

ದೇಶದಲ್ಲಿ ಏಪ್ರಿಲ್-ಮೇ ನಲ್ಲಿ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಅಸ್ಸಾಂ ಕೂಡ ಒಂದು. ಅಸ್ಸಾಂ ಈಗ ಧರ್ಮ ಆಧರಿತ ಧ್ರುವೀಕರಣದ ರಾಜಕಾರಣದತ್ತ ಸಾಗಿದೆ. ಅಲ್ಲಿನ ಮುಖ್ಯಮಂತ್ರಿ ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಅವರೇ ಕೋಮು ಆಧಾರದ ಹಳಿಯ ಮೇಲೆ ಚುನಾವಣಾ ರಾಜಕಾರಣವನ್ನು ಎಳೆದು ತಂದು ನಿಲ್ಲಿಸಿದ್ದಾರೆ. ತಮ್ಮ ಪ್ರಚೋದನಾಕಾರಿ ಮಾತುಗಳಿಂದ ಚುನಾವಣೆಗೆ ಅಜೆಂಡಾ ಸಿದ್ದಪಡಿಸುತ್ತಿದ್ದಾರೆ. ಅಸ್ಸಾಂ ರಾಜಕಾರಣ ಈಗ ಅವರ ಸುತ್ತಲೇ ತಿರುಗುಣಿ. ರಾಜಕೀಯ ಸಂಘರ್ಷದ ಕಿಡಿ.
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್ ಸಾರಥ್ಯದ ಮಹಾಜೋತ್ (ಮಹಾಮೈತ್ರಿಕೂಟ) ನಡುವೆಯೇ ನೇರ ಹಣಾಹಣಿ. ಪ್ರಾದೇಶಿಕ ಪಕ್ಷಗಳ ಕಾರುಬಾರು ಅಲ್ಪಸ್ವಲ್ಪ. ಅವುಗಳು ಬಿಜೆಪಿ-ಕಾಂಗ್ರೆಸ್ ಕಡೆ ಹರಿದು ಹಂಚಿವೆ. ಅಸ್ಸಾಂನಲ್ಲಿ 126 ವಿಧಾನಸಭಾ ಕ್ಷೇತ್ರಗಳು.
ಅಸ್ಸಾಂನಲ್ಲಿ ಶೇಕಡ 33ಕ್ಕಿಂತ ಹೆಚ್ಚು ಮುಸ್ಲಿಮ್ ಮತದಾರರು ಇದ್ದಾರೆಂಬ ಅಂದಾಜು. ಇಲ್ಲಿ ಹಿಂದೂಗಳು ಎನ್‌ಡಿಎಯತ್ತ ವಾಲಿದರೆ, ಮುಸ್ಲಿಮರ ಒಲವು ಮಹಾಜೋತ್ ಮೈತ್ರಿಕೂಟದ ಕಡೆಗೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೋಮು ಆಧರಿತ ಬೆಂಕಿ ಉಂಡೆಯ ಮಾತುಗಳನ್ನು ಆಡುತ್ತಾ ಹೊಸ ಹೊಸ ವಿವಾದಗಳ ಸೃಷ್ಟಿಕರ್ತರು. ಅವರದು ವಿವಾದಾತ್ಮಕ ಹೇಳಿಕೆಗಳ ಅಲೆಅಲೆಗಳು.
ಸಾಂವಿಧಾನಿಕ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಹೀಗೆ ಮಾತಾಡುವುದನ್ನು ಪ್ರತಿಪಕ್ಷಗಳು ಬಲವಾಗಿ ಆಕ್ಷೇಪಿಸಿವೆ. ಚುನಾವಣಾ ಆಯೋಗಕ್ಕೆ ಕಾನೂನು ಕ್ರಮಕ್ಕಾಗಿ ಆಗ್ರಹಿಸಿವೆ. ಸಂಯುಕ್ತ ಮುಸ್ಲಿಂ ವೇದಿಕೆಯು ರಾಷ್ಟ್ರಪತಿಗಳು ಮಧ್ಯೆಪ್ರವೇಶಿಸಿ ಹಿಮಂತ ಸರಕಾರವನ್ನು ವಜಾಗೊಳಿಸಬೇಕು. ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿವೆ. ಆದರೆ, ಹಿಮಂತ ಅವರಿಗೆ ಕಡಿವಾಣ ಮಾತ್ರ ಬಿದ್ದಿಲ್ಲ. ಹಿಮಂತ ಅವರೇ ಆಗಸ್ಟ್ 2024ರಲ್ಲಿ ಹೇಳಿದ ಮಾತು- “ಹೌದು. ನಾನು ಪಕ್ಷಪಾತಿನೇ. ಏನಿವಾಗ? ಅಸ್ಸಾಂ ಅನ್ನು ಮಿಯಾ ಮುಸ್ಲಿಮರು ವಶಪಡಿಸಿಕೊಳ್ಳಲು ಬಿಡೋದಿಲ್ಲ’’.
ಅಸ್ಸಾಂ ಎಂದರೆ ಒಂದು ತಲೆಮಾರಿನ ರಾಜಕೀಯ ಆಸಕ್ತರಿಗೆ ಥಟ್ಟನೆ ನೆನಪಾಗುವ ಹೆಸರು ಪ್ರಫುಲ್ಲಕುಮಾರ್ ಮಹಾಂತ. ಹೋರಾಟದ ಮೂಲಕ ತನ್ನ 33ನೇ ವಯಸ್ಸಿಗೆ ಮುಖ್ಯಮಂತ್ರಿಯಾದವರು ಮಹಾಂತ. ಆ ಕಾಲದಲ್ಲಿ ಇಡೀ ದೇಶದಲ್ಲೇ ಅತಿ ಕಡಿಮೆ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ.
ಅಸ್ಸಾಂನಲ್ಲಿ ಮಹಾಂತ 1979ರಲ್ಲಿ ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು. ಆಗ ಅಸ್ಸಾಂನಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗಾರರ ವಿರುದ್ಧ ವಿದ್ಯಾರ್ಥಿಗಳ ಬಹುದೊಡ್ಡ ಹೋರಾಟ. ಮಹಾಂತ ನಾಯಕತ್ವ. ಇಡೀ ದೇಶದ ಗಮನ ಅತ್ತ. ಅಸ್ಸಾಂ ಗಣಪರಿಷತ್ (ಎಜಿಪಿ) ಪ್ರಾದೇಶಿಕ ಪಕ್ಷ 1985ರಲ್ಲಿ ಸ್ಥಾಪನೆ. ಮಹಾಂತ ಅವರದ್ದೇ ಮುಂಚೂಣಿ ಪಾತ್ರ. ಇದರ ಅಧ್ಯಕ್ಷ ಕೂಡ.
ಅದೇ ವರ್ಷ ಡಿಸೆಂಬರ್ ನಲ್ಲಿ ಅಸೆಂಬ್ಲಿ ಚುನಾವಣೆ. ಎಜಿಪಿ ಗೆದ್ದು ಮಹಾಂತ ಅವರೇ ಮುಖ್ಯಮಂತ್ರಿ. ಈ ವಿದ್ಯಮಾನ ಆ ಕಾಲದಲ್ಲಿ ರಾಜಕಾರಣದಲ್ಲಿ ಭಾರೀ ಸಂಚಲನ. ಮಹಾಂತ ನೇತೃತ್ವದ ವಿದ್ಯಾರ್ಥಿ ಚಳವಳಿಯ ಜೊತೆ ದೇಶದ ಇತರ ಭಾಗಗಳಲ್ಲೂ ಅನೇಕರಿಗೆ ಭಾವನಾತ್ಮಕ ಸಂಬಂಧ.
ಅಸ್ಸಾಂನಲ್ಲಿ ಉಲ್ಫಾ ಉಗ್ರರ ಉಪಟಳ ಹೆಚ್ಚಾದ ಕಾರಣ 1990ರಲ್ಲಿ ಮಹಾಂತ ಸರಕಾರ ವಜಾ. ರಾಷ್ಟ್ರಪತಿ ಆಳ್ವಿಕೆ ಹೇರಿಕೆ. ಮಹಾಂತ 1996ರಲ್ಲಿ ಮತ್ತೆ ಗೆಲುವು, 2001ರ ವರೆಗೆ ಮುಖ್ಯಮಂತ್ರಿ. ಈ ಅವಧಿಯಲ್ಲಿ ಅವರ ಕೊರಳಿಗೆ ಸುತ್ತಿಕೊಂಡ ಆರೋಪಗಳು.
ಅಸ್ಸಾಂ ಗಣ ಪರಿಷತ್ (ಎಜಿಪಿ)ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ. ಪಕ್ಷ ಮೂರು ಹೋಳು. ಮತ್ತೆ ವಿಲೀನ. ಅಸ್ಸಾಂನಲ್ಲಿ ಬಿಜೆಪಿ-ಎಜೆಪಿ 2016ರಲ್ಲಿ ಗೆದ್ದು ಸರಕಾರ ರಚನೆ. ಬಿಜೆಪಿ ಜೊತೆ 2019ರ ಲೋಕಸಭಾ ಚುನಾವಣಾ ಮೈತ್ರಿಗೆ ಮಹಾಂತ ಆಕ್ಷೇಪ. ಸಿಎಎ ವಿರೋಧ. ಮಹಾಂತ ರಾಜಕೀಯವಾಗಿ ನೇಪಥ್ಯಕ್ಕೆ.
ಮಹಾಂತ ನೇತೃತ್ವದಲ್ಲಿ 1970, 80ರ ದಶಕದಲ್ಲಿ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ವಿರುದ್ಧ ವಿದ್ಯಾರ್ಥಿ ಚಳವಳಿ ನಡೆದರೆ, ಈಗ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಂಗಾಳಿ ಮಾತಾಡುವ ಮುಸ್ಲಿಮರಾದ ಮಿಯಾಗಳ ವಿರುದ್ಧ ಕೆರಳಿ ನಿಂತಿದ್ದಾರೆ. ಅಸ್ಸಾಮಿನಲ್ಲಿ ಬಂಗಾಳಿ ಮೂಲದ ಮುಸ್ಲಿಮರನ್ನು ಮಿಯಾಗಳು ಎನ್ನುತ್ತಾರೆ. ಇವರು ಬಾಂಗ್ಲಾದೇಶದಿಂದ ಅಸ್ಸಾಮಿಗೆ ವಲಸೆ ಬಂದವರು ಎಂಬುದು ಬಿಜೆಪಿ ಮಾತು.
ಹಿಮಂತ ಬಿಸ್ವಾ ಶರ್ಮಾ ಅವರು, ಮಿಯಾಗಳು ಬೆಳೆಯುವ ತರಕಾರಿಗಳನ್ನು ಖರೀದಿಸಬೇಡಿ. ಮೀನು ಖರೀದಿಸಬೇಡಿ. ಅವರನ್ನು ಕೆಲಸಕ್ಕೂ ತೆಗೆದುಕೊಳ್ಳಬೇಡಿ. ಮಿಯಾ ಮುಸ್ಲಿಂ ಸಮುದಾಯದ ಆಟೋರಿಕ್ಷಾ ಚಾಲಕ ಐದು ರೂಪಾಯಿ ಕೇಳಿದರೆ ನಾಲ್ಕು ರೂಪಾಯಿ ಕೊಡಿ. ಅವರಿಗೆ ಬದುಕಲು ತೊಂದರೆಯಾದಾಗ ಅವರಾಗಿಯೇ ಅಸ್ಸಾಂ ಬಿಟ್ಟು ತೊಲಗುತ್ತಾರೆ ಎಂದು ಕರೆ ಕೊಟ್ಟಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಅವರು ಈ ರೀತಿಯ ಕರೆ ನೀಡಿರುವುದಕ್ಕೆ ಪ್ರತಿಪಕ್ಷಗಳಿಂದ ಬಲವಾದ ವಿರೋಧ.
ನೆರೆಯ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಅಸ್ಸಾಮಿಗೆ ಬರಲು ಈ ಹಿಂದೆ ರಾಜ್ಯವಾಳಿದ ಕಾಂಗ್ರೆಸ್ಸೇ ಕಾರಣ. ಕಾಂಗ್ರೆಸ್ ನನ್ನನ್ನು ಎಷ್ಟಾದರೂ ಬೈದುಕೊಳ್ಳಲಿ. ಮಿಯಾ ಜನರಿಗೆ ಕಷ್ಟ ಕೊಡುವುದೇ ನನ್ನ ಕೆಲಸ ಎಂದು ಮುಖ್ಯಮಂತ್ರಿ ಸ್ಥಾನದಲ್ಲಿರುವ ಹಿಮಂತ ಬಿಸ್ವಾ ಶರ್ಮಾ ಯಾವುದೇ ಅಳುಕಿಲ್ಲದೇ ಹೇಳುತ್ತಾರೆ. ವಿರೋಧಿಸಿದಷ್ಟೂ ಮತ್ತಷ್ಟು ಕೆರಳುತ್ತಿದ್ದಾರೆ.
ಅಸ್ಸಾಂನಲ್ಲಿ ಬಾಂಗ್ಲಾ ದೇಶದ 40 ಶಾಸಕರಿದ್ದಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಸುಮಾರು ಎರಡು ವರ್ಷಗಳ ಹಿಂದೆ ಹೇಳಿದ್ದು ವಿವಾದವಾಗಿತ್ತು. ಬಾಂಗ್ಲಾದೇಶದ ನುಸುಳುಕೋರರು ಅಸ್ಸಾಮಿಗೆ ಬಂದಿರುವುದರಿಂದ ಅಸ್ಸಾಮಿನ ಜನಸಂಖ್ಯೆ 1.25 ಕೋಟಿಗೆ ಏರಿದೆ. ಇದರಿಂದ ಅಸೆಂಬ್ಲಿಯಲ್ಲಿ 40 ಶಾಸಕರು ಇರುವಂತಾಗಿದೆ ಎಂದಿದ್ದರು ಹಿಮಂತ.
ಅಸ್ಸಾಮಿನ ಜನರು ಬಾಂಗ್ಲಾದೇಶಿ ಮುಸ್ಸಿಮರಿಗೆ ಶರಣಾಗಬೇಕೋ ಅಥವಾ ಅಭಿವೃದ್ಧಿ ಮತ್ತು ಪ್ರಗತಿ ಕಡೆ ಹೆಜ್ಜೆ ಹಾಕಬೇಕೇ ಎಂಬುದನ್ನು ಈ ಚುನಾವಣೆಯಲ್ಲಿ ನಿರ್ಧರಿಸಬೇಕು ಎಂಬುದು ಈ ವರ್ಷದ ಜನವರಿ 26ರ ಗಣರಾಜ್ಯೋತ್ಸವ ಭಾಷಣದಲ್ಲಿ ಅವರ ಪ್ರಮುಖ ಮಾತಾಗಿತ್ತು.
ಬಾಂಗ್ಲಾದೇಶಿ ಮುಸ್ಲಿಮರು ಅಸ್ಸಾಂಮಿನ ನೆಲವನ್ನು ಆಕ್ರಮಿಸಿದ್ದಾರೆ. ನಾವು ಈಗ ಅಕ್ರಮಣಕಾರರನ್ನು ತೆರವುಗೊಳಿಸಲು ಆರಂಭಿಸಿದ್ದೇವೆ. ಅಸ್ಸಾಮಿನ ನೆಲ, ಸಂಸ್ಕೃತಿ, ಅಸ್ಮಿತೆಯನ್ನು ರಕ್ಷಿಸಲು ತಮ್ಮ ಸರಕಾರ ಬದ್ಧ ಎಂಬುದು ಹಿಮಂತ ಅವರ ಘೋಷಣೆ.
ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ 2021ರಲ್ಲಿ ಶೇ.38 ಆಗಿದೆ. ಇದು ಶೇ.50 ಮೀರಿದರೆ ಉಳಿದವರು ಇಲ್ಲಿ ಬದುಕಲು ಸಾಧ್ಯವಿಲ್ಲ. ಅಸ್ಸಾಮಿನಲ್ಲಿ ವಲಸಿಗರಿಂದ ಜನಸಂಖ್ಯೆ ಹೆಚ್ಚುತ್ತಿದೆ ಎಂಬುದು ಹಿಮಂತ ಅವರ ವಾದ. ಹಿಮಂತ ಬಿಸ್ವಾ ಶರ್ಮಾ ಅವರು ಮಿಯಾಗಳ ವಿರುದ್ಧ ಸಾರಿರುವ ಸಮರಕ್ಕೆ ಎಐಯುಡಿಎಫ್ ಮುಖ್ಯಸ್ಥ , ಮಾಜಿ ಸಂಸದ ಮೌಲಾನ ಬದ್ರುದ್ದೀನ್ ಅಜಮಲ್ ತಿರುಗೇಟು ನೀಡಿದ್ದಾರೆ. ಹೇಮಂತ ಬಿಸ್ವಾ ಶರ್ಮಾ ‘ಮಿಯಾ ಮಿಯಾ’ ಅಂತ ಕೂಗುತ್ತಿರಲಿ ಎಂದು ಛೇಡಿಸಿದ್ದಾರೆ.
ಮಿಯಾ ಮುಸ್ಲಿಮರು ಅಸ್ಸಾಂ ಬಿಟ್ಟು ತೊಲಗಬೇಕೆಂದು ಕೆಲವು ಸಂಘಟನೆಗಳು ಬೆದರಿಕೆ ಒಡ್ಡುತ್ತಿವೆ. ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಮಿಯಾಗಳ ವಿರುದ್ಧ ಪೋಸ್ಟರ್‌ಗಳು ಕಂಡು ಬಂದಿವೆ. ಅದರಲ್ಲಿ ಹೀಗಿದೆ- “ಅಸ್ಸಾಂ ಮತ್ತೊಂದು ಬಾಂಗ್ಲಾದೇಶವಾಗದಂತೆ ಮಿಯಾಗಳನ್ನು ಬೆನ್ನಟ್ಟಿ, ಅಸ್ಸಾಂ ರಕ್ಷಿಸಿ’’. ಈ ಹಿಂದೆಯೂ ಇಂತಹ ಘೋಷಣೆಗಳು ಕೇಳಿ ಬಂದಿದ್ದವು. ಇದೇನೂ ಹೊಸದಲ್ಲ.
ಐವತ್ತೇಳು ವರ್ಷದ ಹಿಮಂತ ಬಿಸ್ವಾ ಶರ್ಮಾ ಐದು ಬಾರಿ ಶಾಸಕರು. ಮೊದಲ ಬಾರಿಗೆ 2021ರಲ್ಲಿ ಮುಖ್ಯಮಂತ್ರಿ. ಒಂದು ಕಾಲದಲ್ಲಿ ಕಾಂಗ್ರೆಸ್ಸಿಗ. ಕಾಂಗ್ರೆಸ್ಸಿನ ತರುಣ್ ಗೊಗೊಯ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದವರು. ನಂತರ ಬಂಡೆದ್ದು ರಾಜೀನಾಮೆ ನೀಡಿದವರು.
ಹಿಮಂತ ಬಿಸ್ವಾ ಶರ್ಮಾ ಸಚಿವರಾಗಿದ್ದಾಗಲೇ ಅವರ ವಿರುದ್ಧ ಭ್ರಷ್ಟಚಾರದ ಆರೋಪಗಳು ಕೇಳಿ ಬಂದವು. ಕಾಂಗ್ರೆಸ್ಸಿನಲ್ಲಿದ್ದಾಗಲೇ ಗುವಾಹತಿಯ ಅವರ ಮನೆಯ ಮೇಲೆ 2014ರಲ್ಲಿ ಸಿಬಿಐ ದಾಳಿ ನಡೆಸಿ ವಿಚಾರಣೆಗೆ ಒಳಪಡಿಸಿತು. ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಸಿಬಿಐ ಈ ದಾಳಿ ನಡೆಸಿತ್ತು.
ಹಿಮಂತ ನಂತರ ಆಗಸ್ಟ್ 2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಹಿಮಂತ ಬಿಜೆಪಿ ಸೇರಲು ಅವರ ಮೇಲಿದ್ದ ಪ್ರಕರಣಗಳಿಂದ ಪಾರಾಗಲು ಎಂದು ಕಾಂಗ್ರೆಸ್ ಟೀಕಿಸಿತ್ತು. ಅಸ್ಸಾಂನಲ್ಲಿ 2016ರಲ್ಲಿ ಎನ್‌ಡಿಎ ಸರಕಾರ ರಚನೆಯಾದಾಗ ಆ ರಾಜ್ಯದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸಂಪುಟದಲ್ಲಿ ಹಿಮಂತ ಸಚಿವರಾದರು. ಎನ್‌ಡಿಎ 2021ರಲ್ಲಿ ಮತ್ತೆ ಗೆದ್ದಾಗ ಹಿಮಂತ ಮೊದಲ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದರು. ತಮ್ಮ ವಿವಾದಾತ್ಮಕ ಮಾತುಗಳಿಂದ ದೇಶದ ಗಮನವನ್ನೂ ಸೆಳೆದರು.
ಅಸ್ಸಾಂ ಕಾಂಗ್ರೆಸ್ ಪಕ್ಷವು ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದೆ. ಜನತೆಯ ಆರೋಪಪಟ್ಟಿ ಅಭಿಯಾನವನ್ನು ಆರಂಭಿಸಿದೆ. ಹಿಮಂತ ಬಿಸ್ವಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ 43 ವರ್ಷದ ಗೌರವ್ ಗೊಗೊಯ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಮೂರು ಬಾರಿ ಸಂಸದರು. ಲೋಕಸಭೆಯಲ್ಲಿ ಪ್ರತಿಪಕ್ಷದ ಉಪನಾಯಕರೂ ಹೌದು. ಗೌರವ್ ಅವರ ತಂದೆ ತರುಣ್ ಗೊಗೊಯ್ ಅಸ್ಸಾಂನಲ್ಲಿ 2001 ರಿಂದ 16ರ ವರೆಗೆ ಮುಖ್ಯಮಂತ್ರಿಯಾಗಿದ್ದವರು. ಅಸ್ಸಾಂ ವಿಧಾನಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 60 (ಶೇಕಡವಾರು ಪಡೆದ ಮತಗಳು 29.8), ಕಾಂಗ್ರೆಸ್ 26 (ಶೇ.31.3), ಅಸ್ಸಾಂ ಗಣ ಪರಿಷತ್ 14 (ಶೇ.8.2), ಎಐಯುಡಿಎಫ್ 13 (ಶೇ.13.2), ಬಿಪಿಎಫ್ 12 (ಶೇ.4) ಸ್ಥಾನಗಳನ್ನು ಪಡೆದಿತ್ತು.
ಅಸ್ಸಾಂ ವಿಧಾನಸಭೆಯ 2021ರ ಚುನಾವಣಾ ಫಲಿತಾಂಶ. ಬಿಜೆಪಿ 60 (ಶೇ.33.21 ಮತಗಳು), ಕಾಂಗ್ರೆಸ್ 29 (ಶೇ.30), ಎಐಯುಡಿಎಫ್ 16 (ಶೇ.8.43), ಅಸ್ಸಾಂ ಗಣ ಪರಿಷತ್ 9 (ಶೇ.8), ಯುಪಿಪಿಎಲ್ 6 (ಶೇ.2.97), ಬಿಪಿಎಫ್ 4 (ಶೇ.3.39). ಅಸ್ಸಾಂ ಚುನಾವಣಾ ಕಣ ಮತದಾನಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಇರುವಾಗಲೇ ಕಾವೇರುತ್ತಿದೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement