
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಚೀನಾ ಭೇಟಿಯನ್ನು ಸಮಸ್ತ ಜಗತ್ತು ಸೂಕ್ಷ್ಮವಾಗಿ ಗಮನಿಸಿದೆ. ಮೋದಿಯವರ ಪ್ರವಾಸ ಮೂಲತಃ ಎರಡು ಭಾಗಗಳನ್ನು ಹೊಂದಿತ್ತು. ಮೊದಲನೆಯದು, ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಸಭೆಯಲ್ಲಿ (ಹಲವು ದೇಶಗಳನ್ನು ಒಳಗೊಂಡ ಒಂದು ದೊಡ್ಡ ಸಭೆ) ಭಾಗವಹಿಸುವುದು ಮತ್ತು ಎರಡನೆಯದೆಂದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಡನೆ ಖಾಸಗಿ ಸಭೆ ನಡೆಸುವುದು. ಇವೆರಡೂ ಸಭೆಗಳಿಗೆ ಸಮಾನ ಮಹತ್ವ ಲಭಿಸಿತ್ತು.
ಜಾಗತಿಕ ಪ್ರಕ್ಷುಬ್ಧತೆಯ ಸಮಯದಲ್ಲಿ ಪ್ರಧಾನಿ ಮೋದಿಯವರ ಚೀನಾ ಭೇಟಿ ನೆರವೇರಿದೆ. ರಷ್ಯಾ – ಉಕ್ರೇನ್ ಯುದ್ಧ, ಇಸ್ರೇಲ್ - ಗಾಜಾ ಕದನ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸುತ್ತಿರುವ ವ್ಯಾಪಾರ ಸುಂಕಗಳು ಜಾಗತಿಕ ವ್ಯಾಪಾರವನ್ನೇ ಅಸ್ತವ್ಯಸ್ತಗೊಳಿಸಿವೆ. ಇಂತಹ ಸನ್ನಿವೇಶದಲ್ಲಿ, ಎಸ್‌ಸಿಒ ಸಭೆ ಜಗತ್ತಿನ ಗಮನ ಸೆಳೆದಿತ್ತು. ಇದಕ್ಕೆ ಮೂಲ ಕಾರಣ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾ ಈ ಸಭೆಯ ಆತಿಥ್ಯ ವಹಿಸಿರುವುದು ಮತ್ತು ಇತರ ಅತಿಥಿ ರಾಷ್ಟ್ರಗಳೊಡನೆ ಭಾರತ ಮತ್ತು ರಷ್ಯಾ ಸಹ ಭಾಗವಹಿಸಿರುವುದು. ಇನ್ನೂ ಒಂದಷ್ಟು ಕಾರಣಗಳಿಂದಾಗಿ ಎಸ್‌ಸಿಒ ಸಭೆ ಇನ್ನೂ ಹೆಚ್ಚಿನ ಗಮನವನ್ನು ತನ್ನತ್ತ ಸೆಳೆಯಿತು.
ಕಳೆದ ಏಳು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿದರು. 2020ರ ರಕ್ತಸಿಕ್ತ ಗಡಿ ಚಕಮಕಿಯ ಬಳಿಕ ಪರಸ್ಪರ ಹದಗೆಟ್ಟಿದ್ದ ಸಂಬಂಧವನ್ನು ನಿಧಾನವಾಗಿ ದುರಸ್ತಿಗೊಳಿಸಲು ಭಾರತ ಮತ್ತು ಚೀನಾ ಕಾರ್ಯಾರಂಭಿಸಿವೆ.
ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ವೈಯಕ್ತಿಕವಾಗಿ ಎಸ್‌ಸಿಒ ಸಭೆಯಲ್ಲಿ ಭಾಗವಹಿಸಿದರು. 2023ರಲ್ಲಿ ಭಾರತ ಆಯೋಜಿಸಿದ್ದ ಎಸ್‌ಸಿಒ ಸಭೆ ಆನ್‌ಲೈನ್ (ವರ್ಚುವಲ್) ವಿಧಾನದಲ್ಲಿ ಜರುಗಿತ್ತು.
ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಶಿಕ್ಷೆಯ ರೂಪದಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 25% ಹೆಚ್ಚುವರಿ ಸುಂಕ ವಿಧಿಸಿದ್ದು, ಭಾರತದ ಮೇಲೆ ಟ್ರಂಪ್ ಒಟ್ಟಾರೆಯಾಗಿ 50% ಸುಂಕ ವಿಧಿಸಿದ್ದಾರೆ. ಇದು ಜಗತ್ತಿನಲ್ಲೇ ಅತ್ಯಂತ ದುಬಾರಿ ಸುಂಕಗಳಲ್ಲಿ ಒಂದಾಗಿದೆ. ಈ ಸುಂಕವೇ ಪ್ರಧಾನಿ ಮೋದಿಯವರ ಚೀನಾ ಭೇಟಿಗೆ ಪ್ರಮುಖ ಕಾರಣ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ವಾಸ್ತವವಾಗಿ ಮೋದಿಯವರ ಚೀನಾ ಭೇಟಿ ಬಹಳ ಹಿಂದೆಯೇ ಯೋಜಿತವಾಗಿದ್ದು, ಭಾರತ – ಅಮೆರಿಕಾ ಸಂಬಂಧಗಳು ಹಳಸುವ ಮುನ್ನವೇ ನಿರ್ಧರಿಸಲಾಗಿತ್ತು ಎಂದು ವರದಿಗಳು ಹೇಳುತ್ತವೆ.
ಎಸ್‌ಸಿಒ ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ದೇಶಗಳು ಪರಸ್ಪರ ಹೊಂದಿರುವ ಭಿನ್ನಾಭಿಪ್ರಾಯಗಳನ್ನು ಮರೆತು, ಪರಸ್ಪರ ಜೊತೆಯಾಗಿ ಕಾರ್ಯಾಚರಿಸುವತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಇದಕ್ಕಾಗಿ ಮುಕ್ತತೆ ಮತ್ತು ಒಳಗೊಳ್ಳುವಿಕೆಗಳಿಗೆ (ಎಲ್ಲರನ್ನೂ ಒಪ್ಪಿಕೊಳ್ಳುವ ಮತು ಒಳಗೊಳ್ಳುವ ಕ್ರಮ) ಒತ್ತು ನೀಡಿದ್ದಾರೆ. ಅವರು ಶೀತಲ ಸಮರದ ಮನಸ್ಥಿತಿಯ ವಿರುದ್ಧವೂ ಎಚ್ಚರಿಕೆ ರವಾನಿಸಿದ್ದಾರೆ. ಶೀತಲ ಸಮರದ ಮನಸ್ಥಿತಿ ಎಂದರೆ, ದೇಶಗಳನ್ನು ವಿವಿಧ ತಂಡಗಳು ಅಥವಾ ವಿರೋಧಿ ಗುಂಪುಗಳಾಗಿ ವಿಭಜಿಸಿ, ಅವುಗಳ ಮೇಲೆ ಒತ್ತಡ, ಅಥವಾ ಬೆದರಿಕೆ ಒಡ್ಡುವ ಮೂಲಕ ಅವುಗಳ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದು. ಬಹಳಷ್ಟು ವಿಶ್ಲೇಷಕರು ಕ್ಸಿ ಜಿನ್‌ಪಿಂಗ್ ಮಾತುಗಳು ಸುಂಕ ಹೇರುವ ಮೂಲಕ ಇತರ ದೇಶಗಳನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಟ್ರಂಪ್‌ರನ್ನು ಗುರಿಯಾಗಿಸಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಟಿಯಾಂಜಿನ್ ಸಭೆಯಲ್ಲಿ 10 ವರ್ಷಗಳ ಅವಧಿಯ (2026 – 2036) ಅಭಿವೃದ್ಧಿ ಕಾರ್ಯತಂತ್ರವನ್ನು ಘೋಷಿಸಲಾಯಿತು. ಈ ಕಾರ್ಯತಂತ್ರ ಎಸ್‌ಸಿಒದ ಭವಿಷ್ಯದ ಪ್ರಗತಿ ಮತ್ತು ದಿಕ್ಕನ್ನು ನಿರ್ದೇಶಿಸಲಿದೆ.
