ರಾಜ್ಯಪಾಲ ಹುದ್ದೆ: ಮತ್ತೆ ಹುಟ್ಟು ಹಾಕಿದ ಚರ್ಚೆ (ನೇರ ನೋಟ)

ಮುತ್ಸದ್ದಿ ನಾಯಕರು, ಸಂವಿಧಾನ ತಜ್ಞರು ಅನೇಕ ವರ್ಷಗಳಿಂದ ಚರ್ಚಿಸುತ್ತಿರುವ ಈ ವಿಷಯ ಕೆಲವು ವರ್ಷಗಳಿಂದ ಮತ್ತೆ ಮುನ್ನೆಲೆಗೆ ಬಂದಿದೆ.
Governor speech
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣonline desk
Updated on

ಅವತ್ತು ಆಗಸ್ಟ್‌ 5, 1983. ರಾಮಕೃಷ್ಣ ಹೆಗಡೆ ಅವರು ರಾಜ್ಯದ ಮುಖ್ಯಮಂತ್ರಿ. ಕೇಂದ್ರದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಮಂತ್ರಿ. ಕೇಂದ್ರ- ರಾಜ್ಯ ಸಂಬಂಧ ಕುರಿತು ರಾಷ್ಟ್ರೀಯ ವಿಚಾರಸಂಕಿರಣವೊಂದರಲ್ಲಿ ಹೆಗಡೆ ಮಾತಿಗೆ ನಿಂತರು. ರಾಜ್ಯಪಾಲರುಗಳು ಕೇಂದ್ರ ಸರಕಾರದ ವೈಭವೀಕರಿಸಿದ ಸರ್ವೆಂಟ್‌ (ಆಳು, ನೌಕರ) ಗಳಾಗಿದ್ದಾರೆ ಅಂದರು. ರಾಜ್ಯಪಾಲರುಗಳು ಹೆಗಡೆ ಹೇಳಿಕೆಗೆ ಕೆರಳಿದ್ದರು. ಆದರೆ, ಹೆಗಡೆ ಕೇರ್‌ ಮಾಡಲಿಲ್ಲ. ಯಾವುದೇ ರಾಜ್ಯಪಾಲರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾತಾಡಿಲ್ಲ ಅಂದರು. ಆಗ ರಾಜ್ಯದ ಕಾಂಗ್ರೆಸ್‌ (ಐ) ನಾಯಕರು, ಹೆಗಡೆ ಅವರ ತೆವಲಿಗಾಗಿ ಈ ವಿಚಾರಸಂಕಿರಣ ಎಂದು ಕಟುವಾಗಿ ಟೀಕಿಸಿದ್ದರು.

ಭಾರತದ ರಾಜಕಾರಣದಲ್ಲಿ ದಶಕಗಳ ಕಾಲ ನಿರಂತರವಾಗಿ ಕೇಂದ್ರ -ರಾಜ್ಯ ಸರಕಾರಗಳ ನಡುವಿನ ಸಂಬಂಧ, ರಾಜ್ಯಪಾಲರ ಪಾತ್ರ ಕುರಿತು ವಿಚಾರಗಳನ್ನು ಎತ್ತಿದವರು ಅನೇಕ ಮುತ್ಸದ್ಧಿ ನಾಯಕರು. ಅಂಥವರಲ್ಲಿ ಹೆಗಡೆ ಪ್ರಮುಖರು. ಕೇಂದ್ರ- ರಾಜ್ಯ ಸಂಬಂಧದಲ್ಲಿ ಬದಲಾವಣೆ ತರಬೇಕೆಂಬ ಹೆಗಡೆ ಅವರ ಒತ್ತಾಯದಿಂದಲೇ ಅಂದಿನ ಇಂದಿರಾ ಗಾಂಧಿ ಅವರ ಸರಕಾರ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ಆಯೋಗವನ್ನು ರಚಿಸಿದ್ದು. ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ನಂತರವೂ ಈ ಕುರಿತು ಮಾತಾಡುತ್ತಲೇ ಹೋದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಇರುವ ಅಧಿಕಾರದ ಹಕ್ಕನ್ನು ಮಂಡಿಸಿದರು. ಪರಸ್ಪರ ಸಹಕಾರ ಸಂಯುಕ್ತ ಒಕ್ಕೂಟ ವ್ಯವಸ್ಥೆಯನ್ನು (ಕೋ-ಆಪರೇಟಿವ್ ಫೆಡರಲಿಸಂ) ಪ್ರತಿಪಾದಿಸಿದರು.

