ಟೆಹ್ರಾನ್‌ನಿಂದ ಟೆಲ್ ಅವೀವ್ ತನಕ: ಭಾರತದ ಆರ್ಥಿಕತೆಗೆ ಹೊಡೆತ ನೀಡುವುದೇ ಇರಾನ್-ಇಸ್ರೇಲ್ ಯುದ್ಧ (ಜಾಗತಿಕ ಜಗಲಿ)

ಭಾರತ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಆಮದಿನ ಮೇಲೆ ಅಪಾರವಾದ ಅವಲಂಬನೆ ಹೊಂದಿದೆ.
Representative image
ಸಾಂಕೇತಿಕ ಚಿತ್ರonline desk
Updated on

ಭಾರತದ ಇಂಧನ ಭದ್ರತೆ ಬಹುತೇಕ ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕಾರಣದೊಡನೆ ತಳಕು ಹಾಕಿಕೊಂಡಿದೆ. ಇಸ್ರೇಲ್ ಮತ್ತು ಇರಾನ್‌ಗಳ ನಡುವೆ ಈಗ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದು, ಇದರ ಸರಣಿ ಪರಿಣಾಮಗಳು ಈಗಾಗಲೇ ಭಾರತೀಯ ಆರ್ಥಿಕತೆಯ ಮೇಲೂ ಬೀರುತ್ತಿವೆ. ತೈಲ ದರ ಏರಿಕೆ ಮತ್ತು ಹಣದುಬ್ಬರಗಳಂತಹ ಸಮಸ್ಯೆಗಳು ಈಗಾಗಲೇ ಗೋಚರವಾಗುತ್ತಿದ್ದು, ವಿದೇಶಗಳಲ್ಲಿ ನೆಲೆಯಾಗಿರುವ ಭಾರತೀಯ ಉದ್ಯೋಗಿಗಳಿಗೆ ಇದು ಅವಕಾಶಗಳು ಮತ್ತು ಸವಾಲುಗಳೆರಡನ್ನೂ ಒಡ್ಡುತ್ತಿದೆ.

ಭಾರತ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಆಮದಿನ ಮೇಲೆ ಅಪಾರವಾದ ಅವಲಂಬನೆ ಹೊಂದಿದೆ. ಭಾರತ ಪ್ರತಿದಿನವೂ 6.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡುತ್ತಿದ್ದು, ಇದರಲ್ಲಿ 90% ವಿದೇಶಗಳಿಂದ ಆಮದಾಗುತ್ತಿದೆ. ಅದರೊಡನೆ, ಭಾರತದ ವಾರ್ಷಿಕ 36 ಮಿಲಿಯನ್ ಟನ್ ಎಲ್‌ಪಿಜಿಯಲ್ಲಿ 66% ಹಾಗೂ 72 ಬಿಲಿಯನ್ ಕ್ಯೂಬಿಕ್ ಮೀಟರ್ ನೈಸರ್ಗಿಕ ಅನಿಲದ (ಬಹುತೇಕ ದ್ರವೀಕೃತ ನೈಸರ್ಗಿಕ ಅನಿಲ - ಎಲ್ಎನ್‌ಜಿ) 50% ವಿದೇಶಗಳಿಂದ ಆಮದಾಗುತ್ತಿದೆ.

ಈ ಅವಲಂಬನೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು, ಈ ಇಂಧನಗಳೇನು ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ:

ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಎನ್ನುವುದು ಅಪಾರ ಒತ್ತಡದಲ್ಲಿ ಸಂಗ್ರಹಿಸಿರುವ ಪ್ರೊಪೇನ್ ಮತ್ತು ಬ್ಯುಟೇನ್ ಅನಿಲಗಳ ಮಿಶ್ರಣವಾಗಿದೆ. ಇದನ್ನು ಅಡುಗೆಗಾಗಿ ಮನೆಗಳ ಗ್ಯಾಸ್ ಸಿಲಿಂಡರ್‌ಗಳಲ್ಲಿ, ಅದರಲ್ಲೂ ನಗರ ಮತ್ತು ಗ್ರಾಮೀಣ ಮನೆಗಳಲ್ಲಿ ಬಳಕೆಯಾಗುತ್ತವೆ.

