

ಭಾರತದ ಮಟ್ಟಿಗೆ ಮೌರ್ಯರ ಕಾಲದ ಚಾಣಕ್ಯನ ಅರ್ಥಶಾಸ್ತ್ರ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಪ್ರತಿಯೊಂದಕ್ಕೂ ನಿಯಮಗಳನ್ನು ಮಾಡಿರುವುದನ್ನು ಕಾಣಬಹುದು. ಅರ್ಥಶಾಸ್ತ್ರ ಎನ್ನುವ ಪುಸ್ತಕವನ್ನು ಚಾಣಕ್ಯ ೩೦೦ BCE ಯಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ನಾವು ಇವತ್ತು ನೋಡುತ್ತಿರುವ ಸಾಲದ ರೂಪಗಳನ್ನು ಅಂದಿಗೆ ಆತ ಕಲ್ಪಿಸಿಕೊಂಡು ಅವೆಲ್ಲಕ್ಕೂ ಒಂದು ರೀತಿ ನೀತಿ , ನಿಯಮಗಳನ್ನು ಮಾಡಿ ಒಂದು ಚೌಕಟ್ಟು ಹಾಕಿದ್ದರು ಎನ್ನುವುದು ತಿಳಿದು ಬರುತ್ತದೆ.
ಈ ಅರ್ಥಶಾಸ್ತ್ರದಲ್ಲಿ ಸಾಲ (ಲೋನ್ ), ಎರವಲು (ಬಾರೋವಿಂಗ್), ಬಡ್ಡಿ (ಇಂಟರೆಸ್ಟ್ ), ಅಡಮಾನ (ಕೋಲಾಟರಲ್) ಸಾಲಗಾರನ ಹೊಣೆಗಾರಿಕೆ, ಸಾಲದಾತನ ಹಕ್ಕು, ವಸೂಲಿ ವಿಧಾನ ಹಾಗೂ ವಾಣಿಜ್ಯ ಸಾಲಗಳ ಕುರಿತು ಸ್ಪಷ್ಟ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಚಾಣಕ್ಯನ ದೃಷ್ಟಿಯಲ್ಲಿ ಸಾಲವು ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಆರ್ಥಿಕ ಸಾಧನವಾಗಿದ್ದರೂ, ಅದು ನ್ಯಾಯ, ನಿಯಂತ್ರಣ ಮತ್ತು ನೈತಿಕತೆಯ ಮಿತಿಯೊಳಗೆ ಇರಬೇಕು.
ಸಾಲ (ಲೋನ್ )
ಸಾಲವನ್ನು ಇಲ್ಲಿ ಋಣ ಎನ್ನುವ ಪದ ಪ್ರಯೋಗದಲ್ಲಿ ಬಳಸಲಾಗಿದೆ. ಸಾಲ ಎನ್ನುವುದು ಚಾಣಕ್ಯನ ಪ್ರಕಾರ ವ್ಯಕ್ತಿ ಅಥವಾ ವ್ಯಾಪಾರಿಯ ಅಗತ್ಯಗಳನ್ನು ಪೂರೈಸುವ ಆರ್ಥಿಕ ಸಾಧನವಾಗಿದೆ. ಕೃಷಿ, ವ್ಯಾಪಾರ, ಕೈಗಾರಿಕೆ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಸಾಲ ನೀಡುವುದು ಸಮಾಜದ ಅಭಿವೃದ್ಧಿಗೆ ಸಹಕಾರಿ. ಆದರೆ ಅನಗತ್ಯ ವೈಭವಕ್ಕಾಗಿ ಅಥವಾ ದುರುಪಯೋಗಕ್ಕಾಗಿ ಸಾಲ ಪಡೆಯುವುದನ್ನು ಅವರು ಉತ್ತೇಜಿಸುವುದಿಲ್ಲ. ಸಾಲವು ಉತ್ಪಾದಕ ಚಟುವಟಿಕೆಗಳಿಗೆ ಬಳಸಿದಾಗ ಮಾತ್ರ ಆರ್ಥಿಕ ಸಮೃದ್ಧಿಯನ್ನು ಉಂಟುಮಾಡುತ್ತದೆ ಎನ್ನುವ ಅಭಿಪ್ರಾಯ ಪುಸ್ತಕದಲ್ಲಿ ದಾಖಲಾಗಿದೆ.
ಎರವಲು (Borrowing) ಮತ್ತು ಅದರ ಉದ್ದೇಶ
ಎರವಲು ಪಡೆಯುವ ವ್ಯಕ್ತಿಯ ಉದ್ದೇಶವನ್ನು ಚಾಣಕ್ಯ ಮಹತ್ವದ ಅಂಶವಾಗಿ ಪರಿಗಣಿಸುತ್ತಾರೆ. ವ್ಯಾಪಾರ ವಿಸ್ತರಣೆ, ಕೃಷಿ, ಉದ್ಯೋಗ ಸೃಷ್ಟಿ ಅಥವಾ ಉತ್ಪಾದನೆಗಾಗಿ ಪಡೆದ ಸಾಲವನ್ನು ಅವರು ಪುಸ್ತಕದಲ್ಲಿ ಸರಿ ಎನ್ನುತ್ತಾರೆ. ಆದರೆ ಜೂಜು, ಮದ್ಯಪಾನ, ದುಂದು ವೆಚ್ಚ ಅಥವಾ ಅನೈತಿಕ ಚಟುವಟಿಕೆಗಳಿಗೆ ಸಾಲ ಪಡೆಯುವುದನ್ನು ಸಮಾಜ ಹಾಗೂ ರಾಜ್ಯ ಎರಡಕ್ಕೂ ಹಾನಿಕಾರಕವೆಂದು ಹೇಳುತ್ತಾರೆ. ಇವತ್ತಿನ ದಿನದಲ್ಲಿ ಕೂಡ ನಾವು ಇದನ್ನು ಗುಡ್ ಬಾರೋವಿಂಗ್ ಬ್ಯಾಡ್ ಬಾರೋವಿಂಗ್ ಎನ್ನುವ ಆಧಾರದಲ್ಲಿ ಕರೆಯುತ್ತೇವೆ. ಸರಿಸುಮಾರು ಎರಡು ಸಾವಿರ ವರ್ಷಕ್ಕೂ ಮುಂಚೆಯೇ ಚಾಣಕ್ಯರು ಇವತ್ತಿನ ದಿನಕ್ಕೂ ಅನ್ವಯವಾಗುವಂತಹ ಕೃತಿಯನ್ನು ರಚಿಸಿದ್ದರು ಎನ್ನುವುದು ಇವತ್ತಿಗೆ ಅಚ್ಚರಿ.
ಬಡ್ಡಿ (Interest) ಕುರಿತು ನಿಯಮಗಳು
ಅರ್ಥಶಾಸ್ತ್ರದಲ್ಲಿ ಬಡ್ಡಿದರಗಳಿಗೆ ಮಿತಿಯನ್ನು ವಿಧಿಸಲಾಗಿದೆ. ಸಾಲದಾತನು ಅತಿಯಾದ ಬಡ್ಡಿ ವಿಧಿಸಿ ಸಾಲಗಾರನನ್ನು ಶೋಷಿಸುವಂತಿಲ್ಲ. ಸಾಲದ ಸ್ವರೂಪ ಮತ್ತು ಅಪಾಯವನ್ನು ಅವಲಂಬಿಸಿ ಬಡ್ಡಿದರ ಬದಲಾಗಬಹುದು ಎಂದು ಚಾಣಕ್ಯ ಒಪ್ಪಿಕೊಳ್ಳುತ್ತಾರೆ. ಸಾಮಾನ್ಯ ವೈಯಕ್ತಿಕ ಸಾಲಗಳಿಗೆ ಕಡಿಮೆ ಬಡ್ಡಿ, ವ್ಯಾಪಾರ ಸಾಲಗಳಿಗೆ ಸ್ವಲ್ಪ ಹೆಚ್ಚಿನ ಬಡ್ಡಿ ಹಾಗೂ ಹೆಚ್ಚಿನ ಅಪಾಯವಿರುವ ಸಮುದ್ರ ವ್ಯಾಪಾರದಂತಹ ಸಾಲಗಳಿಗೆ ಹೆಚ್ಚು ಬಡ್ಡಿಯನ್ನು ಅನುಮತಿಸಲಾಗಿದೆ. ಆದಾಗ್ಯೂ, ಯಾವುದೇ ಪರಿಸ್ಥಿತಿಯಲ್ಲೂ ಶೋಷಣಾತ್ಮಕ ಬಡ್ಡಿದರಗಳನ್ನು ಅವರು ಸಮರ್ಥಿಸುವುದಿಲ್ಲ.
ಅಡಮಾನ (Collateral) ವ್ಯವಸ್ಥೆ
ಸಾಲ ಪಡೆಯುವಾಗ ಭೂಮಿ, ಮನೆ, ಆಭರಣ, ಜಾನುವಾರು ಅಥವಾ ಇತರ ಆಸ್ತಿಗಳನ್ನು ಅಡಮಾನವಾಗಿ ಇಡಬಹುದು. ಆದರೆ ಸಾಲದಾತನು ಅಡಮಾನ ವಸ್ತುವನ್ನು ದುರುಪಯೋಗಪಡಿಸಿಕೊಳ್ಳಬಾರದು. ಸಾಲ ಮರುಪಾವತಿಯಾದ ನಂತರ ಅಡಮಾನವನ್ನು ತಕ್ಷಣ ಹಿಂದಿರುಗಿಸಬೇಕು. ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಅನ್ಯಾಯವಾಗಿ ಸ್ವಾಧೀನಪಡಿಸಿಕೊಳ್ಳುವುದು ಅರ್ಥಶಾಸ್ತ್ರದ ತತ್ವಗಳಿಗೆ ವಿರುದ್ಧವಾಗಿದೆ.
ಲಿಖಿತ ಒಪ್ಪಂದದ ಮಹತ್ವ
ಸಾಲ ನೀಡುವಾಗ ಸಾಲದ ಮೊತ್ತ, ಬಡ್ಡಿದರ, ಮರುಪಾವತಿಯ ಅವಧಿ ಹಾಗೂ ಸಾಕ್ಷಿಗಳ ವಿವರಗಳನ್ನು ದಾಖಲಿಸುವಂತೆ ಅರ್ಥಶಾಸ್ತ್ರದಲ್ಲಿ ಸೂಚಿಸಲಾಗಿದೆ. ಮೌಖಿಕ ಒಪ್ಪಂದಗಳಿಗಿಂತ ಲಿಖಿತ ದಾಖಲೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ವಿವಾದಗಳನ್ನು ತಡೆಯಬಹುದು ಹಾಗೂ ನ್ಯಾಯಾಂಗದಲ್ಲಿ ಸಾಕ್ಷ್ಯವಾಗಿ ಬಳಸಬಹುದು ಎನ್ನುವುದನ್ನು ಕೂಡ ಅರ್ಥಶಾಸ್ತ್ರದಲ್ಲಿ ವಿವರಿಸಲಾಗಿದೆ.
ಸಾಕ್ಷಿಗಳು ಮತ್ತು ದಾಖಲೆಗಳು
ಸಾಲ ವ್ಯವಹಾರಗಳಲ್ಲಿ ಸಾಕ್ಷಿಗಳ ಉಪಸ್ಥಿತಿ ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾರೆ. ಸಾಲದ ಒಪ್ಪಂದವು ಸಾಕ್ಷಿಗಳ ಸಮ್ಮುಖದಲ್ಲಿ ನಡೆದಿದ್ದರೆ, ಯಾವುದೇ ವಿವಾದ ಉಂಟಾದಾಗ ನ್ಯಾಯಾಲಯಕ್ಕೆ ತೀರ್ಪು ನೀಡುವುದು ಸುಲಭವಾಗುತ್ತದೆ. ಇದು ಪಾರದರ್ಶಕತೆ ಹಾಗೂ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇವತ್ತಿನ ದಿನದಲ್ಲಿ ಕೂಡ ನಾವು ಇದನ್ನು ನೋಡಬಹುದು. ಸಾಕ್ಷಿ ಎನ್ನುವುದಕ್ಕಿಂತ ಇವತ್ತಿನ ದಿನದಲ್ಲಿ ನಾವು ಗ್ಯಾರಂಟರ್ ಎನ್ನುವ ಪದವನ್ನು, ರೀತಿಯನ್ನು ಅಳವಡಿಸಿಕೊಂಡಿದ್ದೇವೆ.
ಸಾಲ ಮರುಪಾವತಿ ಮತ್ತು ಹೊಣೆಗಾರಿಕೆ
ಸಾಲಗಾರನು ನಿಗದಿತ ಅವಧಿಯಲ್ಲಿ ಸಾಲವನ್ನು ಮರುಪಾವತಿಸಬೇಕು. ಉದ್ದೇಶಪೂರ್ವಕವಾಗಿ ಸಾಲ ತೀರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ ಪ್ರಕೃತಿ ವಿಕೋಪ, ಬರ, ಪ್ರವಾಹ, ಯುದ್ಧ ಅಥವಾ ಅನಿವಾರ್ಯ ಕಾರಣಗಳಿಂದ ಸಾಲಗಾರ ಸಂಕಷ್ಟಕ್ಕೆ ಸಿಲುಕಿದ್ದರೆ, ಅವನಿಗೆ ಕಾಲಾವಕಾಶ ಅಥವಾ ಪರಿಹಾರ ನೀಡಬೇಕೆಂದು ಚಾಣಕ್ಯ ಸಲಹೆ ನೀಡುತ್ತಾರೆ. ಅಂದರೆ ನ್ಯಾಯದ ಜೊತೆಗೆ ಮಾನವೀಯ ದೃಷ್ಟಿಕೋನವೂ ಇರಬೇಕು.ಇವತ್ತಿನ ದಿನಮಾನದಲ್ಲಿ ನಾವು ಇದನ್ನು ಪಾಲಿಸುತ್ತಿಲ್ಲ.
ಸಾಲದಾತನ ಜವಾಬ್ದಾರಿ
ಸಾಲದಾತನಿಗೂ ಸಮಾನ ಹೊಣೆಗಾರಿಕೆ ಇದೆ. ಅತಿಯಾದ ಬಡ್ಡಿ ವಿಧಿಸುವುದು, ಬೆದರಿಕೆ ಹಾಕುವುದು, ಅಕ್ರಮವಾಗಿ ಆಸ್ತಿ ವಶಪಡಿಸಿಕೊಳ್ಳುವುದು ಅಥವಾ ಸಾಲಗಾರನನ್ನು ಶೋಷಿಸುವುದು ದಂಡನೀಯ. ಹಣಕಾಸಿನ ವ್ಯವಸ್ಥೆಯಲ್ಲಿ ವಿಶ್ವಾಸ ಉಳಿಯಬೇಕಾದರೆ ಸಾಲದಾತನು ನ್ಯಾಯಯುತವಾಗಿ ವರ್ತಿಸಬೇಕು ಎಂದು ಚಾಣಕ್ಯ ಒತ್ತಿ ಹೇಳುತ್ತಾರೆ.ಇವತ್ತಿನ ದಿನದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು , ಲೋನ್ ಆಪ್ ಗಳು ವಸೂಲಿ ಮಾಡುವ ರೀತಿಯನ್ನು ನೋಡಿದಾಗ ಚಾಣಕ್ಯರಿಗೆ ಇವತ್ತಿನ ದಿನದ ಪರಿಕಲ್ಪನೆ ಇತ್ತೇ ? ಎನ್ನುವ ಅಚ್ಚರಿಯನ್ನು ಹುಟ್ಟಿಸುತ್ತದೆ.
ಸಾಲಗಾರನ ನೈತಿಕ ಕರ್ತವ್ಯ
ಸಾಲಗಾರನು ಪಡೆದ ಸಾಲವನ್ನು ಒಪ್ಪಂದದ ಉದ್ದೇಶಕ್ಕೆ ಬಳಸಬೇಕು. ಉದ್ದೇಶಪೂರ್ವಕವಾಗಿ ಹಣವನ್ನು ದುರುಪಯೋಗಪಡಿಸಿ ಮರುಪಾವತಿ ಮಾಡದೆ ತಪ್ಪಿಸಿಕೊಳ್ಳುವುದು ಸಾಮಾಜಿಕ ಹಾಗೂ ಕಾನೂನುಬದ್ಧ ಅಪರಾಧವೆಂದು ಪರಿಗಣಿಸಲಾಗಿದೆ. ಸಾಲದ ಮೇಲಿನ ಪ್ರಾಮಾಣಿಕತೆ ವ್ಯಕ್ತಿಯ ಸಾಮಾಜಿಕ ಗೌರವದ ಸೂಚಕವಾಗಿರುತ್ತದೆ ಎನ್ನುವುದನ್ನು ಅರ್ಥಶಾಸ್ತ್ರ ವಿವರಿಸುತ್ತದೆ. ಇವತ್ತಿನ ದಿನದಲ್ಲಿ ಯಾವ ಉದ್ದೇಶಕಾಗಿ ಸಾಲವನ್ನು ಪಡೆದಿದ್ದಾರೆ ಅದಕ್ಕೆ ತಕ್ಕಂತೆ ಬಳಸದೆ ಇರುವ ಕಾರಣ ಬಹಳಷ್ಟು ಕೆಟ್ಟ ಸಾಲಗಳಾಗಿ ಮಾರ್ಪಾಟಾಗಿವೆ.
ರಾಜ್ಯದ ಪಾತ್ರ
ಚಾಣಕ್ಯನ ಪ್ರಕಾರ ಸಾಲ ಮತ್ತು ಹಣಕಾಸು ವ್ಯವಹಾರಗಳ ಮೇಲೆ ರಾಜ್ಯವು ಮೇಲ್ವಿಚಾರಣೆ ನಡೆಸಬೇಕು. ಅನಧಿಕೃತ ಬಡ್ಡಿದರ, ವಂಚನೆ, ಸುಳ್ಳು ದಾಖಲೆಗಳು ಮತ್ತು ಹಣಕಾಸಿನ ದುರುಪಯೋಗವನ್ನು ತಡೆಯಲು ಕಾನೂನು ವ್ಯವಸ್ಥೆ ಇರಬೇಕು ಎನ್ನುತ್ತಾರೆ. ಅವತ್ತಿಗೆ ರಾಜ , ರಾಜ್ಯ ಮಾಡುತ್ತಿದ್ದ ಕೆಲಸವನ್ನು ಇವತ್ತಿಗೆ ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಡುತ್ತಿದೆ.
ವ್ಯಾಪಾರ ಸಾಲಗಳು:
ವ್ಯಾಪಾರಿಗಳಿಗೆ ನೀಡುವ ಸಾಲಗಳು ದೇಶದ ಆರ್ಥಿಕ ಬೆಳವಣಿಗೆಗೆ ಅತ್ಯಂತ ಮುಖ್ಯವೆಂದು ಚಾಣಕ್ಯ ಪರಿಗಣಿಸುತ್ತಾರೆ. ವ್ಯಾಪಾರ ವಿಸ್ತರಣೆ, ಸರಕು ಸಾಗಣೆ ಹಾಗೂ ಹೊಸ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಸಾಲ ವ್ಯವಸ್ಥೆ ಅಗತ್ಯ. ಆದರೆ ವ್ಯಾಪಾರಿಯೂ ಸಾಲವನ್ನು ನಿಷ್ಠೆಯಿಂದ ಮರುಪಾವತಿಸಬೇಕು ಹಾಗೂ ವ್ಯಾಪಾರದಲ್ಲಿ ಮೋಸ ಮಾಡಬಾರದು..
ಕೃಷಿ ಸಾಲಗಳು
ಕೃಷಿಯೇ ರಾಷ್ಟ್ರದ ಆರ್ಥಿಕ ಬೆನ್ನೆಲುಬು ಎಂದು ಚಾಣಕ್ಯ ನಂಬಿದ್ದರು. ಆದ್ದರಿಂದ ರೈತರಿಗೆ ಸೂಕ್ತ ಸಮಯದಲ್ಲಿ ಸಾಲ ಸಿಗಬೇಕು. ಬೆಳೆ ಹಾನಿಯಾದಲ್ಲಿ ಅಥವಾ ಪ್ರಕೃತಿ ವಿಕೋಪ ಉಂಟಾದಲ್ಲಿ ಸಾಲ ವಸೂಲಿಯಲ್ಲಿ ವಿನಾಯಿತಿ ಅಥವಾ ಮರುಹೊಂದಾಣಿಕೆ ಮಾಡಬಹುದು ಎಂದು ಅವರು ಸೂಚಿಸುತ್ತಾರೆ. ಇಂದಿನ ಕೃಷಿ ಸಾಲ ಪುನರ್ರಚನೆ (Loan Restructuring) ಅಥವಾ ಸಾಲ ಮನ್ನಾ ಪರಿಕಲ್ಪನೆಯ ಮೂಲಭಾವನೆ ಇದಕ್ಕೆ ಸಮಾನವಾಗಿದೆ.
ಉತ್ತರಾಧಿಕಾರ ಮತ್ತು ಸಾಲ
ಸಾಲಗಾರನ ಮರಣದ ನಂತರ, ಅವನ ಕಾನೂನುಬದ್ಧ ಆಸ್ತಿಯ ಮಿತಿಯೊಳಗೆ ಮಾತ್ರ ಉತ್ತರಾಧಿಕಾರಿಗಳು ಸಾಲವನ್ನು ತೀರಿಸಬೇಕಾಗುತ್ತದೆ. ಸಾಲದ ಮೊತ್ತಕ್ಕಿಂತ ಹೆಚ್ಚಿನ ಹೊಣೆಗಾರಿಕೆಯನ್ನು ಅವರ ಮೇಲೆ ಹೇರುವುದು ನ್ಯಾಯಸಮ್ಮತವಲ್ಲ ಎಂಬ ತತ್ವವನ್ನು ಅರ್ಥಶಾಸ್ತ್ರ ಪ್ರತಿಪಾದಿಸುತ್ತದೆ.
ಹಣಕಾಸಿನ ಶಿಸ್ತು
ಚಾಣಕ್ಯನ ಪ್ರಮುಖ ಸಂದೇಶವೆಂದರೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು. ಅನಗತ್ಯ ಸಾಲದ ಅವಲಂಬನೆಯು ವ್ಯಕ್ತಿ, ಕುಟುಂಬ ಹಾಗೂ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಉಳಿತಾಯ, ವಿವೇಕಯುತ ಹೂಡಿಕೆ ಮತ್ತು ಉತ್ಪಾದಕ ಸಾಲಗಳಿಗೆ ಆದ್ಯತೆ ನೀಡಬೇಕು. ಚಾಣಕ್ಯರ ಸಂದೇಶ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಎನ್ನುವುದನ್ನು ನಾವು ಗಾಳಿಗೆ ತೂರಿದ ಕಾರಣ ಇವತ್ತಿನ ಆರ್ಥಿಕ ಸಂಕಷ್ಟಗಳನ್ನು ನಾವು ನೋಡುತ್ತಿದ್ದೇವೆ.
ಅಚಾಣಕ್ಯನ ಅರ್ಥಶಾಸ್ತ್ರದಲ್ಲಿನ ಸಾಲ ಮತ್ತು ಎರವಲು ವ್ಯವಸ್ಥೆಯು ಕೇವಲ ಹಣಕಾಸಿನ ವಹಿವಾಟು ಎಂದು ಪರಿಗಣಿಸದೆ, ನ್ಯಾಯ, ನೈತಿಕತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಆರ್ಥಿಕ ಸ್ಥಿರತೆಯ ಸಮನ್ವಯ ಎನ್ನುವಂತೆ ನೋಡಲಾಗಿದೆ. ಸಾಲವು ಉತ್ಪಾದನೆಗೆ ಉತ್ತೇಜನ ನೀಡಬೇಕು, ಶೋಷಣೆಗೆ ಕಾರಣವಾಗಬಾರದು ಎಂಬುದು ಅವರ ಮೂಲ ತತ್ವ. ಬಡ್ಡಿದರಗಳ ನಿಯಂತ್ರಣ, ಲಿಖಿತ ಒಪ್ಪಂದ, ಸಾಲದ ಮಹತ್ವ, ಅಡಮಾನ ವ್ಯವಸ್ಥೆ, ಸಾಲಗಾರ ಮತ್ತು ಸಾಲದಾತರ ಪರಸ್ಪರ ಹೊಣೆಗಾರಿಕೆ ಹಾಗೂ ರಾಜ್ಯದ ನಿಯಂತ್ರಣದಂತಹ ವಿಚಾರಗಳು ಇಂದಿನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯಲ್ಲಿಯೂ ಪ್ರಸ್ತುತವಾಗಿವೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಚಾಣಕ್ಯ ಪ್ರತಿಪಾದಿಸಿದ ಈ ತತ್ವಗಳು ಇಂದಿನ ಆರ್ಥಿಕ ನೀತಿ, ಬ್ಯಾಂಕಿಂಗ್ ಕಾನೂನು ಮತ್ತು ಜವಾಬ್ದಾರಿಯುತ ಸಾಲ ನಿರ್ವಹಣೆಯ ಮೂಲಭೂತ ಸಿದ್ಧಾಂತಗಳೊಂದಿಗೆ ಆಶ್ಚರ್ಯಕರವಾದ ಸಾಮ್ಯತೆಯನ್ನು ಹೊಂದಿವೆ.
ಆದ್ದರಿಂದ ಅರ್ಥಶಾಸ್ತ್ರವನ್ನು ಭಾರತದ ಆರ್ಥಿಕ ಚಿಂತನೆಯ ಶಾಶ್ವತ ಮಾರ್ಗದರ್ಶಕ ಗ್ರಂಥವೆಂದು ಪರಿಗಣಿಸಲಾಗುತ್ತದೆ.ಸಾಲ ಎನ್ನುವುದು ಎರಡು ಅಲುಗಿನ ಖತ್ತಿ. ಇವತ್ತಿನ ದಿನಮಾನದಲ್ಲಿ ನಾವು ಮಾಡಿಕೊಂಡಿರುವ ಸಾಲದ ವರ್ಗಿಕರಣವನ್ನು ಎರಡು ಸಾವಿರ ವರ್ಷಕ್ಕೂ ಮುಂಚೆಯೇ ವರ್ಗಿಕರಿಸಿ ಅದನ್ನು ಜಾರಿಗೆ ತಂದಿದ್ದರು ಎನ್ನುವುದು ನನ್ನನ್ನು ಪದೇಪದೇ ಅಚ್ಚರಿಗೊಳಿಸಿತು. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಬಗ್ಗೆ ಏನಿರಬಹುದು ಎನ್ನುವ ಸಹಜ ಕುತೂಹಲದಿಂದ ಅಭ್ಯಸಿಸಲು ಹೊರಟ ನನಗೆ ಅವತ್ತಿಗೆ ಇವತ್ತಿನ ಎಲ್ಲಾ ವ್ಯವಸ್ಥೆಯನ್ನು ಸಿದ್ದಪಡಿಸಿದ್ದರು ಎನ್ನುವುದು ಚಕಿತಗೊಳಿಸಿತು.
ಹೋಗುವ ಮುನ್ನ: ಭಾರತದ ಸಾಲ ವ್ಯವಸ್ಥೆ ನೈತಿಕತೆ ಮತ್ತು ಧರ್ಮದ ಆಧಾರದಲ್ಲಿ ನಡೆಯುತಿತ್ತು .1694 ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಉಗಮವಾಗುತ್ತದೆ. ಅಲ್ಲಿಂದೀಚೆಗೆ ನಾವು ಇವತ್ತಿನ ಸಾಲ ಮತ್ತು ಬಡ್ಡಿಗಳನ್ನು ಹೊಂದುವವರೆಗೆ ನಡೆದು ಬಂದ ಹಾದಿ ರೋಚಕವಾಗಿದೆ. ಮನಷ್ಯನ ಯೋಚಿಸುವ ಶಕ್ತಿಯ ಬಗ್ಗೆ ಹೆಮ್ಮೆಯಾಗುತ್ತದೆ. ಅದೇ ಸಮಯದಲ್ಲಿ ತನ್ನ ಬುದ್ದಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ಇವತ್ತಿನ ದಿನವನ್ನು ಕಾಣುವ ಅವಶ್ಯಕತೆಯಿರಲಿಲ್ಲ ಎಂದು ಕೂಡ ಅನ್ನಿಸುತ್ತದೆ. ಒಟ್ಟಾರೆ ಇವತ್ತಿಗೆ ಸಾಲವೇ ಸರ್ವಸ್ವ ಎನ್ನುವ ದಿನವನ್ನು ಮನುಷ್ಯ ಸೃಷ್ಟಿಸಿಕೊಂಡಿದ್ದಾನೆ. ಸಾಲ ಮಾಡಬೇಕೆ ? ಬೇಡವೇ ? ಎನ್ನುವುದು ಆಯಾ ವ್ಯಕ್ತಿಯ ಸನ್ನಿವೇಶಗಳ ಮೇಲೆ ನಿರ್ಧಾರವಾಗುತ್ತದೆ. ಒಳಿತಿಗಾಗಿ ಸಾಲ ಮಾಡುವುದು ಮತ್ತು ಅದನ್ನು ತೀರಿಸಲು ಒಂದು ರೋಡ್ ಮ್ಯಾಪ್ ಇಟ್ಟುಕೊಳ್ಳುವುದು ಉತ್ತಮ. ಅನವಶ್ಯಕ ಸಾಲಗಳು ಇವತ್ತಿನ ದಿನದಲ್ಲಿ ಬೇಡ.