
ಅಮೆರಿಕಾದಂತಹ ಸಾಹುಕಾರ ದೇಶ ಸಾಲದಲ್ಲಿ ಮುಳುಗಿದೆ ಎನ್ನುವ ವಿಷಯ ಬಂದಾಗೆಲ್ಲಾ ಎಲ್ಲರ ಪ್ರಶ್ನೆ 'ಈ ದೇಶಗಳಿಗೆ ಸಾಲ ಕೊಡುವವರು ಯಾರು?' ಎನ್ನುವುದೇ ಆಗಿರುತ್ತದೆ. ಭಾರತ ಸಹಿತ ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿವೆ. ಸಾಲವಿಲ್ಲದ ದೇಶಗಳೇ ಇಲ್ಲವೇ ಎಂದರೆ, ಇದೆ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ದೇಶಗಳು ಸಾಲವನ್ನು ಏಕೆ ಮಾಡುತ್ತವೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಗಮನಿಸಿ ಒಂದು ವರ್ಷದಲ್ಲಿ ಸರಕಾರಕ್ಕೆ ಬರುವ ಎಲ್ಲಾ ಆದಾಯಕ್ಕಿಂತ ಹೆಚ್ಚಿನ ಖರ್ಚು ಇದ್ದಾಗ ಅದನ್ನು ಫಿಸ್ಕಲ್ ಡೆಫಿಸಿಟ್ ಎನ್ನಲಾಗುತ್ತದೆ. ಅಂದರೆ ಸರಕಾರದ ಒಟ್ಟು ಆದಾಯ 100 ರೂಪಾಯಿ ಇದ್ದು, ಖರ್ಚು 103 ರೂಪಾಯಿ ಇದ್ದಾಗ ಆದಾಯ ಮೀರಿದ ಖರ್ಚು 3 ರೂಪಾಯಿ ಫಿಸ್ಕಲ್ ಡೆಫೆಸಿಟ್ ಎನ್ನಿಸಿಕೊಳ್ಳುತ್ತದೆ. ಆದಾಯಕ್ಕಿಂತ ಕಡಿಮೆ ಖರ್ಚು ಇದ್ದಾಗ ಅದನ್ನು ಫಿಸ್ಕಲ್ ಸರ್ಪ್ಲಸ್ ಎನ್ನಲಾಗುತ್ತದೆ. ಆದಾಯ ಮತ್ತು ಖರ್ಚು ಸಮವಾಗಿದ್ದಾಗ ಅದನ್ನು ಫಿಸ್ಕಲ್ ಈಕ್ವಲ್ ಎಂದು ಕರೆಯಲಾಗುತ್ತದೆ.
ಜಗತ್ತಿನಲ್ಲಿ ಈ ವರ್ಷ ಅಂದರೆ 2025 ರಲ್ಲಿ ಫಿಸ್ಕಲ್ ಸರ್ಪ್ಲಸ್ ಹೊಂದಿರುವ ದೇಶಗಳು ಟುವಾಲು, ಮಕಾವು, ಕತಾರ್, ತೊಂಗ ಮತ್ತು ಪ ಲವ್ ಎನ್ನುವ ಐದು ದೇಶಗಳು ಮಾತ್ರ. ಈ ವರ್ಷದ ಮೇ ತಿಂಗಳಲ್ಲಿ ಭಾರತ ಕೂಡ ಈ ರೀತಿಯ ಸರ್ಪ್ಲಸ್ ಕಂಡಿತ್ತು. ಆದರೆ ಪೂರ್ಣಾವಧಿಯಲ್ಲಿ ಅದು ಸಾಧ್ಯವಿಲ್ಲದ ಮಾತು. ಭಾರತ ಕೂಡ ಜಿಡಿಪಿಯ 4.4 ಪ್ರತಿಶತ ವಿತ್ತೀಯ ಕೊರತೆಯನ್ನು ಹೊಂದಿದೆ. ಈ ರೀತಿಯ ಕೊರತೆಯನ್ನು ತುಂಬಿಕೊಳ್ಳಲು ಸರಕಾರಗಳು ಸಾಲವನ್ನು ಮಾಡಬೇಕಾಗುತ್ತದೆ.
ಈ ರೀತಿ ಸಾಲ ಮಾಡಿದ ಮೇಲೆ ಅದನ್ನು ವಾಪಸ್ಸು ಕೂಡ ನೀಡಬೇಕಾಗುತ್ತದೆ. ಅದು ಕೂಡ ಒಪ್ಪಿಕೊಂಡ ಬಡ್ಡಿಯ ಜೊತೆಗೆ! ಇದನ್ನು ಒಂದು ಉದಾಹರಣೆಯ ಮೂಲಕ ನೋಡೋಣ. ಅಮೆರಿಕಾ ಸರಕಾರ 100 ರೂಪಾಯಿ ಸಾಲವನ್ನು ಮಾಡಿದೆ ಎಂದುಕೊಳ್ಳೋಣ ಅದನ್ನು ಮೂರು ವರ್ಷದಲ್ಲಿ ಮರಳಿ ಕೊಡುವ ಒಪ್ಪಂದವನ್ನು ಮಾಡಿಕೊಂಡಿದೆ ಎಂದುಕೊಳ್ಳೋಣ. ವಾರ್ಷಿಕ ಬಡ್ಡಿಯ ರೂಪದಲ್ಲಿ 2 ರೂಪಾಯಿ ಕೊಡುವ ತೀರ್ಮಾನವಾಗಿದೆ ಎಂದು ಕೊಳ್ಳೋಣ. ಅಮೇರಿಕಾ ಸರಕಾರ ವರ್ಷದ ನಂತರ 2 ರೂಪಾಯಿ ಬಡ್ಡಿ ಕೊಡಬೇಕಾಗುತ್ತದೆ, ಇದರ ಜೊತೆಗೆ ಆ ವರ್ಷ ಕೂಡ ವಿತ್ತೀಯ ಕೊರತೆ ಇದ್ದೆ ಇರುತ್ತದೆ. ಆ ವರ್ಷದ ವಿತ್ತೀಯ ಕೊರತೆ 3 ರೂಪಾಯಿ ಎಂದುಕೊಳ್ಳೋಣ. ಈಗ ಅಮೇರಿಕಾ ದೇಶಕ್ಕೆ ಐದು ರೂಪಾಯಿ ಸಾಲ ಬೇಕಾಗುತ್ತದೆ. 2 ರೂಪಾಯಿ ಬಡ್ಡಿ ನೀಡಲು ಮತ್ತು ಉಳಿದ 3 ರೂಪಾಯಿ ಪ್ರಸ್ತುತ ವರ್ಷದ ಖರ್ಚನ್ನು ಸರಿದೂಗಿಸಲು! ಇದೆ ಪುನರಾವರ್ತನೆ ಆಗುತ್ತಾ ಹೋಗುತ್ತದೆ. ಅಮೇರಿಕಾ ಸರಕಾರ ಕಳೆದ 60 ವರ್ಷದಿಂದ ಈ ರೀತಿಯ ವಿತ್ತೀಯ ಕೊರತೆಯ ಕಾರಣದಿಂದ ಸಾಲದ ಮೇಲೆ ಸಾಲ ಮಾಡುತ್ತಾ ಬಂದಿದೆ.
ಮೇಲಿನ ಉದಾಹರಣೆಯಲ್ಲಿ ಅಮೇರಿಕಾ ದೇಶದ ಹೆಸರನ್ನು ಬಳಸಿದ್ದೇನೆ. ಇದು ಎಲ್ಲಾ ದೇಶಗಳ ಕಥೆ. ಇದರಲ್ಲಿ ಯಾವ ದೇಶಗಳು ಎಷ್ಟು ವರ್ಷದಿಂದ ವಿತ್ತೀಯ ಕೊರತೆಯನ್ನು ಅನುಭವಿಸುತ್ತಿವೆ ಎನ್ನುವ ಅಂಶ ಮಾತ್ರ ಬದಲಾಗುತ್ತದೆ. ಉಳಿದಂತೆ ಮಿಕ್ಕೆಲ್ಲ ಅಂಶಗಳು ಒಂದೇ ಆಗಿರುತ್ತವೆ.
ಜಗತ್ತಿನ ಬಹುತೇಕ ಎಲ್ಲಾ ದೇಶಗಳೂ ಕೂಡ ಸಾಲದಲ್ಲಿವೆ ಎನ್ನುವುದು ಇದರಿಂದ ಗೊತ್ತಾಯ್ತು. ಸಾಲವಿಲ್ಲದ ದೇಶವಿಲ್ಲ, ಅಭಿವೃದ್ಧಿಯಿಲ್ಲ, ಬದುಕಿಲ್ಲ ಎನ್ನುವ ಮಟ್ಟಕ್ಕೆ ನಾವು ನಮ್ಮ ವಿತ್ತೀಯ ನೀತಿಗಳನ್ನು ತಿರುಚಿಕೊಂಡು ಬಿಟ್ಟಿದ್ದೇವೆ. ಇಲ್ಲಿ ಎಲ್ಲರೂ ತಪ್ಪಿತಸ್ಥರೆ, ಹೀಗಾಗಿ ಎಷ್ಟರ ಮಟ್ಟಿಗೆ ತಪ್ಪು ಮಾಡಿದರೆ ಸರಿ, ಎಷ್ಟರ ಮೇಲೆ ಹೋದರೆ ತಪ್ಪು ಎನ್ನುವ ನಿಯಮಗಳನ್ನು ಕಟ್ಟಿಕೊಳ್ಳಲಾಯ್ತು. ಇದನ್ನು ವಿತ್ತೀಯ ಪರಿಭಾಷೆಯಲ್ಲಿ ಡೆಟ್ ಸೀಲಿಂಗ್ ಎನ್ನಲಾಗುತ್ತದೆ. ಅಂದರೆ ಈ ಮಟ್ಟವನ್ನು ಮೀರಿದರೆ ಅಪಾಯ ಎನ್ನುವ ಎಚ್ಚರಿಕೆಯನ್ನು ನೀಡುವ ಲಿಮಿಟ್. ಆಯಾ ದೇಶದ ವಾರ್ಷಿಕ ಜಿಡಿಪಿಯನ್ನು ಸಾಲದ ಮೊತ್ತ ಎಂದಿಗೂ ಮೀರಬಾರದು ಎನ್ನುವುದು ಅಲಿಖಿತ ನಿಯಮ. ಈ ನಿಟ್ಟಿನಲ್ಲಿ ಇಂದಿಗೆ ಅಮೇರಿಕಾದ ಸಾಲ ಸೆಪ್ಟೆಂಬರ್ 3, 2025 ರಲ್ಲಿ 37.4 ಟ್ರಿಲಿಯನ್ ಅದೇ ಸಮಯದಲ್ಲಿ ಜಿಡಿಪಿ 30.35 ಟ್ರಿಲಿಯನ್ . ಅಂದರೆ ಅಮೇರಿಕಾ ಡೆಟ್ ಸೀಲಿಂಗ್ ಕೂಡ ಮೀರಿದೆ. ಹೀಗಾಗಿ ಅಮೇರಿಕಾ ಎಕಾನಮಿ ಅಪಾಯದಲ್ಲಿದೆ.
ಭಾರತದ ಸಾಲದ ಮೊತ್ತ ಮಾರ್ಚ್ 2025 ರ ಪ್ರಕಾರ 2.2 ಟ್ರಿಲಿಯನ್, ಅದೇ ಸಮಯದಲ್ಲಿ ನಮ್ಮ ಜಿಡಿಪಿ 4 ಟ್ರಿಲಿಯನ್ ಡಾಲರ್. ಅಂದರೆ ನಮ್ಮ ಜಿಡಿಪಿಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿನ ಸಾಲವಿದೆ. ಅಂದರೆ ಜಿಡಿಪಿಯ 55 ಪ್ರತಿಶತ ಸಾಲವಿದೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಅಮೇರಿಕಾ ಜಿಡಿಪಿಯ123 ಪ್ರತಿಶತ ಸಾಲವನ್ನು ಹೊಂದಿದೆ. ಚೀನಾ ಜಿಡಿಪಿಯ 96 ಪ್ರತಿಶತ ಸಾಲವನು ಹೊಂದಿದೆ. ಜಪಾನ್ 235 ಪ್ರತಿಶತ ಸಾಲವನ್ನು ಹೊಂದಿದೆ. ಯೂರೋಪಿಯನ್ ಯೂನಿಯನ್ ಸರಿಸುಮಾರು ಜಿಡಿಪಿಯ 82 ಪ್ರತಿಶತ ಸಾಲವನ್ನು ಹೊಂದಿದೆ.
ದೇಶಗಳು ಸಾಲವನ್ನು ಮಾಡುವ ಪರಿಸ್ಥಿತಿ ಏಕೆ ಉಂಟಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಂಡೆವು. ಈಗ ಈ ದೇಶಗಳಿಗೆ ಸಾಲವನ್ನು ಯಾರು ಕೊಡುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.
ಪ್ರತಿ ದೇಶವೂ ತನಗೆ ಬೇಕಾದ ಹಣವನ್ನು ಮುಖ್ಯವಾಗಿ ಎರಡು ಮಾರ್ಗಗಳ ಮೂಲಕ ಸಾಲವನ್ನು ಪಡೆದುಕೊಳ್ಳುತ್ತದೆ.
ಇಂಟರ್ನಲ್ ಅಥವಾ ಡೊಮೆಸ್ಟಿಕ್ ಮೂಲದ ಮೂಲಕ, ಅಂದರೆ ತನ್ನ ದೇಶದ ಪ್ರಜೆಗಳಿಗೆ ಬಾಂಡ್ , ಸೆಕ್ಯುರಿಟೀಸ್ ಮಾರುವುದರಿಂದ ಸಾಲವನ್ನು ಪಡೆದುಕೊಳ್ಳುತ್ತದೆ, ಬ್ಯಾಂಕುಗಳ ಮೂಲಕ ಅಂದರೆ ಸರಕಾರ ಹೊರಡಿಸುವ ಡೆಟ್ ಬಾಂಡ್ ಗಳನ್ನು ಬ್ಯಾಂಕು ಖರೀದಿಸುವುದರ ಮೂಲಕ ಸರಕಾರಕ್ಕೆ ಹಣವನ್ನು ನೀಡುತ್ತದೆ. ನಮ್ಮ ಪ್ರಾವಿಡೆಂಟ್ ಫಂಡ್ ಹಣವನ್ನು ಸರಕಾರ ಬಳಸಿಕೊಂಡು ಬಡ್ಡಿ ನೀಡುತ್ತದೆ. ಪಬ್ಲಿಕ್ ಸೆಕ್ಟರ್ ಸಂಸ್ಥೆಗಳಿಂದ ಕೂಡ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತದೆ.
ಎಕ್ಸ್ಟರ್ನಲ್ ಅಥವಾ ಹೊರ ಜಗತ್ತಿನಿಂದ, ಅಂದರೆ ತನ್ನ ದೇಶದಿಂದ ಹೊರತಾಗಿ ಬೇರೆ ದೇಶಗಳಿಂದ ಅಥವಾ ಇಂಟರ್ನಾಷನ ಮಾನಿಟರಿ ಫಂಡ್ ಮೂಲಕ, ಅಥವಾ ಬೇರೆ ದೇಶಗಳಿಗೆ ಡೆಟ್ ಬಾಂಡ್ ವಿತರಿಸುವ ಮೂಲಕ ಸಾಲವನ್ನು ಪಡೆದುಕೊಳ್ಳುವ ವಿಧಾನ. ಗಮನಿಸಿ ಯಾವ ದೇಶಗಳು ಆಂತರಿಕ ಮೂಲದ ಮೂಲಕ ಅಂದರೆ ತನ್ನ ದೇಶದ ಒಳಗೆ ಸಾಲವನ್ನು ಪಡೆದುಕೊಳ್ಳುತ್ತದೆ ಅದನ್ನು ಕೆಟ್ಟದ್ದು ಎಂದು ನೋಡಲಾಗುವುದಿಲ್ಲ. ಬಾಹ್ಯ ಸಾಲ ಅಂದರೆ ಇತರೆ ದೇಶಗಳಿಂದ ಅಥವಾ ಐಎಂಎಫ್ ಮೂಲಕ ತೆಗೆದುಕೊಂಡಾಗ ಅದನ್ನು ಕೆಟ್ಟ ಸಾಲ ಎಂದು ನೋಡಲಾಗುತ್ತದೆ. ಇದನ್ನು ಎಕ್ಸ್ಟರ್ನಲ್ ಡೆಟ್ ಎನ್ನಲಾಗುತ್ತದೆ. ಸಾಲದ ಮೊತ್ತದಲ್ಲಿ ಎಷ್ಟು ಹೊರಗಿನ ಸಾಲವಿದೆ ಎನ್ನುವುದರ ಆಧಾರದ ಮೇಲೆ ದೇಶದ ವಿತ್ತೀಯ ಶಕ್ತಿಯನ್ನು ಕೂಡ ಅಳೆಯಲಾಗುತ್ತದೆ.
ಈ ನಿಟ್ಟಿನಲ್ಲಿ ನೋಡಿದಾಗ ಕೂಡ ಅಮೇರಿಕಾ ಹಿಂದೆ ಬೀಳುತ್ತದೆ. 2025 ರಲ್ಲಿ ಅಮೆರಿಕಾದ ಹೊರಗಿನ ಸಾಲ 28 ಟ್ರಿಲಿಯನ್ ಮೀರಿದೆ. ಒಟ್ಟು ಸಾಲದ 69 ಪ್ರತಿಶತ ಇದಾಗಿದೆ. ಅಂದರೆ ಅಮೆರಿಕಾದ ಒಟ್ಟು ಸಾಲ 100 ರೂಪಾಯಿ ಎಂದು ಕೊಂಡರೆ ಅದರಲ್ಲಿ 31 ರೂಪಾಯಿ ತನ್ನ ದೇಶದಿಂದ ಪಡೆದುಕೊಂಡಿದೆ. ಉಳಿದ 69 ರೂಪಾಯಿ ಹೊರಗಿನಿಂದ ಪಡೆದುಕೊಂಡಿದೆ. ಭಾರತದ ಹೊರಗಿನ ಸಾಲ ೩ ಪ್ರತಿಶತ ಮಾತ್ರ ! ಉಳಿದ 97 ರೂಪಾಯಿ ಸಾಲವನ್ನು ಭಾರತ ತನ್ನ ದೇಶದ ಪ್ರಜೆಗಳಿಂದ ಪಡೆದುಕೊಂಡಿದೆ. ಇದು ಭಾರತದ ಡೊಮೆಸ್ಟಿಕ್ ಮಾರ್ಕೆಟ್ ಎಷ್ಟು ಸಶಕ್ತವಾಗಿದೆ ಎನ್ನುವುದನ್ನು ತೋರಿಸುತ್ತದೆ. ಟ್ರಂಪ್ ಹುಚ್ಚಾಟಗಳ ನಡುವೆ ಕೂಡ ಭಾರತದ ಷೇರು ಮಾರುಕಟ್ಟೆ ಹೇಳಿಕೊಳ್ಳುವ ಕುಸಿತವನ್ನು ಕಂಡಿಲ್ಲ. ಭಾರತದ ಆಂತರಿಕ ಬಳಕೆ ಕುಸಿತ ಕಂಡಿಲ್ಲ, ಇವೆಲ್ಲವೂ ಭಾರತದ ಡೊಮೆಸ್ಟಿಕ್ ಪರ್ಚೇಸಿಂಗ್ ಶಕ್ತಿಯನ್ನು ತೋರಿಸುತ್ತದೆ.
ಭಾರತದ ಸಾಲ 2014 ಕ್ಕೆ ಹೋಲಿಸಿದರೆ ಇಂದಿಗೆ ಅದು ಗಣನೀಯವಾಗಿ ಏರಿದೆ ಎನ್ನುವ ಅಂಕಿಅಂಶಗಳನ್ನು ಮಾತ್ರ ತೋರಿಸಲಾಗುತ್ತದೆ. ಆದರೆ ಆ ಸಾಲದಿಂದ ಆಗಿರುವ ಅಭಿವೃದ್ಧಿಯ ಅಂಕಿಅಂಶಗಳನ್ನು ಕೂಡ ಗಮನಿಸಬೇಕಲ್ಲವೇ? ಅಂದಿಗೆ ನಮ್ಮ ಒಟ್ಟು ಜಿಡಿಪಿ ಮೊತ್ತವೇ 2 ಟ್ರಿಲಿಯನ್ ಡಾಲರ್ ಆಗಿತ್ತು ಎನ್ನುವುದನ್ನು ಮರೆಯುವುದು ಬೇಡ. ಇಂದಿಗೆ ಅದು ದ್ವಿಗುಣವಾಗಿದೆ. ಜಿಡಿಪಿ ದ್ವಿಗುಣವಾದಂತೆ ಸಾಲದ ಮೊತ್ತವೂ ದ್ವಿಗುಣವಾಗಿದೆ. ಅಲ್ಲದೆ ಇನ್ನೊಂದು ಮುಖ್ಯ ಅಂಶವನ್ನು ಗಮನಿಸಬೇಕಾಗುತ್ತದೆ. ಸಾಲದ ಹಣವನ್ನು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿದ ಕಾರಣ ಜನರ ಬಳಿ ಹಣ ಸಂಗ್ರಹವಾಗಿದೆ. ಮತ್ತು ಅದೇ ಜನ ಹೆಚ್ಚುವರಿ ಹಣವನ್ನು ಸರಕಾರಕ್ಕೆ ಸಾಲದ ರೂಪದಲ್ಲಿ ಸರಕಾರಿ ಬಾಂಡ್ ಖರೀದಿಸುವುದರ ಮೂಲಕ ನೀಡಿದ್ದಾರೆ. ಕೆಲವೊಮ್ಮೆ ನೇರವಾಗಿ ಅಲ್ಲದಿದ್ದರೂ ಕೂಡ ಅದು ಜನತೆಯಿಂದ ಬಂದ ಹಣವೇ ಆಗಿದೆ. ಬ್ಯಾಂಕಿನಲ್ಲಿ ಇಟ್ಟ ಎಲ್ಲಾ ಡೆಪಾಸಿಟ್ ಬ್ಯಾಂಕು ತನ್ನ ಗ್ರಾಹಕರಿಗೆ ಸಾಲ ನೀಡುವುದಿಲ್ಲ. ಅದು ಕೂಡ ಸರಕಾರ ಬಾಂಡ್ ಖರೀದಿಸುತ್ತದೆ. ಒಟ್ಟಾರೆ ಎಲ್ಲವೂ ಜನತೆಯ ಹಣ , ಭಾರತದ ಆಂತರಿಕ ಹಣ. ಕಳೆದ 10 ವರ್ಷದಲ್ಲಿ ಸಾಲ ದುಪ್ಪಟ್ಟಾಗಿದ್ದರೂ ಕೂಡ ಭಾರತ ಆಂತರಿಕವಾಗಿ ಬಹಳ ಶಕ್ತಿಶಾಲಿಯಾಗಿದೆ. ಅಂದರೆ ಸಾಲದ ಹಣ ದುರುಪಯೋಗವಾಗಿಲ್ಲ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಾಗಿದೆ.
ಕೊನೆಮಾತು: ಅಂಕಿಸಂಖ್ಯೆಗಳು ಎಂದಿಗೂ ಸುಳ್ಳು ಹೇಳುವುದಿಲ್ಲ. ನಾವು ನಮ್ಮ ಮೂಗಿನ ನೇರಕ್ಕೆ ಅವುಗಳನ್ನು ತಿರುಚಬಹುದು, ಆದರೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳಿಗೂ ಅಂಕಿಅಂಶಗಳಿಗೂ ತಾಳೆ ಆಗಿದ್ದರೆ ಹೆಚ್ಚು ಕಾಲ ತಿರುಚಿದ ಅಂಕಿಅಂಶಗಳನ್ನು ವಹಿಸಿಟ್ಟುಕೊಳ್ಳಲು ಆಗುವುದಿಲ್ಲ. ಅದೆಷ್ಟೇ ಶಕ್ತ ದೇಶ ಎಂದುಕೊಂಡರೂ ಅಮೇರಿಕಾ ಕೂಡ ಕುಸಿಯಲೇ ಬೇಕಾಗುತ್ತದೆ. ಸಾಲ ಎನ್ನುವುದು ಇಂದಿನ ದಿನದಲ್ಲಿ ಮಾಡದೇ ಇರಲಾಗದಂತೆ ವ್ಯವಸ್ಥೆ ಬದಲಾಗಿದೆ. ಮೊದಲೇ ಹೇಳಿದಂತೆ ಸಾಲಕ್ಕೂ ಒಂದು ಮಿತಿಯನ್ನು ಅಂದರೆ ಸೀಲಿಂಗ್ ಇದೆ. ಅದರ ಒಳಗೆ ನಾವು ಅದನ್ನು ಇಟ್ಟು ಕೊಂಡು ಮಾಡಿದ ಸಾಲವನ್ನು ಸರಿಯಾಗಿ ಉಪಯೋಗಿಸಿ ಕೊಂಡರೆ ಏನಾಗಬಹುದು ಎನ್ನುವುದಕ್ಕೆ ಭಾರತ ಕಳೆದ ಹತ್ತು ವರ್ಷದಿಂದ ಉದಾಹರಣೆಯಾಗಿ ನಿಂತಿದೆ. ಹೌದು ನಾವು ಚೀನಾ ಅಥವಾ ಅಮೇರಿಕಾ ದೇಶದಷ್ಟು ದೊಡ್ಡ ಆರ್ಥಿಕತೆಯಾಗುವುದಕ್ಕೆ ಸಮಯಬೇಕು. ಆದರೆ ಆತುರದಲ್ಲಿ ಮುಗ್ಗರಿಸುವ ಬದಲು ಈಗ ಸಾಗುತ್ತಿರುವ ವೇಗ ಸರಿಯಾಗಿದೆ. ಭಾರತ ಮುಂದಿನ ಹತ್ತು ವರ್ಷದಲ್ಲಿ ಆಂತರಿಕ ಖರೀದಿ ಶಕ್ತಿಯ ಮಾಪಕದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ ಎನ್ನಿಸಿಕೊಳ್ಳಲಿದೆ.
Advertisement