ಚೀನಾ ಪ್ರಾಬಲ್ಯದ ನಡುವೆಯೂ ಭಾರತ-ಅಮೆರಿಕಾ ಸಂಬಂಧ ಸುಭದ್ರ! (ಜಾಗತಿಕ ಜಗಲಿ)

ಅಮೆರಿಕಾ ಎಸ್ಒಎಸ್ಎ ಒಪ್ಪಂದಕ್ಕೆ ಆಸ್ಟ್ರೇಲಿಯಾ, ಕೆನಡಾ, ಮತ್ತು ಬ್ರಿಟನ್‌ನಂತಹ ಕೇವಲ 18 ಪ್ರಬಲ ರಾಷ್ಟ್ರಗಳ ಜೊತೆ ಸಹಿ ಹಾಕಿದೆ. ನೂತನ ಒಪ್ಪಂದಗಳ ಜಾರಿಯೊಂದಿಗೆ, ಭಾರತವೂ ಈ ಸಾಲಿಗೆ ಸೇರ್ಪಡೆಗೊಂಡಿದೆ. ಇದು ರಕ್ಷಣಾ ಸಹಯೋಗದಲ್ಲಿ ನಿಜಕ್ಕೂ ಮಹತ್ವದ ಪ್ರಗತಿ.
File pic
ಅಮೇರಿಕಾ- ಭಾರತonline desk
Updated on

ಭಾರತ ಮತ್ತು ಅಮೆರಿಕಾಗಳು ಎರಡು ಮಹತ್ವದ, ನೂತನ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಬೆಳವಣಿಗೆ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯದ ನಡುವೆ, ದಕ್ಷಿಣ ಏಷ್ಯಾಗೆ ಅಮೆರಿಕಾದ ಬೆಂಬಲವನ್ನು ಸೂಚಿಸುತ್ತಿದೆ.

ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಅಮೆರಿಕಾ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ಎರಡು ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದರು. ಅವೆಂದರೆ: ಸೆಕ್ಯುರಿಟಿ ಆಫ್ ಸಪ್ಲೈ ಅರೇಂಜ್‌ಮೆಂಟ್ (ಎಸ್ಒಎಸ್ಎ) ಮತ್ತು ಮೆಮೊರಂಡಂ ಆಫ್ ಅಗ್ರಿಮೆಂಟ್ ಆನ್ ದ ಅಸೈನ್ಮೆಂಟ್ ಆಫ್ ಲಯೇಷನ್ ಆಫೀಸರ್ಸ್.

ಪೆಂಟಗಾನ್ ಮಾಜಿ ಅಧಿಕಾರಿ ಮೈಕೇಲ್ ರುಬಿನ್ ಅವರು ಇವೆರಡು ಒಪ್ಪಂದಗಳು ಮಹತ್ವದ್ದಾಗಿದ್ದು, ಭಾರತಕ್ಕೆ ಬೆಂಬಲ ನೀಡುವ ಕುರಿತು ತನ್ನ ಮಾತಿಗೆ ಅಮೆರಿಕಾ ಬದ್ಧವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಒಪ್ಪಂದಗಳ ಮುಂದಿನ ಹಂತವೆಂದರೆ, ಅಮೆರಿಕಾ ಭಾರತದೊಡನೆ ಒಪ್ಪಂದವನ್ನು ಹೇಗೆ ವಿಸ್ತರಿಸುತ್ತದೆ ಎಂದು ಗಮನಿಸುವುದು ಎಂದು ರುಬಿನ್ ಹೇಳಿದ್ದಾರೆ. ಈ ಯೋಜನೆಯ ಮೂಲಕ, ಭವಿಷ್ಯದಲ್ಲಿ ಉಭಯ ರಾಷ್ಟ್ರಗಳು ಇನ್ನಷ್ಟು ಸಹಕಾರ ಸಾಧಿಸಲು ಸಾಧ್ಯ ಎಂದು ಅವರು ಭಾವಿಸುತ್ತಾರೆ.

ಭಾರತ - ಅಮೆರಿಕಾ ನಡುವಿನ ಒಪ್ಪಂದಗಳಲ್ಲಿ, ಮೊದಲನೆಯ ಒಪ್ಪಂದದ ಮಾತುಕತೆ ಕಷ್ಟಕರವಾಗಿತ್ತು. ಆದರೆ, ಎರಡು, ಮೂರು ಮತ್ತು ನಾಲ್ಕನೇ ಒಪ್ಪಂದಗಳ ಜಾರಿ ಬಹುಮಟ್ಟಿಗೆ ಸುಲಭವಾಗಿತ್ತು.

ರಕ್ಷಣಾ ಸಹಕಾರ ಒಪ್ಪಂದಗಳ ಮೇಲ್ನೋಟ: ಎಸ್ಒಎಸ್ಎ ಸೇರ್ಪಡೆ

ಎಸ್ಒಎಸ್ಎ ಎನ್ನುವುದು ಒಂದು ದ್ವಿಪಕ್ಷೀಯ ಒಪ್ಪಂದವಾಗಿದ್ದು, ಇದು ಯಾವುದೇ ಕಾನೂನು ನಿಬಂಧನೆಗಳನ್ನು ಹೊಂದಿಲ್ಲ. ಆದರೆ ಇದರಡಿ ಉಭಯ ದೇಶಗಳು ಪರಸ್ಪರ ರಕ್ಷಣಾ ಸಂಬಂಧಿ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಈ ಒಪ್ಪಂದದ ಮೂಲ ಗುರಿಯೆಂದರೆ, ಅವಶ್ಯಕ ಔದ್ಯಮಿಕ ಸಂಪನ್ಮೂಲಗಳ ಬಳಕೆಯ ಖಾತ್ರಿ ಒದಗಿಸುವುದು ಮತ್ತು ರಾಷ್ಟ್ರೀಯ ಭದ್ರತೆಗೆ ಅವಶ್ಯಕವಾದ ಪೂರೈಕೆ ಸರಪಳಿಯ ಸಮಸ್ಯೆಗಳನ್ನು ಸರಿಪಡಿಸುವುದು. ಅಮೆರಿಕಾದ ಭದ್ರತಾ ಇಲಾಖೆಯ ಪ್ರಕಾರ, ಭಾರತೀಯ ಸಂಸ್ಥೆಗಳು ಅಮೆರಿಕಾಗೆ ಆದ್ಯತೆಯ ನೆರವು ನೀಡುವುದಕ್ಕೆ ಪ್ರತಿಯಾಗಿ, ಭಾರತಕ್ಕೆ ಅಮೆರಿಕಾದ ಡಿಫೆನ್ಸ್ ಪ್ರಯೋರಿಟೀಸ್ ಆ್ಯಂಡ್ ಅಲೊಕೇಷನ್ ಸಿಸ್ಟಮ್ ಯೋಜನೆಯಲ್ಲಿ ಖಾತ್ರಿ ನೀಡಲಾಗುತ್ತದೆ.

ಅಮೆರಿಕನ್ ಎಂಟರ್ಪ್ರೈಸ್ ಇನ್ಸ್ಟಿಟ್ಯೂಟ್‌ನ ಹಿರಿಯ ಸದಸ್ಯರಾದ ರುಬಿನ್ ಅವರು ರಷ್ಯಾದ ಆಯುಧ ಉಪಕರಣಗಳಿಗೆ, ಅದರಲ್ಲೂ ವಿಮಾನದ ಇಂಜಿನ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳ ಬದಲು, ಭಾರತಕ್ಕೆ ನಂಬಿಕಾರ್ಹ ಪೂರೈಕೆದಾರರ ಅವಶ್ಯಕತೆಯಿದೆ ಎಂದು ವಿವರಿಸಿದ್ದಾರೆ. ಈ ಮೊದಲು ಭಾರತ ಮತ್ತು ರಷ್ಯಾದ ಸಂಬಂಧಗಳಿಗೆ ಸಂಬಂಧಿಸಿದಂತೆ ಅಮೆರಿಕಾ ಆತಂಕ ಹೊಂದಿತ್ತು. ಆದರೆ ಈಗ ಅಮೆರಿಕಾದ ಆತಂಕ ಕಡಿಮೆಯಾಗಿದೆ ಎನ್ನುವುದರ ಸಂಕೇತವೆಂಬಂತೆ, ಪ್ರಸ್ತುತ ಮಾತುಕತೆಯಲ್ಲಿ ಆಧುನಿಕ ಆಯುಧ ವ್ಯವಸ್ಥೆಗಳ ಖರೀದಿ ಮಾತುಕತೆಯೂ ನಡೆಯಲಿದೆಯೇ ಎನ್ನುವುದು ಆಸಕ್ತಿಕರ ವಿಚಾರವಾಗಿದೆ ಎಂದಿದ್ದಾರೆ ರುಬಿನ್.

ಪ್ರಸ್ತುತ ಒಪ್ಪಂದದ ಅನುಮೋದನೆಗೆ ಸಂಬಂಧಿಸಿದಂತೆ ಅಮೆರಿಕಾದ ಕಾಂಗ್ರೆಸ್‌ನಿಂದ ಅತ್ಯಂತ ಕನಿಷ್ಠ ಪ್ರಮಾಣದ ವಿರೋಧ ವ್ಯಕ್ತವಾಗಿದ್ದು, ಇದು ನವದೆಹಲಿ ವಾಷಿಂಗ್ಟನ್ ಭರವಸೆ ಸಂಪಾದಿಸುವಲ್ಲಿ ಯಶಸ್ವಿಯಾಗಿರುವುದನ್ನು ಸೂಚಿಸಿದೆ. ಇದು ಭಾರತದ ಮೇಲೆ ಅಮೆರಿಕಾದ ಭರವಸೆ ಹೆಚ್ಚಾಗುತ್ತಿರುವುದರ ಸಾಕ್ಷಿಯಾಗಿದ್ದು, ಅಮೆರಿಕಾದ ಮೇಲೆ ಪಾಕಿಸ್ತಾನದ ಲಾಬಿ ಕೆಲಸ ಮಾಡುತ್ತಿಲ್ಲ ಎನ್ನುವುದರ ಸಂಕೇತವೂ ಆಗಿದೆ.

ಅಮೆರಿಕಾ ಎಸ್ಒಎಸ್ಎ ಒಪ್ಪಂದಕ್ಕೆ ಆಸ್ಟ್ರೇಲಿಯಾ, ಕೆನಡಾ, ಮತ್ತು ಬ್ರಿಟನ್‌ನಂತಹ ಕೇವಲ 18 ಪ್ರಬಲ ರಾಷ್ಟ್ರಗಳ ಜೊತೆ ಸಹಿ ಹಾಕಿದೆ. ನೂತನ ಒಪ್ಪಂದಗಳ ಜಾರಿಯೊಂದಿಗೆ, ಭಾರತವೂ ಈ ಸಾಲಿಗೆ ಸೇರ್ಪಡೆಗೊಂಡಿದೆ. ಇದು ರಕ್ಷಣಾ ಸಹಯೋಗದಲ್ಲಿ ನಿಜಕ್ಕೂ ಮಹತ್ವದ ಪ್ರಗತಿ.

