ಬಣ- ಅಜಿತ್ ಪವಾರರ ಎನ್ ಸಿ ಪಿ ಸೇರಿಕೊಂಡು ಮಹಾಯುತಿ ಸರ್ಕಾರವಾಗಿದೆ. ಹಾಗೆ ನೋಡಿದರೆ, ಲೋಕಸಭೆ ಚುನಾವಣೆಯಲ್ಲಿ ಸಿಕ್ಕಿರುವ ಆಘಾತ, ಸ್ಥಳೀಯ ನಾಯಕರ ಕಡೆಗಣನೆ, ಅತಿ ಭ್ರಷ್ಟರಿಗೆ ಮಣೆ, ಪಕ್ಷಾಂತರದ ಅತಿರೇಕ ಇಂಥವುಗಳಿಂದ ಬಿಜೆಪಿ ನೇತೃತ್ವದ ಮಹಾಯುತಿ ಈ ಬಾರಿ ಸೈದ್ಧಾಂತಿಕ ಬದ್ಧತೆಯನ್ನಾಗಲೀ, ನೈತಿಕ ಮೇಲ್ಮಟ್ಟವನ್ನಾಗಲೀ ಇಟ್ಟುಕೊಂಡಿಲ್ಲ. ಆದರೆ, ಇಲ್ಲಿ ಕೊರತೆಯಾಗುತ್ತಿರುವ ಅಂಶಗಳನ್ನು ಪ್ರತಿಪಕ್ಷದಲ್ಲಿ ನೋಡುವುದಕ್ಕೆ ಹೋದರೆ ಅಲ್ಲೂ ಅದು ವಿರಳವೇ ಆಗಿರುವುದರಿಂದ ಜನಮಾನಸವನ್ನು ಅಳೆಯುವುದು ಕಷ್ಟ. ಮಹಾಯುತಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಸಮೀಕ್ಷೆಗಳೂ ಇವೆ, ಮಹಾ ವಿಕಾಸ ಅಗಡಿಗೆ ಬಹುಮತ ಸಿಗುತ್ತದೆ ಎಂಬ ಸಮೀಕ್ಷೆಗಳೂ ಇವೆ. 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸ್ಥಾನಗಳನ್ನು ಪಡೆಯಬೇಕು.

ಹಂಚಲಾಗದ ಹಣವೇ ನಿರ್ಣಾಯಕ ಪಾತ್ರ ವಹಿಸುವುದೇ?

ಅದು ಯಾವುದೇ ಚುನಾವಣೆ ಇದ್ದಿರಬಹುದು, ಕಣದಲ್ಲಿರುವ ಎರಡೂ ಪಾಳೆಯಗಳಿಂದಲೂ ಉಮೇದಿಡಬಹುದಾಗಿದ್ದು ಅಷ್ಟಕಷ್ಟೇ ಎನಿಸಿದಾಗ ಯಾವುದೋ ಮೂರನೇ ಅಂಶವು ಜಯವನ್ನು ನಿರ್ಧರಿಸುತ್ತದೆ. ಮಹಾಯುತಿ ಹಾಗೂ ಮಹಾ ವಿಕಾಸ ಅಗಡಿ ಇವೆರಡೂ ಪಕ್ಷಾಂತರಿಗಳ ಪ್ರಹಸನ ಎಂಬ ಸಿನಿಕತೆ ಇದ್ದಾಗ, ಆಡಳಿತಾರೂಢರ ಮೇಲೇನಾದರೂ ದೊಡ್ಡಮಟ್ಟದ ಮುನಿಸಿದ್ದರೆ ಅದು ಪ್ರತಿಪಕ್ಷಕ್ಕೆ ಲಾಭವಾಗುತ್ತದೆ. ಹಾಗೆ ಜನಾಕ್ರೋಶ ರೂಪುಗೊಳ್ಳುವಂಥ ಕಾರ್ಯವೇನೂ ಆಡಳಿತಾರೂಢರಿಂದಾಗಿಲ್ಲವಾದ್ದರಿಂದ ಅದೇನೂ ಪ್ರೇರಕ ಅಂಶ ಆಗಲಾರದು. 

ಇದು ಬಿಟ್ಟರೆ, ಮತ್ತೊಂದು ಪ್ರಮುಖಾಂಶ ಹಣ. ಎರಡೂ ಪಾಳೆಯಗಳೂ ತೀರ ಭಿನ್ನವೇನಿಲ್ಲ ಮತ್ತು ಇಬ್ಬರ ಮೇಲೂ ಬೇಸರವಿದೆ ಎಂದಾದಾಗ ಸಾಮಾನ್ಯವಾಗಿ ಕಾರ್ಯಪ್ರವೃತ್ತವಾಗುವ ತರ್ಕವೇನೆಂದರೆ- “ಹೋಗಲಿ..ಯಾರು ಆ ಕ್ಷಣಕ್ಕೆ ಹಣಚೆಲ್ಲಿ ನಮಗೆ ಲಾಭ ಮಾಡಿಕೊಡುತ್ತಾರೋ ಅವರಿಗೆ ಮತ ಕೊಡೋಣ” ಎನ್ನುವ ಮಾದರಿಯದ್ದು. ಇಲ್ಲೇ ಒಂದು ಸ್ವಾರಸ್ಯವಿದೆ.

ಕೇಂದ್ರ ಚುನಾವಣಾ ಆಯೋಗ ನೀಡಿರುವ ಲೆಕ್ಕದ ಪ್ರಕಾರ, ಕಳೆದ ಅಕ್ಟೋಬರ್ 15ರಿಂದ ನವೆಂಬರ್ 14ರವರೆಗೆ ಮಹಾರಾಷ್ಟ್ರದಲ್ಲಿ ಮುಟ್ಟುಗೋಲಾಗಿರುವ ಸಂಪತ್ತಿನ ಪ್ರಮಾಣ 536 ಕೋಟಿ ರುಪಾಯಿಗಳು! ಇದರಲ್ಲಿ, ರಾಜಕೀಯ ಪಕ್ಷಗಳು ಹಂಚಲು ಸಾಗಿಸುತ್ತಿದ್ದ ನಗದು, ವಸ್ತುರೂಪದ ಕೊಡುಗೆಗಳು, ಹೆಂಡ ಹಾಗೂ ಮಾದಕ ಪದಾರ್ಥಗಳು, ಲೋಹದ ವಸ್ತುಗಳು ಇವೆಲ್ಲ ಸೇರಿವೆ. ಇದು ಎಷ್ಟು ದೊಡ್ಡ ಮೊತ್ತದ ಹಣ ಎಂಬುದು ಅರ್ಥವಾಗಬೇಕಾದರೆ, 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮುಟ್ಟಗೋಲಾದ ಸಂಪತ್ತಿನ ಪ್ರಮಾಣ 103.61 ಕೋಟಿ ರುಪಾಯಿಗಳಾಗಿತ್ತು ಎಂಬುದನ್ನು ಗಮನಿಸಬೇಕು. 

Maharashtra Elections (file pic)
ಜಾರ್ಖಂಡ್ ವಿಧಾನಸಭೆ ಚುನಾವಣೆ: ಇದೇನಿದು ಬಿಜೆಪಿ ಎಬ್ಬಿಸಿರುವ ರೋಟಿ-ಬೇಟಿ-ಮಾಟಿ ಕೂಗು?

ಇಷ್ಟು ದೊಡ್ಡ ಪ್ರಮಾಣದ ಹಣ-ಹೆಂಡಗಳು ಹಂಚಿಕೆಯಾಗುವ ಮೊದಲೇ ಮುಟ್ಟಗೋಲಾದರೆ ಅಷ್ಟರಮಟ್ಟಿಗೆ ಅದು ಜನರ ಮತ ನಿರ್ಧಾರ ಮಾಡುವುದಕ್ಕೆ ಬಳಕೆ ಆಗದೇ ಹೋಯಿತು ಎಂದಂತಾಯಿತು. ಹಣ ಹಂಚುವುದರಲ್ಲಿ ಅಧಿಕಾರರೂಢರು ಹಾಗೂ ಪ್ರತಿಪಕ್ಷಗಳೆರಡೂ ಪ್ರಯತ್ನಿಸಿದ್ದವು ಎಂದೇ ಅಂದುಕೊಂಡರೂ, ಹಂಚಿಕೆಯಾಗದ ಹಣವು ಪ್ರತಿಪಕ್ಷಗಳಿಗೇ ಹೆಚ್ಚು ನಷ್ಟ ಉಂಟುಮಾಡುತ್ತದೆ. ಏಕೆಂದರೆ ಆಡಳಿತಾರೂಢರಿಗಾದರೆ, ಚುನಾವಣೆಯ ನೀತಿ ಸಂಹಿತೆ ಘೋಷಣೆಗೂ ಮುಂಚೆ ಅನುಷ್ಠಾನಕ್ಕೆ ತಂದಿರುವ ನಗದು ನೀಡಿಕೆಯ ಯೋಜನೆಗಳು ಕೈಹಿಡಿಯಬಹುದು. ಈ ಥರದ ‘ಗ್ಯಾರಂಟಿ’ ಯೋಜನೆಗಳನ್ನು ಸಹಜವಾಗಿಯೇ ಅಧಿಕಾರದಲ್ಲಿರುವ ಪಕ್ಷ ಫಲಾನುಭವಿಗಳ ನಡುವೆ ವ್ಯಾಪಕ ಪ್ರಚಾರವನ್ನೇ ಮಾಡಿರುತ್ತದೆ. ಪ್ರತಿಪಕ್ಷಗಳೂ ಇದಕ್ಕೆ ಮೀರಿದ ಭರವಸೆಗಳನ್ನು ಕೊಡುತ್ತಾವಾದರೂ ಅವು ಎಷ್ಟೆಂದರೂ ಭರವಸೆಗಳು. ಆದರೆ ಅಧಿಕಾರದಲ್ಲಿರುವ ಪಕ್ಷವು ಯೋಜನೆ ಹೆಸರಲ್ಲಿ ನೀಡಿರುವ ಹಣ ಅದಾಗಲೇ ಬ್ಯಾಂಕಿನ ಖಾತೆಯಲ್ಲಿ ಜಮೆಯಾಗಿರುವ ವಾಸ್ತವ!

ಹೀಗೆ ಬ್ಯಾಂಕಿನ ಖಾತೆಯಲ್ಲಿರುವ ಹಣವನ್ನು ಕೆಲವು ಬಾರಿ ಚುನಾವಣೆಯ ಹಿಂದಿನ ದಿನ ವಿತರಿಸುವ ಅಕ್ರಮ ಹಣ ಹಾಗೂ ಹೆಂಡಗಳು ಮರೆಸುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ ಬರೋಬ್ಬರಿ 536 ಕೋಟಿ ರುಪಾಯಿಗಳ ಸಂಪತ್ತು ವಿತರಣೆಯಾಗುವುದಕ್ಕೆ ಮುಂಚೆ ಮುಟ್ಟುಗೋಲಾಗಿರುವುದು ಈ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶ ನಿರ್ಧರಿಸಬಲ್ಲ ಪ್ರಮುಖಾಂಶ ಆಗಬಲ್ಲದು ಎಂಬುದು ಒಂದು ಆಸಕ್ತಿಕರ ಆಯಾಮ.

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com