ಅನ್ವೇಷ: ನಮ್ಮ ಕಣ್ಣಿಗೆ ಕಾಣದ್ದನ್ನೂ ಇಸ್ರೋದ ನೂತನ ಉಪಗ್ರಹ ಕಾಣುವುದು ಹೇಗೆ?

ಈ ಅನ್ವೇಷ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ ಮೂಲಕ ಇಸ್ರೋ ಉಡಾವಣೆ ನಡೆಸಲಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ಅನ್ವೇಷ: ನಮ್ಮ ಕಣ್ಣಿಗೆ ಕಾಣದ್ದನ್ನೂ ಇಸ್ರೋದ ನೂತನ ಉಪಗ್ರಹ ಕಾಣುವುದು ಹೇಗೆ?
Updated on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಇಒಎಸ್-ಎನ್1‌ ಅನ್ವೇಷ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ ಮೂಲಕ ಉಡಾವಣೆಗೊಳಿಸಲಿದೆ. ಈ ಉಡಾವಣೆ ಜನವರಿ 12ರ ಸೋಮವಾರ ನೆರವೇರಲಿದೆ.

ಮಾನವರ ಕಣ್ಣಿಗೆ ಕಾಣಿಸದ ವಸ್ತುಗಳನ್ನೂ ನೋಡುವ ವಿಶೇಷವಾದ ಶಕ್ತಿಯನ್ನು ಹೊಂದಿ, ಅರಣ್ಯ ಪ್ರದೇಶಗಳು ಮತ್ತು ಯುದ್ಧ ಭೂಮಿಗಳಂತಹ ಜಾಗಗಳಲ್ಲೂ ಬಚ್ಚಿಟ್ಟಿರುವ ಮಾಹಿತಿಗಳನ್ನು ಗಮನಿಸುವಂತಹ ಸಾಮರ್ಥ್ಯವನ್ನು ಹೊಂದುವುದನ್ನು ಕಲ್ಪಿಸಿಕೊಳ್ಳಿ.

ಸರಳವಾಗಿ ಹೇಳುವುದಾದರೆ, ಇದೊಂದು ಹೈಪರ್‌ ಸ್ಪೆಕ್ಟ್ರಲ್‌ ರಿಮೋಟ್‌ ಸೆನ್ಸಿಂಗ್‌ (ಎಚ್‌ಆರ್‌ಎಸ್)‌ ಉಪಗ್ರಹವಾಗಿದೆ. ಇದು ಸಾಮಾನ್ಯವಾದ ಉಪಗ್ರಹ ಚಿತ್ರಗಳನ್ನು ಬಚ್ಚಿಟ್ಟ ಮಾಹಿತಿಗಳನ್ನೂ ಪತ್ತೆಹಚ್ಚಬಲ್ಲ ಹೈಟೆಕ್‌ ಉಪಕರಣವಾಗಿ ಪರಿವರ್ತಿಸುತ್ತದೆ. ಆ ಮೂಲಕ ಬಾಹ್ಯಾಕಾಶದಲ್ಲಿ ಪತ್ತೇದಾರನ ಕಣ್ಣಿನಂತೆ ಕಾರ್ಯಾಚರಿಸುತ್ತದೆ.

ಈ ಅನ್ವೇಷ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ ಮೂಲಕ ಇಸ್ರೋ ಉಡಾವಣೆ ನಡೆಸಲಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದೆ.

ಹೈಪರ್ ಸ್ಪೆಕ್ಟ್ರಲ್‌ ಎಂದರೇನು?

ಹಿಂದಿನ ದಿನಗಳಲ್ಲಿ, ಬೇಹುಗಾರರು ಮತ್ತು ಅನ್ವೇಷಕರು ಭೂಮಿಯ ಮೇಲೆ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸರಳ ವೈಮಾನಿಕ ಚಿತ್ರಗಳನ್ನು ಬಳಸುತ್ತಿದ್ದರು. ಅವರು ಆಕಾರ, ಬಣ್ಣಗಳು ಮತ್ತು ವಿನ್ಯಾಸಗಳ ಅಧ್ಯಯನ ಮಾಡಿ, ಅಲ್ಲಿ ಏನಿದೆ ಎನ್ನುವುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರು. ಉದಾಹರಣೆಗೆ, ನದಿಗಳನ್ನು ಅವುಗಳ ಬಾಗಿದ, ಬಳುಕಿದ ಪಥದಿಂದ ಅಥವಾ ಕಾಡುಗಳನ್ನು ಹಸಿರು ಪ್ರದೇಶಗಳಿಂದ ಗುರುತಿಸುತ್ತಿದ್ದರು.

ಆದರೆ, ಈಗ ಹೈಪರ್‌ ಸ್ಪೆಕ್ಟ್ರಲ್‌ ರಿಮೋಟ್‌ ಸೆನ್ಸಿಂಗ್‌ (ಎಚ್‌ಆರ್‌ಎಸ್)‌ ಬಂದಿರುವುದು ಒಂದು ಮಹತ್ವದ ಅಭಿವೃದ್ಧಿಯಾಗಿದೆ. ಕೆಲವೇ ಬಣ್ಣಗಳನ್ನು ಗುರುತಿಸುವ ಬದಲು, ಇದು ಬೆಳಕಿನ ನೂರಾರು ಸಣ್ಣ ಸಣ್ಣ ಛಾಯೆಗಳನ್ನೂ ಗುರುತಿಸುತ್ತದೆ. ನಾವು ನೋಡುವ ಸಹಜ ಬೆಳಕಿನಿಂದ ಆರಂಭಿಸಿ, ಬರಿಗಣ್ಣಿಗೆ ಕಾಣದ ಅತಿಗೆಂಪು (ಇನ್‌ಫ್ರಾರೆಡ್)‌ ಬೆಳಕಿನ ತನಕ ಎಲ್ಲವನ್ನೂ ನೋಡಬಲ್ಲದು. ಇದಕ್ಕೆ ಕಾರಣವೇನೆಂದರೆ, ಬೇರೆ ಬೇರೆ ವಸ್ತುಗಳು ಬೆಳಕನ್ನು ವಿಭಿನ್ನವಾಗಿ ಪ್ರತಿಫಲಿಸುತ್ತವೆ. ಒಂದು ಚಿತ್ರದಲ್ಲಿ ಕಾಣುವ ಪ್ರತಿಯೊಂದು ಸಣ್ಣ ಪ್ರದೇಶವೂ ತನ್ನದೇ ಆದ ವಿಶಿಷ್ಟವಾದ ಬೆಳಕಿನ ವಿನ್ಯಾಸವನ್ನು ಸೃಷ್ಟಿಸುತ್ತದೆ. ಇದು ವಿಜ್ಞಾನಿಗಳಿಗೆ ಭೂಮಿಯ ಮೇಲೆ ವಾಸ್ತವವಾಗಿ ಏನಿದೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಲು ನೆರವಾಗುತ್ತದೆ.

ಇದು ಒಂದು ರೀತಿಯ ಸ್ಮಾರ್ಟ್‌ ಸ್ಕ್ಯಾನರ್‌ ರೀತಿ ಕಾರ್ಯಾಚರಿಸಿ, ಮಣ್ಣು, ಸಸ್ಯಗಳು ಮತ್ತು ಮಾನವ ನಿರ್ಮಿತ ವಸ್ತುಗಳ ನಡುವಿನ ವ್ಯತ್ಯಾಸಗಳನ್ನು ಅವು ಬೆಳಕನ್ನು ಪ್ರತಿಫಲಿಸುವುದರ ಆಧಾರದಲ್ಲೇ ತಿಳಿಸುತ್ತವೆ. ಇದರಿಂದಾಗಿ, ನಾವು ನೆಲದ ಮೇಲೆ ಏನಿದೆ ಎಂದು ಅಂದಾಜು ಮಾಡುವ ಬದಲು, ಅದನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಇವೆಲ್ಲವನ್ನೂ ಬುದ್ಧಿವಂತ ಸಾಫ್ಟ್‌ವೇರ್‌ ಮೂಲಕ ಸ್ವಯಂಚಾಲಿತವಾಗಿ ನಡೆಸಲಾಗುತ್ತದೆ.

ಅನ್ವೇಷ: ನಮ್ಮ ಕಣ್ಣಿಗೆ ಕಾಣದ್ದನ್ನೂ ಇಸ್ರೋದ ನೂತನ ಉಪಗ್ರಹ ಕಾಣುವುದು ಹೇಗೆ?
ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ‌ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)

ಇದು ಹೇಗೆ ಕಾರ್ಯಾಚರಿಸುತ್ತದೆ?

ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವೂ ಬೆಳಕಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುವುದರಿಂದ ಎಚ್‌ಆರ್‌ಎಸ್‌ ಕಾರ್ಯಾಚರಿಸುತ್ತದೆ. ಉದಾಹರಣೆಗೆ, ನೀರು ಸಣ್ಣ ಪ್ರಮಾಣದ ಬೆಳಕನ್ನು ಹೀರಿಕೊಂಡು, ಇನ್ನುಳಿದ ಬೆಳಕನ್ನು ಹಿಂದಕ್ಕೆ ಪ್ರತಿಫಲಿಸುತ್ತದೆ. ಇದರಿಂದ ಒಂದು ವಿಶೇಷ ವಿನ್ಯಾಸ ಸೃಷ್ಟಿಯಾಗುತ್ತದೆ. ಇದು ಸ್ವತಃ ಒಂದು ಬಾರ್‌ ಕೋಡ್‌ ರೀತಿಯಲ್ಲಿದ್ದು, ಆ ಪ್ರತಿಫಲನದ ಮೂಲವೇನು ಎಂದು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ.

ವಿಜ್ಞಾನಿಗಳು ಮಣ್ಣು ಅಥವಾ ಕೇವಲ ಹುಲ್ಲಿನಂತಹ ಶುದ್ಧ ಮಾದರಿಗಳನ್ನು ಬಳಸಿಕೊಂಡು, ಈ ಬಾರ್‌ ಕೋಡ್‌ಗಳ ಸಂಗ್ರಹವನ್ನು ನಿರ್ಮಿಸುತ್ತಾರೆ. ಬಳಿಕ, ಉಪಗ್ರಹ ಗಮನಿಸುವ ವಿನ್ಯಾಸಗಳನ್ನು ಇವುಗಳೊಡನೆ ಹೋಲಿಸಿ ನೋಡುತ್ತಾರೆ.

ಭೂಮಿಯಲ್ಲಿ ಇಂತಹ ಮಾಹಿತಿಗಳನ್ನು ಕಲೆಹಾಕಲು, ತಜ್ಞರು ಸ್ಪೆಕ್ಟ್ರೋಮೀಟರ್ ಎನ್ನುವ ಕೈಯಲ್ಲಿ ಹಿಡಿಯುವ ಉಪಕರಣಗಳನ್ನು ಬಳಸುತ್ತಾರೆ. ಇವು ಸಾಗಿಸಬಹುದಾದ ಸ್ಕ್ಯಾನರ್‌ಗಳಾಗಿದ್ದು, ಮೇಲ್ಮೈಗಳು ಬೆಳಕನ್ನು ಹೇಗೆ ಪ್ರತಿಫಲಿಸುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಅಳೆಯುತ್ತವೆ.

ಜಿಯೋಗ್ರಾಫಿಕ್‌ ಇನ್ಫಾರ್ಮೇಶನ್‌ ಸಿಸ್ಟಮ್‌ (ಜಿಐಎಸ್) ಎನ್ನುವ ಉಪಗ್ರಹ ಮಾಹಿತಿಗಳು, ಜಿಪಿಎಸ್‌ ಸಂಕೇತಗಳು ಮತ್ತು ಭೂ ಸಮೀಕ್ಷೆಗಳ ಆಧಾರದಲ್ಲಿ ನಿರ್ಮಿಸುವ ಡಿಜಿಟಲ್‌ ನಕ್ಷಾ ವ್ಯವಸ್ಥೆಯ‌ ಜೊತೆಗೆ ಎಚ್‌ಆರ್‌ಎಸ್‌ ಅನ್ನು ಬಳಸಿದಾಗ, ಲಭಿಸುವ ಮಾಹಿತಿಗಳನ್ನು ಭೂಮಿಯ ನೈಜ ಭೂ ಪ್ರದೇಶಗಳ ಮೇಲೆ ನಿಖರವಾಗಿ ಅಳವಡಿಸಲು ಸಾಧ್ಯವಾಗುತ್ತದೆ. ಇದು ಬಳಕೆದಾರರಿಗೆ ಜೂ಼ಮ್‌ ಇನ್‌ ಮಾಡಿ, 3ಡಿ ವೀಕ್ಷಣೆಗೆ ಬೇಕಾದಂತೆ ತಿರುಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರೊಡನೆ, “ನದಿಯನ್ನು ದಾಟಲು ಅತ್ಯಂತ ಸೂಕ್ತವಾದ ಸ್ಥಳ ಯಾವುದು?” ಎನ್ನುವಂತಹ ಸರಳ, ಪ್ರಾಯೋಗಿಕ ಪ್ರಶ್ನೆಗಳನ್ನು ಕೇಳಬಹುದಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಇದೇಕೆ ಮುಖ್ಯ?

ಇಂದಿನ ಜಗತ್ತಿನಲ್ಲಿ, ಎಚ್‌ಆರ್‌ಎಸ್‌ ಮಿಲಿಟರಿಗೆ ಅತ್ಯಂತ ಶಕ್ತಿಶಾಲಿ ಉಪಕರಣವಾಗಿದೆ. ಇದು ಶತ್ರುಗಳಿಗೆ ಹಾನಿ ಉಂಟುಮಾಡುವುದಕ್ಕೆ ಬಳಕೆಯಾಗುವ ತಂತ್ರಜ್ಞಾನವಲ್ಲ. ಆದರೆ, ನಮ್ಮ ಜನರನ್ನು ರಕ್ಷಿಸಿ, ಪ್ರಾಣ ರಕ್ಷಣೆಗೆ ಜಾಗರೂಕ ಯೋಜನೆ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.

ಇದು ಹೇಗೆ ಕಾರ್ಯಾಚರಿಸುತ್ತದೆ?

  • ಭೂಮಿಯ ನಕ್ಷೆ ನಿರ್ಮಾಣ: ಎಚ್‌ಆರ್‌ಎಸ್‌ ನಮಗೆ ಭೂಮಿಯ ಮೇಲಿರುವ ಮಣ್ಣಿನ ವಿಧ ಹೇಗೆ? ಅದು ಸಡಿಲವಾದ ಮರಳೇ, ಅಥವಾ ಅಂಟು ಮಣ್ಣೇ ಎಂದು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇದು ಈ ಮಣ್ಣಿನ ಮೇಲೆ ಟ್ಯಾಂಕ್‌ಗಳಂತಹ ತೂಕದ ವಾಹನಗಳು ಸುರಕ್ಷಿತವಾಗಿ ಚಲಿಸಬಲ್ಲವೇ, ಅಥವಾ ಈ ಪ್ರದೇಶವನ್ನು ದಾಟುವಾಗ ನಮ್ಮ ಪಡೆಗಳು ಸಿಲುಕಿಕೊಳ್ಳುವ ಸಾಧ್ಯತೆಗಳಿವಯೇ ಎನ್ನುವುದನ್ನು ತಿಳಿಯಲು ನೆರವಾಗುತ್ತದೆ.

  • ಅವಿತಿರುವ ಅಪಾಯಗಳನ್ನು ಗುರುತಿಸಲು ನೆರವು: ಕ್ಯಾಮಫ್ಲೇಜ್‌ (ಸುತ್ತಮುತ್ತಲಿನ ವಸ್ತುಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಮರೆಮಾಚಿರುವ ವಸ್ತುಗಳು) ವಿಧಾನದಿಂದ ಎಚ್‌ಆರ್‌ಎಸ್‌ ಅನ್ನು ಸುಲಭವಾಗಿ ಮೋಸಗೊಳಿಸಲು ಸಾಧ್ಯವಿಲ್ಲ. ಇದು ನಕಲಿ ಮುಚ್ಚುವಿಕೆ ಅಥವಾ ಅಸಹಜ ವಸ್ತುಗಳನ್ನು ಬಹಳ ಸುಲಭವಾಗಿ ಗುರುತಿಸಬಲ್ಲದು. ಇದು ನಗರಗಳಲ್ಲೂ ನಿಖರವಾಗಿ ಕಾರ್ಯಾಚರಿಸಿ, ನೈಸರ್ಗಿಕ ಸಸ್ಯಗಳು ಮತ್ತು ಮಾನವ ನಿರ್ಮಿತ ವಸ್ತುಗಳ ನಡುವಿನ ವ್ಯತ್ಯಾಸ ಪತ್ತೆಹಚ್ಚಬಲ್ಲದು. ಇನ್ನು ಭಾರತದ ವೈವಿಧ್ಯಮಯ ಭೂ ಪ್ರದೇಶಗಳಲ್ಲಿ, ಇದು ಶತ್ರುಗಳ ಸ್ಥಾನವನ್ನು ಗುರುತಿಸಲು, ಅಥವಾ ಮಿತ್ರ ಪಡೆಗಳಿಗೆ ಬಚ್ಚಿಟ್ಟುಕೊಳ್ಳಲು ಸುರಕ್ಷಿತ ಸ್ಥಾನಗಳನ್ನು ಸೂಚಿಸಬಲ್ಲದು.

  • ತಜ್ಞನಂತೆ ಯೋಜನಾ ರೂಪಿಸುವಿಕೆ (ವೃತ್ತಿಪರ ಹಂತ): ವಿಸ್ತೃತವಾದ 3ಡಿ ನಕ್ಷೆಗಳ ಸಹಾಯದಿಂದ, ಸೇನಾಪಡೆಗಳು ಕಂಪ್ಯೂಟರ್‌ಗಳ ಮೇಲೆ ನೈಜ ಯುದ್ಧ ಪರಿಸ್ಥಿತಿಗಳ ಅಭ್ಯಾಸ ನಡೆಸಬಹುದು. ಇದರಿಂದ, ಬೆಟ್ಟಗಳ ಮೇಲಿನಿಂದ, ಕಟ್ಟಡಗಳ ಮೇಲಿನಿಂದ ಯಾವೆಲ್ಲ ಪ್ರದೇಶಗಳು ಕಾಣಬಹುದು ಎಂದು ಗುರುತಿಸಲು ನೆರವಾಗಿ, ನಮ್ಮ ಸೇನಾಪಡೆಗಳಿಗೆ ಮುಂದೊತ್ತಿ ಸಾಗಲು ಸುರಕ್ಷಿತವಾದ ಮಾರ್ಗಗಳನ್ನು ಗುರುತಿಸಲು ಸಹಾಯವಾಗುತ್ತದೆ.

  • ಅಪಾಯದ ಮೇಲೆ ಕಣ್ಣು: ಎಚ್‌ಆರ್‌ಎಸ್‌ ವ್ಯವಸ್ಥೆ ಭೂಮಿಯ ಮೇಲಿನ ಸಂಭಾವ್ಯ ಬದಲಾವಣೆಗಳಾದ ಪ್ರವಾಹ, ಭೂಕಂಪಗಳನ್ನು ಗಮನಿಸಿ, ಅದಕ್ಕೆ ಪೂರ್ವಭಾವಿಯಾಗಿ ಮುನ್ನೆಚ್ಚರಿಕೆ ನೀಡಬಲ್ಲದು.

ಅನ್ವೇಷ: ನಮ್ಮ ಕಣ್ಣಿಗೆ ಕಾಣದ್ದನ್ನೂ ಇಸ್ರೋದ ನೂತನ ಉಪಗ್ರಹ ಕಾಣುವುದು ಹೇಗೆ?
ವಿಮಾನ ಮತ್ತು ಕಾರ್: ಪುಟಿನ್‌ರ ಚಲಿಸುವ ಕೋಟೆಗಳು!

ಮುಂದಿರುವ ಸವಾಲುಗಳು ಮತ್ತು ಭವಿಷ್ಯದ ಭರವಸೆ

ಯಾವುದೇ ತಂತ್ರಜ್ಞಾನವೂ ಪರಿಪೂರ್ಣವಲ್ಲ. ಎಚ್‌ಆರ್‌ಎಸ್‌ ದುಬಾರಿಯಾಗಿದ್ದು, ಇಷ್ಟು ಭಾರೀ ಪ್ರಮಾಣದ ಮಾಹಿತಿಗಳನ್ನು ನಿರ್ವಹಿಸುವುದು ಒಂದು ಬೃಹತ್‌ ವಾಚನಾಲಯವನ್ನು ನಿರ್ವಹಿಸಿದ ರೀತಿಯಲ್ಲಿರುತ್ತದೆ. ಇದು ಒದಗಿಸುವ ಮಾಹಿತಿಗಳನ್ನು ಅತ್ಯಂತ ಸಮರ್ಪಕವಾಗಿ ಅಧ್ಯಯನ ನಡೆಸಲು ತಜ್ಞರ ಅಗತ್ಯವಿದೆ. ಕೆಲವೊಮ್ಮೆ ಹವಾಮಾನ ವೈಪರೀತ್ಯಗಳು ಚಿತ್ರಗಳು ಅಷ್ಟು ಸ್ಪಷ್ಟವಾಗಿ ಮೂಡಿಬರದಂತೆ ಮಾಡುವ ಸಾಧ್ಯತೆಗಳಿವೆ.

ಆದರೆ, ಇದಕ್ಕೆ ಸೂಕ್ತ ಪರಿಹಾರಗಳೂ ಇವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ - ಎಐ) ಮಾಹಿತಿಗಳನ್ನು ಕ್ಷಿಪ್ರವಾಗಿ ಸಂಸ್ಕರಿಸಲು ನೆರವಾಗಿ, ಕಡಿಮೆ ವೆಚ್ಚದಾಯಕ ವ್ಯವಸ್ಥೆಗಳನ್ನು ಬಳಸಲು (ವಿವಿಧ ರೀತಿಯ ತಂತ್ರಜ್ಞಾನಗಳನ್ನು ಸಂಯೋಜಿಸಿ, ಜೊತೆಯಾಗಿ ಬಳಸುವ ವಿಧಾನ) ನೆರವಾಗುತ್ತದೆ. ಇದರಿಂದ ಖರ್ಚು ಕಡಿಮೆಯಾಗುತ್ತದೆ. ಇನ್ನು ಹೆಚ್ಚಿನ ತರಬೇತಿ ನೀಡುವುದು ಜನರಿಗೆ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಲು ನೆರವಾಗುತ್ತದೆ.

ಭವಿಷ್ಯದ ಬಾಹ್ಯಾಕಾಶ ಯೋಜನೆಗಳು ಈ ತಂತ್ರಜ್ಞಾನ ಎಲ್ಲರಿಗೂ ಬಳಸಲು ಸುಲಭವಾಗುವಂತೆ ಮಾಡಲಿದ್ದು, ಇದು ಕೇವಲ ರಕ್ಷಣಾ ಕ್ಷೇತ್ರಕ್ಕೆ ಸೀಮಿತವಾಗುವುದಿಲ್ಲ. ಇದು ಕೃಷಿಗೆ, ವಿಪತ್ತು ಪರಿಹಾರಕ್ಕೆ, ಮತ್ತು ಹವಾಮಾನ ವೀಕ್ಷಣೆಗೂ ನೆರವು ನೀಡಲಿದೆ. ಉದಾಹರಣೆಗೆ, ರೈತರು ರೋಗಪೀಡಿತ ಬೆಳೆಗಳನ್ನು ಮೊದಲೇ ಗುರುತಿಸಲು ಸಾಧ್ಯವಾಗುತ್ತದೆ, ರಕ್ಷಣಾ ತಂಡಗಳಿಗೆ ಅವಶೇಷಗಳ ಕೆಳಗೆ ಸಿಲುಕಿರುವ ಜನರನ್ನು ಗುರುತಿಸಲು ನೆರವಾಗುತ್ತದೆ.

ಭಾರತ ಜನವರಿ 12ರಂದು ಅನ್ವೇಷ ಉಪಗ್ರಹದ ಉಡಾವಣೆಗೆ ಸಜ್ಜಾಗಿದ್ದು, ಇದು ಭಾರತದ ಭದ್ರತೆ ಮತ್ತು ಕಣ್ಗಾವಲು ಸಾಮರ್ಥ್ಯಕ್ಕೆ ಉತ್ತೇಜನ ನೀಡಲಿದೆ. ಜೊತೆಗೆ, ನೈಸರ್ಗಿಕ ವಿಕೋಪಗಳಿಗೆ ವೇಗವಾಗಿ, ತಕ್ಷಣವೇ ಪ್ರತಿಕ್ರಿಯೆ ನೀಡಲು ಸಹಾಯ ಮಾಡಿ, ನಷ್ಟ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳಿಗೆ ಪೂರಕವಾಗಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com