ಆಕ್ಸಿಯಮ್-4 ಬೆನ್ನೇರಿ: ಶುಭಾಂಶು ಶುಕ್ಲಾ ಐತಿಹಾಸಿಕ ಯಾನ (ಜಾಗತಿಕ ಜಗಲಿ)
ಭಾರತದ ಚೊಚ್ಚಲ ಐಎಸ್ಎಸ್ ಯೋಜನೆ
ಇಸ್ರೋದ ಜೊತೆಗೂಡಿ, ನಾಸಾ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ಆಕ್ಸಿಯಮ್-4 ಯೋಜನೆಯನ್ನು ಉಡಾವಣೆಗೊಳಿಸಲು ಸಜ್ಜಾಗುತ್ತಿದೆ. ಇದು ಆಕ್ಸಿಯಮ್ ಸ್ಪೇಸ್ ಸಂಸ್ಥೆಯ ನಾಲ್ಕನೇ ಖಾಸಗಿ ಗಗನಯಾನ ಯೋಜನೆಯಾಗಿದ್ದು, ಭಾರತೀಯ ಗಗನಯಾತ್ರಿಯನ್ನು ಒಳಗೊಂಡ ಮೊದಲ ಯೋಜನೆಯಾಗಿದೆ. ಆರಂಭದಲ್ಲಿ, ಈ ಯೋಜನೆ ಭಾರತೀಯ ಕಾಲಮಾನದಲ್ಲಿ ಜೂನ್ 10ರಂದು ಸಂಜೆ 5:55ಕ್ಕೆ ಉಡಾವಣೆಗೊಳ್ಳಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಯೋಜನೆಯ ಉಡಾವಣೆಯನ್ನು ಜೂನ್ 11ಕ್ಕೆ ಮುಂದೂಡಲಾಗಿದ್ದು, ಭಾರತೀಯ ಕಾಲಮಾನದಲ್ಲಿ ಸಂಜೆ 5:30ಕ್ಕೆ ಉಡಾವಣೆಗೊಳಿಸಲಾಗುತ್ತದೆ. ಇದು ಭಾರತದ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಐತಿಹಾಸಿಕ, ಹೆಮ್ಮೆಯ ಕ್ಷಣವಾಗಿದೆ.
ಯೋಜನೆಯ ಮುಖ್ಯ ವಿಚಾರಗಳು
ಆಕ್ಸಿಯಮ್-4 ಯೋಜನೆಯನ್ನು ಅಮೆರಿಕಾದ ಖಾಸಗಿ ಸಂಸ್ಥೆಯಾದ ಆಕ್ಸಿಯಮ್ ಸ್ಪೇಸ್ ನಿರ್ವಹಿಸುತ್ತಿದ್ದು, ಇದಕ್ಕೆ ನಾಸಾ ಮತ್ತು ಸ್ಪೇಸ್ಎಕ್ಸ್ ಸಂಸ್ಥೆಗಳ ಬೆಂಬಲವಿದೆ. ಆಕ್ಸಿಯಮ್-4 ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದ 39ಎ ಉಡಾವಣಾ ವೇದಿಕೆಯಿಂದ ಉಡಾವಣೆಗೊಳ್ಳಲಿದೆ.
ಸೋಮವಾರ, ಜೂನ್ 9ರಂದು, ಎಎಕ್ಸ್-4 ಸಿಬ್ಬಂದಿಗಳು ಮತ್ತು ಸ್ಪೇಸ್ಎಕ್ಸ್ ತಂಡಗಳು ಉಡಾವಣಾ ದಿನಕ್ಕೆ ಬೇಕಾದ ಎಲ್ಲ ಅಭ್ಯಾಸಗಳನ್ನೂ ಪೂರ್ಣಗೊಳಿಸಿದರು. ಉಡಾವಣೆಗೊಂಡ 28 ಗಂಟೆಗಳ ಬಳಿಕ, ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಡಾಕಿಂಗ್ ನಡೆಸುವ ನಿರೀಕ್ಷೆಗಳಿವೆ. ಈ ಯೋಜನೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದೇ ಮೊದಲ ಬಾರಿಗೆ ಹಂಗರಿ, ಮತ್ತು ಪೋಲೆಂಡ್‌ಗಳ ಗಗನಯಾತ್ರಿಗಳನ್ನು ಕರೆದೊಯ್ಯಲಿದೆ.
