ನಾವೆಲ್ಲರೂ ಸಾಲಗಾರರು!: ಸಾಲ ವ್ಯವಸ್ಥೆ ಆರಂಭವಾಗಿದ್ದು ಹೇಗೆ? (ಹಣಕ್ಲಾಸು)

ಕ್ರಿ.ಪೂ. 2000 ದಲ್ಲಿ ಶುರುವಾಯ್ತು ಎನ್ನುವ ಮಾಹಿತಿ ನಮಗೆ ಸಿಗುತ್ತದೆ. ಮೆಸಪಟೋಮಿಯಾ , ಬ್ಯಾಬಿಲೋನಿಯನ್ನರಲ್ಲಿ ಸಾಲವನ್ನು ಧಾನ್ಯ ಅಥವಾ ಬೆಳ್ಳಿ ರೂಪದಲ್ಲಿ ಕೊಡುತ್ತಿದ್ದರು ಮತ್ತು ಅದನ್ನು ಮಣ್ಣಿನ...
Debt (file pic)
ಸಾಲ (ಸಾಂಕೇತಿಕ ಚಿತ್ರ)online desk
Updated on

ಸಾಲ ಎನ್ನುವುದು ಬದುಕಿನ ರೀತಿಯನ್ನೇ ಬದಲಾಯಿಸಿ ಬಿಟ್ಟಿದೆ. ಸಾಲ ಎಂದ ತಕ್ಷಣ ನಮಗೆ ಅದೇನು ಎಂದು ಗೊತ್ತಾಗುತ್ತದೆ. ಆದರೆ ಸಾಲಕ್ಕೆ ಸಾಲ ಎಂದು ಹೆಸರಿಡುವುದಕ್ಕೆ ಮುಂಚಿನಿಂದ ಈ ಸಾಲ ಇತ್ತು ಎಂದರೆ ಆಶ್ಚರ್ಯವಾಗುತ್ತೆ ಅಲ್ವಾ ? ಹೌದು ಇವತ್ತು ನಾವು ನೋಡುತ್ತಿರುವ ಸಾಲದ ಪರಿಕಲ್ಪನೆಗೆ ಮುಂಚೆಯೇ ನಮ್ಮ ಸಮಾಜದಲ್ಲಿ ಇದಿತ್ತು. ನೆರೆಹೊರೆಯವರಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಪಡೆದುಕೊಂಡು ಆ ನಂತರ ಅದನ್ನು ಮರಳಿ ಕೊಡುವುದು ಸಾಲದ ಒಂದು ರೂಪ. ಆದರೆ ಅವತ್ತಿಗೆ ಈ ಕ್ರಿಯೆಗೆ ಸಾಲ ಎಂದು ಹೆಸರಿಟ್ಟಿರಲಿಲ್ಲ! ಬಡ್ಡಿ ಲೆಕ್ಕಾಚಾರವೂ ಇದರಡಿಯಲ್ಲೇ ಬರುತ್ತದೆ.

ಉದಾಹರಣೆಗೆ ನೋಡಿ ರಾಮಕ್ಕ ತನಗೆ ಬೇಕಾದ ಸಕ್ಕರೆಯನ್ನು ಪಕ್ಕದ ಮನೆಯ ಈರಕ್ಕ ನಿಂದ ಪಡೆದುಕೊಳ್ಳುತ್ತಾರೆ. ಅದನ್ನು ವಾರದ ನಂತರ ಹಿಂತಿರಿಗಿಸುವ ಸಮಯದಲ್ಲಿ ಮನೆಯಲ್ಲಿ ಮಾಡಿದ್ದ ಪಕೋಡವನ್ನು ನೀಡುತ್ತಾರೆ. ಇದು ಸಾಲ ಮತ್ತು ಬಡ್ಡಿಯ ರೂಪಗಳು. ಆದರೆ ಇಲ್ಲಿ ಯಾವುದೇ ಡೆಫಿನಿಶನ್ ಇರಲಿಲ್ಲ. ಬಡ್ಡಿ ಕೊಡಬೇಕು , ಇಂತಿಷ್ಟು ಎನ್ನುವ ಕಡ್ಡಾಯವೂ ಇರಲಿಲ್ಲ. ಇಲ್ಲಿ ಎಲ್ಲವೂ ಪ್ರೀತಿ , ವಿಶ್ವಾಸ ಮತ್ತು ನಂಬಿಕೆಯ ಆಧಾರದಲ್ಲಿ ನಡೆಯಿತು. ಇದಕ್ಕೆ ಇವತ್ತಿನ ರೂಪ ಸಿಕ್ಕದ್ದು ಬದುಕು , ಸಮಾಜ , ಜೀವನ ಬದಲಾಗಲು ಕಾರಣವಾಯ್ತು.

ಸಾಲ ಎಂದರೇನು?: ಸಾಲ ಎಂದರೆ ಮುಂದಿನ ಹಲವಾರು ವರ್ಷಗಳಲ್ಲಿ ದುಡಿಯಬಹುದಾದ , ಅಥವಾ ಸಮಪಡಿಸಬಹುದಾದ ಸಂಭಾವ್ಯ ಹಣವನ್ನು ಇಂದು ಮುಂಗಡವಾಗಿ ಪಡೆದುಕೊಳ್ಳುವುದು ಎಂದರ್ಥ. ಹೀಗೆ ನಾವು ಹಣವನ್ನು ಮುಂಗಡವಾಗಿ ಪಡೆದುಕೊಳ್ಳಬಹುದು. ಆದರೆ ಅದನ್ನು ಬಡ್ಡಿಯ ಸಮೇತ ವಾಪಸ್ಸು ಕೂಡ ನೀಡಬೇಕಾಗುತ್ತದೆ.

ಈ ಕ್ರಿಯೆಯಲ್ಲಿ ನಾವು ಪಡೆದುಕೊಂಡ ಹಣದ ದುಪ್ಪಟ್ಟು ನಾವು ಮರುಪಾವತಿಸಿರುತ್ತೇವೆ ಎನ್ನವುದನ್ನು ನಾವು ಗಮನಿಸುವುದಿಲ್ಲ. ಇದು ಮಹಾಪರಾಧ. ಸಾಲ ಮಾಡದೆ ಅಭಿವೃದ್ಧಿ ಹೇಗೆ ಸಾಧ್ಯ ? ಎನ್ನುವ ಪ್ರಶ್ನೆ ಕೇಳುವ ಮಟ್ಟಕ್ಕೆ ಬದುಕು ಬದಲಾಗಿ ಬಿಟ್ಟಿದೆ. ಆದರೆ ಗಮನಿಸಿ ಸಾಲದಲ್ಲಿ ಕೂಡ ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲ ಎಂದಿರುತ್ತದೆ. ಮನೆಗಾಗಿ ಸಾಲ , ಶಿಕ್ಷಣಕ್ಕಾಗಿ ಸಾಲ ಮತ್ತು ವ್ಯವಹಾರಕ್ಕಾಗಿ ಸಾಲ ಮಾಡುವುದು ಉನ್ನತಿಗಾಗಿ ಮಾಡುವುದು ಎನ್ನಿಸಿಕೊಳ್ಳುತ್ತವೆ. ಕಾರು , ಐ ಫೋನ್ , ಪ್ರವಾಸಕ್ಕೆ ಇತ್ಯಾದಿಗಳು ಕೆಟ್ಟ ಸಾಲ ಎನ್ನಿಸಿಕೊಳ್ಳುತ್ತವೆ. ಅದರ ಇಲ್ಲಿ ಇನ್ನೊಂದು ಅಂಶವನ್ನು ಕೂಡ ಗಮನಿಸಬೇಕಾಗುತ್ತದೆ. ನಾವಿಂದು ಅಂತ್ಯಂತ ಅಸ್ಥಿರ ಸಮಾಜದಲ್ಲಿ ಬದುಕುತ್ತಿದ್ದೇವೆ. ಮುಂದಿನ ಐದಾರು ತಿಂಗಳು ಕೆಲಸವಿರುತ್ತದೆಯೇ ? ಎನ್ನುವುದೇ ಗ್ಯಾರಂಟಿ ಇಲ್ಲದ ಸಮಯವಿದು. ಅದರಲ್ಲೂ ಐಟಿ ಕ್ಷೇತ್ರದ ಉದ್ಯಮಿಗಳಿಗೆ ಇದು ಸಂಕಷ್ಟದ ಸಮಯ. ಯಾವಾಗ ಬೇಕಾದರೂ ಯಾರನ್ನು ಬೇಕಾದರೂ ಕೆಲಸದಿಂದ ತೆಗೆಯಬಹುದು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ನ್ಯೂಸ್ ಪೇಪರುಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಟೆಕ್ಕಿ ಯೊಬ್ಬರು ಕೆಲಸವಿಲ್ಲದ ಕಾರಣ ಸ್ವೀಗ್ಗಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡು ಮನೆಯ ಸಾಲದ ಕಂತು ಕಟ್ಟಲು ಹೆಣಗುತ್ತಿದ್ದಾರೆ ಎನ್ನುವ ಸುದ್ದಿಯನ್ನು ನಾವೆಲ್ಲಾ ಕಂಡಿದ್ದೇವೆ. ಇದು ಒಬ್ಬರ ಕಥೆಯಲ್ಲ ಎನ್ನುವುದನ್ನು ಮರೆಯಬಾರದು.

