
ರಾಜ್ಯ ಬಿಜೆಪಿ ಇವತ್ತು ಅಯೋಮಯ ಸ್ಥಿತಿಯಲ್ಲಿದೆ. ಒಂದು ಕಾಲದ ಸರ್ವೋಚ್ಛ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೇ ಬಂಡೇಳುವ ಪರಿಸ್ಥಿತಿ ಉದ್ಭವವಾಗಿ ಹಲವು ವರ್ಷಗಳೇ ಉರುಳಿವೆ. ಇದು ಗೊತ್ತಿದ್ದರೂ ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ ಕಟ್ಟಿ ಹೈಕಮಾಂಡ್ ಮುಗ್ಗರಿಸಿತು. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಅವಕಾಶವಿದ್ದರೂ ವಿಜಯೇಂದ್ರ ಪ್ರಾರಂಭದಿಂದಲೇ ದಾರಿ ತಪ್ಪಿದರು.
ಕರ್ನಾಟಕದಲ್ಲಿ ಪಕ್ಷ ಕಟ್ಟಿ ಬೆಳೆಸುವುದರಲ್ಲಿ ಮುಂಚೂಣಿ ಪಾತ್ರ ವಹಿಸಿದ ಯಡಿಯೂರಪ್ಪ ಅವರ ವರ್ಚಸ್ಸೇ ಬೇರೆ, ಅವರ ನಾಮಬಲದಲ್ಲಿ ಅವರ ಪುತ್ರನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿದರೆ ಆಗುವ ಅನಾಹುತವೇ ಬೇರೆ ಎಂದು ಲೆಕ್ಕ ಹಾಕುವುದರಲ್ಲಿ ಬಿಜೆಪಿ ಹೈಕಮಾಂಡ್ ಎಡವಿದ್ದೇ ರಾಜ್ಯ ಬಿಜೆಪಿಯ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣ.
ರಾಜ್ಯದಲ್ಲಿ ಪ್ರತಿಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡುವಲ್ಲಿಯೇ ಬಿಜೆಪಿಯ ವೈಫಲ್ಯ ಎದ್ದು ಕಾಣುತ್ತಿದೆ. ಪಕ್ಷದಲ್ಲಿಯೂ ಆಂತರಿಕ ಸಮರ ಬಿರುಸಾಗಿದೆ. ಪ್ರತಿಪಕ್ಷವಾಗಿ ಎರಡು ವರ್ಷ ಉರುಳಿದರೂ ಇನ್ನೂ ಟೇಕಾಫ್ ಆಗಿಲ್ಲ. ಮುಡಾ ಹಗರಣ, ಬೆಂಗಳೂರಿನ ಕಾಲ್ತುಳಿತ ಪ್ರಕರಣ ಹೀಗೆ ರಾಜ್ಯ ಸರಕಾರದ ಯಾವುದೇ ವೈಫಲ್ಯ, ಅಕ್ರಮಗಳ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಅಂತಹ ಸಮರ್ಥ ನಾಯಕತ್ವವೇ ರಾಜ್ಯ ಬಿಜೆಪಿಯಲ್ಲಿಲ್ಲ. ಕೂಗುಮಾರಿಗಳು ತಮ್ಮ ವಿವಾದಾತ್ಮಕ ಹೇಳಿಕೆಗಳನ್ನೇ ಹೋರಾಟ ಎಂದುಕೊಂಡಿರುವ ದುಸ್ಥಿತಿ.
ಯಡಿಯೂರಪ್ಪ ತಮ್ಮ ನಂತರ ಪುತ್ರ ವಿಜಯೇಂದ್ರ ಅವರಿಗೆ ಪಟ್ಟಾಭಿಷೇಕ ಮಾಡಲು ಹೊರಟಿದ್ದೇ ಬಿಜೆಪಿಯ ಇವತ್ತಿನ ಸಮಸ್ಯೆಗೆ ಮೂಲ. ಯಡಿಯೂರಪ್ಪ ಅವರ ಈ ನಡೆಯಿಂದ ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಅನೇಕ ಹಿರಿಯ ನಾಯಕರು ಯಡಿಯೂರಪ್ಪ ಅವರಿಂದ ಅಂತರ ಕಾಪಾಡಿಕೊಂಡರು. ಯಡಿಯೂರಪ್ಪ ಅವರನ್ನು ಅಪ್ಪಾಜಿ ಅಂತ ಹಿಂಬಾಲಿಸುತ್ತಿದ್ದವರ ಜೊತೆ ವಿಜಯೇಂದ್ರ ಸಾಗಿದರು. ಇದು ಹಿರಿಯರನ್ನು ಕೆರಳಿಸಿತು. ವಿಜಯೇಂದ್ರ ಅಧ್ಯಕ್ಷರಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಬಹುತೇಕ ಹಿರಿಯ ನಾಯಕರಿಲ್ಲ. ವಿಜಯೇಂದ್ರ ಅವರದೂ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವೈಫಲ್ಯ. ವಿಜಯೇಂದ್ರ ಪಕ್ಷದಲ್ಲಿ ತಮ್ಮ ಬೆಂಬಲಿಗರ ಪಡೆಗೆ ಸೀಮಿತರಾಗುತ್ತಿದ್ದಾರೆ ಎಂಬ ಅಸಮಾಧಾನ.
ಬಿಜೆಪಿಯ ಬಹುತೇಕ ಸಂಸದರು ವಿಜಯೇಂದ್ರ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ. ವಿಜಯೇಂದ್ರ ಬದಲಾವಣೆಗೆ ಬಹಿರಂಗವಾಗಿ ಬಂಡಾಯವೆದ್ದಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಆಗ ವಿಜಯೇಂದ್ರ ಪರ ಹೈಕಮಾಂಡ್ ಇದೆ ಎಂಬ ಸಂದೇಶ ರವಾನೆಯಾಗಿದ್ದು ನಿಜ. ಆದರೆ, ಈಗ ಅಂತಹ ಪರಿಸ್ಥಿತಿ ಕಾಣುತ್ತಿಲ್ಲ. ವಿಜಯೇಂದ್ರ ಬದಲಾವಣೆಗೆ ಪಕ್ಷದಲ್ಲಿ ಪಟ್ಟು ಬಿಗಿಯಾಗುತ್ತಿದೆ. ಸಂಘಟನೆ ಬಿಗಿ ಕಳೆದುಕೊಳ್ಳುತ್ತಿದೆ.
ಇಲ್ಲಿ ಯಡಿಯೂರಪ್ಪ ನಾಯಕತ್ವದ ಪ್ರಶ್ನೆಯನ್ನು ಅವರ ವಿರೋಧಿಗಳು ಮುಂದಿಟ್ಟಿಲ್ಲ. ಯಡಿಯೂರಪ್ಪ ನಂತರ ಅವರ ಪುತ್ರ ವಿಜಯೇಂದ್ರ ಅವರಿಗೆ ನಾಯಕತ್ವ ಬಳುವಳಿಯಾಗಿ ಪರಭಾರೆಯಾಗುವ ಪ್ರಶ್ನೆಯನ್ನು ಎತ್ತಿದ್ದಾರೆ. ಯಡಿಯೂರಪ್ಪ ಅವರ ಪರಂಪರೆಯನ್ನು ಇಟ್ಟುಕೊಂಡು ವಿಜಯೇಂದ್ರ ಅದೇ ದಾರಿಯಲ್ಲಿ ವೇಗವಾಗಿ ಸಾಗಬೇಕೆಂದು ಅವರ ಹಿಂಬಾಲಕರು ಲೆಕ್ಕಹಾಕಿದ್ದರೆ ಅದು ಕೇಡರ್ ಆಧರಿತ ಪಕ್ಷ ಬಿಜೆಪಿಯಲ್ಲಿ ಕಷ್ಟ.
ರಾಜ್ಯದಲ್ಲಿ ಬಿಜೆಪಿ ಮೂರು ಬಾರಿ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಏರಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರಬಲ ನೆಲೆ ಇರುವ ರಾಜ್ಯವೇ ಕರ್ನಾಟಕ. ಇಷ್ಟಾದರೂ ಆ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟು ರಾಜ್ಯವ್ಯಾಪಿ ವರ್ಚಸ್ಸಿರುವ ಮತ್ತೊಬ್ಬ ಸ್ವೀಕಾರಾರ್ಹ ಪ್ರಬಲ ನಾಯಕರಿಲ್ಲ. ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷ ಕಟ್ಟಲು ಹಗಲಿರುಳು ಶ್ರಮಿಸಿದವರು. ಅವರಿಗೆ ಸಾಥ್ ಕೊಟ್ಟವರು ಕೇಂದ್ರದಲ್ಲಿ ಸಚಿವರಾಗಿದ್ದ ಅನಂತಕುಮಾರ್. ಇದಕ್ಕೂ ಮುನ್ನ ಆಗಿನ ಶಾಸಕ ಹಾಸನ ಜಿಲ್ಲೆಯ ಬಿ.ಬಿ.ಶಿವಪ್ಪ ಅವರ ಕೊಡುಗೆ ಕೂಡ ದೊಡ್ಡದಿದೆ. ಆದರೆ, ಈಗ ಯಡಿಯೂರಪ್ಪ, ಅನಂತಕುಮಾರ್ ಅವರ ರೀತಿ ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸುವಂತಹ ನಾಯಕರು ಕಂಡು ಬರುತ್ತಿಲ್ಲ. ಅವಕಾಶ ದೊರೆತಾಗಲೂ ರಾಜ್ಯವ್ಯಾಪಿ ಪ್ರಭಾವ ಬೀರುವ ಗಟ್ಟಿ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲರನ್ನೂ ನಿಯಂತ್ರಿಸಬಲ್ಲ ನಾಯಕರಾಗಿ ಹೊರಹೊಮ್ಮಿಲ್ಲ. ಹೀಗಾಗಿಯೇ ರಾಜ್ಯ ಬಿಜೆಪಿಯ ಆಗುಹೋಗುಗಳಲ್ಲಿ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿ ನಿರ್ಣಯ ಕೈಗೊಳ್ಳುವುದು ಹೈಕಮಾಂಡ್ ಗೆ ಕಷ್ಟ. ಏಕೆಂದರೆ, ಮಾಸ್ ಲೀಡರ್ ಯಡಿಯೂರಪ್ಪ ತಿರುಗಿ ಬಿದ್ದರೆ ಪಕ್ಷಕ್ಕೆ ಹಿನ್ನಡೆ. ಯಡಿಯೂರಪ್ಪ ಅವರಿಗೂ ರಾಜಕೀಯ ಸಂಕಷ್ಟ.
ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಇದ್ದಾಗ ಸ್ಟ್ರಾಂಗ್. ಅವರು ಬಿಜೆಪಿಯಿಂದ ಹೊರ ಹೋದರೆ ಬಿಜೆಪಿಗೆ ಧಕ್ಕೆ. ಅವರೂ ರಾಜಕೀಯವಾಗಿ ದುರ್ಬಲರು. ರಾಜ್ಯದಲ್ಲಿ 2013ರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಇದು ಸ್ಪಷ್ಟ. ಯಡಿಯೂರಪ್ಪ ತಮ್ಮನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸಿದ ನಂತರ ಪಕ್ಷ ತೊರೆದು ಕರ್ನಾಟಕ ಜನತಾಪಕ್ಷ ಕಟ್ಟಿದ್ದರು. ವಿಧಾನಸಭೆಗೆ 2013ರಲ್ಲಿ ನಡೆದ ಚುನಾವಣೆಯನ್ನು ಎದುರಿಸಿದಾಗ ಅವರ ಕೆಜೆಪಿ ಪಕ್ಷಕ್ಕೆ ಒಲಿದಿದ್ದು ಕೇವಲ ಆರು ಸೀಟುಗಳು. ಆದರೆ, 29 ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಬ್ರೇಕ್ ಹಾಕಿದ್ದರು. 36 ಕ್ಷೇತ್ರಗಳಲ್ಲಿ ಕೆಜಿಪಿ ಎರಡನೇ ಸ್ಥಾನದಲ್ಲಿತ್ತು. 35 ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಪಡೆದಿತ್ತು. ಆ ಚುನಾವಣೆಯಲ್ಲಿ ಚಲಾವಣೆಗೊಂಡ ಮತಗಳಲ್ಲಿ 30.68 ಲಕ್ಷ ಮತಗಳನ್ನು ಸೆಳೆದಿತ್ತು. ಕೆಜೆಪಿ ಪಡೆದ ಶೇಕಡಾವಾರು ಮತಗಳ ಸಂಖ್ಯೆ 9.8. ಆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು ಶೇ.19.9 ಮತಗಳು (40 ಸ್ಥಾನಗಳು). ಜೆಡಿಎಸ್ ಶೇ. 20.2. (40 ಸ್ಥಾನಗಳು) ಕಾಂಗ್ರೆಸ್ 122 ಸೀಟುಗಳನ್ನು ಗಳಿಸಿ ಶೇ.36.6 ಮತಗಳನ್ನು ಪಡೆದು ಅಧಿಕಾರಕ್ಕೆ ಏರಿದ್ದು ಇತಿಹಾಸ.
ಆ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು ಹೀಗಿತ್ತು- ನಾನಿಲ್ಲದ ಬಿಜೆಪಿ ಹೇಗಿರುತ್ತೆ ಅಂತ ಆ ಪಕ್ಷಕ್ಕೆ ತೋರಿಸಿಕೊಡಬೇಕಿತ್ತು. ತೋರಿಸಿದ್ದೇನೆ.
ಕರ್ನಾಟಕದಲ್ಲಿ ಬಿಜೆಪಿಗೆ ಸಾಂಪ್ರದಾಯಿಕ ಮತದಾರರಿದ್ದಾರೆ. ಆ ಪಕ್ಷದ ಮತಗಳ ಸಂಖ್ಯೆ ಜನತಾ ಪರಿವಾರ ದುರ್ಬಲವಾದ ನಂತರ ಏರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವದಿಂದಲೂ ಬಿಜೆಪಿ ಮತಗಳ ಸಂಖ್ಯೆ ಅಧಿಕವಾಗಿದೆ. ಆದರೂ, ಆ ಪಕ್ಷ ರಾಜ್ಯದ ಇತಿಹಾಸದಲ್ಲೇ ವಿಧಾನಸಭೆಯಲ್ಲಿ 113 ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಆಗಿಲ್ಲ. ಅದು ಪಡೆದಿರುವ ಗರಿಷ್ಠ ಸೀಟುಗಳ ಸಂಖ್ಯೆ 110. ಅದು 2008ರಲ್ಲಿ.
ಈ ಎಲ್ಲ ಲೆಕ್ಕಾಚಾರಗಳನ್ನು ಹಾಕಿಯೇ ಬಿಜೆಪಿ ಹೈಕಮಾಂಡ್ ಈಗ ತೀರ್ಮಾನಿಸಬೇಕಿದೆ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಕೇ ಇಲ್ಲವೇ ಹೊಸಬರ ನೇಮಕವೇ? ಹೊಸಬರನ್ನು ನೇಮಿಸಬೇಕಿದ್ದರೂ ಬಿಹಾರ ಚುನಾವಣೆ ನಂತರವೇ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಅನಂತರವೇ? ಶಾಂತಿ ಕಾಲದಲ್ಲಿ ಅಧ್ಯಕ್ಷರನ್ನಾಗಿ ಒಬ್ಬರನ್ನು ನೇಮಿಸಿ ಅಸೆಂಬ್ಲಿ ಚುನಾವಣೆ ಹೊತ್ತಿಗೆ ಮತ್ತೊಬ್ಬರನ್ನು ನೇಮಿಸಿದರೆ ಹೇಗೆ? ಈ ಎಲ್ಲ ಪ್ರಶ್ನೆಗಳು ಈಗ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದೆ.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement