
ಕಳೆದ ವಾರ, ಇರಾನ್ ಒಂದು ವಿಶೇಷ ನಡೆಯಲ್ಲಿ ಇಸ್ರೇಲ್ ಜೊತೆಗಿನ ಚಕಮಕಿಯ ನಡುವೆಯೂ ಭಾರತಕ್ಕೆ ತನ್ನ ವಾಯು ಪ್ರದೇಶವನ್ನು ಬಳಸಿ, ಭಾರತೀಯ ನಾಗರಿಕರನ್ನು ಸ್ವದೇಶಕ್ಕೆ ಮರಳಲು ಅನುಮತಿಸಿತು. ಅದಾದ ಕೆಲವು ದಿನಗಳ ಬಳಿಕ, ಅಮೆರಿಕಾ ಇರಾನಿನ ಪ್ರಮುಖ ಪರಮಾಣು ನೆಲೆಗಳ ಮೇಲೆ ವಾಯು ದಾಳಿಗಳನ್ನು ನಡೆಸಿತು. ಆ ಬಳಿಕ, ಇರಾನ್ ಸಂಪರ್ಕಿಸಿದ ಆರಂಭಿಕ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಈ ಬೆಳವಣಿಗೆಗಳು ಭಾರತ ಮತ್ತು ಇರಾನ್‌ಗಳ ನಡುವಿನ ಸುದೀರ್ಘವಾದ ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿವೆ. ಆದರೆ, ಈ ಬೆಳವಣಿಗೆಗಳು ಭಾರತವನ್ನು ಇನ್ನೂ ಕಠಿಣ ಪರಿಸ್ಥಿತಿಯಲ್ಲಿ ಇಟ್ಟಿದ್ದು, ಭಾರತ ಈ ಸಂದರ್ಭದಲ್ಲಿ ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಡನೆ ಉತ್ತಮ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.
ಹಲವಾರು ವರ್ಷಗಳಿಂದಲೂ ಇರಾನ್ ಭಾರತಕ್ಕೊಂದು ನಂಬಿಕಾರ್ಹ ಸ್ನೇಹಿತನಾಗಿದ್ದು, ಉಭಯ ದೇಶಗಳೂ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕ ಹೊಂದಿವೆ. ಇನ್ನೊಂದೆಡೆ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಜೊತೆಗೆ ಭಾರತದ ಸಂಬಂಧ ಸಾಕಷ್ಟು ಉತ್ತಮಗೊಳ್ಳುತ್ತಿದ್ದು, 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಉಭಯ ದೇಶಗಳ ಸಂಬಂಧ ಸಾಕಷ್ಟು ಸುಧಾರಿಸಿದೆ.
ಜಾಗತಿಕ ಹಂತದಲ್ಲಿ ಇರಾನ್ ಈಗ ಬಹುತೇಕ ಏಕಾಂಗಿಯಾಗಿದ್ದು, ಇಂತಹ ಸಂದರ್ಭದಲ್ಲಿ ಭಾರತ ಯಾವುದೇ ದೇಶದ ಪರವಹಿಸದಿರಲು ನಿರ್ಧರಿಸಿದೆ. ಬದಲಿಗೆ, ಭಾರತ ತನ್ನ ನಂಬಿಕಾರ್ಹ ವಿಧಾನವಾದ 'ಮಾತುಕತೆ ಮತ್ತು ರಾಜತಾಂತ್ರಿಕತೆ'ಗೆ ಇನ್ನಷ್ಟು ಆದ್ಯತೆ ನೀಡುತ್ತಿದೆ.
ಇರಾನಿನಲ್ಲಿವೆ ಭಾರತದ ಹಿತಾಸಕ್ತಿ
ಇರಾನಿನ ಪರಮೋಚ್ಚ ನಾಯಕನಾದ ಅಯಾತೊಲ್ಲಾ ಖಮೇನಿ ಕಾಶ್ಮೀರ ವಿಚಾರ ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತವನ್ನು ಟೀಕಿಸಿದ್ದರೂ, ಭಾರತ ತನ್ನ ಸಮತೋಲನದ ವಿಧಾನವನ್ನು ಮುಂದುವರಿಸಿದೆ. ಇದೆಲ್ಲದರ ನಡುವೆ, ಭಾರತದ ಹಿತಾಸಕ್ತಿಗೆ ಹಾನಿ ಉಂಟುಮಾಡುವ ಯಾವುದೇ ನಿರ್ಧಾರಗಳನ್ನು ಇರಾನ್ ತೆಗೆದುಕೊಂಡಿಲ್ಲ.
ಇರಾನಿನಲ್ಲಿ ಭಾರತಕ್ಕೆ ಹೆಚ್ಚಿನ ಹಿತಾಸಕ್ತಿಗಳಿವೆ. ಅದರಲ್ಲೂ ಚಬಹಾರ್ ಬಂದರು ಭಾರತಕ್ಕೆ ಬಹಳ ಮುಖ್ಯವಾಗಿದೆ. ಇರಾನ್ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳೆರಡರ ಜೊತೆಗೂ ಗಡಿ ಹಂಚಿಕೊಳ್ಳುತ್ತಿದ್ದು, ಆ ಮೂಲಕ ಈ ಪ್ರದೇಶದಲ್ಲಿ ಒಂದು ಪ್ರಮುಖ ರಾಷ್ಟ್ರವಾಗಿದೆ. ಇರಾನಿನ ಮೇಲೆ ಅಮೆರಿಕಾದ ನಿರ್ಬಂಧಗಳ ಹೊರತಾಗಿಯೂ, ಭಾರತ ಮತ್ತು ಇರಾನ್‌ಗಳು ಸೌಹಾರ್ದ ಸ್ನೇಹವನ್ನು ಮುಂದುವರಿಸಿದ್ದವು. ಅಮೆರಿಕಾದ ನಿರ್ಬಂಧಗಳ ಕಾರಣದಿಂದ, ಭಾರತ ಇರಾನಿನಿಂದ ತೈಲ ಖರೀದಿಯನ್ನು ನಿಲ್ಲಿಸಿದರೂ, ಭಾರತ ತನ್ನ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ರಷ್ಯಾದಿಂದ ತೈಲ ಖರೀದಿಸತೊಡಗಿದೆ.
ಈಗಿನ ಪರಿಸ್ಥಿತಿಯಲ್ಲಿ, ಭಾರತ ಮತ್ತು ಇರಾನ್‌ಗಳ ನಡುವಿನ ಸಂಪರ್ಕ ಯೋಜನೆಗಳು ಉಭಯ ದೇಶಗಳ ಸಂಬಂಧಕ್ಕೆ ಬುನಾದಿಯಾಗಿವೆ. ಚಬಹಾರ್ ಬಂದರು ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವ ಭಾರತದ ಯೋಜನೆಗಳಲ್ಲಿ ಮತ್ತು ಮಧ್ಯ ಏಷ್ಯಾ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಪ್ರದೇಶದಲ್ಲಿ ಚೀನಾ ಹೆಚ್ಚು ಆಕ್ರಮಣಕಾರಿಯಾಗಿರುವುದರಿಂದ, ಭಾರತದ ಪ್ರಯತ್ನಗಳು ಮುಖ್ಯವಾಗಿವೆ.
ಚಬಹಾರ್ ಬಂದರು ಭಾರತಕ್ಕೆ ಪಾಕಿಸ್ತಾನದ ಮೂಲಕ ಸಾಗದೆಯೇ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾವನ್ನು ತಲುಪಲು ಅನುಕೂಲ ಕಲ್ಪಿಸುತ್ತದೆ. ಅದರೊಡನೆ, ಈ ಯೋಜನೆ ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್‌ಗೆ (ಬಿಆರ್‌ಐ) ಬಲವಾದ ಪ್ರತಿಕ್ರಿಯೆಯಾಗಿದೆ.
ಭಾರತ ಚಬಹಾರ್ ಬಂದರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇರಾನ್ ಜೊತೆಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಂದರು ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರಿನ (ಐಎನ್ಎಸ್‌ಟಿಸಿ) ಸಂಪರ್ಕ ಕೇಂದ್ರವಾಗಿರಲಿದೆ. ಈ ಮಾರ್ಗ ಭಾರತಕ್ಕೆ ಯುರೋಪಿಗೆ ವ್ಯಾಪಾರ ಸಂಪರ್ಕ ವೃದ್ಧಿಸಲು ನೆರವಾಗಲಿದೆ.
ಚಬಹಾರ್ ಬಂದರು ಹೊರ್ಮು ಜಲಸಂಧಿಯ ಬಳಿ ಇದ್ದು, ಈ ಜಲಸಂಧಿ ಜಗತ್ತಿನ 20% ತೈಲ ಸಾಗಾಣಿಕೆಯ ಮಾರ್ಗವಾಗಿದೆ. ಈ ಮಾರ್ಗ ಕಾರ್ಯತಂತ್ರ ಮತ್ತು ವ್ಯಾಪಾರ ಉದ್ದೇಶಗಳೆರಡಕ್ಕೂ ಪೂರಕವಾಗಿದೆ.
