
ಭಾರತ 52 ಮಿಲಿಟರಿ ಉಪಗ್ರಹಗಳನ್ನು ಉಡಾವಣೆಗೊಳಿಸಿ, ಆ ಮೂಲಕ ತನ್ನ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ದೃಢವಾದ ಹೆಜ್ಜೆ ಇಡುತ್ತಿದೆ. ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್ ಅವರು ಎಪ್ರಿಲ್ 7ರಂದು ನವದೆಹಲಿಯಲ್ಲಿ ನಡೆದ ಇಂಡಿಯನ್ ಡಿಫ್‌ಸ್ಪೇಸ್ ಸಿಂಪೋಸಿಯಂನಲ್ಲಿ ಈ ಕುರಿತು ಅಧಿಕೃತ ಘೋಷಣೆ ನಡೆಸಿದರು. ಈ ಯೋಜನೆ ಭಾರತಕ್ಕೆ ತನ್ನ ಗಡಿಗಳ ಕಣ್ಗಾವಲು ನಡೆಸಲು, ಗುಪ್ತಚರ ಮಾಹಿತಿ ಕಲೆಹಾಕಲು, ಮತ್ತು ರಕ್ಷಣಾ ಉದ್ದೇಶಗಳಿಗೆ ಸಂವಹನ ಅಭಿವೃದ್ಧಿ ಪಡಿಸಲು ನೆರವಾಗಲಿದೆ.
ಈ ಉಪಗ್ರಹಗಳು ಭಾರತೀಯ ಭದ್ರತಾ ಪಡೆಗಳ ಕಣ್ಣು ಮತ್ತು ಕಿವಿಗಳಾಗಿ ಕಾರ್ಯ ನಿರ್ವಹಿಸಲಿವೆ. ಈ ಉಪಗ್ರಹಗಳು ನೈಜ ಸಮಯದ ಕಣ್ಗಾವಲು ನಡೆಸಿ, ಸೇನಾ ಪಡೆಗಳ ಚಲನವಲನಗಳನ್ನು ಗಮನಿಸಿ, ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿನ ಗಡಿಗಳಂತಹ ಸೂಕ್ಷ್ಮ ಪ್ರದೇಶಗಳ ಮೇಲೂ ಸೂಕ್ಷ್ಮವಾಗಿ ಕಣ್ಣಿಡಲಿವೆ. ಅದರೊಡನೆ, ವ್ಯಾಪಾರ ಮತ್ತು ಭದ್ರತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಹಿಂದೂ ಮಹಾಸಾಗರ ಪ್ರದೇಶದ ಮೇಲೂ ಕಣ್ಣಿಡಲಿವೆ.
ಈ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆ (ಎಲ್ಇಒ), ಮೀಡಿಯಂ ಅರ್ತ್ ಆರ್ಬಿಟ್ (ಎಂಇಒ), ಜಿಯೋಸ್ಟೇಷನರಿ ಆರ್ಬಿಟ್ (ಜಿಇಒ) ಗಳಂತಹ ವಿವಿಧ ಕಕ್ಷೆಗಳಲ್ಲಿ ಅಳವಡಿಸಲಾಗುತ್ತದೆ. ಇವುಗಳು ಸಂಪೂರ್ಣ ವ್ಯಾಪ್ತಿಯನ್ನು ಹೊಂದಿ, ಮಾಹಿತಿ ಒದಗಿಸಲಿವೆ. ಮಿಲಿಟರಿ ಉಪಗ್ರಹಗಳು ಆಧುನಿಕ ಇಮೇಜಿಂಗ್ ಸಿಸ್ಟಮ್‌ಗಳು, ಸೆನ್ಸರ್‌ಗಳು, ಮತ್ತು ಸಿಂಥೆಟಿಕ್ ಅಪರ್ಚರ್ ರೇಡಾರ್‌ಗಳನ್ನು (ಎಸ್ಎಆರ್) ಹೊಂದಿ, ಎಲ್ಲಾ ಹವಾಮಾನ ಮತ್ತು ಬೆಳಕಿನ ಪರಿಸ್ಥಿತಿಗಳಲ್ಲೂ ಕಾರ್ಯ ನಿರ್ವಹಿಸಲಿವೆ.
ಈ ಯೋಜನೆ ಭಾರತೀಯ ಸೇನೆಗೆ ಕ್ಷಿಪಣಿ ಉಡಾವಣೆಗಳು ಅಥವಾ ಅನಧಿಕೃತ ಚಲನವಲನಗಳಂತಹ ಅಪಾಯಗಳನ್ನು ಮೊದಲೇ ಗುರುತಿಸಲು ನೆರವಾಗುತ್ತದೆ. ಈ ಉಪಗ್ರಹಗಳು ಆಧುನಿಕ ಯುದ್ಧಗಳಲ್ಲಿ ಅಪಾಯಕಾರಿ ಆಯುಧಗಳಾಗಿರುವ ಹೈಪರ್‌ಸಾನಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಗುರುತಿಸಲು ಸಹಾಯವಾಗುತ್ತವೆ. ಈ ಉಪಗ್ರಹಗಳು ಸಮುದ್ರದಲ್ಲಿ ಸಾಗಾಣಿಕಾ ಮಾರ್ಗಗಳನ್ನು ಗಮನಿಸಲು, ಮತ್ತು ಕಡಲ್ಗಳ್ಳತನ, ಅಕ್ರಮ ಮೀನುಗಾರಿಕೆಯಂತಹ ಅಕ್ರಮ ಚಟುವಟಿಕೆಗಳನ್ನು ಗುರುತಿಸಲು ಸಹಾಯವಾಗುತ್ತವೆ.
ಈ ಉಪಗ್ರಹಗಳ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ, ಸುಧಾರಿತ ಸಂವಹನ. ಈ ಉಪಗ್ರಹಗಳು ಭಾರತೀಯ ಸೇನೆಯ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ನಡುವೆ ಸಂಪರ್ಕ ಸಾಧಿಸಿ, ಅವುಗಳು ದುರ್ಗಮ ಪ್ರದೇಶಗಳಲ್ಲೂ ಜೊತೆಯಾಗಿ ಕಾರ್ಯಾಚರಿಸಲು ಅನುಕೂಲ ಕಲ್ಪಿಸುತ್ತವೆ. ಈ ಉಪಗ್ರಹಗಳು ಅತ್ಯಂತ ನಿಖರವಾದ ದಾಳಿ ನಡೆಸಲು ಮತ್ತು ಸೇನಾಪಡೆಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯವಾದ ಸಂಚರಣೆಗೂ (ನ್ಯಾವಿಗೇಶನ್) ನೆರವಾಗುತ್ತದೆ.
ಮುಖ್ಯವಾಗಿ, ಈ ಉಪಗ್ರಹ ಜಾಲ ಭಾರತದ ಬಾಹ್ಯಾಕಾಶ ರಕ್ಷಣೆಯನ್ನು ವೃದ್ಧಿಸಲಿದೆ. ಬಾಹ್ಯಾಕಾಶ ಈಗ ಆಧುನಿಕ ಯುದ್ಧರಂಗವಾಗಿ ಬದಲಾಗುತ್ತಿದ್ದು, ಭಾರತ ಉಪಗ್ರಹ ನಿರೋಧಕ ಆಯುಧಗಳು ಮತ್ತು ಇಲೆಕ್ಟ್ರಾನಿಕ್ ಯುದ್ಧಗಳಂತಹ ಸವಾಲುಗಳಿಗೂ ಸಿದ್ಧವಾಗುತ್ತಿದೆ. ವಿವಿಧ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಅಳವಡಿಸುವುದರಿಂದ, ಒಂದು ಉಪಗ್ರಹ ವ್ಯವಸ್ಥೆ ದಾಳಿಗೊಳಗಾದರೆ ಉಳಿದ ವ್ಯವಸ್ಥೆಗಳು ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಲಾಗುತ್ತದೆ. ಆ ಮೂಲಕ ಭಾರತದ ರಕ್ಷಣಾ ವ್ಯವಸ್ಥೆಗಳು ಅಡ್ಡಿಯಿಲ್ಲದೆ ಕಾರ್ಯಾಚರಿಸುತ್ತವೆ.
ಮಿಲಿಟರಿ ಉಪಗ್ರಹಗಳು ಗುಪ್ತಚರ ಮಾಹಿತಿ ಕಲೆಹಾಕಲೂ ಅತ್ಯಂತ ಮುಖ್ಯವಾಗಲಿವೆ. ಉದಾಹರಣೆಗೆ, ಈ ಉಪಗ್ರಹಗಳು ಚೀನಾ ಗಡಿಯಾದ್ಯಂತ ಮೂಲಭೂತ ವ್ಯವಸ್ಥೆಗಳನ್ನು ಅಥವಾ ಮಿಲಿಟರಿ ಬೆಳವಣಿಗಗಳನ್ನು ಗಮನಿಸಲು, ಪಾಕಿಸ್ತಾನದ ಒಳಗಿನ ಚಟುವಟಿಕೆಗಳನ್ನು ಗುರುತಿಸಲು ಶಕ್ತವಾಗಿವೆ. ಇಂತಹ ಮಾಹಿತಿಗಳು ಮಿಲಿಟರಿ ಯೋಜನೆ ಮತ್ತು ರಾಜತಾಂತ್ರಿಕ ಮಾತುಕತೆಗಳಿಗೆ ಸಹಾಯವಾಗುತ್ತವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 52 ಉಪಗ್ರಹಗಳ ಪೈಕಿ 21 ಉಪಗ್ರಹಗಳನ್ನು ಫ್ರಾನ್ಸ್‌ನೊಡನೆ ಸಂಭಾವ್ಯ ಸಹಯೋಗದಲ್ಲಿ ನಿರ್ಮಿಸಿ ಉಡಾವಣೆಗೊಳಿಸಲಿದೆ. ಇನ್ನುಳಿದ 31 ಉಪಗ್ರಹಗಳನ್ನು ಭಾರತದ ಖಾಸಗಿ ಕಂಪನಿಗಳು ನಿರ್ಮಿಸಲಿದ್ದು, ಆ ಮೂಲಕ ಭಾರತದ ರಕ್ಷಣಾ ಕಾರ್ಯಗಳಲ್ಲಿ ಖಾಸಗಿ ವಲಯಕ್ಕೂ ಉತ್ತೇಜನ ಲಭಿಸಲಿದೆ. ಮೊದಲ ಹಂತದ ಉಪಗ್ರಹಗಳು 2027-2028ರಲ್ಲಿ ಉಡಾವಣೆಗೊಳ್ಳುವ ನಿರೀಕ್ಷೆಗಳಿವೆ.
ಈ ಸರ್ಕಾರಿ - ಖಾಸಗಿ ಮಾದರಿ ಆರ್ಥಿಕ ಪ್ರಗತಿಗೂ ನೆರವಾಗಲಿದೆ. ಬಹಳಷ್ಟು ಖಾಸಗಿ ಸಂಸ್ಥೆಗಳು ಕೇವಲ ಉಪಗ್ರಹ ನಿರ್ಮಾಣದಲ್ಲಿ ಮಾತ್ರವಲ್ಲದೆ, ಅವುಗಳ ಉಡಾವಣೆ, ಭೂ ಬೆಂಬಲ, ಉದ್ಯೋಗ ಸೃಷ್ಟಿ, ಮತ್ತು ನಾವೀನ್ಯತೆಗಳಲ್ಲೂ ಪಾತ್ರ ವಹಿಸಲಿವೆ. ಭಾರತ ಸರ್ಕಾರದ ಬಾಹ್ಯಾಕಾಶ ಸುಧಾರಣೆಗಳು ಈಗಾಗಲೇ ಬಾಹ್ಯಾಕಾಶ ವಲಯದ ಸ್ಟಾರ್ಟಪ್ ಸಂಸ್ಥೆಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದ್ದು, ಈ ಯೋಜನೆಯೂ ಸರ್ಕಾರದ ನಡೆಗೆ ಪೂರಕವಾಗಿದೆ.
ಜನರಲ್ ಚೌಹಾಣ್ ಅವರು ಭಾರತ ಈಗ ತನ್ನ ಮೊದಲ ಮಿಲಿಟರಿ ಬಾಹ್ಯಾಕಾಶ ಸಿದ್ಧಾಂತದ ಕುರಿತು ಕಾರ್ಯ ನಿರ್ವಹಿಸುತ್ತಿದ್ದು, ಅದು ಭವಿಷ್ಯದ ಯುದ್ಧಗಳಲ್ಲಿ ಭಾರತೀಯ ಸೇನೆ ಬಾಹ್ಯಾಕಾಶವನ್ನು ಹೇಗೆ ಉಪಯೋಗಿಸಬೇಕು ಎಂದು ಮಾರ್ಗದರ್ಶನ ನೀಡಲಿದೆ. ಅದರೊಡನೆ, ಬಾಹ್ಯಾಕಾಶ ತ್ಯಾಜ್ಯ, ಸೈಬರ್ ಅಪಾಯಗಳಂತಹ ಸಮಸ್ಯೆಗಳನ್ನು ಎದುರಿಸಲು ನೆರವಾಗಿ, ಭಾರತದ ಬಾಹ್ಯಾಕಾಶ ಆಸ್ತಿಗಳನ್ನು ದಾಳಿಯಿಂದ ರಕ್ಷಿಸಲು ನೆರವಾಗಲಿದೆ.
ಅಮೆರಿಕಾ, ಚೀನಾ ಮತ್ತು ರಷ್ಯಾದಂತಹ ದೇಶಗಳು ಬಾಹ್ಯಾಕಾಶದ ಮೇಲೆ ಅಪಾರ ಪ್ರಮಾಣದ ಹೂಡಿಕೆ ನಡೆಸುತ್ತಿದ್ದು, ಭಾರತದ ಯೋಜನೆ ಭಾರತ ಹಿಂದುಳಿಯದಂತೆ ನೋಡಿಕೊಳ್ಳುತ್ತದೆ. ಈ ಉಪಗ್ರಹ ಯೋಜನೆ ಭಾರತದ ಬೆಳೆಯುತ್ತಿರುವ ತಾಂತ್ರಿಕ ಶಕ್ತಿ ಮತ್ತು ತನ್ನ ಭವಿಷ್ಯವನ್ನು ಕಾಪಾಡಿಕೊಳ್ಳುವ ಬಯಕೆಗೆ ಸಾಕ್ಷಿಯಾಗಿದೆ. ಅದರೊಡನೆ, ಬಾಹ್ಯಾಕಾಶ ಭದ್ರತಾ ಕ್ಷೇತ್ರದಲ್ಲಿ ಮುಂಚೂಣಿ ನಾಯಕನಾಗುವ ಭಾರತದ ಬದ್ಧತೆಗೂ ಈ ಉಪಗ್ರಹಗಳ ಉಡಾವಣೆ ಸಾಕ್ಷಿಯಾಗಲಿದೆ.
ಒಟ್ಟಾರೆಯಾಗಿ, ಭಾರತದ 52 ಮಿಲಿಟರಿ ಉಪಗ್ರಹಗಳು ದೇಶವನ್ನು ರಕ್ಷಿಸಿ, ರಕ್ಷಣಾ ಕಾರ್ಯಾಚರಣೆಗಳನ್ನು ಸುಧಾರಿಸಿ, ಭವಿಷ್ಯದಲ್ಲಿ ತಲೆದೋರಬಲ್ಲ ಬಾಹ್ಯಾಕಾಶ ಸಮರಗಳನ್ನು ಎದುರಿಸಲು ನೆರವಾಗಲಿವೆ. ಈ ಯೋಜನೆ ಭಾರತದ ಪಾಲಿಗೆ ಹೆಮ್ಮೆಯಾಗಲಿದ್ದು, ನಮ್ಮ ಆಕಾಶ ಮತ್ತು ಗಡಿಗಳನ್ನು ಕಾಯ್ದುಕೊಳ್ಳಲು ಅನುಕೂಲಕರವಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement