ತಾಲಿಬಾನ್ ಜತೆ ಭಾರತದ ಸ್ನೇಹ - ಮಾಸ್ಟರ್ ಸ್ಟ್ರೋಕಾ, ಮರಳುತನವಾ? (ತೆರೆದ ಕಿಟಕಿ)

ಅಮೆರಿಕದ ಸೇನೆ ಅಫಘಾನಿಸ್ತಾನದಲ್ಲಿದ್ದಷ್ಟು ದಿನ ಅಲ್ಲಿ ಯಾವ ಸರ್ಕಾರವಿತ್ತೋ ಅದರೊಂದಿಗೆ ಭಾರತದ ಬಾಂಧವ್ಯ ಉತ್ತಮ ಸ್ಥಿತಿಯಲ್ಲಿತ್ತು. ಆಗಿನ ಅಧಿಕಾರಸ್ಥರು ಪಾಕಿಸ್ತಾನವನ್ನು ದೂಷಿಸಿ ಭಾರತವನ್ನು ಗೌರವಿಸುತ್ತಿದ್ದರು.
former EAM with Taliban and EAM with S jaishankar with taliban leader
ತಾಲಿಬಾನ್ ಜೊತೆ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ಹಾಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ online desk
Updated on

ಅಫಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ಭಾರತದ ಅಧಿಕೃತ ರಾಜತಾಂತ್ರಿಕತೆ ಶುರುವಾಗಿದೆ. ಅತ್ತ, ಕೆಲವೇ ತಿಂಗಳುಗಳ ಹಿಂದಿನವರೆಗೆ ಯಾವ ಪಾಕಿಸ್ತಾನವು ಅಲ್ಲಿನ ತಾಲಿಬಾನ್ ಆಡಳಿತಕ್ಕೆ ಪರಮಾಪ್ತವಾಗಿತ್ತೋ ಅದರ ಜತೆಗೆ ಸಶಸ್ತ್ರ ಸಂಘರ್ಷದವರೆಗೆ ಪರಿಸ್ಥಿತಿ ಬಿಗಡಾಯಿಸಿದೆ. ಇತ್ತ, ದೆಹಲಿಯಲ್ಲಿ ತಾಲಿಬಾನ್ ವಿದೇಶ ಸಚಿವ ನಡೆಸಿದ ಪತ್ರಿಕಾಗೋಷ್ಟಿಗಳು ಸಹ ಸುದ್ದಿಯಾಗುತ್ತಿವೆ. ಮೊದಲ ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಪತ್ರಕರ್ತರಿಗೆ ಆಹ್ವಾನವೇ ಇರಲಿಲ್ಲ. ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಲೇ ಮಹಿಳೆಯರನ್ನೂ ಆಹ್ವಾನಿಸಿ ಪತ್ರಿಕಾಗೋಷ್ಟಿ ನಡೆಸಿ, ಪ್ರಶ್ನೆಗಳಿಗೂ ಉತ್ತರಿಸಿದ ತಾಲಿಬಾನ್ ಸಚಿವ ಅಮೀರ್ ಕಾನ್ ಮುತ್ತಾಕಿ ‘ಮೊದಲ ಪತ್ರಿಕಾಗೋಷ್ಟಿಯಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯರನ್ನೇನೂ ಹೊರಗಿರಿಸಿರಲಿಲ್ಲ’ ಎಂದಿದ್ದಾರೆ. ಈ ಸಮರ್ಥನೆ ಒಪ್ಪುವುದು-ಬಿಡುವುದು ಹಾಗಿರಲಿ, ಭಾರತದ ಜತೆಗಿನ ಬಾಂಧವ್ಯಕ್ಕೆ ಹಲವು ಬಗೆಯ ಅಡ್ಜೆಸ್ಟ್ಮೆಂಟ್ ಗಳಿಗೆ ತಾಲಿಬಾನ್ ಸಿದ್ಧವಿದೆ ಎಂಬುದಂತೂ ತಿಳಿಯುತ್ತದೆ.

ಆದರೆ, ಹೀಗೆಲ್ಲ ಬದಲಾಗುತ್ತಿರುವ ಸಮೀಕರಣದ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಮುಖ್ಯವಾಗಿ, ಎರಡು ವಿಪರೀತ ನಿಲುವಿನ ಅಭಿಪ್ರಾಯಗಳು ಜನರ ಮನಸ್ಸಿನಲ್ಲಿವೆ. ಮೊದಲನೆಯವರು - “ನೋಡಿ..ತಾಲಿಬಾನನ್ನು ಪಾಕಿಸ್ತಾನದ ವಿರುದ್ಧವೇ ಎತ್ತಿಕಟ್ಟಿ ಮೋದಿ ಸರ್ಕಾರವು ಅದೆಂತ ಮಾಸ್ಟರ್ ಸ್ಟ್ರೋಕ್ ಕೊಟ್ಟುಬಿಟ್ಟಿದೆ” ಎಂಬರ್ಥದಲ್ಲಿ ಮಾತನಾಡುತ್ತಾರೆ. ಎರಡನೆಯವರು- “ಭಾರತಕ್ಕೆ ನೈತಿಕತೆ ಏನು ಉಳಿಯಿತು? ಮುಸ್ಲಿಂ ಮತಾಂಧರ ಜತೆ ಕೈಕುಲುಕುವದರಿಂದ ಸಿಗುವ ಲಾಭವಾದರೂ ಏನು? ದೇವಬಂದ್ ಥರದ ಇಲ್ಲಿನ ಮುಸ್ಲಿಂ ಸಂಸ್ಥೆಯೊಂದಿಗೆ ಬೆರೆತು ಸಂಭ್ರಮಿಸುವುದಕ್ಕೆ ತಾಲಿಬಾನಿ ಸಚಿವರಿಗೇಕೆ ಅವಕಾಶ ಕೊಡಬೇಕಿತ್ತು” ಎಂದು ಕೇಳುತ್ತಾರೆ. ಸಾಹಿತಿ ಜಾವೆದ್ ಅಖ್ತರ್ “ತಾಲಿಬಾನಿಗೆ ಭಾರತದಲ್ಲಿ ಸಿಕ್ಕ ಸ್ವಾಗತ ತಲೆತಗ್ಗಿಸುವಂತೆ ಮಾಡಿದೆ” ಎಂದಿದ್ದಾರೆ.

ಹಾಗೆ ನೋಡಿದರೆ ಇದು ಯಾವ ‘ಮಾಸ್ಟರ್ ಸ್ಟ್ರೋಕ್’ ಅಲ್ಲ, ಅಫಘಾನಿಸ್ತಾನದ ಬಗ್ಗೆ ಭಾರತದ ನೀತಿಯ ಸಂಪೂರ್ಣ ತಿರುವುಮುರುವೂ ಅಲ್ಲ. ತಾಲಿಬಾನಿಗಳು ಬಾಮಿಯಾನ ಬುದ್ಧ ಪ್ರತಿಮೆಯನ್ನು ಉರುಳಿಸಿದ್ದು, ಭಾರತದ ವಿಮಾನ ಅಪಹರಣವಾದಾಗ ಕಂದಹಾರಿನಲ್ಲಿ ಜಾಗ ಕೊಟ್ಟದ್ದು, ಅಮೆರಿಕ ಸೇನೆ ಹಿಂದಕ್ಕೆ ಹೋಗುತ್ತಿದ್ದಾಗ ಅವರು ಸೃಷ್ಟಿಸಿದ ವಿಧ್ವಂಸ ಇಂಥ ಹಲವು ಚಿತ್ರಗಳನ್ನು ಮಾತ್ರವೇ ಕಣ್ಣೆದುರಿಗೆ ಇರಿಸಿಕೊಂಡಿರುವುದರಿಂದ ನಮಗೆ ಕೆಲವು ನಿರ್ದಿಷ್ಟ ಅಭಿಪ್ರಾಯಗಳಿವೆ. ವಾಸ್ತವ ಏನೆಂದರೆ, ಅಫ್ಗಾನಿಸ್ತಾನದಲ್ಲಿ ಯಾವ ಗುಂಪೇ ಅಧಿಕಾರಕ್ಕೆ ಕುಳಿತುಕೊಳ್ಳಲಿ ಅವರೊಂದಿಗೆ ಸಾಧ್ಯವಾದ ವ್ಯಾಪ್ತಿಯಲ್ಲಿ ಸಂಪರ್ಕ ಇರಿಸಿಕೊಂಡು ದೇಶದ ಹಿತಾಸಕ್ತಿ ಸಾಧಿಸಿಕೊಳ್ಳುತ್ತೇವೆ ಎಂಬುದು ಭಾರತದ ಲಾಗಾಯ್ತಿನ ನಿಲವು. ಇದನ್ನು ಈಡೇರಿಸಿಕೊಳ್ಳಲಾಗದ ಸ್ಥಿತಿ ಇತಿಹಾಸದಲ್ಲಿ ಹಲವು ಬಾರಿ ಬಂದಿರುವುದು ಹೌದಾದರೂ, ಪ್ರತಿಕೂಲವಾಗಿದ್ದ ಪರಿಸ್ಥಿತಿ ಬದಲಾಗಿ ಹೋಗಿದ್ದನ್ನು ಸಹ ಚರಿತ್ರೆ ತೋರಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಫ್ಗಾನಿಸ್ತಾನಗಳ ನಡುವಿನ ಸಂಬಂಧದ ಸಂಕ್ಷಿಪ್ತ ಇತಿಹಾಸ ಹಾಗೂ ಅದರಲ್ಲಿ ಪಾಕಿಸ್ತಾನದ ಪ್ರಭಾವ ಇವನ್ನೆಲ್ಲ ಒಮ್ಮೆ ಗಮನಿಸೋಣ.

former EAM with Taliban and EAM with S jaishankar with taliban leader
ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)

ಅಫಘಾನಿಸ್ತಾನಕ್ಕೆ ಪಾಕಿಸ್ತಾನವೇ ಪ್ರಾರಂಭದಿಂದಲೂ ವೈರಿ

ವಸಾಹತು ಕಾಲಘಟ್ಟದಲ್ಲಿ ಬ್ರಿಟಿಷರು ಸಹ ಅಫಘಾನಿಸ್ತಾನವನ್ನು ಗೆಲ್ಲುವುದಕ್ಕೆ ಪ್ರಯತ್ನಿಸಿದರಾದರೂ ಅದನ್ನು ದೀರ್ಘಾವಧಿಗೆ ಸಂಬಾಳಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ಬಹಳ ಬೇಗ ಅರ್ಥವಾದದ್ದರಿಂದ ಅದನ್ನೊಂದು ಬಫರ್ ಜೋನ್ ಎಂಬಂತೆ ಬಿಟ್ಟರು. ಅವತ್ತಿನ ಸೋವಿಯತ್ ರಷ್ಯದ ಪ್ರಭಾವವು ಭಾರತ ಪ್ರವೇಶಿಸದಂತೆ ನಡುವಿನಲ್ಲಿ ಅಫಘಾನಿಸ್ತಾನವಿರಲೆಂಬುದು ಅವರ ಲೆಕ್ಕಾಚಾರವಾಗಿತ್ತು. ಹೀಗೆ ಮಾಡುವಾಗ ಅವರು ಅವತ್ತಿನ ಅವಿಭಜಿತ ಭಾರತ ಹಾಗೂ ಇವತ್ತಿನ ಪಾಕಿಸ್ತಾನದ ಬಲೊಚಿಸ್ತಾನ ಮತ್ತು ವಾಯವ್ಯ ಪಶ್ತೂನ್ ಪ್ರಾಂತ್ಯಗಳನ್ನು ಇತ್ತಲೇ ಗುರುತಿಸಿ ನಕಾಶೆಯ ಮೇಲೆ ಡುರಾಂಡ್ ಗೆರೆ ಎಳೆದರು. ಈ ಬುಡಕಟ್ಟು ಪ್ರದೇಶಗಳು ತನಗೇ ಸೇರಬೇಕು ಎಂಬುದು ಅವತ್ತಿನಿಂದಲೂ ಅಫಘಾನಿಸ್ತಾನದ ಪ್ರತಿಪಾದನೆ. ನಂತರ ಬಂದ ಮುಜಾಹಿದೀನ್, ತಾಲಿಬಾನ್ ಯಾರೂ ಈ ರೇಖೆಯನ್ನು ಒಪ್ಪಿಕೊಂಡಿಲ್ಲ. ಬ್ರಿಟಿಷರು ದೇಶ ವಿಭಜನೆ ನಂತರ ಭಾರತವನ್ನು ಬಿಟ್ಟು ಹೋಗಿದ್ದರಿಂದ ಈ ಗಡಿ ತಕರಾರು ಪಾಕಿಸ್ತಾನಕ್ಕೆ ಅಂಟಿಕೊಂಡಿತು.

ಆದರೆ ಅಲ್ಲಿನ ರಾಜ ಜಹೀರ್ ಶಾ, ಗಡಿಯ ಬಗ್ಗೆ ತಕರಾರು ಇರಿಸಿಕೊಂಡೇ, ಪಾಕಿಸ್ತಾನ ಮತ್ತು ಭಾರತಗಳೆರಡರೊಂದಿಗೂ ಉತ್ತಮ ಸ್ನೇಹವನ್ನೇ ಇರಿಸಿಕೊಂಡು ಬಂದ. ಪಾಕಿಸ್ತಾನದ ಪಾಲಿಗೆ ಈ ಪರಿಸ್ಥಿತಿ ಬದಲಾಗಿದ್ದು ಮೊಹಮದ್ ದಾವೂದ್ ಖಾನ್ ಎಂಬ ಕಮ್ಯುನಿಸ್ಟ್ ವಿಚಾರಧಾರೆ ವ್ಯಕ್ತಿ ಈ ರಾಜಾಡಳಿತದ ನಡು-ನಡುವೆ ಅಧಿಕಾರಕ್ಕೆ ಬಂದಾಗಿನ ಸಂದರ್ಭದಲ್ಲಿ. ಆತ ಪಶ್ತೂನ್ ಬುಡಕಟ್ಟಿಗೆ ಸೇರಿದ್ದ ನೆಲವನ್ನೆಲ್ಲ ಪಾಕಿಸ್ತಾನವು ಅಫಘಾನಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಪ್ರಬಲವಾಗಿ ಪ್ರತಿಪಾದಿಸಿದ.

ಕಮ್ಯುನಿಸ್ಟ್ ನೇತಾರನಿಗಿತ್ತು ಭಾರತದ ಬೆಂಬಲ!

ಕೌಟಿಲ್ಯನ ಚಿಂತನೆಯಂತೆ ಶತ್ರುವಿನ ಶತ್ರು ನಿನಗೆ ಮಿತ್ರನಾಗುತ್ತಾನೆ. ಹಾಗೆಂದೇ ಇಲ್ಲಿ ಯಾವ ಸೈದ್ಧಾಂತಿಕ ಬಿಕ್ಕಟ್ಟೂ ಇರಲಿಲ್ಲ. 1953-63ರ ಅವಧಿಯಲ್ಲಿ ದಾವೂದ್ ಕೈಯಲ್ಲಿ ಅಧಿಕಾರವಿದ್ದಾಗ ಆತ ಪಾಕಿಸ್ತಾನದ ಬುಡಕಟ್ಟು ಪ್ರಾಂತ್ಯಗಳಲ್ಲಿ ಅರಾಜಕತೆಯನ್ನೇ ಸೃಷ್ಟಿಸಿದ್ದ. ಆತನಿಂದ ಜಹೀರ್ ಶಾ ಮತ್ತೆ ಅಧಿಕಾರ ಮರಳಿ ಪಡೆದನಾದರೂ 1973ರಲ್ಲಿ ಮತ್ತೆ ದಾವೂದ್ ಪೂರ್ಣವಾಗಿ ಜಹೀರನ ರಾಜಸತ್ತೆಯನ್ನು ಪಕ್ಕ ಸರಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದ. ಭಾರತದ ಜತೆಗೆ ಬಾಂಧವ್ಯ ಹಾಗೂ ಪಾಕಿಸ್ತಾನಕ್ಕೆ ಪ್ರಹಾರ ಎಂಬೆರಡು ನೀತಿಗಳೇ ಈತನ ಆಡಳಿತದ ಮುಖ್ಯಾಂಶಗಳಾಗಿದ್ದವು. ಪಾಕಿಸ್ತಾನವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ಅತ್ತಲಿನಿಂದ ಭಾರತ ಹಾಗೂ ರಷ್ಯಗಳೆರಡೂ ಅದರ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಿಕೆ ಕೊಡುವಷ್ಟರಮಟ್ಟಿಗೆ ದಾವೂದ್ ಭಾರತದ ಜತೆ ಸಂಬಂಧ ಮುಕ್ತವಾಗಿರಿಸಿಕೊಂಡಿದ್ದ. 1975ರಲ್ಲಿ ದಾವೂದ್ ದೆಹಲಿಗೆ ಭೇಟಿ ನೀಡಿ ಭಾರತ ಮತ್ತು ಅಫಘಾನಿಸ್ತಾನಗಳ ನಡುವೆ ಮಿಲಿಟರಿ ಸಹಕಾರಕ್ಕೆ ಸಹ ನಾಂದಿ ಹಾಡಿದ.

ಆದರೆ 1978ರ ವೇಳೆಗೆ ಅಫಘಾನಿಸ್ತಾನದಲ್ಲಿ ಅಧಿಕಾರ ಬೇರೆಯವರಿಗೆ ಸಿಕ್ಕಿ, ದಾವೂದನನ್ನು ಮರಣದಂಡನೆಗೆ ಹಾಕಲಾಯಿತು. ಇದು ಭಾರತದ ರಾಜತಾಂತ್ರಿಕತೆಯ ಪಾಲಿಗೆ ಆಘಾತದ ವಿಷಯವೇ ಆಗಿತ್ತು. 1979ರ ವೇಳೆಗೆ ಅಫಘಾನಿಸ್ತಾನದ ಅಧಿಕಾರ ಸೂತ್ರವನ್ನು ಪರೋಕ್ಷವಾಗಿ ತನ್ನ ಕೈಗೆ ತೆಗೆದುಕೊಳ್ಳುವುದಕ್ಕೆ ಮುಂದಾದ ಅವತ್ತಿನ ಸೋವಿಯತ್ ರಷ್ಯ, ಈ ಬಗ್ಗೆ ಭಾರತದ ಬೆಂಬಲ ಕೇಳಿತ್ತೆಂಬುದಕ್ಕೂ ಈಗ ದಾಖಲೆಗಳು ಲಭ್ಯ ಇವೆ. ಆದರೆ, ಅಲಿಪ್ತ ನೀತಿಯಲ್ಲಿ ಗುರುತಿಸಿಕೊಂಡ ತಾನು ಬಹಿರಂಗವಾಗಿ ಹಸ್ತಕ್ಷೇಪದಲ್ಲಿ ಭಾಗಿಯಾಗಲಾರೆ ಎಂದು ಆಗಿನ ಚರಣ್ ಸಿಂಗ್ ಸರ್ಕಾರ ಹೇಳಿತ್ತು.

ನಜೀಬುಲ್ಲ ವರ್ಸಸ್ ಮುಜಾಹಿದೀನ್

ಎಂಬತ್ತರ ದಶಕದಲ್ಲಿ ಅಫಘಾನಿಸ್ತಾನದಲ್ಲಿ ಸೋವಿಯತ್ ಪೋಷಿತ ಕಮ್ಯುನಿಸ್ಟ್ ಸರ್ಕಾರವಿದ್ದರೆ, ಅದರಿಂದ ಅಧಿಕಾರ ಕಸಿದುಕೊಳ್ಳಲು ಶಸ್ತ್ರ ಹಿಡಿದಿದ್ದ ಮುಜಾಹಿದೀನ್ ಪಡೆ ಪಾಕಿಸ್ತಾನ ಹಾಗೂ ಅಮೆರಿಕಗಳ ಸೃಷ್ಟಿಯಾಗಿತ್ತು. 1986ರ ವೇಳೆಗೆ ಅದಾಗಲೇ ಇಂಟಲಿಜೆನ್ಸ್, ರಾಯಭಾರಗಳಲ್ಲೆಲ್ಲ ಸೋವಿಯತ್ ನಿಗಾದಲ್ಲಿ ದುಡಿದಿದ್ದ ಮೊಹಮದ್ ನಜಿಬುಲ್ಲನ ಕೈಗೆ ಅಫ್ಗನ್ನಿನ ಅಧಿಕಾರ ಚುಕ್ಕಾಣಿ ಬರುತ್ತದೆ. ಆದರೆ, ಫೆಬ್ರವರಿ 1989ರ ವೇಳೆಗೆ ಅಫಘಾನಿಸ್ತಾನದ ನೆಲದಿಂದ ಸೋವಿಯತ್ ಪಡೆ ಹಿಂದಕ್ಕೆ ಹೋದಾಗ ಅಲ್ಲಿನ ನಜೀಬುಲ್ಲಾ ಆಡಳಿತವು ಆಹಾರ, ಸುರಕ್ಷತೆ ಇತ್ಯಾದಿ ವಿಷಯಗಳಿಗೆ ಭಾರತದ ಸಹಾಯ ಕೇಳಿತು. ಭಾರತವು ಆಗ ಮಾನವೀಯ ನೆರವಿನ ಹೆಸರಲ್ಲಿ ಹಲವು ಸಹಾಯಗಳನ್ನೂ ಮಾಡಿತು. ಯಾವಾಗ ಸೋವಿಯತ್ ಒಕ್ಕೂಟ ಒಡೆದು ಹೋಯಿತೋ ಆಗ ನಜೀಬುಲ್ಲ ಸರ್ಕಾರಕ್ಕೆ ಹಣದ ಹರಿವು ನಿಂತು, ಅಧಿಕಾರ ಉಳಿಸಿಕೊಳ್ಳುವುದಕ್ಕೆ ಕಷ್ಟವಾಯಿತು. ಮುಜಾಹಿದೀನ್ ಪಡೆ ಪ್ರವರ್ಧಮಾನಕ್ಕೆ ಬಂದಿತು. ತನ್ನ ಪತನ ಸಮೀಪಿಸುತ್ತಿರುವುದು ಅರಿವಾಗುತ್ತಲೇ ನಜೀಬುಲ್ಲ ಮೊದಲಿಗೆ ತನ್ನ ಕುಟುಂಬವನ್ನು ಭಾರತದ ಆಶ್ರಯಕ್ಕೆ ಕಳುಹಿಸಿದ. ನಜೀಬುಲ್ಲನನ್ನು ಸಹ ಭಾರತದ ರಾಯಭಾರ ಕಚೇರಿಯು ಏರ್ಲಿಫ್ಟ್ ಮಾಡುವುದರಲ್ಲಿತ್ತು. ಆದರೆ ಮಾರ್ಗಮಧ್ಯದಲ್ಲಿ ನಜೀಬುಲ್ಲ ಮುಜಾಹಿದೀನ್ ಗಳಿಗೆ ಸೆರೆಯಾದ. ಮುಂದೆ 1996ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಆತನನ್ನು ಹಿಂಸಿಸಿ ಹತ್ಯೆ ಸಹ ಮಾಡಲಾಯಿತು.

ಭಾರತದ ಪಾಲಿಗೆ ಪರಿಸ್ಥಿತಿ ಉಲ್ಟಾ ಹೊಡೆಯಲು ಶುರುವಾಗಿದ್ದು, ಪಾಕಿಸ್ತಾನದ ಕೈಮೇಲಾಗತೊಡಗಿದ್ದು ನಜೀಬುಲ್ಲ ಅಧಿಕಾರ ಕಳೆದುಕೊಂಡ 1992ರ ಕಾಲಘಟ್ಟದಲ್ಲಿ.

ಮುಜಾಹಿದೀನ್ ಗಳ ಜತೆಗೂ ಭಾರತದ ಸ್ನೇಹ

ಪಾಕ್ ಬೆಂಬಲಿತ ಮುಜಾಹಿದೀನ್ ಗಳೇನೋ ಅಧಿಕಾರಕ್ಕೆ ಬಂದರು. ಆದರೆ ಸಮಸ್ಯೆ ಎಂದರೆ ಅವರಲ್ಲೇ ಹಲವು ಬಣಗಳಿದ್ದವು. ಕೆಲವು ತಿಂಗಳಿಗೆ ಒಬ್ಬರಂತೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದರು. ಹೀಗಾಗಿ ಮುಜಾಹಿದೀನ್ ಪೈಕಿ ಒಂದು ಪಂಗಡಕ್ಕೆ ಭಾರತದ ಬೆಂಬಲವನ್ನೂ ಇರಿಸಿಕೊಳ್ಳೋಣ ಎನಿಸಿತು. ಅಧಿಕಾರ ಹಿಡಿದ ನಾಲ್ಕೇ ತಿಂಗಳಲ್ಲಿ ಅಧ್ಯಕ್ಷ ರಬ್ಬಾನಿ ಕಚೇರಿಯಿಂದ ಭಾರತಕ್ಕೊಂದು ಕೋರಿಕೆ ಬಂತು. “ಜಕಾರ್ತಾಗೆ ಸಮಾವೇಶವೊಂದಕ್ಕೆ ಅಧ್ಯಕ್ಷರು ಹೋಗುತ್ತಿದ್ದಾರೆ. ಮಾರ್ಗಮಧ್ಯೆ ದೆಹಲಿಯಲ್ಲಿ ಇಂಧನ ತುಂಬಿಸಿಕೊಳ್ಳಬಹುದೇ?” ಖಂಡಿತ ಬನ್ನಿ ಅಂತು ಭಾರತ! ಪಾಕಿಸ್ತಾನವನ್ನು ಬೆನ್ನಿಗಿರಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಮುಜಾಹಿದೀನ್ ಗಳು ಅಲ್ಲಿಂದಾಚೆಗೆ ಭಾರತದತ್ತಲೂ ಮೃಧು ಧೋರಣೆ ಶುರು ಮಾಡಿದರು. ಆ ಸ್ನೇಹ ಮಾಗುವಷ್ಟರಲ್ಲೇ ಮತ್ತೊಂದು ರಾಜಕೀಯ ಬದಲಾವಣೆಯಾಗಿ, ಕಾಬೂಲನ್ನು ತಾಲಿಬಾನಿಗಳು ವಶಪಡಿಸಿಕೊಂಡುಬಿಟ್ಟರು.

ತಾಲಿಬಾನಿಗಳ ಜತೆಗಿನ ಕಹಿ ಅಧ್ಯಾಯ

ಕಾಬೂಲನ್ನು ತಾಲಿಬಾನಿಗಳು ವಶಪಡಿಸಿಕೊಂಡರೂ, ಪಂಜಶೀರ್ ಪರ್ವತ ಪ್ರದೇಶದಲ್ಲಿ ಮುಜಾಹಿದೀನ್ ಪಾಳೆಯದ ಮಸೂದ್ ಪ್ರಬಲತೆ ಉಳಿಸಿಕೊಂಡಿದ್ದ. ರಷ್ಯ-ಭಾರತಗಳು ಈ ಪಂಗಡವನ್ನು ಬೆಂಬಲಿಸಿದವು. ಅಫ್ಘನ್ ಗಡಿಗೆ ಸನಿಹದ ತಾಜಿಕಿಸ್ತಾನದಲ್ಲಿ ವಾಯುನೆಲೆ ಹೊಂದಿದ ಭಾರತ, ಅಲ್ಲಿಂದ ಮಸೂದ್ ನೇತೃತ್ವದ ನಾರ್ದನ್ ಅಲಾಯನ್ಸ್ ಗೆ ಶಸ್ತ್ರಗಳನ್ನೂ ಪೂರೈಸಿತು. 2001ರಲ್ಲಿ ಅಮೆರಿಕವು ಅಫಘಾನಿಸ್ತಾನದ ಮೇಲೆ ದಾಳಿ ಮಾಡಿದಾಗ ಇದೇ ನಾರ್ದನ್ ಅಲಾಯನ್ಸ್ ತಾಲಿಬಾನ್ ವಿರುದ್ಧ ಪ್ರಮುಖವಾಗಿ ಸೆಣೆಸಿದ್ದು ಈಗ ಇತಿಹಾಸ.

ಇದೇನೇ ಇದ್ದರೂ ಈ ಅವಧಿಯಲ್ಲಿ ಪಾಕಿಸ್ತಾನದ ತಾಲಿಬಾನ್ ಸಖ್ಯವು ಭಾರತಕ್ಕೆ ಹೆಚ್ಚಿನದಾಗಿ ಹಿನ್ನಡೆಯನ್ನೇ ಉಂಟುಮಾಡಿತು. 90ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರವಾದಕ್ಕೆ ಪಾಕಿಸ್ತಾನವು ತಾಲಿಬಾನಿಗಳನ್ನು ಬಳಸಿಕೊಂಡಿತು. ಮಸೂದ್ ಅಜರ್ ಸೇರಿದಂತೆ ಉಗ್ರರನ್ನು ಬಿಡಿಸಿಕೊಳ್ಳುವುದಕ್ಕೆ ವಿಮಾನ ಅಪಹರಣ ಮಾಡಿಸಿದ ಪಾಕಿಸ್ತಾನದ ಐಎಸ್ಐ ಗೆ ಬೆನ್ನೆಲುಬಾಗಿದ್ದವರು ಆ ವಿಮಾನವನ್ನು ಕಂದಹಾರಿನಲ್ಲಿ ಇಳಿಸಿಕೊಂಡ ತಾಲಿಬಾನಿಗಳೇ. ಇಂಥ ಹಲವು ಕಾರಣಗಳಿಂದ ತಾಲಿಬಾನ್ ಜತೆಗೆ ರಾಜತಾಂತ್ರಿಕ ಬಾಂಧವ್ಯ ಹೊಂದುವುದು ಭಾರತಕ್ಕೆ ಸಾಧ್ಯವಾಗಲೇ ಇಲ್ಲ.

former EAM with Taliban and EAM with S jaishankar with taliban leader
ಸೌದಿ-ಪಾಕಿಸ್ತಾನ ನಡುವಣ ರಕ್ಷಣಾ ಒಪ್ಪಂದ ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)

ಅಮೆರಿಕ ಪ್ರೇರಿತ ಆಡಳಿತದಲ್ಲಿ ಭಾರತದ ಪ್ರಭಾವ

ಅಮೆರಿಕದ ಸೇನೆ ಅಫಘಾನಿಸ್ತಾನದಲ್ಲಿದ್ದಷ್ಟು ದಿನ ಅಲ್ಲಿ ಯಾವ ಸರ್ಕಾರವಿತ್ತೋ ಅದರೊಂದಿಗೆ ಭಾರತದ ಬಾಂಧವ್ಯ ಉತ್ತಮ ಸ್ಥಿತಿಯಲ್ಲಿತ್ತು. ಅಫಘಾನಿಸ್ತಾನದ ಮರು ನಿರ್ಮಾಣದಲ್ಲಂತೂ ಭಾರತವು ಆಣೆಕಟ್ಟು, ಸಂಸತ್ ಭವನಗಳನ್ನೆಲ್ಲ ಕಟ್ಟಿಸಿಕೊಟ್ಟು ಸ್ನೇಹಿತನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆಗಿನ ಅಧಿಕಾರಸ್ಥರು ಪಾಕಿಸ್ತಾನವನ್ನು ದೂಷಿಸಿ ಭಾರತವನ್ನು ಗೌರವಿಸುತ್ತಿದ್ದರು.

ತಾಲಿಬಾನ್ ಪುನರಾಗಮನ

2021ರಲ್ಲಿ ಅಮೆರಿಕವು ಅಫ್ಘನ್ ನೆಲದಿಂದ ಹಿಂತೆಗೆಯುವುದರೊಂದಿಗೆ ತಾಲಿಬಾನ್ ಮತ್ತೆ ಗಹಗಹಿಸಿತು. ಆ ತಾಲಿಬಾನಿನ ಜತೆ ಪಾಕಿಸ್ತಾನವೂ ನಕ್ಕಿತು. ಅಫಘಾನಿಸ್ತಾನದಲ್ಲಿ ಅಭಿವೃದ್ಧಿ ಕಾರ್ಯಕ್ಕೆಂದು ಅಷ್ಟೆಲ್ಲ ಹಣ ಹರಿಸಿದ್ದ ಭಾರತ ಅಸಹಾಯಕವಾಗಿ ಅಲ್ಲಿಂದ ತನ್ನ ರಾಯಭಾರ ಸಿಬ್ಬಂದಿಯನ್ನೆಲ್ಲ ಮತ್ತೆ ಕರೆಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಚೀನಾ ಸಹ ಅಮೆರಿಕ ಬಿಟ್ಟುಹೋದ ಆ ಪ್ರದೇಶದಲ್ಲಿ ತಾನು ವ್ಯಾಪಿಸಿ, ಅಲ್ಲಿನ ಸಂಪನ್ಮೂಲಗಳ ಗಣಿಗಾರಿಕೆಯ ಕನಸು ಬಿಚ್ಚಿಟ್ಟಿತು. ಅಲ್ಲಿಗೆ ಭಾರತದ ಪಾಲಿಗೆ ಎಲ್ಲವೂ ಮುಗಿದಂತಾಯಿತು.

ಆದರೆ ಅಫಘಾನಿಸ್ತಾನದ ವಿಚಾರದಲ್ಲಿ ಖಚಿತವಾಗಿ ಏನನ್ನೂ ನಿರ್ಧರಿಸಲಾಗದು ಎಂಬ ಗ್ರಹಿಕೆ ಮತ್ತೊಮ್ಮೆ ನಿಜವಾಗಿಬಿಟ್ಟಿದೆ. ತನಗೆ ಅಫಘಾನಿಸ್ತಾನದಲ್ಲಿ ಮತ್ತೆ ವಾಯುನೆಲೆಯೊಂದು ಬೇಕು ಅಂತ ಬೆದರಿಕೆ ಶುರು ಮಾಡಿದರು ಅಮೆರಿಕ ಅಧ್ಯಕ್ಷ ಟ್ರಂಪ್. ಸಾಧ್ಯವೇ ಇಲ್ಲ ಅಂತು ತಾಲಿಬಾನ್. ಪಾಕಿಸ್ತಾನದ ಸೇನಾ ಮುಖ್ಯಸ್ಥನ ಮೂಲಕ ಅಫಘಾನಿಸ್ತಾನದ ತಾಲಿಬಾನಿಗಳನ್ನು ಹೆದರಿಸಲು ಹೋದಂತಿದೆ ಅಮೆರಿಕ. ತನ್ನದೆಂಬ ವಾಯುಸೇನೆಯನ್ನೇನೂ ಹೊಂದಿರದ ಅಫಘಾನಿಸ್ತಾನ ಏನು ಮಾಡೀತು ಎಂಬ ಉಡಾಫೆಯಲ್ಲಿ ಬಹುಶಃ ಪಾಕಿಸ್ತಾನ ಅದರ ಮೇಲೆ ವಿಮಾನ ಹಾರಿಸಿ ಬಾಂಬ್ ಮಳೆ ಸುರಿಸಿತು. ತಕ್ಷಣವೇ ಗಡಿಯುದ್ದಕ್ಕೂ ಬೆಂಕಿ ಹಚ್ಚಿ ಪಾಕಿಸ್ತಾನಿ ಸೈನಿಕರನ್ನು ಬಲಿ ತೆಗೆದುಕೊಂಡ ತಾಲಿಬಾನ್, ಆ ರಕ್ತ ರಂಜನೆಗಳ ನಡುವೆಯೇ ದೆಹಲಿಗೆ ಬಂದು ಸಲಾಂ ಹಾಕಿದೆ ಎಂಬುದರೊಂದಿಗೆ ಕತೆ ಮತ್ತೊಂದು ಮಗ್ಗುಲಿಗೆ ಹೊರಳಿದೆ!

ಇಲ್ಲಿ ತಾಲಿಬಾನ್ ಸರಿಯಾ, ಅಫಘಾನಿಸ್ತಾನ ನಿಜಕ್ಕೂ ಬದಲಾಗುತ್ತಾ ಎಂಬೆಲ್ಲ ಭಾವುಕ ಪ್ರಶ್ನೆಗಳಿಗೆ ಜಾಗವಿಲ್ಲ. ಈ ಜಾಗತಿಕ ರಾಜಕಾರಣದ ಆಟವನ್ನು ಭಾರತ ಆಡಲೇಬೇಕು. ಇಲ್ಲದಿದ್ದರೆ ಬೇರೆಯವರು ಆಡುತ್ತಾರೆ….

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com