ವಿಶ್ವಸಂಸ್ಥೆ ಮತ್ತು ಅದರಾಚೆಗೆ ಬೆಂಬಲ
ಭಾರತ ಜಾಗತಿಕ ಹಂತದಲ್ಲಿ ಇರಾನ್‌ಗೆ ನೆರವಾಗಿದ್ದು, ಶಾಂಘಾಯ್ ಕೋ ಆಪರೇಷನ್ ಆರ್ಗನೈಸೇಶನ್ (ಎಸ್‌ಸಿಒ) ಮತ್ತು ಬ್ರಿಕ್ಸ್‌ನಂಹ ಪ್ರಮುಖ ಗುಂಪುಗಳಲ್ಲಿ ಇರಾನ್ ಸದಸ್ಯನಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾಂಸ್ಕೃತಿಕ ಬಾಂಧವ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, ಭಾರತ ಇರಾನಿನ ಭಾಷೆಯಾದ ಪಾರ್ಸಿಯನ್ನೂ (ಪರ್ಷಿಯನ್) ತನ್ನ ನೂತನ ಶಿಕ್ಷಣ ನೀತಿಯಲ್ಲಿನ ಒಂಬತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದನ್ನಾಗಿ ಸೇರಿಸಿದೆ.
ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಹಲವಾರು ಪ್ರಮುಖ ಸಂದರ್ಭಗಳಲ್ಲಿ ಭಾರತದ ಪರವಾಗಿ ನಿಂತಿದೆ. ಉದಾಹರಣೆಗೆ, 1994ರಲ್ಲಿ, ಇರಾನ್ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ (ಯುಎನ್‌ಸಿಎಚ್ಆರ್) ಕಾಶ್ಮೀರ ವಿಚಾರದ ಕುರಿತು ಭಾರತವನ್ನು ಟೀಕಿಸುವ ನಿರ್ಣಯವನ್ನು ತಡೆಹಿಡಿಯಲು ನೆರವಾಗಿತ್ತು.
1994ರಲ್ಲಿ, ಭಾರತದ ವಿರುದ್ಧ ಕೈಗೊಳ್ಳ ಹೊರಟ ನಿರ್ಣಯಕ್ಕೆ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್ (ಒಐಸಿ) ಬೆಂಬಲವಿದ್ದು, ಹಲವಾರು ಶಕ್ತಿಶಾಲಿ ಪಾಶ್ಚಾತ್ಯ ದೇಶಗಳೂ ಪಾತ್ರ ವಹಿಸಿದ್ದವು. ಒಂದು ವೇಳೆ ಈ ನಿರ್ಣಯ ಏನಾದರೂ ಅನುಮೋದನೆ ಪಡೆದುಕೊಂಡಿದ್ದರೆ, ಭಾರತದ ವಿರುದ್ಧ ಆರ್ಥಿಕ ನಿರ್ಬಂಧಗಳು ಜಾರಿಯಾಗುತ್ತಿದ್ದವು. ಭಾರತದ ವಿರುದ್ಧ ಇಂತಹ ನಿರ್ಣಯ ಜಾರಿಗೆ ಬರದಂತೆ ತಡೆಯುವಲ್ಲಿ ಇರಾನ್ ಪಾತ್ರ ನಿರ್ಣಾಯಕವಾಗಿತ್ತು.
ಹಲವಾರು ವರ್ಷಗಳ ಬಳಿಕ, ಭಾರತ ಇರಾನಿಗೆ ಈ ನೆರವನ್ನು ಮರಳಿಸಿತು. ಮಾನವ ಹಕ್ಕುಗಳ ದಮನದ ವಿಚಾರದಲ್ಲಿ ಇರಾನ್ ಅನ್ನು ಟೀಕಿಸುವ ವಿಶ್ವಸಂಸ್ಥೆಯ ನಿರ್ಣಯವನ್ನು ವಿರೋಧಿಸಿದ 30 ದೇಶಗಳ ಪೈಕಿ ಭಾರತವೂ ಒಂದಾಗಿತ್ತು.
ಅದರ ಹಿಂದಿನ ವರ್ಷದಲ್ಲಿ, ಇರಾನಿನಲ್ಲಿ ಮಾನವ ಹಕ್ಕುಗಳ ದಮನದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಕೈಗೊಂಡ ನಿರ್ಧಾರಕ್ಕೆ ಮತ ಹಾಕದಿರಲು ಭಾರತ ನಿರ್ಧರಿಸಿತ್ತು. ಪೊಲೀಸ್ ವಶದಲ್ಲಿದ್ದ 22 ವರ್ಷದ ಮಹ್ಸಾ ಅಮೀನಿ ಸಾವಿನ ಬಳಿಕ ನಡೆದ ಪ್ರತಿಭಟನೆಗಳನ್ನು ಮಟ್ಟ ಹಾಕುವಲ್ಲಿ ಈ ಮಾನವ ಹಕ್ಕು ದಮನಗಳು ನಡೆದಿದ್ದವು.
ಈ ಹಿಂದೆ, 2011ರಲ್ಲಿ, ವಾಷಿಂಗ್ಟನ್ ನಲ್ಲಿ ಸೌದಿ ಅರೇಬಿಯಾದ ರಾಯಭಾರಿಯನ್ನು ಹತ್ಯೆಗೈಯುವಲ್ಲಿ ಇರಾನಿನ ಪಾತ್ರವಿದೆ ಎಂದು ಅಮೆರಿಕಾ ಆರೋಪಿಸಿತ್ತು. ಇದನ್ನು ವಿರೋಧಿಸಿ ವಿಶ್ವಸಂಸ್ಥೆ ಇರಾನಿನ ವಿರುದ್ಧ ಕೈಗೊಳ್ಳಲು ನಿರ್ಧರಿಸಿದ ನಿರ್ಣಯದ ವೇಳೆಯೂ ಭಾರತ ತಟಸ್ಥವಾಗಿಯೇ ಉಳಿದಿತ್ತು.
ಶತಮಾನಗಳ ಹಳೆಯ ಸ್ನೇಹ
ಭಾರತದ ವಿದೇಶಾಂಗ ಸಚಿವಾಲಯ ಇತ್ತೀಚೆಗೆ ಇರಾನ್ ಕುರಿತು ಹೇಳಿಕೆ ನೀಡಿದ್ದು, ಇದು ಉಭಯ ದೇಶಗಳ ನಡುವಿನ ಆಳವಾದ ಸಂಬಂಧವನ್ನು ಪ್ರತಿನಿಧಿಸಿದೆ:
"ಭಾರತ ಮತ್ತು ಇರಾನ್‌ಗಳು ಸಾವಿರಾರು ವರ್ಷಗಳಿಂದಲೂ ಪರಸ್ಪರ ಉತ್ತಮ ಬಾಂಧವ್ಯ ಹೊಂದಿವೆ. ಇಂದಿನ ಸಂಬಂಧವೂ ಈ ಸುದೀರ್ಘ ಇತಿಹಾಸ ಮತ್ತು ಪರಸ್ಪರ ಹಂಚಿಕೆಯಾದ ಸಂಸ್ಕೃತಿಯನ್ನು ಆಧರಿಸಿದೆ. ನಿರಂತರವಾಗಿ ನಡೆಯುವ ಉನ್ನತ ಮಟ್ಟದ ಮಾತುಕತೆಗಳು, ವ್ಯಾಪಾರ, ಮತ್ತು ಸಾಗಾಣಿಕಾ ಯೋಜನೆಗಳು, ಸಾಂಸ್ಕೃತಿಕ ಸಂಪರ್ಕ, ಮತ್ತು ಉಭಯ ದೇಶಗಳ ಜನರ ನಡುವಿನ ಬಾಂಧವ್ಯಗಳು ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಿವೆ" ಎಂದು ಸಚಿವಾಲಯ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಸುನ್ನಿ ತೀವ್ರವಾದ ಮತ್ತು ಪಾಕಿಸ್ತಾನದ ಪ್ರಭಾವದ ಕುರಿತು ಭಾರತ ಮತ್ತು ಇರಾನ್‌ಗಳೆರಡೂ ಸಮಾನ ಕಾಳಜಿಯನ್ನು ವ್ಯಕ್ತಪಡಿಸಿವೆ.
ಭಾರತ ಮತ್ತು ಇರಾನ್ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧವನ್ನು 1950ರ ದಶಕದಿಂದ ಅಧಿಕೃತವಾಗಿ ಆರಂಭಿಸಿದ್ದರೂ, 2001ರಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇರಾನಿಗೆ ಭೇಟಿ ನೀಡಿದ ಬಳಿಕ ಈ ಸಂಬಂಧ ಸಾಕಷ್ಟು ಪ್ರಗತಿ ಸಾಧಿಸಿತು. ಈ ಭೇಟಿಯ ವೇಳೆ, ಉಭಯ ದೇಶಗಳು ಟೆಹರಾನ್ ಒಪ್ಪಂದಕ್ಕೆ ಸಹಿ ಹಾಕಿ, ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ನಿರ್ಧರಿಸಿದವು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲೂ ಈ ಸಹಯೋಗ ಇನ್ನಷ್ಟು ಬಲವಾಯಿತು. 2016ರಲ್ಲಿ ಪ್ರಧಾನಿ ಮೋದಿ ಕಳೆದ 15 ವರ್ಷಗಳ ಅವಧಿಯಲ್ಲಿ ಇರಾನಿಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದರು. ಈ ಭೇಟಿಯ ವೇಳೆ, ಮೋದಿಯವರು ಇರಾನ್ ಮತ್ತು ಅಫ್ಘಾನಿಸ್ತಾನಗಳೊಡನೆ ವ್ಯಾಪಾರ, ಸಾಗಾಣಿಕೆ, ಮತ್ತು ಸಂಪರ್ಕವನ್ನು ಅಭಿವೃದ್ಧಿ ಪಡಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್ : girishlinganna@gmail.com
Advertisement