
ಇಂದು ನಾವು ಆಧುನಿಕ ಕೃಷಿ ಮತ್ತು ಜಾಗತಿಕ ಆಹಾರ ಮಾರುಕಟ್ಟೆಗಳ ಕಡೆಗೆ ಹೊರಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅನೇಕ ಸಾಂಪ್ರದಾಯಿಕ ಮತ್ತು ಕಾಡು ಹಣ್ಣುಗಳು ನಿಶ್ಯಬ್ದವಾಗಿ ಕಣ್ಮರೆಯಾಗಿವೆ. ಈ ಮರೆತುಹೋದ ಹಣ್ಣುಗಳು ಒಂದು ಕಾಲದಲ್ಲಿ ಸ್ಥಳೀಯ ಆಹಾರ, ಸಂಸ್ಕೃತಿ ಮತ್ತು ಪರಿಸ್ಥಿತಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದವು. ಇವು ಇಂದು ವಾಣಿಜ್ಯಿಕವಾಗಿ ಜನಪ್ರಿಯವಾದ ಹಣ್ಣುಗಳ ಭರಾಟೆಯಲ್ಲಿ ಮರೆಯಾಗಿವೆ.
ಸಾಮಾನ್ಯವಾಗಿ ಆಂಟಿ ಆಕ್ಸಿಡೆಂಟುಗಳು, ನಾರು ಮತ್ತು ಆರೋಗ್ಯಕ್ಕೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳು ಪರಿಸರಕ್ಕೆ ಸ್ವಾಭಾವಿಕವಾಗಿ ಹೊಂದಿಕೊಂಡಿವೆ, ಇವುಗಳ ಬೆಳೆಯಲು ಕನಿಷ್ಠ ಸಂಪನ್ಮೂಲಗಳು ಸಾಕು. ಮನೆಗಳ ಹಿಂದಿನ ತೋಟಗಳಿಂದ ಹಿಡಿದು ಕಾಡಿನ ಅಂಚಿನ ಪ್ರದೇಶಗಳಲ್ಲಿ ಇವು ಸಮೃದ್ಧವಾಗಿ ಬೆಳೆಯುತ್ತವೆ. ಅಂತಹ ಕೆಲವು ಹಣ್ಣುಗಳ ಬಗ್ಗೆ ತಿಳಿಯೋಣ.
ಚಕ್ಕೋತ ದೊಡ್ಡಗಾತ್ರದ ಹುಳಿಹಣ್ಣುಗಳಲ್ಲಿ (ಸಿಟ್ರಸ್) ಹಣ್ಣುಗಳಲ್ಲಿ ಒಂದಾಗಿದೆ, ಮತ್ತು ಪೋಷಕಾಂಶಗಳಿಂದ ತುಂಬಿದೆ. ವಿಟಮಿನ್ ಸಿಯ ಸಮೃದ್ಧಮೂಲವಾಗಿರುವ ಈ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದರಲ್ಲಿ ನೀರಿನ ಪ್ರಮಾಣ ಹೆಚ್ಚು ಮತ್ತು ಕ್ಯಾಲೋರಿಗಳು ಕಡಿಮೆ ಇರುತ್ತವೆ. ಚಕ್ಕೋತದ ಸಿಪ್ಪೆ ಬಿಡಿಸಿ ಉಪ್ಪು ಮತ್ತು ಖಾರ ಹಾಕಿ ಸೇವಿಸಬಹುದು. ಇದನ್ನು ಜೇನುತುಪ್ಪ ಮತ್ತು ಶುಂಠಿಯೊಂದಿಗೆ ಬೆರೆಸಿ ವಿಟಮಿನ್-ಭರಿತ ಪಾನೀಯವಾಗಿ ಬಳಸಬಹುದು. ಸೌತೆಕಾಯಿ, ಕ್ಯಾರೆಟ್, ಕೋಸು ಮತ್ತಿತರ ತರಕಾರಿಗಳೊಂದಿಗೆ ಇದನ್ನು ಸಲಾಡುಗಳಲ್ಲಿ ಉಪಯೋಗಿಸಬಹುದು. ಚಕ್ಕೋತ ಜ್ಯೂಸ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಕೇವಲ ಅರ್ಧ ಚಕ್ಕೋತ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರಕುತ್ತದೆ. ವಿಟಮಿನ್ ಸಿ ರಕ್ತ ಪರಿಚಲನೆಗಾಗಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಕರೋಂಡ ಒಂದು ಸಣ್ಣ, ಹುಳಿ ಹಣ್ಣು ಮತ್ತು ತೀಕ್ಷ್ಣವಾದ ರುಚಿ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಕಬ್ಬಿಣ ಮತ್ತು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿದೆ, ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಮಧುಮೇಹಕ್ಕೆ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಇದರ ಬಳಕೆ ಕಡಿಮೆಯಾಗಿದೆ. ಇದು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿದೆ.
ಕರೋಂಡವನ್ನು ಉಪ್ಪು ಅಥವಾ ಮೆಣಸಿನ ಪುಡಿಯೊಂದಿಗೆ ತಾಜಾವಾಗಿ ತಿನ್ನಿರಿ. ಇದನ್ನು ಸಾಸಿವೆ ಮತ್ತು ಎಣ್ಣೆಯೊಂದಿಗೆ ಉಪ್ಪಿನಕಾಯಿ ಮಾಡಲು ಸಹ ಬಳಸಲಾಗುತ್ತದೆ. ಬೆಲ್ಲ, ಎಣ್ಣೆ, ಶುಂಠಿ ಮತ್ತು ಮಸಾಲೆಗಳನ್ನು ಬಳಸಿ ಇದರಿಂದ ಸಿಹಿ-ಮಸಾಲೆಯುಕ್ತ ಚಟ್ನಿಯನ್ನು ತಯಾರಿಸಬಹುದು. ಸಂಪೂರ್ಣವಾಗಿ ಹಣ್ಣಾದಾಗ ಇದರಿಂದ ಸಿಹಿ ಜಾಮ್ ಅಥವಾ ಜೆಲ್ಲಿಯನ್ನು ತಯಾರಿಸಬಹುದು.
ಇದು ಉಷ್ಣವಲಯದ ಹಣ್ಣಾಗಿದ್ದು ಕತ್ತರಿಸಿದಾಗ ವಿಶಿಷ್ಟವಾದ ನಕ್ಷತ್ರ ಆಕಾರವನ್ನು ಹೊಂದಿರುತ್ತದೆ ಮತ್ತು ಇದು ಸಿಹಿ ಮತ್ತು ಹುಳಿ ಎರಡೂ ವಿಧಗಳಲ್ಲಿ ಬರುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಆಹಾರದ ಫೈಬರ್ ಸಮೃದ್ಧವಾಗಿರುವುದರಿಂದ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಸ್ಟಾರ್ ಫ್ರೂಟನ್ನು ಚೆನ್ನಾಗಿ ಕತ್ತರಿಸಿ ಕಪ್ಪು ಉಪ್ಪಿನ ಜೊತೆಗೆ ಹಾಗೆಯೇ ತಿನ್ನಬಹುದು. ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಬೆಲ್ಲದೊಂದಿಗೆ ಚಟ್ನಿ ಮಾಡಲು ಬಳಸಬಹುದು. ಸಲಾಡುಗಳಲ್ಲಿ ಸಿಹಿ ಮತ್ತು ಹುಳಿ ರುಚಿಗಾಗಿ ಇದನ್ನು ಸೇರಿಸಿಕೊಳ್ಳಬಹುದು.
ಕೋಕಂ ಅಥವಾ ಆಡು ಭಾಷೆಯಲ್ಲಿ ಪುನರ್ಪುಳಿ ಎಂಬ ಹೆಸರಿನ ಈ ಹಣ್ಣು ಬೇಸಿಗೆಯಲ್ಲಿ ಬಹಳ ಪ್ರಸಿದ್ಧ. ಬಿರುಬಿಸಿಲಿನಿಂದ ದಣಿದಾಗ ಕೋಕಂ ಜ್ಯೂಸ್ ಮಾಡಿ ಸೇವಿಸಿದರೆ ಮನಸ್ಸಿಗೆ ಉಲ್ಲಾಸ ದೊರಕುತ್ತದ ಮತ್ತು ದೇಹಕ್ಕೂ ತಂಪು.
ಸಾಮಾನ್ಯವಾಗಿ ಕೋಕಂಮ ಸಿಪ್ಪೆಯನ್ನು ಒಣಗಿಸಿಟ್ಟು ಕೆಲವು ಅಡುಗೆಗಳಲ್ಲಿ ಹುಣಸೆಹಣ್ಣಿಗೆ ಪರ್ಯಾಯವಾಗಿ ಹುಳಿ ರುಚಿಗಾಗಿ ಬಳಸಲಾಗುತ್ತದೆ. ಕೋಕಂ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಆಹಾರದಲ್ಲಿ ಕೋಕಂ ಅನ್ನು ಸೇರಿಸಿ. ಕೋಕಮ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಭೇದಿ ಸಮಸ್ಯೆ ಇದ್ದರೂ ಕೋಕಂ ತಿಂದರೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಅತಿಸಾರ ವಿರೋಧಿ ಗುಣಲಕ್ಷಣಗಳು ಕೋಕಂನಲ್ಲಿ ಕಂಡುಬರುತ್ತವೆ.
ಕೋಕಂನಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಸಾಧ್ಯತೆಯನ್ನೂ ಕೂಡ ಕಡಿಮೆ ಮಾಡುತ್ತದೆ. ಪುನರ್ಪುಳಿ ಪೇಸ್ಟನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಒಡೆದ ಹಿಮ್ಮಡಿಗಳಿಗೆ ಹಚ್ಚಿದರೆ ಹಿಮ್ಮಡಿ ನೋವು ಗುಣವಾಗುತ್ತದೆ.
Advertisement