
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಲಹೆಗಾರ ಪೀಟರ್ ನವರೊ ಮತ್ತೆ ಭಾರತವನ್ನು ಗುರಿಯಾಗಿಸಿ ನಾಲಿಗೆ ಹರಿಬಿಟ್ಟಿದ್ದಾರೆ. ಸೆಪ್ಟೆಂಬರ್ 1ರಂದು ಮಾತನಾಡಿದ ನವರೊ, “ಭಾರತೀಯರಿಗೆ ಆಗುತ್ತಿರುವ ನಷ್ಟದಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು.
ನವರೊ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, “ಭಾರತ ಸುಂಕಗಳ ಮಹಾರಾಜ. ಭಾರತ ಜಗತ್ತಿನಲ್ಲೇ ಅತ್ಯಧಿಕ ಸುಂಕ ಹೊಂದಿರುವ ದೇಶ. ಭಾರತ ಅಮೆರಿಕಾಗೆ ಸಾಕಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಆದರೆ ಇದರಿಂದ ಯಾರಿಗೆ ತೊಂದರೆ ಆಗುತ್ತದೆ? ಅಮೆರಿಕನ್ ಉದ್ಯೋಗಿಗಳು, ತೆರಿಗೆದಾರರು ಮತ್ತು ಉಕ್ರೇನಿಯನ್ನರು” ಎಂದು ನವರೊ ಹೇಳಿದ್ದಾರೆ.
“ಮೋದಿ ಓರ್ವ ಮಹಾನ್ ನಾಯಕ. ಆದರೆ, ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಆಗಿರುವಾಗ, ಮೋದಿ ಯಾಕೆ ಈಗ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರೊಡನೆ ಕೈ ಜೋಡಿಸುತ್ತಿದ್ದಾರೆ? ಭಾರತೀಯರು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ಭಾರತೀಯರಿಗೆ ಉಂಟಾಗುತ್ತಿರುವ ನಷ್ಟದಲ್ಲಿ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು ಎನ್ನುವುದು ನಮ್ಮ ಇಚ್ಛೆ” ಎಂದು ನವರೊ ಹೇಳಿದ್ದಾರೆ.
ನವರೊ ಹೇಳಿಕೆಗಳು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದವು. ಬಹಳಷ್ಟು ಜನರು ನವರೊ ಮಾತುಗಳನ್ನು ಜನಾಂಗೀಯ ನಿಂದನೆ, ಜಾತಿ ನಿಂದನೆ ಮತ್ತು ಭಾರತವನ್ನು ಓರಿಯೆಂಟಲಿಸ್ಟ್ ಮಸೂರದ ಮೂಲಕ ನೋಡುವುದರಿಂದ ಬಂದ ಮಾತುಗಳು ಎಂದು ಆರೋಪಿಸಿದ್ದಾರೆ.
ಓರಿಯೆಂಟಲಿಸ್ಟ್ ಮಸೂರ ಎನ್ನುವ ಪದ ಪಾಶ್ಚಾತ್ಯ ಜನರು ಏಷ್ಯನ್ ದೇಶಗಳನ್ನು ತಮ್ಮ ತಪ್ಪು ಕಲ್ಪನೆಗಳು ಮತ್ತು ಪೂರ್ವಗ್ರಹಪೀಡಿತ ಆಲೋಚನೆಗಳಿಂದ (ಜನರು ಅಥವಾ ಸಂಸ್ಕೃತಿಯ ಕುರಿತು ಒಂದು ಬದಲಿಸಲು ಸಾಧ್ಯವಿಲ್ಲದ, ಅತಿಯಾಗಿ ಸರಳೀಕರಿಸಿದ ಆಲೋಚನೆಗಳು ಅಥವಾ ಕಲ್ಪನೆಗಳು. ಇವು ಸಾಮಾನ್ಯವಾಗಿ ವಾಸ್ತವಕ್ಕೆ ದೂರಾಗಿರುತ್ತವೆ) ಬಣ್ಣಿಸುತ್ತಾರೆಯೇ ಹೊರತು, ನೈಜ ಸಂಸ್ಕೃತಿ ಮತ್ತು ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ನಡೆಸುವುದಿಲ್ಲ.
ಉದಾಹರಣೆಗೆ, ಭಾರತದ ಪ್ರಗತಿ ಮತ್ತು ವೈವಿಧ್ಯತೆಯನ್ನು ಕಡೆಗಣಿಸಿ, ಭಾರತವನ್ನು ಇಂದಿಗೂ ಬಡತನ ಪೀಡಿತ, ಮಾಟ ಮಂತ್ರಗಳ ದೇಶ ಎಂಬಂತೆ ಪರಿಗಣಿಸುವುದು.
ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಅಧಿಕಾರ, ಸಂಪನ್ಮೂಲಗಳು ಮತ್ತು ಸಾಂಸ್ಕೃತಿಕ ಪ್ರಭಾವದಿಂದ ಉನ್ನತ ಹಂತದಲ್ಲಿದ್ದಾರೆ. ಆದರೆ, ಸಾಮಾನ್ಯವಾಗಿ ಭಾರತದಲ್ಲಿ ಬ್ರಾಹ್ಮಣರು ಸಾಂಪ್ರದಾಯಿಕ ಔದ್ಯಮಿಕ ವರ್ಗಕ್ಕೆ ಸೇರಿದವರಲ್ಲ.
ಅಮೆರಿಕನ್ ಪರಿಭಾಷೆಯಲ್ಲಿ ʼಬ್ರಾಹ್ಮಿಣ್ʼ ಎನ್ನುವ ಪದ ಶ್ರೀಮಂತ ಔದ್ಯಮಿಕ ಕುಟುಂಬಗಳನ್ನು ಸೂಚಿಸುತ್ತದೆ. ಉದಾಹರಣೆಗೆ, ಬೋಸ್ಟನ್ನಿನ ಶ್ರೀಮಂತ ಗಣ್ಯ ವರ್ಗವನ್ನು ʼಬೋಸ್ಟನ್ ಬ್ರಾಹ್ಮಿಣ್ಸ್ʼ ಎಂದು ಕರೆಯಲಾಗುತ್ತದೆ.
ಬೋಸ್ಟನ್ ಬ್ರಾಹ್ಮಿಣ್ಸ್ ಎಂಬ ಪದ ಬೋಸ್ಟನ್ನಿನ ಶ್ರೀಮಂತ, ಉನ್ನತ ಶಿಕ್ಷಣ ಹೊಂದಿರುವ ಪ್ರೊಟೆಸ್ಟೆಂಟ್ ಸಮುದಾಯವನ್ನು ಸೂಚಿಸುತ್ತದೆ. ಈ ಸಮುದಾಯ 1800 ಮತ್ತು 1900ನೇ ಶತಮಾನದ ಆರಂಭದಲ್ಲಿ ಅಪಾರ ಪ್ರಭಾವ, ಅಧಿಕಾರ ಹೊಂದಿತ್ತು. ಅವರು ಸಾಮಾನ್ಯವಾಗಿ ಬ್ರಿಟಿಷ್ ವಸಾಹತುಶಾಹಿಗಳ ವಂಶಜರೇ ಆಗಿರುತ್ತಿದ್ದರು. ಅವರಲ್ಲಿ ಬಹಳಷ್ಟು ಜನರು ವ್ಯಾಪಾರದಿಂದ ಅಪಾರ ಹಣ ಸಂಪಾದಿಸಿ, ಬಳಿಕ ಹಳೆಯದಾದ, ಉತ್ತಮ ಸ್ಥಾನ ಹೊಂದಿರುವ ಕುಟುಂಬದೊಡನೆ ವೈವಾಹಿಕ ಸಂಬಂಧ ಬೆಳೆಸುತ್ತಿದ್ದರು.
ಈ ʼಬೋಸ್ಟನ್ ಬ್ರಾಹ್ಮಿಣ್ʼ ಎಂಬ ಪದವನ್ನು ಲೇಖಕ ಆಲಿವರ್ ವೆಂಡೆಲ್ ಹೋಮ್ಸ್ 1861ರಲ್ಲಿ ಪ್ರಯೋಗಿಸಿದ್ದರು. ಅವರು ಬೋಸ್ಟನ್ನಿನ ಶ್ರೀಮಂತ ಸಮುದಾಯವನ್ನು ʼನ್ಯೂ ಇಂಗ್ಲೆಂಡಿನ ಬ್ರಾಹ್ಮಣ ಜಾತಿʼ ಎಂದು ಕರೆದಿದ್ದರು.
ಈ ಬೋಸ್ಟನ್ ಬ್ರಾಹ್ಮಣರು ಇಂಗ್ಲಿಷ್ ಶ್ರೀಮಂತರನ್ನು ಹೋಲುವ ಜೀವನ ಶೈಲಿ ಮತ್ತು ಮೌಲ್ಯಗಳನ್ನು ಅನುಸರಿಸುತ್ತಿದ್ದರು.
ಅಪಾರ ಶ್ರೀಮಂತಿಕೆಯ ಹೊರತಾಗಿ, ಬೋಸ್ಟನ್ನಿನ ಈ ಗಣ್ಯ ವರ್ಗ ಕಲೆಗೆ ಬೆಂಬಲ ನೀಡುವುದಕ್ಕೆ, ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಹೆಸರಾಗಿತ್ತು. ಹಾರ್ವರ್ಡ್ ವಿಶ್ವವಿದ್ಯಾಲಯ ಇವರು ಸ್ಥಾಪಿಸಿದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲಿ ಒಂದಾಗಿದೆ.
ಅಮೆರಿಕಾದ ಮೊದಲ ಪ್ರೌಢಶಾಲೆಯಾದ ಬೋಸ್ಟನ್ ಲ್ಯಾಟಿನ್ ಸ್ಕೂಲ್ ಅನ್ನೂ ಬೋಸ್ಟನ್ ಬ್ರಾಹ್ಮಣರೇ ಸ್ಥಾಪಿಸಿದ್ದರು.
ನ್ಯೂ ಇಂಗ್ಲೆಂಡ್ ಹಿಸ್ಟಾರಿಕಲ್ ಸೊಸೈಟಿಯ ಮಾಹಿತಿಗಳ ಪ್ರಕಾರ, ಬೋಸ್ಟನ್ ಬ್ರಾಹ್ಮಣರು ಕೊಯೇಟ್, ಗ್ರೊಟಾನ್, ಆಂಡೋವರ್, ಫಿಲಿಪ್ಸ್ ಎಕ್ಸೆಟರ್ ನಂತಹ ಗಣ್ಯ ಶಾಲೆಗಳನ್ನು ಸ್ಥಾಪಿಸಿ, ತಮ್ಮ ಮಕ್ಕಳನ್ನು ಅಲ್ಲಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು.
ಅವರು ʼಪ್ರೆಪ್ಪಿʼ ಶೈಲಿಯಲ್ಲಿ ವಸ್ತ್ರ ಧರಿಸಿ (ಅಮೆರಿಕಾದ ಶ್ರೀಮಂತ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಬಳಕೆಯಾಗುತ್ತಿದ್ದ ಸಾಂಪ್ರದಾಯಿಕ ರೀತಿಯ ವಸ್ತ್ರ ಸಂಹಿತೆ), ವಿಶೇಷ ಭಾಷಾ ಶೈಲಿಯಲ್ಲಿ ಮಾತನಾಡುತ್ತಿದ್ದರು. ಅವರು ಬಹುತೇಕ ತಮ್ಮ ಸಮುದಾಯದ ಒಳಗೇ ವೈವಾಹಿಕ ಸಂಬಂಧ ಬೆಳೆಸುತ್ತಿದ್ದು, ಇತರರು ಈ ಸಮುದಾಯವನ್ನು ʼಸ್ನಾಬ್ಸ್ʼ ಎಂದು ಕರೆಯುತ್ತಿದ್ದರು.
ಇಲ್ಲಿ ಸ್ನಾಬ್ಸ್ ಎಂದರೆ, ತಮ್ಮನ್ನು ತಾವು ಶ್ರೀಮಂತಿಕೆ, ಶಿಕ್ಷಣ ಅಥವಾ ಸಾಮಾಜಿಕ ಸ್ಥಾನಮಾನಗಳ ಕಾರಣದಿಂದ ಇತರರಿಗಿಂತ ಉತ್ತಮರು ಎಂದು ಪರಿಗಣಿಸುವವರು.
ಬಹಳಷ್ಟು ಬೋಸ್ಟನ್ ಬ್ರಾಹ್ಮಣರು ಒಂದೇ ರೀತಿಯ ಶಾಲೆ ಕಾಲೇಜುಗಳಿಗೆ ತೆರಳುತ್ತಿದ್ದು, ಒಂದೇ ಸಾಮಾಜಿಕ ಗುಂಪುಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಅವರ ವಿವಾಹಗಳೂ ಈ ಗುಂಪುಗಳೊಳಗೇ ನಡೆಯುತ್ತಿತ್ತು. ಇದು ಅವರಿಗೆ ಒಂದೇ ಜಾತಿಯೊಳಗೆ ವಿವಾಹವಾಗುವ ರೀತಿಯ ಗುಣಮಟ್ಟವನ್ನು ಒದಗಿಸುತ್ತಿತ್ತು. ಅವರು ಹೊರಗಿನ ಗುಂಪುಗಳೊಡನೆ ಬೆರೆಯುವಂತಹ ಸಾಧ್ಯತೆಗಳು ಇರಲಿಲ್ಲ.
ಅಮೆರಿಕಾದ ಮಾಜಿ ಅಧ್ಯಕ್ಷರಾದ ಜಾನ್ ಆಡಮ್ಸ್, ಜಾನ್ ಕ್ವಿನ್ಸಿ ಆಡಮ್ಸ್, ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಮತ್ತು ಕವಿ ಟಿ ಎಸ್ ಎಲಿಯಟ್ ಈ ಬೋಸ್ಟನ್ ಬ್ರಾಹ್ಮಿಣ್ ಸಮುದಾಯಕ್ಕೆ ಸೇರಿದ ಪ್ರಮುಖ ವ್ಯಕ್ತಿಗಳು.
ʼಬೋಸ್ಟನ್ ಬ್ರಾಹ್ಮಿಣ್ʼ ಸಮುದಾಯ ದೀರ್ಘಕಾಲ ಬೋಸ್ಟನ್ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಮುಖ ಕಾರಣವೆಂದರೆ, ಬೋಸ್ಟನ್ ನಗರ ಒಂದು ಪರ್ಯಾಯ ದ್ವೀಪವಾಗಿತ್ತು (ಬಹುತೇಕ ನೀರಿನಿಂದ ಆವೃತವಾದ ಭೂಮಿಯಾಗಿದ್ದು, ಇಲ್ಲಿಗೆ ತೆರಳಲು ಒಂದು ಅತ್ಯಂತ ಸಣ್ಣದಾದ ಮಾರ್ಗವಿತ್ತು). ಇದು ಇತರ ಅಮೆರಿಕನ್ ನಗರಗಳಿಗೆ ಹೋಲಿಸಿದರೆ, ಬೋಸ್ಟನ್ ನಗರಕ್ಕೆ ಹೊರಗಿನ ಜನರನ್ನು ನಿರ್ಬಂಧಿಸಲು ಹೆಚ್ಚಿನ ಅನುಕೂಲ ಕಲ್ಪಿಸುತ್ತಿತ್ತು.
ಬೋಸ್ಟನ್ ಬ್ರಾಹ್ಮಣರು ವಲಸಿಗರು ಆಗಮಿಸುವುದನ್ನು ವಿರೋಧಿಸುತ್ತಿದ್ದು (ಅವರಿಗೆ ತಮ್ಮ ನಗರದಲ್ಲಿ ವಿದೇಶಿಗರು ನೆಲೆಸುವುದು ಇಷ್ಟವಿರಲಿಲ್ಲ), ತಮಗೆ ಸಮ್ಮತವಾಗದ ಪುಸ್ತಕಗಳನ್ನು ನಿಷೇಧಿಸುವುದರ ಪರವಾಗಿದ್ದರು. ಅವರ ಆಲೋಚನೆಗಳು ಇಂದಿಗೂ ರಿಪಬ್ಲಿಕನ್ ಪಕ್ಷಕ್ಕೆ ಸಂಪರ್ಕಿತವಾಗಿವೆ.
ಅಮೆರಿಕನ್ ಮಾಧ್ಯಮಗಳಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಬೋಸ್ಟನ್ ಬ್ರಾಹ್ಮಣರು ವಲಸಿಗರನ್ನು ಹೊರಗಿಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಅವರು ಗುಲಾಮಗಿರಿಯನ್ನು ನಿಷೇಧಿಸುವ ಚಳವಳಿಗೆ ಬೆಂಬಲ ನೀಡಿದ್ದರಾದರೂ, ಕರಿಯ ಜನಾಂಗದವರು ಅಥವಾ ಇತರ ಜನಾಂಗೀಯ ಗುಂಪುಗಳೊಡನೆ ತಮ್ಮ ಅಧಿಕಾರ ಅಥವಾ ಸಮಾಜವನ್ನು ಹಂಚಿಕೊಳ್ಳಲು ಸಿದ್ಧರಿರಲಿಲ್ಲ.
ಐರಿಷ್ ವಲಸಿಗ ಸಮುದಾಯದಿಂದ ಬಂದ ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನೆಡಿ ಅವರನ್ನೂ ಬೋಸ್ಟನ್ ಬ್ರಾಹ್ಮಣರು ವ್ಯಂಗ್ಯವಾಡಿ, ಕೀಳಾಗಿ ಕಂಡಿದ್ದರು.
2015ರಲ್ಲಿ ಗಾರ್ಡಿಯನ್ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಲೇಖಕ ತನ್ನ ಅನುಭವವನ್ನು ಹಂಚಿಕೊಂಡಿದ್ದರು. “ನಾನು ಕೆನೆಡಿ ಕುಟುಂಬ ಬೆಳೆದ ಪ್ರದೇಶದ ಬಳಿ ಓರ್ವ ಬಿಳಿಯ ಆಂಗ್ಲೋ – ಸ್ಯಾಕ್ಸನ್ ಮಹಿಳೆಯನ್ನು ಭೇಟಿಯಾಗಿದ್ದೆ. ನಾನು ಆಕೆಯ ಜೊತೆ ಮಾತನಾಡುವಾಗ, ನೀವು ಜಾನ್, ಬಾಬಿ (ರಾಬರ್ಟ್ ಎಫ್ ಕೆನಡಿ) ಅಥವಾ ಟೆಡ್ಡಿ (ಎಡ್ವರ್ಡ್ ಕೆನೆಡಿ) ಅವರನ್ನೇನಾದರೂ ಭೇಟಿಯಾಗಿದ್ದಿರೇ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಆಕೆ, ಕೆನೆಡಿ ಕುಟುಂಬ ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾಗಿತ್ತೇ ಹೊರತು ಸ್ಥಳೀಯವಾಗಿ ಅಲ್ಲ. ಐರಿಷ್ ಜನರು ಈ ಪಟ್ಟಣದಲ್ಲಿ ಬೆಳೆದುದನ್ನು ಸ್ಥಳೀಯರು ಎಂದಿಗೂ ಕ್ಷಮಿಸಲಿಲ್ಲ ಎಂದಿದ್ದರು” ಎಂದು ಲೇಖಕ ವಿವರಿಸಿದ್ದರು.
ಇಲ್ಲಿ ಜಾನ್ ಎಂದರೆ ಅಮೆರಿಕಾದ 35ನೇ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನೆಡಿ (1961 – 1963). ಅವರನ್ನು 1963ರಲ್ಲಿ ಹತ್ಯೆಗೈಯಲಾಯಿತು.
ಎಡ್ವರ್ಡ್ ಕೆನೆಡಿ (ಟೆಡ್ಡಿ) ಬಹುತೇಕ 47 ವರ್ಷಗಳ ಕಾಲ (1962 – 2009) ಮಸಾಚುಸೆಟ್ಸ್ ಸೆನೇಟರ್ ಆಗಿದ್ದು, ಅಮೆರಿಕನ್ ರಾಜಕಾರಣದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು.
ರಾಬರ್ಟ್ ಎಫ್ ಕೆನೆಡಿ (ಬಾಬಿ) ನ್ಯೂಯಾರ್ಕಿನ ಸೆನೇಟರ್ ಆಗಿ ಕಾರ್ಯಾಚರಿಸಿದ್ದರು. ತನ್ನ ಸಹೋದರ ಜಾನ್ ಎಫ್ ಕೆನೆಡಿ ಅಧ್ಯಕ್ಷೀಯ ಅವಧಿಯಲ್ಲಿ ಅಟಾರ್ನಿ ಜನರಲ್ (1961 – 1964) ಆಗಿಯೂ ಸೇವೆ ಸಲ್ಲಿಸಿದ್ದರು. ಓರ್ವ ಜನಪ್ರಿಯ ರಾಜಕಾರಣಿಯಾಗಿದ್ದ ರಾಬರ್ಟ್ ಅವರು 1968ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದು, ಈ ಸಂದರ್ಭದಲ್ಲಿ ಅವರನ್ನು ಹತ್ಯೆಗೈಯಲಾಯಿತು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement