
ಭಾರತೀಯ ಷೇರು ಮಾರುಕಟ್ಟೆ ಜೊತೆ ಜೊತೆಗೆ ವಿಶ್ವದ ಬಹುತೇಕ ಎಲ್ಲಾ ಷೇರು ಮಾರುಕಟ್ಟೆಗಳೂ ಮತ್ತೊಂದು ಕುಸಿತವನ್ನು ಕಂಡಿವೆ. ಅಮೇರಿಕಾ ಮಾರುಕಟ್ಟೆಯಂತೂ ಇನ್ನಿಲ್ಲದ ಕುಸಿತವನ್ನು ದಾಖಲಿಸಿತು. ಈ ರೀತಿ ಮಾರುಕಟ್ಟೆ ಕುಸಿತಕ್ಕೆ ಕಾರಣವೇನು ಎನ್ನುವುದನ್ನು ಇಂದಿಗೆ ಎಲ್ಲರಿಗೂ ಗೊತ್ತು. ಅಮೇರಿಕಾ ತೆರಿಗೆ ಹೆಚ್ಚಳ ಮಾಡುತ್ತಿದೆ ಆ ಕಾರಣದಿಂದ ಮಾರುಕಟ್ಟೆ ಕುಸಿತಕ್ಕೆ ತುತ್ತಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಕಾರಣ. ಇದು ಸರಿಯಾಗಿದೆ.
ಆದರೆ ಅಮೇರಿಕಾ ತೆರಿಗೆ ಹೆಚ್ಚಳ ಏಕೆ ಮಾಡುತ್ತಿದೆ? ಹೀಗೆ ತೆರಿಗೆ ಹೆಚ್ಚಳ ಮಾಡುವುದು ಜಗತ್ತಿನ ಇತರ ದೇಶಗಳಿಗೆ ಮಾತ್ರವಲ್ಲ , ಅಮೇರಿಕಾ ದೇಶಕ್ಕೂ ಹೊಡೆತವನ್ನು ನೀಡುತ್ತದೆ. ಈ ವಿಚಾರ ಕೂಡ ಇನ್ನೊಂದು ವರ್ಗದ ಜನರ ಅರಿವಿಗೆ ಬಂದಿರುತ್ತದೆ. ಅಮೇರಿಕಾ ದೇಶಕ್ಕೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಒಬ್ಬ ಸಾಮಾನ್ಯ ಎಕಾನಾಮಿಕ್ಸ್ ವಿದ್ಯಾರ್ಥಿಗೂ ಗೊತ್ತಾಗುತ್ತದೆ ಎಂದ ಮೇಲೆ , ಹತ್ತಾರು ತಜ್ಞರ ತಂಡವನ್ನು ಇಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಆಡಳಿತಕ್ಕೆ ಗೊತ್ತಾಗುವುದಿಲ್ಲವೇ? ಎನ್ನುವ ಪ್ರಶ್ನೆ ಉದ್ಭವಾಗುತ್ತದೆ.
ಟ್ರಂಪ್ ಮತ್ತವರ ತಂಡಕ್ಕೆ ಈ ರೀತಿಯ ತೆರಿಗೆ ಹೆಚ್ಚಳ ಪ್ರಕ್ರಿಯೆಯಿಂದ ಅವರ ದೇಶಕ್ಕೆ ಎಷ್ಟು ನಷ್ಟವಾಗುತ್ತದೆ ಎನ್ನುವುದರ ಅರಿವು ಇದೆ. ನಷ್ಟವಾಗುತ್ತದೆ ಎನ್ನುವುದು ಗೊತ್ತಿದ್ದೂ ಇದನ್ನು ಅವರು ಮಾಡುತ್ತಿದ್ದಾರೆ ಎಂದರೆ ಏನರ್ಥ? ಈ ರೀತಿ ಮಾಡದೆ ಹೋದರೆ ಅದಕ್ಕಿಂತ ಹೆಚ್ಚಿನ ನಷ್ಟವಾಗುತ್ತದೆ ಎಂದಲ್ಲವೇ? ಅಮೇರಿಕಾ ತೆರಿಗೆ ನೀತಿಯಲ್ಲೂ ಆಗಿರುವುದು ಇದೆ. ಅಮೇರಿಕಾ ದೇಶ ಸಾಲ ಎನ್ನುವ ಬೆಟ್ಟದ ಮೇಲೆ ಕುಳಿತಿದೆ. ಏಪ್ರಿಲ್ 9 2025ರ ಅಂಕಿ-ಅಂಶದ ಪ್ರಕಾರ 36.2 ಟ್ರಿಲಿಯನ್ ಸಾಲದ ಮೇಲೆ ಅಮೇರಿಕಾ ಕುಳಿತಿದೆ. ಅದೇ, ದಿನದ ಒಟ್ಟು ಅಮೇರಿಕಾ ಜಿಡಿಪಿ 30.34 ಟ್ರಿಲಿಯನ್! ಅಂದರೆ ಅಮೆರಿಕಾದ ಒಂದು ವರ್ಷದ ಪೂರ್ಣ ವಹಿವಾಟಿಗಿಂತ ಹೆಚ್ಚಿನ ಸಾಲ ಅಲ್ಲಿದೆ ಎಂದಾಯ್ತು. ಇಂತಹ ಸಾಲಕ್ಕೆ ಸರಿಯಾಗಿ ಬಡ್ಡಿಯನ್ನು ಅಮೇರಿಕಾ ನೀಡುತ್ತಾ ಬಂದಿದೆ. ಆದರೆ ಕೆಲವು ವರ್ಷಗಳು ಅಸಲು ಹಣವನ್ನು ಕೂಡ ವಾಪಸ್ಸು ಕೊಡಬೇಕಾಗುತ್ತದೆ.
ಈ ವರ್ಷ ಅಂದರೆ 2025ರ ಡಿಸೆಂಬರ್ ವೇಳೆಗೆ 9.2 ಟ್ರಿಲಿಯನ್ ಹಣವನ್ನು ಮರಳಿ ಕೊಡಬೇಕು ಅಥವಾ ರೀ ಫೈನಾನ್ಸ್ ಮಾಡಬೇಕು. ರೀ ಫೈನಾನ್ಸಿನ್ಗ್ ಎಂದರೆ ಅಷ್ಟು ಮೊತ್ತದ ಹಣವನ್ನು ಹೊಂದಿಸಬೇಕು. ಅಂದರೆ ಮತ್ತೆ ಟ್ರಶರಿ ಬಿಲ್ಗಳನ್ನು, (Debt Bond) ಡೆಟ್ ಬಾಂಡ್ ಗಳನ್ನು ಮಾರಬೇಕು. ಹೀಗೆ ಮಾರಿ ಬಂದ ಹಣವನ್ನು ಹಳೆ ಬಾಕಿ ಉಳಿಸಿಕೊಂಡಿದ್ದವರಿಗೆ ಕೊಟ್ಟು, ಹೊಸ ಖಾತೆ ಶುರು ಮಾಡಬಹುದು. ಆದರೆ ಗಮನಿಸಿ ಇಂದಿನ ಸಾಮಾನ್ಯದಲ್ಲಿ ಅಮೆರಿಕನ್ ಡೆಟ್ ಬಾಂಡ್ ಕೊಳ್ಳಲು ಯಾರಿಗೂ ಆಸಕ್ತಿಯಿಲ್ಲ. ಅದಕ್ಕೆ ಕಾರಣ ಕುಸಿಯುತ್ತಿರುವ ಅಮೆರಿಕನ್ ಡಾಲರ್ ಮತ್ತು ಅಮೆರಿಕಾದ ವರ್ಚಸ್ಸು. ಇನ್ನೊಂದು ಕಾರಣ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಡೆಟ್ ಬಾಂಡ್ ಗಳ ಮೇಲಿನ ಹೂಡಿಕೆಗಿಂತ ಬಹಳ ಹೆಚ್ಚು ಲಾಭವನ್ನು ತಂದುಕೊಡುತ್ತಿರುವುದು. ಜಗತ್ತಿನ ಬಹುತೇಕ ಎಲ್ಲಾ ಮಾರುಕಟ್ಟೆಗಳೂ ಕೊರೋನ ನಂತರ ಉತ್ತಮ ವಹಿವಾಟು ನಡೆಸುತ್ತಿದ್ದವು. ಹೀಗಾಗಿ ಸಹಜವಾಗೇ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಶುರು ಮಾಡಿದರು. ಹೀಗಾಗಿ ಅಮೇರಿಕಾ ತನ್ನ ಹಳೆ ಸಾಲ ತೀರಿಸಲು ಬೇಕಾಗಿರುವ ಹೊಸ ಸಾಲ ಮಾರುಕಟ್ಟೆಯಲ್ಲಿ ಹುಟ್ಟುತ್ತಿಲ್ಲ. ಮತ್ತೆ ಹೂಡಿಕೆದಾರರು ಮರಳಿ ಅಮೆರಿಕನ್ ಡೆಟ್ ಬಾಂಡ್ ಕೊಳ್ಳಬೇಕು ಎಂದರೆ ಇರುವುದು ಒಂದೇ ದಾರಿ ಷೇರು ಮಾರುಕಟ್ಟೆ ಕುಸಿತ.
