
ಈ ಅಂಕಣ ಶಿವರಾತ್ರಿಯ ದಿನ ಪ್ರಕಟವಾಗುತ್ತಿರುವುದೊಂದು ನೆಪ. ಇದನ್ನಿಟ್ಟುಕೊಂಡು, ಇತ್ತೀಚಿನ ದಶಕಗಳಲ್ಲಿ ಹಿಂದು ವಿಚಾರಧಾರೆಯನ್ನು ಹೊಸ ಹೊಳಹುಗಳೊಂದಿಗೆ ಚೆಂದವಾಗಿಸಿರುವ ಹಿರಿಯ ಲೇಖಕರೊಬ್ಬರ ಬರಹ ಸ್ವಾರಸ್ಯವನ್ನು ಚರ್ಚಿಸುವುದಕ್ಕೊಂದು ವೇದಿಕೆ ಒದಗಿದಂತಾಯಿತು.
ಶಿವ ಎಂದರೆ ಡಿಸ್ಟ್ರಾಯರ್ (destroyer) ಎಂಬ ಪಾಶ್ಚಿಮಾತ್ಯ ಪರಿಕಲ್ಪನೆ ಸರಿಯೇ? ಎಂಬುದು ಲೇಖಕರು ಎತ್ತುವ ಹಲವು ಪ್ರಶ್ನೆಗಳಲ್ಲೊಂದು. ಅದಕ್ಕೆ ಅವರು ಕೊಡುವ ಉತ್ತರ ಆಸಕ್ತಿದಾಯಕವಾಗಿದೆ ಅಷ್ಟೇ ಅಲ್ಲ…ಇಂಥದೇ ಹಲವು ಮಾದರಿಗಳತ್ತ ಅವರು ನಮ್ಮ ಗಮನ ಸೆಳೆದು ಚಿಂತನೆಗೆ ಹಚ್ಚುತ್ತಾರೆ. ಆ ಲೇಖಕ ರಾಜೀವ್ ಮಲ್ಹೋತ್ರ (rajeev malhotra). ಬ್ರೇಕಿಂಗ್ ಇಂಡಿಯಾ (breaking india), ಸ್ನೇಕ್ಸ್ ಇನ್ ಗಂಗಾ (snakes in ganga) ಸೇರಿದಂತೆ ಹಲವು ಪುಸ್ತಕಗಳನ್ನು ಬರೆದವರು. 2011ರಲ್ಲೇ ಪ್ರಕಟಗೊಂಡ ‘ಬೀಯಿಂಗ್ ಡಿಫರೆಂಟ್’ ಎಂಬ ಪುಸ್ತಕದ ಆರು ಅಧ್ಯಾಯಗಳ ಪೈಕಿ ಒಂದು ಅಧ್ಯಾಯವು ಸಂಸ್ಕೃತದ ಅನುವಾದ ಅಶಕ್ಯ ಗುಣವನ್ನು ವಿಶಿಷ್ಟವಾಗಿ ಪರಿಚಯಿಸುತ್ತದೆ. ಆ ದೊಡ್ಡ ಅಧ್ಯಾಯದ ಹಲವು ಉದಾಹರಣೆಗಳ ಪೈಕಿ ಶಿವನದ್ದೂ ಒಂದು.
ರಾಜೀವ್ ಮಲ್ಹೋತ್ರ ಬರೆಯುತ್ತಾರೆ- ಶಿವನನ್ನು ಹಲವಾರು ಬಾರಿ 'ವಿನಾಶಕ' ಎಂಬರ್ಥದಲ್ಲಿ ತಪ್ಪಾಗಿ ಭಾಷಾಂತರಿಸಲಾಗುತ್ತದೆ. ಬ್ರಹ್ಮನು 'ಸೃಷ್ಟಿಕರ್ತ', ಹಾಗೆ ಸೃಷ್ಟಿಯಾಗಿರುವುದನ್ನು ಪೊರೆಯುವ ‘ಸ್ಥಿತಿಕಾರಕ’ ವಿಷ್ಣು ಮತ್ತು ಕೊನೆಯಲ್ಲಿ ಎಲ್ಲವನ್ನೂ ವಿನಾಶಗೊಳಿಸುವವ ಶಿವ ಎಂಬ ವಿವರಣೆ ಢಾಳಾಗಿದೆ. ಆದರೆ, ಯಹೂದಿ-ಕ್ರೈಸ್ತ ಪರಂಪರೆಗಳು ಯಾವುದನ್ನು ಸೃಷ್ಟಿ ಎಂದು ಹೇಳುತ್ತವೆಯೋ ಆ ಅರ್ಥದಲ್ಲಿ ಬ್ರಹ್ಮನು ಸೃಷ್ಟಿಕರ್ತನಲ್ಲ, ಹಾಗೆಯೇ, ಹಲವು ಲೇಖಕರು ಬರೆಯುವಂತೆ, ಶಿವನು ‘ವಿನಾಶಕಾರಿ’ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಹುಶಃ ಪರಿವರ್ತಕ (Transformer) ಎಂಬುದು ಶಿವನನ್ನು ವಿವರಿಸುವ ಸಮರ್ಥ ಪದಪುಂಜವಾಗುತ್ತದೆ. ಏಕೆಂದರೆ ಅವನು ಮಾನವಕುಲ ಮತ್ತು ಬೃಹ್ಮಾಂಡವನ್ನು ಚೈತನ್ಯದ ಪರಿವರ್ತನೆಯತ್ತ ಒಯ್ಯುವವನು.
ಇಷ್ಟಕ್ಕೂ ಶಿವನು ಲಯಗೊಳಿಸುವುದು ಇಲ್ಲವೇ ಪರಿವರ್ತಿತಗೊಳಿಸುವುದು ಯಾವುದನ್ನು ಎಂದರೆ, ಮನೋಭಿತ್ತಿಯಲ್ಲಿ ತಪ್ಪಾಗಿ ಅಚ್ಚೊತ್ತಿರುವ ನಾಮ-ರೂಪಗಳನ್ನು. ಭೌತಿಕ ವಸ್ತುವಿನ ಲಯವನ್ನೇ ಪರಿಗಣಿಸಿದರೂ ಅದರ ಕರಗುವಿಕೆ ಎನ್ನುವುದು ಒಂದು ಆವರ್ತನದ ಅಂತ್ಯ ಹಾಗೂ ಮತ್ತೊಂದರ ಶುರುವಾತು. ಅದು ಹೊಸ ಸೃಷ್ಟಿಗೆ ಜಾಗ ನೀಡುವ ಪ್ರಕ್ರಿಯೆ, ಒಂದು ಋತು ಇನ್ನೊಂದಕ್ಕೆ ಮಾರ್ಪಡುವಂತೆ. ಹಳೆಯದನ್ನು ಕಳೆದು ಹೊಸದನ್ನು ಬರಲು ಅವಕಾಶ ನೀಡುವುದು ಶಿವನ ತತ್ತ್ವ.
ಹೀಗಾಗಿ, ಶಿವನು ತಾಂಡವನೃತ್ಯ ಮತ್ತು ಯೋಗದ ಒಡೆಯನಾಗಿ, ಪ್ರಜ್ಞೆ ಮತ್ತು ಅಧ್ಯಾತ್ಮದ ಮಾದರಿಯಾಗಿ ವಿವರಿಸಲ್ಪಡುತ್ತಾನೆ. ಕೇವಲ ವಿನಾಶ ಮಾಡುವವನೇ ಶಿವನಾಗಿದ್ದರೆ ಜನರಾದರೂ ಅದೇಕೆ ಅನಾದಿ ಕಾಲದಿಂದ ಆತನನ್ನು ಭಕ್ತಿಯಿಂದ ಬಳಿಸಾರಿಕೊಂಡಿರುತ್ತಿದ್ದರು, ಅಲ್ಲವಾ? ಇವಿಷ್ಟು ರಾಜೀವ್ ಮಲ್ಹೋತ್ರರು ಶಿವನೆಂದರೆ ವಿಧ್ವಂಸಕನಲ್ಲ ಎಂಬ ಬಗ್ಗೆ ಬರೆದಿರುವ ವಿವರಣೆ.
ಆದರೆ ಇದಕ್ಕೂ ಪೂರ್ವಭಾಗದಲ್ಲಿ ಮತ್ತು ನಂತರದಲ್ಲಿ ಇಂಥದ್ದೇ ಹಲವು ಉದಾಹರಣೆಗಳನ್ನು ರಾಜೀವ್ ಮಲ್ಹೋತ್ರ ನೀಡುತ್ತ ಹೋಗಿದ್ದಾರೆ. ಹಿಂದು ಪರಿಕಲ್ಪನೆಯ ಬ್ರಹ್ಮ ಅಥವಾ ಈಶ್ವರ ಪರಿಕಲ್ಪನೆಯನ್ನು ಗಾಡ್ ಎಂದು ಅನುವಾದಿಸುವುದು ತಪ್ಪು. ಏಕೆಂದರೆ ಯಹೂದಿ-ಕ್ರೈಸ್ತ ಪರಿಕಲ್ಪನೆಯ ಗಾಡ್ ವ್ಯಾಖ್ಯಾನವೇ ಭಿನ್ನವಾಗಿದೆ. ಎಲ್ಲವನ್ನೂ ಆವರಿಸಿರುವ, ಎಲ್ಲದರ ಹುಟ್ಟಿಗೂ ಕಾರಣವಾಗಿರುವ, ಎಲ್ಲದರಲ್ಲೂ ಇರುವ ತತ್ತ್ವವೆಂಬುದಾಗಿ ಬ್ರಹ್ಮ ಇಲ್ಲವೇ ಈಶ್ವರ ಪರಿಕಲ್ಪನೆ. ಇದನ್ನು ಸಿನಾಯ್ ಪರ್ವತದ ಮೇಲೆ ಮೊಸಸ್ ಕಂಡ ದೇವರಿಗೆ ಸಮೀಕರಿಸುವುದಕ್ಕಾಗುವುದಿಲ್ಲ. ಏಕೆಂದರೆ ಯಹೂದಿ-ಕ್ರೈಸ್ತ ಪರಿಕಲ್ಪನೆಯ ದೇವರು ವಿಶ್ವವನ್ನು ಸೃಷ್ಟಿಸಿದವ, ಆದರೆ ಸೃಷ್ಟಿಯಿಂದ ಬೇರೆಯಾಗಿ ಇರುವವ. ಇದೇ ರೀತಿ ನಮ್ಮ ಆತ್ಮದ ಪರಿಕಲ್ಪನೆಯನ್ನು ಇಂಗ್ಲಿಷಿನಲ್ಲಿ ಸ್ಪಿರಿಟ್ ಅಥವಾ ಸೋಲ್ ಗೆ ಸಮೀಕರಿಸಿ ಏಕೆ ಹೇಳಬಾರದು ಎಂಬುದರ ಬಗ್ಗೆ ರಾಜೀವ್ ಮಲ್ಹೋತ್ರ ಆಸಕ್ತಿಕರ ವಿವರಣೆ ನೀಡುತ್ತಾರೆ.
ವೇದಗಳಿಗೆ ಬೈಬಲ್ ಸಮೀಕರಣ ಏಕೆ ಸಲ್ಲ, ಪ್ರವಾದಿ ಶಬ್ದವನ್ನು ಗುರು, ಯೋಗಿ ಇತ್ಯಾದಿ ಪದಗಳಿಗೆ ಸಮೀಕರಿಸಬಾರದೇಕೆ, ಓಂ ಬದಲು ಅಮೆನ್ ಅಥವಾ ಅಲ್ಲಾಹು ಅಕ್ಬರ್ ಹೇಳಿದರೂ ನಡೆಯುತ್ತದೆ ಎಂಬ ವಾದಗಳು ಏಕೆ ಸರಿಯಲ್ಲ ಎಂಬುದನ್ನೆಲ್ಲ ಅವರು ತಾರ್ಕಿಕ ನೆಲೆಯಲ್ಲಿ ವಿವರಿಸುತ್ತ ಹೋಗುತ್ತಾರೆ.
ಕೆಲವು ದಶಕಗಳ ಹಿಂದೆ ಅಳಲೊಂದಿತ್ತು. ಹೊಸ ಪೀಳಿಗೆಯ ಹುಡುಗ-ಹುಡುಗಿಯರಿಗೆ ಆಚರಣೆಗಳ ಬಗ್ಗೆ ಆಸಕ್ತಿಯೇ ಇಲ್ಲ ಅಂತ. ಇತ್ತೀಚಿನ ವರ್ಷಗಳಲ್ಲಿ ಈ ದುಗುಡವೇನೂ ತೀವ್ರತೆ ಉಳಿಸಿಕೊಂಡಿಲ್ಲ. ಉದಾಹರಣೆಗೆ, ಮಹಾಶಿವರಾತ್ರಿ ದಿನವೇ ಗಮನಿಸಿದರೂ ನಿಮ್ಮ ಸುತ್ತಮುತ್ತಲಿನ ಶಿವ ದೇವಾಲಯಗಳಲ್ಲಿ ಸಾಲುಹಚ್ಚಿ ನಿಂತಿರುವ ಜನಸಮೂಹದ ದೃಶ್ಯ ಸಿಕ್ಕೇ ಸಿಗುತ್ತದೆ ಹಾಗೂ ಈ ಸಾಲಿನಲ್ಲಿ ಯುವಜನರೂ ದೊಡ್ಡ ಸಂಖ್ಯೆಯಲ್ಲೇ ಇದ್ದಿರುತ್ತಾರೆ. ಮಹಾಕುಂಭವು ಸಾಮಾಜಿಕ ಮಾಧ್ಯಮದಲ್ಲಿ ಈ ಪರಿ ಚರ್ಚೆಯಾಗುವುದಕ್ಕೆ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಆಕರ್ಷಿತರಾಗಿ ಹೋಗಿಬಂದ ದೇಶದ ನಾನಾ ಮೂಲೆಗಳ ಯುವಜನರೆಲ್ಲ ಆ ಬಗ್ಗೆ ಇನ್ಸ್ತಾ- ಎಕ್ಸ್ ಮಾಧ್ಯಮಗಳಲ್ಲಿ ಮಾತನಾಡುತ್ತಿರುವುದು. ಕೇವಲ ಇಂಥ ಕಲೆಯುವಿಕೆಗಳ ವಿಷಯದಲ್ಲಿ ಅಂತಲ್ಲದೇ ಮಾಹಿತಿ ಉಪಭೋಗದ ಮಾದರಿ ಗಮನಿಸಿದಾಗಲೂ ಅಲ್ಲಿ ಯುವಜನರಿಗೆ ಆಚರಣೆಗಳ ಬಗ್ಗೆ ಒಂದು ಬೆರಗು-ಆಸಕ್ತಿ ಕೆದರಿಕೊಂಡಿರುವುದು ವೇದ್ಯವಾಗುತ್ತದೆ.
ಹಾಗೆಂದೇ ಕೆಲವು ಬಾಬಾ ಮಂದಿಯ ಪ್ರವಚನಗಳು, ಧ್ಯಾನ-ಪೂಜಾವಿಧಾನ ಕುರಿತಾದ ಪಾಡ್ಕಾಸ್ಟ್ ಸರಣಿಗಳು ದೊಡ್ಡಮಟ್ಟದಲ್ಲಿ ವೀಕ್ಷಣೆಯ ಭಾಗ್ಯ ಪಡೆಯುತ್ತಿವೆ.
ಆದರೆ ಇವೆಲ್ಲದರ ನಡುವೆ ಒಂದು ವೋಕ್ ಮನೋಭಾವ ಅರ್ಥಾತ್ ಯಾವುದೇ ವಿಷಯದ ಬಗ್ಗೆ ಶ್ರದ್ಧಾಹೀನ ಉತ್ಸುಕತೆ ಎಂಬುದು ಸಹ ದಟ್ಟವಾಗುತ್ತಿದೆ. ಉದಾಹರಣೆಗೆ, ದೇವರ ಹೆಸರಿನ ಜಪ ಮಾತ್ರವಲ್ಲದೇ ಯಾವುದನ್ನೇ ನಿರಂತರ ಮನಸಿನಲ್ಲಿ ಪುನರಾವರ್ತಿಸಿದರೂ ಅದನ್ನು ಪಡೆದುಕೊಳ್ಳಬಹುದು ಎಂಬಂಥ ವಾದಗಳು, ಎಲ್ಲ ಮತಗಳ ದೇವರೂ ಸಾರುತ್ತಿರುವುದು ಒಂದೇ ಅಂಶವನ್ನು ಬಿಡಿ ಎಂಬ ಭೋಳೇತನ ಇಂಥವೂ ಹೆಚ್ಚಿವೆ! ಕೇವಲ ವ್ಯಾವಹಾರಿಕ ವಿಸ್ತಾರದ ಕನ್ನಡಕವನ್ನು ಮಾತ್ರ ಹಾಕಿಕೊಂಡಾಗ ಈಗಿನ ಯುವಪೀಳಿಗೆಗೆ ಮಾತ್ರವಲ್ಲದೇ ಹಿರಿಯರಲ್ಲೂ ವೋಕ್ ವೈರಸ್ ಹೇಗೆಲ್ಲ ಕೆಲಸ ಮಾಡಿಬಿಡಬಲ್ಲದೆಂಬುದಕ್ಕೆ ರಾಜೀವ್ ಮಲ್ಹೋತ್ರರು ಉಲ್ಲೇಖಿಸುವ ಬಾಬಾ ರಾಮದೇವ್ ಉದಾಹರಣೆ ಮತ್ತು ಅದನ್ನು ವ್ಯಾಖ್ಯಾನಿಸಿರುವ ರೀತಿ ಸಾಕ್ಷ್ಯ ನುಡಿಯುವಂತಿದೆ.
2007ರಲ್ಲಿ ಅಮೆರಿಕದಲ್ಲಿ ಬಾಬಾ ರಾಮದೇವರಿಗೆ ಎದುರಾಗಿದ್ದ ಪ್ರಶ್ನೆ - “ಕ್ರಿಶ್ಚಿಯನ್ ಯೋಗ ಜನಪ್ರಿಯವಾಗುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಅದಕ್ಕವರು ನೀಡಿದ್ದ ಉತ್ತರ “ಯೋಗ ಎಲ್ಲರಿಗೆ ಬೇಕಾದ ವಿಜ್ಞಾನ ಅಷ್ಟೆ. ಓಮ್ ಎನ್ನುವುದರ ಬದಲಿಗೆ ಅಲ್ಲಾಹು ಅಕ್ಬರ್ ಎಂದಾದರೂ ಹೇಳಬಹುದು, ಜೀಸಸ್ ಸ್ಮರಣೆಯನ್ನಾದರೂ ಮಾಡಬಹುದು. ವಿದ್ಯುತ್ ಅನ್ನೋ, ವಿಮಾನವನ್ನೋ ಅನ್ವೇಷಿಸಿದ ವಿಜ್ಞಾನವಿದ್ದಂತೆಯೇ ಯೋಗ. ಅದು ಜಗತ್ತಿನ ಎಲ್ಲ ಬಗೆಯ ಮತ ನಂಬಿಕೆಗಳಿಗೆ ಸಲ್ಲುತ್ತದೆ.”
ಈ ಬಗ್ಗೆ ರಾಜೀವ್ ಮಲ್ಹೋತ್ರ ವಿಶ್ಲೇಷಿಸುವುದು ಹೀಗೆ - ಇಲ್ಲಿ ಬಾಬಾ ರಾಮದೇವರು ಮರೆತಿರುವ ಅಂಶ ಏನೆಂದರೆ, ಅವರು ಉದಾಹರಿಸಿದಂತೆ ವಿದ್ಯುತ್ ಎಂಬುದು ಸಾರ್ವತ್ರಿಕವಾಗಿ ಸಲ್ಲುವ ಬಲವೇ ಹೌದಾಗಿದ್ದರೂ ಅದರ ಪಾಸಿಟಿವ್ ಧ್ರುವ ಹಾಗೂ ನೆಗೆಟಿವ್ ಧ್ರುವಗಳನ್ನು ಅದಲು-ಬದಲಾಗಿಸಲಾಗುವುದಿಲ್ಲ. ಇಲ್ಲವೇ ತಾಮ್ರ ತಂತಿ ಬದಲಿಗೆ ನಮ್ಮ ಮನಸ್ಸಿಗೆ ಬಂದಿದ್ದೇನನ್ನೋ ಬಳಸಲಾಗುವುದಿಲ್ಲ. ಹಾಗೆ ಮಾಡಿದರೆ ಪರಿಣಾಮವೂ ಬದಲಾಗುತ್ತದೆ. ಓಂ ಎಂಬುದು ನಾಮ-ರೂಪಗಳನ್ನು ಮೀರುವುದಕ್ಕಿರುವ ಬೀಜಮಂತ್ರ. ಯಾವುದೇ ಬೀಜಮಂತ್ರವನ್ನು ಜೀಸಸ್ ಇತ್ಯಾದಿ ಇತಿಹಾಸ ಉಲ್ಲೇಖಿತ ನಾಮ-ರೂಪ ಪ್ರತೀಕಗಳಿಂದ ಬದಲಿಸಲಾಗುವುದಿಲ್ಲ. ಅಲ್ಲಾಹು, ಜೀಸಸ್ ಇತ್ಯಾದಿಗಳು ಓಮ್ ಗೆ ಸಂವಾದಿಯಾದ ವೈಶ್ವಿಕ ಸಾರ್ವತ್ರಿಕತೆ ಹೊಂದಿವೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಬಾಬಾ ರಾಮದೇವರು ದೀರ್ಘಕಾಲದ ಪ್ರಯೋಗಾತ್ಮಕ ದಾಖಲೆ ಕೊಡಬೇಕಾಗುತ್ತದೆ.
ಮಂತ್ರಕ್ಕೆ ಎಲ್ಲ ಬಾರಿಯೂ ನಮ್ಮ ಬಳಕೆಯ ಭಾಷೆಯಲ್ಲಿ ಅರ್ಥ ಸಿಕ್ಕಿಬಿಡುತ್ತದೆ ಎಂದೇನೂ ಇಲ್ಲ. ಪ್ರಜ್ಞೆಯ ಒಂದು ನಿರ್ದಿಷ್ಟ ಬಿಂದುವನ್ನು ಮುಟ್ಟಲಿಕ್ಕಿರುವ ಕಂಪನಾಂಕವೇ ಮಂತ್ರ. ಅದನ್ನು ಸತತ ಅಭ್ಯಾಸದಿಂದ ಮಾತ್ರವೇ ಟ್ಯೂನ್ ಮಾಡಿಕೊಳ್ಳಬಹುದು. ಒಂದು ಸಮಯದ ನಂತರ ಸಣ್ಣಮಟ್ಟದ ಕಂಪನಾಂಕ ಹೊಂದಿರುವ ಶಬ್ದಗಳನ್ನೆಲ್ಲ ಮಂತ್ರವು ಮೀರಿ ನಿಲ್ಲುತ್ತದೆ. ಸಾಧಕನು ಉಳಿದೆಲ್ಲ ಶಬ್ದಗಳು ಮೌನವಾಗುವ ಹಂತದ ಕಂಪನಾಂಕಕ್ಕೂ ಟ್ಯೂನ್ ಆಗಿಸಿಕೊಂಡು, ಮಂತ್ರದಲ್ಲಿರುವ ಕಂಪನಕ್ಕೆ, ವೈಬ್ರೇಶನ್ ಗೆ ಸಂಪೂರ್ಣ ಒಳಪಡುವ ಪ್ರಕ್ರಿಯೆ ವ್ಯಕ್ತಿಯಾಗಿ ಆತನನ್ನು ಮಾತ್ರವಲ್ಲದೇ ಮಾನವತೆಯನ್ನು ಸಹ ಬ್ರಹ್ಮಾಂಡದ ಜತೆ ಬೆಸೆಯುತ್ತದೆ.
ಇಂಥದೇ ಹಲವು ವಿಚಾರಗಳನ್ನು ‘ಬೀಯಿಂಗ್ ಡಿಫರೆಂಟ್’ ನಮ್ಮ ಮಸ್ತಿಷ್ಕಕ್ಕೆ ದಾಟಿಸುತ್ತದೆ. ಶಿವರಾತ್ರಿ ಸೇರಿದಂತೆ ಯಾವುದೇ ಆಚರಣೆಗಳು ಬಂದಾಗ ಅವುಗಳ ಹಿಂದೆ ಕಾಲಾಂತರಗಳಿಂದ ನಿಂತಿರುವ ತತ್ತ್ವಗಳ ಬಗ್ಗೆ ಮಥನಕ್ಕೆ ಸಮಯ ಕೊಟ್ಟರೆ ಅದು ನಮಗೆ ದೊಡ್ಡಮಟ್ಟದಲ್ಲಿ ಪ್ರಯೋಜನಕಾರಿ ಎನಿಸಬಹುದೇನೋ.
- ಚೈತನ್ಯ ಹೆಗಡೆ
cchegde@gmail.com
Advertisement