ದಕ್ಷಿಣ ಅಮೆರಿಕದಲ್ಲಿ ವೇದಘೋಷ, ರಾಮಾಯಣ - ಶುರುವಾಗಿದೆಯೇ ಸಂಸ್ಕೃತಿ ಪುನರುತ್ಥಾನ? (ತೆರೆದ ಕಿಟಕಿ)

ಜೊನಾಸ್ ಮಸೆತ್ತಿ ಹೇಳುವ ಈ ಮಾತು ನಮ್ಮೆಲ್ಲರನ್ನೂ ತಾಗಬೇಕು. ಅವರು ಹೇಳಿದ್ದು, “ಭಾರತೀಯ ಯುವಕರು ವೇದಜ್ಞಾನದ ವಿಷಯಗಳಲ್ಲಿ ಆಸಕ್ತಿ ಉಳಿಸಿಕೊಂಡಿಲ್ಲ ಎಂಬ ಮಾತುಗಳನ್ನು ಕೇಳಿದಾಗಲೆಲ್ಲ ಬಹಳ ದುಃಖವಾಗುತ್ತದೆ. ಯಾವ ಪಾಶ್ಚಾತ್ಯ ವಿಷಯಗಳ ಬಗ್ಗೆ ನೀವೆಲ್ಲ ಆಕರ್ಷಿತರಾಗಿದ್ದೀರೋ ಅವು ಬಹಳ ಶುಷ್ಕ, ಸತ್ತ್ವಹೀನ ಅಂತ ನಿಮಗೆ ತಿಳಿಸುವುದಕ್ಕೆ ಇಷ್ಟಪಡುತ್ತೇನೆ. ನಿಮ್ಮ ಮನೆಗಳಲ್ಲಿರುವ ಸಂಸ್ಕೃತಿಯೇ ಆಹ್ಲಾದದ್ದಾಗಿದೆ.”
Ramayana in Brazil: PM Modi lauds India's cultural influence
ಬ್ರಜಿಲ್ ಭೇಟಿಯ ವೇಳೆ ರಾಮಾಯಣ ಆಧರಿತ ನಾಟಕ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿonline desk
Updated on

ಜಿ-20 ರಾಷ್ಟ್ರಗಳ ನಾಯಕರ ಸಭೆ ನಿಮಿತ್ತ ನವೆಂಬರ್ 18ರಿಂದ 20ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲ್ಯಾಟಿನ್ ಅಮೆರಿಕ ಖಂಡದ ದೇಶವಾದ ಬ್ರಜಿಲ್ ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಅಂತರ್ಜಾಲ ಪ್ರಪಂಚದಲ್ಲಿ ವ್ಯಾಪಕವಾಗಿ ಪ್ರಚಾರ ಕಂಡ ದೃಶ್ಯಾವಳಿಗಳ ಪೈಕಿ ಒಂದೆಂದರೆ, ಬ್ರಜಿಲ್ ದೇಶದ ಗುಂಪೊಂದು ಪ್ರಧಾನಿಯವರ ಎದುರು ವೇದಮಂತ್ರಗಳನ್ನು ಪ್ರಸ್ತುತಪಡಿಸಿದ್ದು. ಅಷ್ಟೇ ಅಲ್ಲ, ಅವರು ರಾಮಾಯಣ ಆಧರಿತ ನಾಟಕವೊಂದನ್ನು ಪ್ರಧಾನಿ ಮೋದಿ ಸೇರಿದಂತೆ ಅಲ್ಲಿಗೆ ಹೋಗಿದ್ದ ಭಾರತೀಯ ನಿಯೋಗದ ಎದುರು ಸಂಸ್ಕೃತ ಭಾಷೆಯಲ್ಲಿ ಆಡಿ ತೋರಿಸಿದರು. ಭಾರತದ ಸಂಸ್ಕೃತಿಯ ಶಕ್ತಿ ವಿಶ್ವವನ್ನು ಆವರಿಸಿಕೊಳ್ಳುತ್ತಿರುವ ಬಗ್ಗೆ ಹಾಗೂ ಆ ತಂಡದ ಬಗ್ಗೆ ಬೆರಗು ವ್ಯಕ್ತಪಡಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಸಹ ಮಾಡಿದರು. 

ಗಮನಿಸಬೇಕಾದ ಅಂಶವೆಂದರೆ, ಆ ತಂಡದಲ್ಲಿದ್ದವರ್ಯಾರೂ ಬ್ರಜಿಲ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲ. ಇವೆಲ್ಲದರ ಮುಂಚೂಣಿಯಲ್ಲಿದ್ದವರು ಜೊನಾಸ್ ಮಸೆತ್ತಿ. ರಾಜಧಾನಿ ರಿಯೊ ಡಿ ಜನೈರೊಕ್ಕೆ ಹೊಂದಿಕೊಂಡಿರುವ ಪಟ್ಟಣವೊಂದರಲ್ಲಿ ವಿಶ್ವವಿದ್ಯಾ ಗುರುಕುಲವನ್ನು ಸ್ಥಾಪಿಸಿದವರು. ಆ ಮೂಲಕ ಸಂಸ್ಕೃತ ಮತ್ತು ವೇದಾಂತಗಳ ಪ್ರಚಾರ ಹಾಗೂ ಅಧ್ಯಾಪನಗಳಲ್ಲಿ ತೊಡಗಿದ್ದಾರೆ. ಆಚಾರ್ಯ ವಿಶ್ವನಾಥ ಎಂತಲೂ ತಮ್ಮನ್ನು ಗುರುತಿಸಿಕೊಂಡಿರುವ ಇವರು, ಮೆಕಾನಿಕಲ್ ಎಂಜಿನಿಯರಿಂಗ್ ವೃತ್ತಿಬಿಟ್ಟು, ಭಾರತೀಯ ಶಾಸ್ತ್ರ ಮತ್ತು ತತ್ತ್ವಜ್ಞಾನಗಳ ಕಲಿಕೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಈ ಕಾರಣಕ್ಕಾಗಿಯೇ ಭಾರತಕ್ಕೆ ಬಂದು ಕೆಲವರ್ಷಗಳ ಅಧ್ಯಯನ ನಡೆಸಿ ಹೋಗಿದ್ದಾರೆ ಎಂಬುದನ್ನು ಬಿಟ್ಟರೆ ಅವರೇನೂ ಭಾರತದಲ್ಲಿ ಜನಿಸಿದವರಲ್ಲ.

ಆದರೆ, ಅವರು ಮತ್ತವರ ಸಹವರ್ತಿಗಳು ಹಾಗೂ ಶಿಷ್ಯರ ಮಂತ್ರೋಚ್ಛಾರಣೆ ಹಾಗೂ ನಾಟಕದಲ್ಲಿ ಸಂಸ್ಕೃತ ಭಾಷೆಯ ಅಭಿವ್ಯಕ್ತಿಗಳನ್ನು ನೋಡಿದರೆ ನಮಗೆ ಅಚ್ಚರಿಯಾಗದಿರದು. ಆದರೆ, ಅಚ್ಚರಿಯ ಜತೆ ನಮಗೆ ಸಂಕೋಚವೂ ಆಗಬೇಕೇನೋ. ಏಕೆಂದರೆ, ಅದೇ ನೆಲದಲ್ಲಿರುವ ನಾವು ಹೆಚ್ಚಿನವರು ಟಿವಿ ಧಾರಾವಾಹಿಗಳ ಮೂಲಕ ರಾಮಾಯಣ-ಮಹಾಭಾರತಗಳ ಕಥಾರಂಜನೆ ಪಡೆದಿದ್ದೇವಾದರೂ ಮೂಲದ ಅಂತಃಸತ್ವ ಹೀರಿಕೊಳ್ಳುವ ಸ್ವಾಧ್ಯಾಯಕ್ಕೆ ಕೈಹಾಕಿಯೇ ಇಲ್ಲವಲ್ಲ! ರಾಮಕಥೆಯನ್ನು ಸಂಸ್ಕೃತ ನಾಟಕವಾಗಿ ಪ್ರಸ್ತುತಪಡಿಸುವುದಕ್ಕೆ ಅವರ ತಂಡ ಆರು ವರ್ಷಗಳ ಶ್ರಮ ಹಾಕಿದೆ. ರಾಮಾಯಣವೆಂದರೆ ಧರ್ಮಕ್ಕೆ ಅಭಿವಂದಿಸಿದಂತೆ, ರಾಮಕಥೆಯೊಂದಿಗೆ ಕಾಲ ಕಳೆಯುವುದೆಂದರೆ ನಮ್ಮನ್ನು ನಾವು ಶುದ್ಧೀಕರಿಸಿಕೊಂಡಂತೆ ಎನ್ನುತ್ತಾರವರು!

ಜೊನಾಸ್ ಮಸೆತ್ತಿ ಹೇಳುವ ಈ ಮಾತು ನಮ್ಮೆಲ್ಲರನ್ನೂ ತಾಗಬೇಕು. ಅವರು ಹೇಳಿದ್ದು, “ಭಾರತೀಯ ಯುವಕರು ವೇದಜ್ಞಾನದ ವಿಷಯಗಳಲ್ಲಿ ಆಸಕ್ತಿ ಉಳಿಸಿಕೊಂಡಿಲ್ಲ ಎಂಬ ಮಾತುಗಳನ್ನು ಕೇಳಿದಾಗಲೆಲ್ಲ ಬಹಳ ದುಃಖವಾಗುತ್ತದೆ. ಯಾವ ಪಾಶ್ಚಾತ್ಯ ವಿಷಯಗಳ ಬಗ್ಗೆ ನೀವೆಲ್ಲ ಆಕರ್ಷಿತರಾಗಿದ್ದೀರೋ ಅವು ಬಹಳ ಶುಷ್ಕ, ಸತ್ತ್ವಹೀನ ಅಂತ ನಿಮಗೆ ತಿಳಿಸುವುದಕ್ಕೆ ಇಷ್ಟಪಡುತ್ತೇನೆ. ನಿಮ್ಮ ಮನೆಗಳಲ್ಲಿರುವ ಸಂಸ್ಕೃತಿಯೇ ಆಹ್ಲಾದದ್ದಾಗಿದೆ.”

ಭಾರತದ ಪುರಾಣೇತಿಹಾಸಗಳು ವಿಶ್ವಕ್ಕೂ ಸೇರಿದ್ದೇ?

ಬ್ರಜಿಲ್ ನಲ್ಲಿ ವ್ಯಕ್ತಿಯೊಬ್ಬರು ಗುರುಕುಲ ಸ್ಥಾಪಿಸಿ ವೇದ, ಸಂಸ್ಕೃತ, ಗೀತೆ, ರಾಮಾಯಣಗಳನ್ನೆಲ್ಲ ಪ್ರಚುರಪಡಿಸುತ್ತಿದ್ದಾರೆಂಬ ಸಂಗತಿ ಹಾಗೂ ಆ ವ್ಯಕ್ತಿ ಒಂದು ಉದಾಹರಣೆ ಮಾತ್ರವಲ್ಲದೇ ಅವರನ್ನು ಶಿಕ್ಷಕರನ್ನಾಗಿಯೋ, ಗುರುವನ್ನಾಗಿಯೋ ಸ್ವೀಕರಿಸಿರುವ ಅಲ್ಲಿನ ಬಹಳಷ್ಟು ಸ್ತ್ರೀ-ಪುರುಷರೆಲ್ಲ ಸಂಸ್ಕೃತ ಭಾಷೆ ಹಾಗೂ ವೇದಮಂತ್ರಗಳಲ್ಲಿ ಪರಿಣತಿ ಸಾಧಿಸುತ್ತಿದ್ದಾರೆಂಬ ಆಯಾಮ ಬೆರಗು ಹುಟ್ಟಿಸದೇ ಬಿಡದು. ಆದರೆ ಈ ಬೆರಗನ್ನು ಸ್ವಲ್ಪ ಮೀರಿ ಯೋಚಿಸಿದರೆ ಅದೊಂದು ಸಹಜ ಪ್ರಕ್ರಿಯೆ ಎಂದೋ, ಜ್ಞಾನ ಪುನರುತ್ಥಾನ ಎಂದೋ ಅನಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಯಾವ ವೇದ ರಾಮಾಯಣಗಳೆಲ್ಲ ಇವತ್ತಿನ ಭಾರತ ಭೂಮಿಯಲ್ಲಿರುವ ನಮ್ಮದು ಮಾತ್ರವೆಂದು ಅಂದುಕೊಂಡಿದ್ದೇವೋ, ಅದು ತನ್ನ ಮೂಲದಲ್ಲೇ ವಿಶ್ವವನ್ನು ಆವರಿಸಿತ್ತು ಎಂಬುದಕ್ಕೆ ಹಲವು ಆಧುನಿಕ ಸಂಶೋಧನೆಗಳು ಪುರಾವೆ ಕೊಡುತ್ತಿವೆ. 

ಇತಿಹಾಸ ಎಂದಕೂಡಲೇ ನಮಗೆ ಅಲ್ಲೊಂದು ಕಲ್ಲಿನ ಶಾಸನ ಇದ್ದಿರಬೇಕು, ಇಲ್ಲವೇ ಆ ಕಾಲದ ಒಬ್ಬ ವ್ಯಕ್ತಿ ಗ್ರಂಥ ಬರೆದಿರಬೇಕು ಮತ್ತದರಲ್ಲಿ ಇಸ್ವಿ-ಸ್ಥಳಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು ಎಂಬೆಲ್ಲ ಗ್ರಹಿಕೆಗಳು ಬರುತ್ತವೆ. ಯಾರಾದರೂ ಗುಹೆಯಲ್ಲಿ ಚಿತ್ರ ಕೆತ್ತಿದ್ದಾದರೂ ಇರಬೇಕು. ಆದರೆ ಇವುಗಳಿಗೆ ಹೊರತಾದ, ಮಾನವಕುಲವು ತನ್ನ ನೆನಪನ್ನೇ ಕಾವ್ಯವಾಗಿಸಿ ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ದಾಟಿಸುತ್ತ ಬಂದಿದ್ದಕ್ಕೆ ಬೆಲೆಯಿಲ್ಲ ಎಂಬ ಭಾವನೆಯನ್ನು ಪಾಶ್ಚಾತ್ಯ ಇತಿಹಾಸ ಚಿಂತನೆ ಹಾಗೂ ಅದರಿಂದಲೇ ಪ್ರಭಾವಿತವಾಗಿರುವ ಸ್ವಾತಂತ್ರ್ಯೋತ್ತರದ ಚರಿತ್ರೆಯ ಪಠ್ಯಗಳು ತುಂಬಿವೆ. ಹೀಗಾಗಿ ಭಾರತೀಯ ಪ್ರಾಚೀನ ಕಥಾನಕಗಳೆಲ್ಲ ಮಿಥ್ ಇಲ್ಲವೇ ರಮ್ಯಕಥಾನಕ ಎಂಬ ವಿಭಾಗಕ್ಕೆ ಸೇರಿಬಿಡುತ್ತವೆ. ನಿಜ..ಕಾವ್ಯಗಳಲ್ಲಿ ಉಪಮೆ, ಉತ್ಪ್ರೇಕ್ಷೆ, ಕಲ್ಪನೆ ಇವೆಲ್ಲ ಢಾಳಾಗಿ ಇರುತ್ತವೆ. ಆದರೆ ಅದರ ಅಂತರಾಳದಲ್ಲೂ “ಇದು ಹೀಗೆಯೇ ಆಗಿತ್ತು” ಎಂಬ ಇತಿಹಾಸ ನಿರೂಪಣೆ ಇದ್ದಿರುತ್ತದೆ. 

ಹಳ್ಳಿಯಿಂದ ದಿಲ್ಲಿಯವರೆಗೆ ಯಾವುದೇ ಶಾಲೆಯಲ್ಲಿ ಓದುತ್ತಿರುವ ಮಗು ಇದ್ದಿರಬಹುದು. ಜೀಸಸ್ ಯಾರೆಂದು ಕೇಳಿದರೆ, ಆತನೊಬ್ಬ ಐತಿಹಾಸಿಕ ವ್ಯಕ್ತಿ ಎಂಬ ಗ್ರಹಿಕೆಯಲ್ಲೇ ಉತ್ತರ ಬರುತ್ತದೆ. ಅದೇ ರಾಮ-ಕೃಷ್ಣರ ಬಗ್ಗೆ ಎಷ್ಟೇ ದಟ್ಟ ಚಿತ್ರಣಗಳಿದ್ದರೂ ಅವೆಲ್ಲ ಯಾವುದೋ ತತ್ತ್ವವೊಂದನ್ನು ಹೇಳುವುದಕ್ಕೆ ಸೃಷ್ಟಿಸಿರುವ ಪಾತ್ರಗಳೆಂದೇ ಶಾಲಾ ಕಲಿಕೆಗಳು ಮನದಟ್ಟಾಗಿಸಿರುತ್ತವೆ.

Ramayana in Brazil: PM Modi lauds India's cultural influence
ಖಾಲಿಸ್ಥಾನಿಗಳಿಗೇಕೆ ಕೆನಡಾದ ಆಶ್ರಯ? ಇವರ ಹಿಂದು ದ್ವೇಷಕ್ಕಿರುವ ಪ್ರಚೋದನೆಯಾದರೂ ಏನು? (ತೆರೆದ ಕಿಟಕಿ)

ಹಾಗಾದರೆ ಏಸು ಕ್ರಿಸ್ತ ಇದ್ದಿದ್ದರ ಬಗ್ಗೆ ಶಾಸನಗಳು ಇವೆಯಾ, ಉತ್ಖನನಗಳಿಂದ ದೃಢಪಟ್ಟಿದೆಯಾ ಎಂದರೆ, ಅಂಥ “ಐತಿಹಾಸಿಕತೆ” ಏನೂ ಸಿಗುವುದಿಲ್ಲ. ಕ್ರಿಸ್ತನ ಅಸ್ತಿತ್ವ ಪ್ರಮುಖವಾಗಿ ಸಿದ್ಧವಾದದ್ದು ಬೈಬಲ್ ಮತ್ತದು ಪ್ರತಿಪಾದಿಸುವ ಗಾಸ್ಪೆಲ್ (ನಿರಾಕರಿಸಲಾಗದ ಸತ್ಯ) ಪರಿಕಲ್ಪನೆಗಳ ಆಧಾರದಲ್ಲಿ. ಹಾಗೆಂದು ಕ್ರಿಸ್ತನನ್ನು ನಿರಾಕರಿಸಲಾಗುವುದಿಲ್ಲ. ಏಕೆಂದರೆ, 2,000 ವರ್ಷಗಳವರೆಗೆ ಮನುಕುಲದ ಸ್ಮೃತಿಯಲ್ಲಿ ಕ್ರಿಸ್ತನ ಕಥಾನಕ ಮುಂದುವರಿದುಕೊಂಡುಬಂದಿದೆ.

ತನ್ನನ್ನು ತರ್ಕಶುದ್ಧ, ವೈಜ್ಞಾನಿಕ ಎಂದು ಕರೆದುಕೊಳ್ಳುವ ಪಾಶ್ಚಾತ್ಯ ಜಗತ್ತು ವಿವರಿಸಲಾಗದ ಸಂಗತಿಗಳು- ಉದಾಹರಣೆಗೆ ಸತ್ತ ಕೆಲವು ದಿನಗಳ ನಂತರ ಜೀಸಸ್ ತನ್ನ ಅನುಯಾಯಿಗಳಿಗೆ ಕಾಣಿಸಿಕೊಂಡಿದ್ದು - ಇದ್ದೇ ಇವೆ. ಹಾಗೆಂದು ಕ್ರೈಸ್ತ ಚರಿತ್ರೆಯನ್ನು ಪಾಶ್ಚಾತ್ಯ ಜಗತ್ತೇನೂ ನಿರಾಕರಿಸುವುದಿಲ್ಲ. ಆದರೆ, 24,000 ಶ್ಲೋಕಗಳ ಮೂಲಕ ಸಹಸ್ರಾರು ವರ್ಷಗಳಿಂದ ನಿರಂತರ ಹರಿದುಬಂದಿರುವ ರಾಮಾಯಣದಂಥ ಕಾವ್ಯಗಳ ವಿಚಾರದಲ್ಲಿ ಮಾತ್ರ ಐತಿಹಾಸಿಕತೆ-ವೈಜ್ಞಾನಿಕತೆಗಳ ಪ್ರಶ್ನೆ ಎದ್ದುಬಿಡುತ್ತದೆ. ಮೂಲ ವಾಲ್ಮೀಕಿ ರಾಮಾಯಣವೊಂದನ್ನು ಬಿಟ್ಟು, ಉಳಿದವರು ತಮ್ಮ ತಮ್ಮ ಸಿದ್ಧಾಂತಕ್ಕೆ ಬೇಕಾದಂತೆ ಬರೆದ ಕತೆಗಳನ್ನೆಲ್ಲ ಮುಂದೆಮಾಡಿ, ನಮ್ಮಲ್ಲಿ ಸಾವಿರ ರಾಮಾಯಣಗಳಿವೆ-ಯಾವೂದೂ ಅಧಿಕೃತವಲ್ಲ, ಎಲ್ಲವೂ ಕಥೆಗಳು ಎಂಬ ಗೊಂದಲ ಹುಟ್ಟುಹಾಕಲಾಗುತ್ತದೆ. 

ಈ ಎಲ್ಲ ಹಿನ್ನೆಲೆಗಳಲ್ಲಿ, ಪಾಶ್ಚಾತ್ಯರ ಅನುಕೂಲಸಿಂಧು ಇತಿಹಾಸವ್ಯಾಖ್ಯೆಯಿಂದ ಹೊರಬಂದು, ರಾಮಾಯಣ-ಮಹಾಭಾರತಗಳನ್ನೂ ಇತಿಹಾಸವಾಗಿ ಗ್ರಹಿಸಿದಾಗ ನೋಟ ವಿಸ್ತಾರವಾಗುತ್ತದೆ. ಆ ವಿಸ್ತಾರ ನೋಟದಲ್ಲಿ ರಾಮಾಯಣವು ಇವತ್ತಿಗೆ ಲ್ಯಾಟಿನ್ ಅಮೆರಿಕ ಎಂದು ಕರೆಸಿಕೊಳ್ಳುವ ಭೂಭಾಗವನ್ನು ಯಾವತ್ತೋ ಮುಟ್ಟಿದ್ದರ ಬಗ್ಗೆ, ಅಲ್ಲದೇ ಭಾರತವಷ್ಟೇ ಅಲ್ಲದೇ ಅವತ್ತಿನ ಭೂಭಾಗಗಳೆಲ್ಲ ರಾಮಾಯಣದ ಪರಿಧಿಯಲ್ಲಿದ್ದಿದ್ದರ ಬಗ್ಗೆ ಸೋಜಿಗದ ಅಂಶಗಳು ತೆರೆದುಕೊಳ್ಳುತ್ತವೆ. 

ರಾಮಕಥೆ ಹೋಲುವ ಬೊಲಿವಿಯದ ರಾಜಕಥೆ

ದಕ್ಷಿಣ ಅಮೆರಿಕದ ಬೊಲಿವಿಯಾದ ಜಾನಪದದಲ್ಲಿ ರಾಮಾಯಣವನ್ನೇ ಹೋಲುವ ಕತೆ ಇದೆ. ಅದು ಅಲ್ಲಿನ ನಾಟಕ ಪ್ರಸ್ತುತಿಗಳಲ್ಲಿ ಬಹಳ ಬಳಕೆಯಾಗುವ ಕತೆ. ಅಲ್ಲಿಯೂ ರಾಜಕುಮಾರಿಯೊಬ್ಬಳ ಅಪಹರಣ ಹಾಗೂ ಕಪಿ ಮತ್ತು ಕರಡಿಗಳ ಸೇನೆಯನ್ನುಪಯೋಗಿಸಿಕೊಂಡು ಆಕೆಯನ್ನು ರಕ್ಷಿಸುವ ಕಥಾನಕವಿದೆ. ಅಲ್ಲಿನ ಕೆಚುಹಾ ಭಾಷೆ 1,000 ಸಂಸ್ಕೃತ ಮೂಲಧಾತು ಹೊಂದಿದೆ ಎಂಬುದನ್ನು ಅಲ್ಲಿನ ವಿದ್ವಾಂಸರೊಬ್ಬರು ಇನ್ಫಿನಿಟಿ ಫೌಂಡೇಶನ್ನಿನ ರಾಜೀವ ಮಲ್ಹೋತ್ರ ಅವರೊಂದಿಗಿನ ಸಂವಾದದಲ್ಲಿ ದೃಢಪಡಿಸಿದ್ದಾರೆ.

ಬೊಲಿವಿಯದ ಭಾಷೆ ಅಂತಲ್ಲ, ಒಟ್ಟಾರೆ ದಕ್ಷಿಣ ಅಮೆರಿಕದ ಭಾಷೆಗಳೆಲ್ಲವೂ ಲ್ಯಾಟಿನ್ ಮೂಲವನ್ನು ಹೊಂದಿವೆ. ಹಾಗೆಂದೇ ಆ ಇಡೀ ಖಂಡಕ್ಕೆ ಲ್ಯಾಟಿನ್ ಅಮೆರಿಕ ಎಂದು ಹೆಸರು. ರೋಮ್ ಸಾಮ್ರಾಜ್ಯದ ಈ ಲ್ಯಾಟಿನ್ ಭಾಷೆಯೇ ಇವತ್ತಿನ ಹಲವು ಯುರೋಪಿಯನ್ ಭಾಷೆಗಳಿಗೆ ಮೂಲ. ಇಂಥ ಲ್ಯಾಟಿನ್ ಹಾಗೂ ಸಂಸ್ಕೃತದ ನಡುವೆ ಇರುವ ಸಾಮ್ಯತೆಗಳು ಬಹಳ ದಟ್ಟ ಎಂದು ವಿವರಿಸುವ ಹಲವು ಅಧ್ಯಯನಗಳು ಅದಾಗಲೇ ಆಗಿವೆ. ಶಬ್ದದ ವ್ಯುತ್ಪತ್ತಿ, ವ್ಯಾಕರಣದ ಬಿಗಿ ಚೌಕಟ್ಟು ಇವೆಲ್ಲ ಈ ಎರಡೂ ಭಾಷೆಗಳ ಮೂಲಗುಣ. ಜನಪ್ರಿಯವಾಗಿ ಸಾಮ್ಯತೆ ವಿವರಿಸುವುದಾದರೆ- ಸಂಸ್ಕೃತದ ಪಿತೃ ಲ್ಯಾಟಿನ್ ನಲ್ಲಿ ಪಟೆರ್, ಮಾತೃ ಎಂಬುದು ಮಟೆರ್ ಹೀಗೆ. 

ಪೆರುವಿನ ತ್ರಿಶೂಲದ ಆಕಾರ

ರಾಮಾಯಣ ಮತ್ತು ಮಹಾಭಾರತಗಳ ಕಾಲನಿರ್ಣಯವನ್ನು ಆಧುನಿಕ ತರ್ಕಗಳನ್ನು ಉಪಯೋಗಿಸಿಕೊಂಡು ಲೆಕ್ಕಹಾಕುವ ಪ್ರಯತ್ನಗಳು ನಡೆದಿವೆ. ಆ ಪೈಕಿ, ಇವತ್ತಿನ ಅಂತರ್ಜಾಲ ಲೋಕದಲ್ಲಿ ಬಹುಪ್ರಸರಣ ಮತ್ತು ಪ್ರಸ್ತುತಿ ಹೊಂದಿರುವ ಒಬ್ಬರೆಂದರೆ ನಿಲೇಶ್ ಓಕ್. ಇವರು ಪ್ರಸ್ತಾಪಿಸಿರುವ ರಾಮಾಯಣ ಕಾಲ ನಿಗದಿಯನ್ನು ವಿದ್ವಾಂಸರು ಒಪ್ಪಿದ್ದಾರೆ ಎಂದೇನಿಲ್ಲ. ನಿತ್ಯಾನಂದ ಮಿಶ್ರ ಅವರಂಥ ಸಂಸ್ಕೃತ ಪರಿಣತರು ಓಕ್ ಅವರ ಮಹಾಭಾರತ ಮತ್ತು ರಾಮಾಯಣದ ಕಾಲನಿರ್ಣಯ ವಾದಗಳು ಹಲವು ಆಯಾಮಗಳಲ್ಲಿ ದೋಷಪೂರಿತ ಎಂದು ವಾದಿಸುತ್ತಾರೆ. 

ಈ ಕಾಲನಿರ್ಣಯದ ವಾದಗಳೇನೇ ಇದ್ದರೂ, ವಾಲ್ಮೀಕಿ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ನಿಲೇಶ್ ಓಕ್ ಪ್ರಸ್ತುತಪಡಿಸಿರುವ ‘ಸುಗ್ರೀವಾಸ್ ಅಟ್ಲಾಸ್’ ಎಂಬ ಉಪನ್ಯಾಸದ ಭಾಗಗಳಂತೂ ತರ್ಕ-ರಂಜನೆಗಳೆರಡಕ್ಕೂ ಚೆನ್ನಾಗಿ ಒದಗುತ್ತವೆ. 

ಸುಗ್ರೀವನು ವಾನರರ ಗುಂಪನ್ನು ಸೀತಾನ್ವೇಷಣೆಗೆಂದು ನಾಲ್ಕೂ ದಿಕ್ಕುಗಳಿಗೆ ಕಳುಹಿಸುತ್ತಾನಷ್ಟೆ. ಹಾಗೆ ಕಳುಹಿಸುವಾಗ ಪ್ರತಿ ದಿಕ್ಕಿನಲ್ಲೂ ಏನೆಲ್ಲ ಸಿಗುತ್ತವೆ, ಅಲ್ಲಿನ ಭೂರಚನೆ ಏನು, ನದಿ-ಪರ್ವತಗಳ್ಯಾವವು ಎಂಬುದನ್ನೆಲ್ಲ ದೀರ್ಘವಾಗಿಯೇ ವಿವರಿಸುತ್ತಾನೆ. ಸಹಸ್ರಾರು ವರ್ಷಗಳಿಂದ ಭೂರಚನೆ ಹಾಗೂ ಸಮುದ್ರಮಟ್ಟಗಳು ಬಹಳ ವ್ಯತ್ಯಾಸಕ್ಕೆ ಒಳಪಟ್ಟಿರುತ್ತಾವಾದರೂ, ಇವತ್ತಿಗೂ ಆ ವಿವರಣೆಯ ಹಲವು ಸಂಗತಿಗಳನ್ನು ಇವತ್ತಿನ ಜಾಗತಿಕ ಭೂಗೋಳದಲ್ಲಿ ಗುರುತಿಸಬಹುದಾಗಿದೆ. ಸುಗ್ರೀವನು ಪ್ರತಿ ದಿಕ್ಕನ್ನೂ ವ್ಯಾಖ್ಯಾನಿಸುವುದು ಮಧ್ಯಭಾರತವನ್ನು ಬಿಂದುವಾಗಿಟ್ಟುಕೊಂಡು. ನೀವು ಸಪಾಟಾದ ನಕ್ಷೆ ಇರಿಸಿಕೊಂಡರೆ ದಕ್ಷಿಣ ಅಮೆರಿಕವು ಪಶ್ಚಿಮ ಎನಿಸಬಹುದಾದರೂ, ದುಂಡಾಕಾರದ ಗ್ಲೋಬ್ ನಲ್ಲಿ ಅದು ಪೂರ್ವಮುಖಿ. ವಿಶೇಷವಾಗಿ, ಉದಯಗಿರಿಯ ವಿವರಣೆ ಬರುವ ಪೆರುವಂತೂ ಭಾರತದಿಂದ ಪೂರ್ವಕ್ಕೆ ಹೋಗುತ್ತಿದ್ದರೆ ಅಭಿಮುಖವಾಗುವಂಥದ್ದು. ಇಲ್ಲೊಂದು ವಿಶೇಷ ನಿರ್ಮಿತಿ ಇದೆ.

Ramayana in Brazil: PM Modi lauds India's cultural influence
ದೀಪಾವಳಿ ಬೆಳಕಲ್ಲಿ ಹೊಳೆಯುತ್ತಿವೆ ಭರತಭೂಮಿಯ ತರಹೇವಾರಿ ವಿಜಯಗಾಥೆಗಳು! (ತೆರೆದ ಕಿಟಕಿ)

ನುಣುಪಾದ ಪರ್ವತದ ಮೇಲ್ಮೈನಲ್ಲಿ ತ್ರಿಶೂಲವನ್ನು ಹೋಲುವ, ಅದರೊಂದಿಗೆ ದೀಪಗಳನ್ನೂ ಇರಿಸಿದಂತೆ ಕಂಡುಬರುವ ಬೃಹತ್ ಚಿಹ್ನೆಯೊಂದು ಸುಮಾರು 12 ಕಿಲೊಮೀಟರ್ ದೂರದಿಂದಲೇ ದೃಗ್ಗೋಚರವಾಗುವಂತಿದೆ. ಅದನ್ನು ಪರಾಕಸ್ ಕ್ಯಾಂಡಲಿಬ್ರ ಅರ್ಥಾತ್ ದೀಪ ಸಲಾಕೆ ಎಂದು ಅಲ್ಲಿನವರು ಕರೆಯುತ್ತಾರೆ. ಇದು ಇತಿಹಾಸ ಪೂರ್ವದಿಂದ ಇರುವ ರಚನೆ. ಅರ್ಥಾತ್ ಇದನ್ನು ಅಲ್ಲಿ ಯಾರು ನಿರ್ಮಿಸಿದ್ದಾರೆಂಬ ಬಗ್ಗೆ ಚರಿತ್ರೆಯಲ್ಲಿ ನಮೂದಾಗಿಲ್ಲ, ಹೋಗಲಿ ಬಾಯಿಂದ ಬಾಯಿಗೂ ಅದನ್ನು ನಿರ್ಮಿಸಿದವರ್ಯಾರೆಂಬ ಮಾಹಿತಿ ಹರಿದುಬಂದಿಲ್ಲ. 

ವಾಲ್ಮೀಕಿ ರಾಮಾಯಣದಲ್ಲಿ ಸುಗ್ರೀವನು ಕೊಡುವ ಪೂರ್ವದಿಕ್ಕಿನ ತುತ್ತತುದಿಯ ವರ್ಣನೆ ಈ ಪರಿಸರದೊಂದಿಗೆ ಚೆನ್ನಾಗಿ ಮೇಳೈಸುತ್ತದೆ.

ತ್ರಿಶಿರಾಃ ಕಾಂಚನಃಕೇತುಸ್ತಾಲಸ್ತಸ್ಯ ಮಹಾತ್ಮನಃ |

ಸ್ಥಾಪಿತಃ ಪರ್ವತಸ್ಯಾಗ್ರೇ ವಿರಾಜತಿ ಸವೇದಿಕಃ ||

ಪೂರ್ವಸ್ಯಾಂ ದಿಶಿ ನಿರ್ಮಾಣಂ ಕೃತಂ ತತ್ ತ್ರಿದಶೇಶ್ವರೈಃ |

ತತಃ ಪರಂ ಹೇಮಮಯಃ ಶ್ರೀಮಾನುದಯಪರ್ವತಃ ||

ತ್ರಿಶಿರಾ ಎಂದರೆ ಮೂರು ತಲೆಗಳ, ಕಾಂಚನಃ ಎಂದರೆ ಬಂಗಾರವರ್ಣ, ಸ್ಥಾಪಿತಃ ಪರ್ವತಸ್ಯಾಗ್ರೆ ಎಂಬಲ್ಲಿ ಪರ್ವತದ ಅಗ್ರಭಾಗದಲ್ಲಿ ಸ್ಥಾಪಿಸಲಾಗಿದೆ ಎಂಬ ವಿವರಗಳು ಸಾಮಾನ್ಯ ಅರ್ಥದಲ್ಲೂ, ಸಂಸ್ಕೃತದ ಗಾಢ ತಿಳಿವಿಲ್ಲದಿದ್ದರೂ ಹೊಳೆದುಬಿಡುತ್ತವೆ. ಈ ಮೇಲಿನ ಎರಡೂ ಶ್ಲೋಕಗಳಿಗೆ ವಿದ್ವಾನ್ ರಂಗನಾಥಶರ್ಮರ ಅರ್ಥವನ್ನೇ ಉಲ್ಲೇಖಿಸುವುದಾದರೆ- “ಆ ಮಹಾತ್ಮನಿಗೆ ಕನಕಮಯವಾದ ತಾಳವೃಕ್ಷವೇ ಧ್ವಜವಾಗಿರುತ್ತದೆ. ಮೂರು ಶಿಖರಗಳುಳ್ಳ ಆಧ್ವಜವು ವೇದಿಕೆಯೊಡನೆ ಆ ಪರ್ವತಾಗ್ರದಲ್ಲಿ ಸ್ಥಾಪಿತವಾಗಿದೆ. ದೇವತೆಗಳಿಗೆ ಪ್ರಭುಗಳಾದ ತ್ರಿಮೂರ್ತಿಗಳು ಅದನ್ನು ಪೂರ್ವದಿಕ್ಕಿನ ಎಲ್ಲೆಯೆಂದು ನಿರ್ಮಿಸಿದ್ದಾರೆ. ಅಲ್ಲಿಂದ ಮುಂದೆ ಹೇಮಮಯವಾದ ಉದಯಶೈಲವು ಗೋಚರಿಸುತ್ತದೆ.”

ಸರಿ.. ಮೊದಲ ಶ್ಲೋಕದ ಅರ್ಥವು ಆ ಮಹಾತ್ಮನಿಗೆ ಎಂದು ಶುರುವಾಗುತ್ತದಲ್ಲ…ಸುಗ್ರೀವ ಹೇಳುತ್ತಿರುವ ಆ ಮಹಾತ್ಮ ಯಾರು ಎಂಬುದಕ್ಕೆ ಇವೆರಡಕ್ಕೂ ಮೊದಲಿನ ಶ್ಲೋಕ ಗಮನಿಸಬೇಕು. 

ಆಸೀನಾಂ ಪರ್ವತಸ್ಯಾಗ್ರೇ ಸರ್ವಭೂತನಮಸ್ಕೃತಾಮ್ |

ಸಹಸ್ರಶಿರಸಂದೇವಮನಂತಂ ನೀಲವಾಸಸಮ್ ||

ಸರ್ವಭೂತಗಳಿಂದ ನಮಸ್ಕಾರಕ್ಕೊಳಗಾಗುತ್ತಿರುವ ಪರ್ವತಾಗ್ರದಲ್ಲಿ ಸಹಸ್ರ ತಲೆಗಳನ್ನು ಹೊಂದಿ ನೆಲೆಸಿರುವ ಅನಂತದೇವನೇ ಆ ಮಹಾತ್ಮ ಎಂದಾಯಿತು…ಇಲ್ಲಿರುವ ಸ್ವಾರಸ್ಯ ಗಮನಿಸಿ. ಪರಾಕಸ್ ಕ್ಯಾಂಡಲಿಬ್ರ ಎಂಬ ತ್ರಿಶೂಲಚಿಹ್ನೆಯ ಹಿಂದೆ ಇರುವ ಆ್ಯಂಡೀಸ್ ಪರ್ವತದ ಒಂದು ಶ್ರೇಣಿಗೆ ಇವತ್ತಿಗೂ ‘ಅನಂತಾ’ ಎಂದೇ ಹೆಸರು. 5,300 ಮೀಟರ್ ಎತ್ತರದ ಈ ಶ್ರೇಣಿ ಹಲವು ಪರ್ವತ ಶಿಖರಗಳ ಸಮುಚ್ಛಯ. ಅವು ಸಾವಿರ ತಲೆಗಳನ್ನು ಎತ್ತಿದ ಉಪಮೆಗೆ ಸರಿ ಹೊಂದುತ್ತವೆ. 

ರಾಮಮಯ ಜಗತ್ತಿನ ಹಲವು ಹೊಳಹುಗಳು

ಕಿಷ್ಕಿಂದಾಕಾಂಡದಲ್ಲಿ ಸುಗ್ರೀವನ ನಾಲ್ಕು ದಿಕ್ಕುಗಳ ವಿವರಣೆ ಓದಿಕೊಳ್ಳುತ್ತ, ಇವತ್ತಿನ ಭೂಗೋಳವನ್ನು ನೋಡಿದರೆ ಹಲವು ಅಚ್ಚರಿಯ ಹೊಳಹುಗಳು ಸಿಗುತ್ತವೆ. ಅವುಗಳಲ್ಲಿ ಹೆಚ್ಚಿನವನ್ನು ನಿಲೇಶ್ ಓಕ್ ವಿವರಿಸಿದ್ದಾರೆ. ಹಾಗಲ್ಲದೇ ನಾವೂ ಸಹ ಹಲವು ತರ್ಕಗಳನ್ನು ಇಲ್ಲಿಂದ ದಕ್ಕಿಸಿಕೊಳ್ಳಬಹುದು. ಭೂರಚನೆ, ಸಮುದ್ರಮಟ್ಟ, ಹಿಮಖಂಡಗಳಲ್ಲಿ ಆಗಿರುವ ಹಲವು ಬದಲಾವಣೆಗಳಿಂದ ಕೆಲವೊಂದಿಷ್ಟು ಕೊಂಡಿಗಳು ಸಹಜವಾಗಿಯೇ ನಮಗೆ ಸಿಗುವುದಿಲ್ಲ. ಅವತ್ತಿನ ಎಷ್ಟೋ ಪ್ರಾಣಿಗಳು ಮತ್ತು ಸಸ್ಯ-ಭೂವಿಶೇಷಗಳೆಲ್ಲ ನಶಿಸಿರುವುದರಿಂದ ಕೆಲವು ಕಡೆ ಹೋಲಿಕೆ-ದೃಷ್ಟಾಂತಗಳು ನಮಗೆ ಫ್ಯಾಂಟಸಿ ಎನ್ನಿಸಬಹುದು. ಅದರ ಹೊರತಾಗಿಯೂ ಸುಗ್ರೀವನ ದಿಕ್ಕುಗಳ ವರ್ಣನೆ ಹೊಸ ವ್ಯಾಪ್ತಿಯನ್ನು ಕೊಡುತ್ತದೆ. ನಮಗೆ ಹೊಂದಿಕೊಂಡಿರುವ ಇಂಡೊನೇಷ್ಯ, ತೈಲ್ಯಾಂಡ್ ಗಳಲ್ಲೆಲ್ಲ ರಾಮಕತೆ ಬೇರೆ ಬೇರೆ ರೀತಿ ಪ್ರಸ್ತುತಿಯಲ್ಲಿರುವುದು ನಮಗೆ ಅದಾಗಲೇ ಗೊತ್ತಿದೆ. ಆದರೆ, ದಿಕ್ಕುಗಳ ತುದಿಯ ಹಿಮಪ್ರದೇಶಗಳಲ್ಲಿ ಬೆಳಕು ಪ್ರವೇಶಿಸುವುದಿಲ್ಲ, ಅಲ್ಲೇನಿದೆ ನಮಗೆ ಗೊತ್ತಿಲ್ಲ ಎಂಬರ್ಥದ ಸುಗ್ರೀವನ ಮಾತುಗಳು ಅಚ್ಚರಿಗೆ ದೂಡದೇ ಇರವು.

ಹೀಗಿರುವಾಗ, ಪ್ರಧಾನಿ ಮೋದಿಯವರ ಎದುರು ಬ್ರಾಜಿಲ್ ದೇಶದವರು ವೇದಮಂತ್ರ ಹೇಳಿದ್ದು, ಸಂಸ್ಕೃತದಲ್ಲಿ ರಾಮಾಯಣ ಆಡಿ ತೋರಿಸಿದ್ದು ಸಂಸ್ಕೃತಿ ಪುನರುತ್ಥಾನದ ಪ್ರಾರಂಭದಂತೆ ಕಂಡರೆ ತಪ್ಪೇನಿಲ್ಲ ಅಲ್ಲವೇ?

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com