ಈ ಸಭೆ ನ್ಯಾಯಯುತ ಜಾಗತಿಕ ವ್ಯಾಪಾರ ನಿಯಮಗಳಿಗೆ ಸ್ಪಷ್ಟವಾಗಿ ಬೆಂಬಲ ನೀಡಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆ ನೀಡಿದ್ದಾರೆ. ಅವರ ಮಾತು ಅಮೆರಿಕಾ ವಿರುದ್ಧದ ಸ್ಪಷ್ಟ ಸಂದೇಶ ಎಂದು ಪರಿಗಣಿಸಬಹುದು. ಅಮೆರಿಕಾ ತನ್ನ ಸುಂಕಗಳು ಮತ್ತು ನಿರ್ಬಂಧಗಳ ಮೂಲಕ ವ್ಯಾಪಾರವನ್ನು ನಿಗ್ರಹಿಸುತ್ತಾ ಬಂದಿದೆ.
ಭದ್ರತಾ ಬೆದರಿಕೆಗಳು, ಗಡಿಯಾಚೆಗಿನ ಅಪರಾಧಗಳು, ಮಾಹಿತಿ ಸುರಕ್ಷತೆ ಮತ್ತು ಮಾದಕ ದ್ರವ್ಯಗಳ ಸಾಗಾಟ ನಿಯಂತ್ರಣ ಸಾಧಿಸಲು ನಾಲ್ಕು ಎಸ್‌ಸಿಒ ಕೇಂದ್ರಗಳಿಗೆ ಟಿಯಾಂಜಿನ್ ಸಭೆಯಲ್ಲಿ ಚಾಲನೆ ನೀಡಲಾಯಿತು. ಸದಸ್ಯ ರಾಷ್ಟ್ರಗಳು ಎಸ್‌ಸಿಒ ದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಎಸ್‌ಸಿಒ ಡೆವಲಪ್‌ಮೆಂಟ್ ಬ್ಯಾಂಕ್ ಆರಂಭಕ್ಕೆ ಅನುಮೋದನೆ ನೀಡಿವೆ ಎಂದು ವಾಂಗ್ ತಿಳಿಸಿದ್ದಾರೆ. ಭಾರತಕ್ಕೆ ಎಸ್‌ಸಿಒ ಸಭೆ ಅಮೆರಿಕಾ ಮತ್ತು ಜಗತ್ತಿಗೆ ಸಂದೇಶ ನೀಡುವ ಒಂದು ವಿಧಾನವಾಗಿತ್ತು.