File pic
ಇರುಳು-ನೆರಳಿನ ಜೀವನ ನಡೆಸಿ ಕೊನೆಗೂ ಸಾವಿಗೀಡಾದ ಫೌದ್ ಶುಕರ್: ಮಧ್ಯಪ್ರಾಚ್ಯವನ್ನು ನಲುಗಿಸಿದ ಹೆಜ್ಬೊಲ್ಲಾ ಮುಖಂಡನ ಹತ್ಯೆ (ಜಾಗತಿಕ ಜಗಲಿ)

ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರರಾಗಿರುವ ರಿಚರ್ಡ್ ರೊಸ್ಸೋ ಅವರು ಪ್ರಸ್ತುತ ಒಪ್ಪಂದದ ಪರಿಣಾಮಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಎಸ್ಒಎಸ್ಎ ಒಪ್ಪಂದದ ಭಾಗವಾಗಿರುವ ಎರಡು ದೇಶಗಳ ಪೈಕಿ, ಯಾವುದಾದರೂ ಒಂದು ದೇಶ ಏನಾದರೂ ಸಂಕೀರ್ಣ ಪರಿಸ್ಥಿತಿ ಎದುರಿಸಿದರೆ, ಅಥವಾ ಯುದ್ಧದಲ್ಲಿ ತೊಡಗಬೇಕಾಗಿ ಬಂದರೆ, ಇನ್ನೊಂದು ದೇಶ ಅವಶ್ಯಕ ಆಯುಧಗಳು ಮತ್ತು ರಕ್ಷಣಾ ಉಪಕರಣಗಳ ಪೂರೈಕೆಯನ್ನು ವೇಗಗೊಳಿಸಲಿದೆ. ಆದ್ದರಿಂದ, ತುರ್ತು ಪರಿಸ್ಥಿತಿಯಲ್ಲಿ ಒಪ್ಪಂದ ಅತ್ಯಂತ ಮಹತ್ವದ್ದಾಗಲಿದೆ.

ಇತ್ತೀಚೆಗೆ ಭಾರತ ಮತ್ತು ಚೀನಾಗಳ ನಡುವೆ ನಡೆದ ಚಕಮಕಿಗಳು ಈ ಪ್ರದೇಶದಲ್ಲಿ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಎರಡು ದೇಶಗಳ ನಡುವೆ ಗುಂಡು ಹಾರದಿದ್ದರೂ, ಭಾರತ ಚೀನಾಗಳ ನಡುವೆ ಉದ್ವಿಗ್ನತೆಗಳು ಮುಂದುವರಿದಿದ್ದು, ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಮತ್ತು ಶಾಂತಿ ಕಾಪಾಡುವುದು ಎಷ್ಟು ಮುಖ್ಯ ಎಂಬುದನ್ನು ತೋರಿವೆ.

ದಕ್ಷಿಣ ಏಷ್ಯಾದಲ್ಲಿ, ಅದರಲ್ಲೂ ಪಾಕಿಸ್ತಾನ ಮತ್ತು ಮಾಲ್ಡೀವ್ಸ್‌ಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದೆ. ಭಾರತದ ಪ್ರಬಲ ಮಿಲಿಟರಿ ಮತ್ತು ಪರಮಾಣು ಸಾಮರ್ಥ್ಯ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಮೇಲುಗೈ ನೀಡಿದೆ. ಅಂದರೆ, ಪಾಕಿಸ್ತಾನದ ವಿರುದ್ಧ ಯುದ್ಧ ಪರಿಸ್ಥಿತಿ ಎದುರಾದರೆ, ಸೌತ್ ಏಷ್ಯಾ ಸೆಕ್ಯುರಿಟಿ ಅಗ್ರಿಮೆಂಟ್ (ಎಸ್ಒಎಸ್ಎ) ಅವಶ್ಯಕತೆ ಬೀಳುವುದಿಲ್ಲ.

ಭಾರತ ಮತ್ತು ಅಮೆರಿಕಾ ಕಾರ್ಯತಂತ್ರದ ಎಂಒಎ

ಭಾರತ ಮತ್ತು ಅಮೆರಿಕಾಗಳ ನಡುವೆ 2016ರ ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಾಂಡಂ ಆಫ್ ಅಗ್ರಿಮೆಂಟ್ ಮತ್ತು 2018ರಲ್ಲಿ ನೈಜ ಸಮಯದಲ್ಲಿ ಗುಪ್ತಚರ ಮಾಹಿತಿ ವಿನಿಮಯ ಮಾಡಲು ಸಹಿ ಹಾಕಿದ ಕಮ್ಯುನಿಕೇಶನ್ಸ್ ಕಂಪೇಟಿಬಿಲಿಟಿ ಆ್ಯಂಡ್ ಸೆಕ್ಯುರಿಟಿ ಅಗ್ರಿಮೆಂಟ್‌ಗಳು ಜಾರಿಯಲ್ಲಿವೆ.

ರೂಸ್ಸೊ ಅವರ ಪ್ರಕಾರ, ಅಮೆರಿಕಾವನ್ನು ಒಳಗೊಂಡ ಎಸ್ಒಎಸ್ಎ ಒಪ್ಪಂದವನ್ನು ಗಮನಿಸಿದರೆ, ಭಾರತ ಖರೀದಿಸಬಹುದಾದ ಆಯುಧಗಳ ಕುರಿತು ಯಾವುದೇ ನಿರ್ಬಂಧಗಳಿಲ್ಲ. ಆದರೂ, ಸಾಮಾನ್ಯವಾಗಿ ಒದಗಿಸಲು ಅನುಮತಿ ನೀಡುವ ಆಯುಧಗಳ ಹೊರತಾಗಿ, ಹೆಚ್ಚು ಆಧುನಿಕ ಆಯುಧಗಳನ್ನು ಭಾರತಕ್ಕೆ ನೇರವಾಗಿ ಒದಗಿಸುವ ಸಾಧ್ಯತೆಗಳಿಲ್ಲ.

ಇತರ ತಾಂತ್ರಿಕ ನಿಬಂಧನೆಗಳು ಜಾರಿಯಲ್ಲಿದ್ದರೂ, ಎಸ್ಒಎಸ್ಎ ಒಪ್ಪಂದದ ಅಡಿಯಲ್ಲಿ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕ್ಷಿಪ್ರಗೊಳಿಸಬಹುದು.

2019ರಲ್ಲಿ, ಭಾರತ ಮತ್ತು ಅಮೆರಿಕಾಗಳು ಇಂಡಸ್ಟ್ರಿಯಲ್ ಸೆಕ್ಯುರಿಟಿ ಆನೆಕ್ಸ್ ಸಹಿ ಹಾಕುವ ಮೂಲಕ ಗಮನಾರ್ಹ ಪ್ರಗತಿ ಸಾಧಿಸಿದವು. ಈ ಒಪ್ಪಂದದಡಿ, ಅಮೆರಿಕಾದ ವರ್ಗೀಕೃತ ಮಾಹಿತಿಗಳನ್ನು ಭಾರತೀಯ ಖಾಸಗಿ ರಕ್ಷಣಾ ಕಂಪೆನಿಗಳೊಡನೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ 2002ರ ಜನರಲ್ ಸೆಕ್ಯುರಿಟಿ ಆಫ್ ಮಿಲಿಟರಿ ಇನ್ಫಾರ್ಮೇಶನ್ ಅಗ್ರಿಮೆಂಟ್ ವಿಧಿಸಿರುವ ನಿಬಂಧನೆಗಳಿಂದ ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ.

ಗಂಭೀರ ಭದ್ರತಾ ಕಾರಣಗಳ ಹೊರತಾಗಿ, ಭಾರತ ಅಮೆರಿಕಾದೊಡನೆ ಸುಖಾಸುಮ್ಮನೆ ತನ್ನ ಸಹಯೋಗವನ್ನು ವೃದ್ಧಿಸಲು ಮುಂದಾಗುವುದಿಲ್ಲ ಎಂದು ರೊಸ್ಸೋ ಹೇಳಿದ್ದಾರೆ. ಭಾರತದ ಎದುರಾಳಿಗಳ ಪೈಕಿ, ಭಾರತಕ್ಕಿಂತ ಹೆಚ್ಚಿನ ಮಿಲಿಟರಿ ಸಾಮರ್ಥ್ಯ ಹೊಂದಿರುವುದು ಚೀನಾ ಮಾತ್ರ. ಎಸ್ಒಎಸ್ಎ ಜಾರಿಗೆ ಬಂದರೂ, ಒಂದು ಗಂಭೀರ ಪರಿಸ್ಥಿತಿ ತಲೆದೋರದೆ ಅದರ ಸೌಕರ್ಯಗಳು ಲಭ್ಯವಾಗುವ ಸಾಧ್ಯತೆಗಳಿಲ್ಲ ಎಂದು ರೊಸ್ಸೋ ಹೇಳಿದ್ದು, ಈ ಒಪ್ಪಂದ ಚೀನಾದಿಂದ ಎದುರಾಗಬಲ್ಲ ಅಪಾಯದ ಕೇಂದ್ರಿತವಾಗಿದೆ ಎಂದಿದ್ದಾರೆ.

ಹೆಸರು ಬಯಲುಗೊಳಿಸದ ಭಾರತೀಯ ರಕ್ಷಣಾ ವಿಶ್ಲೇಷಕರೊಬ್ಬರು ಎಸ್ಒಎಸ್ಎ ಒಂದು ವಿಶಿಷ್ಟ ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆಗಳ ಸಂದರ್ಭದಲ್ಲಿ, ಭಾರತದ ರಕ್ಷಣಾ ಸಚಿವರು ಮತ್ತು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜೆಟ್ ಇಂಜಿನ್‌ಗಳು, ಯುಎವಿ ಮತ್ತು ಆಯುಧ ಉತ್ಪನ್ನಗಳ ಜಂಟಿ ಉತ್ಪಾದನೆಗಳನ್ನು ವೃದ್ಧಿಸಲು ನಿರ್ಧರಿಸಿದ್ದಾರೆ.

File pic
ಮೋದಿ ಕಾರ್ಯತಂತ್ರ: ಪಾಶ್ಚಾತ್ಯ ಸಹಯೋಗಿಗಳನ್ನು ಸಮಾಧಾನಿಸಲು ಉಕ್ರೇನ್‌ ಕಡೆ ಮೋದಿ ನಡೆ! (ಜಾಗತಿಕ ಜಗಲಿ)

ಅದರೊಡನೆ, ರೆಸಿಪ್ರೊಕಲ್ ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್ ಅಗ್ರಿಮೆಂಟ್ (ಆರ್‌ಡಿಪಿಎ) ಒಪ್ಪಂದ ಹೆಚ್ಚು ಪರಿಣಾಮಕಾರಿ ಒಪ್ಪಂದ ಎಂದು ಭಾರತೀಯ ವಿಶ್ಲೇಷಕ ಅಭಿಪ್ರಾಯ ಪಟ್ಟಿದ್ದಾರೆ. ಹಿಂದಿನ ಒಪ್ಪಂದಗಳು ಪರಸ್ಪರ ಕಾರ್ಯಸಾಧುತ್ವದ (ಇಂಟರ್ ಆಪರೇಬಿಲಿಟಿ) ಕುರಿತು ಗಮನ ಹರಿಸಿದ್ದರೆ, ಎಸ್ಒಎಸ್ಎ ಮತ್ತು ಆರ್‌ಡಿಪಿಎ ಒಪ್ಪಂದಗಳು ಭದ್ರತಾ ವ್ಯಾಪಾರವನ್ನು ಸರಳಗೊಳಿಸಿ, ಖಾಸಗಿ ಸಂಸ್ಥೆಗಳೂ ಗುತ್ತಿಗೆ ಪಡೆದುಕೊಳ್ಳಲು ಸ್ಪರ್ಧಿಸಲು ಅನುಕೂಲ ಕಲ್ಪಿಸುತ್ತವೆ.

