ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)

ಧೂಮಕೇತು ಎಂದರೇನು? ಧೂಮಕೇತು ಎನ್ನುವುದು ಒಂದು ಸಣ್ಣ ಬಾಹ್ಯಾಕಾಶ ಕಾಯವಾಗಿದ್ದು, ಇದು ಮಂಜುಗಡ್ಡೆ, ಧೂಳು ಮತ್ತು ಕಲ್ಲಿನಿಂದ ನಿರ್ಮಿತವಾಗಿರುತ್ತದೆ.
ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)
Updated on

ಒಂದು ಅಪರೂಪದ, ಅಷ್ಟೇ ರೋಮಾಂಚಕವಾದ ಬಾಹ್ಯಾಕಾಶ ವಿದ್ಯಮಾನವೊಂದರಲ್ಲಿ, ಚೀನಾದ ಮಂಗಳ ಗ್ರಹ ಅನ್ವೇಷಣಾ ಯೋಜನೆಯಾದ ತಿಯಾನ್‌ವೆನ್-1 ಅಕ್ಟೋಬರ್ 2025ರಲ್ಲಿ ಮಂಗಳ ಗ್ರಹಕ್ಕೆ ಅತ್ಯಂತ ಸನಿಹದಿಂದ ಹಾದು ಹೋಗುವಾಗ ಧೂಮಕೇತು 3ಐ ಅಟ್ಲಾಸ್‌ನ ಅತ್ಯಂತ ಸುಂದರವಾದ, ಸನಿಹದ ಛಾಯಾಚಿತ್ರವನ್ನು ಸೆರೆಹಿಡಿದಿದೆ. ಇದೇ ಮೊದಲ ಬಾರಿಗೆ ಈ ಧೂಮಕೇತುವಿನ ಇಷ್ಟು ಸ್ಪಷ್ಟವಾದ ಛಾಯಾಚಿತ್ರವನ್ನು ಬೇರೊಂದು ಗ್ರಹದಿಂದ ತೆಗೆಯಲಾಗಿದ್ದು, ಇದರ ಹಿಂದಿರುವ ಕತೆಯೂ ಅಷ್ಟೇ ರೋಮಾಂಚಕವಾಗಿದೆ.

ಚೀನಾದ ತಿಯಾನ್‌ವೆನ್-1 ಬಾಹ್ಯಾಕಾಶ ನೌಕೆ 2021ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿತು. ಇದು ಮಂಗಳ ಗ್ರಹದ ಮಣ್ಣು, ಕಲ್ಲುಗಳು, ಗಾಳಿ ಮತ್ತು ಕಾಂತೀಯ ಕ್ಷೇತ್ರವನ್ನು ಅಧ್ಯಯನ ನಡೆಸಲು ಆಧುನಿಕ ಕ್ಯಾಮರಾಗಳು ಮತ್ತು ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ. ಇದು ಚೀನಾಗೆ ತನ್ನ ಮೊದಲ ಮಂಗಳ ಗ್ರಹ ರೋವರ್ ಆದ ಜುರಾಂಗ್ ಅನ್ನು ಇಳಿಸಲು ಅವಕಾಶ ಕಲ್ಪಿಸಿತು. ತನ್ನ ಮುಖ್ಯ ಯೋಜನೆಯನ್ನು ಪೂರ್ಣಗೊಳಿಸಿದ ಬಳಿಕವೂ, ಈ ಆರ್ಬಿಟರ್ ಹೊಸ ವೈಜ್ಞಾನಿಕ ಅನ್ವೇಷಣೆಗಳಿಗೆ ಬೆಂಬಲಿಸುತ್ತಾ, ಕಾಲ ಕಾಲಕ್ಕೂ ತನ್ನ ಮೌಲ್ಯವನ್ನು ಸಾಬೀತುಪಡಿಸುತ್ತಲೇ ಇದೆ.

ಧೂಮಕೇತು ಎಂದರೇನು? ಧೂಮಕೇತು ಎನ್ನುವುದು ಒಂದು ಸಣ್ಣ ಬಾಹ್ಯಾಕಾಶ ಕಾಯವಾಗಿದ್ದು, ಇದು ಮಂಜುಗಡ್ಡೆ, ಧೂಳು ಮತ್ತು ಕಲ್ಲಿನಿಂದ ನಿರ್ಮಿತವಾಗಿರುತ್ತದೆ. ಇದು ಯಾವುದಾದರೂ ನಕ್ಷತ್ರದ ಬಳಿ ಸಾಗಿದಾಗ, ಅದರ ಮಂಜುಗಡ್ಡೆ ಕರಗಿ, ನಾವು ನೋಡಲು ಸಾಧ್ಯವಾಗುವ ಪ್ರಕಾಶಮಾನವಾದ ಬಾಲದ ನಿರ್ಮಾಣವಾಗುತ್ತದೆ. ಬಿಲಿಯನ್‌ಗಟ್ಟಲೆ ವರ್ಷಗಳ ಹಿಂದೆ, ಆರಂಭಿಕ ನಕ್ಷತ್ರ ಪುಂಜಗಳ ನಿರ್ಮಾಣವಾಗುತ್ತಿದ್ದ ಕಾಲದಲ್ಲೇ ಧೂಮಕೇತುಗಳೂ ನಿರ್ಮಾಣಗೊಂಡವು. ಗ್ರಹಗಳಾಗಿ ಪರಿವರ್ತನೆಗೊಳ್ಳದೆ ಉಳಿದ ಮಂಜುಗಡ್ಡೆ ಮತ್ತು ಧೂಳು ನಿಧಾನವಾಗಿ ಈ ಮಂಜುಗಡ್ಡೆಯ ಕಾಯಗಳಾಗಿ ರೂಪು ತಳೆದವು. ಧೂಮಕೇತುಗಳು ಅತ್ಯಂತ ಪುರಾತನ ಕಾಯಗಳಾಗಿರುವುದರಿಂದ, ಅವುಗಳ ನಕ್ಷತ್ರ ವ್ಯವಸ್ಥೆಯ ಆರಂಭದ ದಿನಗಳಿಂದಲೂ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲದ್ದರಿಂದ, ಅವುಗಳಲ್ಲಿ ಅತ್ಯಂತ ಹಳೆಯ ವಸ್ತುಗಳು ಹಾಗೇ ಇರುವ ಸಾಧ್ಯತೆಗಳಿವೆ.

ಆದರೆ, ಧೂಮಕೇತು 3ಐ ಅಟ್ಲಾಸ್ ಯಾವುದೋ ಒಂದು ಸಾಮಾನ್ಯ ಧೂಮಕೇತುವಲ್ಲ. ಇದೊಂದು ಅಂತರತಾರಾ ಧೂಮಕೇತು. ಅಂದರೆ, ಇದು ನಮ್ಮ ಸೌರಮಂಡಲದ ಹೊರಗಿನಿಂದ ಬಂದಿದೆ. ಇದು ನಮ್ಮ ಬಾಹ್ಯಾಕಾಶದ ಮೂಲಕ ಕೇವಲ ಒಂದು ಬಾರಿ ಮಾತ್ರವೇ ಹಾದುಹೋಗಿ, ಬಳಿಕ ಶಾಶ್ವತವಾಗಿ ಇಲ್ಲಿಂದ ಹೊರ ನಡೆಯುತ್ತದೆ. ಈ ಧೂಮಕೇತು ಡೀಪ್ ಸ್ಪೇಸಿನ ಹಳೆಯ ವಸ್ತುಗಳನ್ನು ಹೊಂದಿದ್ದು, ಇವು ವಿಜ್ಞಾನಿಗಳಿಗೆ ನಮ್ಮ ಸೌರಮಂಡಲದಿಂದ ಹೊರಗಿನ ಗ್ರಹಗಳು ಮತ್ತು ನಕ್ಷತ್ರಗಳು ಹೇಗೆ ರೂಪುಗೊಂಡವು ಎಂದು ತಿಳಿಯಲು ನೆರವಾಗುತ್ತವೆ. ಆದ್ದರಿಂದ ಈ ಧೂಮಕೇತುವನ್ನು ಅಧ್ಯಯನ ನಡೆಸುವುದು ಅತ್ಯಂತ ಮಹತ್ವ ಹೊಂದಿದೆ.

ಕಾಮೆಟ್ 3ಐ ಅಟ್ಲಾಸ್ ನಮ್ಮ ಸೌರಮಂಡಲದ ಹೊರಗಿನ, ಆದರೆ ನಮ್ಮ ಸೌರಮಂಡಲವನ್ನು ಪ್ರವೇಶಿಸಿರುವ ಮೂರನೇ ಆಕಾಶ ಕಾಯವಾಗಿದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಮಾನವ ಇತಿಹಾಸದಲ್ಲಿ ಇದಕ್ಕೂ ಮುನ್ನ ಕೇವಲ ಎರಡು ಬಾರಿಯಷ್ಟೇ ಇಂತಹ ಘಟನೆ ನಡೆದಿದ್ದು, ಇದು ಎಷ್ಟು ಮಹತ್ವದ್ದು ಎಂದು ಊಹಿಸಿ. ಈ ಧೂಮಕೇತುವನ್ನು ಮೊದಲ ಬಾರಿಗೆ ಚಿಲಿಯಲ್ಲಿರುವ ಅಟ್ಲಾಸ್ ಟೆಲಿಸ್ಕೋಪ್ ಮೂಲಕ ಜುಲೈ 1, 2025ರಂದು ಗುರುತಿಸಲಾಯಿತು. ಈ ಧೂಮಕೇತು ಸೂರ್ಯನ ಗುರುತ್ವಾಕರ್ಷಣೆಯ ವಶಕ್ಕೆ ಸಿಗದಿರುವ ಕಾರಣದಿಂದ, ಇದು ಅಕ್ಟೋಬರ್ 3ರಂದು ಮಂಗಳ ಗ್ರಹದ ಸನಿಹದಿಂದ, ಅಂದಾಜು 28 ಮಿಲಿಯನ್ ಕಿಲೋಮೀಟರ್ ದೂರದಿಂದ ಹಾದು ಹೋಗಿ, ಹಾಗೇ ಮುಂದುವರಿದು, ಶಾಶ್ವತವಾಗಿ ನಮ್ಮ ಸೌರಮಂಡಲದಿಂದ ಹೊರಗೆ ಸಾಗುತ್ತದೆ.

ಇಲ್ಲಿಂದ ವಿಚಾರ ಆಸಕ್ತಿದಾಯಕವಾಗುತ್ತದೆ. ನಮ್ಮ ಸೌರ ಮಂಡಲದ ಹೊರಗಿನಿಂದ ಬಂದಿರುವ ಆಕಾಶಕಾಯ ಆನ್‌ಲೈನ್‌ನಲ್ಲಿ ಸಾಕಷ್ಟು ಮಾತಿಗೆ ಕಾರಣವಾಗಿದೆ. ನಾಸಾ ಇಲ್ಲಿಯತನಕ ಯಾವುದೇ ಖಚಿತ ಉತ್ತರಗಳನ್ನು ನೀಡದಿರುವುದರಿಂದ, ಬಹಳಷ್ಟು ಜನರು ಇದು ಏಲಿಯನ್ (ಅನ್ಯಲೋಕದ್ದು) ಆಗಿರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ. ನಾಸಾದ ಬಹಳಷ್ಟು ಬಾಹ್ಯಾಕಾಶ ನೌಕೆಗಳು ಇದರ ಛಾಯಾಚಿತ್ರ ತೆಗೆದಿವೆ. ಆದರೆ, ಅಮೆರಿಕ ಸರ್ಕಾರದ ಶಟ್ ಡೌನ್ ಮುಕ್ತಾಯಗೊಂಡ ಬಳಿಕವಷ್ಟೇ ಆ ಚಿತ್ರಗಳು ಬಿಡುಗಡೆಯಾಗಲಿವೆ. ಸರ್ಕಾರಿ ಶಟ್‌ಡೌನ್ ಎಂದರೆ, ಬಜೆಟ್ ಅನುಮತಿಯ ವಿಳಂಬದ ಕಾರಣದಿಂದ, ಬಹಳಷ್ಟು ಸರ್ಕಾರಿ ಕಚೇರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತವೆ. ಆದ್ದರಿಂದಲೇ ನಮಗೆ ಇನ್ನೂ ನಾಸಾ ತೆಗೆದಿರುವ ಛಾಯಾಚಿತ್ರಗಳು ಲಭಿಸಿಲ್ಲ.

ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)
ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿ

ಆದರೆ, 2021ರಿಂದಲೂ ಮಂಗಳ ಗ್ರಹದ ಪರಿಭ್ರಮಣೆ ನಡೆಸುತ್ತಿರುವ ಚೀನಾದ ತಿಯಾನ್‌ವೆನ್-1 ಬಾಹ್ಯಾಕಾಶ ನೌಕೆ ಅತ್ಯಂತ ಮಂಕಾದ, ಸಾಮಾನ್ಯವಾಗಿ ಛಾಯಾಚಿತ್ರ ತೆಗೆಯುವ ಕಾಯಗಳಿಂದ ಸಾವಿರಾರು ಪಟ್ಟು ಮಬ್ಬಾಗಿದ್ದ ಧೂಮಕೇತುವಿನ ಛಾಯಾಚಿತ್ರವನ್ನು ತೆಗೆಯಲು ಯಶಸ್ವಿಯಾಯಿತು. ಈ ಸಾಧನೆಯೇ ಚೀನೀ ಬಾಹ್ಯಾಕಾಶ ಯೋಜನೆಯ ತಾಂತ್ರಿಕ ಸಾಮರ್ಥ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ.

ಈ ಚಿತ್ರಗಳು ಕೆಲವು ನೂರು ಮೀಟರ್‌ಗಳಿಂದ ಒಂದು ಕಿಲೋಮೀಟರ್ ಒಳಗಿರುವ ಗಟ್ಟಿಯಾದ ಮಂಜುಗಡ್ಡೆಯ ಒಳಮೈ ಮತ್ತು ಅದನ್ನು ಆವರಿಸಿರುವ ಪ್ರಕಾಶಮಾನವಾದ ಅನಿಲ ಮತ್ತು ಧೂಳಿನ ಮೋಡವನ್ನು ಪ್ರದರ್ಶಿಸಿವೆ. ಈ ಚಿತ್ರಗಳು ವಿಜ್ಞಾನಿಗಳಿಗೆ ಅಪರೂಪದ ಬಾಹ್ಯಾಕಾಶ ಕಾಯವನ್ನು ಅರ್ಥ ಮಾಡಿಕೊಳ್ಳಲು ಮತ್ತು ಭೂಮ್ಯತೀತ ಅತಿಥಿಗಳು ಬಂದಿದ್ದಾರೆ ಎನ್ನುವ ತೀವ್ರ ವಾದಗಳನ್ನು ಕೊನೆಗೊಳಿಸಲು ನೆರವಾಗಲಿವೆ.

ಧೂಮಕೇತು ಮಂಗಳ ಗ್ರಹಕ್ಕೆ ಅತ್ಯಂತ ಸನಿಹ ಬಂದಿರುವುದರಿಂದ, ತಿಯಾನ್‌ವೆನ್-1 ಮಂಗಳ ಗ್ರಹದ ಕಕ್ಷೆಯಿಂದಲೇ ಧೂಮಕೇತುವಿನ ಅತ್ಯಂತ ಅಪರೂಪದ, ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆಯಲು ಶಕ್ತವಾಯಿತು. ಈ ಚಿತ್ರಗಳು ಧೂಮಕೇತು ಯಾವುದರಿಂದ ಮಾಡಲ್ಪಟ್ಟಿದೆ ಎನ್ನುವುದರ ಅಧ್ಯಯನ ನಡೆಸಲು, ಬ್ರಹ್ಮಾಂಡದ ಆರಂಭಿಕ ರಹಸ್ಯವನ್ನು ಅರಿಯಲು ವಿಜ್ಞಾನಿಗಳಿಗೆ ನೆರವಾಗಲಿವೆ. ಮಂಗಳ ಗ್ರಹದಿಂದ ಕಲೆಹಾಕಲ್ಪಟ್ಟ ಮಾಹಿತಿಗಳು ಭೂಮಿಯ ಟೆಲಿಸ್ಕೋಪ್‌ಗಳು, ಮತ್ತು ಇಎಸ್ಎಯ ಎಕ್ಸೋಮಾರ್ಸ್ ಟ್ರೇಸ್ ಗ್ಯಾಸ್ ಆರ್ಬಿಟರ್, ಮತ್ತು ನಾಸಾದ ಹಬಲ್ ಮತ್ತು ವೆಬ್ಬ್ ಸ್ಪೇಸ್ ಟೆಲಿಸ್ಕೋಪ್‌ಗಳಂತಹ ಆರ್ಬಿಟರ್‌ಗಳು ನಡೆಸಿರುವ ವೀಕ್ಷಣೆಗೆ ನೆರವಾಗಲಿವೆ.

ಇತರ ನಕ್ಷತ್ರಗಳ ಸನಿಹದಲ್ಲಿ ಉಂಟಾದ ಆಕಾಶಕಾಯದ ಅಧ್ಯಯನ ನಡೆಸಲು ಇದು ಅವಕಾಶ ನೀಡುವುದರಿಂದ, ವಿಜ್ಞಾನಿಗಳು ಈಗ ಅತ್ಯಂತ ಉತ್ಸುಕರಾಗಿದ್ದಾರೆ. ಇದು ನಮ್ಮ ಸೌರಮಂಡಲದ ಹೊರಭಾಗದಲ್ಲಿ, ಗ್ರಹಗಳು ಮತ್ತು ಸೌರ ಮಂಡಲಗಳು ಹೇಗೆ ರಚನೆಯಾದವು ಎಂದು ತಿಳಿಯಲು ನೆರವಾಗಲಿವೆ. ಇದು ಒಂದು ರೀತಿ ನಮ್ಮ ಗ್ಯಾಲಾಕ್ಸಿಯ (ನಕ್ಷತ್ರಪುಂಜ) ಇನ್ನೊಂದು ನೆರೆಹೊರೆಯಿಂದ ಸಂದೇಶ ವಾಹಕ ಬಂದಂತಾಗಿದೆ.

ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)
ಸಿಎಂಎಸ್-03 ಉಪಗ್ರಹ: ಭಾರತೀಯ ನೌಕಾಪಡೆಗೆ ಹೊಸ ಕಣ್ಣು-ಕಿವಿ

ತಿಯಾನ್‌ವೆನ್-1 ತೆಗೆದ ಚಿತ್ರಗಳು ಚೀನಾ ಮಂಗಳ ಗ್ರಹ ಅನ್ವೇಷಣೆ ಮತ್ತು ಅಂತರತಾರಾ ವಿಜ್ಞಾನದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿರುವ ಸಂದೇಶ ರವಾನಿಸಿವೆ. ಮಂಗಳದ ದೃಷ್ಟಿಕೋನದಿಂದ ತೆಗೆದ ಈ ಚಿತ್ರಗಳು ವಿಜ್ಞಾನಿಗಳಿಗೆ ಹೆಚ್ಚುವರಿ ಅನುಕೂಲಕರ ಮಾಹಿತಿ ಒದಗಿಸುತ್ತವೆ. ಇತರ ಬಾಹ್ಯಾಕಾಶ ಸಂಸ್ಥೆಗಳು ವಿಳಂಬಗೊಂಡಾಗ ಅಥವಾ ಇತಿಮಿತಿಗಳನ್ನು ಎದುರಿಸಿದಾಗ, ಚೀನಾ ದಾಪುಗಾಲಿಟ್ಟು, ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ಅವಶ್ಯಕವಾದ ಮೌಲ್ಯಯುತ ಮಾಹಿತಿಯನ್ನು ಒದಗಿಸಿದೆ.

ಇದರೊಂದಿಗೆ ಒಂದು ವಿಚಾರ ಸ್ಪಷ್ಟವಾಗಿದೆ. ಇದು ಯಾವುದೋ ಏಲಿಯನ್ ಬಾಹ್ಯಾಕಾಶ ನೌಕೆಯಲ್ಲ. ಕಾಮೆಟ್ 3ಐ ಅಟ್ಲಾಸ್ ಆಳ ಬಾಹ್ಯಾಕಾಶದಿಂದ ಬಂದಿರುವ ಒಂದು ಸಹಜ ಅತಿಥಿಯಾಗಿದೆ. ಇದರ ವಿಚಿತ್ರವಾದ, ಭೂತದಂತಹ ನೋಟ ನಮಗೆ ನಮ್ಮ ಸೌರಮಂಡಲದಾಚೆಗೂ ಬಹಳಷ್ಟು ವಿಸ್ಮಯಗಳಿವೆ ಎನ್ನುವುದನ್ನು ನೆನಪಿಸುತ್ತದೆ. ಹಾಗೆಂದು ಇದು ರೋಮಾಂಚನವನ್ನೇನೂ ಕಡಿಮೆಗೊಳಿಸಿಲ್ಲ. ವಾಸ್ತವವಾಗಿ, ಇನ್ನೊಂದು ನಕ್ಷತ್ರ ವ್ಯವಸ್ಥೆಯಿಂದ ಬಂದಿರಬಹುದಾದ ಈ ಪುರಾತನ ಪ್ರವಾಸಿಗರನ್ನು ಅಧ್ಯಯನ ನಡೆಸುವುದು ನಮಗೆ ಬ್ರಹ್ಮಾಂಡದ ಕುರಿತು ತಿಳಿದಿರದ ವಿಚಾರಗಳನ್ನು ಕಲಿಸಬಹುದು.

ಈ ವಿದ್ಯಮಾನ ಹೇಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಅನ್ವೇಷಣೆ ನಮಗೆ ಬ್ರಹ್ಮಾಂಡದ ಅದ್ಭುತಗಳನ್ನು ತೆರೆದಿಡುತ್ತಾ, ಹೊಸ ಹೊಸ ಹೊಳಹುಗಳನ್ನು ತೋರಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಚೀನಾ, ಅಮೆರಿಕಾ, ಅಥವಾ ಭಾರತ ಸೇರಿದಂತೆ, ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರತಿಯೊಬ್ಬರ ಕೊಡುಗೆಗಳೂ ಒಟ್ಟಾರೆ ಮಾನವ ಜನಾಂಗಕ್ಕೆ ಪ್ರಯೋಜನ ಕಲ್ಪಿಸಲಿವೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com