
ನೇಪಾಳದಲ್ಲಿ ಯುವಕರ ನೇತೃತ್ವದಲ್ಲಿ ಇದ್ದಕ್ಕಿದ್ದಂತೆ ಆರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ, 19 ಜನರು ಸಾವನ್ನಪ್ಪಿ, ನೂರಾರು ಜನರು ಪ್ರಾಣ ಕಳೆದುಕೊಂಡರು. ಇದರ ಪರಿಣಾಮವಾಗಿ, ನೇಪಾಳದ ಪ್ರಧಾನ ಮಂತ್ರಿ ಕೆಪಿ ಶರ್ಮಾ ಓಲಿ ಅವರು ಮಂಗಳವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೂಲತಃ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವುದನ್ನು ವಿರೋಧಿಸುವ ಪ್ರತಿಭಟನೆಯಾಗಿ ಆರಂಭಗೊಂಡ ಹೋರಾಟ, 2008ರಲ್ಲಿ ನೇಪಾಳ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಘೋಷಣೆಗೊಂಡ ಬಳಿಕ ಆ ದೇಶದಲ್ಲಿ ತಲೆದೋರಿದ ಅತಿದೊಡ್ಡ ರಾಜಕೀಯ ಬಿಕ್ಕಟ್ಟಾಗಿ ರೂಪುಗೊಂಡಿತು. ಭಾರತಕ್ಕೂ ತನ್ನ ಹಿಮಾಲಯದ ನೆರೆಹೊರೆಯ ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಎಚ್ಚರಿಕೆಯ ಗಂಟೆಯಾಗಬೇಕಿದ್ದು, ದಕ್ಷಿಣ ಏಷ್ಯಾದಾದ್ಯಂತ ಯುವ ಜನರಲ್ಲಿ ಹೆಚ್ಚುತ್ತಿರುವ ಹತಾಶೆಯನ್ನು ಜಾಗರೂಕವಾಗಿ ಗಮನಿಸುವ ಅಗತ್ಯವಿದೆ.
ಹಿಂಸಾಚಾರಕ್ಕೆ ತಕ್ಷಣಕ್ಕೆ ಚಾಲನೆ ನೀಡಿದ್ದು ಒಂದು ರೀತಿಯ ನಿರಂಕುಶ ಆಡಳಿತದ ಕ್ರಮವಾಗಿತ್ತು. ನೇಪಾಳಿ ಸರ್ಕಾರ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯುವ ನೆಪ ಒಡ್ಡಿ, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಸೇರಿದಂತೆ, 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದಕ್ಕೆ ತಕ್ಷಣದ ಪ್ರತಿಕ್ರಿಯೆಯ ರೂಪದಲ್ಲಿ ಯುವಕರ ಪ್ರತಿಭಟನೆ ಆರಂಭಗೊಂಡಿತು. ಆದರೆ, ವಾಸ್ತವ ವಿಚಾರ ಬಹಳಷ್ಟು ಆಳವಾಗಿದೆ. ನೇಪಾಳದ ಜನರೇಶನ್, ಅಂದರೆ, 13ರಿಂದ 28ರ ಹರೆಯದ ಯುವ ಜನರು ಅದೇ ಭ್ರಷ್ಟ, ವಯಸ್ಸಾದ ಹಳೆ ರಾಜಕಾರಣಿಗಳ ಆಡಳಿತದಿಂದ ರೋಸಿ ಹೋಗಿದ್ದಾರೆ. ಈ ಹಳೇ ರಾಜಕಾರಣಿಗಳು ಕಳೆದ ಎರಡು ದಶಕಗಳಿಂದ ಸಂಗೀತ ಕುರ್ಚಿಯ ರೀತಿಯಲ್ಲಿ ಅಧಿಕಾರವನ್ನು ತಾವೇ ಒಬ್ಬರ ನಂತರ ಒಬ್ಬರಂತೆ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.
ನೇಪಾಳದ ಅಂಕಿ ಅಂಶಗಳು ಅಲ್ಲಿನ ಯುವ ಜನರ ಅವಶ್ಯಕತೆಗಳನ್ನು ಪೂರೈಸಲು ಆಡಳಿತ ಎಷ್ಟರಮಟ್ಟಿಗೆ ವಿಫಲವಾಗಿದೆ ಎನ್ನುವುದರ ಸ್ಪಷ್ಟ ಚಿತ್ರಣ ಒದಗಿಸುತ್ತವೆ. 15ರಿಂದ 24 ವರ್ಷದ ಯುವ ಜನರ ನಿರುದ್ಯೋಗ ಪ್ರಮಾಣ 20%ಕ್ಕಿಂತಲೂ ಹೆಚ್ಚಾಗಿದ್ದು, 82% ಉದ್ಯೋಗಿಗಳು ಅನೌಪಚಾರಿಕ ಉದ್ಯೋಗಗಳನ್ನು ಹೊಂದಿದ್ದಾರೆ. ಇದೆಲ್ಲದರ ಪರಿಣಾಮವಾಗಿ, ಯುವ ನೇಪಾಳಿಗಳು ತಮ್ಮ ದೇಶದಲ್ಲಿ ಭವಿಷ್ಯವಿಲ್ಲ ಎಂಬ ಆಲೋಚನೆಗೆ ತಲುಪಿದ್ದಾರೆ. ಬಹಳಷ್ಟು ಜನರು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳಿದ್ದು, ಅವರು ಮನೆಗೆ ಕಳುಹಿಸುವ ಹಣವೇ ದೇಶದ ಜಿಡಿಪಿಗ 33%ಕ್ಕೂ ಹೆಚ್ಚಿನ ಪಾಲು ಹೊಂದಿದೆ. ಈ ವಿಚಾರ ನೇಪಾಳ ತನ್ನ ಅತ್ಯಂತ ಹೆಚ್ಚಿನ ಉತ್ಪಾದಕತೆ ಹೊಂದಿರುವ ಪ್ರಜೆಗಳಿಗೆ ದೇಶದಲ್ಲಿ ಅವಕಾಶಗಳನ್ನು ಸೃಷ್ಟಿಸುವ ಬದಲಾಗಿ, ಅವರನ್ನು ರಫ್ತು ಮಾಡುವುದರ ಮೇಲೆ ಅವಲಂಬಿತವಾಗಿರುವ ದುರದೃಷ್ಟಕರ ಬೆಳವಣಿಗೆಯನ್ನು ತೋರಿಸುತ್ತಿದೆ.
ಈ ಹೋರಾಟವನ್ನು ಇನ್ನಷ್ಟು ಮಹತ್ವವಾಗಿಸುವ ವಿಚಾರವೆಂದರೆ, ವಿವಿಧ ಪಕ್ಷಗಳಿಗೆ ಸೇರಿರುವ ನೇಪಾಳದ ಯುವಕರೂ ಈಗ ವೃದ್ಧ, ಭ್ರಷ್ಟ ನಾಯಕರ ವಿರುದ್ಧ ಹೋರಾಟದಲ್ಲಿ ಒಗ್ಗೂಡಿ ಧುಮುಕಿದ್ದಾರೆ. ಈಗಾಗಲೇ ವೈರಲ್ ಆಗಿರುವ 'ನೆಪೋ ಕಿಡ್ಸ್' ಚಳವಳಿ (ಅಂದರೆ, ಸಾಮಾನ್ಯ ಜನರು ಕಷ್ಟಪಡುತ್ತಾ ಜೀವನ ನಡೆಸುತ್ತಿರುವಾಗ, ರಾಜಕಾರಣಿಗಳ ಮಕ್ಕಳು ತಮ್ಮ ಶ್ರೀಮಂತ ಜೀವನಶೈಲಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ಗುರಿಯಾಗಿಸುವುದು) ತಮ್ಮ ಭವಿಷ್ಯವನ್ನು ಶ್ರೀಮಂತ ವರ್ಗ ಕಿತ್ತುಕೊಳ್ಳುತ್ತಿರುವುದರ ಕುರಿತು ನೇಪಾಳದ ಯುವ ಜನತೆ ಹೊಂದಿರುವ ಆಕ್ರೋಶವನ್ನು ಸಮರ್ಥವಾಗಿ ಪ್ರದರ್ಶಿಸಿತ್ತು. ಈ ಪ್ರಕ್ರಿಯೆ ಕೇವಲ ನೇಪಾಳಕ್ಕೆ ಸೀಮಿತವಾದುದಲ್ಲ. ಭಾರತದಲ್ಲೂ ಅಧಿಕಾರ ಮತ್ತು ಸಂಪತ್ತನ್ನು ಸಂಪಾದಿಸುವುದಕ್ಕಿಂತಲೂ ವಂಶಪಾರಂಪರ್ಯವಾಗಿ ಅನುಭವಿಸುತ್ತಾ ಬಂದಿರುವ ರಾಜಕೀಯ ಕುಟುಂಬಗಳ ಕುರಿತು ನಾಗರಿಕರ ಮನಸ್ಸಿನಲ್ಲಿ ಇಂತಹದ್ದೇ ಅಸಮಾಧಾನವಿದೆ. ರಾಷ್ಟ್ರ ಮಟ್ಟದಲ್ಲಿ ಗಾಂಧಿ ಕುಟುಂಬದಿಂದ, ವಿವಿಧ ರಾಜ್ಯಗಳಲ್ಲಿ ಸ್ಥಳೀಯ ರಾಜಕಾರಣದಲ್ಲಿ ರಾಜಕೀಯ ಕುಟುಂಬಗಳ ಕುರಿತೂ ಇಂತಹ ಅಸಮಾಧಾನವನ್ನು ಕಾಣಬಹುದು.
ಸಾಮಾಜಿಕ ಜಾಲತಾಣಗಳ ನಿಷೇಧದ ಬಳಿಕ ನಡೆದ ಪ್ರತಿಭಟನೆಗಳು, ಅದರ ಬೆನ್ನಲ್ಲೇ ಉಂಟಾದ ಹಿಂಸಾಚಾರಗಳು ದುರಂತಮಯವಾಗಿದ್ದರೂ, ಮೊದಲೇ ಊಹಿಸಲು ಸಾಧ್ಯವಿತ್ತು. ಪ್ರತಿಭಟನಾಕಾರರು ಸಂಸತ್ ಕಟ್ಟಡದ ಕಡೆಗೆ ನುಗ್ಗಲು ಪ್ರಯತ್ನ ನಡೆಸಿದಾಗ, ಭದ್ರತಾ ಪಡೆಗಳು ಸಜೀವ ಗುಂಡುಗಳು, ಅಶ್ರುವಾಯು, ಮತ್ತು ಜಲ ಫಿರಂಗಿಗಳನ್ನು ಬಳಸಿ ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ದೇಶದ ಯುವ ಜನರು ಗುಂಡೇಟು ತಿಂದು ರಸ್ತೆಯಲ್ಲೇ ಕುಸಿಯುತ್ತಿರುವ ದೃಶ್ಯ ಪ್ರಧಾನಿ ಓಲಿ ರಾಜೀನಾಮೆ ಮತ್ತು ಸಮಗ್ರ ರಾಜಕೀಯ ಬದಲಾವಣೆಗೆ ಆಗ್ರಹ ಹೆಚ್ಚಾಗುವಂತೆ ಮಾಡಿತು. ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಹಿಂಪಡೆದ ಬಳಿಕವೂ, ಓಲಿ ರಾಜೀನಾಮೆ ನೀಡಿದ ನಂತರವೂ, ಪ್ರತಿಭಟನಾಕಾರರು ಸಂಸತ್ತು ವಿಸರ್ಜನೆಯಾಗಿ, ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ.
ಭಾರತದ ಪಾಲಿಗೂ ನೇಪಾಳದ ಬಿಕ್ಕಟ್ಟು ಒಂದಷ್ಟು ಅಸಮಾಧಾನಕರ ಪಾಠವನ್ನೂ ನೀಡುತ್ತಿದೆ. ನೇಪಾಳದಂತೆಯೇ, ಭಾರತದಲ್ಲೂ ಯುವ ಜನರ ಜೊತೆ ಸಂಪರ್ಕವೇ ಹೊಂದಿರದ, ವಯಸ್ಸಾದ ರಾಜಕೀಯ ನಾಯಕತ್ವವಿದೆ. ಭಾರತದ ಜನಸಂಖ್ಯೆಯ ಬಹುತೇಕ 65% ಜನರು 35ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಆದರೆ, ರಾಜಕೀಯ ಅಧಿಕಾರ ಇಂದಿಗೂ 60, 70, ಮತ್ತು 80ರ ಹರೆಯದ ವೃದ್ಧ ನಾಯಕರ ಬಳಿಯಲ್ಲೇ ಇದೆ. ಇನ್ನು ಭಾರತದಲ್ಲೂ 'ನೆಪೊ ಕಿಡ್ಸ್' ಸಮಸ್ಯೆಯಿದ್ದು, ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಉದಾಹರಣೆಯಾಗಿದ್ದಾರೆ. ಇನ್ನು ರಾಜ್ಯ ಮಟ್ಟದಲ್ಲಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಸಿದ್ದರಾಮಯ್ಯನವರ ಮಗ ಯತೀಂದ್ರ, ಕುಮಾರಸ್ವಾಮಿಯವರ ಮಗ ನಿಖಿಲ್, ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆ ಮುಂತಾದ ಹಿರಿಯ ರಾಜಕಾರಣಿಗಳ ಮಕ್ಕಳೇ ಅಧಿಕಾರ ಹೊಂದಿದ್ದಾರೆ. ಭಾರತದಾದ್ಯಂತ ಅಸಂಖ್ಯಾತ ರಾಜಕೀಯ ಕುಟುಂಬಳ ಉತ್ತರಾಧಿಕಾರಿಗಳೇ ಅಧಿಕಾರ ಹಿಡಿಯುತ್ತಿದ್ದು, ಇಂತಹ ಅರ್ಹತೆ ಇಲ್ಲದೆ ಲಭಿಸುವ ಸವಲತ್ತುಗಳ ಕುರಿತು ನೇಪಾಳಿಗರು ಹೊಂದಿದ್ದಂತಹ ಅಸಮಾಧಾನವೇ ಇಲ್ಲೂ ಕಾಣುತ್ತಿದೆ. ಕೋಟ್ಯಂತರ ಯುವ ಭಾರತೀಯರು ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಒದ್ದಾಡುತ್ತಿರುವಾಗ, ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು ಅದ್ಧೂರಿಯಾಗಿ ಜೀವನ ನಡೆಸುವ ನೋಟವೇ ಅಸಮಾಧಾನ, ಆಕ್ರೋಶದ ಕಿಡಿ ಹಚ್ಚಬಲ್ಲದು. ಒಂದು ವೇಳೆ ಆರ್ಥಿಕ ಅವಕಾಶಗಳು ಜನಸಂಖ್ಯಾ ವಾಸ್ತವಗಳಿಗೆ ಸರಿ ಹೊಂದದಿದ್ದರೆ, ಭಾರತವೂ ಯುವ ಜನರ ಆಕ್ರೋಶ ಸ್ಫೋಟಗೊಳ್ಳುವುದನ್ನು ಕಾಣಬೇಕಾಗಿ ಬಂದೀತು.
ಇಂತಹ ಪ್ರತಿಭಟನೆಗಳನ್ನು ಆಯೋಜಿಸಲು ಸಾಮಾಜಿಕ ಜಾಲತಾಣಗಳು ಎಷ್ಟು ಪಾತ್ರ ವಹಿಸುತ್ತವೆ ಎನ್ನುವುದು ಸಹ ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಗಳು ಎಷ್ಟು ವೇಗವಾಗಿ ಅಧಿಕಾರ ಕಳೆದುಕೊಳ್ಳಬಹುದು ಎನ್ನುವುದನ್ನು ರೂಪಿಸಬಲ್ಲದು. ಇಂತಹ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ, ಆ ಮೂಲಕ ವಿರೋಧವನ್ನು ಮೌನಗೊಳಿಸಲು ಪ್ರಯತ್ನ ನಡೆಸಿದರು. ಆದರೆ, ಇದು ಉರಿಯುವ ಬೆಂಕಿಗೆ ಇನ್ನಷ್ಟು ತೈಲ ಸುರಿದಂತಾಯಿತು. ಸರ್ವಾಧಿಕಾರಿ ಕಾರ್ಯತಂತ್ರಗಳು ಹಿಂದಿನ ಕಾಲದಲ್ಲಿ ಕೆಲಸ ಮಾಡುತ್ತಿದ್ದವಾದರೂ, ಇಂದಿನ ತಂತ್ರಜ್ಞಾನ ಬಳಕೆದಾರ ಯುವ ಸಮುದಾಯದ ಮುಂದೆ ಇಂತಹ ತಂತ್ರಗಳು ತಿರುಮಂತ್ರವಾಗುತ್ತವೆ!
ನೇಪಾಳದ ರಾಜಕೀಯ ಅಸ್ಥಿರತೆಗೆ ಒಂದು ಇತಿಹಾಸವೇ ಇದ್ದು, ಅದು 2008ರಿಂದ 12ಕ್ಕೂ ಹೆಚ್ಚು ಸರ್ಕಾರಗಳನ್ನು ಕಂಡಿದೆ. ನೇಪಾಳ ಅತ್ಯಂತ ಉತ್ತಮ ರೀತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಹೊರಳಿಕೊಂಡರೂ, ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿಯುತ ಆಡಳಿತ ಹೇಗೆ ಅಡ್ಡಗಾಲು ಹಾಕಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ. ರಾಜಪ್ರಭುತ್ವ ಹೊಂದಿದ್ದ ನೇಪಾಳ, ಸ್ಥಿರತೆ ಮತ್ತು ಸಮೃದ್ಧಿ ತರುವ ಸಲುವಾಗಿ ಪ್ರಜಾಪ್ರಭುತ್ವ ಆಡಳಿತದತ್ತ ಸಾಗಿತ್ತು. ಆದರೆ, ಸ್ಥಿರತೆ, ಸಮೃದ್ಧಿಯ ಬದಲು ನೇಪಾಳ ಮತ್ತದೇ ರಾಜಕೀಯ ಸಂಗೀತ ಕುರ್ಚಿಯನ್ನೇ ಎದುರಿಸುತ್ತಾ, ಪ್ರಜೆಗಳ ಸಂಕಷ್ಟ ಮುಂದುವರಿಯುವದಕ್ಕೆ ಸಾಕ್ಷಿಯಾಯಿತು.
ಪ್ರತಿಭಟನಾಕಾರರ ಸಾವಿನ ಹೊಣೆ ಹೊತ್ತು ಗೃಹ ಸಚಿವರು ಸೇರಿದಂತೆ, ಹಲವಾರು ಸಚಿವರು ರಾಜೀನಾಮೆ ನೀಡಿದ್ದು, ಪ್ರಜೆಗಳ ಕೋಪ ತುದಿ ತಲುಪಿದಾಗ ಹೇಗೆ ರಾಜಕಾರಣಿಗಳ ವೃತ್ತಿ ಜೀವನ ಇದ್ದಕ್ಕಿದ್ದಂತೆ ಬಿದ್ದುಹೋಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಪ್ರತಿಭಟನಾಕಾರರು ಕಳೆದ ಹಲವಾರು ವರ್ಷಗಳಿಂದ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನಾಯಕರು ಶಿಕ್ಷೆಯಿಂದ ತಪ್ಪಿಸಿಕೊಂಡು ಅಧಿಕಾರ ಅನುಭವಿಸುವುದು ಕೊನೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಭಾರತದ ಜನ ಪ್ರತಿನಿಧಿಗಳಿಗೂ ನೇಪಾಳದ ಬಿಕ್ಕಟ್ಟು ಯುವ ಜನರ ನಿರ್ವಹಣೆ, ಉದ್ಯೋಗ ಸೃಷ್ಟಿ, ಮತ್ತು ರಾಜಕೀಯ ಸುಧಾರಣೆಗಳ ಕುರಿತು ಗಂಭೀರ ಚಿಂತನೆಗೆ ನಾಂದಿಯಾಗಬೇಕು. ನೆರೆಯ ಪ್ರಜಾಪ್ರಭುತ್ವ ಹೊತ್ತಿ ಉರಿಯುತ್ತಿದ್ದು, ಯುವಕರು ತಮ್ಮ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದು ಜನಸಂಖ್ಯೆಯ ಪ್ರಯೋಜನ ಸರಿಯಾಗಿ ನಿರ್ವಹಿಸದೇ ಹೋದರೆ ಇದ್ದಕ್ಕಿದ್ದಂತೆ ಜನಸಂಖ್ಯಾ ದುರಂತವೂ ಆಗಬಹುದು ಎನ್ನುವುದನ್ನು ನೆನಪಿಸುತ್ತಿದೆ.
ದೊಡ್ಡ ದೇಶಗಳಿಗೆ ಹೋಲಿಸಿದರೆ, ನೇಪಾಳದ ಕಾರ್ಯತಂತ್ರದ ಮಹತ್ವ ಕಡಿಮೆ ಇರುವ ಕಾರಣ ಅಂತಾರಾಷ್ಟ್ರೀಯ ಸಮುದಾಯವೂ ನೇಪಾಳದ ಬಿಕ್ಕಟ್ಟಿನ ಕುರಿತು ಮೌನ ವಹಿಸಿದೆ. ಆದರೆ, ಯುವಕರ ಆಕ್ರೋಶ, ಚಳುವಳಿ ಸರ್ಕಾರಗಳನ್ನೇ ಉರುಳಿಸಬಲ್ಲದು ಎಂಬ ಉದಾಹರಣೆಯನ್ನು ಇದು ತೋರಿಸಿದ್ದು, ಒಂದೊಮ್ಮೆ ಈಗಾಗಲೇ ತಲೆದೋರಿರುವ ಸಮಸ್ಯೆಗಳು, ಅಸಮಾಧಾನಗಳನ್ನು ಸರಿಪಡಿಸದಿದ್ದರೆ, ಇಂತಹ ಹೋರಾಟಗಳು ದಕ್ಷಿಣ ಏಷ್ಯಾದ ವಿವಿಧ ದೇಶಗಳಲ್ಲಿ ಉಂಟಾಗುವ ಸಾಧ್ಯತೆಗಳಿವೆ.
ನೇಪಾಳ ಭವಿಷ್ಯದ ಹಾದಿಯನ್ನು ಹುಡುಕುತ್ತಿದ್ದು, ಒಂದು ಮೂಲಭೂತ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಅದೇನೆಂದರೆ: ಯುವ ಜನರನ್ನು ಶೋಷಿಸುವ ಬದಲು, ಅವರಿಗೆ ಸರಿಯಾದ ಸೇವೆ ಒದಗಿಸುವ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸುವುದು ಹೇಗೆ? ಈಗಿನ ಬಿಕ್ಕಟ್ಟು ಸರಿಯಾದ ಸುಧಾರಣೆಗೆ ಹಾದಿ ಮಾಡಿಕೊಡುತ್ತದೋ, ಅಥವಾ ಅಸ್ಥಿರತೆಯ ಚಕ್ರದಿಂದ ಹೊರಬರಲು ಹೋರಾಡುತ್ತಿರುವ ನೇಪಾಳ ಮತ್ತದೇ ಹಳೆ ರಾಜಕಾರಣಿಗಳ ಕೈಗೆ ಸಿಲುಕಿ, ಇನ್ನೊಂದು ಸುತ್ತಿನ ಸಂಗೀತ ಕುರ್ಚಿ ಆಟಕ್ಕೆ ಸಾಕ್ಷಿಯಾಗುತ್ತದೋ ಕಾದು ನೋಡಬೇಕಿದೆ.
ಸರ್ಕಾರಿ ಕಚೇರಿಗಳು ಹೊತ್ತಿ ಉರಿಯುತ್ತಿರುವ ದೃಶ್ಯಗಳು, ನಿಷೇಧಾಜ್ಞೆಯನ್ನೂ ಮೀರಿ ಯುವ ಪ್ರತಿಭಟನಾಕಾರರು ಕಠ್ಮಂಡುವಿನಲ್ಲಿ ಬೀದಿಗೆ ಇಳಿಯುತ್ತಿರುವ ಚಿತ್ರಗಳು ದಕ್ಷಿಣ ಏಷ್ಯಾದ ಪ್ರತಿಯೊಬ್ಬ ನಾಯಕರಿಗೂ ಎಚ್ಚರಿಕೆ ನೀಡಬೇಕು. ಮಾಹಿತಿಗಳು ಕ್ಷಣಾರ್ಧದಲ್ಲಿ ಸಂಚರಿಸುವ, ಮತ್ತು ಯುವ ಜನರ ನಿರೀಕ್ಷೆಗಳು ಜಾಗತಿಕ ಹಂತ ತಲುಪಿರುವ ಈ ಕಾಲಘಟ್ಟದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಹಳೆಯ ಕಾರ್ಯತಂತ್ರಗಳು ವಿಫಲವಾಗುತ್ತಿವೆ. ನೇಪಾಳದ ಜೆನ್ ಕ್ರಾಂತಿ ಈಗಷ್ಟೇ ಆರಂಭವಾಗಿರಬಹುದು. ಆದರೆ, ಅದರ ಬಿಸಿ ಹಿಮಾಲಯದ ಪರ್ವತ ಶ್ರೇಣಿಗಳನ್ನೂ ಮೀರಿ ತಟ್ಟಲಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement