ಸಾರ್ಕೊಯ್ಡೋಸಿಸ್ ಎಂದರೇನು? ಚಿಕಿತ್ಸೆ ಬಗ್ಗೆ ತಿಳಿಯಬೇಕಾದ ವಿವರಗಳಿವು... (ಕುಶಲವೇ ಕ್ಷೇಮವೇ)

ಸಾರ್ಕೊಯ್ಡೋಸಿಸ್‌ನ ಲಕ್ಷಣಗಳು ಯಾವ ಅಂಗಾಂಗವನ್ನು ಇದು ಬಾಧಿಸಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ.
Sarcoidosis (image used for representational purpose only)
ಸಾರ್ಕೊಯ್ಡೋಸಿಸ್ (ಸಾಂಕೇತಿಕ ಚಿತ್ರ)online desk
Updated on

ಸಾರ್ಕೊಯ್ಡೋಸಿಸ್ ಎನ್ನುವುದು ದೇಹದ ವಿವಿಧ ಅಂಗಾಂಗಗಳಲ್ಲಿ ಸಣ್ಣ ಉರಿಯೂತ ಗುಡ್ಡೆಗಳು (ಗ್ರಾನ್ಯುಲೋಮಾ) ಉಂಟಾಗುವ ಒಂದು ದೀರ್ಘಕಾಲಿಕ ಉರಿಯೂತ ಸಂಬಂಧಿ ರೋಗವಾಗಿದೆ. ಇದು ಮುಖ್ಯವಾಗಿ ಶ್ವಾಸಕೋಶ ಮತ್ತು ಲಸಿಕಾಗ್ರಂಥಿಗಳನ್ನು (ಲಿಂಫ್ ನೋಡುಗಳು) ಹೆಚ್ಚು ಪ್ರಭಾವಿಸುತ್ತದೆ. ಜೊತೆಗೆ ಚರ್ಮ, ಕಣ್ಣು, ಹೃದಯ, ನರಮಂಡಲ ಸೇರಿದಂತೆ ಬೇರೆ ಅಂಗಾಂಗಗಳನ್ನೂ ಇದು ಬಾಧಿಸಬಹುದು. ಈ ರೋಗದ ನಿಖರ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ದೇಹದ ರೋಗನಿರೋಧಕ ವ್ಯವಸ್ಥೆ ಯಾವುದೋ ಪ್ರೇರಕಕ್ಕೆ ಅತಿಯಾಗಿ ಪ್ರತಿಕ್ರಿಯಿಸುವುದೇ ಇದರ ಮೂಲ ಕಾರಣ ಎಂದು ವೈದ್ಯಕೀಯವಾಗಿ ಊಹಿಸಲಾಗಿದೆ.

ಸಾರ್ಕೊಯ್ಡೋಸಿಸ್‌ ಲಕ್ಷಣಗಳು

ಸಾರ್ಕೊಯ್ಡೋಸಿಸ್‌ನ ಲಕ್ಷಣಗಳು ಯಾವ ಅಂಗಾಂಗವನ್ನು ಇದು ಬಾಧಿಸಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ. ಕೆಲವೊಮ್ಮೆ ಯಾವುದೇ ಲಕ್ಷಣಗಳು ಕಾಣಿಸದೇ ಸಾಮಾನ್ಯ ಎಕ್ಸ್ರೇ ಪರೀಕ್ಷೆಯಲ್ಲಿ ಮಾತ್ರ ಇದು ಪತ್ತೆಯಾಗಬಹುದು.

ಈ ರೋಗ ಬಂದಾಗ ಸಾಮಾನ್ಯವಾಗಿ ಕಾಣುವ ಲಕ್ಷಣಗಳಲ್ಲಿ ಒಣ ಕೆಮ್ಮು, ಉಸಿರಾಟದ ತೊಂದರೆ, ಎದೆ ನೋವು ಮತ್ತು ತೀವ್ರವಾದ ದಣಿವು ಸೇರಿವೆ. ಕೆಲವರಿಗೆ ಜ್ವರ, ರಾತ್ರಿ ಬೆವರು, ತೂಕ ಕಡಿಮೆಯಾಗುವುದು ಮತ್ತು ದೇಹದಲ್ಲಿ ದುರ್ಬಲತೆ ಕಾಣಬಹುದು. ಚರ್ಮಕ್ಕೆ ಈ ರೋಗ ತಗುಲಿದರೆ ಕೆಂಪು ಉಬ್ಬುಗಳು, ವಿಶೇಷವಾಗಿ ಕಾಲುಗಳಲ್ಲಿ ನೋವುಂಟುಮಾಡುವ ಗುಳ್ಳೆಗಳು ಅಥವಾ ಬಣ್ಣದಲ್ಲಿ ಬದಲಾವಣೆ ಕಾಣಬಹುದು. ಕಣ್ಣುಗಳಿಗೆ ತಗುಲಿದರೆ ಕೆಂಪಾಗುವುದು, ನೋವು, ಬೆಳಕಿಗೆ ಸಂವೇದನೆ ಮತ್ತು ದೃಷ್ಟಿ ಮಂಕಾಗುವುದು ಸಂಭವಿಸಬಹುದು.

ಸಂಧಿಗಳಿಗೆ (ಕೀಲು) ಈ ರೋಗ ತಗುಲಿದರೆ ನೋವು ಮತ್ತು ಊತ ಉಂಟಾಗಬಹುದು, ವಿಶೇಷವಾಗಿ ಮಣಿಕಟ್ಟು ಭಾಗದಲ್ಲಿ ಈ ಲಕ್ಷಣಗಳು ಕಾಣಬಹುದು. ಅಪರೂಪದ ಸಂದರ್ಭಗಳಲ್ಲಿ ಹೃದಯ ಅಥವಾ ನರಮಂಡಲಕ್ಕೆ ತಗುಲಿದರೆ ಹೃದಯದ ಮಿಡಿತ ಅನಿಯಮಿತವಾಗುವುದು, ತಲೆಸುತ್ತು ಅಥವಾ ನರಸಂಬAಧಿ ಸಮಸ್ಯೆಗಳು ಉಂಟಾಗಬಹುದು.

Sarcoidosis (image used for representational purpose only)
ಡಿಜಿಟಲ್ ಗೀಳು ಭವಿಷ್ಯ ಹಾಳು (ಕುಶಲವೇ ಕ್ಷೇಮವೇ)

ಸಾರ್ಕೊಯ್ಡೋಸಿಸ್‌ ರೋಗ ಪತ್ತೆ ಹೇಗೆ?

ಈ ರೋಗದ ನಿಖರ ಕಾರಣ ತಿಳಿದಿಲ್ಲದಿದ್ದರೂ ಜನ್ಯ ಗುಣಲಕ್ಷಣಗಳು ಮತ್ತು ಪರಿಸರ ಕಾರಣಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನಂಬಲಾಗಿದೆ. ಧೂಳು, ರಾಸಾಯನಿಕ ಪದಾರ್ಥಗಳು ಅಥವಾ ಕೆಲವು ಸೋಂಕುಗಳು ಈ ರೋಗಕ್ಕೆ ಪ್ರೇರಕವಾಗಬಹುದು. ಸಾಮಾನ್ಯವಾಗಿ 20 ರಿಂದ 50 ವರ್ಷ ವಯಸ್ಸಿನವರಲ್ಲಿ ಇದು ಹೆಚ್ಚು ಕಂಡುಬರುತ್ತದೆ ಮತ್ತು ಮಹಿಳೆಯರಲ್ಲಿ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಾಣಿಸುತ್ತದೆ.

ವೈದ್ಯರು ರೋಗಿಯ ಲಕ್ಷಣಗಳು, ವೈದ್ಯಕೀಯ ಇತಿಹಾಸ, ಶಾರೀರಿಕ ಪರೀಕ್ಷೆ ಮತ್ತು ಪರೀಕ್ಷೆಗಳ ಮೂಲಕ ಈ ರೋಗವನ್ನು ಪತ್ತೆಹಚ್ಚುತ್ತಾರೆ. ಎದೆಯ ಎಕ್ಸ್ರೇ ಅಥವಾ ಸಿ ಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳು ಮತ್ತು ಕೆಲವೊಮ್ಮೆ ಬಯಾಪ್ಸಿ ಮೂಲಕ ಗ್ರಾನ್ಯುಲೋಮಾ ಇರುವುದನ್ನು ದೃಢಪಡಿಸಲಾಗುತ್ತದೆ. ಶ್ವಾಸಕೋಶದ ಕಾರ್ಯಕ್ಷಮತೆಯ ಪರೀಕ್ಷೆಯನ್ನು ಮಾಡಬಹುದು.

ಸಾರ್ಕೊಯ್ಡೋಸಿಸ್‌ಗೆ ಚಿಕಿತ್ಸೆಗಳು

ಬಹಳ ಜನರಲ್ಲಿ ಈ ರೋಗ ತಾನಾಗಿಯೇ ಕಡಿಮೆಯಾಗಬಹುದು ಮತ್ತು ವಿಶೇಷ ಚಿಕಿತ್ಸೆ ಅಗತ್ಯವಿರದೇ ಇರಬಹುದು. ರೋಗದ ಲಕ್ಷಣಗಳು ಕಡಿಮೆ ಇದ್ದರೆ ವೈದ್ಯರು ನಿಯಮಿತವಾಗಿ ಪರಿಶೀಲನೆ ಮಾಡುತ್ತಾರೆ.

ನಿರಂತರ ಕೆಮ್ಮು, ಕಾರಣವಿಲ್ಲದ ದಣಿವು ಅಥವಾ ಉಸಿರಾಟದ ತೊಂದರೆ ಇದ್ದರೆ ಈ ರೋಗವನ್ನು ಬೇಗ ಪತ್ತೆಹಚ್ಚಲು ನಿಯಮಿತ ವೈದ್ಯಕೀಯ ಪರಿಶೀಲನೆ ಬಹಳ ಮುಖ್ಯ.ಈಗಾಗಲೇ ರೋಗ ಪತ್ತೆಯಾದವರು ವೈದ್ಯರು ನೀಡಿದ ಚಿಕಿತ್ಸಾ ವಿಧಾನವನ್ನು ಸರಿಯಾಗಿ ಪಾಲಿಸುವುದು ಮತ್ತು ಫಾಲೋ-ಅಪ್ ಭೇಟಿ ಮಾಡುವುದು ಸಮಸ್ಯೆಗಳು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಈ ರೋಗದ ಲಕ್ಷಣಗಳು ಗಂಭೀರವಾಗಿದ್ದರೆ ಉರಿಯೂತವನ್ನು ಕಡಿಮೆ ಮಾಡಲು ಕಾರ್ಟಿಕೋಸ್ಟಿರಾಯ್ಡ್ ಔಷಧಿಗಳು (ಉದಾ: ಪ್ರೆಡ್ನಿಸೋನ್) ಬಳಸಲಾಗುತ್ತದೆ. ಇದು ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ.

ಸಮಯಕ್ಕೆ ಸರಿಯಾದ ವಿಶ್ರಾಂತಿ, ಪ್ರತಿದಿನ ಸಮತೋಲನ ಆಹಾರ, ಸಾಮರ್ಥ್ಯಕ್ಕೆ ತಕ್ಕ ವ್ಯಾಯಾಮ ಮತ್ತು ಧೂಮಪಾನದಿಂದ ದೂರವಿರುವುದು ಸಹ ಮುಖ್ಯ. ಶ್ವಾಸಕೋಶದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಉಸಿರಾಟದ ವ್ಯಾಯಾಮಗಳು ಉಪಯುಕ್ತವಾಗಬಹುದು.

ಸಾರ್ಕೊಯ್ಡೋಸಿಸ್‌ಗೆ ಖಚಿತವಾದ ತಡೆ ವಿಧಾನ ಇಲ್ಲ. ಆದರೆ ಕೆಲವು ಜೀವನಶೈಲಿ ಕ್ರಮಗಳು ಇದನ್ನು ತಡೆಯಲು ಸಹಾಯಕವಾಗಬಹುದು. ಧೂಳು, ಹೊಗೆ ಮತ್ತು ಹಾನಿಕಾರಕ ರಾಸಾಯನಿಕಗಳಿಂದ ದೂರವಿರುವುದು ಮುಖ್ಯ, ವಿಶೇಷವಾಗಿ ಶ್ವಾಸಕೋಶ ಸಮಸ್ಯೆಗಳಿರುವವರು ಈ ದಿಸೆಯಲ್ಲಿ ಗಮನ ಹರಿಸಬೇಕು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮೂಲಕ ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಬಹುದು.

ನಿರಂತರ ಕೆಮ್ಮು, ದಣಿವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಈಗಾಗಲೇ ರೋಗ ಇರುವವರು ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಯಮಿತ ಪರಿಶೀಲನೆ ಮಾಡಿಸಬೇಕು.

ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಸಾರ್ಕೊಯ್ಡೋಸಿಸ್ ಒಂದು ಸಂಕೀರ್ಣ ರೋಗವಾದರೂ ಬಹುತೇಕ ಸಂದರ್ಭಗಳಲ್ಲಿ ನಿಯಂತ್ರಣದಲ್ಲಿರಬಹುದಾದ ರೋಗವಾಗಿದೆ. ಇದರ ಲಕ್ಷಣಗಳನ್ನು ಬೇಗ ಗುರುತಿಸಿ ವೈದ್ಯಕೀಯ ಸಲಹೆ ಪಡೆಯುವುದು, ಸರಿಯಾದ ಚಿಕಿತ್ಸೆ ಪಾಲಿಸುವುದು ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ಹೆಚ್ಚಿನ ಜನರು ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com