ಕೆಂಪು ಕೋಟೆ ಬಳಿ ಸ್ಫೋಟ: ದಿನಬಳಕೆಯ ವಸ್ತುಗಳು ಭಯೋತ್ಪಾದನೆಯ ಆಯುಧವಾದದ್ದು ಹೇಗೆ?

ಈ ದಾಳಿಯ ರೂವಾರಿಗಳು ಮತ್ತು ಪಾಕಿಸ್ತಾನಿ ಮೂಲದ ಭಯೋತ್ಪಾದನಾ ಸಂಘಟನೆ ಜೈಷ್ ಎ ಮೊಹಮ್ಮದ್ (ಜೆಇಎಂ) ನಡುವೆ ಇರಬಹುದಾದ ಸಂಭಾವ್ಯ ಸಂಬಂಧದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Delhi car blast incident (file photo)
ದೆಹಲಿ ಸ್ಫೋಟ ಘಟನೆ (ಸಾಂಕೇತಿಕ ಚಿತ್ರ)online desk
Updated on

ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಸ್ಫೋಟ ಭಯೋತ್ಪಾದನೆಯ ಆಧುನಿಕ ಮುಖದ ಕುರಿತ ಕರಾಳ ಸತ್ಯವನ್ನು ದೇಶದೆದುರು ಹಿಡಿದಿದೆ. ಈ ದಾಳಿಯ ರೂವಾರಿಗಳು ಮತ್ತು ಪಾಕಿಸ್ತಾನಿ ಮೂಲದ ಭಯೋತ್ಪಾದನಾ ಸಂಘಟನೆ ಜೈಷ್ ಎ ಮೊಹಮ್ಮದ್ (ಜೆಇಎಂ) ನಡುವೆ ಇರಬಹುದಾದ ಸಂಭಾವ್ಯ ಸಂಬಂಧದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯನ್ನು ಅತ್ಯಂತ ಆಘಾತಕಾರಿಯಾಗಿಸುವ ವಿಚಾರ ಏನೆಂದರೆ, ಸಾಮಾನ್ಯ ವಸ್ತುಗಳು ಮತ್ತು ಜನಪ್ರಿಯ ಆ್ಯಪ್‌ಗಳನ್ನು ಹೇಗೆ ಭಾರತದ ಹೃದಯವಾದ ದೆಹಲಿಯಲ್ಲಿ ಕೋಲಾಹಲ ಸೃಷ್ಟಿಸಲು ಬಳಸಲಾಯಿತು ಎನ್ನುವುದು.

ಕಣ್ಣ ಮುಂದಿದ್ದರೂ ಬಚ್ಚಿಟ್ಟುಕೊಳ್ಳಬಲ್ಲ ಸ್ಫೋಟಕಗಳು

ದೆಹಲಿಯಲ್ಲಿ ನಡೆದ ಸ್ಫೋಟದ ಹಿಂದೆ ಒಂದು ಎಎನ್ಎಫ್ಒ ಬಾಂಬ್ ಇತ್ತು. ಎಎನ್ಎಫ್ಒ ಬಾಂಬನ್ನು ಅಮೋನಿಯಂ ನೈಟ್ರೇಟ್ ಮತ್ತು ಇಂಧನ ತೈಲವನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇದನ್ನು ಓದುವಾಗ, ಅಮೋನಿಯಂ ನೈಟ್ರೇಟ್ ಎನ್ನುವುದು ಯಾವುದೋ ಸಂಕೀರ್ಣ ರಾಸಾಯನಿಕ ಎನ್ನುವಂತೆ ತೋರಬಹುದು. ಆದರೆ, ವಾಸ್ತವವಾಗಿ, ಅಮೋನಿಯಂ ನೈಟ್ರೇಟ್ ಎನ್ನುವುದು ರೈತರು ತಮ್ಮ ದೈನಂದಿನ ಕಾರ್ಯಗಳಲ್ಲಿ ಬಳಸುವಂತಹ ಸಾಮಾನ್ಯ ರಸಗೊಬ್ಬರ! ಇಂಧನ ತೈಲದೊಡನೆ ಮಿಶ್ರಗೊಂಡಾಗ, ಈ ಅಮೋನಿಯಂ ನೈಟ್ರೇಟ್ ಸ್ಫೋಟಕವಾಗಿ ಪರಿವರ್ತನೆಗೊಂಡು, ಅನಾಹುತಕಾರಿ ಆಗುತ್ತದೆ.

ಹರಿಯಾಣದ ಫರೀದಾಬಾದ್‌ನಲ್ಲಿ ಒಂದು ದಾಳಿಯ ವೇಳೆ, ಪೊಲೀಸರಿಗೆ ಎರಡು ಮನೆಗಳಲ್ಲಿ ಅಂದಾಜು 3,000 ಕೆಜಿಗಳಷ್ಟು ಸ್ಫೋಟಕಗಳು ಲಭಿಸಿದ್ದವು. ಅದರೊಡನೆ, ಕೆಂಪು ಕೋಟೆಯ ದಾಳಿಯಲ್ಲಿ ಬಳಸಲಾದ ಅದೇ ಅಮೋನಿಯಂ ನೈಟ್ರೇಟ್ 350 ಕೆಜಿಗಳಷ್ಟು ಲಭಿಸಿತ್ತು. ಇಷ್ಟು ಪ್ರಮಾಣದ ಸ್ಫೋಟಕಗಳು ಹಲವಾರು ಅನಾಹುತಕಾರಿ ದಾಳಿಗಳನ್ನು ನಡೆಸಲು ಸಾಕಾಗುವಷ್ಟಿತ್ತು. ದಾಳಿಯ ವೇಳೆ ಪತ್ತೆಹಚ್ಚಲಾದ ಸ್ಫೋಟಕಗಳ ಅಪಾರ ಪ್ರಮಾಣವೇ ಯಾರ ಕಣ್ಣಿಗೂ ಬೀಳದಂತೆ ಅದು ಹೇಗೆ ಇಷ್ಟೊಂದು ಅಗಾಧ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಡಲಾಯಿತು ಎಂಬ ಅನುಮಾನಗಳನ್ನು ಮೂಡಿಸಿದೆ.

ಘೋರ ಕತ್ಯದ ಹಿಂದಿರುವ ಮಾನವ ಕೈವಾಡ

ಗುಪ್ತಚರ ಮೂಲಗಳ ಪ್ರಕಾರ, ಕೆಂಪು ಕೋಟೆಯ ದಾಳಿಯಲ್ಲಿ ನಾಲ್ವರು ಭಯೋತ್ಪಾದಕರು ಭಾಗಿಗಳಾಗಿದ್ದಾರೆ. ಅವರಲ್ಲಿ ಮೂವರು ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದು, ಅವರೆಲ್ಲರೂ ತಾವು ವೈದ್ಯರು ಎಂದು ಹೇಳಿಕೊಂಡಿದ್ದರು. ಈ ಮಾಹಿತಿಯೇ ನಿಜಕ್ಕೂ ಆಘಾತಕಾರಿಯಾಗಿದೆ. ವೈದ್ಯರನ್ನು ಸಮಾಜ ಆರೋಗ್ಯ ಮತ್ತು ನಂಬಿಕೆಯ ಪ್ರತೀಕ ಎಂಬಂತೆ ಪರಿಗಣಿಸುತ್ತದೆ. ಈ ಉದಾತ್ತ ವೃತ್ತಿಯನ್ನೇ ಗುರಾಣಿಯಾಗಿ ಬಳಸಿಕೊಂಡು, ಭಯೋತ್ಪಾದಕ ಗುಂಪುಗಳು ವೈದ್ಯಕೀಯ ಸಿಬ್ಬಂದಿಗಳ ಮೇಲಿನ ನಮ್ಮ ನಂಬಿಕೆಯನ್ನೇ ಹೇಗೆ ದುರುಪಯೋಗ ಪಡಿಸುತ್ತಾರೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಮೂರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ: ಆದಿಲ್ ಅಹ್ಮದ್ ರಾಥರ್, ಮುಜಮ್ಮಿಲ್ ಶಕೀಲ್, ಮತ್ತು ಶಹೀನಾ ಶಾಹಿದ್ ಬಂಧಿತರು. ನಾಲ್ಕನೇ ವ್ಯಕ್ತಿಯಾದ, ಉಮರ್ ಮೊಹಮ್ಮದ್ ಎಂಬಾತ ಈ ಸ್ಫೋಟದಲ್ಲೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಫೊರೆನ್ಸಿಕ್ ಸಾಕ್ಷಿಗಳೂ ಸಹ ಬಾಂಬ್ ಸ್ವಯಂಚಾಲಿತವಾಗಿ ಸ್ಫೋಟಿಸಿಲ್ಲ ಎಂದು ತೋರಿಸಿದ್ದು, ಅದನ್ನು ಮಾನವರೇ ಡೆಟೊನೇಟ್ ಮಾಡಿದ್ದಾರೆ ಎಂದಿವೆ. ಸಿಸಿಟಿವಿ ದೃಶ್ಯಾವಳಿಗಳೂ ಸಹ ಆ ಸೋಮವಾರ ಬೆಳಗ್ಗೆ ದೆಹಲಿಗೆ ಪ್ರವೇಶಿಸಿದ ಬಳಿಕ ಕಾರಿನಿಂದ ಕೆಳಗೆ ಇಳಿದಿಲ್ಲ ಎನ್ನುವುದನ್ನು ಸಾಬೀತುಪಡಿಸಿವೆ.

ಸಂದೇಶ ರವಾನಿಸುವ ಆ್ಯಪ್ ಭಯೋತ್ಪಾದನೆಯ ಆಯುಧವಾದಾಗ!

ಉಮರ್ ಮೊಹಮ್ಮದ್ ಯೋಜನೆ ರೂಪಿಸಲು ಮತ್ತು ಸಂವಹನ ನಡೆಸಲು ಟೆಲಿಗ್ರಾಮ್ ಆ್ಯಪ್ ಬಳಸುವ ಮೂಲಭೂತವಾದಿ ವೈದ್ಯರ ಗುಂಪಿನ ಸದಸ್ಯನಾಗಿದ್ದ. ಜೆಇಎಂ ಭಯೋತ್ಪಾದಕ ಗುಂಪಿನೊಡನೆ ಸಂಬಂಧ ಹೊಂದಿರುವ ಆರೋಪದಲ್ಲಿ ಆತನ ಇಬ್ಬರು ಸಹಯೋಗಿಗಳು ಬಂಧನಕ್ಕೊಳಗಾದ ಸುದ್ದಿ ತಿಳಿದು, ಗಾಬರಿಗೊಂಡ ಉಮರ್ ಮೊಹಮ್ಮದ್ ಸ್ಫೋಟ ನಡೆಸಿದ್ದಾನೆ ಎನ್ನಲಾಗಿದೆ.

ನಮ್ಮಲ್ಲಿ ಬಹುತೇಕ ಜನರಿಗೆ ಟೆಲಿಗ್ರಾಮ್ ಆ್ಯಪ್ ಎನ್ನುವುದು ಸ್ನೇಹಿತರೊಡನೆ ಸಂದೇಶ ಕಳುಹಿಸಲು, ಮತ್ತು ಆಸಕ್ತಿಯುತ ಗುಂಪುಗಳಿಗೆ ಸೇರಲು ಇರುವ ಒಂದು ಅ್ಯಪ್ ಅಷ್ಟೇ. ಆದರೆ ಭಯೋತ್ಪಾದಕರು ಅದರಲ್ಲೂ ಇನ್ನೊಂದು ಆಯಾಮವನ್ನು ಕಂಡುಕೊಂಡಿದ್ದಾರೆ. ಈ ಆ್ಯಪಿನ ಸರಳ ವಿನ್ಯಾಸ, ಸಾರ್ವಜನಿಕ ಚಾನೆಲ್‌ಗಳು, ಮತ್ತು ಪ್ರಬಲವಾದ ಎನ್‌ಕ್ರಿಪ್ಷನ್ ವ್ಯವಸ್ಥೆಗಳು ಟೆಲಿಗ್ರಾಮ್ ಅನ್ನು ಜಗತ್ತಿನಾದ್ಯಂತ ಜನಪ್ರಿಯವಾಗಿಸಿವೆ. ಆದರೆ, ಇದೇ ವೈಶಿಷ್ಟ್ಯಗಳು ಅಪರಾಧ ಚಟುವಟಿಕೆಗಳಿಗೂ ಟೆಲಿಗ್ರಾಮ್ ಆ್ಯಪನ್ನು ಆಕರ್ಷಕವಾಗಿಸಿವೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರಂತಹ ಟೆಲಿಗ್ರಾಮ್ ಬಳಕೆದಾರರು ಆ ಆ್ಯಪನ್ನು ರಷ್ಯಾ ದಾಳಿಯ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸುವಂತಹ ಸಕಾರಾತ್ಮಕ ಉದ್ದೇಶಗಳಿಗೆ ಬಳಸಿಕೊಂಡರೆ, ಈಗ ಭಯೋತ್ಪಾದನೆ, ಅಪರಾಧ, ಸುಳ್ಳು ಸುದ್ದಿ ಹಬ್ಬಿಸುವುದು, ಮತ್ತು ದ್ವೇಷ ಭಾಷಣಗಳಿಗೂ ಟೆಲಿಗ್ರಾಮ್ ಬಳಕೆಯಾಗುತ್ತಿದೆ.

Delhi car blast incident (file photo)
ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)

ಮಹಿಳಾ ವಿಭಾಗ: ಒಂದು ಹೊಸ ಅಪಾಯ

ತನಿಖಾಧಿಕಾರಿಗಳ ಪ್ರಕಾರ, ಬಂಧಿತ ಶಹೀನಾ ಶಾಹಿದ್ ಜೆಇಎಂನ ಭಾರತೀಯ ಕಾರ್ಯಾಚರಣೆಯ ಮಹಿಳಾ ವಿಭಾಗವಾದ ಜಮಾತ್ ಉಲ್ ಮುಮಿನತ್ ಎಂಬುದರ ಮುಖ್ಯಸ್ಥೆ ಎಂದು ಭಾವಿಸಿದ್ದಾರೆ. ಈ ಮಹಿಳಾ ವಿಭಾಗವನ್ನು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ, 2025ರ ಆಗಸ್ಟ್ ತಿಂಗಳಲ್ಲಿ ಸ್ಥಾಪಿಸಲಾಯಿತು ಎನ್ನಲಾಗಿದೆ. ಈ ಗುಂಪಿಗೆ ಮಸೂದ್ ಅಜ಼ರ್ ಸೋದರಿಣ ಸಾದಿಯಾ ಅಜ಼ರ್‌ಳನ್ನು ಮುಖ್ಯಸ್ಥೆಯಾಗಿಸಲಾಗಿತ್ತು. ಈಗ ಆಕೆ ತನ್ನ ಸೋದರಿ ಸಾದಿಯಾ ಅಜ಼ರ್ ಜೊತೆಗೂಡಿ, ಮಹಿಳೆಯರ ಮೇಲೆ ಪ್ರಭಾವ ಬೀರಲು ಮತ್ತು ಮಹಿಳಾ ಭಯೋತ್ಪಾದಕರನ್ನು ನೇಮಕಗೊಳಿಸಲು 40 ನಿಮಿಷಗಳ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದಾಳೆ ಎನ್ನಲಾಗಿದೆ.

ಇದು ಭಯೋತ್ಪಾದನಾ ಕಾರ್ಯತಂತ್ರಗಳಲ್ಲಿ ಅಪಾಯಕಾರಿ ಪ್ರಗತಿಯನ್ನು ಪ್ರತಿನಿಧಿಸುತ್ತಿದೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ನೇಮಕಾತಿ ನಡೆಸುವುದರಿಂದ, ಈ ಗುಂಪುಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿನ ಜನಸಂಖ್ಯೆಯತ್ತ ವಿಸ್ತರಿಸುತ್ತಿವೆ. ಸಾಂಪ್ರದಾಯಿಕವಾಗಿ ಮಹಿಳೆಯರನ್ನು ತನಿಖಾ ಸಂಸ್ಥೆಗಳು ಗಂಭೀರ ಅಪಾಯ ಎಂದು ಪರಿಗಣಿಸಿ ವಿಚಾರಣೆ ನಡೆಸುತ್ತಿರಲಿಲ್ಲ.

ಕೆಂಪು ಕೋಟೆಯ ದಾಳಿ ಭಯೋತ್ಪಾದಕರು ಹೇಗೆ ಆಧುನಿಕ ಸಮಯಕ್ಕೆ ಹೊಂದಿಕೊಳ್ಳುತ್ತಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಅವರು ಈಗ ಸಾಮಾನ್ಯ ರಾಸಾಯನಿಕಗಳನ್ನು ಆಯುಧವಾಗಿ, ನಂಬಿಕಾರ್ಹ ವೃತ್ತಿಯಲ್ಲಿರುವವರನ್ನು ಗುರಾಣಿಯಾಗಿ, ಮತ್ತು ಜನಪ್ರಿಯ ಆ್ಯಪ್‌ಗಳನ್ನು ಸಂವಹನ ಮತ್ತು ಸಂಯೋಜನೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅತ್ಯಂತ ಪರಿಣಾಮಕಾರಿ ಭಯೋತ್ಪಾದನಾ ನಿಗ್ರಹ ವಿಧಾನವೆಂದರೆ ಕೇವಲ ಭೌತಿಕ ರಕ್ಷಣಾ ವ್ಯವಸ್ಥೆ ಮಾತ್ರವಲ್ಲ. ಅದರೊಡನೆ, ಜಾಗೃತಿ ಮೂಡಿಸುವುದೂ ಅತ್ಯಂತ ಮುಖ್ಯವಾಗಿದೆ. ಪ್ರತಿದಿನ ಬಳಸುವ ವಸ್ತುಗಳನ್ನು ಯಾವ ರೀತಿಯಲ್ಲಿ ದುರ್ಬಳಕೆ ಮಾಡಬಹುದು ಎನ್ನುವ ಅರಿವು ಮುಂದಿನ ದಾಳಿಗಳನ್ನು ತಡೆಯುವತ್ತ ಮೊದಲ ಹೆಜ್ಜೆ. ನಾಗರಿಕರಾದ ನಾವು ಸದಾ ಜಾಗೃತರಾಗಿದ್ದು, ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡುವುದು ದೇಶವನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯೂ ಹೌದು.

Delhi car blast incident (file photo)
ಮರುಕಳಿಸಿದ ಇತಿಹಾಸ: ನವದೆಹಲಿಯತ್ತ ಸ್ನೇಹ ಹಸ್ತ ಚಾಚಿದ ಕಾಬೂಲ್ (ಜಾಗತಿಕ ಜಗಲಿ)

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com