ಮುತ್ಸದ್ದಿ ನಾಯಕರು, ಸಂವಿಧಾನ ತಜ್ಞರು ಅನೇಕ ವರ್ಷಗಳಿಂದ ಚರ್ಚಿಸುತ್ತಿರುವ ಈ ವಿಷಯ ಕೆಲವು ವರ್ಷಗಳಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಕೆಲವು ರಾಜ್ಯಪಾಲರ ನಡೆ, ನುಡಿ. ಕೇಂದ್ರ ಸರಕಾರದ ಧೋರಣೆ. ಎನ್‌ಡಿಎಯೇತರ ಸರಕಾರಗಳಿರುವ ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದ ರಾಜ್ಯಪಾಲರ ವರ್ತನೆಗಳು. ರಾಜ್ಯಪಾಲರ ಹುದ್ದೆಯಂತೂ ಲಾಗಾಯ್ತಿನಿಂದಲೂ ವಿವಾದದಲ್ಲೇ. ಈ ಹುದ್ದೆ ಏಕೆ ಬೇಕು ಎಂಬ ಪ್ರಶ್ನೆ. ಅಷ್ಟರಮಟ್ಟಿಗೆ ವಿವಾದದ ತೀವ್ರತೆ. ನ್ಯಾಯಾಂಗವೇ ಈ ಸಂಘರ್ಷಕ್ಕೆ ಪರಿಹಾರ ಸೂಚಿಸಬೇಕಾದ ಪರಿಸ್ಥಿತಿ ನಿರ್ಮಾಣ. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಎನ್‌.ಸಂತೋಷ ಹೆಗಡೆ ಹಾಗೂ ಸುದರ್ಶನ ರೆಡ್ಡಿ ಅವರು ಸುಪ್ರೀಂಕೋರ್ಟ್ ಮಧ್ಯೆಪ್ರವೇಶಿಸಿ ಸಾಂವಿಧಾನಿಕ ಬಿಕ್ಕಟ್ಟು ಬಗೆಹರಿಸಬೇಕಿದೆ ಎನ್ನುತ್ತಾರೆ.

ತಮಿಳುನಾಡಿನ ರಾಜ್ಯಪಾಲ ಆರ್‌.ಎನ್.ರವಿ ಅಲ್ಲಿನ ಡಿಎಂಕೆ ಸರಕಾರ ಸಿದ್ದಪಡಿಸಿದ ಲಿಖಿತ ಭಾಷಣವನ್ನು ಪ್ರತಿ ವರ್ಷದ ಮೊದಲ ಅಧಿವೇಶನದಲ್ಲಿ ಓದುತ್ತಲೇ ಇಲ್ಲ. ಕಳೆದ ನಾಲ್ಕು ವರ್ಷಗಳಿಂದ ಇದೇ ಕಥೆ. ಡಿಎಂಕೆ ನೇತೃತ್ವದ ಸರಕಾರ ಸಿದ್ದಪಡಿಸಿರುವ ಭಾಷಣದಲ್ಲಿ ಹಲವು ದೋಷಗಳಿವೆ ಎಂಬುದು ರಾಜ್ಯಪಾಲರ ಆರೋಪ. ಸದನದಿಂದ ನಿರ್ಗಮನ. ರಾಜ್ಯಪಾಲರ ನಡೆ ಖಂಡಿಸಿ ಸದನ ನಿರ್ಣಯ. ಇದರಿಂದ ಪರಿಸ್ಥಿತಿ ಮತ್ತಷ್ಟು ಜಟಿಲ. ಈ ವಿವಾದಕ್ಕೆ ಅಂತ್ಯ ಹಾಡುವುದು ಬೇಡವೇ?

ಕೇರಳದ ರಾಜ್ಯಪಾಲ ರಾಜೇಂದ್ರ ಅರ್ಲೆಕರ್‌ ರಾಜ್ಯ ಸರಕಾರ ಸಿದ್ದಪಡಿಸಿದ ಲಿಖಿತ ಭಾಷಣವನ್ನು ಈ ಬಾರಿ ಓದುವಾಗ ಕೇಂದ್ರ ಸರಕಾರದ ವಿರುದ್ಧದ ಕೆಲವು ಭಾಗಗಳನ್ನು ಕೈಬಿಟ್ಟರು. ಕೇರಳ ವಿಧಾನಸಭೆ ಅಂಗೀಕರಿಸಿರುವ 14 ಮಸೂದೆಗಳಿಗೆ ಅಲ್ಲಿನ ರಾಜ್ಯಪಾಲರು ಸಹಿಯನ್ನೇ ಮಾಡಿಲ್ಲ. ಇದನ್ನು ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದು ಕೇರಳದ ಪರಿಸ್ಥಿತಿ. ಎನ್‌ಡಿಎಯೇತರ ರಾಜ್ಯಗಳಲ್ಲಿ ಚುನಾಯಿತ ಸರಕಾರದ ಕಾರ್ಯನಿರ್ವಹಣೆಗೆ ರಾಜ್ಯಪಾಲರು ಅಡ್ಡಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕಕಾರಿ. ಸಂಘರ್ಷವೂ ತೀವ್ರ.

ರಾಜ್ಯದ ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್‌ ಸರಕಾರ ಸಿದ್ದಪಡಿಸಿದ ಲಿಖಿತ ಭಾಷಣವನ್ನು ಈ ಬಾರಿ ಅಧಿವೇಶನದಲ್ಲಿ ಓದಲಿಲ್ಲ. ಆಳುವ ಪಕ್ಷದಿಂದ ಇದಕ್ಕಾಗಿ ಕಟುಟೀಕೆ. ಸಂವಿಧಾನಬದ್ಧವಾಗಿ ನಡೆದುಕೊಂಡಿಲ್ಲ ಎಂಬ ಆಕ್ಷೇಪ. ಭಾರತ ಸಂವಿಧಾನದ ವಿಧಿ 353 ಹಾಗೂ 364 ಅನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ ಎಂಬ ಆರೋಪ. ಪ್ರತಿ ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾತಾಡುತ್ತಾರೆ. ರಾಜ್ಯ ಸರಕಾರವೇ ಸಿದ್ದಪಡಿಸಿದ ಲಿಖಿತ ಭಾಷಣವನ್ನು ರಾಜ್ಯಪಾಲರು ಓದಬೇಕಾಗುತ್ತದೆ. ಇದು ಸಂವಿಧಾನದ 176 ಮತ್ತು 163ನೇ ವಿಧಿಯಲ್ಲಿ ಸ್ಪಷ್ಟ.

ಆದರೆ, ಸಂಸತ್ತಿನಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಗಳು ಸಹಿ ಮಾಡಿರುವ ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿರುವ ರಾಜ್ಯಪಾಲರು ವಿರೋಧಿಸಿ ಮಾತಾಡುವುದಾದರೂ ಹೇಗೆ? ರಾಜ್ಯಪಾಲರಿಂದ ಕೇಂದ್ರ ಸರಕಾರದ ವಿರುದ್ಧ ಭಾಷಣ ಮಾಡಿಸುವ ಹಠ ರಾಜ್ಯ ಸರಕಾರಕ್ಕೆ ಏಕೆ? ಶಾಸನ ಸಭೆಗಳನ್ನು ರಾಜಕೀಯ ವೇದಿಕೆ ಮಾಡಿಕೊಳ್ಳುವುದು ಸರಿಯೇ? ಈ ಪ್ರಶ್ನೆಗಳು ಕೂಡ ಈಗ ಚರ್ಚೆಗೆ ವಸ್ತು.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗ ಒಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ. ಸಂವಿಧಾನದ ಇಂತಹ ಶಿಷ್ಟಾಚಾರವನ್ನು ರಾಜ್ಯಪಾಲರು ಪಾಲಿಸದಿದ್ದರೆ ಇಂತಹ ನಿಯಮ ಹಾಗೂ ಶಿಷ್ಟಾಚಾರ ಏಕಿರಬೇಕು ಎಂಬುದು ಅವರ ಪ್ರಶ್ನೆ. ಇದು ಸಹಜ ಕೂಡ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂಬ ಕೂಗು.

ಒಂದು ಕಡೆ ಬಹುಮತ ಪಡೆದ ರಾಜ್ಯ ಸರಕಾರಗಳು. ಮತ್ತೊಂದೆಡೆ ಅಂತಹ ಸರಕಾರಕ್ಕೆ ರಾಜ್ಯಪಾಲರ ಅಸಹಕಾರ. ಇಂತಹ ಗೊಂದಲ ಜನತಂತ್ರಕ್ಕೆ ಮಾರಕ. ಒಕ್ಕೂಟ ವ್ಯವಸ್ಥೆಯಲ್ಲಿನ ನಂಬಿಕೆಗೆ ಕುತ್ತು. ರಾಜ್ಯಪಾಲ ಎಂಬ ಸಾಂವಿಧಾನಿಕ ಹುದ್ದೆಯ ಘನತೆಗೂ ಕುಂದು. ಇಂತಹ ಪರಿಸ್ಥಿತಿಗೆ ಕೇಂದ್ರದಲ್ಲಿ ಕಾಲಕಾಲಕ್ಕೆ ಆಡಳಿತ ನಡೆಸಿದ ಎಲ್ಲ ಪಕ್ಷಗಳೂ ಹೊಣೆ. ಎಲ್ಲರೂ ಕಟಕಟೆಯಲ್ಲೇ ನಿಂತವರೇ. ಇದು ಪಕ್ಷಾತೀತ. ಪರಿಪಾಠ ಆರಂಭಿಸಿದ್ದು ಮಾತ್ರ ಕಾಂಗ್ರೆಸ್.

ಕೇಂದ್ರ ಹಾಗೂ ರಾಜ್ಯ ಸರಕಾರದ ಸಂಬಂಧದ ಸುಧಾರಣೆಯಲ್ಲಿ ರಾಜ್ಯಪಾಲರ ಪಾತ್ರ ಕುರಿತು ಅಧ್ಯಯನ ನಡೆಸಿ ನೀತಿನಿಯಮಗಳನ್ನು ರೂಪಿಸುವ ಪ್ರಯತ್ನಗಳು ನಡೆದಿಲ್ಲ ಎಂದೇನಿಲ್ಲ. ದೇಶದಲ್ಲಿ 1970ರಲ್ಲಿ ಅಂದಿನ ರಾಷ್ಟ್ರಪತಿಗಳು ರಾಜ್ಯಪಾಲರ ಸಮಿತಿಯನ್ನು ರಚಿಸಿದರು. ಸಂವಿಧಾನದಡಿಯಲ್ಲಿ ರಾಜ್ಯಪಾಲರ ಪಾತ್ರ ಕುರಿತು ಅಧ್ಯಯನ ಹಾಗೂ ನೀತಿನಿಯಮಗಳನ್ನು ರೂಪಿಸುವುದಕ್ಕಾಗಿ ಈ ಸಮಿತಿ ನೇಮಕವಾಯಿತು. ಈ ಸಮಿತಿ 1971ರಲ್ಲಿ ವರದಿ ಸಲ್ಲಿಸಿತು. ರಾಜ್ಯಪಾಲರು ಕೇಂದ್ರ ಸರಕಾರದ ಅಡಿಯಾಳು ಅಥವಾ ಏಜೆಂಟ್‌ ಅಲ್ಲ ಎಂದಿತು. ಆದರೆ, ಮರು ವಾಕ್ಯದಲ್ಲೇ, ಆದರೂ, ಸಂವಿಧಾನದ ಅಗತ್ಯ ನಿರ್ದಿಷ್ಟ ಕಾರ್ಯಗಳ ನಿರ್ವಹಣೆಯಲ್ಲಿ ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟರಾಗಿಯೇ ಕೆಲಸ ಮಾಡಬೇಕು. ರಾಷ್ಟ್ರಪತಿಗಳಿಗೆ ಉತ್ತರದಾಯಿತ್ವ ಆಗಿರಬೇಕು ಎಂದಿತು. ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಿಸುತ್ತಾರೆ. ಹೀಗಿರುವಾಗ, ರಾಷ್ಟ್ರಪತಿಗಳಿಂದ ನೇಮಕವಾಗುವವರು ಕೇಂದ್ರ ಸರಕಾರಕ್ಕೆ ಅಧೀನರಾಗಿ ನಡೆದುಕೊಳ್ಳಬೇಕೇ? ಸ್ಪಷ್ಟತೆ ಬೇಕಿದೆ.

ಇನ್ನು ರಾಜ್ಯಪಾಲರನ್ನು ನೇಮಿಸುವಾಗ ಕೇಂದ್ರ ಸರಕಾರವು ಆಯಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಬೇಕು ಎಂಬ ಶಿಷ್ಟಾಚಾರವಿತ್ತು. ಇದು ಬಹುತೇಕ 1970ರ ವರೆಗೂ ಜಾರಿಯಲ್ಲಿತ್ತು. ನಂತರ ಈ ಸಂಪ್ರದಾಯಕ್ಕೆ ಬಿಟ್ಟಿದ್ದು ಮಾತ್ರ ಎಳ್ಳುನೀರು.

Governor speech
ಮುಂಬೈನಲ್ಲಿ ಶಿವಸೇನಾ ಆಳ್ವಿಕೆ ಅಂತ್ಯಗೊಳಿಸಿದ ಬಿಜೆಪಿ (ನೇರ ನೋಟ)

ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಸಂಘರ್ಷದ ಇತಿಹಾಸ ಸುದೀರ್ಘವಾದದ್ದು. ಇಂತಹ ಸಂಘರ್ಷದ ಸಂದರ್ಭದಲ್ಲೇ ಕೇಂದ್ರ- ರಾಜ್ಯ ಸರಕಾರಗಳ ನಡುವಿನ ಬಾಂಧವ್ಯ ಸುಧಾರಣೆಯ ವಿಚಾರದಲ್ಲಿ ಪ್ರಮುಖ ಹೆಜ್ಜೆ ನ್ಯಾಯಮೂರ್ತಿ ಆರ್.ಎಸ್.ಸರ್ಕಾರಿಯಾ ಆಯೋಗ ರಚನೆ ಹಾಗೂ ಅದು ನೀಡಿದ ಶಿಫಾರಸುಗಳು. ಅದು 1983ನೇ ಇಸವಿ. ನ್ಯಾ.ಸರ್ಕಾರಿಯಾ ಆಯೋಗದ ರಚನೆ. ಆಯೋಗ ಅನೇಕ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು 1988ರಲ್ಲಿ ಸಲ್ಲಿಸಿತು. ಆಗ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್‌ ಗಾಂಧಿ ಅವರು ಪ್ರಧಾನಮಂತ್ರಿ. ಈಗ 40 ವರ್ಷಗಳಾಗುತ್ತಾ ಬಂದರೂ ಆಯೋಗದ ವರದಿ ಜಾರಿಯಾಗಿಲ್ಲ.

ನ್ಯಾ.ಸರ್ಕಾರಿಯಾ ಆಯೋಗದ ಕೆಲವು ಪ್ರಮುಖ ಶಿಫಾರಸುಗಳು- ಯಾವುದೇ ರಾಜ್ಯಕ್ಕೆ ರಾಜ್ಯಪಾಲರನ್ನು ನೇಮಿಸುವಾಗ ಆಯಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಬೇಕು. ರಾಜ್ಯಪಾಲರ ಸೇವಾವಧಿ ಐದು ವರ್ಷಗಳಿರಬೇಕು. ರಾಜ್ಯಪಾಲರಾಗಿ ನೇಮಕವಾಗುವವರು ಅವರ ಕ್ಷೇತ್ರದಲ್ಲಿ ಸಾಧಕರಾಗಿರಬೇಕು. ರಾಜ್ಯಪಾಲರು ತಾವು ನೇಮಕವಾಗುವ ರಾಜ್ಯದವರಾಗಿರಬಾರದು. ರಾಜ್ಯಪಾಲರು ಸ್ಥಳೀಯ ರಾಜಕಾರಣದಿಂದ ದೂರವಿರಬೇಕು. ಇತ್ತೀಚಿನ ವರ್ಷಗಳಲ್ಲಿ ರಾಜಕಾರಣದಲ್ಲಿ ತುಂಬಾ ಸಕ್ರಿಯರಾಗಿರಬಾರದು. ಕೇಂದ್ರದ ಆಡಳಿತಾರೂಢ ಪಕ್ಷದ ರಾಜಕಾರಣಿಯನ್ನು ಎದುರಾಳಿ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರದಲ್ಲಿರುವ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸಬಾರದು. ರಾಜ್ಯಪಾಲರ ಹುದ್ದೆ ವಿವಾದಗಳಿಂದ ಮುಕ್ತವಾಗಿರಬೇಕು.

ಈ ವರದಿ ಬಂದ 15 ದಿನಗಳಲ್ಲೇ ಈ ವರದಿಗೆ ಕಿಮ್ಮತ್ತು ಕೊಡದೇ ಕೆಲವು ರಾಜ್ಯಗಳಿಗೆ ರಾಜ್ಯಪಾಲರ ನೇಮಕವಾದವು. ಅಲ್ಲಿಗೆ ಆಯೋಗದ ಶಿಫಾರಸುಗಳಿಗೆ ಸಿಕ್ಕ ಬೆಲೆ ಅರ್ಥವಾಗಿತ್ತು. ರಾಜ್ಯಪಾಲರ ಹುದ್ದೆ ಮಾತ್ರ ವಿವಾದದಲ್ಲೇ ಮುಂದುವರಿಯಿತು.

ರಾಜ್ಯಪಾಲ ಎಂಬುದು ಸಾಂವಿಧಾನಿಕ ಹುದ್ದೆ. ಕೇಂದ್ರ ಸರಕಾರದ ಪ್ರತಿನಿಧಿ. ರಾಷ್ಟ್ರಪತಿಗಳ ಪ್ರತಿನಿಧಿ. ರಾಜ್ಯಗಳಲ್ಲಿ ಸಂವಿಧಾನದ ಮುಖ್ಯಸ್ಥರು. ಕೇಂದ್ರದಲ್ಲಿ ಆಡಳಿತ ನಡೆಸಿದ ಪಕ್ಷಗಳು, ನಡೆಸುತ್ತಿರುವ ಪಕ್ಷಗಳು ರಾಜ್ಯಪಾಲರನ್ನು ತನ್ನ ಕೈಗೊಂಬೆಯಾಗಿ ನಡೆಸಿಕೊಂಡು ಬಂದಿರುವುದು ಗೊತ್ತಿರುವ ಸಂಗತಿಯೇ. ಕೇಂದ್ರದಲ್ಲಿ ಒಂದು ಪಕ್ಷದ ಆಡಳಿತ ಕೊನೆಗೊಂಡು ಮತ್ತೊಂದು ಪಕ್ಷ ಅಧಿಕಾರಕ್ಕೆ ಏರಿದಾಗ ರಾಜ್ಯಪಾಲರನ್ನು ವಜಾಗೊಳಿಸಿದ, ರಾಜೀನಾಮೆ ಪಡೆದ ಉದಾಹರಣೆಗಳು ಸಾಕಷ್ಟಿವೆ.

ಪಕ್ಷಾತೀತವಾಗಿರಬೇಕಾದ ರಾಜ್ಯಪಾಲ ಹುದ್ದೆಗೆ ನೇಮಕ ಪಕ್ಷ ಆಧರಿತವಾದದ್ದು. ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ರಾಜ್ಯಪಾಲ ಪಕ್ಷವನ್ನು ಮೀರಬೇಕು. ಸಾಂವಿಧಾನಿಕ ಕರ್ತವ್ಯಗಳನ್ನು ಪಾಲಿಸಬೇಕು. ಕೇಂದ್ರ ಸರಕಾರವೂ ರಾಜ್ಯಪಾಲರ ಕರ್ತವ್ಯ ನಿರ್ವಹಣೆಗೆ ಮುಕ್ತ ಅವಕಾಶ ನೀಡಬೇಕು.

ಇದು ಸಾಧ್ಯವೇ?

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com