ನೈಸರ್ಗಿಕ ಅನಿಲ, ಮುಖ್ಯವಾಗಿ ಮಿಥೇನ್ ಅನ್ನು ಅದರ ಅನಿಲ ಸ್ವರೂಪದಲ್ಲಿ ಪೈಪ್ ಲೈನ್ ಅನಿಲ ಸಂಪರ್ಕದಲ್ಲಿ ಉದ್ಯಮಗಳಲ್ಲಿ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಎಲ್ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಸರಳ ನೈಸರ್ಗಿಕ ಅನಿಲವಾಗಿದ್ದು, ಸಾಗಾಣಿಕೆಗೆ ಸುಲಭವಾಗುವ ನಿಟ್ಟಿನಲ್ಲಿ -162 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ತಂಪು ಮಾಡಲಾಗುತ್ತದೆ. ಬೇಕಾದ ಸ್ಥಳಕ್ಕೆ ಸಾಗಿಸಿದ ಬಳಿಕ, ಅದನ್ನು ಕಾರ್ಖಾನೆಗಳಲ್ಲಿ, ವಿದ್ಯುತ್ ಉತ್ಪಾದನೆಯಲ್ಲಿ ಬಳಕೆಗೆ, ಮತ್ತು ನಗರ ಪ್ರದೇಶದಲ್ಲಿ ಪೂರೈಸಲು ಬೇಕಾದಂತೆ ಮತ್ತೆ ಅನಿಲ ರೂಪಕ್ಕೆ ಪರಿವರ್ತಿಸಲಾಗುತ್ತದೆ.

ಜಾಗತಿಕ ತೈಲ ದರಗಳು ಭಾರತದ ವ್ಯಾಪಾರ ಕೊರತೆ ಮತ್ತು ಭಾರತೀಯ ರೂಪಾಯಿ ಮೌಲ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಈ ವರ್ಷ ಮೇ ತಿಂಗಳಲ್ಲಿ, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82 ಡಾಲರ್‌ನಿಂದ ಅಂದಾಜು 60 ಡಾಲರ್‌ಗೆ ಇಳಿಕೆ ಕಂಡಿತ್ತು. ಇದರಿಂದ ಭಾರತದ ಆಮದು ವೆಚ್ಚವೂ ಕಡಿಮೆಯಾಯಿತು. ಇದರ ಪರಿಣಾಮವಾಗಿ, ಭಾರತೀಯ ರೂಪಾಯಿ ಬಲವರ್ಧನೆಗೊಂಡು, ಪ್ರತಿ ಡಾಲರ್ ಎದುರು 88 ರೂಪಾಯಿಯಿಂದ 84 ರೂಪಾಯಿಗೆ ಏರಿಕೆ ಕಂಡಿತು.

Representative image
ಆಕ್ಸಿಯಮ್-4 ಬೆನ್ನೇರಿ: ಶುಭಾಂಶು ಶುಕ್ಲಾ ಐತಿಹಾಸಿಕ ಯಾನ (ಜಾಗತಿಕ ಜಗಲಿ)

ಆದರೆ, ಈ ಪ್ರಗತಿ ಸಣ್ಣ ಅವಧಿಗೆ ಸೀಮಿತವಾಗಿತ್ತು. ಮಾಧ್ಯಮ ವರದಿಗಳು ಮತ್ತು ಕ್ರಮೇಣ ಆರಂಭಗೊಂಡ ಇಸ್ರೇಲ್ - ಇರಾನ್ ಉದ್ವಿಗ್ನತೆಯ ಪರಿಣಾಮವಾಗಿ, ತೈಲ ದರ 20% ಏರಿಕೆ ಕಂಡಿದ್ದು, ಪ್ರತೀ ಬ್ಯಾರಲ್‌ಗೆ 74 ಡಾಲರ್ ಆಗಿದೆ. ಒಂದು ವೇಳೆ ತೈಲ ದರಗಳು 2025 ಪೂರ್ತಿ 80 ಡಾಲರ್‌ಗಿಂತ ಮೇಲೇ ಇದ್ದರೆ, ಭಾರತದ ಆಮದು ವೆಚ್ಚ ಬಹಳಷ್ಟು ಹೆಚ್ಚಳಗೊಂಡು, ವ್ಯಾಪಾರ ಕೊರತೆಯೂ ಹೆಚ್ಚಾಗಲಿದೆ. ಕಳೆದ ವರ್ಷ ಭಾರತದ ವ್ಯಾಪಾರ ಕೊರತೆ 283 ಬಿಲಿಯನ್ ಡಾಲರ್ ಆಗಿತ್ತು. ಭಾರತೀಯ ರೂಪಾಯಿ ಈಗಾಗಲೇ ದುರ್ಬಲಗೊಂಡಿದ್ದು, ಡಾಲರ್ ಎದುರು 86 ರೂಪಾಯಿ ಮೌಲ್ಯ ಹೊಂದಿದೆ.

ಈ ವರ್ಷ ಒಂದರಲ್ಲೇ, ಭಾರತ 5.7 ಮಿಲಿಯನ್ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ಪ್ರತಿದಿನ, 24 ಮಿಲಿಯನ್ ಟನ್‌ಗಳಷ್ಟು ಎಲ್‌ಪಿಜಿ, ಮತ್ತು 36 ಬಿಲಿಯನ್ ಕ್ಯೂಬಿಕ್ ಮೀಟರ್‌ಗಳಿಗೂ ಹೆಚ್ಚು ಎಲ್ಎನ್‌ಜಿ ಆಮದು ಮಾಡಲಿದೆ. 2024-25ರ ಆರ್ಥಿಕ ವರ್ಷದಲ್ಲಿ, ಭಾರತ 137 ಬಿಲಿಯನ್ ಡಾಲರ್ ಮೊತ್ತವನ್ನು ಕಚ್ಚಾ ತೈಲ ಆಮದಿಗೆ, ಮತ್ತು 36 ಬಿಲಿಯನ್ ಡಾಲರ್ ಮೊತ್ತವನ್ನು ಎಲ್ಎನ್‌ಜಿ ಮತ್ತು ಎಲ್‌ಪಿಜಿ ಆಮದಿಗೆ ವೆಚ್ಚ ಮಾಡಿದೆ. ಆಗ ಕಚ್ಚಾ ತೈಲದ ಸರಾಸರಿ ದರ ಪ್ರತಿ ಬ್ಯಾರಲ್‌ಗೆ 81 ಡಾಲರ್ ಆಗಿತ್ತು. ಆದರೆ, ಪ್ರತಿ ಬ್ಯಾರಲ್ ದರ 85 ಡಾಲರ್‌ಗೂ ಹೆಚ್ಚಾಗತೊಡಗಿದರೆ, ಭಾರತದ ವೆಚ್ಚ ಇನ್ನಷ್ಟು ಹೆಚ್ಚಾಗಬಹುದು. ಭಾರತದ ವಿದೇಶೀ ವಿನಿಮಯ ಮೀಸಲು ಬಲವಾಗಿದ್ದು, 697 ಬಿಲಿಯನ್ ಡಾಲರ್ ಆಗಿದೆ. ಆದರೂ ಇಂತಹ ಇಂಧನ ದರ ಏರಿಕೆ ಒಟ್ಟಾರೆಯಾಗಿ ಆರ್ಥಿಕತೆಯ ಮೇಲೆ ಒತ್ತಡ ಹೇರಲಿದೆ.

ಇರಾನ್ ಇಸ್ರೇಲ್ ಯುದ್ಧ ಈ ಪ್ರದೇಶದಲ್ಲಿ ಭಾರತದ ಕಾರ್ಯತಂತ್ರದ ಆಯಾಮದ ಸಂಬಂಧಗಳ ಮೇಲೂ ಪರಿಣಾಮ ಬೀರಲಿದೆ. ಇಸ್ರೇಲ್ ಜೊತೆಗಿನ ಭಾರತದ ವ್ಯಾಪಾರ ಇರಾನ್ ಜೊತೆಗಿನ ವ್ಯಾಪಾರದ ಮೂರು ಪಟ್ಟಾಗಿದ್ದು, 2023-24ರಲ್ಲಿ 4.5 ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ವ್ಯಾಪಾರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿತ್ತು. ಮುಖ್ಯವಾಗಿ, ಭಾರತ ಇಸ್ರೇಲಿ ಮಿಲಿಟರಿ ಉಪಕರಣಗಳ ಅತಿದೊಡ್ಡ ಗ್ರಾಹಕನಾಗಿದ್ದು, ರಷ್ಯಾ ನಂತರ ಇಸ್ರೇಲ್ ಭಾರತದ ಎರಡನೇ ಅತಿದೊಡ್ಡ ರಕ್ಷಣಾ ಪೂರೈಕೆದಾರನಾಗಿದೆ. ಇಸ್ರೇಲ್‌ನಿಂದ ಪ್ರಮುಖ ಆಮದುಗಳಲ್ಲಿ ಕ್ಷಿಪಣಿಗಳು, ಡ್ರೋನ್‌ಗಳು, ರೇಡಾರ್‌ಗಳು, ಮತ್ತು ಇಲೆಕ್ಟ್ರಾನಿಕ್ ವಾರ್‌ಫೇರ್ ಉತ್ಪನ್ನಗಳು ಸೇರಿದ್ದು, ಇಸ್ರೇಲ್ ಸಹಯೋಗದೊಡನೆ ಭಾರತದಲ್ಲಿ ಹಲವಾರು ಜಂಟಿ ರಕ್ಷಣಾ ಉತ್ಪಾದನಾ ಉದ್ಯಮಗಳನ್ನು ಮತ್ತು ರಕ್ಷಣಾ ಸ್ಟಾರ್ಟಪ್‌ಗಳನ್ನು ಆರಂಭಿಸಲಾಗಿದೆ.

Representative image
'ನಾನು ಎಲ್ಲವನ್ನೂ ಮಾಡ್ತೀನಿ, ಯಾವುದಕ್ಕೂ ಕ್ರೆಡಿಟ್ ಸಿಗಲ್ಲ, ಆದರೂ ಓಕೆ': ಇರಾನ್-ಇಸ್ರೇಲ್ ನಡುವೆ ಶಾಂತಿ ಒಪ್ಪಂದ ನಡೆಯುತ್ತೆ- ಟ್ರಂಪ್

ಇದಕ್ಕೆ ವ್ಯತಿರಿಕ್ತವಾಗಿ, 2019ರ ಬಳಿಕ ಇರಾನ್ ಜೊತೆಗಿನ ಭಾರತದ ವ್ಯಾಪಾರ ಭಾರೀ ಕುಸಿತ ಕಂಡಿದೆ. ತನ್ನ ನಿರ್ಬಂಧಗಳ ಹೊರತಾಗಿಯೂ, ಇರಾನ್‌ನಿಂದ ತೈಲ ಆಮದು ನಡೆಸಲು ಭಾರತಕ್ಕೆ ನೀಡಿದ್ದ ಅನುವನ್ನು ಅಮೆರಿಕಾ ಹಿಂಪಡೆದದ್ದು ಇದಕ್ಕೆ ಕಾರಣವಾಗಿತ್ತು. 2018-19ರಲ್ಲಿ, ಭಾರತ ಇರಾನಿನಿಂದ 12 ಬಿಲಿಯನ್ ಡಾಲರ್ ಮೌಲ್ಯದ ತೈಲ ಆಮದು ಮಾಡಿಕೊಂಡಿದ್ದು, ಇದು ದ್ವಿಪಕ್ಷೀಯ ವ್ಯಾಪಾರದ 66.7% ಪಾಲು ಹೊಂದಿತ್ತು. ಇಂದು ಭಾರತ - ಇರಾನ್ ನಡುವಿನ ವ್ಯಾಪಾರ ಕೇವಲ 2 ಬಿಲಿಯನ್ ಡಾಲರ್ ಆಗಿದೆ. ಇಂದಿಗೂ ಭಾರತ ಪ್ರಮುಖ ಆಹಾರ ಉತ್ಪನ್ನಗಳಾದ ಅಕ್ಕಿ (734 ಮಿಲಿಯನ್ ಡಾಲರ್), ಸೋಯಾಬೀನ್ ಖಾದ್ಯ (97 ಮಿಲಿಯನ್ ಡಾಲರ್), ಮತ್ತು ಬಾಳೆಹಣ್ಣುಗಳನ್ನು (52 ಮಿಲಿಯನ್ ಡಾಲರ್) ಇರಾನಿಗೆ ರಫ್ತು ಮಾಡುತ್ತಿದ್ದು, ರಾಸಾಯನಿಕಗಳು, ಎಲ್‌ಪಿಜಿ, ಮತ್ತು ಪೆಟ್ರೋಲಿಯಂ ಕೋಕ್‌ಗಳನ್ನು ಆಮದು ಮಾಡುತ್ತಿದೆ.

ಈ ವರ್ಷಾರಂಭದಲ್ಲಿ, ಅಮೆರಿಕಾ ನಾಲ್ಕು ಭಾರತೀಯ ಸರಕು ಸಾಗಣೆ ಸಂಸ್ಥೆಗಳಾದ ಆಸ್ಟನ್‌ಶಿಪ್ ಮ್ಯಾನೇಜ್‌ಮೆಂಟ್, ಬಿಎಸ್ಎಂ ಮರೀನ್, ಕಾಸ್ಮೋಸ್ ಲೈನ್ಸ್, ಮತ್ತು ಫ್ಲಕ್ಸ್ ಮಾರಿಟೈಮ್‌ಗಳ ಮೇಲೆ ಇರಾನಿಯನ್ ತೈಲದ ವ್ಯಾಪಾರ ಮತ್ತು ಸಾಗಾಣಿಕೆಯಲ್ಲಿ ಭಾಗಿಯಾಗಿವೆ ಎಂದು ನಿರ್ಬಂಧ ವಿಧಿಸಿತ್ತು. ಇದು ಜಾಗತಿಕ ರಾಜಕಾರಣದಲ್ಲಿ ಇರಾನಿನ ಇಂಧನದ ವಿಚಾರ ಎಷ್ಟು ಸೂಕ್ಷ್ಮವಾಗಿದೆ ಎನ್ನುವುದನ್ನು ಸೂಚಿಸುತ್ತದೆ.

ಇಷ್ಟಾದರೂ, ಹೆಚ್ಚುತ್ತಿರುವ ತೈಲ ದರಗಳು ಅನಿರೀಕ್ಷಿತ ಪ್ರಯೋಜನಗಳನ್ನೂ ತರಬಲ್ಲದು. ತೈಲ ಶ್ರೀಮಂತ ಮಧ್ಯ ಪೂರ್ವ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಮತ್ತು ಕತಾರ್‌ಗಳು ಹೆಚ್ಚಿನ ರಫ್ತು ಆದಾಯ ಗಳಿಸುವ ಉದ್ದೇಶ ಹೊಂದಿದ್ದು, ಅವುಗಳು ಹೆಚ್ಚು ಆದಾಯ ಗಳಿಸಿದಾಗ ಮೂಲಭೂತ ವ್ಯವಸ್ಥೆಗಳು, ಸೇವೆ, ಮತ್ತು ದೇಶೀಯ ಅಭಿವೃದ್ಧಿಯಲ್ಲಿ ಹೂಡಿಕೆ ನಡೆಸಲು ಮುಂದಾಗಲಿವೆ. ಇದರಿಂದ ವಲಸೆ ಕಾರ್ಮಿಕರಿಗೆ, ಅದರಲ್ಲೂ ಭಾರತೀಯ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಲಿದೆ.

ಪ್ರಸ್ತುತ 9 ಮಿಲಿಯನ್ ಭಾರತೀಯ ಅರೆ ಕುಶಲ ಮತ್ತು ಕೌಶಲ್ಯ ರಹಿತ ಕಾರ್ಮಿಕರು ಈ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಜನರು ನಿರ್ಮಾಣ ಕಾಮಗಾರಿ, ಮನೆ ಕೆಲಸ, ಮತ್ತು ನಿರ್ವಹಣಾ ಸೇವೆಗಳಲ್ಲಿ ಕಾರ್ಯಾಚರಿಸುತ್ತಿದ್ದಾರೆ. ತೈಲ ರಫ್ತಿನಿಂದ ಆದಾಯ ಹೆಚ್ಚಾದಂತೆ, ಈ ದೇಶಗಳು ತಮ್ಮ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ಭಾರತೀಯ ವಲಸಿಗರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿವೆ.

ಕೇರಳದಂತಹ ರಾಜ್ಯಗಳಿಗೆ ಇದರ ಪ್ರಯೋಜನ ಅತ್ಯಂತ ಹೆಚ್ಚಾಗಲಿದೆ. ಕೇರಳದ 35 ಮಿಲಿಯನ್ ಜನಸಂಖ್ಯೆಯಲ್ಲಿ ಅಂದಾಜು 10% ಈಗಾಗಲೇ ಮಧ್ಯ ಪೂರ್ವದಲ್ಲಿ ಉದ್ಯೋಗ ನಡೆಸುತ್ತಿದ್ದಾರೆ. ಅವರು ಮನೆಗೆ ಕಳುಹಿಸುವ ವಿದೇಶೀ ಹಣ ರವಾನೆ ಕೇರಳದ ಆದಾಯದಲ್ಲಿ 20% ಪಾಲು ಹೊಂದಿದೆ. ಇದು ಮಿಲಿಯಾಂತರ ಜನರ ಕುಟುಂಬಗಳಿಗೆ ಬೆಂಬಲ ನೀಡಲು, ಶಿಕ್ಷಣ, ಆರೋಗ್ಯ, ಮತ್ತು ಇತರ ವೆಚ್ಚಗಳನ್ನು ನಿರ್ವಹಿಸಲು ಅನುಕೂಲಕರವಾಗಿದೆ.

ಸರಳವಾಗಿ ಹೇಳುವುದಾದರೆ, ಇರಾನ್ - ಇಸ್ರೇಲ್ ಯುದ್ಧದ ಪರಿಣಾಮವಾಗಿ ಹೆಚ್ಚುತ್ತಿರುವ ತೈಲ ದರಗಳು ಭಾರತದ ಮೇಲೆ ಒಂದು ರೀತಿಯಲ್ಲಿ ಎರಡು ಅಲಗಿನ ಖಡ್ಗದಂತಿವೆ. ಯುದ್ಧದಿಂದ ಆಮದು ದರ ಹೆಚ್ಚಾಗಿ, ರುಪಾಯಿ ದುರ್ಬಲಗೊಳ್ಳಲಿದೆ. ಆದರೆ, ಇದೇ ವೇಳೆ ವಿದೇಶಗಳಲ್ಲಿ ಭಾರತೀಯರಿಗೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಿ, ವಿದೇಶೀ ಹಣ ರವಾನೆ ಹೆಚ್ಚಳವಾಗಲಿದೆ. ಇದರಿಂದ ಸಂಕೀರ್ಣವಾದ ಜಾಗತಿಕ ಲೆಕ್ಕಾಚಾರಗಳಲ್ಲಿ ಒಂದಷ್ಟು ಸಮತೋಲನ ತರಲು ಸಾಧ್ಯವಾಗುತ್ತದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com