ಯಾವ ಮಟ್ಟದಲ್ಲಿ ಕುಸಿಯಬೇಕು ಎಂದರೆ ತೆನಾಲಿ ರಾಮನ ಬೆಕ್ಕಿನ ಕಥೆಯನ್ನು ನೆನಪಿಸಿಕೊಳ್ಳಿ. ಪಾತ್ರೆ ತಣ್ಣಗಾದ ಮೇಲೂ ಬೆಕ್ಕು ಹಾಲಿನ ಪಾತ್ರೆ ಎಂದರೆ ಬೆಚ್ಚುತ್ತಿತ್ತು ಎಂದು ಓದಿದ್ದೇವೆ ಅಲ್ಲವೇ? ಥೇಟ್ ಹಾಗೆ ಮಾರುಕಟ್ಟೆ ಸರಿಯಾದ ಮೇಲೂ ಹೂಡಿಕೆದಾರರು ಷೇರು ಮಾರುಕಟ್ಟೆ ಎಂದರೆ ಬಿಚ್ಚಬೇಕು, ಅಲ್ಲಿನ ಹೂಡಿಕೆ ಸಹವಾಸ ಬೇಡ ಎದು ಓಡಿ ಹೋಗಬೇಕು ಆ ಮಟ್ಟಕ್ಕೆ ಕುಸಿಯಬೇಕು. ಆಗ ಅಮೆರಿಕನ್ ಸರಕಾರದ ಡೆಟ್ ಬಾಂಡ್ ಅವರಿಗೆ ಆಕರ್ಷಕವಾಗಿ ಮತ್ತು ಭದ್ರತೆಯ ಇನೊಂದು ರೂಪವಾಗಿ ಕಾಣುತ್ತದೆ. ಹೀಗಾಗಿ ಮಾರುಕಟ್ಟೆ ಕುಸಿತವನ್ನು ಸೃಷ್ಟಿಸುವುದು ಟ್ರಂಪ್ ತಂಡದ ಲೆಕ್ಕಾಚಾರದ ನಡೆಯಾಗಿದೆ. ಮಾರುಕಟ್ಟೆ ಕುಸಿತವಾಗಬೇಕು ಎಂದರೆ ಸಮಾಜದಲ್ಲಿ ಅಸ್ಥಿರತೆ ಸೃಷ್ಟಿಸಬೇಕು. ಇಂತಹ ಅಸ್ಥಿರತೆ ಸೃಷ್ಟಿಸುವುದು ಹೇಗೆ ಸಾಧ್ಯ ಎಂದರೆ ನೇರ ಯುದ್ಧ ಅಥವಾ ಅಪರೋಕ್ಷ ಯುದ್ಧದ ಸನ್ನಿವೇಶಗಳಿಂದ! ಇಂದಿನ ದಿನದಲ್ಲಿ ಮದ್ದುಗುಂಡು ಸಿಡಿಸಿ ಯುದ್ಧ ಮಾಡುವುದು ಕೊನೆಯ ಅಸ್ತ್ರವಾಗಿದೆ. ಈ ಕಾರಣದಿಂದ ಟಾರಿಫ್ ವಾರ್ ಅಥವಾ ತೆರಿಗೆ ಯುದ್ಧವನ್ನು ಅಮೇರಿಕಾ ಆರಂಭಿಸಿದೆ.
ತೆರಿಗೆ ಯುದ್ದದಿಂದ ಇದರಲ್ಲಿ ಪಾಲ್ಗೊಂಡ ಎರಡೂ ದೇಶಗಳಿಗೂ ನಷ್ಟವೇ ಹೊರತು ಯಾರಿಗೂ ಲಾಭವಿಲ್ಲ. ಅರ್ಥ ಅಮೆರಿಕಕ್ಕೆ ನಷ್ಟ ಉಂಟಾಗುವುದು ಗ್ಯಾರಂಟಿ. ನಷ್ಟ ಮಾಡಿಕೊಂಡಾದರೂ ಸರಿಯೇ ಇಂತಹ ಯುದ್ಧವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಕಾರಣ ಡೆಟ್ ಸೀಲಿಂಗ್. ಮೇಲಿನ ಸಾಲುಗಳಲ್ಲಿ ಹೇಳಿದಂತೆ ಅಮೆರಿಕಾದ ಸಾಲ ಆ ದೇಶದ ಜಿಡಿಪಿ ಮೊತ್ತವನ್ನು ಕೂಡ ಮೀರಿದೆ.
ಕಳೆದ ವರ್ಷ ಜೂನ್ ವೇಳೆಯಲ್ಲಿ ಹಣಕ್ಲಾಸು ಅಂಕಣದಲ್ಲಿ ಈ ಕುರಿತು ಬರೆದಿದ್ದೆ. ಇಂದಿನ ಸನ್ನಿವೇಶ ವರ್ಷದ ಹಿಂದೆಯೇ ಸೃಷ್ಟಿಯಾಗಿತ್ತು. ಯಾವುದೇ ದೇಶದ ಸಾಲ ಆ ದೇಶದ ಜಿಡಿಪಿಯನ್ನು ಮೀರಬಾರದು ಎನ್ನುವುದು ಒಂದು ಸರಳ ಲೆಕ್ಕಾಚಾರ. ಅಂದರೆ ಗಜಿಡಿಪಿ ಮತ್ತು ಡೆಟ್ ರೇಶಿಯೋ 1:1 ಇರಬೇಕು. ಇದು ಲಿಮಿಟ್. ನಿಜ ಹೇಳಬೇಕಂದರೆ ಜಿಡಿಪಿ 1 ಎಂದು ಕೊಂಡರೆ ಡೆಟ್ 0.5 ಅಥವಾ 0.7 ಇದ್ದರೆ ಬಹಳ ಉತ್ತಮ. ಆದರೆ ಇಂದಿನ ದಿನಗಳಲ್ಲಿ ಪರ್ಫೆಕ್ಷನ್ ಹುಡುಕುವುದು ಅಪರಾಧ ಎನ್ನುವಂತಾಗಿದೆ. ಹೀಗಾಗಿ ಕೊನೆಪಕ್ಷ 1:1 ಇರಬೇಕು. ಇದಕ್ಕಿಂತ ಜಾಸ್ತಿಯಾದರೆ ಆಪತ್ತು ಎಂದರ್ಥ. ಕಳೆದ ವರ್ಷ ಜಿಡಿಪಿ ಮೀರಿಸುವ ಡೆಟ್ ಪರಿಸ್ಥಿತಿ ಸೃಷ್ಟಿಯಾಗಿತ್ತು. ಮಾರುಕಟ್ಟೆ, ಜಗತ್ತು ಅಂದಿಗೆ ಕುಸಿಯಬೇಕಿತ್ತು. ಆದರೆ ಅಂದಿನ ಅಮೆರಿಕನ್ ಸರಕಾರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿರಲಿಲ್ಲ. ಹೀಗಾಗಿ ಡೆಟ್ ಸೀಲಿಂಗ್ ಹೆಚ್ಚಳ ಮಾಡುವ ಒಪ್ಪಿಗೆಯನ್ನು ಸದನದಲ್ಲಿ ಪಡೆದುಕೊಂಡು ಸಮಸ್ಯೆಯನ್ನು ಮುಂದೂಡಲಾಗಿತ್ತು. ಇದೀಗ ಟ್ರಂಪ್ ಕಠಿಣ ನಿರ್ಧಾರ ತೆಗೆದುಕೊಂಡು ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಹಳಷ್ಟು ಜನ ಅಮೇರಿಕಾ ಅಷ್ಟೊಂದು ಸಾಲವನ್ನು ಏಕೆ ಮಾಡಿಕೊಂಡಿತು? ಅದೊಂದು ಸಾಹುಕಾರ, ಮುಂದುವರೆದ ದೇಶವಲ್ಲವೇ? ಎನ್ನುವ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದೀರಿ. ಹಾಗೆ ಅಮೇರಿಕಾ ದೇಶಕ್ಕೆ ಸಾಲ ಕೊಡುವಂತಹ ಸಾಹುಕಾರ ಯಾರು? ಎನ್ನುವ ಪ್ರಶ್ನೆಯನ್ನು ಕೂಡ ಕೇಳಿದ್ದೀರಾ. ಅದಕ್ಕೆ ಉತ್ತರ ಇಲ್ಲಿದೆ.
ಅಮೇರಿಕಾ ಸರಕಾರ ಜಗತ್ತಿನ ದೊಡ್ಡನಾಗಿ ಕಳೆದ 80/90 ವರ್ಷದಿಂದ ಬರುತ್ತಿದೆ. ಈ ಪಟ್ಟ ಸುಮ್ಮನೆ ಸಿಕ್ಕುವುದಿಲ್ಲ. ತನ್ನ ಜನರಿಗೆ, ತನ್ನ ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕು ಅದರಲ್ಲಿ ಕಂಜೂಸು ಮಾಡುವಂತಿಲ್ಲ. ಇದರ ಜೊತೆಗೆ ಜಗತ್ತಿನ ಬಡ ದೇಶಗಳಿಗೆ ಗ್ರಾಂಟ್ ರೂಪದಲ್ಲಿ ಹಣ ಸಹಾಯ ಮಾಡುವುದು, ಕೆಲವೊಂದು ಕಡೆ ತಮ್ಮ ಹಿಡಿತ ಕುಗ್ಗದಂತೆ ನೋಡಿಕೊಳ್ಳಲು ಹಣವನ್ನು ಖರ್ಚು ಮಾಡಬೇಕು. ಹೀಗೆ ಅಮೇರಿಕಾ ಎನ್ನುವ ದೇಶ ಕೇವಲ ತನ್ನ ಮನೆಯನ್ನು ನೋಡಿಕೊಳ್ಳುವುದಲ್ಲದೆ ಲಕ್ಷಾಂತರ ಕೋಟಿ ಡಾಲರ್ ಹಣವನ್ನು ಜಾಗತಿಕ ಸುಪ್ರಿಮೆಸಿ ಉಳಿಸಿಕೊಳ್ಳಲು ಖರ್ಚು ಮಾಡಬೇಕು. ಸಹಜವಾಗೇ ಆದಾಯಕ್ಕಿಂತ ಹೆಚ್ಚಿನ ಖರ್ಚು ಉತ್ಪನ್ನವಾಗಿದೆ.
ಹೀಗೆ ಆದಾಯ ಮೀರಿದ ಖರ್ಚಿಗೆ ಫಿಸ್ಕಲ್ ಡೆಫಿಸಿಟ್ ಎನ್ನಲಾಗುತ್ತದೆ. ಹೀಗೆ ಉತ್ಪನ್ನವಾದ ಡೆಫಿಸಿಟ್ ಹಣವನ್ನು ಹೊಂದಿಸಲು ಡೆಟ್ ಬಾಂಡ್ ಟ್ರಶರಿ ಬಿಲ್ ಇತ್ಯಾದಿಗಳನ್ನು ಅದು ಬಿಡುಗಡೆ ಮಾಡುತ್ತಾ ಬಂದಿತು. ಅಮೇರಿಕಾ ದೇಶದ ಪ್ರಭಾವ ನೋಡಿ ಇತರೆ ದೇಶಗಳು, ಜನ, ಒಟ್ಟಾರೆ ಜಗತ್ತಿನ ಯಾವ ಸಂಸ್ಥೆ, ದೇಶ ಅಥವಾ ವ್ಯಕ್ತಿ ಕೂಡ ಇದನ್ನು ಕೊಳ್ಳಬಹುದು ಎಂದಿರುವ ಕಾರಣ ಎಲ್ಲರೂ ಅದನ್ನು ಕೊಳ್ಳಲು ಶುರು ಮಾಡಿದರು. ನಿಗದಿತ ಬಡ್ಡಿ ಮತ್ತು ಮೂಲ ಹಣಕ್ಕೆ ಭದ್ರತೆಯನ್ನು ಅಮೇರಿಕಾ ಸರಕಾರ ನೀಡುವ ಕಾರಣ ಎಲ್ಲರೂ ಮುಗಿಬಿದ್ದು ಇದನ್ನು ಖರೀದಿಸಲು ಶುರು ಮಾಡಿದರು.
ಉದಾಹರಣೆ ನೋಡೋಣ. ಮೊದಲ ವರ್ಷದಲ್ಲಿ ಆದಾಯ 100, ಖರ್ಚು 105 ಎಂದುಕೊಳ್ಳಿ. ಆಗ ಆದಾಯ ಮೀರಿದ ಖರ್ಚು 5 ಡಾಲರ್. ಈ ಹಣವನ್ನು ಡೆಟ್ ಬಾಂಡ್ ವಿತರಣೆ ಮೂಲಕ ಅಮೇರಿಕಾ ತುಂಬಿ ಕೊಂಡಿತು. ಆದರೆ 5 ಡಾಲರ್ ಹಣವನ್ನು ಮೂರು ವರ್ಷದ ನಂತರ ವಾಪಸ್ಸು ಕೊಡುವುದಾಗಿ ಸಾಲ ಮಾಡುವ ಸಮಯದಲ್ಲಿ ಹೇಳಲಾಗಿತ್ತು. ಹೀಗಾಗಿ ಮೂರನೇ ವರ್ಷ ಮತ್ತೆ ಆದಾಯ ಮೀರಿದ ಖರ್ಚು 6 ಡಾಲರ್ ಎಂದುಕೊಳ್ಳಿ ಇದರ ಜೊತೆಗೆ ಮೊದಲ ವರ್ಷದ ಡೆಟ್ 5 ಡಾಲರ್ ವಾಪಸ್ಸು ಕೊಡಬೇಕು. ಹೀಗಾಗಿ ಮೂರನೇ ವರ್ಷದ ಶಾರ್ಟೆಜ್ 11 ಡಾಲರ್! ಹೀಗಾಗಿ ಮೂರನೇ ವರ್ಷ 11 ಡಾಲರ್ ಡೆಟ್ ಬಾಂಡ್ ವಿತರಿಸಬೇಕಾಯ್ತು. ಹೀಗೆ ಇದೆ ಪ್ರಕ್ರಿಯೆ ಕಳೆದ 60 ವರ್ಷಕ್ಕೂ ಹೆಚ್ಚಿನ ಸಮಯ ನಡೆದುಕೊಂಡು ಬಂದು ಅದು ಇಂದಿಗೆ ದೊಡ್ಡ ಬೆಟ್ಟವಾಗಿ ಬೆಳೆದು ನಿಂತಿದೆ. ಸಾಮಾನ್ಯ ಸ್ಥಿತಿಯಲ್ಲಿ ಇದನ್ನು ಅಮೇರಿಕಾ ಹೇಗೂ ಸಂಭಾಳಿಸಿ ಬಿಡುತ್ತಿತ್ತು. ಆದರೆ ಚೀನಾ ಎನ್ನುವ ದೇಶದ ಉಗಮ ಅಮೆರಿಕಕ್ಕೆ ಮುಳ್ಳಾಗಿದೆ. ಅಮೇರಿಕ್ಕ ವರ್ಚಸ್ಸು ಈ ವರ್ಷಗಳಲ್ಲಿ ಬಹಳ ಮಟ್ಟಿಗೆ ಕುಸಿಯಲು ಕಾರಣ ಚೀನಾ ಎನ್ನುವ ಅಸಾಮಾನ್ಯ ದೇಶ. ಈ ಎಲ್ಲಾ ಕಾರಣದಿಂದ ಅಮೇರಿಕಾ ಸಾಲದಲ್ಲಿ ಮುಳುಗಿದೆ. ಸಾಲ ಕೊಟ್ಟವರರಲ್ಲಿ ಜಪಾನ್ ಸಹಿತ ಹತ್ತಾರು ದೇಶಗಳಿವೆ. ಭಾರತ ಕೂಡ ಅಮೆರಿಕಾದ ಡೆಟ್ ಬಾಂಡ್ ಕೊಂಡಿದೆ. ಆದರೆ ಭಾರತ ಈ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ. ಜಪಾನ್ ಮೊದಲಿಗನ ಸ್ಥಾನದಲ್ಲಿದೆ.
ಗಮನಿಸಿ ಒಂದು ಪದಾರ್ಥ ಭಾರತದಿಂದ ಅಮೇರಿಕಾ ತಲುಪಲು 100 ರೂಪಾಯಿ ಆಯ್ತು ಎಂದುಕೊಳ್ಳಿ ಅಂದರೆ ಪದಾರ್ಥದ ಬೆಲೆ ಪ್ಲಸ್ ಸಾಗಾಣಿಕೆ ವೆಚ್ಚ ಎಲ್ಲಾ ಸೇರಿ 100 ರೂಪಾಯಿ ಎಂದುಕೊಳ್ಳಿ. ಅಮೇರಿಕಾ ಇದರ ಮೇಲೆ 26 ಪ್ರತಿಶತ ತೆರಿಗೆ ಹಾಕಿದರೆ ಆಗ ಪದಾರ್ಥದ ಬೆಲೆ 126 ರೂಪಾಯಿ ಆಯ್ತು. ಅಂದರೆ ಅಮೆರಿಕನ್ ಗ್ರಾಹಕನ ಜೇಬಿಗೆ 26 ರೂಪಾಯಿ ಹೆಚ್ಚಿಗೆ ಹೊರೆಯಾಯ್ತು. ಇದರಿಂದ ಆ ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಹೆಚ್ಚಾದ ಹಣದುಬ್ಬರ ಇನ್ನು ಹತ್ತಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದೊಂದು ವಿಷ ವರ್ತುಲ. ಇದರಿಂದ ಮರಳುವುದು ಸುಲಭವಲ್ಲ. ಇದರಿಂದ ಲಾಭವೆಂದರೆ ಭಾರತದ ಪದಾರ್ಥದ ಬದಲು ಅಮೇರಿಕಾದಲ್ಲಿ ಉತ್ಪನ್ನವಾದ ಪದಾರ್ಥ ಬಳಸಲು ಶುರು ಮಾಡಲಿ ಎನ್ನುವುದು. ಆದರೆ ಅದೇ ಪದಾರ್ಥವನ್ನು ಅಮೇರಿಕಾದಲ್ಲಿ ಉತ್ಪಾದಿಸಲು 150೦ ರೂಪಾಯಿ ಬೇಕಾಗುತ್ತದೆ ಎನ್ನುವುದು ಕಟುಸತ್ಯ. ಇದರ ಜೊತೆಗೆ ಕೆಲವು ಪದಾರ್ಥಗಳನ್ನು ಉತ್ಪಾದಿಸಲು ತಗಲುವ ಸಮಯ ಕೂಡ ಲೆಕ್ಕ ಹಾಕಬೇಕಾಗುತ್ತದೆ.
ಈ ಎಲ್ಲಾ ಕಾರಣದಿಂದ ಅಮೇರಿಕಾ ತನಗೆ ಅತ್ಯವಶ್ಯಕ ಎನ್ನಿಸಿದ ಪದಾರ್ಥಗಳ ಮೇಲೆ, ಮಿತ್ರ ದೇಶಗಳ ಪದಾರ್ಥಗಳ ಮೇಲೆ ನಯಾಪೈಸೆ ತೆರಿಗೆಯನ್ನು ಹಾಕುತ್ತಿರಲಿಲ್ಲ. ಇದೀಗ ತೆರಿಗೆ ಹಾಕಿದ ಕಾರಣ ಅಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಗ್ರಾಹಕನಿಗೆ ಹೆಚ್ಚಿನ ಬಿಸಿ ತಟ್ಟುತ್ತದೆ. ತೆರಿಗೆ ಹಾಕುವುದರ ಹಿಂದಿನ ಉದ್ದೇಶ ಎರಡು; ಮೊದಲನೆಯದ್ದು ಇದರಿಂದ ಎಲ್ಲಾ ದೇಶಗಳೂ ಒಂದು ರೀತಿಯ ಶಾಕ್ ಗೆ ಒಳಗಾಗುತ್ತವೆ. ಆಗ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗುತ್ತದೆ. ಎರಡನೇ ಉದ್ದೇಶ ಬೇರೆ ದೇಶಗಳು ಅಮೆರಿಕಾದೊಂದಿಗೆ ಸಂಧಾನಕ್ಕೆ ಬರುತ್ತವೆ ಆಗ ಅವರೊಂದಿಗೆ ಕುಳಿತು ಅಮೇರಿಕಾದಲ್ಲಿ ನಿಮ್ಮ ಉದ್ಯಮ ಶುರು ಮಾಡಿ ಎಂದು ಒತ್ತಾಯ ಹೇರುವುದು, ತನ್ಮೂಲಕ ಅಮೇರಿಕಾದಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ಹಣದುಬ್ಬರವನ್ನು ಕೂಡ ನಿಯಂತ್ರಣಕ್ಕೆ ತರುವುದು. ಆದರೆ ಅಮೇರಿಕಾ ಯೋಚಿಸಿದಂತೆ ಎಲ್ಲಾ ಆಗಬೇಕು ಎಂದಿಲ್ಲ. ಹಿಂದೆ ಅಮೇರಿಕಾ ಯೋಚಿಸಿದಂತೆ ಎಲ್ಲಾ ನಡೆಯುತ್ತಿತ್ತು. ಈಗ ಕಾಲ ಬದಲಾಗಿದೆ. ಚೀನಾ ಅಮೇರಿಕಾ ದೇಶಕ್ಕೆ ಸೆಡ್ಡು ಹೊಡೆದು ನಿಂತಿದೆ. ಯೂರೋಪಿಯನ್ ಯೂನಿಯನ್ ಕೂಡ ಅಮೇರಿಕಾ ವಿರುದ್ಧ ತೆರಿಗೆ ಸಮರಕ್ಕೆ ಸಿದ್ಧವಾಗಿದೆ. ಹೀಗಾಗಿ ಇನ್ನಷ್ಟು ಹೆಚ್ಚಿನ ಅಸ್ಥಿರತೆ ಉಂಟಾಗಿದೆ.
ಕೊನೆಮಾತು: ಗಮನಿಸಿ ನೋಡಿ, ಸಂಧಾನಕ್ಕೆ ಹೋದರೂ ಅಮೇರಿಕಾ ಕೊನೆಯ ನಗು ಬೀರುತ್ತದೆ. ಹೋಗದೆ ತೆರಿಗೆ ಸಮರಕ್ಕೆ ಇಳಿದರೂ ಅಮೇರಿಕಾ ಗೆಲ್ಲುತ್ತದೆ. ಏಕೆಂದರೆ ಇನ್ನಷ್ಟು ಅಸ್ಥಿರತೆ ಹೆಚ್ಚಾಗುತ್ತದೆ. ಅಸ್ಥಿರತೆ ಹೆಚ್ಚಾದಷ್ಟು ಜಾಗತಿಕ ಮಾರುಕಟ್ಟೆ ಕುಸಿಯುತ್ತದೆ. ಮಾರುಕಟ್ಟೆ ಕುಸಿದಂತೆ ಹೂಡಿಕೆದಾರನ ವಿಶ್ವಾಸ ಕೂಡ ಕುಸಿಯುತ್ತದೆ. ಆಗ ಅಮೇರಿಕಾ ಸುಲಭವಾಗಿ ತನ್ನ ಟ್ರಶರಿ ಬಿಲ್ ಗಳನ್ನು ಮಾರಿ ಹಣವನ್ನು ಹೊಂದಿಸಿಕೊಳ್ಳಬಹುದು. ಹಳೆಯ ಆಟಗಾರ ಅಮೇರಿಕಾ ಸದ್ಯಕ್ಕೆ ವಿನ್ನರ್.
Advertisement