ಇಲ್ಲಿನ ಸನ್ನಿವೇಶದಲ್ಲಿ, ಇಂಟರ್ ಆಪರೇಬಿಲಿಟಿ ಎಂದರೆ, ಹಿಂದಿನ ಒಪ್ಪಂದಗಳು ಭಾರತ ಮತ್ತು ಅಮೆರಿಕಾಗಳ ರಕ್ಷಣಾ ಉತ್ಪನ್ನಗಳು ಮತ್ತು ಜೊತೆಯಾಗಿ ಕಾರ್ಯಾಚರಿಸಿ, ಸಂವಹನ ಹೊಂದಲು ಸಾಧ್ಯವಾಗುವುದಾಗಿದೆ.

ಆರ್‌ಡಿಪಿಎ ಒಪ್ಪಂದ, ಅಮೆರಿಕಾದ ಕಂಪನಿಗಳು ಟ್ರಂಪ್ ಕಾಲದ 'ಬೈ ಅಮೆರಿಕನ್' (ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಿ) ಎಂಬ ನೀತಿಯನ್ನು ಬೈಪಾಸ್ ಮಾಡಿ, ಭಾರತದಲ್ಲೂ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಜಂಟಿ ರಕ್ಷಣಾ ಯೋಜನೆಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಅಮೆರಿಕಾ 28 ದೇಶಗಳೊಡನೆ ಆರ್‌ಡಿಪಿಎ ಒಪ್ಪಂದಕ್ಕೆ ಸಹಿ ಹಾಕಿದೆ. ಆರ್‌ಡಿಪಿಎ ಎಂದರೆ, ರೆಸಿಪ್ರೋಕಲ್ ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್ ಅಗ್ರಿಮೆಂಟ್ ಎಂಬುದರ ಹೃಸ್ವರೂಪವಾಗಿದೆ.

ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಮತ್ತು ರಕ್ಷಣಾ ತಜ್ಞರಾದ ರಾಜ್ ಶುಕ್ಲಾ ಅವರು ಎಸ್ಒಎಸ್ಎ ಭಾರತ ಮತ್ತು ಅಮೆರಿಕಾಗಳ ಭದ್ರತಾ ಸಂಬಂಧವನ್ನು ವೃದ್ಧಿಸುವ ಒಪ್ಪಂದ ಎಂದು ಪರಿಗಣಿಸುತ್ತಾರೆ.

"ಭಾರತ ಮತ್ತು ಅಮೆರಿಕಾಗಳ ನಡುವೆ ಹಿಂದಿನ ಒಪ್ಪಂದಗಳು ಉತ್ತಮ ತಳಹದಿ ನಿರ್ಮಿಸಿದ್ದು, ಅದರ ಮೇಲೆ ಎಸ್ಒಎಸ್ಎ ಪ್ರಗತಿ ಸಾಧಿಸಲಿದೆ. ಎರಡು ರಾಷ್ಟ್ರಗಳಿಗೆ ಮಿಲಿಟರಿ ಉಪಕರಣಗಳ ಖರೀದಿ ನಡೆಸುವುದು, ಸಹಯೋಗವನ್ನು ಅಭಿವೃದ್ಧಿ ಪಡಿಸಲು ಇದು ಇನ್ನಷ್ಟು ನೆರವಾಗಲಿದೆ. ತಂತ್ರಜ್ಞಾನ ಮತ್ತು ಅವಶ್ಯಕ ಖನಿಜಗಳಿಗೆ ಸಂಬಂಧಿಸಿದಂತೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ" ಎಂದು ಶುಕ್ಲಾ ಹೇಳಿದ್ದಾರೆ.

ಇನ್ನು ಮೆಮೊರಾಂಡಂ ಆಫ್ ಅಗ್ರಿಮೆಂಟ್ ಆಫ್ ಲಯೇಷನ್ ಆಫೀಸರ್ಸ್ ಒಪ್ಪಂದ ಎರಡು ದೇಶಗಳಿಗೆ ತಮ್ಮ ಮಿಲಿಟರಿ ಅಧಿಕಾರಿಗಳನ್ನು ಪರಸ್ಪರರ ಸೇನೆಯಲ್ಲಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಈ ಒಪ್ಪಂದದ ಭಾಗವಾಗಿ, ಭಾರತ ತನ್ನ ಓರ್ವ ಅಧಿಕಾರಿಯನ್ನು ಫ್ಲೋರಿಡಾದಲ್ಲಿನ ಯುಎಸ್ ಸ್ಪೆಷಲ್ ಆಪರೇಷನ್ಸ್ ಕಮಾಂಡ್‌ಗೆ ಕಳುಹಿಸಿಕೊಡಲಿದೆ.

ಅಮೆರಿಕಾದ ಆಧುನಿಕ ತಾಂತ್ರಿಕ ಜ್ಞಾನದ ಕಾರಣದಿಂದ, ಈ ಒಪ್ಪಂದ ಭಾರತ - ಅಮೆರಿಕಾಗಳ ನಡುವೆ ಸಹಕಾರ ವೃದ್ಧಿಸಿ, ಗುಪ್ತಚರ ವಿನಿಮಯ ನಡೆಸಲು ನೆರವಾಗಲಿದೆ.

"ಭಾರತದ ಸ್ಟಾರ್ಟಪ್‌ಗಳು ಮತ್ತು ಉದ್ಯಮ ಸಂಸ್ಥೆಗಳು ಅಮೆರಿಕನ್ ಕಂಪನಿಗಳೊಡನೆ ಸಹಯೋಗ ಸಾಧಿಸುವುದರಿಂದ, ನಮ್ಮ ಆಯುಧ ಸಂಗ್ರಹಣಾ ಮೂಲಗಳನ್ನು ವಿಸ್ತರಿಸಲು ನೆರವಾಗುತ್ತವೆ. ಪ್ರಸ್ತುತ ನಾವು ರಷ್ಯಾ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದೇವೆ" ಎಂದು ಶುಕ್ಲಾ ವಿವರಿಸುತ್ತಾರೆ.

ಎಸ್ಒಎಸ್ಎ ನೇರವಾಗಿ ಚೀನಾವನ್ನು ಗುರಿಯಾಗಿಸಿಲ್ಲವಾದರೂ, ಭಾರತೀಯ ಸೇನೆ ತಾಂತ್ರಿಕವಾಗಿ ಹೆಚ್ಚು ಸಮರ್ಥವಾಗುವುದು ಅಮೆರಿಕಾದ ಹಿತಾಸಕ್ತಿಗೂ ಪೂರಕವಾಗಿದೆ ಎಂದು ಶುಕ್ಲಾ ಅಭಿಪ್ರಾಯ ಪಡುತ್ತಾರೆ.

"ಇದು ಚೀನಾದ ಮಿಲಿಟರಿ ಪ್ರಗತಿಯನ್ನು ಕಡಿಮೆಗೊಳಿಸಿ, ಏಷ್ಯಾದ ಶಕ್ತಿ ವಲಯವನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ಆ ಮೂಲಕ ಏಷ್ಯಾದಲ್ಲಿ ಕೇವಲ ಒಂದು ದೇಶದ ಪಾರಮ್ಯ ಇರುವುದನ್ನು ತಪ್ಪಿಸಲಾಗುತ್ತದೆ. ಆದರೆ, ಈ ಒಪ್ಪಂದಗಳು ಯಾವುವೂ ನೇರವಾಗಿ ಚೀನಾ ಕೇಂದ್ರಿತವಾಗಿಲ್ಲ" ಎಂದು ಅವರು ವಿವರಿಸಿದ್ದಾರೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com