

ಕಳೆದ ಒಂದುವಾರ ಕಾಂಬೋಡಿಯಾ ದೇಶವನ್ನು ನೋಡುವ ಸೌಭಾಗ್ಯ ಸಿಕ್ಕಿತ್ತು. ಅಲ್ಲಿಗೆ ಹೋಗುವ ಮುನ್ನವೇ ಅಲ್ಲಿನ ಸ್ಥಳೀಯ ಹಣ ಕಾಂಬೋಡಿಯನ್ ರಿಯೆಲ್ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವುದು ತಿಳಿದಿತ್ತು. ಆದರೆ ಅದರ ತೀವ್ರತೆಯನ್ನು ಕಾಣುವ, ಅನುಭವಿಸುವ ಅವಕಾಶ ನನ್ನದಾಗಿತ್ತು. ಕಾಂಬೋಡಿಯಲ್ಲಿ ನೀವು ರಸ್ತೆ ಬದಿಯಲ್ಲಿ ಎಳನೀರು ನೀರು ಕುಡಿದು ಡಾಲರಿನಲ್ಲಿ ಪಾವತಿಸಬಹುದು. ಅವರ್ರು ಚಿಲ್ಲರೆಯನ್ನು ಸಹ ಡಾಲರಿನಲ್ಲಿ ಕೊಡುತ್ತಾರೆ. ದೇಶದ ಉದ್ದಗಲಕ್ಕೂ ಎಲ್ಲೆಡೆ ಡಾಲರಿನದೇ ಸಾಮ್ರಾಜ್ಯ.
ಪ್ರತಿಯೊಬ್ಬ ಪ್ರಜೆಯೂ ಇಲ್ಲಿ ಡಾಲರನ್ನು ಹೊಂದಿದ್ದಾರೆ. ಡಾಲರಿನ ಮೂಲಕ ವಹಿವಾಟು ಮಾಡುತ್ತಾರೆ. ಇದರರ್ಥ ಇಲ್ಲಿನ ಸರಕಾರವೇ ಇದಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡಿದೆ ಎಂದಾಗುತ್ತದೆ. ಭಾರತದಲ್ಲಿ ನಾವು ಈ ರೀತಿ ಡಾಲರ್ ಅಥವಾ ಯುರೋ ಅಥವಾ ಮತ್ತ್ಯಾವುದೇ ಹಣವನ್ನು ದಿನನಿತ್ಯದ ವಹಿವಾಟಿನಲ್ಲಿ ಬಳಸುವಂತಿಲ್ಲ. ಎರಡು ಸಾವಿರ ಡಾಲರಿಗಿಂತ ಹೆಚ್ಚಿನ ಹಣವನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಆ ರೀತಿ ಇಟ್ಟುಕೊಳ್ಳಲು ವಿಶೇಷ ಅನುಮತಿ ಬೇಕಾಗುತ್ತದೆ.
ಹೊರದೇಶದಿಂದ ಬರುವಾಗ ಕೂಡ ಐದು ಸಾವಿರ ಡಾಲರಿಗಿಂತ ಹೆಚ್ಚಿನ ಹಣವನ್ನು ಒಳಕ್ಕೆ ತರುವಂತಿಲ್ಲ. ಇದಕ್ಕಿಂತ ಹೆಚ್ಚಿನ ಹಣವನ್ನು ತರಲು ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಸರಕಾರದಿಂದ , ಆರ್ಬಿಐ ನಿಂದ ಅನುಮತಿ ಪಡೆದ ವಿದೇಶಿ ವಿನಿಮಯ ಸಂಸ್ಥೆಗಳು ಮಾತ್ರ ಹಣವನ್ನು ಬದಲಿಸಲು ಭಾರತದಲ್ಲಿ ಸಾಧ್ಯ. ಜನ ಸಾಮಾನ್ಯರು ಈ ಕೆಲಸವನ್ನು ಮಾಡುವಂತಿಲ್ಲ. ಇದು ಕಾನೂನು ಬಾಹಿರ. ಆದರೆ ಕಾಂಬೋಡಿಯಾದಲ್ಲಿ ಪ್ರತಿ ಪ್ರಜೆಯೂ ವಿನಿಮಯ ಕೇಂದ್ರ !
ಒಂದು ದೇಶದ ಕರೆನ್ಸಿ ಅದರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು. ಹೇಗೆ ಒಂದು ದೇಶಕ್ಕೆ ತನ್ನದೇ ಆದ ಧ್ವಜ, ಸಂವಿಧಾನ ಮತ್ತು ಸರ್ಕಾರವಿರುತ್ತದೆಯೋ, ಅದೇ ರೀತಿ ತನ್ನದೇ ಆದ ಕರೆನ್ಸಿಯೂ ದೇಶದ ಸ್ವಾಯತ್ತತೆಯ ಪ್ರಮುಖ ಸಂಕೇತವಾಗಿದೆ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಕರೆನ್ಸಿಯನ್ನು ಬಳಸುತ್ತವೆ. ಆದರೆ ಕೆಲವು ದೇಶಗಳು ವಿವಿಧ ಕಾರಣಗಳಿಂದ ತಮ್ಮ ಸ್ಥಳೀಯ ಕರೆನ್ಸಿಯನ್ನು ಬಿಟ್ಟು ಅಮೆರಿಕದ ಕರೆನ್ಸಿಯಾದ ಯುಎಸ್ ಡಾಲರ್ (USD) ಅನ್ನು ಅಧಿಕೃತವಾಗಿ ಬಳಸುತ್ತಿವೆ. ಈ ಪ್ರಕ್ರಿಯೆಯನ್ನು Dollarization ಎಂದು ಕರೆಯಲಾಗುತ್ತದೆ.
USD ಅನ್ನು ಅಧಿಕೃತ ಕರೆನ್ಸಿಯಾಗಿ ಬಳಸುವ ಕೆಲವು ಪ್ರಮುಖ ದೇಶಗಳಲ್ಲಿ ಈಕ್ವೆಡಾರ್ (Ecuador), ಎಲ್ ಸಾಲ್ವಡಾರ್ (El Salvador), ಪನಾಮಾ (Panama), ಟಿಮೋರ್-ಲೆಸ್ಟೆ (Timor-Leste), ಜಿಂಬಾಬ್ವೆ (Zimbabwe – ಬಹುಕರೆನ್ಸಿ ವ್ಯವಸ್ಥೆಯಲ್ಲಿ USD ಪ್ರಮುಖ ಪಾತ್ರ), ಬ್ರಿಟಿಷ್ ವರ್ಜಿನ್ ದ್ವೀಪಗಳು (British Virgin Islands), ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು (Turks and Caicos Islands), ಮಾರ್ಷಲ್ ದ್ವೀಪಗಳು (Marshall Islands), ಮೈಕ್ರೋನೇಷ್ಯಾ (Micronesia) ಮತ್ತು ಪಾಲೌ (Palau) ಸೇರಿವೆ.
ಈ ದೇಶಗಳಲ್ಲಿ ಹೆಚ್ಚಿನವು ಸಣ್ಣ ಆರ್ಥಿಕತೆ ಹೊಂದಿರುವ ದೇಶಗಳಾಗಿವೆ. ಕೆಲ ದೇಶಗಳು ಭೀಕರ ಹಣದುಬ್ಬರ (Hyperinflation) ಅನುಭವಿಸಿದ ಕಾರಣ ತಮ್ಮ ಕರೆನ್ಸಿಯ ಮೇಲಿನ ವಿಶ್ವಾಸ ಕಳೆದುಕೊಂಡವು. ಉದಾಹರಣೆಗೆ, ಈಕ್ವೆಡಾರ್ ಏರಡು ಸಾವಿರದ ಇಸವಿಯಲ್ಲಿ ತನ್ನ ಕರೆನ್ಸಿಯನ್ನು ಕೈಬಿಟ್ಟು USD ಅಳವಡಿಸಿಕೊಂಡಿತು. ಪನಾಮಾ ಸುಮಾರು 1904 ರಿಂದಲೇ USD ಬಳಸುತ್ತಿದೆ.
ಮೊದಲನೆಯದಾಗಿ, ಹಣದುಬ್ಬರವನ್ನು ನಿಯಂತ್ರಿಸುವುದು. ಕೆಲವು ದೇಶಗಳಲ್ಲಿ ಸರ್ಕಾರವು ಅತಿಯಾಗಿ ನೋಟು ಮುದ್ರಿಸಿದ ಪರಿಣಾಮ ಕರೆನ್ಸಿಯ ಮೌಲ್ಯ ಕುಸಿದು, ಸಾಮಾನ್ಯ ಜನರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ದೊಡ್ಡ ಪ್ರಮಾಣದ ಹಣವನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಯಿತು. ಇಂತಹ ಸಂದರ್ಭದಲ್ಲಿ USD ಬಳಸುವುದರಿಂದ ಬೆಲೆಗಳು ಸ್ಥಿರವಾದವು.
ಎರಡನೆಯದಾಗಿ, ಜನರ ವಿಶ್ವಾಸವನ್ನು ಮರಳಿ ಪಡೆಯುವುದು. ಸ್ಥಳೀಯ ಕರೆನ್ಸಿಯ ಮೇಲೆ ಜನರಿಗೆ ನಂಬಿಕೆ ಇಲ್ಲದಿದ್ದರೆ ಜನರು ವಿದೇಶಿ ಕರೆನ್ಸಿಯಲ್ಲಿ ಉಳಿತಾಯ ಮಾಡುತ್ತಾರೆ. ಸರ್ಕಾರವೇ USD ಅನ್ನು ಅಧಿಕೃತ ಕರೆನ್ಸಿಯಾಗಿ ಘೋಷಿಸಿದರೆ ಆರ್ಥಿಕ ವ್ಯವಹಾರಗಳಲ್ಲಿ ಸ್ಥಿರತೆ ಬರುತ್ತದೆ.
ಮೂರನೆಯದಾಗಿ, ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು. USD ಬಳಸುವ ದೇಶಗಳಲ್ಲಿ ಕರೆನ್ಸಿ ಅಪಾಯ ಕಡಿಮೆ ಇರುವುದರಿಂದ ವಿದೇಶಿ ಕಂಪನಿಗಳು ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತವೆ.
ನಾಲ್ಕನೆಯದಾಗಿ, ಅಂತರರಾಷ್ಟ್ರೀಯ ವ್ಯಾಪಾರ ಸುಲಭವಾಗುವುದು. ವಿಶ್ವದ ಬಹುಪಾಲು ವ್ಯಾಪಾರ USD ಯಲ್ಲಿ ನಡೆಯುವುದರಿಂದ ಆಮದು-ರಫ್ತು ಪ್ರಕ್ರಿಯೆ ಸುಲಭವಾಗುತ್ತದೆ.
USD ವಿಶ್ವದ ಅತ್ಯಂತ ವಿಶ್ವಾಸಾರ್ಹ ಕರೆನ್ಸಿಗಳಲ್ಲಿ ಒಂದಾಗಿದೆ. ಆದ್ದರಿಂದ ಇದನ್ನು ಬಳಸುವ ದೇಶಗಳಲ್ಲಿ ಸಾಮಾನ್ಯವಾಗಿ ಹಣದುಬ್ಬರ ಕಡಿಮೆ ಇರುತ್ತದೆ.ಇವತ್ತಿನ ಪರಿಸ್ಥಿತಿ ಹಿಂದಿನಂತಿಲ್ಲ ಎನ್ನುವುದರ ಬಗ್ಗೆ ಬೇರೊಂದು ಲೇಖನವನ್ನು ಬರೆಯಬಹುದು.
ಜನರ ಉಳಿತಾಯದ ಮೌಲ್ಯ ಸ್ಥಿರವಾಗಿರುತ್ತದೆ. ಸ್ಥಳೀಯ ಕರೆನ್ಸಿಯ ಮೌಲ್ಯ ಕುಸಿತದ ಭಯ ಇರುವುದಿಲ್ಲ.
ವಿದೇಶಿ ಹೂಡಿಕೆದಾರರಿಗೆ ಹೆಚ್ಚು ವಿಶ್ವಾಸ ಮೂಡುತ್ತದೆ. ಹೂಡಿಕೆಗಳು ಹೆಚ್ಚಾದರೆ ಉದ್ಯೋಗಾವಕಾಶಗಳು ಕೂಡ ಹೆಚ್ಚುತ್ತವೆ.
ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ವಿನಿಮಯ ದರದ ಅಪಾಯ ಕಡಿಮೆಯಾಗುತ್ತದೆ. ಕಂಪನಿಗಳಿಗೆ ಲಾಭದಾಯಕವಾಗುತ್ತದೆ.
ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯ ಮೇಲಿನ ವಿಶ್ವಾಸ ಹೆಚ್ಚುತ್ತದೆ.
ಪ್ರವಾಸೋದ್ಯಮಕ್ಕೆ ಸಹ ಅನುಕೂಲವಾಗುತ್ತದೆ. ಅಮೆರಿಕ ಅಥವಾ ಇತರ ದೇಶಗಳಿಂದ ಬರುವ ಪ್ರವಾಸಿಗರಿಗೆ ಹಣ ವಿನಿಮಯದ ಅಗತ್ಯ ಕಡಿಮೆಯಾಗುತ್ತದೆ.
ಅತ್ಯಂತ ದೊಡ್ಡ ನಷ್ಟವೆಂದರೆ ದೇಶ ತನ್ನ ಹಣಕಾಸು ನೀತಿಯ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತದೆ. USD ಬಳಸುವ ದೇಶವು ತನ್ನ ಇಚ್ಛೆಯಂತೆ ಬಡ್ಡಿದರವನ್ನು ಕಡಿಮೆ ಅಥವಾ ಹೆಚ್ಚಿಸಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ಅಮೆರಿಕದ Federal Reserve ತೆಗೆದುಕೊಳ್ಳುತ್ತದೆ.
ಅಗತ್ಯವಿದ್ದಾಗ ಸರ್ಕಾರ ಹೊಸ ಹಣವನ್ನು ಮುದ್ರಿಸಿ ಆರ್ಥಿಕತೆಗೆ ನೆರವಾಗಲು ಸಾಧ್ಯವಾಗುವುದಿಲ್ಲ.
ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರ ನೀಡಲು ಹಣಕಾಸಿನ ಸ್ವಾತಂತ್ರ್ಯ ಇರುವುದಿಲ್ಲ.
USD ಕೊರತೆಯಾದರೆ ಬ್ಯಾಂಕುಗಳಲ್ಲಿ ನಗದು ಸಮಸ್ಯೆ ಉಂಟಾಗಬಹುದು.
ದೇಶವು ತನ್ನ ಕರೆನ್ಸಿಯಿಂದ ದೊರೆಯುವ Seigniorage (ನೋಟು ಮುದ್ರಣದಿಂದ ಸರ್ಕಾರಕ್ಕೆ ದೊರೆಯುವ ಆದಾಯ) ಕಳೆದುಕೊಳ್ಳುತ್ತದೆ.
ದೇಶದ ಆರ್ಥಿಕತೆ ಅಮೆರಿಕದ ಹಣಕಾಸು ನೀತಿಗಳ ಮೇಲೆ ಹೆಚ್ಚು ಅವಲಂಬಿತವಾಗುತ್ತದೆ.
ಭಾರತವು ಪ್ರಪಂಚದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದ ಅಧಿಕೃತ ಕರೆನ್ಸಿ ಭಾರತೀಯ ರೂಪಾಯಿ (INR) ಆಗಿದೆ. ಭಾರತ USD ಅನ್ನು ತನ್ನ ಕರೆನ್ಸಿಯಾಗಿ ಬಳಸದೇ ಇರುವುದಕ್ಕೆ ಹಲವು ಪ್ರಮುಖ ಕಾರಣಗಳಿವೆ.
ಮೊದಲನೆಯದಾಗಿ, ಆರ್ಥಿಕ ಸ್ವಾಯತ್ತತೆ. ಒಂದು ದೇಶದ ಹಣಕಾಸು ನೀತಿಯನ್ನು ತನ್ನ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಬೇಕಾಗುತ್ತದೆ. ಭಾರತದಲ್ಲಿ ಬಡ್ಡಿದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನಿಗದಿಪಡಿಸುತ್ತದೆ. ಭಾರತ USD ಬಳಸಿದರೆ ಈ ಅಧಿಕಾರವನ್ನು ಕಳೆದುಕೊಳ್ಳುತ್ತದೆ.
ಎರಡನೆಯದಾಗಿ, ಭಾರತದ ಆರ್ಥಿಕತೆ ಬಹಳ ದೊಡ್ಡದು ಮತ್ತು ವೈವಿಧ್ಯಮಯವಾಗಿದೆ. ಕೃಷಿ, ಕೈಗಾರಿಕೆ, ಸೇವಾ ವಲಯ, ಐಟಿ, ಉತ್ಪಾದನೆ, ರಫ್ತು, ಆಮದು ಎಲ್ಲವೂ ದೊಡ್ಡ ಪ್ರಮಾಣದಲ್ಲಿವೆ. ಇಂತಹ ದೇಶಕ್ಕೆ ತನ್ನದೇ ಆದ ಕರೆನ್ಸಿ ಅತ್ಯಗತ್ಯ.
ಮೂರನೆಯದಾಗಿ, ಸರ್ಕಾರ ಅಗತ್ಯವಿದ್ದಾಗ ಹಣಕಾಸು ನೀತಿಯ ಮೂಲಕ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಬಹುದು. ಉದಾಹರಣೆಗೆ, ಕೋವಿಡ್ ಸಮಯದಲ್ಲಿ RBI ಬಡ್ಡಿದರ ಕಡಿಮೆ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ನೆರವಾಯಿತು. USD ಇದ್ದಿದ್ದರೆ ಇಂತಹ ಕ್ರಮ ಸಾಧ್ಯವಾಗುತ್ತಿರಲಿಲ್ಲ.
ನಾಲ್ಕನೆಯದಾಗಿ, ಭಾರತ ತನ್ನ ಕರೆನ್ಸಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಬಳಸುವಂತೆ ಮಾಡುವ ಪ್ರಯತ್ನದಲ್ಲಿದೆ. ಅನೇಕ ದೇಶಗಳೊಂದಿಗೆ ರೂಪಾಯಿಯಲ್ಲೇ ವ್ಯಾಪಾರ ಮಾಡುವ ವ್ಯವಸ್ಥೆಗಳನ್ನು ಭಾರತ ವಿಸ್ತರಿಸುತ್ತಿದೆ. ಇದು ಭಾರತದ ಆರ್ಥಿಕ ಪ್ರಭಾವವನ್ನು ಹೆಚ್ಚಿಸುತ್ತದೆ. ನೀವು ನಂಬುವುದಿಲ್ಲ , ಶ್ರೀಲಂಕಾ , ಥೈಲ್ಯಾಂಡ್ , ವಿಯೆಟ್ನಾಮ್ ಗಳಲ್ಲಿ ನಾನು ಭಾರತೀಯ ರೂಪಾಯಿ ನೀಡಿ ಖರೀದಿ ಮಾಡಿದ್ದೇನೆ. ಅಲ್ಲಿನ ಜನ ನಮ್ಮ ನಗದು ಸ್ವೀಕರಿಸಿದ್ದಾರೆ. ಈ ವಾರ ಕಾಂಬೋಡಿಯಾದಲ್ಲಿ ಸಹ ಭಾರತೀಯ ರೂಪಾಯಿ ನೀಡಿ ಶರ್ಟ್ ಒಂದನ್ನು ನೆನಪಿಗಾಗಿ ಖರೀದಿಸಿದೆ !
ಐದನೆಯದಾಗಿ, ರೂಪಾಯಿ ದೇಶದ ಆರ್ಥಿಕ ಗುರುತು ಮಾತ್ರವಲ್ಲ, ಅದು ಭಾರತದ ಸಾರ್ವಭೌಮತ್ವದ ಸಂಕೇತವೂ ಆಗಿದೆ. ತನ್ನದೇ ಕರೆನ್ಸಿಯನ್ನು ಹೊಂದಿರುವುದು ಒಂದು ರಾಷ್ಟ್ರದ ಸ್ವತಂತ್ರ ಆರ್ಥಿಕ ನಿರ್ಧಾರಗಳ ಪ್ರತೀಕ.
ಭಾರತ USD ಬಳಸಿದರೆ ಕೆಲವು ಲಾಭಗಳಿರಬಹುದು. ವಿದೇಶಿ ಹೂಡಿಕೆ ಹೆಚ್ಚಾಗಬಹುದು. ವಿನಿಮಯ ದರದ ಅಪಾಯ ಕಡಿಮೆಯಾಗಬಹುದು. ಆದರೆ ನಷ್ಟಗಳು ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತದೆ. RBI ತನ್ನ ಅಧಿಕಾರದ ಬಹುಭಾಗ ಕಳೆದುಕೊಳ್ಳುತ್ತದೆ. ಭಾರತ ತನ್ನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಡ್ಡಿದರ ಅಥವಾ ಹಣಕಾಸು ನೀತಿಯನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಭಾರತದ ಆರ್ಥಿಕತೆ ಅಮೆರಿಕದ ನಿರ್ಧಾರಗಳ ಮೇಲೆ ಅವಲಂಬಿತವಾಗುತ್ತದೆ. ಇದು ಭಾರತದಂತಹ ಒಂದೂವರೆ ಬಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ರಾಷ್ಟ್ರಕ್ಕೆ ಸೂಕ್ತವಲ್ಲ.
ಕೊನೆಮಾತು: USDಯನ್ನು ವಿನಿಮಯವನ್ನಾಗಿ ಬಳಸುವ ದೇಶಗಳು ಹೆಚ್ಚಾಗಿ ಸಣ್ಣ ಆರ್ಥಿಕತೆ ಹೊಂದಿರುವ ಅಥವಾ ಭಾರೀ ಹಣದುಬ್ಬರದಿಂದ ಬಳಲಿದ ರಾಷ್ಟ್ರಗಳಾಗಿವೆ. ಅವರಿಗೆ USD ಸ್ಥಿರತೆ, ವಿಶ್ವಾಸ ಮತ್ತು ಹೂಡಿಕೆಗಳನ್ನು ತಂದುಕೊಟ್ಟಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ, ಆದರೆ ಯಾವುದು ಇಲ್ಲಿ ಪುಕ್ಕಟೆ ಸಿಗುವುದಿಲ್ಲ. ಅವರು ತಮ್ಮ ಹಣಕಾಸಿನ ಸ್ವಾಯತ್ತತೆಯ ಒಂದು ಭಾಗವನ್ನು ಕಳೆದುಕೊಂಡಿದ್ದಾರೆ. ಅಂದರೆ ಕಾಂಬೋಡಿಯಾ ಹಣಕಾಸಿನ ನಿರ್ಧಾರಗಳು ಅಮೇರಿಕಾ ನಿರ್ಧಾರಗಳ ಮೇಲೆ ಅವಲಂಬಿತವಾಗಿವೆ.
ಭಾರತದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಭಾರತವು ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ತನ್ನದೇ ಆದ ಕರೆನ್ಸಿಯಾದ ರೂಪಾಯಿಯನ್ನು ಹೊಂದಿರುವುದರಿಂದ ದೇಶವು ತನ್ನ ಅಗತ್ಯಗಳಿಗೆ ಅನುಗುಣವಾಗಿ ಹಣಕಾಸು ನೀತಿಗಳನ್ನು ರೂಪಿಸಬಹುದು, ಆರ್ಥಿಕ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಬಹುದು ಮತ್ತು ದೀರ್ಘಾವಧಿಯಲ್ಲಿ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯಬಹುದು.ಇದನ್ನು ನಾವೀಗ ನೋಡುತ್ತಿದ್ದೇವೆ. ಆದ್ದರಿಂದ ಭಾರತಕ್ಕೆ USD ಅನ್ನು ಸ್ಥಳೀಯ ಕರೆನ್ಸಿಯಾಗಿ ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಭಾರತ ತನ್ನ ರೂಪಾಯಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ದಿಕ್ಕಿನಲ್ಲಿ ಸಾಗುತ್ತಿದೆ. ನಾಳೆ ಅಮೇರಿಕಾ ಕುಸಿದರೆ ಡಾಲರನ್ನು ವಿನಿಮಯವನ್ನಾಗಿ ಒಪ್ಪಿಕೊಂಡಿರುವ ಈ ಎಲ್ಲಾ ದೇಶಗಳೂ ಕೂಡ ತಮ್ಮದಲ್ಲದ ತಪ್ಪಿಗೆ ಕುಸಿತವನ್ನು ಕಾಣುತ್ತವೆ.