ವಸಡಿನ ಕಾಯಿಲೆ (ಕುಶಲವೇ ಕ್ಷೇಮವೇ)

ವಸಡಿನ ಕಾಯಿಲೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪೆರಿಯೋಡಾಂಟಲ್ ಡಿಸೀಸ್ ಎಂದು ಕರೆಯುತ್ತಾರೆ.
Gum Disease
ವಸಡಿನ ಕಾಯಿಲೆ online desk
Updated on

ನಮ್ಮ ಆರೋಗ್ಯ ಚೆನ್ನಾಗಿದ್ದರೇ ನಾವೇ ಭಾಗ್ಯವಂತರು. ನಮ್ಮ ದೇಹದಲ್ಲಿ ಯಾವುರೇ ಆರೋಗ್ಯ ಸಮಸ್ಯೆ ಕಂಡುಬಂದರೂ ಅದರ ಲಕ್ಷಣಗಳನ್ನು ಬಾಯಿ ಮೂಲಕ ತಿಳಿಯಬಹುದು. ಇತ್ತೀಚಿನ ದಿನಗಳಲ್ಲಿ ವಸಡಿನಲ್ಲಿ ರಕ್ತಸ್ರಾವ ಆಗುವುದು, ವಸಡು ಊದಿಕೊಳ್ಳುವುದು ಇಂತಹ ಅನೇಕ ಸಮಸ್ಯೆಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ.

ವಸಡಿನ ಕಾಯಿಲೆ ಎಂದರೇನು?

ಬಾಯಿಯ ಸಮಸ್ಯೆಗಳಲ್ಲಿ ಪ್ರಮುಖವಾದುದು ವಸಡಿನ ಕಾಯಿಲೆ. ವಸಡು ನಮ್ಮ ಬಾಯಿಯಲ್ಲಿ ಹಲ್ಲುಗಳನ್ನು ಹಿಡಿದಿಟ್ಟುಕೊಂಡಿರುವ ಮೃದುವಾದ ಭಾಗ. ವಸಡಿಗೆ ಸೋಂಕು ಉಂಟಾಗುವುದನ್ನೇ ವಸಡಿನ ಕಾಯಿಲೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಾಯಿಯಲ್ಲಿ ಸ್ವಚ್ಛತೆಯನ್ನು ಕಾಪಾಡದೇ ಇದ್ದಾಗ ವಸಡಿನ ಕಾಯಿಲೆ ಬರುತ್ತದೆ.

ವಸಡಿನ ಕಾಯಿಲೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪೆರಿಯೋಡಾಂಟಲ್ ಡಿಸೀಸ್ ಎಂದು ಕರೆಯುತ್ತಾರೆ. ಇದು ಹಲ್ಲುಗಳನ್ನು ಹಿಡಿದಿರುವ ವಸಡು ಮತ್ತು ಅದರ ಸುತ್ತಲಿನ ಅಂಗಾಂಗಗಳಲ್ಲಿ ಉಂಟಾಗುವ ಒಂದು ಸಾಮಾನ್ಯವಾದ ಆದರೆ ಗಂಭೀರ ಸಮಸ್ಯೆಯಾಗಿದೆ. ಇದು ಮುಖ್ಯವಾಗಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಹಲ್ಲಿನ ಸ್ವಚ್ಛತೆ ಸರಿಯಾಗಿ ಪಾಲಿಸದಿದ್ದಾಗ ನಿಧಾನವಾಗಿ ಬೆಳೆಯುತ್ತದೆ. ಆರಂಭದಲ್ಲಿ ಇದರ ಲಕ್ಷಣಗಳು ಸೌಮ್ಯವಾಗಿದ್ದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಹಲ್ಲು ಕಳೆದುಕೊಳ್ಳಬೇಕಾಗಬಹುದು.

ವಸಡಿನ ಕಾಯಿಲೆಯ ಲಕ್ಷಣಗಳು

ಈ ಕಾಯಿಲೆಯ ಆರಂಭಿಕ ಹಂತವನ್ನು ಜಿಂಜೈವೈಟಿಸ್ ಎಂದು ಕರೆಯುತ್ತಾರೆ. ಈ ಹಂತದಲ್ಲಿ ವಸಡು ಕೆಂಪಾಗುವುದು, ಊತ ಕಾಣಿಸಿಕೊಳ್ಳುವುದು, ಬ್ರಷ್ ಮಾಡುವಾಗ ಅಥವಾ ಗಟ್ಟಿಯಾದ ಆಹಾರ ತಿನ್ನುವಾಗ ರಕ್ತಸ್ರಾವವಾಗುವುದು ಸಾಮಾನ್ಯ. ಬಹಳಷ್ಟು ಜನರು ಈ ಲಕ್ಷಣಗಳನ್ನು ಗಮನಿಸುವುದೇ ಇಲ್ಲ. ಏಕೆಂದರೆ ಇದು ಹೆಚ್ಚು ನೋವನ್ನುಂಟುಮಾಡುವುದಿಲ್ಲ. ಆದರೆ ಈ ಹಂತದಲ್ಲಿ ಗಮನ ಕೊಟ್ಟರೆ ಹಲ್ಲಿನ ಸರಿಯಾದ ಸ್ವಚ್ಛತೆ ಮೂಲಕ ಸಂಪೂರ್ಣವಾಗಿ ಈ ಕಾಯಿಲೆಯನ್ನು ಗುಣಪಡಿಸಬಹುದು.

ಮುಂದಿನ ಹಂತದಲ್ಲಿ ಕಾಯಿಲೆ ಗಂಭೀರವಾಗಿ ಪೆರಿಯೋಡಾಂಡೈಟಿಸ್ ಆಗಿ ರೂಪಾಂತರಗೊಳ್ಳುತ್ತದೆ. ಈ ಹಂತದಲ್ಲಿ ವಸಡುಗಳು ಹಲ್ಲಿನಿಂದ ದೂರವಾಗುತ್ತವೆ ಮತ್ತು ಸಣ್ಣ ಜಾಗಗಳು ನಿರ್ಮಾಣವಾಗುತ್ತವೆ. ಈ ಜಾಗಗಳಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆಯುತ್ತವೆ. ಇದರ ಪರಿಣಾಮವಾಗಿ ಹಲ್ಲುಗಳನ್ನು ಹಿಡಿದಿರುವ ಎಲುಬಿಗೆ ನಿಧಾನವಾಗಿ ಹಾನಿಯಾಗುತ್ತದೆ. ಹಲ್ಲುಗಳು ಸಡಿಲವಾಗುತ್ತವೆ, ಬಾಯಲ್ಲಿ ದುರ್ಗಂಧ ಉಂಟಾಗುತ್ತದೆ ಮತ್ತು ಕೊನೆಯಲ್ಲಿ ಹಲ್ಲುಗಳು ಬೀಳುವ ಸಾಧ್ಯತೆ ಇದೆ.

ವಸಡಿನ ಕಾಯಿಲೆಗೆ ಏನು ಕಾರಣ?

ವಸಡಿನ ಕಾಯಿಲೆಗೆ ಪ್ರಮುಖ ಕಾರಣ ಪ್ಲಾಕ್ ಎಂಬ ಅಂಟುವ ಪದರ. ಇದು ಹಲ್ಲಿನ ಮೇಲೆ ದಿನನಿತ್ಯ ರೂಪುಗೊಳ್ಳುತ್ತದೆ. ಇದನ್ನು ದಿನವೂ ಹಲ್ಲುಜ್ಜುವಾಗ ಸರಿಯಾಗಿ ತೆಗೆದುಹಾಕದಿದ್ದರೆ ಗಟ್ಟಿಯಾಗುತ್ತದೆ (ಟಾರ್ಟರ್). ಆಗ ಇದನ್ನು ಮನೆಮಟ್ಟದಲ್ಲಿ ತೆಗೆದುಹಾಕಲು ಸಾಧ್ಯವಿಲ್ಲ. ದಂತವೈದ್ಯರನ್ನೇ ಕಾಣಬೇಕು. ಧೂಮಪಾನ, ಮಧುಮೇಹ, ಹಾರ್ಮೋನಲ್ ಬದಲಾವಣೆಗಳು, ಮತ್ತು ಅಗತ್ಯ ಪೋಷಕಾಂಶಗಳ ಕೊರತೆ ಕೂಡ ಈ ಕಾಯಿಲೆಗೆ ಕಾರಣವಾಗಬಹುದು.

ವಸಡು-ಹಲ್ಲು-ಬಾಯಿಯ ಆರೈಕೆ ಹೇಗೆ?

ಈ ಕಾಯಿಲೆಯನ್ನು ತಡೆಗಟ್ಟಲು ಪ್ರತಿದಿನ ಹಲ್ಲಿನ ಸರಿಯಾದ ಆರೈಕೆ ಅತ್ಯಗತ್ಯ. ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಸರಿಯಾಗಿ ಬ್ರಷ್ ಮಾಡುವುದು, ಆಗಾಗ ಡೆಂಟಲ್ ಫ್ಲಾಸ್ ಬಳಸಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದು, ಮತ್ತು ಮೌತ್ ವಾಷ್ ಉಪಯೋಗಿಸುವುದು ಸಹಕಾರಿ. ಜೊತೆಗೆ ಆರು ತಿಂಗಳಿಗೆ ಒಮ್ಮೆ ದಂತವೈದ್ಯರ ಬಳಿ ಹೋಗಿ ಹಲ್ಲುಗಳ ಪರಿಶೀಲನೆ ಮತ್ತು ಸ್ವಚ್ಛತೆ ಮಾಡಿಸಿಕೊಳ್ಳುವುದು ಮುಖ್ಯ.

ಬಾಯಿಯ ಆರೋಗ್ಯಕ್ಕಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ನಾವು ಪಾಲಿಸಬೇಕು. ಅತಿಯಾದ ಜಂಕ್ ಫುಡ್, ಹುರಿದ ಕರಿದ ಪದಾರ್ಥಗಳನ್ನು ಸೇವಿಸಬಾರದು. ಪ್ರತಿ ಬಾರಿ ಆಹಾರ ಸೇವಿಸಿದ ನಂತರ ಬಾಯಿಯನ್ನು ಚೆನ್ನಾಗಿ ಸ್ವಚ್ಛವಾದ ನೀರಿನಿಂದ ಎರಡು ಮೂರು ಮುಕ್ಕಳಿಸಬೇಕು, ಆಹಾರದ ಕಣಗಳು ಬಾಯಿಯಲ್ಲಿ ಉಳಿಯಬಾರದು. ಉಳಿದರೆ ಅದೇ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಸಕ್ಕರೆ ಹೆಚ್ಚು ಇರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು, ಏಕೆಂದರೆ ಅವು ಹಲ್ಲಿನಲ್ಲಿ ಪ್ಲಾಕ್ ಹೆಚ್ಚಿಸುತ್ತವೆ. ಬಾಯಿರುಚಿಗೆಂದು ಎಲ್ಲಾ ಆಹಾರವನ್ನು ಸೇವಿಸಬಾರದು. ಪಾನ್ ಬೀಡಾ ಮತ್ತು ಹೊಗೆಸೊಪ್ಪು ತಿನ್ನಬಾರದು. ಆರೋಗ್ಯಕ್ಕಾಗಿ ನಾವು ಅಹಾರ ಸೇವಿಸುವುದನ್ನು ರೂಢಿಮಾಡಿಕೊಳ್ಳಬೇಕು. ಮದ್ಯಪಾನ-ಧೂಮಪಾನದಿಂದ ದೂರವಿರುವುದು ಕೂಡ ಈ ಕಾಯಿಲೆಯನ್ನು ದೂರವಿಡಲು ಸಹಾಯ ಮಾಡುತ್ತದೆ. ತಂಪು ಪಾನೀಯಗಳ ಸೇವನೆ ಮಾಡುವುದು ಒಳ್ಳೆಯದಲ್ಲ.

ಹಲ್ಲಿನ ಆರೋಗ್ಯವನ್ನು ಕಾಪಾಡಲು ಸರಿಯಾದ ಆಹಾರ ಸೇವನೆ ಅತ್ಯಂತ ಮುಖ್ಯ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಹಾಲು, ಮೊಸರು ಮತ್ತು ಚೀಸ್ ಹಲ್ಲುಗಳನ್ನು ಬಲಪಡಿಸುತ್ತವೆ. ಹಸಿರು ತರಕಾರಿಗಳು ಮತ್ತು ಹಣ್ಣುಗಳು, ವಿಶೇಷವಾಗಿ ಕ್ಯಾರೆಟ್, ಸೇಬು ಮತ್ತು ಪಾಲಕ್ ಹಲ್ಲುಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತವೆ. ಒಣಹಣ್ಣುಗಳ ಸೀಮಿತ ಸೇವನೆ ಒಳ್ಳೆಯದು. ದಿನವೂ ಸಾಕಷ್ಟು ನೀರು ಕುಡಿಯುವುದು ಬಾಯಿಯನ್ನು ತಾಜಾ ಇಡುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಈ ರೀತಿ ಸಮತೋಲನ ಆಹಾರವು ಹಲ್ಲಿನ ಆರೋಗ್ಯವನ್ನು ಕಾಪಾಡಲು ಸಹಾಯಕ.

ಕೊನೆಮಾತು: ಒಟ್ಟಿನಲ್ಲಿ ಹೇಳುವುದಾದರೆ ವಸಡಿನ ಕಾಯಿಲೆ ಆರಂಭದಲ್ಲಿ ಸಣ್ಣ ಸಮಸ್ಯೆಯಂತೆ ಕಂಡರೂ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಬಾಯಿಯ ಸ್ವಚ್ಛತೆ ಮತ್ತು ನಿಯಮಿತ ವೈದ್ಯಕೀಯ ಪರಿಶೀಲನೆ ಮೂಲಕ ಇದನ್ನು ಸುಲಭವಾಗಿ ನಿಯಂತ್ರಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com