

ಕಾಕ್ಸಿಡೈನಿಯಾ ಅಂದರೆ ಬಾಲದ ಮೂಳೆ ನೋವು (ಟೈಲ್ ಬೋನ್ ಪೇನ್) ಬೆನ್ನುಹುರಿಯ ಕೆಳಭಾಗದಲ್ಲಿರುವ ಸಣ್ಣ ಮೂಳೆ ಭಾಗವಾದ ಕಾಕ್ಸಿಕ್ಸ್ ಅಥವಾ ಬಾಲದ ಮೂಳೆಯಲ್ಲಿ ಉಂಟಾಗುವ ನೋವು. ಸಾಮಾನ್ಯವಾಗಿ ಕುಳಿತಾಗ, ಕುಳಿತ ಸ್ಥಾನದಿಂದ ಎದ್ದಾಗ ಅಥವಾ ಬಹಳ ಹೊತ್ತು ಒಂದೇ ಭಂಗಿಯಲ್ಲಿ ಇದ್ದಾಗ ಈ ನೋವು ಹೆಚ್ಚು ಅನುಭವಕ್ಕೆ ಬರುತ್ತದೆ.
ಕಾಕ್ಸಿಕ್ಸ್ ಬೆನ್ನುಹುರಿಯ ಕೊನೆಯ ಭಾಗದಲ್ಲಿರುವ ಸಣ್ಣ ಮೂಳೆಗಳ ಸಮೂಹವಾಗಿದ್ದು, ದೇಹದ ಕೆಲವು ಸ್ನಾಯುಗಳು ಮತ್ತು ಬಂಧಕ ಅಂಗಾಂಶಗಳಿಗೆ ಆಧಾರವಾಗಿರುತ್ತದೆ. ಈ ಭಾಗದಲ್ಲಿ ಉಂಟಾಗುವ ಉರಿಯೂತ, ಗಾಯ ಅಥವಾ ಒತ್ತಡದಿಂದ ಕಾಕ್ಸಿಡೈನಿಯಾ ಉಂಟಾಗಬಹುದು.
ಈ ಸಮಸ್ಯೆಯ ಅತಿ ಸಾಮಾನ್ಯ ಮತ್ತು ಮುಖ್ಯ ಲಕ್ಷಣವೆಂದರೆ ಬೆನ್ನಿನ ಕೆಳಭಾಗದ ಮಧ್ಯದಲ್ಲಿ ಕಾಣಿಸಿಕೊಳ್ಳುವ ನೋವು. ಕೆಲವರಿಗೆ ಇದು ಒಂದು ಸಣ್ಣ ಸಮಸ್ಯೆಯಂತೆ ಇದ್ದರೆ ಇನ್ನು ಕೆಲವರಿಗೆ ತೀವ್ರವಾದ ನೋವಾಗಿ ಕಂಡುಬರಬಹುದು. ಗಟ್ಟಿಯಾದ ಕುರ್ಚಿಯಲ್ಲಿ ಕುಳಿತಾಗ ಈ ನೋವು ಹೆಚ್ಚಾಗಬಹುದು. ಕುಳಿತ ಸ್ಥಾನದಿಂದ ಎದ್ದಾಗ ಏನೋ ಚುಚ್ಚಿದಂತೆ ಅನುಭವವಾಗಬಹುದು. ಕೆಲವೊಮ್ಮೆ ಮುಂದೆ ಬಾಗಿದಾಗ ಅಥವಾ ಹಿಂದಕ್ಕೆ ಒರಗಿದಾಗಲೂ ನೋವು ಕಂಡುಬರುತ್ತದೆ. ಕೆಲವು ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ಅಥವಾ ಹೆರಿಗೆ ನಂತರ ಈ ಭಾಗದಲ್ಲಿ ನೋವು ಹೆಚ್ಚಾಗಬಹುದು. ಕೆಲವರಲ್ಲಿ ಈ ನೋವು ಸೊಂಟ, ತೊಡೆ ಅಥವಾ ಸುತ್ತಮುತ್ತಲಿನ ಭಾಗಗಳಿಗೆ ಹರಡಬಹುದು.
ಕಾಕ್ಸಿಡೈನಿಯಾ ಉಂಟಾಗಲು ಒಂದಲ್ಲ, ಹಲವಾರು ಕಾರಣಗಳಿವೆ. ನೇರವಾಗಿ ಕುಳಿತ ಸ್ಥಿತಿಯಲ್ಲಿ ಬಿದ್ದು ಬಾಲದ ಮೂಳೆಗೆ ಪೆಟ್ಟು ಬಿದ್ದರೆ ಈ ಸಮಸ್ಯೆ ಉಂಟಾಗಬಹುದು. ಸೈಕಲ್ ಅಥವಾ ಬೈಕ್‌ನಲ್ಲಿ ದೀರ್ಘಕಾಲ ಪ್ರಯಾಣಿಸುವುದರಿಂದಲೂ ಈ ಭಾಗದ ಮೇಲೆ ನಿರಂತರ ಒತ್ತಡ ಉಂಟಾಗಿ ನೋವು ಕಾಣಿಸಿಕೊಳ್ಳಬಹುದು. ಹೆಚ್ಚು ಸಮಯ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರಲ್ಲಿಯೂ ಇದು ಕಂಡುಬರುತ್ತದೆ.
ಅತಿಯಾದ ದೇಹದ ತೂಕ ಅಥವಾ ತುಂಬಾ ಕಡಿಮೆ ದೇಹದ ತೂಕ ಎರಡೂ ಈ ಸಮಸ್ಯೆಗೆ ಕಾರಣವಾಗಬಹುದು. ಹೆರಿಗೆಯ ಸಮಯದಲ್ಲಿ ಬಾಲದ ಮೂಳೆಯ ಮೇಲೆ ಹೆಚ್ಚಿನ ಒತ್ತಡ ಬರುವುದರಿಂದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕೆಲವೊಮ್ಮೆ ವಯಸ್ಸಾಗುವುದರಿಂದ ಮೂಳೆ ಮತ್ತು ಕೀಲುಗಳಲ್ಲಿ ಆಗುವ ಬದಲಾವಣೆಗಳು, ಸಂಧಿವಾತ ಅಥವಾ ಅಪರೂಪವಾಗಿ ಸೋಂಕು ಮತ್ತು ಗಡ್ಡೆಗಳು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು.
ವೈದ್ಯರು ಸಾಮಾನ್ಯವಾಗಿ ರೋಗಿಯ ಲಕ್ಷಣಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ಈ ಸಮಸ್ಯೆಯನ್ನು ಗುರುತಿಸುತ್ತಾರೆ. ಅಗತ್ಯ ಇದ್ದರೆ ಎಕ್ಸ್-ರೇ, ಸಿಟಿ ಸ್ಕ್ಯಾನ್ ಅಥವಾ ಎಂಆರ್‌ಐ ಪರೀಕ್ಷೆಗಳನ್ನು ಸೂಚಿಸಬಹುದು. ಇವುಗಳಿಂದ ಮೂಳೆ ಮುರಿತ, ಜಾರಿಕೆ ಅಥವಾ ಇತರ ಅಸಾಮಾನ್ಯತೆಗಳಿವೆಯೇ ಎಂಬುದನ್ನು ತಿಳಿಯಬಹುದು.
ಈ ಸಮಸ್ಯೆ ಬಂದರೆ ಹೆಚ್ಚಿನ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. ವಿಶ್ರಾಂತಿ, ನೋವು ನಿವಾರಕ ಔಷಧಿಗಳು/ಮಾತ್ರೆಗಳು ಹಾಗೂ ಉರಿಯೂತ ಕಡಿಮೆ ಮಾಡುವ ಔಷಧಿಗಳಿಂದ ನೋವನ್ನು ನಿಯಂತ್ರಿಸಬಹುದು. ಮೃದುವಾದ ಕುಷನ್ ಅಥವಾ ಡೋನಟ್ ಆಕಾರದ ಕುಳಿತುಕೊಳ್ಳುವ ದಿಂಬನ್ನು ಬಳಸುವುದರಿಂದ ಬಾಲದ ಮೂಳೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಫಿಸಿಯೋಥೆರಪಿ, ಹಿತಕರವಾದ ವ್ಯಾಯಾಮಗಳು ಮತ್ತು ಸ್ನಾಯುಗಳ ಬಲವರ್ಧನೆ ಸಹ ಸಹಾಯಕವಾಗಬಹುದು. ಕೆಲವು ಸಂದರ್ಭಗಳಲ್ಲಿ ವೈದ್ಯರು ಇಂಜೆಕ್ಷನ್ ನೀಡಬಹುದು. ಬಹಳ ಅಪರೂಪ ಹಾಗೂ ತೀವ್ರವಾದ ಪ್ರಕರಣಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಪರಿಗಣಿಸಲಾಗುತ್ತದೆ.
ಈ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದು. ಮೊದಲನೆಯದಾಗಿ ಬಹಳ ಹೊತ್ತು ಅಂದರೆ ಹಲವಾರು ಗಂಟೆಗಳ ಕಾಲ (ಉದಾಹರಣೆಗೆ ಆಫೀಸಿನಲ್ಲಿ ಕೆಲಸ ಮಾಡುವಾಗ) ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ಬಿಡಬೇಕು. ಮಧ್ಯೆ ಮಧ್ಯೆ ಎದ್ದು ನಡೆಯುವುದು ಒಳ್ಳೆಯದು.
ಯಾವಾಗಲೂ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು ಮತ್ತು ಬೆನ್ನಿಗೆ ಬೆಂಬಲ ನೀಡುವ ಕುರ್ಚಿಯನ್ನು ಬಳಸಬೇಕು. ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಯ್ದುಕೊಳ್ಳಬೇಕು. ಇದು ಬಹಳ ಮುಖ್ಯ. ನಿರಂತರ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಿಂದ ಬೆನ್ನು ಹಾಗೂ ಸೊಂಟದ ಸ್ನಾಯುಗಳನ್ನು ಬಲಪಡಿಸಬೇಕು.
ಬೈಕ್ ಅಥವಾ ಸೈಕಲ್‌ನಲ್ಲಿ ದೀರ್ಘಕಾಲ ಪ್ರಯಾಣಿಸುವವರು ಸೂಕ್ತ ಕುಷನ್ ಇರುವ ಆಸನವನ್ನು ಬಳಸುವುದು ಉತ್ತಮ. ಜಾರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ನಡೆಯುವುದು ಹಾಗೂ ಬಿದ್ದು ಗಾಯವಾಗುವುದನ್ನು ತಪ್ಪಿಸುವುದು ಸಹ ಮುಖ್ಯ.
ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಕಾಕ್ಸಿಡೈನಿಯಾ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆ ಅಥವಾ ಸಮಸ್ಯೆ ಅಲ್ಲ. ಆದರೆ ಈ ಸಮಸ್ಯೆ ದೈನಂದಿನ ಜೀವನದ ಗುಣಮಟ್ಟವನ್ನು ಸಾಕಷ್ಟು ಕಡಿಮೆ ಮಾಡಬಹುದು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು, ಸರಿಯಾದ ವಿಶ್ರಾಂತಿ, ವ್ಯಾಯಾಮ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಹೆಚ್ಚಿನ ಜನರಲ್ಲಿ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
Advertisement