Congress-BJP ಮೊದಲು ತಮ್ಮ 'ಸಂವಿಧಾನ'ವನ್ನು ಪಾಲಿಸುವುವೇ?

ಪಕ್ಷಗಳು ದೇಶದ ಸಂವಿಧಾನಕ್ಕೆ ಎಷ್ಟರಮಟ್ಟಿಗೆ ಗೌರವ ನೀಡುತ್ತವೆ ಎನ್ನುವುದು, ಸ್ವತಃ ತಮ್ಮ ಪಕ್ಷದ ಸಂವಿಧಾನಕ್ಕೆ ಎಷ್ಟು ಬೆಲೆ ನೀಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
BJP leader, PM Narendra Modi and AICC leader, Opposition Leader Rahul Gandhi
ಸಂವಿಧಾನ ಪುಸ್ತಕದೊಂದಿಗೆ ಬಿಜೆಪಿ ನಾಯಕ ಪ್ರಧಾನಿ ಮೋದಿ- ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ
Updated on

ಇಂದು ಎಲ್ಲೆಡೆ ಸಂವಿಧಾನದ್ದೇ ಚರ್ಚೆ. ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ತಮ್ಮ ಕಾಲಿನ ಹತ್ತಿರ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇರಿಸಿ ಅವಮಾನಿಸಿದರು, ಇದು ಅಂಬೇಡ್ಕರ್‌ ಅವರಿಗೆ ಮಾತ್ರವಲ್ಲ, ಅವರು ರೂಪಿಸಿದ ಸಂವಿಧಾನಕ್ಕೂ ಮಾಡಿದ ಅವಮಾನ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಮುಖ್ಯವಾಗಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ವಾಕ್ಪ್ರಹಾರ ನಡೆಸುತ್ತಿವೆ.

ಸಂವಿಧಾನವನ್ನು ಯಾರು ಹೆಚ್ಚು ಗೌರವಿಸುತ್ತಾರೆ ಎಂಬ ಚರ್ಚೆ ಇಂದಿನ ರಾಜಕಾರಣದಲ್ಲಿ ಪ್ರಮುಖವಾದದ್ದು. 2018ರ ವಿಧಾನಸಭೆ ಚುನಾವಣೆಗೂ ಮುನ್ನ ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಅವರು ನೀಡಿದ ‘ಸಂವಿಧಾನ ಬದಲಾವಣೆ’ ಹೇಳಿಕೆ ಭಾರೀ ಸದ್ದುಮಾಡಿತ್ತು. 2015ರಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದನ್ನು ದೊಡ್ಡ ಸುದ್ದಿ ಮಾಡಲಾಯಿತು. ಈ ಹೇಳಿಕೆಯೊಂದರಿಂದಲೇ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋತಿತು ಎಂದು ತಥಾಕಥಿತ ‘ತಜ್ಞರು’ ಹಾಗೂ ಸ್ವತಃ ಬಿಜೆಪಿಯಲ್ಲಿರುವ ಕೆಲವರೂ (ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಇದು ಸಾಮಾನ್ಯ) ಹೇಳಿದರು. ಅನಂತಕುಮಾರ್‌ ಹೆಗಡೆ ಹೇಳಿಕೆಯು 2024ರ ಲೋಕಸಭೆ ಚುನಾವಣೆ ವೇಳೆಯಲ್ಲೂ ಕರ್ನಾಟಕದ ಗಡಿಯನ್ನು ಮೀರಿ ಬಳಕೆಯಾಯಿತು. ಈ ಹೇಳಿಕೆಯನ್ನು ಆಧಾರವಾಗಿಸಿಕೊಂಡು ಎಸ್‌ಸಿಎಸ್‌ಟಿ ಸಮುದಾಯಗಳ ಮತಗಳನ್ನು ತಮ್ಮ ಕಡೆಗೆ ಸೆಳೆಯಲು ಬಿಜೆಪಿಯೇತರ ಪಕ್ಷಗಳು ಯತ್ನಿಸಿದವು, ಅದರಲ್ಲಿ ಸಾಕಷ್ಟು ಸಫಲತೆಯನ್ನೂ ಕಂಡವು.

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಇತ್ತೀಚೆಗೆ ಸಂವಿಧಾನ ಬದಲಾವಣೆ ಮಾಡುವ ಕುರಿತು ಮಾತನಾಡಿದ್ದರು. ಬಿಜೆಪಿಯು ಈ ಕುರಿತು ಆಕ್ಷೇಪಿಸಿತು. "ದಲಿತರಿಗೆ ಮೀಸಲಿಟ್ಟ ಹಣವನ್ನು ಅಗಾಧ ಪ್ರಮಾಣದಲ್ಲಿ ತೆಗೆದ ಸಿಎಂ ಸಿದ್ದರಾಮಯ್ಯ ವಿರುದ್ಧ ‘ದಲಿತ ವಿರೋಧಿ’, ‘ಸಂವಿಧಾನ ವಿರೋಧಿ’ ಎಂಬ ಮಾತುಗಳನ್ನು ಬಿಜೆಪಿ ಹೇಳುತ್ತಿರುತ್ತದೆ. ಕಾಂಗ್ರೆಸ್‌ ಪಕ್ಷವು ಹೇಗೆ ಸಂವಿಧಾನ ವಿರೋಧಿಯಾಗಿದೆ" ಎಂಬ ಮಾತುಗಳು ಈಗೀಗ್ಗೆ ಹೆಚ್ಚೆಚ್ಚು ಕೇಳಿಬರುತ್ತಿವೆ.

ಈ ಲೇಖನದ ವಿಚಾರ, ಸಂವಿಧಾನದ ರಕ್ಷಣೆ ತಮ್ಮಿಂದಲೇ ಆಗುತ್ತದೆ ಎನ್ನುವ ಈ ಎರಡೂ ಪ್ರಮುಖ ಪಕ್ಷಗಳು (ಕಾಂಗ್ರೆಸ್‌-ಬಿಜೆಪಿ) ತಮ್ಮ ಸಂವಿಧಾನವನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎನ್ನುವುದು. ಹೌದು. ಪ್ರತಿ ಪಕ್ಷಕ್ಕೂ ತನ್ನದೇ ಆದ ಸಂವಿಧಾನ ಇರುತ್ತದೆ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ ಸಂವಿಧಾನ 135 ಪುಟಗಳಿವೆ. ಅದರ ಉದ್ದೇಶದಲ್ಲಿ ಹೀಗೆ ಹೇಳಲಾಗಿದೆ:

“ಭಾರತದ ಜನಗಳ ಒಳಿತು ಹಾಗೂ ಉನ್ನತಿಗೆ ಶ್ರಮಿಸುವುದು ಹಾಗೂ ಶಾಂತಿಯುತ ಮತ್ತು ಸಂವಿಧಾನಾತ್ಮಕ ಮಾರ್ಗಗಳ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಆಧಾರದಲ್ಲಿ ಸಮಾಜವಾದಿ ರಾಜ್ಯವನ್ನು ಸ್ಥಾಪಿಸುವುದು. ಆ ರಾಜ್ಯದಲ್ಲಿ ಅವಕಾಶಗಳು ಮತ್ತು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಲ್ಲಿ ಸಮಾನತೆ ಇರಬೇಕು ಹಾಗೂ ಮೂಲಕ ವಿಶ್ವಶಾಂತಿ ಹಾಗೂ ವಿಶ್ವಬಂಧುತ್ವ ಸಾಧಿಸುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉದ್ದೇಶ” ಎಂದು ಹೇಳಲಾಗಿದೆ.

ಅದೇ ರೀತಿ ಬಿಜೆಪಿ ಸಂವಿಧಾನವು 44 ಪುಟಗಳನ್ನು ಒಳಗೊಂಡಿದೆ. ಅದರ ಉದ್ದೇಶವನ್ನೂ ಹೇಳಲಾಗಿದೆ. ಮೂರು ಪ್ಯಾರಾಗಳಲ್ಲಿರುವ ಬಿಜೆಪಿ ಸಂವಿಧಾನದ ಉದ್ದೇಶವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು:

“ಪಕ್ಷವು ಭಾರತವನ್ನು ಬಲಶಾಲಿ ಮತ್ತು ಸಮೃದ್ಧ ರಾಷ್ಟ್ರವಾಗಿ ರಚಿಸುವುದಕ್ಕೆ ಬದ್ಧವಾಗಿದೆ. ಇದು ಆಧುನಿಕ, ಪ್ರಗತಿಶೀಲ ದೃಷ್ಟಿಕೋನವನ್ನು ಹೊಂದಿರುತ್ತದೆ ಮತ್ತು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಮೌಲ್ಯಗಳಿಂದ ಹೆಮ್ಮೆಯಿಂದ ಪ್ರೇರಣೆಯನ್ನು ಪಡೆಯುತ್ತದೆ.... ಕಾನೂನಿನಿಂದ ಸ್ಥಾಪನೆಯಾದ ಭಾರತದ ಸಂವಿಧಾನಕ್ಕೆ ಮತ್ತು ಸಮಾಜವಾದ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳ ಕುರಿತು ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ತೋರಿಸುತ್ತದೆ, ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ”.

ಕಾಂಗ್ರೆಸ್‌: ಕಾಂಗ್ರೆಸ್‌ ಪಕ್ಷವು ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ತನ್ನನ್ನು ಹೊಸತನಕ್ಕೆ ತೆರೆದುಕೊಳ್ಳುವ ಘೋಷಣೆಯೊಂದಿಗೆ ರಾಜಸ್ಥಾನದ ಉದಯಪುರದಲ್ಲಿ 2022ರ ಮೇ ತಿಂಗಳಲ್ಲಿ ‘ನವ ಸಂಕಲ್ಪ ಚಿಂತನ ಶಿಬಿರ’ವನ್ನು ಆಯೋಜಿಸಿತು. ಈ ಶಿಬಿರದ ಫಲಶೃತಿಯೆಂಬಂತೆ 17 ಪುಟಗಳ ‘ಉದಯಪುರ ಘೋಷಣೆ’ಯನ್ನು ಹೊರಡಿಸಲಾಯಿತು. ಅದರ 4ನೇ ಪುಟದಲ್ಲಿ ‘ಒಬ್ಬ ವ್ಯಕ್ತಿ-ಒಂದು ಹುದ್ದೆ’ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಯಿತು. ಆದರೆ ಕಾಂಗ್ರೆಸ್‌ ಪಕ್ಷವು ತನ್ನ ಕೇಂದ್ರೀಯ ಅಧ್ಯಕ್ಷರ ವಿಚಾರದಲ್ಲೇ ಇದನ್ನು ಉಲ್ಲಂಘಿಸಿತು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗಲೇ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲೇ ಹಾಗೆಂದಮೇಲೆ ರಾಜ್ಯಮಟ್ಟದಲ್ಲೂ ಅದನ್ನು ಪಾಲಿಸದಿದ್ದರೆ ಹೇಗೆ? ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಯಲ್ಲಿಯೂ ದ್ವಿಮುಖ ನೀತಿಯನ್ನು ಅನುಸರಿಸಿಕೊಂಡುಬಂದಿದೆ. 2023ರ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು, ಚುನಾವಣೆ ನಂತರ ಉಪಮುಖ್ಯಮಂತ್ರಿ ಆದರು. ಉದಯಪುರ ಘೋಷಣೆಗೆ ಅನುಗುಣವಾಗಿ ಅವರನ್ನು ಆಗಲೇ ಬದಲಿಸಬೇಕಿತ್ತು. ಆದರೆ ಇಂದಿನದಿನದವರೆಗೂ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

BJP leader, PM Narendra Modi and AICC leader, Opposition Leader Rahul Gandhi
ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ಮೇಲೆ 'ಲಜ್ಜೆಗೆಟ್ಟ ದಾಳಿ'ಯಾಗಿದೆ: ಸೋನಿಯಾ ಗಾಂಧಿ

ಬಿಜೆಪಿ: ಒಬ್ಬ ವ್ಯಕ್ತಿ ಏಕಕಾಲದಲ್ಲಿ ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಹುದ್ದೆಯಲ್ಲಿರಬಾರದು ಎಂದು ಬಿಜೆಪಿಯು ತನ್ನ ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಎಲ್ಲಿಯೂ ಹೇಳಿಲ್ಲ. ಆದರೆ ಸಂಪ್ರದಾಯವೆಂಬಂತೆ ಅನೇಕ ಸಂದರ್ಭಗಳಲ್ಲಿ ಈ ಸೂತ್ರವನ್ನು ಪಾಲನೆ ಮಾಡಿಕೊಂಡುಬಂದಿದೆ. ರಾಜಸ್ಥಾನ, ಉತ್ತರ ಪ್ರದೇಶ ಮುಂತಾದ ರಾಜ್ಯ ಘಟಕಗಳಲ್ಲಿ, ಕೇಂದ್ರದಲ್ಲೂ ಒಬ್ಬ ವ್ಯಕ್ತಿ ಸರ್ಕಾರದಲ್ಲಿ ಸಚಿವ, ಪ್ರಧಾನಿ... ಮುಂತಾದ ಹುದ್ದೆಗಳನ್ನು ಪಡೆದರೆ ಕೆಲವು ದಿನಗಳಲ್ಲೇ ಪಕ್ಷದ ಹುದ್ದೆಯನ್ನು ತ್ಯಜಿಸುವುದು ನಡೆದುಬಂದಿದೆ. ಈಗಿನ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರು ಅತ್ತ ಕಡೆ ಕೇಂದ್ರ ಸಚಿವರಾಗಿಯೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಈಗಾಗಲೆ ಹೇಳಿದಂತೆ, ಎರಡು ಹುದ್ದೆಗಳ ವಿಚಾರವನ್ನು ಬಿಜೆಪಿ ಸ್ಪಷ್ಟವಾಗಿ ಎಲ್ಲೂ ಹೇಳಿಲ್ಲದ ಕಾರಣಕ್ಕೆ ಇದರಲ್ಲಿ ವಿನಾಯಿತಿ ಇದೆ.

ಆದರೆ ಇನ್ನೊಂದು ವಿಚಾರವಿದೆ. ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರು ಆಯ್ಕೆಯಾಗಿದ್ದು 2020ರ ಜನವರಿಯಲ್ಲಿ. ಪಕ್ಷದ ಸಂವಿಧಾನದ 21ನೇ ಕಲಂ ಪ್ರಕಾರ, “ಅಧ್ಯಕ್ಷರ ಅವಧಿ: ಯಾವುದೇ ಅರ್ಹ ಸದಸ್ಯನು ಅಧ್ಯಕ್ಷ ಹುದ್ದೆಯನ್ನು, ತಲಾ 3 ವರ್ಷದಂತೆ ಎರಡು ಅವಧಿವರೆಗೆ ಹೊಂದಬಹುದು”. ಅಂದರೆ 2023ರ ಜನವರಿಗೇ ಮುಕ್ತಾಯವಾಗುತ್ತಿತ್ತು. ಈ ಸಮಯದಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಲೋಕಸಭೆ ಚುನಾವಣೆ ನಿಮಿತ್ತ 2024ರ ಜೂನ್‌ವರೆಗೆ ವಿಸ್ತರಣೆ ಮಾಡಲಾಯಿತು. ಆ ಅವಧಿಯೂ 2024ರ ಜೂನ್‌ನಲ್ಲೇ ಮುಗಿದಿದೆ. ಇದೀಗ 2025ರ ಜೂನ್‌ ಬಂದರೂ ಹೀಗೆಯೇ ಮುಂದುವರಿದಿದೆ. ಅಲ್ಲಿಗೆ, ಒಂದೇ ಅವಧಿಯಲ್ಲಿ, ಅತಿ ಹೆಚ್ಚು ವಿಸ್ತರಣೆಗಳನ್ನು ಪಡೆಯುತ್ತ ಹೆಚ್ಚು ಅವಧಿಗೆ (5 ವರ್ಷ) ಅಧ್ಯಕ್ಷರಾದವರು ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯ ಅಧ್ಯಕ್ಷರ ಆಯ್ಕೆಯಲ್ಲೂ ಅನಿಶ್ಚಿತತೆ ಮುಂದುವರಿದಿದೆ. 2023ರ ನವೆಂಬರ್‌ನಲ್ಲಿ ಆಗಿರುವ ತಾತ್ಕಾಲಿಕ ನೇಮಕ ಒಂದೂವರೆ ವರ್ಷ ಪೂರೈಸಿದೆ.

ಪಕ್ಷದ ಆಂತರಿಕ ವಿಚಾರವೇ?

ಇಷ್ಟೆಲ್ಲ ಹೇಳಿದ ನಂತರ ಒಂದು ಪ್ರಶ್ನೆ ಉದ್ಭವಿಸುತ್ತದೆ. ಇವೆಲ್ಲವೂ ಕಾಂಗ್ರೆಸ್‌ ಹಾಗೂ ಬಿಜೆಪಿಯ ಆಂತರಿಕ ವಿಚಾರಗಳು, ಅವನ್ನು ಹೇಗೆ ಪ್ರಶ್ನಿಸುವುದು? ಇದಕ್ಕೆ ಉತ್ತರವೆಂದರೆ, ಈ ವಿಚಾರದಲ್ಲಿ ಎರಡು ರೀತಿ ಇದೆ. ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಪಕ್ಷದ ಆಂತರಿಕ ವಿಚಾರ. ಆದರೆ ಯಾವಾಗ ಆಯ್ಕೆ ಮಾಡಬೇಕು ಎನ್ನುವುದು ಪಕ್ಷದ ಸಂವಿಧಾನ, ಬಹಿರಂಗ ಘೋಷಣೆಯ ಬದ್ಧತೆಯ ವಿಚಾರ. ಪಕ್ಷದಲ್ಲಿ ತಾವೇ ಅಪ್ಪಿಕೊಂಡಿರುವ ಸಂವಿಧಾನದಲ್ಲಿ ಘೋಷಿತ ವಿಚಾರಗಳನ್ನು ಅನುಸರಿಸಿ ಎನ್ನುವುದಷ್ಟೆ ಆಗ್ರಹ. ಹಾಗೊಂದು ವೇಳೆ ಕಾಂಗ್ರೆಸ್‌ನಲ್ಲಿ ಎರಡೂ ಹುದ್ದೆಗಳನ್ನು ಮುಂದುವರಿಸಬೇಕು ಎಂದರೆ ಯಾರ ಅಭ್ಯಂತರವೂ ಇಲ್ಲ. ಆದರೆ ಅವರು ಈಗಾಗಲೆ ಮಾಡಿಕೊಂಡಿರುವ ಉದಯಪುರ ಘೊಷಣೆಯಲ್ಲಿ ತಿದ್ದುಪಡಿ ಮಾಡಬೇಕು ಅಥವಾ ಹೊಸ ಘೋಷಣೆ ಮಾಡಬೇಕು ಅಷ್ಟೆ. ಹಾಗೆಯೇ ಬಿಜೆಪಿ. ಅಧ್ಯಕ್ಷರ ಅವಧಿ ಮೂರು ವರ್ಷ ಎಂದಿರುವುದನ್ನು 5 ವರ್ಷವೋ, 10 ವರ್ಷವೋ ಎಂದು ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡರೆ ಯಾರಿಗೂ ನಡ್ಡಾ ಅವರನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಆದರೆ ಲಿಖಿತದಲ್ಲಿ, ಹೇಳಿಕೆಯಲ್ಲಿ ಒಂದು, ನಡೆಯುವುದೊಂದು ಆಗಬಾರದು.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಪಕ್ಷಗಳು ದೇಶದ ಸಂವಿಧಾನಕ್ಕೆ ಎಷ್ಟರಮಟ್ಟಿಗೆ ಗೌರವ ನೀಡುತ್ತವೆ ಎನ್ನುವುದು, ಸ್ವತಃ ತಮ್ಮ ಪಕ್ಷದ ಸಂವಿಧಾನಕ್ಕೆ ಎಷ್ಟು ಬೆಲೆ ನೀಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ ಈಗ ದೇಶದ ಅನೇಕ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಸಾಕಷ್ಟು ಸಮಯದಿಂದ ಚುನಾವಣೆಯೇ ನಡೆದಿಲ್ಲ. ಬೆಂಗಳೂರಿನ ಆಡಳಿತ ನೋಡಿಕೊಳ್ಳುವ ಬಿಬಿಎಂಪಿ (ಈಗ ಜಿಬಿಎ) ಸೇರಿ ರಾಜ್ಯದ ಅನೇಕ ಮಹಾನಗರ ಪಾಲಿಕೆ, ನಗರ ಪಾಲಿಕೆ ಚುನಾವಣೆಗಳು ವರ್ಷಾನುಗಟ್ಟಲೆ ವಿಳಂಬವಾಗಿವೆ. ಏಕೆ ಹೀಗೆ? ಏಕೆಂದರೆ ಈ ಚುನಾವಣೆಗಳು ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿವೆ.

ಆ ಸರ್ಕಾರಗಳು ಈ ಪಕ್ಷಗಳ (ಕಾಂಗ್ರೆಸ್‌, ಬಿಜೆಪಿ) ಮೂಲದಿಂದಲೇ ಬಂದಂತಹವಾಗಿವೆ. ಇದಕ್ಕೆ ಹೋಲಿಕೆಯಾಗಿ ನೋಡಿದರೆ, ದೇಶದಲ್ಲಿ ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್‌, ವಿಧಾನಸಭೆ ಚುನಾವಣೆಗಳು ಎಂದಿಗೂ ವಿಳಂಬವಾಗಿಲ್ಲ. ಏಕೆಂದರೆ ಅದನ್ನು ಸರ್ಕಾರಗಳು ನಿರ್ಧಾರ ಮಾಡುವುದಿಲ್ಲ. ನಿಗದಿತ ಕಾಲಕ್ಕೆ ಚುನಾವಣೆ ನಡೆಸುವ ಹೊಣೆಗಾರಿಕೆಯನ್ನು ಕೇಂದ್ರ ಚುನಾವಣಾ ಆಯೋಗ ಹೊಂದಿದೆ. ಅಲ್ಲಿಗೆ, ಆಯಾ ಪಕ್ಷಗಳಲ್ಲಿ ಸಂವಿಧಾನವನ್ನು ಪಾಲನೆ ಮಾಡದೆ ಇರುವ ನಡವಳಿಕೆಯು ಸರ್ಕಾರದಲ್ಲೂ ಪ್ರತಿಬಿಂಬವಾಗುತ್ತದೆ ಎಂಮದಾಯಿತು. ಹಾಗಾಗಿ, ಪಕ್ಷಗಳು ತಮ್ಮ ಸಂವಿಧಾನಕ್ಕೆ, ಘೋಷಣೆಗೆ ಅನುಗುಣವಾಗಿ ನಡೆಯದೇ ಇರುವುದು ಪಕ್ಷದ ಆಂತರಿಕ ವಿಚಾರ ಅಲ್ಲವೇ ಅಲ್ಲ.

BJP leader, PM Narendra Modi and AICC leader, Opposition Leader Rahul Gandhi
ಸಂವಿಧಾನ ಬದಲು ಹೇಳಿಕೆ ಸಾಬೀತುಪಡಿಸಿದ್ರೆ ರಾಜಕೀಯದಿಂದ ನಿವೃತ್ತಿ: ಡಿ.ಕೆ ಶಿವಕುಮಾರ್ ಸವಾಲು

ದೇಶಕಂಡ ಪ್ರಮುಖ ರಾಜಕೀಯ ತಜ್ಞರಲ್ಲಿ ಒಬ್ಬರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯರು ಪಕ್ಷಗಳ ಕುರಿತು ಹೀಗೆ ಹೇಳುತ್ತಾರೆ: “ಜನತೆಯಲ್ಲಿ ಕಾನೂನಿನ ಬಗ್ಗೆ ಗೌರವ ಭಾವನೆಯನ್ನು ಹುಟ್ಟಿಸುವುದಕ್ಕೆ ಅಗತ್ಯವಾಗಿರುವುದೇನೆಂದರೆ ಕಾನೂನನ್ನು ಸಂರಕ್ಷಿಸುವ ಆಕಾಂಕ್ಷೆಯುಳ್ಳ ಪಕ್ಷಗಳು ಈ ದಿಕ್ಕಿನಲ್ಲಿ ಸ್ವತಃ ಮಾದರಿಯನ್ನು ಮುಂದಿರಿಸಲಿ. ಇದೇ ಸ್ವಯಮಾಡಳಿತದ ಭಾವನೆ ಹಾಗೂ ಸಾಮರ್ಥ್ಯ ಜನತಂತ್ರದ ಸಾರ. ಪಕ್ಷಗಳು ಸ್ವತಃ ತಮ್ಮನ್ನು ತಾವು ಅನುಶಾಸನಕ್ಕೆ ಒಳಪಡಿಸಲಾರದೆ ಹೋದರೆ ಅವು ಸಮಾಜದಲ್ಲಿ ಸ್ವಯಮಾಡಳಿತ ಇಚ್ಛೆಯನ್ನು ಮೂಡಿಸುವ ಆಸೆಯನ್ನು ಹೇಗೆ ತಾನೆ ಹೊಂದಿರಬಲ್ಲವು?” “ಯಾವುದೇ ಸಮಾಜ ಪ್ರಜಾತಂತ್ರಕ್ಕೆ ಎಷ್ಟು ನಿಷ್ಠವಾಗಿದೆ ಎಂಬುದನ್ನು ಅದರ ಪಕ್ಷಗಳ ಸ್ವಭಾವವನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ” ಎಂದಿದ್ದಾರೆ (ಪಂ. ದೀನದಯಾಳ್‌ ಉಪಾಧ್ಯಾಯ ಸಮಗ್ರ ಬರೆಹಗಳು. ಸಂ.1, ಪು.295. ಹಾಗೂ ಪು.29)

ಪಕ್ಷದಲ್ಲಿ ಆಂತಿಕ ಪ್ರಜಾಪ್ರಭುತ್ವವನ್ನು ಆಚರಿಸುವುದು, ತಮ್ಮದೇ ಸಂವಿಧಾನವನ್ನು ಅನುಸರಿಸುವುದು ಪಕ್ಷಗಳ ಆಂತರಿಕ ವಿಚಾರ ಅಲ್ಲ. ಅದು ಸಾರ್ವಜನಿಕವಾದದ್ದು. ತಮ್ಮ ಸಂವಿಧಾನಕ್ಕೆ ಅನುಗುಣವಾಗಿ ನಡೆಯದ ಪಕ್ಷಗಳನ್ನು ಸಾರ್ವಜನಿಕರು ಅನುಮಾನದ ಕಣ್ಣಿನಿಂದಲೇ ನೋಡಬೇಕಿದೆ.

ಎಲ್ಲ ಪಕ್ಷಗಳಿಗೂ ಸರ್ವಜನಿಕರು ಕೇಳಬೇಕಿರುವ ಮಾತು:

“ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ

ನಮ್ಮ ಕೂಡಲಸಂಗಮದೇವ”.

- ರಮೇಶ್ ದೊಡ್ಡಪುರ

journoramesha@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com