D ಕೋಡ್: ರಾಜ್ಯಪಾಲರಿಂದ ಗಡುವು ಬಯಸುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಈಗಿನ ಸನ್ನಿವೇಶದಲ್ಲಿ ಮುಖ್ಯವಾಗಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲ ವರ್ಸಸ್‌ ರಾಜ್ಯ ಸರ್ಕಾರ ಎನ್ನುವ ವಾತಾವರಣ ನಿರ್ಮಾಣವಾಗಿದೆ.
Tamil Nadu CM- TN governor (file photo)
ತಮಿಳುನಾಡು ಸಿಎಂ- ತಮಿಳುನಾಡು ರಾಜ್ಯಪಾಲ (ಸಂಗ್ರಹ ಚಿತ್ರ)online desk
Updated on

ಸರ್ಕಾರಗಳು ತಮಗೆ ಸಲ್ಲಿಸುವ ಮಸೂದೆಗಳಿಗೆ ರಾಜ್ಯಪಾಲರು ನಿಗದಿತ ಸಮಯದೊಳಗೆ ಸಹಿ ಮಾಡುವ ಅಥವಾ ತಿರಸ್ಕರಿಸುವ ಗಡುವು ವಿಧಿಸಬೇಕು ಎಂದು ಅನೇಕ ರಾಜ್ಯ ಸರ್ಕಾರಗಳು ಈಗ ಬಯಸುತ್ತಿವೆ. ಹಾಗೆ ನೋಡಿದರೆ ರಾಜ್ಯಪಾಲರೂ ಸರ್ಕಾರದ (ಶಾಸಕಾಂಗದ) ಭಾಗವೇ ಆದರೂ ಕೆಲವು ರಾಜ್ಯ ಸರ್ಕಾರಗಳಿಗೆ ಮಾತ್ರ ಅವರು ಹೊರಗಿನವರಂತೆ ಆಗಿರುವುದು ವಿಚಿತ್ರ ಹಾಗೂ ಅದಕ್ಕೆ ಅನೇಕ ಐತಿಹಾಸಿಕ, ಪ್ರಸ್ತುತ ಕಾರಣಗಳೂ ಇವೆ. ಯಾವ ರಾಜ್ಯಗಳು ರಾಜ್ಯಪಾಲರಿಗೆ ಸಮಯಮಿತಿ ಹೇರಲು ಆಗ್ರಹ ಮಾಡುತ್ತಿವೆ ಎಂದು ನೋಡಿದಾಗ, ಬಿಜೆಪಿ ಅಥವಾ ಎನ್‌ಡಿಎ ಅಧಿಕಾರದಲ್ಲಿಲ್ಲದ ರಾಜ್ಯಗಳು ಎನ್ನುವುದು ತಿಳಿಯುತ್ತದೆ.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, ಬಿಜೆಪಿ ಮತ್ತಿತರ ಪಕ್ಷಗಳಿದ್ದ ರಾಜ್ಯ ಸರ್ಕಾರಗಳೂ ರಾಜ್ಯಪಾಲರ ಕುರಿತು ಒಂದಿಲ್ಲೊಂದು ದೂರು ಹೇಳುತ್ತಲೇ ಇದ್ದವು. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿವೆ ಎನ್ನಬಹುದು.

ಈಗಿನ ಸನ್ನಿವೇಶದಲ್ಲಿ ಮುಖ್ಯವಾಗಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲ ವರ್ಸಸ್‌ ರಾಜ್ಯ ಸರ್ಕಾರ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಎನ್ನುವುದು ಸಾಮಾನ್ಯವಾಗಿ ಶಾಸಕರ ಕುರಿತು ಹೇಳುವ ಮಾತು. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳೇ ಪ್ರಭುಗಳು. ಪ್ರಜೆಗಳು ಎಂದರೆ ಜನರು. ಅಲ್ಲಿಗೆ, ಜನರಿಂದ ನೇರವಾಗಿ ಆಯ್ಕೆ ಆಗಿರುವ ಶಾಸಕರೇ ಭಾರತದ ಸಂವಿಧಾನದ ನಿಜವಾದ ವಾರಸುದಾರರು. ಹಾಗಾಗಿ, ಜನರಿಂದ ಆಯ್ಕೆಯಾಗಿರುವ ಸರ್ಕಾರವೊಂದು ಮಸೂದೆಯನ್ನು ಒಪ್ಪಿಗೆಗೆ ಕಳಿಸಿಕೊಟ್ಟಾಗ, ‘ಯಾವುದೇ ಉತ್ತರದಾಯಿತ್ವ ಇಲ್ಲದ’, ‘ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ’ ರಾಜ್ಯಪಾಲರು (ಹಾಗೂ ರಾಷ್ಟ್ರಪತಿಯವರು) ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ತಮ್ಮ ಬಳಿಯೇ ಇಟ್ಟುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎನ್ನುವುದು ಈ ರಾಜ್ಯಗಳ ವಾದ. ಮೇಲ್ನೋಟಕ್ಕೆ ಅದು ಸರಿ ಎನ್ನಿಸುತ್ತದೆ. ಆದರೆ ಇಂತಹ ಒಂದು ಹುದ್ದೆಯನ್ನು (ರಾಜ್ಯಪಾಲ, ರಾಷ್ಟ್ರಪತಿ) ಸಂವಿಧಾನಕರ್ತೃಗಳು ಸೃಷ್ಟಿಸಿದ್ದಾದರೂ ಏತಕ್ಕೆ? ಅದರ ಹಿಂದೆ ಭಾರತೀಯ ಪರಿಪ್ರೇಕ್ಷೆಯ ಆಲೋಚನೆ ಇದೆಯೇ ನೋಡಬೇಕು.

Tamil Nadu CM- TN governor (file photo)
ಡಿ-ಕೋಡ್: ಸಿದ್ದರಾಮಯ್ಯ/ಡಿ.ಕೆ ಶಿವಕುಮಾರ್‌ ನೇತೃತ್ವ; 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾರು ಹಿತವರು?

ಇದೀಗ ಚರ್ಚೆಯಲ್ಲಿರುವ ರಾಜ್ಯಪಾಲರ ಅಧಿಕಾರದ ವಿಚಾರವು ಮುಖ್ಯವಾಗಿ ಸಂವಿಧಾನದ ಅನುಚ್ಛೇದ 200ಕ್ಕೆ ಸಂಬಂಧಿಸಿದ್ದು. ಅದರ ಅನ್ವಯ ರಾಜ್ಯಪಾಲರು ಯಾವುದೇ ಮಸೂದೆಯನ್ನು ಒಪ್ಪಬಹುದು, ತಿರಸ್ಕರಿಸಬಹುದು (ಹಣಕಾಸು ವಿಧೇಯಕವನ್ನು ಹೊರತುಪಡಿಸಿ), ಕಾಯ್ದಿರಿಸಿಕೊಳ್ಳಬಹುದು ಅಥವಾ ರಾಷ್ಟ್ರಪತಿಯವರ ನಿರ್ಧಾರಕ್ಕಾಗಿ ರವಾನೆ ಮಾಡಬಹುದು. ಈ ಅನುಚ್ಛೇದದ ಕುರಿತು ಹಾಗೂ ಇನ್ನಿತರೆ ಅನುಚ್ಛೇದಗಳ ಕುರಿತು ಸಂವಿಧಾನ ರಚನಾ ಸಭೆಯ ಚರ್ಚೆಯ ಸಂದರ್ಭದಲ್ಲಿ (1948ರ ನವೆಂಬರ್‌ 4, 1949ರ ಮೇ 31, ಇತ್ಯಾದಿ) ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಅನೇಕ ವಿಚಾರಗಳನ್ನು ಸ್ಪಷ್ಟಪಸಿದ್ದಾರೆ. ರಾಷ್ಟ್ರಪತಿ ಹಾಗೂ ರಾಜ್ಯಪಾಲ ಹುದ್ದೆಗಳು ಅಮೆರಿಕದಲ್ಲಿರುವಂತೆ ಎಲ್ಲ ಅಧಿಕಾರವನ್ನು ಹೊಂದಿಲ್ಲ, ಆ ಹುದ್ದೆಗಳು ಶಾಸಕಾಂಗಕ್ಕೆ ಅನುಗುಣವಾಗಿಯೇ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಹಾಗೆಯೇ, ಸಂವಿಧಾನಕ್ಕೆ ವಿರುದ್ಧವಾಗಿರುವ ವಿಚಾರಗಳು ನಡೆದರೆ ಅದನ್ನು ತಡೆಯುವ ಅಧಿಕಾರವನ್ನೂ ಈ ಹುದ್ದೆಗಳಿಗೆ ನೀಡಲಾಗಿದೆ. ರಾಜ್ಯಪಾಲರಿಗೆ ಅತಿ ಹೆಚ್ಚು ಅಧಿಕಾರ ನೀಡಿ ಪ್ರಜಾಪ್ರಭುತ್ವವನ್ನು ನಿರ್ಬಂಧಿಸಲಾಗುತ್ತಿದೆ ಎನ್ನುವ ವಾದಗಳನ್ನೂ ಅಂಬೇಡ್ಕರ್‌ ಅವರು ನಿರಾಕರಿಸಿದ್ದಾರೆ. ಅಲ್ಲಿಗೆ, ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಸ್ಥಾನಗಳ ಸೃಜನೆ ಮತ್ತು ಅಧಿಕಾರ ನೀಡಿಕೆಯಲ್ಲಿ ಅಂಬೇಡ್ಕರ್‌ ಅವರಿಗೆ ಸ್ಪಷ್ಟನೆ ಇತ್ತು.

ಭಾರತದ ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಅತ್ಯಂತ ಕಡಿಮೆ ಅವಕಾಶವನ್ನು ನೀಡಲಾಗಿದೆ. ಇದರ ನಡುವೆಯೂ 1975ರಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಅಂಥದ್ದೊಂದು ಪ್ರಯತ್ನ ನಡೆಯಿತಾದರೂ ಜನಾಂದೋಳನವು ಅದನ್ನು ಹಿಮ್ಮೆಟ್ಟಿಸಿತು. ನಂತರ ಅಧಿಕಾರಕ್ಕೆ ಬಂದ ಜನತಾ ಸರ್ಕಾರವು, ಭವಿಷ್ಯದಲ್ಲಿ ತುರ್ತುಪರಿಸ್ಥಿತಿ ಹೇರುವ ಅವಕಾಶಗಳಿಗೂ ಸಾಕಷ್ಟು ನಿಯಂತ್ರಣವನ್ನು ಹೇರುವಂತೆ ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಿತು. ಹೀಗೆ, ಸರ್ವಾಧಿಕಾರ ಆಡಳಿತವನ್ನು ಬಾರದಂತೆ ತಡೆಯಲು ಇರುವ ಅನೇಕ ತಂತ್ರಗಳಲ್ಲಿ ರಾಷ್ಟ್ರಪತಿ, ರಾಜ್ಯಪಾಲರ ಹುದ್ದೆಗಳೂ ಒಂದು. ರಾಜ್ಯಪಾಲರು, ರಾಷ್ಟ್ರಪತಿಯವರು ಶಾಸಕಾಂಗಕ್ಕೆ ಮೇಲಿನವರಲ್ಲ ಎನ್ನುವುದು ಸರಿ. ಆದರೆ ತಾನು ಒಪ್ಪಿದ ಮಸೂದೆಗಳನ್ನು ಕಾಲಮಿತಿಯಲ್ಲಿ ರಾಜ್ಯಪಾಲರು ಒಪ್ಪಬೇಕು ಎನ್ನುವ ಶಾಸಕಾಂಗಗಳು (ವಿವಿಧ ರಾಜ್ಯಗಳ) ತಾವು ನಿಜವಾಗಿಯೂ ಸಮಯಮಿತಿಯಲ್ಲಿ ಕೆಲಸ ಮಾಡುತ್ತಿವೆಯೇ ಎನ್ನುವುದನ್ನು ನೋಡೋಣ.

ಮಸೂದೆಗಳ ಕುರಿತು ಚರ್ಚೆ

10ನೇ ಅಧ್ಯಾಯದ 75(2)ರ ಪ್ರಕಾರ, ಯಾವುದೇ ಮಸೂದೆಯನ್ನು ಸದನದಲ್ಲಿ ಮಂಡಿಸುವ 7 ದಿನಗಳಿಗೆ ಮುನ್ನ ಸದಸ್ಯರಿಗೆ ನೋಟಿಸ್‌ ನೀಡಿರಬೇಕು, ಆ ಮಸೂದೆಯನ್ನು ಮಂಡಿಸುತ್ತಿರುವ ಹಿನ್ನೆಲೆ, ಕಾರಣವನ್ನು ತಿಳಿಸಿರಬೇಕು ಎಂದು ಹೇಳುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸಭಾಧ್ಯಕ್ಷರು, ಕಡಿಮೆ ಅವಧಿಯಲ್ಲಿ ಮಸೂದೆ ಮಂಡಿಸಲು ಅವಕಾಶ ಇದೆ ಎಂದೂ ಹೇಳಿದೆ.

ಮುಖ್ಯವಾಗಿ ಮಸೂದೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆದು ನಂತರ ಅನುಮೋದನೆ ಆಗಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ಆದರೆ ಸದನದಲ್ಲಿ ಅನೇಕ ಬಾರಿ ಪ್ರತಿಪಕ್ಷ ಸದಸ್ಯರೇ ಬಾಯಿಬಿಟ್ಟು ಹೇಳಿರುವಂತೆ, ಏಳು ದಿನವಿರಲಿ, ಹಿಂದಿನ ದಿನವೂ ಮಸೂದೆಯ ಪ್ರತಿಗಳನ್ನು ಸದಸ್ಯರಿಗೆ ನೀಡಿರುವುದಿಲ್ಲ. ಬೆಳಗ್ಗೆ ಸದನದಲ್ಲಿ ಮಂಡಿಸಿ ಕೆಲ ನಿಮಿಷಗಳು ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಆಗತಾನೇ ಕೈಗೆ ಬಂದ ಬಿಸಿಬಿಸಿ ಮಸೂದೆಯನ್ನು ತಿರುವಿಹಾಕುವ ಸದಸ್ಯರು, ತಮ್ಮ ಸಾಮಾನ್ಯ ಜ್ಞಾನ, ಅನುಭವದ ಆಧಾರದಲ್ಲಿ ಒಂದಷ್ಟು ಹೊತ್ತು ಚರ್ಚಿಸಿ ಅಂಗೀಕಾರ ಪಡೆಯಲಾಗುತ್ತದೆ.

ಕೆಲವೊಮ್ಮೆ, ಸರ್ಕಾರದ ವಿರುದ್ಧ ಗದ್ದಲ ನಡೆಯುತ್ತಿದ್ದಾಗ, ಪ್ರತಿಪಕ್ಷಗಳು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಧ್ವನಿಮತದ ಮೂಲಕ ಕೆಲವೇ ನಿಮಿಷಗಳಲ್ಲಿ ಐದಾರು ಮಸೂದೆಗಳಿಗೆ ಒಪ್ಪಿಗೆ ಪಡೆಯಲಾಗುತ್ತದೆ. ಪಿಆರ್‌ಎಸ್‌ ಇಂಡಿಯಾ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ 2018-2023ರವರೆಗೆ ನಡೆದ 15ನೇ ವಿಧಾನಸಭೆಯಲ್ಲಿ ಶೇ.32 ಮಸೂದೆಗಳು ಯಾವ ದಿನದಲ್ಲಿ ಸದನದಲ್ಲಿ ಮಂಡಿಸಲ್ಪಟ್ಟಿದ್ದವೋ ಅಂದೇ ಒಪ್ಪಿಗೆ ಪಡೆದಿವೆ. ಇದು ಎಲ್ಲ ವಿಧಾನಸಭೆಗಳ ಸಂದರ್ಭದಲ್ಲೂ ನಡೆದಿದೆ. ಕೇಂದ್ರ ಸರ್ಕಾರವು ಮಂಡಿಸುವ ಮಸೂದೆಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುವುದನ್ನು ಕಾಣುತ್ತೇವೆ, ಆದರೆ ಕರ್ನಾಟಕದ ಮಟ್ಟಿಗಂತೂ (ಬಹುಶಃ ಎಲ್ಲ ರಾಜ್ಯ ಅಧಿವೇಶನಗಳಲ್ಲೂ) ಮಸೂದೆಗಳ ಮೇಲಿನ ಚರ್ಚೆಯ ಗುಣಮಟ್ಟ ಅಷ್ಟಕ್ಕಷ್ಟೆ.

ಅಧಿವೇಶದನದ ದಿನಗಳು

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು-2005ರ ಪ್ರಕಾರ ವರ್ಷಕ್ಕೆ ಕನಿಷ್ಠ 60 ದಿನಗಳು ಸದನ ನಡೆಯಬೇಕು. ಬಜೆಟ್‌ ಅಧಿವೇಶನ, ಜಂಟಿ ಅಧಿವೇಶನ, ಚಳಿಗಾಲದ ಅಧೀವೇಶನ... ಎಲ್ಲವೂ ಇದರಲ್ಲಿ ಸೇರುತ್ತದೆ. ಆದರೆ ಕರ್ನಾಟಕದ 15ನೇ ವಿಧಾನಸಭೆಯು ಒಂದು ವರ್ಷವೂ 60 ದಿನಗಳು ಸದನ ನಡೆಸಿಲ್ಲ. 15ನೇ ವಿಧಾನಸಭೆಯು ಐದು ವರ್ಷಗಳಲ್ಲಿ 15ಬಾರಿ ಸದನ ಸೇರಿ ಒಟ್ಟು 167 ದಿನಗಳು ಸದನ ನಡೆದಿದೆ. ವರ್ಷಕ್ಕೆ ಸರಾಸರಿ 33 ದಿನಗಳಷ್ಟೇ ಸದನ ಸೇರಿದೆ. 15ನೇ ವಿಧಾನಸಭೆ ಮಾತ್ರವಲ್ಲ, 2002ರಿಂದ ಇಲ್ಲಿವರೆಗೆ ಕರ್ನಾಟಕದ ಯಾವುದೇ ವಿಧಾನಸಭೆಯೂ ಒಂದು ವರ್ಷದಲ್ಲಿ 60 ದಿನಗಳು ಸದನ ನಡೆಸಿ, ಕೂಲಂಕಷವಾಗಿ ಮಸೂದೆಗಳ ಕುರಿತು ಚರ್ಚೆ ನಡೆಸಿ ಅದನ್ನು ರಾಜ್ಯಪಾಲರಿಗೆ ಕಳಿಸಿಕೊಟ್ಟಿಲ್ಲ. ಇಷ್ಟೆಲ್ಲ ವಿಚಾರಗಳಿರುವಾಗ, ಜನಪ್ರತಿನಿಧಿಗಳು ಯಾವ ವಿಶ್ವಾಸದ ಆಧಾರದಲ್ಲಿ ರಾಜ್ಯಪಾಲರು ಕಣ್ಣುಮುಚ್ಚಿ ಸಹಿ ಮಾಡಬೇಕೆಂದು ಅಪೇಕ್ಷಿಸುತ್ತದೆ ತಿಳಿಯದು.

ಶಾಸಕರ ಅನರ್ಹತೆ

ಕರ್ನಾಟಕವೂ ಸೇರಿ ಅನೇಕ ರಾಜ್ಯಗಳಲ್ಲಿ ಸರ್ಕಾರಗಳ ವಿಶ್ವಾಸಮತ ಸಾಬೀತಿನ ವೇಳೆ, ರಾಜ್ಯಸಭೆ ಚುನಾವಣೆ ವೇಳೆ ಪಕ್ಷದ ಚೌಕಟ್ಟನ್ನು ಮೀರಿದ, ವಿಪ್‌ ಉಲ್ಲಂಘಿಸಿದ ದೂರುಗಳನ್ನು ಸ್ಪೀಕರ್‌ ಅಥವಾ ಸಭಾಪತಿಯವರಿಗೆ ಸಲ್ಲಿಸಲಾಗುತ್ತದೆ. ಸದನದ ಮುಖ್ಯಸ್ಥರು ಯಾವ ಪಕ್ಷದವರಿರುತ್ತಾರೆಯೋ ಅವರಿಗೆ ಅನುಕೂಲವಾಗುವಂತೆ ವರ್ತಿಸುವುದು ಸಂಪ್ರದಾಯವಾಗಿಬಿಟ್ಟಿದೆ. ಇದೀಗ ತಾಜಾ ಉದಾಹರಣೆಯೆಂದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ ತನ್ನ 10 ಶಾಸಕರನ್ನು ವಜಾ ಮಾಡುವಂತೆ ಬಿಆರ್‌ಎಸ್‌ ಪಕ್ಷ ಸ್ಪೀಕರ್‌ಗೆ ನೀಡಿದ ದೂರಿನ ವಿಚಾರ ಒಂದು ವರ್ಷಕ್ಕೂ ಹಿಂದಿನಿಂದ ಬಾಕಿ ಉಳಿದಿದೆ. ಇದೀಗ ನ್ಯಾಯಾಲಯ ಮಧ್ಯಪ್ರವೇಶಿಸಿ, ಮೂರು ತಿಂಗಳೊಳಗೆ ದೂರನ್ನು ಇತ್ಯರ್ಥಪಡಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ತೆಲಂಗಾಣ ಸ್ಪೀಕರ್‌ಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲೂ ಯಾವ ಪಕ್ಷ ಅಧಿಕಾರದಲ್ಲಿತ್ತೋ ಆ ಪಕ್ಷದ ಪರವಾಗಿ ಸ್ಪೀಕರ್‌ಗಳು ತೀರ್ಪನ್ನು ನೀಡಿದ ಅಥವಾ ವಿಳಂಬ ಮಾಡಿದ ಉದಾಹರಣೆಗಳಿವೆ. ತಮಗೆ ನೀಡಿರುವ ವಿವೇಚನಾಧಿಕಾರವನ್ನು ಹೀಗೆ ಬಳಸುವ ರಾಜಕಾರಣಿಗಳು ರಾಜ್ಯಪಾಲ, ರಾಷ್ಟ್ರಪತಿಯವರು ಮಾತ್ರ ಸಮಯಮಿತಿಯಲ್ಲಿ ವರ್ತಿಸಬೇಕು ಎನ್ನುವುದು ಸೋಜಿಗ.

Tamil Nadu CM- TN governor (file photo)
D-ಕೋಡ್: ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಹಾಗೂ ಆರ್‌ಎಸ್‌ಎಸ್‌ ಉತ್ತರ: ವಿಶ್ಲೇಷಣೆ

ಯೋಜನೆಗಳ ಗಡುವು

ಸರ್ಕಾರವು ಕೈಗೊಳ್ಳುವ ಯೋಜನೆಗಳಲ್ಲಿ ಸಮಯಮಿತಿಯನ್ನು ಹಾಕಿಕೊಳ್ಳಲಾಗಿದೆ, ಅದನ್ನು ಸಮಯಮಿತಿಯಲ್ಲಿಯೇ ಅನುಷ್ಠಾನಗೊಳಿಸಲಾಗಿದೆ ಎನ್ನುವ ಉದಾಹರಣೆಗಳು ಎಷ್ಟು? ನೀರಾವರಿ, ಹೆದ್ದಾರಿ ಯೋಜನೆಗಳು ಏಳೆಂಟು ಸರ್ಕಾರಗಳು ಬದಲಾದರೂ ಪೂರ್ಣವಾಗುವುದಿಲ್ಲ. ಪ್ರತಿ ವರ್ಷ ಬಜೆಟ್‌ನಲ್ಲಿ ಘೋಷಣೆ ಆಗುವ ಯೋಜನೆಗಳು, ವರ್ಷ ಕಳೆದರೂ ಆದೇಶದ ಹಂತದಲ್ಲೇ ಇರುತ್ತವೆ. ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವು ಅಪವಾದಗಳೂ ಇವೆ. ದೆಹಲಿ ಮೆಟ್ರೋ ಯೋಜನೆಯನ್ನು 1998ರಲ್ಲಿ ಆರಂಭಿಸಿ 2006ಕ್ಕೆ ಮೆಟ್ರೋ ಚಲಿಸುವಂತೆ ಮಾಡುವ ಯೋಜನೆಯಿತ್ತು. ಈ ಯೋಜನೆಯ ಉಸ್ತುವಾರಿ ಹೊತ್ತಿದ್ದ ಇ. ಶ್ರೀಧರನ್‌ ಅವರ ಪರಿಶ್ರಮದ ಕಾರಣಕ್ಕೆ 3 ವರ್ಷ ಮುನ್ನವೇ ಯೋಜನೆ ಪೂರ್ಣವಾಯಿತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಭಾಷಣಗಳಲ್ಲಿ ಹೇಳಿಕೊಂಡಿರುವಂತೆ, ‘ತಾವೇ ಅಡಿಗಲ್ಲು ಹಾಕಿದ ಯೋಜನೆಗಳನ್ನು ತಾವೇ ಉದ್ಘಾಟಿಸುತ್ತಿದ್ದಾರೆ’. ಅಂದರೆ ಒಂದು ಯೋಜನೆಯನ್ನು, ಸರ್ಕಾರ ತಾನೇ ಹಾಕಿಕೊಂಡ ಅವಧಿಯಲ್ಲಿ ಪೂರ್ಣಗೊಳಿಸಿಕೊಳ್ಳುವುದು ಭಾರತದಲ್ಲಿ ಹೆಮ್ಮಯ ವಿಚಾರವಾಗಿದೆ ಎಂದರೆ ಒಟ್ಟಾರೆ ಸರ್ಕಾರದ ಮಾನಸಿಕತೆ ಹೇಗಿದೆ ಎನ್ನುವುದು ತಿಳಿಯುತ್ತದೆ.

ಹಾಗಾಗಿ, ರಾಜಕಾರಣಿಗಳು ತಮ್ಮ ವ್ಯಾಪ್ತಿಯಲ್ಲಿರುವ ವಿಚಾರಗಳಲ್ಲಿ ಮೊದಲು ಗುಣಮಟ್ಟದ ಚರ್ಚಾ ಪ್ರಕ್ರಿಯೆಯ ಮೂಲಕ, ಗಡುವಿನೊಳಗೆ ಕೆಲಸ ಮಾಡುವುದನ್ನು ರೂಢಿಸಿಕೊಂಡು, ನಂತರ ರಾಜ್ಯಪಾಲರು ಗಡುವಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕೇಳುವುದು ಸರಿಯೆನ್ನಿಸುತ್ತದೆ.

- ರಮೇಶ್ ದೊಡ್ಡಪುರ

journoramesha@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com