ಭಾರತಕ್ಕೆ ಎಲ್ಲ ಗುಂಪುಗಳೊಡನೆ ಸೇರಿ ಕಾರ್ಯಾಚರಿಸುವ ತನ್ನ ಕೌಶಲದ ಕುರಿತು ಹೆಮ್ಮೆ ಇದೆ. ವಿವಿಧ ಗುಂಪುಗಳು ಎಷ್ಟೇ ಭಿನ್ನವಾದ ಗುರಿಗಳು ಮತ್ತು ಆಲೋಚನೆಗಳನ್ನು ಹೊಂದಿದ್ದರೂ, ಭಾರತ ಅವುಗಳೊಡನೆ ಸುಲಭವಾಗಿ ಕಾರ್ಯ ನಿರ್ವಹಿಸಬಲ್ಲದು. ಉದಾಹರಣೆಗೆ ಭಾರತ ಬ್ರಿಕ್ಸ್ ಒಕ್ಕೂಟದ ಸದಸ್ಯನಾಗಿದ್ದು, ಜಿ7 ಗುಂಪಿನೊಡನೆಯೂ ಸಮಾಲೋಚಿಸುತ್ತಿದೆ. ಭಾರತ ವಿವಿಧ ದೇಶಗಳು, ಗುಂಪುಗಳೊಡನೆ ಸೇರಿ ಕಾರ್ಯಾಚರಿಸುವುದಕ್ಕೆ ಆದ್ಯತೆ ನೀಡುತ್ತಿದ್ದು, ಇದನ್ನು ಅಮೆರಿಕಾ, ಅದರಲ್ಲೂ ವಿಶೇಷವಾಗಿ ಡೊನಾಲ್ಡ್ ಟ್ರಂಪ್ ಇಷ್ಟಪಡುತ್ತಿಲ್ಲ. ಟ್ರಂಪ್ ಅಂತೂ ಬ್ರಿಕ್ಸ್ ಒಕ್ಕೂಟವನ್ನು ಪಾಶ್ಚಾತ್ಯ ವಿರೋಧಿ ಗುಂಪು ಎಂದೇ ಪರಿಗಣಿಸಿದ್ದಾರೆ.
ಒಂದು ವೇಳೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಡಾಲರ್ ಬಳಕೆಯನ್ನು ನಿಲ್ಲಿಸಿದರೆ ಅವುಗಳ ಮೇಲೆ ದಂಡ ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಎಸ್‌ಸಿಒ ಸದಸ್ಯರೊಡನೆ ಕೈ ಜೋಡಿಸುವ ಮೂಲಕ ಭಾರತ ತಾನು ಪೂರ್ಣವಾಗಿ ಪಶ್ಚಿಮದ ದೇಶಗಳ ಸ್ನೇಹಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಪ್ರದರ್ಶಿಸಿದೆ. ತಾನು ಏಕಕಾಲದಲ್ಲಿ ಹಲವು ಗುಂಪುಗಳೊಡನೆ ಸೇರಿ ಕಾರ್ಯಾಚರಿಸುವ ಇಚ್ಛೆ ಹೊಂದಿರುವುದನ್ನು ಸ್ಪಷ್ಟಪಡಿಸಿದೆ.
ಭಾರತ ಈ ಮೂಲಕ ಇನ್ನೊಂದು ಸಂದೇಶವನ್ನೂ ರವಾನಿಸಿದೆ. ಅದೇನೆಂದರೆ, ತಾನು ತನ್ನ ದೀರ್ಘಕಾಲದ ಸಹಯೋಗಿ ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಿದ್ದು, ಆ ದೇಶದಿಂದ ಆಯುಧ ಖರೀದಿಯನ್ನೂ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.
2017 – 2021ರ ನಡುವಿನ ಡೊನಾಲ್ಡ್ ಟ್ರಂಪ್ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಅಮೆರಿಕಾದ ಒತ್ತಡದ ಕಾರಣದಿಂದ ಭಾರತ ಇರಾನಿನಿಂದ ತೈಲ ಖರೀದಿಸುವುದನ್ನು ನಿಲ್ಲಿಸಿತ್ತು. ಆದರೆ, ಈ ಬಾರಿ ಭಾರತ ಅಮೆರಿಕಾದ ಒತ್ತಡಕ್ಕೆ ಮಣಿದಿಲ್ಲ.
ಟ್ರಂಪ್ ಮತ್ತು ಅವರ ತಂಡ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಮೋದಿಯವರನ್ನು ಕಟುವಾಗಿ ಟೀಕಿಸಿದ್ದಾರೆ. ಅದರಲ್ಲೂ ಟ್ರಂಪ್ ಸಲಹೆಗಾರ ಪೀಟರ್ ನವರೊ ಅತ್ಯಂತ ಕಠಿಣವಾದ ಹೇಳಿಕೆಗಳನ್ನು ನೀಡಿದ್ದಾರೆ. ಇಷ್ಟಾದರೂ ಭಾರತ ಶಾಂತಿಯುತವಾಗಿ ವರ್ತಿಸಿದ್ದು, ನೇರವಾಗಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಬದಲಿಗೆ, ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟಗಳೂ ಸಹ ರಷ್ಯಾದೊಡನೆ ವ್ಯಾಪಾರ ನಡೆಸುತ್ತಿವೆ ಎಂದು ಬೆರಳು ಮಾಡಿ ತೋರಿಸಿದೆ.
ಭಾರತ ರಷ್ಯಾದಿಂದ ಆಯುಧಗಳನ್ನು ಖರೀದಿಸುವುದನ್ನೂ ಅಮೆರಿಕಾ ಟೀಕಿಸಿದೆ. ಆದರೆ ವಾಸ್ತವವಾಗಿ, ಹಿಂದೆ ಶೀತಲ ಸಮರದ ಸಮಯದಲ್ಲಿ ಅಮೆರಿಕಾ ಪಾಕಿಸ್ತಾನಕ್ಕೆ ಆಯುಧಗಳನ್ನು ಪೂರೈಸುತ್ತಿದ್ದರೆ, ಸೋವಿಯತ್ ಒಕ್ಕೂಟ ಭಾರತದ ಅತಿದೊಡ್ಡ ಆಯುಧ ಪೂರೈಕೆದಾರನಾಗಿತ್ತು.
ವರದಿಗಳ ಪ್ರಕಾರ, ರಷ್ಯಾ ಇಂದಿಗೂ ಭಾರತದ ಅತಿದೊಡ್ಡ ಆಯುಧ ಪೂರೈಕೆದಾರನಾಗಿದ್ದರೂ, ಭಾರತದ ರಕ್ಷಣಾ ಖರೀದಿಯಲ್ಲಿ ರಷ್ಯಾದ ಪಾಲು ಕಡಿಮೆಯಾಗಿದೆ.
ಸಿಪ್ರಿ ಅಂಕಿ ಅಂಶಗಳ ಪ್ರಕಾರ, ಭಾರತ ತನ್ನ ರಕ್ಷಣಾ ಖರೀದಿಯನ್ನು ವೈವಿಧ್ಯಮಯಗೊಳಿಸಿದ್ದು, ರಷ್ಯಾದ ಜೊತೆಗೆ ಅಮೆರಿಕಾ, ಫ್ರಾನ್ಸ್ ಮತ್ತು ಇಸ್ರೇಲ್‌ಗಳಿಂದಲೂ ಆಯುಧ ಖರೀದಿಸುತ್ತಿದೆ. ಫೆಬ್ರವರಿ 2025ರಲ್ಲಿ ಭಾರತ ಮತ್ತು ಅಮೆರಿಕಾದ ಜಂಟಿ ಹೇಳಿಕೆ 2008ರಿಂದ ಭಾರತ ಖರೀದಿಸಿರುವ ಬಹಳಷ್ಟು ಅಮೆರಿಕನ್ ರಕ್ಷಣಾ ವ್ಯವಸ್ಥೆಗಳನ್ನು ಪಟ್ಟಿಮಾಡಿದೆ.
ರಷ್ಯಾದ ಜೊತೆಗಿನ ರಕ್ಷಣಾ ಬಾಂಧವ್ಯವನ್ನು ಕಡಿತಗೊಳಿಸುವಂತೆ ಅಮೆರಿಕಾ ಹೇರುತ್ತಿರುವ ಒತ್ತಡವನ್ನು ಭಾರತ ಕಡೆಗಣಿಸಲು ಇನ್ನೊಂದು ಮುಖ್ಯ ಕಾರಣವೆಂದರೆ, ಮೇ ತಿಂಗಳಲ್ಲಿ ನಡೆದ ಭಾರತ – ಪಾಕಿಸ್ತಾನ ಚಕಮಕಿ. ಈ ಸಂದರ್ಭದಲ್ಲಿ, ಎಸ್-400 ನಂತಹ ರಷ್ಯಾ ನಿರ್ಮಿತ ಆಯುಧ ವ್ಯವಸ್ಥೆಗಳು ಮತ್ತು ಭಾರತ – ರಷ್ಯಾ ಜಂಟಿ ನಿರ್ಮಾಣದ ಬ್ರಹ್ಮೋಸ್ ಕ್ಷಿಪಣಿಗಳು ಭಾರತಕ್ಕೆ ಮೇಲುಗೈ ಒದಗಿಸಲು ಪ್ರಮುಖ ಪಾತ್ರ ನಿರ್ವಹಿಸಿದ್ದವು.
ಟಿಯಾಂಜಿನ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗ ಮೋದಿ ಅವರನ್ನು ಆಲಿಂಗಿಸಿದ್ದು, ಪುಟಿನ್ ಜೊತೆಗಿನ ಸಭೆಗೆ ಪುಟಿನ್ ಕಾರಲ್ಲೇ ತೆರಳಿದ್ದರು. ಉಭಯ ನಾಯಕರು ತಮ್ಮ ಬಾಂಧವ್ಯದ ಕುರಿತು ಚರ್ಚಿಸುವಾಗ ಪರಸ್ಪರ ಸ್ನೇಹ – ಆದರಗಳನ್ನು ಪ್ರದರ್ಶಿಸಿದ್ದರು. ಮೋದಿ ಮತ್ತೆ ಈ ವರ್ಷದ ಕೊನೆಯ ಭಾಗದಲ್ಲಿ ನಡೆಯುವ ಭಾರತ -ರಷ್ಯಾ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸಲು ಪುಟಿನ್ ರನ್ನು ಭಾರತಕ್ಕೆ ಆಹ್ವಾನಿಸಿದರು. ಉಭಯ ದೇಶಗಳ ನಡುವೆ 2000ನೇ ಇಸವಿಯಿಂದ ಈ ದ್ವಿಪಕ್ಷೀಯ ವಾರ್ಷಿಕ ಸಭೆ ನಡೆಯುವುದು ಒಂದು ಸಂಪ್ರದಾಯವೇ ಆಗಿದೆ.
ಕ್ಸಿ ಜಿನ್‌ಪಿಂಗ್, ವ್ಲಾಡಿಮಿರ್ ಪುಟಿನ್ ಮತ್ತು ಮೋದಿಯವರು ಪರಸ್ಪರ ಸೌಹಾರ್ದಯುತವಾಗಿ, ನಗುತ್ತಾ ಮಾತನಾಡುವ ಫೋಟೋಗಳು ಮತ್ತು ವೀಡಿಯೋಗಳು ಪ್ರಕಟವಾಗಿದ್ದು, ಭಾರತ ತನ್ನ ಸಹಯೋಗಿಗಳನ್ನು ಆರಿಸುವಾಗ ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇದು ಟ್ರಂಪ್‌ಗೆ ರವಾನಿಸಿದೆ. ಭಾರತ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆಯ ಕಾರಣದಿಂದ ಮುಗಿದೇ ಹೋಯಿತು ಎಂದು ಹಲವರು ಅಂದುಕೊಂಡಿದ್ದ ಆರ್‌ಐಸಿ (ರಷ್ಯಾ – ಇಂಡಿಯಾ – ಚೀನಾ) ಗುಂಪಿಗೆ ಈ ಬೆಳವಣಿಗೆ ಮರು ಚಾಲನೆ ನೀಡಬಹುದು ಎಂಬ ಸಾಧ್ಯತೆಯೂ ಈಗ ಮೂಡಿದೆ.
ಪ್ರಾದೇಶಿಕ ಗುಂಪುಗಳಲ್ಲಿ ಭಾರತ, ರಷ್ಯಾ ಮತ್ತು ಚೀನಾಗಳು ಪರಸ್ಪರ ಹತ್ತಿರಾಗುವುದು ಚೀನಾದೊಡನೆ ಸಂಬಂಧ ಸುಧಾರಿಸುವ ಭಾರತದ ಪ್ರಯತ್ನಗಳಿಗೆ ಪೂರಕವಾಗಿದೆ. ಟ್ರಂಪ್ ಕ್ರಮಗಳು ಭಾರತ – ಅಮೆರಿಕಾ ಸಂಬಂಧವನ್ನು ಹಾಳುಗೆಡವುವ ಮುನ್ನವೇ ಚೀನಾದ ಜೊತೆಗೆ ಭಾರತದ ಸಂಬಂಧ ಸುಧಾರಣೆ ಆರಂಭಗೊಂಡಿತ್ತು.
ಎಪ್ರಿಲ್ 2024ರಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಮೋದಿ, ಚೀನಾದ ಜೊತೆಗಿನ ಸಹಜ ಸಂಬಂಧ ಪುನರಾರಂಭಗೊಳಿಸಲು ಗಡಿ ವಿವಾದಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ, ಭಾರತ ಮತ್ತು ಚೀನಾಗಳು ಪರಸ್ಪರ ಮಾತುಕತೆ ನಡೆಸಿ, ಉದ್ವಿಗ್ನತೆ ಶಮನಗೊಳಿಸಲು ಹೊಸದಾದ ಗಡಿ ಗಸ್ತು ನಿಯಮಗಳನ್ನು ಜಾರಿಗೆ ತರಲು ಒಪ್ಪಿಗೆ ಸೂಚಿಸಿದ್ದವು. ಅದಾದ ನಂತರ ಮೋದಿ ಮತ್ತು ಕ್ಸಿ ಎರಡು ಬಾರಿ ಭೇಟಿಯಾಗಿದ್ದಾರೆ. ಅವರಿಬ್ಬರ ಮೊದಲ ಭೇಟಿ ರಷ್ಯಾದ ಕಜಾನ್‌ನಲ್ಲಿ ನಡೆದರೆ, ಎರಡನೇ ಭೇಟಿ ಆಗಸ್ಟ್ 31ರಂದು ಟಿಯಾಂಜಿನ್‌ನಲ್ಲಿ ಏರ್ಪಟ್ಟಿದೆ.
ಟಿಯಾಂಜಿನ್‌ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಭಾರತ ಮತ್ತು ಚೀನಾಗಳು ಪರಸ್ಪರ ಅಭಿವೃದ್ಧಿಯ ಸಹಯೋಗಿಗಳೇ ಹೊರತು ಶತ್ರು ರಾಷ್ಟ್ರಗಳಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಸವಾಲುಗಳು ಖಂಡಿತವಾಗಿಯೂ ಇವೆ. ಚೀನಾದೊಡನೆ ಭಾರತ ಬಹುದೊಡ್ಡ ವ್ಯಾಪಾರ ಅಸಮತೋಲನ ಹೊಂದಿದೆ. ಅಂದರೆ, ಭಾರತ ಚೀನಾಗೆ ತಾನು ಮಾರಾಟ ಮಾಡುವುದಕ್ಕಿಂತ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸುತ್ತದೆ. ಅಷ್ಟೇ ಅಲ್ಲದೆ, ಚೀನಾ ಪಾಕಿಸ್ತಾನದೊಡನೆ ಅತ್ಯಂತ ಆತ್ಮೀಯ ಸ್ನೇಹ ಸಂಬಂಧ ಹೊಂದಿದೆ. ಚೀನಾ ಮತ್ತು ಪಾಕಿಸ್ತಾನಗಳು ಪರಸ್ಪರರದ್ದು ʼಉಕ್ಕಿನಂತೆ ಗಟ್ಟಿಯಾದ ಸೋದರ ಬಾಂಧವ್ಯʼ ಎಂದು ಬಣ್ಣಿಸಿವೆ. ಮೇ ತಿಂಗಳಲ್ಲಿ ಭಾರತ – ಪಾಕಿಸ್ತಾನಗಳ ನಡುವಿನ ಚಕಮಕಿಯ ಸಂದರ್ಭದಲ್ಲಿ, ಚೀನಾ ಪಾಕಿಸ್ತಾನಕ್ಕೆ ನೈಜ ಸಮಯದ ಉಪಗ್ರಹ ಗುಪ್ತಚರ ಮಾಹಿತಿ ಒದಗಿಸಿದೆ ಎಂದು ವರದಿಗಳು ಹೇಳಿವೆ.
ಮೇ ತಿಂಗಳಲ್ಲಿ ಬೇಸಿಗೆ ಬೆಳೆಯ ಸಂದರ್ಭದಲ್ಲಿ ಚೀನಾ ಭಾರತಕ್ಕೆ ಪ್ರಮುಖ ರಸಗೊಬ್ಬರಗಳ ಪೂರೈಕೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿತ್ತು. ಅದರೊಡನೆ, ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಕೆಯಾಗುವ ರೇರ್ ಅರ್ತ್ ಮ್ಯಾಗ್ನೆಟ್‌ಗಳ ಪೂರೈಕೆಯನ್ನೂ ನಿಲ್ಲಿಸಿತ್ತು. ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾ ವಿದೇಶಾಂಗ ಸಚಿವ ವಾಂಗ್ ನಿರ್ಬಂಧಗಳನ್ನು ಸಡಿಲಿಸುವುದಾಗಿ ಭರವಸೆ ನೀಡಿದ್ದರೂ, ಈ ಸಮಸ್ಯೆ ಪರಿಹಾರ ಕಂಡಿರಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಚೀನಾದ ಜೊತೆಗೆ ವ್ಯವಹಾರ ನಡೆಸುವಾಗ ಭಾರತ ಬಹಳ ಜಾಗರೂಕವಾಗಿ ಹೆಜ್ಜೆ ಇಡಬೇಕು. ಭಾರತ ಆರ್ಥಿಕವಾಗಿ ಚೀನಾದ ಮೇಲೆ ಸಾಕಷ್ಟು ಅವಲಂಬನೆ ಹೊಂದಿದ್ದರೂ, ಭಾರತ ತನ್ನ ಆರ್ಥಿಕತೆಯನ್ನು ಬೆಳೆಸುತ್ತಾ, ಚೀನಾದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ಅವಶ್ಯಕ ಹೆಜ್ಜೆಗಳನ್ನು ಇಡಬೇಕು.
ಈಗಿನ ಜಾಗತಿಕ ವ್ಯಾಪಾರ ಮತ್ತು ಹೆಚ್ಚುತ್ತಿರುವ ರಾಜಕೀಯ ಒತ್ತಡಗಳ ನಡುವೆ, ಚೀನಾಗೆ ಭಾರತ ತನ್ನ ಜೊತೆ ನಿಲ್ಲಬೇಕು ಎನ್ನುವ ಬಯಕೆ ಖಂಡಿತವಾಗಿಯೂ ಇದೆ. ಆದರೆ, ಒಂದು ವೇಳೆ ಚೀನಾ ಮತ್ತು ಅಮೆರಿಕಾಗಳು ಏನಾದರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡರೆ, ಆಗ ಭಾರತ ನಿಜಕ್ಕೂ ತೊಂದರೆಗೆ ಸಿಲುಕುವ ಅಪಾಯಗಳಿವೆ. ಅದರಲ್ಲೂ ಚೀನಾ ಭಾರತಕ್ಕೆ ಆರ್ಥಿಕವಾಗಿ ತೊಂದರೆ ಉಂಟುಮಾಡುವ ಅಥವಾ ಗಡಿಯಲ್ಲಿ ಸಮಸ್ಯೆ ತಂದೊಡ್ಡುವ ಅಪಾಯಗಳು ದಟ್ಟವಾಗಿವೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement