
ಶತ ಶತಮಾನಗಳಿಂದ ಮನುಷ್ಯನ ಇತಿಹಾಸ ನೋಡಿಕೊಂಡು ಬನ್ನಿ. ಒಂದಲ್ಲ ಒಂದು ರಾಜ ಮನೆತನಗಳು ಜಗತ್ತನ್ನು ತನ್ನ ಹಿಡಿತದಲ್ಲಿ ಇಟ್ಟು ಕೊಳ್ಳಬೇಕು ಎನ್ನುವ ಹಂಬಲಕ್ಕೆ ಬಿದ್ದು ಸಾವಿರಾರು ಯುದ್ಧಗಳಿಗೆ , ಲಕ್ಷಾಂತರ ಸಾವಿಗೆ ಕಾರಣವಾಗಿವೆ. ಇದೆಲ್ಲಾ ಬಹಳ ಹಳೆಯ ವಿಷಯವಾಯ್ತು. ನಾವು ಕೇವಲ 250 ವರ್ಷಗಳ ಹಿಂದಿನಿಂದ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆ ಅಂದರೆ ಪವರ್ ಶಿಫ್ಟ್ ನೋಡಿಕೊಂಡು ಬರೋಣ. ಎಲ್ಲಕ್ಕಿಂತ ಮುಂಚೆ ಒಂದು ಸರಳವಾದ ಸತ್ಯವನ್ನು ಹೇಳಿ ಬಿಡುತ್ತೇನೆ. ಹಣದ ಮೇಲಿನ ನಿಯಂತ್ರಣ, ಅಧಿಕಾರದ ಮೇಲಿನ ನಿಯಂತ್ರಣಕ್ಕೆ ಈ ಎಲ್ಲಾ ಹೊಡೆದಾಟಗಳು ಆಗುತ್ತಿವೆ.
ಕಳೆದ 250 ವರ್ಷಗಳ ಇತಿಹಾಸದಲ್ಲಿ ಇಣುಕು ಹಾಕಿ ನೋಡಿದಾಗ ಕಾಣುವುದು ಡಚ್ಚರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು ಎನ್ನುವುದು. ಬ್ರಿಟಿಷರಿಗೂ ಡಚ್ಚರಿಗೂ ನಡೆದ ಯುದ್ಧಗಳು, ಸಾವುಗಳ ನಿಖರ ಲೆಕ್ಕವಿಲ್ಲ. ಕೊನೆಗೂ ಬ್ರಿಟಿಷರು ಡಚ್ಚರ ಪ್ರಾಬಲ್ಯವನ್ನು ಮುರಿದು ಜಗತ್ತಿನ ನಂಬರ್ ಒನ್ ದೇಶ ಎನ್ನಿಸಿಕೊಳ್ಳುತ್ತದೆ. ನಂತರದ್ದು ಅಮೇರಿಕಾ ಎನ್ನುವ ದೈತ್ಯ ಶಕ್ತಿಯ ಉದಯ. ಎರಡನೇ ಮಹಾಯುದ್ಧವನ್ನು ಗೆಲ್ಲುವುದರ ಮೂಲಕ ಅಮೇರಿಕಾ ಜಗತ್ತಿಗೆ ಹಿರಿಯಣ್ಣ ಎನ್ನುವ ಪಟ್ಟವನ್ನು ತನ್ನದಾಗಿಸಿ ಕೊಳ್ಳುತ್ತದೆ. ಕಳೆದ ಒಂದೂವರೆ ದಶಕದಿಂದ ಚೀನಾ ಶಕ್ತಿ ಪಲ್ಲಟವನ್ನು ಬಯಸಿದೆ. ವಿಶ್ವದ ಹಿರಿಯಣ್ಣನ ಪಟ್ಟವನ್ನು ಪಡೆದುಕೊಳ್ಳಲು ಹವಣಿಸುತ್ತಿದೆ. ಚರಿತ್ರೆಯನ್ನು ಗಮನಿಸಿ ವರ್ತಮಾನದಲ್ಲಿ ಹಿರಿಯಣ್ಣನ ಪಟ್ಟವನ್ನು ಆಕ್ರಮಿಸಿರುವ ಯಾವ ದೇಶವೂ ಸುಲಭವಾಗಿ ಎರಡನೇ ಶಕ್ತಿಶಾಲಿ ದೇಶಕ್ಕೆ ಜಾಗವನ್ನು ಬಿಟ್ಟು ಕೊಟ್ಟಿಲ್ಲ. ಆಗೆಲ್ಲಾ ಯುದ್ಧಗಳಾಗಿವೆ. ಹೊಸ ವಿಶ್ವವ್ಯವಸ್ಥೆ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಹೀಗೆ ಒಂದು ದೇಶದ ಪ್ರಾಬಲ್ಯವನ್ನು ಮುರಿದು ಇನ್ನೊಂದು ದೇಶ ತನ್ನ ರೀತಿ ನೀತಿಗಳನ್ನು ಜಗತ್ತಿಗೆ ಹೇರುವುದಕ್ಕೆ ನ್ಯೂ ವರ್ಲ್ಡ್ ಆರ್ಡರ್ ಎನ್ನಲಾಗುತ್ತದೆ.
1944 ರಲ್ಲಿ ಜಗತ್ತಿನಲ್ಲಿ ಈ ರೀತಿಯ ಬದಲಾವಣೆ ಆಗಿತ್ತು. ಆ ವರ್ಷ ನ್ಯೂ ವರ್ಲ್ಡ್ ಮಾನಿಟರಿ ಸಿಸ್ಟಮ್ ಡಾಲರ್ ಹಣವನ್ನು ರಿಸೆರ್ವ್ ಕರೆನ್ಸಿ ಎಂದು ಒಪ್ಪಿಕೊಳ್ಳುತ್ತದೆ. ರಿಸರ್ವ್ ಕರೆನ್ಸಿ ಎಂದರೆ ಜಗತ್ತಿನ ಎಲ್ಲಾ ದೇಶಗಳೂ ಇದನ್ನು ಒಪ್ಪಿಕೊಂಡು ಜಾಗತಿಕ ಟ್ರೇಡಿಂಗ್ ಸಮಯದಲ್ಲಿ ಇದನ್ನು ಮಾಧ್ಯಮವನ್ನಾಗಿ ಬಳಸುವುದು ಎಂದರ್ಥ. ಸರಳವಾಗಿ ಹೇಳಬೇಕೆಂದರೆ ಇದನ್ನು ಗ್ಲೋಬಲ್ ಕರೆನ್ಸಿ ಎನ್ನಬಹುದು. ಅಂದಿನಿಂದ ಇಂದಿನ ಅವರೆಗೆ ಅಂದರೆ 80 ವರ್ಷಗಳ ಕಾಲ ಡಾಲರ್ ಜಗತ್ತಿನ ದೊರೆಯಾಗಿ ಮೆರೆದಿದೆ.
ಎರಡನೇ ಮಹಾಯುದ್ಧದ ನಂತರ ಯಾವುದೇ ದೊಡ್ಡ ಯುದ್ಧ ಆಗಿಲ್ಲ. ಚರಿತ್ರೆಯನ್ನು ಗಮನಿಸಿ ಯಾವಾಗ ಯುದ್ಧವಿರುವುದಿಲ್ಲ ಆಗ ಜಗತ್ತು ಅಭಿವೃದ್ಧಿ ಹೊಂದುತ್ತದೆ. ಶಾಂತಿ ನೆಲಸುತ್ತದೆ. ಎಲ್ಲಿಯವರೆಗೆ? ಇನ್ನೊಂದು ದೊಡ್ಡ ದೇಶ ಮಹತ್ವಾಕಾಂಕ್ಷೆಯಿಂದ ಚಾಲೆಂಜ್ ಮಾಡುವವರೆಗೆ. ಕೇವಲ 250 ವರ್ಷ ಅಂತಲ್ಲ ಜಗತ್ತಿನ ಸಾವಿರಾರು ವರ್ಷಗಳ ಹಿಸ್ಟ್ರಿ ತೆಗೆದು ನೋಡುತ್ತಾ ಬಂದರೆ ಅಲ್ಲಿ ಕಾಣುವುದು ಯಾವಾಗೆಲ್ಲಾ ವರ್ಲ್ಡ್ ಆರ್ಡರ್ ಬದಲಾವಣೆ ಬಯಸುತ್ತದೆ ಆಗೆಲ್ಲಾ ಯುದ್ಧವಾಗಿದೆ. ಸಾವುಗಳಾಗಿವೆ. ಸಾಮಾನ್ಯ ಮನುಷ್ಯನ ಬದುಕು ಅಲ್ಲೋಲಕಲ್ಲೋಲವಾಗಿವೆ. ಇದೀಗ ಜಗತ್ತು ಇನ್ನೊಂದು ವರ್ಲ್ಡ್ ಆರ್ಡರ್ ಬದಲಾವಣೆಯನ್ನು ಬಯಸುತ್ತಿದೆ. ಅಥವಾ ಬದಲಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ಈಗಿನ ಚಾಂಪಿಯನ್ ಮತ್ತು ಸವಾಲು ಎಸೆದಿರುವ ದೇಶದ ನಡುವೆ ಯುದ್ಧವಾಗದೆ ಯಾರ ಗೆಲುವು ಎಂದು ನಿರ್ಧರಿಸುವುದು? ಯುದ್ಧ ಅನಿವಾರ್ಯ. ಹಾಗಾದರೆ ಯುದ್ಧವಾಗುತ್ತದೆಯೇ? ಹೌದು ಯುದ್ಧವಾಗಲೇ ಶುರುವಾಗಿದೆ.
ಮದ್ದುಗುಂಡುಗಳು ಸಿಡಿದಿಲ್ಲ ಎನ್ನುವುದು ಬಿಟ್ಟರೆ ನಾವೀಗ ಇರುವುದು ಯುದ್ಧದ ಸಮಯದಲ್ಲಿ! ಪ್ರೈಸ್ ವಾರ್, ತೆರಿಗೆ ಯುದ್ಧ, ಸೈಬರ್ ವಾರ್, ಬಯೋ ವಾರ್ ಇಂದಿನ ಯುದ್ಧದ ಮುಖಗಳು. ಐದು ವರ್ಷದ ಹಿಂದೆ ಬಯೋ ವಾರ್ ಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಅದಕ್ಕೂ ಮುಂಚೆ ನಾವು ಪ್ರೈಸ್ ವಾರ್, ನೋಡಿದ್ದೇವೆ. ಸೈಬರ್ ವಾರ್ನಲ್ಲಿ ರಷ್ಯಾ, ನಾರ್ತ್ ಕೊರಿಯಾ ದೇಶಗಳು ಸದಾ ಮಗ್ನರು. ಅಮೇರಿಕಾದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ದಿನವೇ ತೆರಿಗೆ ಯುದ್ಧವನ್ನು ಶುರು ಮಾಡಿದ್ದಾರೆ. ಬದಲಿಗೆ ಚೀನಾ ಟೆಕ್ನಾಲಜಿ ಯುದ್ಧವನ್ನು ಪ್ರಾರಂಭಿಸಿದೆ. ಇದರ ಪ್ರಥಮ ಪರಿಣಾಮ ಅಮೇರಿಕಾ ದೇಶಕ್ಕೆ ಬಿದ್ದಿದೆ. ಒಂದೇ ದಿನದಲ್ಲಿ 87,000 ಲಕ್ಷ ಕೋಟಿ ರೂಪಾಯಿ ನಷ್ಟ ಅಮೇರಿಕಾ ಅನುಭವಿಸಿದೆ. ಈಗ ಯುದ್ಧ ನೇರವಾಗಿ ಅಮೇರಿಕಾ ಮತ್ತು ಚೀನಾ ನಡುವೆ ಏರ್ಪಟ್ಟಿದೆ. ಸದ್ಯದ ವರ್ಲ್ಡ್ ಆರ್ಡರ್ ಪ್ರಕಾರ ಅಮೇರಿಕಾ ಪ್ರಥಮ ಸ್ಥಾನದಲ್ಲಿ, ರಷ್ಯಾ ಎರಡನೆ ಸ್ಥಾನದಲ್ಲಿ, ಚೀನಾ ಮೂರನೇ ಸ್ಥಾನದಲ್ಲಿ ಮತ್ತು ಭಾರತ 4 ನೇ ಸ್ಥಾನದಲ್ಲಿದೆ. ಇದು ಮಿಲಿಟರಿ ಬಲದ ಲೆಕ್ಕಾಚಾರ. ಆರ್ಥಿಕತೆಯ ಲೆಕ್ಕಾಚಾರದಲ್ಲಿ ಅಮೇರಿಕಾ ಪ್ರಥಮ ಸ್ಥಾನ, ಚೀನಾ ಎರಡನೇ ಸ್ಥಾನ , ಜಪಾನ್ ಮೂರನೇ ಸ್ಥಾನ, ಜರ್ಮನಿ ಮತ್ತು ಭಾರತ ಹೆಚ್ಚು ಕಡಿಮೆ ಒಂದೇ ಸ್ಥಾನದಲ್ಲಿವೆ, ನಂತರದ್ದು ಇಂಗ್ಲಂಡ್. ಆದರೆ ವರ್ಲ್ಡ್ ಆರ್ಡರ್ ಬದಲಾವಣೆಗೆ ಈ ಎರಡು ಅಂಶಗಳು ಸಾಲುವುದಿಲ್ಲ. ಅದು ರಷ್ಯಾಗೆ ಗೊತ್ತಿದೆ. ಹೀಗಾಗಿ ಪುಟಿನ್, ಟ್ರಂಪ್ ಅಧಿಕಾರಕ್ಕೆ ಬಂದ ತಕ್ಷಣ ಅವರ ಪರವಾಗಿ ಮಾತನಾಡಿದ್ದಾರೆ. ಟ್ರಂಪ್ ಅಧಿಕಾರದಲ್ಲಿ ಇದ್ದಿದ್ದರೆ ಉಕ್ರೈನ್ ಯುದ್ಧ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಅಪರೋಕ್ಷವಾಗಿ ಅಮೆರಿಕಾದ ಬೆಂಬಲಕ್ಕೆ ನಿಂತಿದ್ದಾರೆ. ಇದು ಚೀನಾದ ಹಿರಿಯಣ್ಣನಾಗುವ ಆಸೆಯನ್ನು ಇನ್ನೊಂದು ನಾಲ್ಕು ವರ್ಷ ಮುಂದಕ್ಕೆ ಹಾಕಬಹುದು. ಸದ್ಯದ ಮಟ್ಟಿಗೆ ಪುಟಿನ್ ಗೆ ಚೀನಾಕ್ಕಿಂತ ಅಮೇರಿಕಾ ವಾಸಿ ಎನ್ನಿಸಿದೆ.
ವಿಶ್ವ ವ್ಯವಸ್ಥೆ ಬದಲಿಸಲು ಈಗ ಎಂಟು ಅಂಶಗಳಲ್ಲಿ ಕನಿಷ್ಠ ಆರು ಅಥವಾ ಏಳು ಅಥವಾ ಎಂಟಕ್ಕೆ ಎಂಟು ಅಂಶಗಳ ಮೇಲೆ ಹಿಡಿತ ಹೊಂದಬೇಕಾದ ಅವಶ್ಯಕತೆಯಿದೆ.
ಎಜುಕೇಶನ್ - ಇದು ಎಲ್ಲಕ್ಕೂ ಮೂಲ. ಹೀಗಾಗಿ ಇದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಯಾವ ದೇಶದಲ್ಲಿ ಹೆಚ್ಚು ವಿದ್ಯಾವಂತರು, ಬುದ್ದಿವಂತರು ಇರುತ್ತಾರೆ, ಆ ದೇಶ ಜಗತ್ತಿನ ಚುಕ್ಕಾಣಿ ಹಿಡಿಯುತ್ತದೆ.
ತಂತ್ರಜ್ಞಾನ - ಯಾವ ದೇಶದಲ್ಲಿ ಅತ್ಯುತ್ತಮ ತಂತ್ರಜ್ಞಾನ ಇರುತ್ತದೆ ಆ ದೇಶ ಜಗತ್ತಿನ ಮೇಲೂ ಪ್ರಾಬಲ್ಯ ಸಾಧಿಸುತ್ತದೆ. ಡೇಟಾ ಕಲೆಕ್ಷನ್ ಮುಂದಿನ ದಿನದ ಹಣ, ಆಯುಧ ಎರಡೂ ಆಗಲಿದೆ.
ಕಾಂಪಿಟೇಷನ್ - ಯಾವ ದೇಶ ಇತರ ದೇಶಗಳ ಸ್ಪರ್ಧೆಯಲ್ಲಿ ಗೆಲ್ಲುವ ತಾಕತ್ತು ಹೊಂದಿರುತ್ತದೆ, ಅದಕ್ಕೆ ಹೆಚ್ಚಿನ ಅವಕಾಶವಿರುತ್ತದೆ.
ಎಕಾನಮಿ - ಮೇಲಿನ ಮೂರು ಅಂಶಗಳಲ್ಲಿ ಹಿಡಿತ ಸಾಧಿಸಿದರೆ ದೇಶದ ಎಕಾನಮಿ ಬಲಿಷ್ಠವಾಗುತ್ತದೆ.
ವರ್ಲ್ಡ್ ಟ್ರೇಡ್ - ಜಾಗತಿಕ ವ್ಯಾಪಾರದ ಮೇಲೆ ಹಿಡಿತ ಹೊಂದುವ ದೇಶ ಜಗತ್ತಿನ ಹಿರಿಯಣ್ಣನಾಗುವ ಸಾಧ್ಯತೆ, ವಿಶ್ವ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಪಡೆದುಕೊಳ್ಳುತ್ತದೆ.
ಮಿಲಿಟರಿ ಶಕ್ತಿ - ಆರ್ಥಿಕತೆಯ ಜೊತೆಗೆ ದೈಹಿಕ ಶಕ್ತಿ ಕೂಡ ಬೇಕಾಗುತ್ತದೆ. ಯಾವಾಗ ಯುದ್ಧವಾಗುತ್ತದೆ ಎನ್ನುವುದನ್ನು ಇಂದಿನ ಸಂದರ್ಭದಲ್ಲಿ ಹೇಳಾಗುವುದಿಲ್ಲ. ಭೌತಿಕ ಯುದ್ಧದ ಸಾಧ್ಯತೆ ಕಡಿಮೆ. ಆದರೂ ಯಾವುದನ್ನೂ ತಳ್ಳಿ ಹಾಕುವಂತಿಲ್ಲ.
ಫೈನಾನಾಸಿಯಲ್ ಸೆಂಟರ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಹಿಡಿತ - ಸದ್ಯದ ಸಂಧರ್ಭದಲ್ಲಿ ಅಮೇರಿಕಾ, ಚೀನಾ ಎಲ್ಲಾ ದೇಶಗಳ ಬ್ಯಾಂಕಿಂಗ್ ವ್ಯವಸ್ಥೆ ಅಷ್ಟು ಸರಿಯಾಗಿಲ್ಲ. ರಷ್ಯಾ ಕೂಡ ಉಕ್ರೈನ್ ಯುದ್ಧದ ಕಾರಣ ಬಸವಳಿದಿದೆ. ನಿಜ ಹೇಳಬೇಕೆಂದರೆ ಆರ್ಥಿಕವಾಗಿ ಯಾವೊಂದು ದೇಶವೂ ಭದ್ರತೆಯಲ್ಲದ ದಿನಗಳಿವು. ಈ ಒಂದು ಅಂಶದಿಂದ ಕೂಡ ವಿಶ್ವ ವ್ಯವಸ್ಥೆಯ ಹೊಸ ನಾಯಕನ ಹುಡುಕಾಟ ಮುಂದೊಗಬಹುದು.
ರಿಸೆರ್ವ್ ಕರೆನ್ಸಿ ಅಥವಾ ಗ್ಲೋಬಲ್ ಕರೆನ್ಸಿ - ಇಂದಿಗೂ ಅಮೆರಿಕನ್ ಡಾಲರ್ ಗ್ಲೋಬಲ್ ಕರೆನ್ಸಿ ಯಾಗಿ ಮುಂದುವರಿದೆ. ಜಗತ್ತಿನ 70 ಕ್ಕೂ ಹೆಚ್ಚು ಪ್ರತಿಶತ ವಹಿವಾಟು ನಡೆಯುವುದು ಡಾಲರ್ನಲ್ಲಿ. ಚೀನಾ ಜಗತ್ತಿನ ವಿಶ್ವಾಸವನ್ನು ಗಳಿಸಿಕೊಳ್ಳುವುದು ಸುಲಭವಲ್ಲ. ಹೀಗಾಗಿ ಉಳಿದ ಅಂಶಗಳ ಮೇಲೆ ಪೂರ್ಣ ಹಿಡಿತವನ್ನು ಅದು ಸಾಧಿಸಬೇಕಿದೆ.
ಕೊನೆಮಾತು: ವಿಶ್ವ ವ್ಯವಸ್ಥೆ ಬದಲಾವಣೆಯಾಗುವುದು ನಿಶ್ಚಿತ. ಆ ಬದಲಾವಣೆ ಪೂರ್ಣವಾಗಿ ಆಗುವವರೆಗೆ ಅಥವಾ ಚೀನಾ ಸ್ಪರ್ಧೆಯಿಂದ ಹಿಂದೆ ಸರಿಯುವವರೆಗೆ ಜಗತ್ತಿನಲ್ಲಿ ಅಸ್ಥಿರತೆ ಹೆಚ್ಚಾಗಲಿದೆ. ಅದು ಭಾರತದ ಮೇಲೂ ಪರಿಣಾಮ ಬೀರಲಿದೆ. ಭಾರತ ದೇಶಗವಾಗಿ ಮೇಲೆ ಹೇಳಿರುವ ಎಂಟು ಅಂಶಗಳಲ್ಲಿ ಎಷ್ಟರಲ್ಲಿ ಹೆಚ್ಚಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಅಷ್ಟೂ ಚೌಕಾಸಿ ಮಾಡುವ ಶಕ್ತಿ ಬೆಳೆಸಿಕೊಳ್ಳುತ್ತದೆ. ಆಗೊಮ್ಮೆ ಹೊಸ ವಿಶ್ವ ವ್ಯವಸ್ಥೆ ನಾಲ್ಕು ಅಥವಾ ಐದು ದೇಶಗಳ ಒಕ್ಕೊಟದಾದ್ದರೆ ಭಾರತವೂ ಅದರಲ್ಲಿ ಒಂದಾಗಿರಬೇಕು ಎಂದರೆ ಎಲ್ಲಕ್ಕೂ ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ಇಲ್ಲಿನ ಬುದ್ದಿವಂತರು ವಲಸೆ ಹೋಗದಂತೆ ಉತ್ತಮ ವಾತಾವಾರಣ ನಿರ್ಮಿಸಬೇಕು. ಉಳಿದ ಅಂಶಗಳು ಶಿಕ್ಷಣದ ಮೇಲೆ ಅವಲಂಬಿತವಾಗಿದೆ.
Advertisement