ಡಿ-ಕೋಡ್: ಬಿಜೆಪಿ ಚುನಾವಣಾ ಆಯೋಗದ ವಕ್ತಾರನೇ?

ಇಂತಹ ವಿಶೇಷ ಶುದ್ಧೀಕರಣ ಅಭಿಯಾನಗಳ ಅವಶ್ಯಕತೆಯೇ ಭಾರತದ ಚುನಾವಣಾ ವ್ಯವಸ್ಥೆಯಲ್ಲಿನ ಆಳವಾದ ವೈಫಲ್ಯವನ್ನು ಬಹಿರಂಗಪಡಿಸುತ್ತದೆ.
BJP president JP Nadda- SIR
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ- ಎಸ್ಐಆರ್ online desk
Updated on

ಭಾರತದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ, ಚುನಾವಣಾ ಆಯೋಗವು ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ನಡೆಸುವುದು ಅನಿವಾರ್ಯ ಆಡಳಿತಾತ್ಮಕ ಅಗತ್ಯವೆಂದು ಇಂದು ವಿವರಿಸಲಾಗುತ್ತಿದೆ. ಎಸ್‌ಐಆರ್‌ ನಡೆಸುವುದರಿಂದ ಅನಧಿಕೃತ ಮತದಾರರು ಹೊರಗೆ ಹೋಗುತ್ತಾರೆ, ಮತದಾರರ ಪಟ್ಟಿ ಶುದ್ಧವಾಗುತ್ತದೆ, ಪಾರದರ್ಶಕ ಚುನಾವಣೆ ನಡೆಯುತ್ತದೆ ಎಂಬ ವಾದಗಳನ್ನು ಅನೇಕರು ಮುಂದಿಡುತ್ತಿದ್ದಾರೆ. ಈ ವಾದವನ್ನು ಪ್ರಮುಖವಾಗಿ ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೈತ್ರಿಕೂಟದ ಮುಖ್ಯ ಪಕ್ಷ ಬಿಜೆಪಿ ಹೇಳುತ್ತಿದೆ. ಗೃಹ ಸಚಿವ ಅಮಿತ್‌ ಷಾ ಅವರೂ ಸೇರಿ ಅನೇಕ ಬಿಜೆಪಿಗರಂತೂ ಎಸ್‌ಐಆರ್‌ ಅನ್ನು ರಾಷ್ಟ್ರೀಯ ಭದ್ರತೆಯ ಅಗತ್ಯವೆಂದು ಒತ್ತಿ ಹೇಳಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರನ್ನು ಹೊರಹಾಕಿದರೆ ದೇಶದಲ್ಲಿ ಅಕ್ರಮ ಒಳನುಸುಳುವಿಕೆ ಇಲ್ಲವಾಗುತ್ತದೆ ಎನ್ನುವುದು ಅಂಥವರ ವಾದ.

ಆದರೆ ವಾಸ್ತವದಲ್ಲಿ, ಇಂತಹ ವಿಶೇಷ ಶುದ್ಧೀಕರಣ ಅಭಿಯಾನಗಳ ಅವಶ್ಯಕತೆಯೇ ಭಾರತದ ಚುನಾವಣಾ ವ್ಯವಸ್ಥೆಯಲ್ಲಿನ ಆಳವಾದ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಅಂದರೆ, ನಿರಂತರವಾಗಿ ನಿಖರ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ನಿರ್ವಹಿಸಲು ಚುನಾವಣಾ ಆಯೋಗದ ಅಸಮರ್ಥತೆ ಹಾಗೂ ಇಚ್ಛೆಯ ಕೊರತೆಯನ್ನು ವಿಶೇಷ ಪರಿಷ್ಕರಣೆ ಮೂಲಕ ಮುಚ್ಚಿಕೊಳ್ಳುವ ಪ್ರಯತ್ನ.

ಭಾರತಕ್ಕೆ ವರ್ಷಪೂರ್ತಿ ದೊರೆಯುವ ಸುನಿಶ್ಚಿತ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆಯಿದ್ದಿದ್ದರೆ, ಪ್ರಮುಖ ಚುನಾವಣೆಗಳ ಮುನ್ನ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಕೋಟಿ ಕೋಟಿ ಮನೆಗಳ ಬಾಗಿಲು ತಟ್ಟುವ ಅಗತ್ಯವೇ ಇರಲಿಲ್ಲ. ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ (2004) ನಡೆದ ಕೊನೆಯ ರಾಷ್ಟ್ರಮಟ್ಟದ ಮನೆಮನೆ ಪರಿಶೀಲನೆಯ ನಂತರ ಇಂತಹ ವಿಳಂಬವಾಗಿರುವುದು ಕೇವಲ ಆಡಳಿತಾತ್ಮಕ ಲೋಪವಲ್ಲ; ಅದು ಪ್ರಜಾಪ್ರಭುತ್ವದ ಮೂಲಭೂತ ಆಧಾರವನ್ನು ಚುನಾವಣಾ ಆಯೋಗವು ಎಷ್ಟು ಲಘುವಾಗಿ ಪರಿಗಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.

BJP president JP Nadda- SIR
ಡಿ-ಕೋಡ್: ಸಿದ್ದರಾಮಯ್ಯ/ಡಿ.ಕೆ ಶಿವಕುಮಾರ್‌ ನೇತೃತ್ವ; 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾರು ಹಿತವರು?

ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ವೇಳೆ ಡಿಲೀಟ್‌ ಆಗುತ್ತಿರುವ ಲಕ್ಷಾಂತರ ಹೆಸರುಗಳು ಯಾವುವು? ಅವುಗಳು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೇಳಿದಂತೆ ಒಂದೇ ಚುನಾವಣೆಯಲ್ಲಿ ಬಿಜೆಪಿಯವರು ವ್ಯವಸ್ಥಿತವಾಗಿ ತಂದು ತುರುಕಿದವೇ? ಒಂದೆರಡು ವರ್ಷದಲ್ಲಿ ಬಂದು ಸೇರಿಕೊಂಡವೇ? ಅಲ್ಲ. ಈ ಹೆಸರುಗಳು ಅನೇಕ ವರ್ಷಗಳಿಂದ ಸಹಜವಾಗಿ ಜಮೆಯಾಗಿವೆ. ಮೃತರಾದವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಉಳಿದಿವೆ, ಶಾಶ್ವತವಾಗಿ ಸ್ಥಳಾಂತರವಾದವರು ಹಳೆಯ ಕ್ಷೇತ್ರಗಳಲ್ಲಿ ಮತದಾರರಾಗಿಯೇ ಮುಂದುವರಿದಿದ್ದಾರೆ, ಮತ್ತು ನಕಲಿ ದಾಖಲೆಗಳು ಮತದಾರರ ಸಂಖ್ಯೆಯನ್ನು ನಿಶ್ಶಬ್ದವಾಗಿ ಹೆಚ್ಚಿಸುತ್ತಲೇ ಇವೆ. ಬಿಜೆಪಿ ಅಭ್ಯರ್ಥಿಗಳು ಮಾತ್ರ ಮತದಾರರ ಪಟ್ಟಿಯಲ್ಲಿ ಅನರ್ಹರನ್ನು ತೂರಿಸಿ ಗೆಲ್ಲುತ್ತಿದ್ದಾರೆ ಎನ್ನುವ ರಾಹುಲ್‌ ಗಾಂಧಿಯವರ ಮಾತು ಎಷ್ಟು ಹಾಸ್ಯಾಸ್ಪದವೋ, ಮತದಾರರ ಪಟ್ಟಿಯಲ್ಲಿ ಸಮಸ್ಯೆ ಇದೆ ಎನ್ನುವುದು ಅಷ್ಟೇ ಸತ್ಯ.

ತಾತ್ಕಾಲಿಕ ಸಿಬ್ಬಂದಿಯ ಕೆಲಸವೇ?

ಭಾರತವು ಸದ್ಯ ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವದ ಆಧಾರವೇ ಜನರ ಸಹಭಾಗಿತ್ವ. ಜನರು ಸಹಭಾಗಿಗಳಾಗಲು ಇರುವ ಪ್ರಮುಖ ಮಾರ್ಗ ಚುನಾವಣೆ. ಚುನಾವಣೆಯ ಪ್ರಮುಖ ಭಾಗ ಮತದಾನ. ಮತದಾನ ಪ್ರಕ್ರಿಯೆಯ ಆತ್ಮವೇ ಮತದಾರರ ಪಟ್ಟಿ. ಅಂದರೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ ಇರುವುದು ಮತದಾರರ ಪಟ್ಟಿಯಲ್ಲಿ. ಹಾಗಾದರೆ ಈ ಪಟ್ಟಿಯನ್ನು ಸುಸ್ಥಿತಿಯಲ್ಲಿ ಇಡುವವರು ಯಾರು? ಚುನಾವಣಾ ಆಯೋಗ. ಚುನಾವಣಾ ಆಯೋಗದ ಸಿಬ್ಬಂದಿಯು ಇದನ್ನು ನಿರ್ವಹಿಸುತ್ತಾರೆ ಎಂದು ಸಾಮಾನ್ಯವಾಗಿ ತಪ್ಪುತಿಳುವಳಿಕೆ ಇರುತ್ತದೆ. ಆದರೆ ದೇಶದ 90 ಕೋಟಿಗೂ ಹೆಚ್ಚು ಮತದಾರರ ಪಟ್ಟಿಯನ್ನು ನಿರ್ವಹಣೆ ಮಾಡುವ ಚುನಾವಣಾ ಆಯೋಗದಲ್ಲಿ ಇರುವುದು ಕೇವಲ 700-800 ಶಾಶ್ವತ ನೌಕರರು. ಹಾಗಾದರೆ ಇದೀಗ ಎಸ್‌ಐಆರ್‌ನಲ್ಲಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿರುವ ಬಿಎಲ್‌ಒಗಳು ಯಾರು? ಅವರುಗಳು ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ…

ಇತ್ಯಾದಿ. ಇವರುಗಳಿಗೆ ವರ್ಷಪೂರ್ತಿ ತಮ್ಮದೇ ಕೆಲಸಗಳಿರುತ್ತವೆ. ಅವರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವ ಚುನಾವಣಾ ಆಯೋಗ, ಅವರ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ, ಎಸ್‌ಐಆರ್‌ ನಡೆಸುತ್ತದೆ.

ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ತನ್ನದೇ ಸಿಬ್ಬಂದಿಯನ್ನು ಏಕೆ ಹೊಂದಲಾಗುವುದಿಲ್ಲ ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗಿದೆ. ಅದಕ್ಕೆ ಅಧಿಕಾರಿಗಳು ನೀಡುವ ಉತ್ತರ, ದೇಶದಲ್ಲಿ ಸುಮಾರು 10 ಲಕ್ಷ ಬಿಎಲ್‌ಒಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿಗೆ ವರ್ಷಪೂರ್ತಿ ಕೆಲಸ ಇರುವುದಿಲ್ಲ. ಇಡೀ ಕೇಂದ್ರ ಸರ್ಕಾರದ ನೌಕರರಷ್ಟು ಸಿಬ್ಬಂದಿಯನ್ನು ಕೇವಲ ಚುನಾವಣಾ ಆಯೋಗ ನೇಮಿಸಿಕೊಳ್ಳಲಾಗದು ಎಂಬ ವಾದ ಇಡಲಾಗುತ್ತದೆ. ಇದು ಮೇಲ್ನೋಟಕ್ಕೆ ಸರಿ ಎನ್ನಿಸುತ್ತದೆ, ಆದರೆ ಆಳವಾದ ದೋಷವನ್ನು ಒಳಗೊಂಡಿದೆ. ಅದೆಂದರೆ, ಚುನಾವಣಾ ಆಯೋಗವು ಚುನಾವಣೆಯ ಸಂದರ್ಭದ 1-2 ತಿಂಗಳು ನಡೆಸುವ ಮತದಾರರ ಪಟ್ಟಿ ಪರಿಷ್ಕರಣೆಗೆ ಇಷ್ಟು ದೊಡ್ಡ ಸಂಖ್ಯೆಯ ಬಿಎಲ್‌ಒಗಳು ಬೇಕಾಗುತ್ತಾರೆ. ಆದರೆ ತನ್ನದೇ ಸಿಬ್ಬಂದಿಯನ್ನು ನೇಮಿಸಿಕೊಂಡು ಇಡೀ ವರ್ಷ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ತೀವ್ರಗತಿಯಲ್ಲೇ ಮಾಡಿದರೆ 10 ಲಕ್ಷದ ಬದಲಿಗೆ ಶೇ.10ರಷ್ಟು ಬಿಎಲ್‌ಒಗಳ ಮೂಲಕವೇ ನಿರ್ವಹಣೆ ಮಾಡಲು ಸಾಧ್ಯವಿದೆ.

ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯ ಆಧಾರದಲ್ಲಿ ಮತಗಟ್ಟೆಯಲ್ಲಿ ಕುಳಿತು ಚುನಾವಣೆ ನಡೆಸುವ ಕಾರ್ಯವನ್ನು ತಾತ್ಕಾಲಿಕ, ನಿಯೋಜನೆ ಮಾಲೆ ಆಗಮಿಸಿದ ಇತರೆ ಇಲಾಖೆಗಳ ಸಿಬ್ಬಂದಿಗೆ ನೀಡಬಹುದೇ ವಿನಃ ಇಡೀ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವನ್ನು ನೀಡಲು ಹೇಗೆ ಸಾಧ್ಯ ಎನ್ನುವುದೇ ಮುಖ್ಯ ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ, ಜನನ-ಮರಣ ಪ್ರಮಾಣಪತ್ರಗಳು ಈಗಂತೂ ಸಾಕಷ್ಟು ಮುಖ್ಯವಾಹಿನಿಗೆ ಬಂದಿವೆ.

2023ರ ದತ್ತಾಂಶದ ಪ್ರಕಾರ ಶೇ.98 ಜನನಗಳು ಜನನ ಪ್ರಮಾಣಪತ್ರದ ಮೂಲಕ ದಾಖಲಾಗುತ್ತಿವೆ. ಹಾಗೆಯೇ ಆಸ್ತಿ ಪಾಲು, ಪಿಂಚಣಿ, ಬ್ಯಾಂಕ್‌ ಖಾತೆಯ ಹಸ್ತಾಂತರ ಸೇರಿ ಅನೇಕ ಕಾರಣಗಳಿಗೆ ಬಹುತೇಕ ಮರಣಗಳೂ ಮರಣ ಪ್ರಮಾಣ ಪತ್ರದ ಮೂಲಕ ದಾಖಲಾಗುತ್ತವೆ. ಯಾರಿಗೆ 18 ವರ್ಷವಾಗುತ್ತದೆಯೋ ಅವರ ಹೆಸರನ್ನು ಸ್ವಯಂಚಾಲಿತವಾಗಿ ಪಟ್ಟಿಗೆ ಸೇರಿಸುವ ಹಾಗೂ ನಿಧನರಾದವರ ಹೆಸರನ್ನು ತೆಗೆಯುವ ಸಣ್ಣ ಪ್ರಮಾಣದ ತಂತ್ರಜ್ಞಾನವನ್ನೂ ಚುನಾವಣಾ ಆಯೋಗ ಅಳವಡಿಸಿಕೊಳ್ಳಲು ಆಗುತ್ತಿಲ್ಲ. ಭಾರತಕ್ಕೆ ಅಂತಹ ಆಡಳಿತ ಸಾಮರ್ಥ್ಯವೂ ಇದೆ, ಡಿಜಿಟಲ್ ಮೂಲಸೌಕರ್ಯವೂ ಇದೆ. ಅನೇಕ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಜನನ–ಮರಣ ನೋಂದಣಿ ಮತ್ತು ವಿಳಾಸ ಬದಲಾವಣೆಗಳ ಮಾಹಿತಿಯನ್ನು ಬಳಸಿ ನಿರಂತರ ಮತದಾರರ ಪಟ್ಟಿ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡುತ್ತಿವೆ.

ಆದರೆ ಜಗತ್ತಿನ ಅತಿದೊಡ್ಡ ಗುರುತಿನ ಡೇಟಾಬೇಸ್ ನಿರ್ಮಿಸಿದ ಭಾರತವೇ ಮತದಾರರ ಪಟ್ಟಿಗಾಗಿ ಇನ್ನೂ ತಾತ್ಕಾಲಿಕ ಕ್ರಮಗಳ ಮೇಲೆ ಅವಲಂಬಿತವಾಗಿದೆ. ಚುನಾವಣಾ ಆಯೋಗವು ಇಂತಹ ದೀರ್ಘಕಾಲಿಕ ಸುಧಾರಣೆಗಳನ್ನು ರೂಪಿಸುವ ಬದಲು, ಮತದಾರರನ್ನು ಗೊಂದಲಕ್ಕೆ ತಳ್ಳುವ ಮತ್ತು ರಾಜಕೀಯ ವಿವಾದಗಳನ್ನು ಹುಟ್ಟಿಸುವ ತಾತ್ಕಾಲಿಕ ಅಭಿಯಾನಗಳನ್ನೇ ಅವಲಂಬಿಸಿದೆ.

ಏಕಿದೆ ಸಮಸ್ಯೆ?

ಪರಿಹಾರ ಇಷ್ಟೆಲ್ಲ ಸರಳವಾಗಿದ್ದರೆ ಏಕೆ ಸರಿಮಾಡಲಾಗುತ್ತಿಲ್ಲ ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಸತ್ಯದ ಸಮೀಪದ ಒಂದು ಉತ್ತರ ಇದೆ. ಅಪೂರ್ಣ ಮತ್ತು ಗೊಂದಲಭರಿತ ಮತದಾರರ ಪಟ್ಟಿಗಳು ಕೆಲ ರಾಜಕೀಯ ಹಿತಾಸಕ್ತಿಗಳಿಗೆ ಅನುಕೂಲವಾಗುತ್ತವೆ. ಅಸ್ಪಷ್ಟ ಮತದಾರರ ಪಟ್ಟಿಗಳು ಸ್ಥಳೀಯ ಮಟ್ಟದಲ್ಲಿ ಅಕ್ರಮ, ಗೊಂದಲಕ್ಕೆ ಅವಕಾಶ ನೀಡುತ್ತವೆ. ಸಂಪೂರ್ಣ ಶುದ್ಧ ಪಟ್ಟಿಯಿದ್ದರೆ, ಇಂತಹ ಅವಕಾಶಗಳು ಕಣ್ಮರೆಯಾಗುತ್ತವೆ. ಈ ಅರ್ಥದಲ್ಲಿ, ಮತದಾರರ ಪಟ್ಟಿಯ ಅಶುದ್ಧತೆ ವ್ಯವಸ್ಥೆಯ ದೋಷವಲ್ಲ; ಅದು ಮೌನವಾಗಿ ಅನುಸರಿಸುತ್ತಿರುವ ಪ್ರಕ್ರಿಯೆ. ವಿವಿಧ ರಾಜಕೀಯ ಪಕ್ಷಗಳ ಹಿತಾಸಕ್ತಿಯನ್ನು ಕಾಪಾಡಲು ಚುನಾವಣಾ ಆಯೋಗವು ತನ್ನ ಇಚ್ಛಾಶಕ್ತಿಯ ಕೊರತೆ ಹಾಗೂ ಇಲ್ಲಸಲ್ಲದ ಕಾರಣದ ಮೂಲಕ ಸಹಕಾರ ನೀಡುತ್ತಿದೆ.

ಮತದಾರರ ಪಟ್ಟಿಯನ್ನು ಆಧಾರ್‌ಗೆ ಜೋಡಿಸುವುದನ್ನು ಇದೆಲ್ಲ ಸಮಸ್ಯೆಗೆ ತಾಂತ್ರಿಕ ಪರಿಹಾರವೆಂದು ಅನೇಕರು ಹೇಳುತ್ತಾರೆ. ಆದರೆ ಆಧಾರ್ ನಾಗರಿಕತ್ವದ ಪ್ರಮಾಣಪತ್ರವಲ್ಲ, ಮತ್ತು ಅದು ದೋಷರಹಿತವೂ ಅಲ್ಲ ಎನ್ನುವುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಸುಪ್ರೀಂಕೋರ್ಟ್ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದೆ. ಆಧಾರ್‌ ಅಲ್ಲದಿದ್ದರೆ ಏನು? ಭಾರತದ ಪ್ರಜೆ ಎಂದು ಹೇಳಲು ನಿಜವಾಗಿ ಯಾವುದೇ ಒಂದು ಸಮಾನರೂಪದ ದಾಖಲೆ ಇಡೀ ದೇಶದಲ್ಲಿ ಇಲ್ಲ ಎಂದರೆ ನಂಬಲೇಬೇಕು. ಭಾರತದ ನಾಗರಿಕ ಎನ್ನಲು ಇದೀಗ ಇರುವ ಬಹುಮುಖ್ಯ ದಾಖಲೆ ಎಂದರೆ ಪಾಸ್‌ಪೋರ್ಟ್‌. ವಿಮಾನಯಾನಕ್ಕೆಂದು ನೀಡುವ ದಾಖಲೆಯೇ ನಿಜವಾದ ನಾಗರಿಕತ್ವದ ದಾಖಲೆ ಎನ್ನುವುದು ಹಾಸ್ಯಾಸ್ಪದ. ಜನನ ಪ್ರಮಾಣಪತ್ರವನ್ನು ನಾಗರಿಕತ್ವ ಸಾಬೀತುಪಡಿಸಲು ಬಳಸಬಹುದಾದರೂ ಅದೇ ನಾಗರಿಕತ್ವದ ಪ್ರಮಾಣಪತ್ರವಾಗುವುದಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗವಾಗಲಿ ಅಥವಾ ಸಂಸತ್‌ ಆಗಲಿ ಇಂತಹ ಕಾನೂನಾತ್ಮಕವಾಗಿ ಬಲವಾದ ನಾಗರಿಕತ್ವ ಆಧಾರಿತ ವ್ಯವಸ್ಥೆಯನ್ನು ರೂಪಿಸುವ ಬದಲು, ಅತಿರೇಕದ ಎಸ್‌ಐಆರ್‌ ಹಿಂದೆ ಬಿದ್ದಿವೆ.

ಬಿಜೆಪಿಯೇ ಏಕೆ ಮಾತನಾಡುತ್ತದೆ?

ಚುನಾವಣಾ ಆಯೋಗವು ನಡೆಸುತ್ತಿರುವ ಎಸ್‌ಐಆರ್‌ಗೆ ಬಿಜೆಪಿಯು ಬಲವಾಗಿ ಬೆಂಬಲ ನೀಡುತ್ತಿದೆ. ಇದೇ ವೇಳೆ ಬಿಜೆಪಿಯ ವಿರೋಧಿ ಪಕ್ಷಗಳು ಎಸ್‌ಐಆರ್‌ ಎನ್ನು ವಿರೋಧಿಸುತ್ತಿವೆ. ಅಕ್ರಮ ಮತದಾರರನ್ನು ಹೊರಹಾಕಲು ಎಸ್‌ಐಆರ್‌ ಅನಿವಾರ್ಯ ಎಂದು ಹೇಳುವ ಬಿಜೆಪಿ, ಎಸ್‌ಐಆರ್‌ ವಿರೋಧಿಸುವವರನ್ನು ದೇಶದ್ರೋಹಿಗಳ ರೀತಿ ನೋಡುತ್ತಿದೆ. ಯಾವೆಲ್ಲ ಪಕ್ಷಗಳು ಎಸ್‌ಐಆರ್‌ ಅನ್ನು ವಿರೋಧಿಸುತ್ತಿವೆಯೋ ಅವರುಗಳು ಗೆದ್ದಿರುವುದೇ ಅಕ್ರಮ ನುಸುಳುಕೋರರಿಂದ ಎಂಬ ಹಣೆಪಟ್ಟಿ ಕಟ್ಟಲೂ ಹಿಂಜರಿದಿಲ್ಲ. ಆದರೆ ನೈಜ ಪರಿಸ್ಥಿತಿ ಇಷ್ಟು ಕಪ್ಪುಬಿಳುಪಾಗಿಲ್ಲ. ಅಸ್ಪಷ್ಟ ಮತದಾರರ ಪಟ್ಟಿಯಿಂದ ಲಾಭ ಪಡೆಯುತ್ತಿರುವುದು ಯಾವುದೇ ಒಂದು ಪಕ್ಷವಲ್ಲ. ಮತದಾರರ ಪಟ್ಟಿಯ ಅಕ್ರಮದಲ್ಲಿ ಕಾಂಗ್ರೆಸ್‌ ಪಕ್ಷದವರಷ್ಟೇ ಬಿಜೆಪಿಯ ಅಭ್ಯರ್ಥಿಗಳೂ ಸಿಕ್ಕಿಕೊಂಡಿದ್ದಾರೆ, ಕರ್ನಾಟಕದಲ್ಲೂ ಅಂತಹ ಉದಾಹರಣೆಗಳಿವೆ. ಮತದಾರರ ಪಟ್ಟಿಯ ಅಶುದ್ಧತೆಯ ಲಾಭವನ್ನು ಎಲ್ಲ ಪಕ್ಷಗಳೂ ಪಡೆಯುತ್ತಿವೆ.

ಅಕ್ರಮ ನುಸುಳುಕೋರರಿಗೆ ಸಂಕಷ್ಟ?

ಎಸ್‌ಐಆರ್‌ ನಡೆಸುತ್ತಿರುವುದರಿಂದ ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಗಟ್ಟಬಹುದು ಎಂಬ ವಿಚಿತ್ರ ವಾದವನ್ನು ಕೇಂದ್ರ ಗೃಹಸಚಿವ ಅಮಿತ್‌ ಷಾ ಸೇರಿ ಅನೇಕ ಬಿಜೆಪಿಗರು ಮುಂದಿಡುತ್ತಿದ್ದಾರೆ. ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರಿಂದ ದೇಶದ ಸುರಕ್ಷತೆ, ಸಾರ್ವಭೌಮತೆ, ಆರ್ಥಿಕತೆಗೆ ಆಗುತ್ತಿರುವ ಧಕ್ಕೆಯನ್ನು ಎಸ್‌ಐಆರ್‌ನಿಂದ ನಿವಾರಿಸಬಹುದು ಎನ್ನುವುದು ಅವರ ವಾದ. ಅರೆ, ಮತದಾರರ ಪಟ್ಟಿಯಿಂದ ಹೆಸರನ್ನು ಹೊರಗೆ ಹಾಕಿದ ತಕ್ಷಣ ಆತನನ್ನು ದೇಶದಿಂದ ಹೊರಗಟ್ಟಿದಂತೆ ಆಗುವುದಿಲ್ಲ. ಯಾವುದೇ ಆಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟುವ ಕೆಲಸವನ್ನು ಕೇಂದ್ರ ಗೃಹ ಇಲಾಖೆ ಮಾಡಬೇಕಾಗುತ್ತದೆ. ಚುನಾವಣಾ ಆಯೋಗಕ್ಕೂ ಅದಕ್ಕೂ ಸಂಬಂಧವೇ ಇಲ್ಲ. ಬೆರಳೆಣಿಕೆಯ ಸಿಬ್ಬಂದಿ ಮತ್ತು ತಾತ್ಕಾಲಿಕ ಸಿಬ್ಬಂದಿಯಿಂದ ನಡೆಯುತ್ತಿರುವ ಎಸ್‌ಐಆರ್‌ ಆಧಾರದಲ್ಲಿ ಅಕ್ರಮ ವಲಸಿಗರನ್ನು ಹೊರಗಟ್ಟುತ್ತೇವೆ ಎನ್ನುವುದು ಬಾಲಿಷ ಮಾತು.

BJP president JP Nadda- SIR
D ಕೋಡ್: ರಾಜ್ಯಪಾಲರಿಂದ ಗಡುವು ಬಯಸುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಇನ್ನು ಕೆಲವು ವಾದಗಳ ಪ್ರಕಾರ, ಈ ಅಕ್ರಮ ನುಸುಳುಕೋರರಿಗೆ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿರುವುದು ಅವರುಗಳು ಮತದಾರರ ಪಟ್ಟಿಯಲ್ಲಿ ಇದ್ದಾರೆ (ವೋಟ್‌ ಬ್ಯಾಂಕ್‌) ಎಂಬ ಕಾರಣಕ್ಕೆ. ಅವರನ್ನು ಪಟ್ಟಿಯಿಂದ ಹೊರಹಾಕಿದರೆ ರಾಜಕಾರಣಿಗಳು ರಕ್ಷಿಸುವುದಿಲ್ಲ, ಆಗ ಅಕ್ರಮ ವಲಸಿಗರನ್ನು ಹೊರಗಟ್ಟಬಹುದು ಎನ್ನುವುದು. ಅಂದರೆ ಸಮಸ್ಯೆ ಇರುವುದು ಚುನಾವಣಾ ಆಯೋಗದಲ್ಲೇ ಎಂದಾಯಿತಲ್ಲ? ರಾಜಕೀಯ ವ್ಯವಸ್ಥೆಯು ಅಕ್ರಮ ನುಸುಳುಕೋರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಚುನಾವಣಾ ಆಯೋಗ ಅವಕಾಶ ನೀಡುತ್ತಿರುವುದೇತಕ್ಕೆ? ಏಕೆಂದರೆ ದೇಶದಲ್ಲಿ ನಾಗರಿಕತ್ವ ಸಾಬೀತುಪಡಿಸುವ ಯಾವುದೇ ಏಕರೂಪ ದಾಖಲೆಯೇ ಇಲ್ಲ. ವಿವಿಧ ಇಲಾಖೆಗಳಿಂದ ಎರವಲು ಸೇವೆಗೆ ಬರುವ ಬಿಎಲ್‌ಒಗಳು ನಿರ್ದಿಷ್ಟ ಸಮಯದಲ್ಲಿ ಆಗಮಿಸಿ ಪಟ್ಟಿ ವಿಸ್ತರಿಸುವ, ಡಿಲೀಟ್‌ ಮಾಡುವ ಕೆಲಸ ಮಾಡಿ ಹೊರಡುತ್ತಾರೆ. ಅವರಿಗೆ ಉತ್ತರದಾಯಿತ್ವವೂ ಇರುವುದಿಲ್ಲ.

ಅಷ್ಟಕ್ಕೂ ಚುನಾವಣಾ ಆಯೋಗವನ್ನು ರಕ್ಷಿಸಲು ಬಿಜೆಪಿ ಏಕೆ ಮುಂದೆ ಬರುತ್ತಿದೆ ಎನ್ನುವುದು ಸೋಜಿಗದ ವಿಚಾರ. ಚುನಾವಣಾ ಆಯೋಗವೇ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಮೂಲಕ ತನ್ನ ನಿಲುವನ್ನು ತಾನೇ ಸಮರ್ಥಿಸಿಕೊಳ್ಳಬೇಕು. ತಾನು ಮಾತ್ರ ನಿಷ್ಕ್ರಿಯತೆಯನ್ನು ಮೆರೆದು, ತನ್ನನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸವನ್ನು ಬಿಜೆಪಿಗೆ ಹೊರಗುತ್ತಿಗೆ ನೀಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಭಾರತಕ್ಕೆ ಬೇಕಾಗಿರುವುದು ಮತ್ತೊಂದು ‘ವಿಶೇಷ ಅಭಿಯಾನ’ವಲ್ಲ, ಮತ್ತೊಂದು ರಾಜಕೀಯ ಗದ್ದಲವೂ ಅಲ್ಲ. ರಾಜಕೀಯ ನಾಟಕವನ್ನೇ ಅಪ್ರಸ್ತುತಗೊಳಿಸುವಂತಹ ಶಾಶ್ವತ, ಆರೋಪ-ಪ್ರತ್ಯಾರೋಪರಹಿತ, ತಾಂತ್ರಿಕ ಪರಿಹಾರ ಬೇಕು. ಇಂತಹ ಸಮಸ್ಯೆಗಳನ್ನು ಎದುರಿಸುವವರೆಗೆ ಭಾರತವು ತನ್ನ ಚುನಾವಣೆಗಳನ್ನು ಒಣಜಂಭದಿಂದ ಸಂಭ್ರಮಿಸುತ್ತಲೇ ಇರುತ್ತದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರವಾದ ಮತದಾರರ ಪಟ್ಟಿಯ ದುರ್ಬಲತೆಯನ್ನು ಮೌನವಾಗಿ ಸಹಿಸುತ್ತಲೇ ಇರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com