Debt (file pic)
ಮಾರುಕಟ್ಟೆಯಲ್ಲಿನ ಗದ್ದಲ ಮತ್ತು ಸೂಚನೆ ಅರ್ಥ ಮಾಡಿಕೊಳ್ಳುವುದು ಹೇಗೆ? (ಹಣಕ್ಲಾಸು)

ಇನ್ನು ಯಾವ ಶಿಕ್ಷಣಕ್ಕಾಗಿ ನಾವು ಸಾಲ ತೆಗೆದುಕೊಂಡು , ಕಷ್ಟಪಟ್ಟು ಓದುತ್ತೇವೆ , ಆ ಶಿಕ್ಷಣ ಮುಂದಿನ ಐದಾರು ವರ್ಷದಲ್ಲಿ ತನ್ನ ಮೌಲ್ಯವನ್ನು ಉಳಿಸಿಕೊಂಡಿರುತ್ತೇವೆಯೇ ? ಅದು ಉತ್ತಮ ಉದ್ಯೋಗವನ್ನು ಒದಗಿಸಿ ಕೊಡಬಲ್ಲದೇ ಎನ್ನುವ ಪ್ರಶ್ನೆಗಳಿಗೆ ಕೂಡ ಉತ್ತರವಿಲ್ಲ. ಶಿಕ್ಷಣಕಾಗಿ ವ್ಯಯಿಸಿಸುವ ಹಣದ ROI ಬಗ್ಗೆ ನಾನು ಕಳೆದ ಐದಾರು ವರ್ಷದಿಂದ ಮಾತಾಡುತ್ತಿದ್ದೇನೆ. ನಮ್ಮದು ಅತ್ಯಂತ ಭಾವುಕ ಸಮಾಜ. ಮಕ್ಕಳ ಶಿಕ್ಷಣದ ಹಣದಲ್ಲಿ ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ ಬಗ್ಗೆ ಯೋಚನೆ ಮಾಡುವುದೇ ತಪ್ಪು ಎಂದು ಹಂಗಿಸುವರನ್ನು ಕೂಡ ಕಂಡಿದ್ದೇನೆ.

ವ್ಯಾಪಾರ ವೃದಿಗಾಗಿ ಅಥವಾ ವ್ಯಾಪಾರ ಶುರು ಮಾಡಲು ಮಾಡುವ ಸಾಲದ ವಿಚಾರ ಕೂಡ ಅತ್ಯಂತ ಸೂಕ್ಷಮವಾದದ್ದು. ಬಹುತೇಕ ವ್ಯಾಪಾರಗಳು ಎರಡನೇ ವರ್ಷ ಕಾಣುವುದಿಲ್ಲ ಎನ್ನುವುದನ್ನು ಮರೆಯಬಾರದು. ಮಾಡುವ ಕೆಲಸದ ಬಗ್ಗೆ ಎಲ್ಲಾ ನಿಖರವಾದ ಮಾಹಿತಿ ಇಲ್ಲದಿದ್ದಲ್ಲಿ ವ್ಯಾಪಾರ ಶುರು ಮಾಡಬಾರದು. ವ್ಯಾಪಾರ ಶುರು ಮಾಡುವುದಕ್ಕೆ ಮುಂಚೆ ಅದೇ ವಲಯದಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿ ಅನುಭವವನ್ನು ಪಡೆದು ಕೊಂಡಿರಬೇಕಾಗುತ್ತದೆ.

ಇವೆಲ್ಲವುಗಳ ಅರ್ಥ ಸಾಲ ಮಾಡಲೇ ಬಾರದು ಎನ್ನುವುದಲ್ಲ. ಹೆದರಿಸುವುದು ಕೂಡ ಅಲ್ಲ. ಆದರೆ ಗಮನಿಸಿ ಸಾಲ ಮಾಡುವ ಮುನ್ನ ಒಂದಷ್ಟು ವಿವೇಚನೆ , ಚಿಂತನೆ ನಿಮ್ಮದಾಗಿರಲಿ ಎನ್ನುವುದಷ್ಟೆ ಉದ್ದೇಶ.

ಮೊದಲ ಸಾಲ ವ್ಯವಸ್ಥೆ ಯಾವಾಗ ಶುರುವಾಯ್ತು ?

ಕ್ರಿ.ಪೂ. 2000 ದಲ್ಲಿ ಶುರುವಾಯ್ತು ಎನ್ನುವ ಮಾಹಿತಿ ನಮಗೆ ಸಿಗುತ್ತದೆ. ಮೆಸಪಟೋಮಿಯಾ , ಬ್ಯಾಬಿಲೋನಿಯನ್ನರಲ್ಲಿ ಸಾಲವನ್ನು ಧಾನ್ಯ ಅಥವಾ ಬೆಳ್ಳಿ ರೂಪದಲ್ಲಿ ಕೊಡುತ್ತಿದ್ದರು ಮತ್ತು ಅದನ್ನು ಮಣ್ಣಿನ ಫಲಕದಲ್ಲಿ ಬರೆದಿಡುತ್ತಿದ್ದರು ಹಾಗೂ ಅವರಲ್ಲಿ ಬಡ್ಡಿ ವ್ಯವಸ್ಥೆ ಇತ್ತು ಎನ್ನುವುದು ನಮಗೆ ಚರಿತ್ರೆಯಿಂದ ತಿಳಿದುಬರುತ್ತದೆ. ಮೇಲಿನ ಸಾಲುಗಳಲ್ಲಿ ಹೇಳಿದ ಉದಾಹರಣೆ ಇಲ್ಲಿಗೆ ಅನ್ವಯ. ರೈತರು ಬಿತ್ತನೆ ಬೀಜವನ್ನು ಸಾಲವನ್ನಾಗಿ ಪಡೆದು , ಬೆಳೆ ಬಂದ ನಂತರ ಪಡೆದುಕೊಂಡದ್ದನ್ನು ವಾಪಸ್ಸು ಕೊಡುವುದರ ಜೊತೆಗೆ ನಿಗದಿ ಪಡಿಸಿದ್ದ ಹೆಚ್ಚುವರಿ ಧಾನ್ಯವನ್ನು ಕೂಡ ಕೊಡುತ್ತಿದ್ದರು. ಸಂಘಟಿತ ಸಾಲ ವ್ಯವಸ್ಥೆಯಿತ್ತು ಎನ್ನುವುದಕ್ಕೆ ಸಿಗುವ ಮೊದಲ ಸಾಲದ ವ್ಯವಸ್ಥೆ ಇದಾಗಿದೆ.

ಆದರೆ ನಮ್ಮ ವೇದಗಳಲ್ಲಿಸಾಲದ ಬಗ್ಗೆ ಮಾತಾಡುವುದಿಲ್ಲ ಆದರೆ ಅವರು “ಋಣ” ದ ಬಗ್ಗೆ ಮಾತಾಡುತ್ತಾರೆ. ಅಂದರೆ ಕೇವಲ ಹಣಕಾಸಿನ ಸಾಲ ಅಲ್ಲ. ಅದು ಅದನ್ನು ಮೀರಿದ್ದು. ಸಾಲದ ಪರಿಕಲ್ಪನೆ ಅದೆಷ್ಟು ಉತ್ಕೃಷ್ಟವಾಗಿತ್ತು ಎನ್ನುವುದಕ್ಕೆ ನಮ್ಮ ಹಿರಿಯ ಬದುಕನ್ನು ಒಮ್ಮೆ ಅವಲೋಕಿಸಿದರೆ ಸಾಕು. ವೇದಗಳಲ್ಲಿ ಪ್ರಮುಖವಾಗಿ ಮೂರು ಋಣಗಳ ಬಗ್ಗೆ ಉಲ್ಲೇಖವಿದೆ.

ದೇವ ಋಣ : ಅಂದರೆ ಪ್ರಕೃತಿಯಿಂದ ನಾವು ಎಲ್ಲವನ್ನೂ ಪಡೆದುಕೊಂಡು ಬೆಳೆಯುತ್ತಾ ಹೋಗುತ್ತೇವೆ. ಹೀಗಾಗಿ ನಾವು ಪ್ರಕೃತಿಗೆ ಋಣಿಯಾಗಿರಬೇಕು . ಇಲ್ಲಿ ಯಾವುದೂ ನಮ್ಮದಲ್ಲ. ಎಲ್ಲವೂ ಪ್ರಕೃತಿ ನೀಡಿದೆ . ಹೀಗಾಗಿ ನಾವು ಪ್ರಕೃತಿಯನ್ನು ಗೌರವಿಸಬೇಕು. ಅದಕ್ಕೆ ಋಣಿಯಾಗಿರಬೇಕು.

ಋಷಿ ಋಣ : ನಾವು ಇಲ್ಲಿ ಅಂದರೆ ಭೂಮಿಯ ಮೇಲೆ ಜನ್ಮವನ್ನು ಪಡೆದುಕೊಂಡಾಗ ನಮಗೇನೂ ಗೊತ್ತಿರುವುದಿಲ್ಲ. ತಾಯಿಯ ಹಾಲನ್ನು ಕುಡಿಯಲು ಸಹ ನಮಗೆ ಸರಿಯಾಗಿ ಬರುತ್ತಿರುವುದಿಲ್ಲ. ಅಲ್ಲಿಂದ ಶುರುವಾಗುವ ಕಲಿಸುವ ಕ್ರಿಯೆ ,ಜ್ಞಾನವನ್ನು ಹೆಚ್ಚಿಸುವ ಎಲ್ಲರಿಗೂ ನಾವು ಋಣಿಯಾಗಿರಬೇಕು. ಇದನ್ನು ಮರಳಿ ನೀಡುವುದು ಹೇಗೆ ? ಬಡ್ಡಿಯ ಲೆಕ್ಕಾಚಾರ ಮಾಡಲು ಸಾಧ್ಯವೇ ? ಅರ್ಥವಿಷ್ಟೆ ನಾವು ಆದವರಿಗೆ ಸದಾ ಋಣಿಯಾಗಿರಬೇಕು.

ಪಿತೃ ಋಣ : ಇದನ್ನು ಯಥಾವತ್ತು ತಂದೆಯ ಋಣ ಎಂದು ತಿಳಿದುಕೊಳ್ಳಬಾರದು. ಪಿತೃ ಎಂದರೆ ಕುಟುಂಬ ಎನ್ನುವ ಅರ್ಥದಲ್ಲಿ ಇದನ್ನು ಕಾಣಬೇಕು. ಪಿತೃ ಎಂದರೆ ತಾತ ,ಮುತ್ತಾತ ಹೀಗೆ ಅದು ತಲೆತಲಾಂತರದ ಮಾತು. ನಮ್ಮ ಇಂದಿನ ಅಸ್ಥಿತಿತ್ವಕ್ಕೆ ಅವರ ಕಾಣಿಕೆ ಅಪಾರ. ಅದನ್ನು ತೀರಿಸುವುದು ಹೇಗೆ ? ಋಣಿಯಾಗಿರುವದಷ್ಟೇ ನಮ್ಮ ಕೈಲಾಗುವುದು.

ಭಗವದ್ಗೀತೆಯ ಅಧ್ಯಾಯ 16, ಶ್ಲೋಕ 12 ಒಂದು ಶ್ಲೋಕ ಹಿಗೇಳುತ್ತದೆ.

ಆಶಾ ಪಾಶ ಶತೈರ್ಬದ್ಧಾಃ ಕಾಮ ಕ್ರೋಧ ಪರಾಯಣಾಃ ।

ಈಹಂತೇ ಕಾಮ ಭೋಗಾರ್ಥಂ ಅನ್ಯಾಯೇನಾರ್ಥ ಸಂಚಯಾನ್ ॥

ಯಾರು ಅನೇಕ, ಅಥವಾ ಹೆಚ್ಚು ಆಸೆಗಳಲ್ಲಿ ಸಿಲುಕುತ್ತಾರೆ ಅವರು ಭೋಗಕ್ಕಾಗಿ ಅನ್ಯಾಯವಾಗಿ ಹಣ ಸಂಗ್ರಹಿಸುತ್ತಾರೆ.ಅಂದರೆ ಹಣದ ಮೂಲಕ ಹಣವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತಾರೆ. ಇಲ್ಲಿ ನಾವು ಬಡ್ಡಿಯನ್ನು ಕಾಣಬಹುದು. ಆದರೆ ಬಡ್ಡಿಯ ನೇರ ಉಲ್ಲಖವಿಲ್ಲ.

ಅಧ್ಯಾಯ 2, ಶ್ಲೋಕ 62-63

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ ।

ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಽಭಿಜಾಯತೇ ॥

ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ ।

ಸ್ಮೃತಿ ಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ॥

ಅರ್ಥ ಸರಳವಾಗಿದೆ. ಆಸೆ , ಕ್ರೋಧಕ್ಕೆ , ಮೋಹಕ್ಕೆ ಎಡೆ ಮಾಡಿಕೊಡುತ್ತದೆ. ಅದು ಮೊದಲಿಗೆ ಬುದ್ದಿಯನ್ನು ನಾಶ ಮಾಡುತ್ತದೆ. ಆ ನಂತರ ಸರ್ವನಾಶಕ್ಕೆ ಕಾರಣವಾಗುತ್ತದೆ.

ಭಗವದ್ಗೀತೆಯ ತುಂಬಾ ಇಂತಹ ಎಚ್ಚರಿಕೆಯ ಮಾತುಗಳೇ ಸಿಗುತ್ತವೆ. ನಾವು ಅಲ್ಲಿನ ಎಚ್ಚರಿಕೆಯ ಮಾತುಗಳನ್ನು ಪಾಲಿಸುವುದು ನಿಲ್ಲಿಸಿದ ಕಾರಣ. ಇವತ್ತು ಜಗತ್ತು ಪೂರ್ತಿ ಸಾಲದಲ್ಲಿ ಮುಳುಗಿದೆ.

Debt (file pic)
ಹೊಸ ವಿತ್ತೀಯ ವರ್ಷದಲ್ಲಿ ಆಗಿರುವ ಬದಲಾವಣೆಗಳೇನು ಗೊತ್ತಾ? (ಹಣಕ್ಲಾಸು)

ಇನ್ನು ಉಪನಿಷದ್ ನಲ್ಲಿ

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ।

ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಹಃ ಕಸ್ಯಸ್ವಿದ್ಧನಮ್ ॥

ಇದರರ್ಥ ಲೋಭ ಬೇಡ, ಇತರರ ಹಣದ ಮೇಲೆ ಆಸೆ ಬೇಡ ಎನ್ನುವುದಾಗಿದೆ.

ಪರಿಶ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ ನಿರ್ವೇದಮಾಯಾತ್ ॥

ಭೌತಿಕ ಜಗತ್ತು ಅಸ್ಥಿರವೆಂದು ಅರಿತುಕೊಳ್ಳುವುದು ಒಳ್ಳೆಯದು ಎನ್ನುತ್ತದೆ ಈ ಇನ್ನೊಂದು ಶ್ಲೋಕ.

ಹೋಗುವ ಮುನ್ನ: ಭಾರತದ ಸಾಲ ವ್ಯವಸ್ಥೆ ನೈತಿಕತೆ ಮತ್ತು ಧರ್ಮದ ಆಧಾರದಲ್ಲಿ ನಡೆಯುತಿತ್ತು ಎನ್ನುವುದಕ್ಕೆ ಇಂತಹ ಅನೇಕ ಶ್ಲೋಕಗಳು ಸಾಕ್ಷಿ ನುಡಿಯುತ್ತಿವೆ. 1694 ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಉಗಮವಾಗುತ್ತದೆ. ಅಲ್ಲಿಂದೀಚೆಗೆ ನಾವು ಇವತ್ತಿನ ಸಾಲ ಮತ್ತು ಬಡ್ಡಿಗಳನ್ನು ಹೊಂದುವವರೆಗೆ ನಡೆದು ಬಂದ ಹಾದಿ ರೋಚಕವಾಗಿದೆ.

ಮನಷ್ಯನ ಯೋಚಿಸುವ ಶಕ್ತಿಯ ಬಗ್ಗೆ ಹೆಮ್ಮೆಯಾಗುತ್ತದೆ. ಅದೇ ಸಮಯದಲ್ಲಿ ತನ್ನ ಬುದ್ದಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ಇವತ್ತಿನ ದಿನವನ್ನು ಕಾಣುವ ಅವಶ್ಯಕತೆಯಿರಲಿಲ್ಲ ಎಂದು ಕೂಡ ಅನ್ನಿಸುತ್ತದೆ. ಒಟ್ಟಾರೆ ಇವತ್ತಿಗೆ ಸಾಲವೇ ಸರ್ವಸ್ವ ಎನ್ನುವ ದಿನವನ್ನು ಮನುಷ್ಯ ಸೃಷ್ಟಿಸಿಕೊಂಡಿದ್ದಾನೆ. ಸಾಲ ಮಾಡಬೇಕೆ ? ಬೇಡವೇ ? ಎನ್ನುವುದು ಆಯಾ ವ್ಯಕ್ತಿಯ ಸನ್ನಿವೇಶಗಳ ಮೇಲೆ ನಿರ್ಧಾರವಾಗುತ್ತದೆ. ಒಳಿತಿಗಾಗಿ ಸಾಲ ಮಾಡುವುದು ಮತ್ತು ಅದನ್ನು ತೀರಿಸಲು ಒಂದು ರೋಡ್ ಮ್ಯಾಪ್ ಇಟ್ಟುಕೊಳ್ಳುವುದು ಉತ್ತಮ. ಅನವಶ್ಯಕ ಸಾಲಗಳು ಇವತ್ತಿನ ದಿನದಲ್ಲಿ ಬೇಡ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com