ಎಎಕ್ಸ್-4 ಯೋಜನೆ ಅಮೆರಿಕಾ, ಭಾರತ, ಪೋಲೆಂಡ್ ಮತ್ತು ಹಂಗರಿಗಳ ಗಗನಯಾತ್ರಿಗಳನ್ನು ಒಳಗೊಂಡಿದೆ.ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವ್ಹಿಟ್ಸನ್ ಯೋಜನಾ ಕಮಾಂಡರ್ ಆಗಿದ್ದಾರೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿರಲಿದ್ದಾರೆ.ಯೋಜನೆಯಲ್ಲಿ ಪೋಲೆಂಡಿನ ಸ್ಲಾವೋ ಉಜ್ನಾನ್ಸ್ಕಿ ವಿಸ್ನೀವ್ಸ್ಕಿ ಮತ್ತು ಹಂಗರಿಯ ಟಿಬರ್ ಕಾಪು ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಭಾಗವಾಗಿ ಪಾಲ್ಗೊಳ್ಳಲಿದ್ದಾರೆ. ಗಗನಯಾತ್ರಿಗಳು ಸ್ಪೇಸ್ ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಐಎಸ್ಎಸ್‌ಗೆ ತೆರಳಲಿದ್ದು, ಅಲ್ಲಿ ಅಂದಾಜು 14 ದಿನಗಳನ್ನು ಕಳೆಯಲಿದ್ದಾರೆ. ಈ ಅವಧಿಯಲ್ಲಿ ಅವರು ವಿವಿಧ ವೈಜ್ಞಾನಿಕ, ಶೈಕ್ಷಣಿಕ ಮತ್ತು ವಾಣಿಜ್ಯಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ.
ಈ ಯೋಜನೆಯ ಮುಖ್ಯ ಅಧ್ಯಯನ ಮಧುಮೇಹ ಪೀಡಿತ ವ್ಯಕ್ತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನೆರವಾಗುವುದಾಗಿದೆ. ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟಕರವಾಗಿರುವುದರಿಂದ, ಸದ್ಯದ ಮಟ್ಟಿಗೆ ಇನ್ಸುಲಿನ್ ಸೇವಿಸುವ ಮಧುಮೇಹಿಗಳನ್ನು ಗಗನಯಾತ್ರಿಗಳಾಗಿ ಆಯ್ಕೆ ಮಾಡಲಾಗುತ್ತಿಲ್ಲ. ಆದರೆ, ಈ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಯೋಜನೆ ಮಧುಮೇಹದ ಕುರಿತಾದ ವಿಶೇಷ ಅಧ್ಯಯನವನ್ನು ಒಳಗೊಂಡಿದ್ದು, ಇದು ಮಧುಮೇಹ ರೋಗಿಗಳನ್ನೂ ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಮಾಡುವಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಒಂದು ಪ್ರಯೋಗ ಸೈನೋಬ್ಯಾಕ್ಟೀರಿಯಾಗಳೆಂಬ, ಸಸ್ಯಗಳ ರೀತಿಯಲ್ಲಿ ಸೂರ್ಯನ ಬೆಳಕನ್ನು ಬಳಸಿಕೊಂಡು ಶಕ್ತಿ ಉತ್ಪಾದಿಸುವ ಒಂದು ವಿಧದ ಸಣ್ಣ ಬ್ಯಾಕ್ಟೀರಿಯಾಗಳ ಅಧ್ಯಯನವನ್ನೂ ಒಳಗೊಂಡಿದೆ. ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟಕರವಾಗಿರುವುದರಿಂದ, ಸದ್ಯದ ಮಟ್ಟಿಗೆ ಇನ್ಸುಲಿನ್ ಸೇವಿಸುವ ಮಧುಮೇಹಿಗಳನ್ನು ಗಗನಯಾತ್ರಿಗಳಾಗಿ ಆಯ್ಕೆ ಮಾಡಲಾಗುತ್ತಿಲ್ಲ. ಆದರೆ, ಈ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಯೋಜನೆ ಮಧುಮೇಹದ ಕುರಿತಾದ ವಿಶೇಷ ಅಧ್ಯಯನವನ್ನು ಒಳಗೊಂಡಿದ್ದು, ಇದು ಮಧುಮೇಹ ರೋಗಿಗಳನ್ನೂ ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಮಾಡುವಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಒಂದು ಪ್ರಯೋಗ ಸೈನೋಬ್ಯಾಕ್ಟೀರಿಯಾಗಳೆಂಬ, ಸಸ್ಯಗಳ ರೀತಿಯಲ್ಲಿ ಸೂರ್ಯನ ಬೆಳಕನ್ನು ಬಳಸಿಕೊಂಡು ಶಕ್ತಿ ಉತ್ಪಾದಿಸುವ ಒಂದು ವಿಧದ ಸಣ್ಣ ಬ್ಯಾಕ್ಟೀರಿಯಾಗಳ ಅಧ್ಯಯನವನ್ನೂ ಒಳಗೊಂಡಿದೆ.
ಸೈನೋಬ್ಯಾಕ್ಟೀರಿಯಾಗಳನ್ನು ಬ್ಲೂ-ಗ್ರೀನ್ ಆಲ್ಗೇ (ಪಾಚಿ) ಎಂದೂ ಕರೆಯಲಾಗಿದ್ದು, ಅವುಗಳು ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯ ಮೂಲಕ ಆಮ್ಲಜನಕವನ್ನು ಉತ್ಪಾದಿಸಬಲ್ಲವು.
ವಿಜ್ಞಾನಿಗಳು ಅವು ಎಷ್ಟು ವೇಗವಾಗಿ ಬೆಳೆಯಬಲ್ಲವು, ಮತ್ತು ಅವುಗಳ ಜೀವಕೋಶಗಳು ಬಾಹ್ಯಾಕಾಶದಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಪರಿಶೀಲಿಸಲಿದ್ದಾರೆ.
ಈ ಬ್ಯಾಕ್ಟೀರಿಯಾಗಳು ಗಗನಯಾತ್ರಿಗಳಿಗೆ ಅವಶ್ಯಕವಾದ ಆಮ್ಲಜನಕವನ್ನು ಉತ್ಪಾದಿಸಿ, ಭವಿಷ್ಯದಲ್ಲಿ ಜೀವ ಉಳಿಸುವಂತಹ ಸಜೀವ ವ್ಯವಸ್ಥೆಯೊಂದನ್ನು ನಿರ್ಮಿಸಲಿವೆ. ಇವುಗಳು ಚಂದ್ರ ಅಥವಾ ಇತರ ಗ್ರಹಗಳಲ್ಲಿನ ಸುದೀರ್ಘ ವಾಸಕ್ಕೆ ನೆರವಾಗಲಿವೆ. ಯಾಕೆಂದರೆ ಇಂತಹ ದೂರದ ಪ್ರದೇಶಗಳಿಗೆ ಭೂಮಿಯಿಂದ ಪೂರೈಕೆಗಳನ್ನು ಒದಗಿಸುವುದು ಕಷ್ಟಕರವಾಗಲಿದೆ.
ಆಕ್ಸಿಯಮ್-4 ಭಾರತಕ್ಕೆ ಏಕೆ ಮುಖ್ಯ?
ಇಸ್ರೋ ಮತ್ತು ನಾಸಾಗಳ ನಡುವೆ ನಡೆದ ಒಪ್ಪಂದದ ಪರಿಣಾಮವಾಗಿ, ಭಾರತವೂ ಸಹ ಆಕ್ಸಿಯಮ್-4 ಯೋಜನೆಯ ಭಾಗವಾಗಿದೆ.
ಇಸ್ರೋ ಅಧ್ಯಕ್ಷರಾದ ವಿ ನಾರಾಯಣನ್ ಅವರು ಈ ಯೋಜನೆ ಭಾರತದ ಸ್ವಂತ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ, ಮುಂದಿನ ಎರಡು ವರ್ಷಗಳಲ್ಲಿ ನಡೆಸಲು ಉದ್ದೇಶಿಸಿರುವ, ಗಗನಯಾನ ಯೋಜನೆಗೂ ನೆರವಾಗಬಲ್ಲ ಹಲವಾರು ಪ್ರಯೋಗಗಳನ್ನು ಒಳಗೊಂಡಿದೆ ಎಂದಿದ್ದಾರೆ.
ಇಸ್ರೋ ಈ ಯೋಜನೆಯಲ್ಲಿ ಅಂದಾಜು 10 ಪ್ರಯೋಗಗಳನ್ನು ನಡೆಸಲು ಉದ್ದೇಶಿಸಿದೆ. ಕೆಲವು ಅಧ್ಯಯನಗಳು ಸೂಕ್ಷ್ಮ ಗುರುತ್ವಾಕರ್ಷಣೆ ಸ್ನಾಯುಗಳ ಮೇಲೆ ಎಂತಹ ಪರಿಣಾಮ ಬೀರುತ್ತವೆ ಮತ್ತು ಕಂಪ್ಯೂಟರ್ ಪರದೆಗಳ ಅಪಾರವಾದ ವೀಕ್ಷಣೆ ದೇಹ ಮತ್ತು ಮನಸ್ಸಿನ ಮೇಲೆ ಬೀರುವ ಪರಿಣಾಮಗಳನ್ನೂ ಅಧ್ಯಯನ ನಡೆಸುತ್ತದೆ. ಇನ್ನೊಂದು ಪ್ರಯೋಗ ಬಾಹ್ಯಾಕಾಶದಲ್ಲಿ ಹೇಗೆ ಐದು ವಿಧವಾದ ಬೀಜಗಳು ಮೊಳಕೆಯೊಡೆಯುತ್ತವೆ ಎನ್ನುವುದನ್ನು ಗಮನಿಸಲಿದೆ.
ಇಸ್ರೋ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಟಾರ್ಡಿಗ್ರೇಡ್‌ಗಳನ್ನು ಕಳುಹಿಸುತ್ತಿದೆ. ಟಾರ್ಡಿಗ್ರೇಡ್‌ಗಳು ನೀರಿನಲ್ಲಿರುವ ಸೂಕ್ಷ್ಮಾಣುಗಳಾಗಿದ್ದು, ಇವುಗಳನ್ನು ನೀರಿನ ಕರಡಿಗಳು (ವಾಟರ್ ಬೇರ್ಸ್) ಅಥವಾ ಮೋಸ್ ಪಿಗ್ಲೆಟ್ಸ್ ಎಂದೂ ಕರೆಯಲಾಗುತ್ತದೆ. ಇವುಗಳು ಅತ್ಯಂತ ಕಠಿಣ ಜೀವಿಗಳಾಗಿದ್ದು, ಎಂತಹ ವಿಪರೀತ ಸನ್ನಿವೇಶಗಳಲ್ಲೂ ಬದುಕುಳಿಯುತ್ತವೆ. ವಿಜ್ಞಾನಿಗಳು ಅವುಗಳನ್ನು ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿ, ಜೀವಿಗಳು ಇತರ ಗ್ರಹಗಳಲ್ಲೂ ಹೇಗೆ ಬದುಕಬಲ್ಲವು ಎನ್ನುವುದನ್ನು ತಿಳಿಯಲಿದ್ದಾರೆ.
ಇಸ್ರೋ ಈ ಪ್ರಯೋಗಗಳನ್ನು ಗಗನಯಾನ ಯೋಜನೆಯಲ್ಲಿ ಕೈಗೊಳ್ಳುವ ಉದ್ದೇಶ ಹೊಂದಿತ್ತು. ಆಕ್ಸಿಯಮ್-4 ಯೋಜನೆ ಕ್ಷಿಪ್ರವಾಗಿ ಜಾರಿಗೆ ಬರುತ್ತಿರುವುದರಿಂದ, ಇಸ್ರೋ ಈ ಪ್ರಯೋಗಗಳನ್ನು ಬೇಗನೆ ನಡೆಸಿ, ಮುಂದಿನ ದಿನಗಳಲ್ಲಿ ತನ್ನ ಭವಿಷ್ಯದ ಯೋಜನೆಗಳಲ್ಲಿ ಹೆಚ್ಚು ಆಧುನಿಕವಾದ ಪ್ರಯೋಗಗಳನ್ನು ನಡೆಸಬಹುದು.
ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಹುತೇಕ 40 ವರ್ಷಗಳ ಬಳಿಕ, ಈಗ 39 ವರ್ಷ ವಯಸ್ಸಿನ ಭಾರತೀಯ ವಾಯುಪಡೆಯ ಅಧಿಕಾರಿಯಾದ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯ, ಐಎಸ್ಎಸ್‌ಗೆ ತೆರಳಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಅವರು ಈಗ ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಲ್ಲಿ ಕ್ವಾರಂಟೈನ್ ಅಂತಿಮ ಹಂತದಲ್ಲಿದ್ದಾರೆ.
ಶುಕ್ಲಾ ಅವರ ಬಾಹ್ಯಾಕಾಶ ಅನುಭವ ಭವಿಷ್ಯದಲ್ಲಿ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ತೆರಳುವ ಭಾರತೀಯ ಗಗನಯಾತ್ರಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ.
ಜೀರೋ-ಜಿ ಇಂಡಿಕೇಟರ್ ಎಂದರೇನು?
ರೋ-ಜಿ ಇಂಡಿಕೇಟರ್ ಎನ್ನುವುದು ಒಂದು ಸಣ್ಣ ಆಟಿಕೆಯಾಗಿದ್ದು, ಇದು ಬಾಹ್ಯಾಕಾಶ ನೌಕೆ ಸೂಕ್ಷ್ಮ ಗುರುತ್ವಾಕರ್ಷಣಾ ಹಂತವನ್ನು (ತೂಕಾರಾಹಿತ್ಯ ಸ್ಥಿತಿ) ತಲುಪುವುದನ್ನು ಸೂಚಿಸುತ್ತದೆ.
ಆಕ್ಸಿಯಮ್-4 ಯೋಜನೆಗಾಗಿ ಆಯ್ಕೆ ಮಾಡಿರುವ ಸೂಚಕ ಒಂದು ಹಂಸದಂತಹ (ಸಾಫ್ಟ್ ಟಾಯ್) ಆಟಿಕೆಯಾಗಿದ್ದು, ಇದನ್ನು 'ಜಾಯ್' ಎಂದು ಹೆಸರಿಡಲಾಗಿದೆ. ಹಂಸ ಭಾರತ, ಹಂಗರಿ ಮತ್ತು ಪೋಲೆಂಡಿನ ಸಂಸ್ಕೃತಿಗಳಲ್ಲಿ ಬುದ್ಧಿವಂತಿಕೆ, ಶಕ್ತಿ, ನಿಯತ್ತು ಮತ್ತು ಸೌಂದರ್ಯದ ಸಂಕೇತವಾಗಿದ್ದು, ಆದ್ದರಿಂದ ಇದನ್ನು ಯೋಜನೆಗಾಗಿ ಆರಿಸಲಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com