
ಭಾರತೀಯ ಮಿಲಿಟರಿ ಉನ್ನತ ಅಧಿಕಾರಿಗಳು ಈಗ ಭಾರತೀಯ ಸೇನಾ ಪಡೆಗಳ ಭವಿಷ್ಯವನ್ನೇ ರೂಪಿಸುವಂತಹ, ಭವಿಷ್ಯದ ಯುದ್ಧದ ಚಿತ್ರಣವನ್ನು ಬದಲಾಯಿಸುವಂತಹ ಚರ್ಚೆಗಳಲ್ಲಿ ತೊಡಗಿದ್ದಾರೆ. ಈ ವಾದ ವಿವಾದಗಳ ಕೇಂದ್ರದಲ್ಲಿ ಒಂದು ಸರಳ ಪ್ರಶ್ನೆಯಿದೆ. ಅದೇನೆಂದರೆ: ನಾವು ಅಮೆರಿಕಾ ಮತ್ತು ಚೀನಾಗಳ ಮಿಲಿಟರಿ ವ್ಯವಸ್ಥೆಯನ್ನು ನಕಲು ಮಾಡಬೇಕೇ? ಅಥವಾ ಭಾರತಕ್ಕೆ ಯಾವುದು ಸೂಕ್ತವಾಗಿದೆಯೋ ಅದನ್ನೇ ಮುಂದುವರಿಸಬೇಕೇ?
ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾದ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ - ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಕೇಳಲು ಆಕರ್ಷಕ ಎನಿಸುವ, ʼಥಿಯೇಟರ್ ಕಮಾಂಡ್ಸ್ʼ ಅನ್ನು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ. ಇದರ ಮೂಲಕ, ಭಾರತೀಯ ಸೇನೆ, ನೌಕಾ ಪಡೆ ಮತ್ತು ವಾಯು ಸೇನೆಗಳು ಬೇರೆ ಬೇರೆ ಪ್ರಾಂತ್ಯದಲ್ಲಿ ಒಂದೇ ಕಮಾಂಡರ್ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಾಗುತ್ತದೆ. ಜನರಲ್ ಅನಿಲ್ ಚೌಹಾಣ್ ನಮ್ಮ ಸೇನಾಪಡೆಗಳು ಜೊತೆಯಾಗಿ, ಉತ್ತಮವಾಗಿ ಕಾರ್ಯಾಚರಿಸುವಂತೆ ಮಾಡುವ ʼನೆಕ್ಸ್ಟ್ ಆರ್ಬಿಟ್ʼ ಎಂದು ಬಣ್ಣಿಸಿದ್ದಾರೆ.
ಆದರೆ ವಾಯು ಸೇನಾ ಮುಖ್ಯಸ್ಥರಾದ ಏರ್ ಮಾರ್ಷಲ್ ಎ ಪಿ ಸಿಂಗ್ ಅವರು ಇದಕ್ಕೆ ತಡೆ ಒಡ್ಡುತ್ತಿದ್ದಾರೆ. ಅವರ ಸಂದೇಶ ಸ್ಪಷ್ಟವಾಗಿದೆ. “ಸ್ವಲ್ಪ ನಿಧಾನಿಸಿ. ನಾವು ಈ ಕುರಿತು ಸಮಗ್ರವಾಗಿ ಆಲೋಚಿಸೋಣ” ಎಂದು ಅವರು ಹೇಳಿದ್ದಾರೆ.
ಭಾರತೀಯ ವಾಯು ಸೇನೆಯ ಆತಂಕಗಳು ವಿನಾಕಾರಣವಲ್ಲ. ಬದಲಿಗೆ, ಯುದ್ಧವನ್ನು ಗೆಲ್ಲುವ ಭಾರತದ ಸಾಮರ್ಥ್ಯವನ್ನು ರಕ್ಷಿಸುವುದೂ ವಾಯು ಸೇನೆಯ ಚಿಂತೆಯ ವಿಚಾರವಾಗಿದೆ.
ಹಾಗಾದರೆ ವಾಯು ಸೇನೆಯ ಸಮಸ್ಯೆ ಏನು? ಒಂದು ಗಂಟೆಯ ಅವಧಿಯಲ್ಲಿ ಪದಾತಿ ದಳ 20 ಕಿಲೋಮೀಟರ್ ಸಂಚರಿಸಿದರೆ, ನೌಕಾಪಡೆಯ ಹಡಗುಗಳು ಸಮುದ್ರದ ಮೇಲೆ ನಿಧಾನವಾಗಿ ತೇಲುತ್ತಾ ಸಂಚರಿಸುತ್ತವೆ. ಆದರೆ, ಇವುಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿರುವ ವಾಯು ಸೇನೆಯ ಯುದ್ಧ ವಿಮಾನಗಳು ಒಂದು ಗಂಟೆಯಲ್ಲಿ ಸಾವಿರಾರು ಕಿಲೋಮೀಟರ್ ಹಾರಾಟ ನಡೆಸಬಲ್ಲವು. ಈ ಅಸಾಧಾರಣ ವೇಗವೇ ಭಾರತೀಯ ವಾಯುಪಡೆಯ ಸೂಪರ್ ಪವರ್ ಆಗಿದೆ. ಅಂದರೆ, ನಮ್ಮ ಯುದ್ಧ ವಿಮಾನಗಳು ಯಾವುದೇ ಸಮರ ಪ್ರದೇಶಕ್ಕೆ ಬೇಕಾದರೂ, ಅಂದರೆ ಅದು ಚೀನಾ ಗಡಿಯಾಗಿರಲಿ ಅಥವಾ ಪಾಕಿಸ್ತಾನದ ಗಡಿಯೇ ಆಗಿರಲಿ, ಕ್ಷಿಪ್ರವಾಗಿ ನುಗ್ಗಿ, ಶತ್ರುಗಳಿಗೆ ಏನಾಯಿತು ಎಂದು ಅರಿವಿಗೆ ಬರುವ ಮುನ್ನವೇ ಭಾರೀ ದಾಳಿ ನಡೆಸಬಲ್ಲವು.
ಆದರೆ, ಈಗಾಗಲೇ ಸಣ್ಣದಾಗಿರುವ ನಮ್ಮ ವಿಮಾನಗಳ ಬಳಗವನ್ನು ನಾವು ಬೇರೆ ಬೇರೆ ಥಿಯೇಟರ್ ಕಮಾಂಡುಗಳ ಅಡಿಯಲ್ಲಿ ಇನ್ನಷ್ಟು ವಿಭಜಿಸಿದರೆ, ಅದು ಒಂದು ಖಡ್ಗವನ್ನು ಮೂರು ಚೂರುಗಳಾಗಿ ತುಂಡರಿಸಿ, ಅದು ಮೊದಲಿನಂತೆಯೇ ಹರಿತವಾಗಿ ಕಾರ್ಯಾಚರಿಸಬೇಕು ಎಂದು ನಿರೀಕ್ಷಿಸಿದಂತಾಗುತ್ತದೆ. ಆದರೆ ವಾಸ್ತವವಾಗಿ ಅದು ಹಾಗಾಗಲು ಸಾಧ್ಯವಿಲ್ಲ.
ಭಾರತದ ಬಳಿ ಈಗ ಕೇವಲ 29 ಯುದ್ಧ ವಿಮಾನಗಳ ಸ್ಕ್ವಾಡ್ರನ್‌ಗಳಿದ್ದು, ಇವುಗಳಲ್ಲಿ ಹಲವಾರು ವಿಮಾನಗಳು ಈಗಾಗಲೇ ಹಳೆಯದಾಗಿವೆ. ಭಾರತಕ್ಕೆ ತನ್ನ ಗಡಿಗಳನ್ನು ಸಮರ್ಥವಾಗಿ ರಕ್ಷಿಸಿಕೊಳ್ಳಲು ಕನಿಷ್ಠ 42 ಸ್ಕ್ವಾಡ್ರನ್‌ಗಳ ಅವಶ್ಯಕತೆಯಿದೆ. ಈಗ ನಮ್ಮ ಬಳಿ ಇರುವ ಕನಿಷ್ಠ ಸಂಖ್ಯೆಯ ಯುದ್ಧ ವಿಮಾನಗಳನ್ನು ಮೂರು ಭಿನ್ನ ಥಿಯೇಟರ್ ಕಮಾಂಡುಗಳ ಅಡಿಯಲ್ಲಿ ವಿಭಜಿಸುವುದನ್ನು ಊಹಿಸಿಕೊಳ್ಳಿ. ಪ್ರತಿಯೊಂದು ಕಮಾಂಡಿಗೂ ಬಹಳಷ್ಟು ಕಡಿಮೆ ಯುದ್ಧ ವಿಮಾನಗಳು ಲಭಿಸಿ, ಅವುಗಳು ಇನ್ನೂ ದುರ್ಬಲವಾಗಲಿವೆ.
ಇದನ್ನು ಒಂದು ದೊಡ್ಡ ಕಟ್ಟಡಕ್ಕೆ ಕೇವಲ ಮೂವರು ಭದ್ರತಾ ಸಿಬ್ಬಂದಿಗಳನ್ನು ನೇಮಿಸಿ, ಪ್ರತಿ ಮಹಡಿಗೆ ಒಬ್ಬನನ್ನು ಶಾಶ್ವತವಾಗಿ ನಿಯೋಜಿಸಿದಂತಾಗಲಿದೆ. ಒಂದು ವೇಳೆ ಎರಡನೇ ಮಹಡಿಯಲ್ಲಿ ಏನಾದರೂ ಸಮಸ್ಯೆ ತಲೆದೋರಿ, ಅಲ್ಲಿರುವ ಒಬ್ಬ ಭದ್ರತಾ ಸಿಬ್ಬಂದಿಗೆ ಹೆಚ್ಚು ಜನ ಎದುರಾಳಿಗಳು ಬಂದರೆ ಅವರನ್ನು ಎದುರಿಸಲು ಸಾಧ್ಯವಾಗದು. ಬೇರೆ ಮಹಡಿಗಳಲ್ಲಿರುವ ಸಿಬ್ಬಂದಿಗಳು ಅವರ ಮಹಡಿಯಲ್ಲೇ ಇರಬೇಕಾದ್ದರಿಂದ ಅವರೂ ಸಹಾಯಕ್ಕೆ ತೆರಳಲು ಸಾಧ್ಯವಾಗುವುದಿಲ್ಲ.
ವಾಯು ಶಕ್ತಿಯನ್ನು ಜೊತೆಯಾಗಿ ಇಡುವುದು ಯಾಕೆ ಪ್ರಯೋಜನಕಾರಿ ಎನ್ನುವುದನ್ನು ಪಾಕಿಸ್ತಾನದ ವಿರುದ್ಧದ ಇತ್ತೀಚಿನ ಆಪರೇಷನ್ ಸಿಂದೂರ ಸಾಬೀತುಪಡಿಸಿದೆ. ಕೇಂದ್ರೀಕೃತ ಯೋಜನೆಗಳು ಮತ್ತು ಮಿಂಚಿನ ವೇಗದ ದಾಳಿಗಳ ಮೂಲಕ, ಭಾರತೀಯ ವಾಯು ಸೇನೆ ಪಾಕಿಸ್ತಾನದ ಪ್ರಮುಖ ನೆಲೆಗಳನ್ನು ಛಿದ್ರಗೊಳಿಸಿ, ನಾಲ್ಕು ದಿನಗಳ ಒಳಗಾಗಿ ಆ ದೇಶ ಕದನ ವಿರಾಮಕ್ಕೆ ಮೊರೆ ಇಡುವಂತೆ ಮಾಡಿತು. ಇಷ್ಟು ವೇಗದ ಸಾಧನೆ ಹಿಂದಿನ ಯಾವುದೇ ಮಿಲಿಟರಿ ಕಾರ್ಯಾಚರಣೆಯ ಇತಿಹಾಸದಲ್ಲಿ ನಡೆದಿರಲಿಲ್ಲ.
ಇದು ಯಾಕೆ ಸಾಧ್ಯವಾಯಿತು ಎಂದರೆ, ನಮ್ಮ ವಾಯು ಶಕ್ತಿ ಒಂದೇ ತಂಡವಾಗಿ ಕಾರ್ಯಾಚರಿಸಿದ್ದು, ಅದು ವಿವಿಧ ತಂಡಗಳಾಗಿ ವಿಭಜಿತವಾಗಿಲ್ಲ ಅಥವಾ ಕಟ್ಟುನಿಟ್ಟಿನ ಗಡಿಗಳು ಅದನ್ನು ಕಟ್ಟಿ ಹಾಕಿರಲಿಲ್ಲ.
ಜಗತ್ತಿನಾದ್ಯಂತ ನಡೆದಿರುವ ವಿವಿಧ ಕದನಗಳಿಂದಲೂ ನಾವು ಇದೇ ರೀತಿಯ ಪಾಠಗಳನ್ನು ಕಲಿಯಬಹುದು. ಉಕ್ರೇನ್ ಯುದ್ಧದ ಸಂದರ್ಭದಲ್ಲಿ, ಉಕ್ರೇನ್ ಬಳಿ ಯಾವುದೇ ನೌಕಾ ಸೇನೆ ಇರದಿದ್ದರೂ ಅದು ಹೊಂದಿರುವ ವಾಯು ಶಕ್ತಿ ಮತ್ತು ಕ್ಷಿಪಣಿ ಸಾಮರ್ಥ್ಯಗಳು ರಷ್ಯಾದ ಬಲಾಢ್ಯ ಕಪ್ಪು ಸಮುದ್ರದ ನೌಕಾಪಡೆಯನ್ನು ಬಚ್ಚಿಟ್ಟುಕೊಳ್ಳುವಂತೆ ಮಾಡಿತ್ತು. ಇನ್ನು ಇಸ್ರೇಲ್ - ಇರಾನ್ ಕದನದಲ್ಲಿ, ಕ್ಷಿಪ್ರವಾದ ವಾಯು ದಾಳಿಗಳು ಕದನದ ಫಲಿತಾಂಶವನ್ನು ಕೇವಲ ಕೆಲವು ಗಂಟೆಗಳಲ್ಲಿ ನಿರ್ಧರಿಸಿದ್ದವು.
ಇದರಲ್ಲಿನ ಸಂದೇಶ ಅತ್ಯಂತ ಸ್ಪಷ್ಟವಾಗಿದೆ: ಆಧುನಿಕ ಯುದ್ಧ ತಂತ್ರದಲ್ಲಿ ಯಾರು ಆಗಸವನ್ನು ನಿಯಂತ್ರಿಸುತ್ತಾರೋ, ಅವರೇ ಯುದ್ಧವನ್ನು ಗೆಲ್ಲುತ್ತಾರೆ!
ಥಿಯೇಟರ್ ಕಮಾಂಡ್ ಯೋಚನೆ ನಮಗೆ ಅಮೆರಿಕಾ ಮತ್ತು ಚೀನಾಗಳಿಂದ ಬಂದಿದೆ. ಆದರೆ, ಆ ದೇಶಗಳು ಹೊಂದಿರುವ ಭಾರೀ ಮಿಲಿಟರಿ ಬಜೆಟ್ ಮತ್ತು ಅಪಾರ ಸಂಖ್ಯೆಯ ಯುದ್ಧ ವಿಮಾನಗಳು ಥಿಯೇಟರ್ ಕಮಾಂಡ್ ಅನ್ನು ಸೂಕ್ತವಾಗಿಸುತ್ತವೆ. ಆದರೆ ಭಾರತ ಚೀನಾ ಅಥವಾ ಅಮೆರಿಕಾ ಅಲ್ಲವಲ್ಲ?
ನಮ್ಮ ಬಳಿ ಯುದ್ಧ ಉಪಕರಣಗಳ ಕೊರತೆ ಇದೆ, ನಮ್ಮ ಯುದ್ಧ ವಿಮಾನಗಳು ಹಳೆಯದಾಗಿವೆ, ಮತ್ತು ರಕ್ಷಣಾ ಉದ್ಯಮ ಈಗಿನ್ನೂ ತನ್ನ ಕಾಲ ಮೇಲೆ ನಿಲ್ಲಲು ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸೂಪರ್ ಪವರ್ ಆಗಿರುವ ದೇಶಗಳಿಗೆ ಸೂಕ್ತವಾಗುವ ವ್ಯವಸ್ಥೆಯನ್ನು ನಾವು ಜಾರಿಗೆ ತಂದರೆ, ಅದು ಇನ್ನೂ ಮಿಲಿಟರಿ ಸಾಮರ್ಥ್ಯವನ್ನು ಬೆಳೆಸುತ್ತಿರುವ ಭಾರತದಂತಹ ದೇಶಕ್ಕೆ ದೊಡ್ಡ ಹೊಡೆತ ನೀಡಬಹುದು!
ಈ ಹೆಜ್ಜೆ ಒಂದು ರೀತಿಯಲ್ಲಿ ಸಣ್ಣ ಉದ್ಯಮವೊಂದು ಯಾವುದೋ ಬೃಹತ್ ಕಾರ್ಪೋರೇಷನ್ನಿನ ಆಡಳಿತ ವ್ಯವಸ್ಥೆಯನ್ನು ನಕಲು ಮಾಡಿದಂತಾಗಬಹುದು. ದೊಡ್ಡ ಉದ್ಯಮವನ್ನು ಇನ್ನಷ್ಟು ಸಮರ್ಥವಾಗಿಸುವ ಅದೇ ವ್ಯವಸ್ಥೆ, ಸಣ್ಣ ಉದ್ಯಮಕ್ಕೆ ಭಾರೀ ತೊಂದರೆ ಉಂಟುಮಾಡಬಹುದು.
ಭಾರತೀಯ ವಾಯು ಸೇನೆ ತಾನು ಇತರ ಸೇನಾ ವಿಭಾಗಗಳೊಡನೆ ಕಾರ್ಯಾಚರಿಸುವುದಿಲ್ಲ ಎಂದೇನೂ ಹೇಳುತ್ತಿಲ್ಲ. ಬದಲಿಗೆ, ಒಂದು ಸಮರ್ಥ ವಿಧಾನವನ್ನು ಆರಿಸಬೇಕು ಎಂದು ಸಲಹೆ ನೀಡುತ್ತಿದೆ. ಬೇರೆ ಬೇರೆ ಕಮಾಂಡ್ ಗಳಾಗಿ ವಿಭಜಿಸುವ ಬದಲು, ನವದೆಹಲಿಯಲ್ಲಿ ʼಜಂಟಿ ಯೋಜನೆ ಮತ್ತು ಸಮನ್ವಯ ಕೇಂದ್ರʼವನ್ನು ಸ್ಥಾಪಿಸುವಂತೆ ವಾಯು ಸೇನೆ ಸಲಹೆ ನೀಡಿದೆ.
ಇದನ್ನು ಸರಳವಾಗಿ ವಿವರಿಸುವುದಾದರೆ: ನೂತನ ವ್ಯವಸ್ಥೆಯ ಮೆದುಳನ್ನು (ಮುಖ್ಯ ಯೋಜನಾ ಕೇಂದ್ರ) ಒಂದು ಕಡೆ ಇಡಬೇಕು. ಆದರೆ, ಈ ವ್ಯವಸ್ಥೆಯ ಕೈಕಾಲುಗಳು (ಸ್ಥಳೀಯ ವಿಭಾಗಗಳು) ಜೊತೆಯಾಗಿ ಬೇರೆ ಕಡೆಗಳಲ್ಲಿ ಕಾರ್ಯಾಚರಿಸಬಹುದು. ಈ ರೀತಿ ಮಾಡುವುದರಿಂದ, ನಮಗೆ ವಾಯು ಶಕ್ತಿಯ ಸಹಜ ಅನುಕೂಲವನ್ನು ಕಳೆದುಕೊಳ್ಳದೆ ಅದರ ಅನುಕೂಲವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಆದರೆ, ನೌಕಾಪಡೆಯ ವಿಚಾರಕ್ಕೆ ಬಂದರೆ, ಥಿಯೇಟರ್ ಕಮಾಂಡ್ ಭಾರತೀಯ ನೌಕಾಪಡೆಗೆ ಅತ್ಯಂತ ಸೂಕ್ತವಾಗಿದೆ. ಯಾಕೆಂದರೆ, ಯುದ್ಧ ನೌಕೆಗಳು, ಸಬ್‌ಮರೀನ್‌ಗಳು ಮತ್ತು ನೌಕಾಪಡೆಯ ಯುದ್ಧ ವಿಮಾನಗಳು ಸಾಗರ ಕಾರ್ಯಾಚರಣೆಗಳ ವಿಚಾರದಲ್ಲಿ ಸಹಜವಾಗಿಯೇ ಜೊತೆಯಾಗಿ ಕಾರ್ಯಾಚರಿಸುತ್ತವೆ. ಇನ್ನು ಭಾರತೀಯ ಭೂ ಸೇನಾ ಪಡೆಗಳನ್ನೂ ಗಡಿಗಳಿಗೆ ಅನುಗುಣವಾಗಿ ವಿಭಜಿಸುವುದು (ಚೀನಾ ಗಡಿ, ಪಾಕಿಸ್ತಾನ ಗಡಿ) ಸಹ ಸೂಕ್ತ ಯೋಜನೆಯಾಗಿದ್ದು, ಇದರಿಂದ ಯೋಧರಿಗೆ ನಿರ್ದಿಷ್ಟ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿ ಲಭಿಸುತ್ತದೆ.
ಆದರೆ, ವಾಯು ಶಕ್ತಿ ಎನ್ನುವುದು ಸಂಪೂರ್ಣವಾಗಿ ಭಿನ್ನವಾದ ವಿಚಾರವಾಗಿದೆ. ಅದು ಹೊಂದಿಕೊಳ್ಳಬಲ್ಲ, ವೇಗವಾದ ಮತ್ತು ಎಲ್ಲಿ ಅವಶ್ಯಕತೆ ಎದುರಾಗುತ್ತದೋ ಅಲ್ಲಿ ಅತ್ಯಂತ ತುರ್ತಾಗಿ ಗರಿಷ್ಠ ಬಲವನ್ನು ಪ್ರಯೋಗಿಸುವಂತಹ ಪಡೆಯಾಗಿದೆ.
ಈಗ ನಡೆಯುತ್ತಿರುವ ಚರ್ಚೆಗಳು ಸೇನಾ ಜನರಲ್‌ಗಳ ನಡುವೆ ನಡೆಯುತ್ತಿರುವ ಯಾವುದೋ ಶೈಕ್ಷಣಿಕ ಚರ್ಚೆಯಲ್ಲ! ಬದಲಿಗೆ, ಇದು ಭಾರತ ಭವಿಷ್ಯದ ಯುದ್ಧಗಳನ್ನು ಗೆಲ್ಲಬಲ್ಲದೇ ಎಂಬುದರ ಕುರಿತು ನಡೆಯುತ್ತಿರುವ ಮಾತುಕತೆ.
ಒಂದು ವೇಳೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವೇನಾದರೂ ತಪ್ಪು ಹೆಜ್ಜೆ ಇಟ್ಟರೆ, ಅದರಿಂದ ನಮ್ಮ ಕಮಾಂಡ್ ವ್ಯವಸ್ಥೆ ದುರ್ಬಲಗೊಂಡು, ನಮ್ಮ ಅತ್ಯಂತ ಸಶಕ್ತವಾದ ಮಿಲಿಟರಿಯೂ ದುರ್ಬಲಗೊಳ್ಳುತ್ತದೆ. ನಿವೃತ್ತ ಏರ್ ಮಾರ್ಷಲ್ ಆರ್ ನಂಬಿಯಾರ್ ಅವರು ತನ್ನ ವಿಶ್ಲೇಷಣೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದ್ದಾರೆ. “ಅವಸರವಾಗಿ ಥಿಯೇಟರ್ ಕಮಾಂಡ್ ಸ್ಥಾಪಿಸುವುದು ಒಂದು ರೀತಿ ದುರ್ಬಲ ತಳಹದಿಯ ಮೇಲೆ ಸೇತುವೆ ನಿರ್ಮಿಸದಂತಾಗಲಿದೆ. ಇದು ಮೇಲ್ನೋಟಕ್ಕೆ ಬಹಳ ಆಕರ್ಷಕವಾಗಿ ಕಾಣಬಹುದು. ಆದರೆ, ನಮಗೆ ಅದು ಅತ್ಯಂತ ಅವಶ್ಯಕ ಸಂದರ್ಭದಲ್ಲಿ ಕುಸಿದು ಬೀಳಬಹುದು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಮಿಲಿಟರಿ ಸುಧಾರಣೆಗಳು ಖಂಡಿತವಾಗಿಯೂ ಅವಶ್ಯಕವಾಗಿವೆ. ಆದರೆ, ಈ ಸುಧಾರಣೆಗಳನ್ನು ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಬೇಕೇ ಹೊರತು, ಬೇರೆ ದೇಶಗಳ ವ್ಯವಸ್ಥೆಗಳನ್ನು ಯಥಾವತ್ತಾಗಿ ಭಾರತದಲ್ಲಿ ಜಾರಿಗೆ ತರಬಾರದು. ಥಿಯೇಟರ್ ಕಮಾಂಡ್ ಪ್ರಯೋಜನ ನೀಡಬಹುದು. ಆದರೆ, ಅದರ ಕುರಿತು ನಾವು ಬುದ್ಧಿವಂತಿಕೆಯಿಂದ ಕಾರ್ಯಾಚರಿಸಿದರೆ ಮಾತ್ರ ಅದರ ಫಲ ಲಭಿಸುತ್ತದೆ!
ಹಲವಾರು ಥಿಯೇಟರ್ ಕಮಾಂಡುಗಳ ಬದಲಿಗೆ, ಭಾರತಕ್ಕೆ ಒಂದು ಏಕೀಕೃತ ʼಇಂಡಿಯಾ ಥಿಯೇಟರ್ʼ ಅವಶ್ಯಕತೆ ಇದೆ. ಈ ಥಿಯೇಟರ್ ಎಲ್ಲ ಪಡೆಗಳನ್ನೂ ಒಂದೇ ಯೋಜನೆಯಡಿ ಜೊತೆಯಾಗಿಸುತ್ತದೆ. ಇದು ಗೊಂದಲಗಳನ್ನು ನಿವಾರಿಸಿ, ನಮ್ಮ ಮಿಲಿಟರಿಯನ್ನು ಸರಳ ಮತ್ತು ಶಕ್ತಿಶಾಲಿಯಾಗಿಸುತ್ತದೆ.
ಭಾರತೀಯ ವಾಯುಪಡೆಯ ಪ್ರತಿರೋಧ ಅದರ ಹಠಮಾರಿತನ ಖಂಡಿತಾ ಅಲ್ಲ. ಬದಲಿಗೆ, ಗಡಿಬಿಡಿಯಲ್ಲಿ ಜಾರಿಗೆ ತರುವ ಸುಧಾರಣೆಗಳು ನಮ್ಮ ದೇಶದ ರಕ್ಷಣೆಯ ವಿಚಾರಕ್ಕೆ ಬಂದಾಗ ಮಿಲಿಟರಿಯನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುವ ಬದಲು ದುರ್ಬಲಗೊಳಿಸಬಹುದು ಎಂಬ ಗಂಭೀರ ಎಚ್ಚರಿಕೆಯಾಗಿದೆ.
ನಮ್ಮ ನೆರೆಹೊರೆಯನ್ನು ಗಮನಿಸಿದರೆ, ಚೀನಾ ತೋಳೆತ್ತಿ ಬರುತ್ತಿದೆ ಮತ್ತು ಪಾಕಿಸ್ತಾನದ ನಡೆ ಇಂದಿಗೂ ಊಹಿಸಲು ಸಾಧ್ಯವಿಲ್ಲದಂತಿದೆ. ಹೀಗಿರುವಾಗ ಭಾರತ ತನ್ನ ಮಿಲಿಟರಿ ಸುಧಾರಣೆಗಳ ವಿಚಾರದಲ್ಲಿ ತಪ್ಪು ಹೆಜ್ಜೆ ಇಡಲು ಸಾಧ್ಯವಿಲ್ಲ. ನಮ್ಮ ಭವಿಷ್ಯದ ಭದ್ರತೆ ನಾವು ಇಂದು ಕೈಗೊಳ್ಳುವ ಬುದ್ಧಿವಂತಿಕೆಯ ಆಯ್ಕೆಗಳಲ್ಲಿದೆ.
ಭಾರತವನ್ನು ರಕ್ಷಿಸುವಂತಹ ಖಡ್ಗ ಸದಾ ಹರಿತವಾಗಿ ಮತ್ತು ಒಗ್ಗೂಡಿಯೇ ಇರಬೇಕು. ಎಷ್ಟೇ ಒಳ್ಳೆಯ ಉದ್ದೇಶವಿದ್ದರೂ ಅದನ್ನು ಚೂರುಗಳಾಗಿ ವಿಭಜಿಸಿದರೆ ಅದು ಅತ್ಯಂತ ಅವಶ್ಯಕತೆಯ ಸಂದರ್ಭದಲ್ಲೇ ನಮ್ಮನ್ನು ರಕ್ಷಣಾ ರಹಿತರನ್ನಾಗಿಸುವ ಅಪಾಯವಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement