Space X IPO ಬಗ್ಗೆ ನಿಮಗೆ ತಿಳಿದಿರಬೇಕಾದ ಅಂಶಗಳು! (ಹಣಕ್ಲಾಸು)

ಎಲಾನ್ ಮಸ್ಕ್ ಅವರ ನೇತೃತ್ವದಲ್ಲಿ ಬೆಳೆದಿರುವ ಈ ಸಂಸ್ಥೆ ಜಾಗತಿಕ ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಭವಿಷ್ಯದ ಆರ್ಥಿಕತೆಯನ್ನು ರೂಪಿಸುವ ಶಕ್ತಿಯಾಗಿ ಬೆಳೆದು ನಿಂತಿದೆ.
Space X IPO
ಸ್ಪೇಸ್ ಎಕ್ಸ್ ಐಪಿಒ
Updated on

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ತಂತ್ರಜ್ಞಾನ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ.

ಒಂದು ಕಾಲದಲ್ಲಿ ಸರ್ಕಾರಗಳ ಕೈಯಲ್ಲಿ ಮಾತ್ರ ಇದ್ದ ಬಾಹ್ಯಾಕಾಶ ಸಂಶೋಧನೆ ಮತ್ತು ಉಪಗ್ರಹ ಉಡಾವಣೆಗಳು ಇಂದು ಖಾಸಗಿ ಕಂಪನಿಗಳ ಪ್ರಮುಖ ವ್ಯವಹಾರವಾಗಿ ರೂಪುಗೊಂಡಿದೆ.

ಈ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ಹೆಸರು ಎಂದರೆ SpaceX.

ಎಲಾನ್ ಮಸ್ಕ್ ಅವರ ನೇತೃತ್ವದಲ್ಲಿ ಬೆಳೆದಿರುವ ಈ ಸಂಸ್ಥೆ ಜಾಗತಿಕ ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಭವಿಷ್ಯದ ಆರ್ಥಿಕತೆಯನ್ನು ರೂಪಿಸುವ ಶಕ್ತಿಯಾಗಿ ಬೆಳೆದು ನಿಂತಿದೆ.

ಈ ಸಂಸ್ಥೆಯ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆಯಾದ ಐಪಿಒ (Initial Public Offering) ಇದೆ ವರ್ಷ ಅಂದರೆ ಜೂನ್ ೧೨,೨೦೨೬ ರಂದು ಶುರುವಾಗಲಿದೆ.

ಇದರ ಪರಿಣಾಮ ಕೇವಲ ಹೂಡಿಕೆದಾರರ ಮೇಲೆ ಮಾತ್ರವಲ್ಲದೆ ಜಾಗತಿಕ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ.

Space X IPO
AI ಸೇವೆಗಳಲ್ಲಿ ಕೂಡ ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಚೀನಾ! (ಹಣಕ್ಲಾಸು)

ಐಪಿಒ ಎಂದರೇನು ಮತ್ತು ಸ್ಪೇಸ್ ಎಕ್ಸ್ ಐಪಿಒ ಏಕೆ ಮಹತ್ವದ್ದು?

ಒಂದು ಖಾಸಗಿ ಕಂಪನಿ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮೊದಲ ಬಾರಿಗೆ ಮಾರಾಟ ಮಾಡುವುದನ್ನು ಐಪಿಒ ಎಂದು ಕರೆಯಲಾಗುತ್ತದೆ. ಇದರಿಂದ ಕಂಪನಿಯು ದೊಡ್ಡ ಪ್ರಮಾಣದ ಬಂಡವಾಳವನ್ನು ಸಂಗ್ರಹಿಸಬಹುದು. ಈ ಹಣವನ್ನು ಹೊಸ ಯೋಜನೆಗಳು, ಸಂಶೋಧನೆ, ಉತ್ಪಾದನಾ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಗೆ ಬಳಸಬಹುದು.

ಸ್ಪೇಸ್‌ಎಕ್ಸ್‌ನಂತಹ ಕಂಪನಿ ಐಪಿಒ ಮೂಲಕ ಸಾರ್ವಜನಿಕ ಮಾರುಕಟ್ಟೆಗೆ ಬಂದರೆ ಅದು ಕೇವಲ ಹತ್ತರಲ್ಲಿ ಹನ್ನೊಂದು ಎನ್ನುವಂತಾಗಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಬರುತ್ತಿರಲಿಲ್ಲ. ಹೀಗೆ ಹೇಳಲು ಕಾರಣ , ವಾರ್ಷಿಕವಾಗಿ ಸಾವಿರ ದಿಂದ ಸಾವಿರ ಮುನ್ನೂರು ಸಂಸ್ಥೆಗಳು ಐಪಿಒ ವಿತರಿಸಲ್ಪಡುತ್ತದೆ. ಸ್ಪೇಸ್ ಎಕ್ಸ್ ಬಾಹ್ಯಾಕಾಶ ಆರ್ಥಿಕತೆಯ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿರುವ ಸಂಸ್ಥೆ. ಸಾವಿರಾರು ಉಪಗ್ರಹಗಳನ್ನು ಒಳಗೊಂಡ ಸ್ಟಾರ್ಲಿಂಕ್ ಜಾಲವನ್ನು ನಿರ್ಮಿಸಿದೆ. ಈ ಸಂಸ್ಥೆಯ ಮೌಲ್ಯ ಈಗಾಗಲೇ ಅನೇಕ ದೇಶಗಳ ವಾರ್ಷಿಕ ಬಜೆಟ್‌ಗಳಿಗಿಂತಲೂ ಹೆಚ್ಚಾಗಿದೆ.ಅಲ್ಲದೆ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಈ ಮಟ್ಟದ ಹಣವನ್ನು ಮಾರುಕಟ್ಟೆಯಲ್ಲಿ ಎತ್ತಿದ ಉದಾಹರಣೆಯಿಲ್ಲ.

ಹೀಗಾಗಿ ಸ್ಪೇಸ್ ಎಕ್ಸ್ ಐಪಿಒ ಚರಿತ್ರೆಯನ್ನು ನಿರ್ಮಿಸುತ್ತಿದೆ. ನಿಮಗೆಲ್ಲಾ ಗೊತ್ತಿರಲಿ ಈ ಹಿಂದೆ ಅಂದರೆ ೨೦೧೪ ರಲ್ಲಿ ಚೀನಾದ ಅಲಿಬಾಬಾ ಸಂಸ್ಥೆ ೨೫ ಬಿಲಿಯನ್ ಡಾಲರ್ ಹಣವನ್ನು ಮಾರುಕಟ್ಟೆಯಿಂದ ಸಂಗ್ರಹಿಸಿ ಇತಿಹಾಸ ನಿರ್ಮಿಸಿತ್ತು. ಆ ನಂತರ ೨೦೧೯ ರಲ್ಲಿ ಸೌದಿ ಅರಾಮ್ಕೋ ೨೯.೪ ಬಿಲಿಯನ್ ಡಾಲರ್ ಸಂಗ್ರಹಣೆ ಮಾಡಿತ್ತು. ಆ ನಂತರ ಈಗ ಜೂನ್ ೧೨,೨೦೨೬ ರಂದು ಸ್ಪೇಸ್ ಎಕ್ಸ್ ಬರೋಬ್ಬರಿ ೭೫ ಬಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ.

Space X IPO
ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)

ಆರ್ಥಿಕ ದೃಷ್ಟಿಯಿಂದ ನೋಡಿದರೆ, ಸ್ಪೇಸ್‌ಎಕ್ಸ್ ಐಪಿಒ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿದರೆ ಅದೂ ಈಗಿರುವ ಅಸ್ಥಿರ ಸಮಯದಲ್ಲಿ ಅದು ನಿಜಕ್ಕೂ ಹೊಸ ಇತಿಹಾಸವನ್ನು ಸೃಷ್ಟಿಸಿದಂತಾಗುತ್ತದೆ. ಈ ಹಣವನ್ನು ಹೊಸ ರಾಕೆಟ್‌ಗಳ ಅಭಿವೃದ್ಧಿ, ಮರುಬಳಕೆ ಮಾಡಬಹುದಾದ ಉಡಾವಣಾ ವ್ಯವಸ್ಥೆಗಳು, ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಜಾಗತಿಕ ಇಂಟರ್ನೆಟ್ ಸೇವೆಗಳ ವಿಸ್ತರಣೆಗೆ ಬಳಸಬಹುದು.

ಆರ್ಥಿಕತೆಯಲ್ಲಿ ಬಂಡವಾಳ ಹೂಡಿಕೆಯು ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವಾಗಿದೆ. ಹೊಸ ಕಾರ್ಖಾನೆಗಳು, ಸಂಶೋಧನಾ ಕೇಂದ್ರಗಳು, ಎಂಜಿನಿಯರಿಂಗ್ ಘಟಕಗಳು ಮತ್ತು ಉತ್ಪಾದನಾ ಘಟಕಗಳು ಸ್ಥಾಪನೆಯಾಗುವಾಗ ಸಾವಿರಾರು ನೇರ ಹಾಗೂ ಲಕ್ಷಾಂತರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಸ್ಪೇಸ್‌ಎಕ್ಸ್ ಐಪಿಒ ಅಮೆರಿಕ ಮಾತ್ರವಲ್ಲದೆ ಅದರ ಪೂರೈಕೆ ಸರಪಳಿಗೆ(ಸಪ್ಲೈ ಚೈನ್ ) ಸಂಬಂಧಿಸಿದ ಅನೇಕ ದೇಶಗಳ ಆರ್ಥಿಕತೆಗೆ ಸಹಕಾರಿಯಾಗಬಹುದು.

ಇತಿಹಾಸವನ್ನು ನೋಡಿದರೆ, ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯು ಹೊಸ ತಂತ್ರಜ್ಞಾನಗಳ ಬೆಳವಣಿಗೆಗೆ ಕಾರಣವಾಗಿದೆ. ರೈಲ್ವೆ, ವಿದ್ಯುತ್, ಇಂಟರ್ನೆಟ್ ಮತ್ತು ಮೊಬೈಲ್ ಸಂವಹನ ಕ್ಷೇತ್ರಗಳು ಹೀಗೆ ಬೆಳೆದವು. ಅದೇ ರೀತಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನವೂ ಮುಂದಿನ ದೊಡ್ಡ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆಯುವ ಸಾಧ್ಯತೆಗಳಲಿವೆ.

ಸ್ಪೇಸ್‌ಎಕ್ಸ್ ತನ್ನ ಆದಾಯದ ಬಹುಪಾಲನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಬಳಸುತ್ತಿದೆ. ಕಂಪನಿಯು ಸಂಗ್ರಹಿಸುವ ಹೆಚ್ಚುವರಿ ಬಂಡವಾಳವು ಹೆಚ್ಚು ಪರಿಣಾಮಕಾರಿ ರಾಕೆಟ್‌ಗಳು, ಕಡಿಮೆ ವೆಚ್ಚದ ಉಡಾವಣೆ ವ್ಯವಸ್ಥೆಗಳು ಮತ್ತು ಜಾಗತಿಕ ಮಟ್ಟದ ಉಪಗ್ರಹ ಸೇವೆಗಳ ಅಭಿವೃದ್ಧಿಗೆ ನೆರವಾಗಬಹುದು. ಇದರ ಪರಿಣಾಮವಾಗಿ ಇಂಟರ್ನೆಟ್ ಸೇವೆಗಳ ವೆಚ್ಚ ಕಡಿಮೆಯಾಗಬಹುದು, ದೂರದ ಪ್ರದೇಶಗಳಿಗೆ ಸಂಪರ್ಕ ಸಿಗಬಹುದು ಮತ್ತು ಹೊಸ ಡಿಜಿಟಲ್ ಆರ್ಥಿಕ ಅವಕಾಶಗಳು ಇನ್ನಷ್ಟು ಹೆಚ್ಚಾಗುತ್ತದೆ.

Space X IPO
ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ ನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಇತ್ತೀಚಿನ ವರ್ಷಗಳಲ್ಲಿ “ಸ್ಪೇಸ್ ಎಕಾನಮಿ” ಎಂಬ ಪದ ಹೆಚ್ಚು ಬಳಕೆಯಾಗುತ್ತಿದೆ. ಇದು ಕೇವಲ ರಾಕೆಟ್ ಉಡಾವಣೆಗಳನ್ನು ಮಾತ್ರ ಒಳಗೊಂಡಿಲ್ಲ. ಉಪಗ್ರಹ ಸಂವಹನ, ಹವಾಮಾನ ನಿರೀಕ್ಷೆ, ಕೃಷಿ ಮಾಹಿತಿ, ಜಿಪಿಎಸ್ ಸೇವೆಗಳು, ರಕ್ಷಣಾ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಆಧಾರಿತ ಡೇಟಾ ಸೇವೆಗಳನ್ನೂ ಒಳಗೊಂಡಿದೆ.

ಸ್ಪೇಸ್‌ಎಕ್ಸ್ ಐಪಿಒ ಯಶಸ್ವಿಯಾದರೆ, ಹೂಡಿಕೆದಾರರ ಗಮನ ಬಾಹ್ಯಾಕಾಶ ಕ್ಷೇತ್ರದತ್ತ ಹೆಚ್ಚಾಗಬಹುದು. ಇದರಿಂದ ಇತರ ಸಣ್ಣ ಕಂಪನಿಗಳಿಗೂ ಹೂಡಿಕೆ ದೊರೆಯಬಹುದು. ಒಂದು ಕಂಪನಿಯ ಯಶಸ್ಸು ಇಡೀ ಕ್ಷೇತ್ರಕ್ಕೆ ಬಲ ತುಂಬುವ ಸಾಧ್ಯತೆ ಇದೆ. ಹೇಗೆ ಟೆಸ್ಲಾದ ಯಶಸ್ಸಿನ ನಂತರ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾಯಿತೋ, ಅದೇ ರೀತಿ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ವಿಷಯ ಯಾವುದೇ ಇರಲಿ ಅದರಲ್ಲಿ ಕನಿಷ್ಠ ಎರಡು ಆಯಾಮಗಳು ಇದ್ದೆ ಇರುತ್ತವೆ. ಸ್ಪೇಸ್ ಎಕ್ಸ್ ಮೇಲಿನ ಹೂಡಿಕೆ ಐಟಿ ಕ್ಷೇತ್ರದ ಮೇಲಿನ ಹೂಡಿಕೆ ಹಿಂಪಡೆದು ಅಥವಾ ಅಲ್ಲಿ ಹೂಡಿಕೆ ಮಾಡದೆ ಇಲ್ಲಿ ಹೂಡಿಕೆ ಮಾಡುವ ಸಾಧ್ಯತೆಯನ್ನು ಹೆಚ್ಚಸುತ್ತದೆ. ಹೀಗಾಗಿ ಗ್ಲೋಬಲ್ ಐಟಿ ಮಾರುಕಟ್ಟೆ ಕುಸಿಯುವ ಸಂಭ್ಯಾವತೆ ಹೆಚ್ಚಾಗಿದೆ.

Space X IPO
ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)

ಇದುವರೆಗೆ ಸ್ಪೇಸ್‌ಎಕ್ಸ್‌ನಲ್ಲಿ ಹೂಡಿಕೆ ಮಾಡುವ ಅವಕಾಶವು ಮುಖ್ಯವಾಗಿ ದೊಡ್ಡ ಖಾಸಗಿ ಹೂಡಿಕೆ ಸಂಸ್ಥೆಗಳು ಮತ್ತು ಶ್ರೀಮಂತ ಹೂಡಿಕೆದಾರರಿಗೆ ಮಾತ್ರ ಲಭ್ಯವಿತ್ತು. ಐಪಿಒ ನಂತರ ಸಾಮಾನ್ಯ ಜನರೂ ಕಂಪನಿಯ ಷೇರುಗಳನ್ನು ಖರೀದಿಸುವ ಅವಕಾಶ ಪಡೆಯುತ್ತಾರೆ.ಸಾಮಾನ್ಯವಾಗಿ ಐಪಿಒ ಗಳಲ್ಲಿ ೫ ರಿಂದ ೧೦ ಪ್ರತಿಶತ ಮಾತ್ರ ರಿಟೇಲ್ ಇನ್ವೆಸ್ಟರ್ ಅಂದರೆ ಸಾಮಾನ್ಯ ಹೂಡಿಕೆದಾರರಿಗೆ ನೀಡುತ್ತಾರೆ. ಆದರೆ ಸ್ಪೇಸ್ ಎಕ್ಸ್ ೩೦ ಪ್ರತಿಶತ ಹಣವನ್ನು ಸಾಮಾನ್ಯ ಹೂಡಿಕೆದಾರರಿಂದ ಸಂಗ್ರಹಿಸಲು ನಿರ್ಧಾರ ಮಾಡಿದೆ. ಆದರೆ ಇದನ್ನು ಹೇಗೆ ಅಲೋಕೇಟ್ ಮಾಡುತ್ತಾರೆ ಎನ್ನುವ ಗುಟ್ಟನ್ನು ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ. ಆರ್ಥಿಕ ದೃಷ್ಟಿಯಿಂದ ಇದು ಸಂಪತ್ತಿನ ಸೃಷ್ಟಿಯಲ್ಲಿ ಹೆಚ್ಚಿನ ಜನರ ಭಾಗವಹಿಸುವಿಕೆಗೆ ಕಾರಣವಾಗಬಹುದು. ಕಂಪನಿಯ ಬೆಳವಣಿಗೆಯಿಂದಾಗುವ ಲಾಭದಲ್ಲಿ ಸಾರ್ವಜನಿಕರೂ ಪಾಲುದಾರರಾಗುತ್ತಾರೆ. ಇದು ಬಂಡವಾಳ ಮಾರುಕಟ್ಟೆಯ ವಿಸ್ತರಣೆಗೆ ಸಹಕಾರಿಯಾಗುತ್ತದೆ.

ಮೌಲ್ಯಮಾಪನ ಮತ್ತು ಊಹಾಪೋಹದ ಅಪಾಯ !

ಪ್ರತಿಯೊಂದು ದೊಡ್ಡ ಅವಕಾಶದ ಜೊತೆಗೆ ಕೆಲವು ಅಪಾಯಗಳೂ ಜೊತೆಯಾಗುತ್ತವೆ. ಸ್ಪೇಸ್‌ಎಕ್ಸ್‌ನ ಮೌಲ್ಯ ಈಗಾಗಲೇ ಅತ್ಯಂತ ದೊಡ್ಡ ಮಟ್ಟದಲ್ಲಿದೆ. ಅನೇಕ ವಿಶ್ಲೇಷಕರು ಅದರ ಭವಿಷ್ಯದ ಬೆಳವಣಿಗೆಯನ್ನು ಆಧರಿಸಿ ಮೌಲ್ಯ ನಿರ್ಧರಿಸುತ್ತಿದ್ದಾರೆ. ಇದು ೧.೭೫ ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಿದ್ದಾರೆ.

ಒಂದು ವೇಳೆ ಕಂಪನಿಯ ಆದಾಯ ನಿರೀಕ್ಷಿಸಿದಷ್ಟು ವೇಗವಾಗಿ ಬೆಳೆಯದಿದ್ದರೆ ಅಥವಾ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳು ವಿಫಲವಾದರೆ ಷೇರು ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಬಹುದು. ಆರ್ಥಿಕ ಇತಿಹಾಸದಲ್ಲಿ ಅನೇಕ ಬಾರಿ ಹೂಡಿಕೆದಾರರು ಭವಿಷ್ಯದ ಕನಸುಗಳ ಆಧಾರದ ಮೇಲೆ ಅತಿಯಾದ ಮೌಲ್ಯ ನೀಡಿದ್ದು, ನಂತರ ಬಬಲ್ ಸ್ಫೋಟಗೊಂಡ ಉದಾಹರಣೆಗಳಿವೆ.ಇದರ ಜೊತೆಗೆ ೩೦ ಪ್ರತಿಶತ ಸಾಮಾನ್ಯ ಹೂಡಿಕೆದಾರರಿಂದ ಪಡೆಯುವ ಉದ್ದೇಶ ಮೊದಲಿಗೆ ಹೂಡಿಕೆ ಮಾಡಿದ್ದ ಅಂದರೆ ಇನಿಶಿಯಲ್ ಇನ್ವೆಸ್ಟರ್ಸ್ ಗಳಿಗೆ ಎಕ್ಸಿಟ್ ನೀಡುವುದಕ್ಕೆ ಎನ್ನುವ ಮಾತು ಕೂಡ ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜವಾಗಿದ್ದರೆ ವ್ಯಾಲ್ಯೂವೇಷನ್ ಖಂಡಿತ ಹೈಪ್ ಮಾಡಿರುತ್ತಾರೆ. ಹೀಗಾಗಿ ಸ್ಪೇಸ್‌ಎಕ್ಸ್ ಐಪಿಒ ಹೂಡಿಕೆದಾರರಿಗೆ ದೊಡ್ಡ ಅವಕಾಶವಾಗಿದ್ದರೂ, ಅದರ ಮೌಲ್ಯಮಾಪನವನ್ನು (ವ್ಯಾಲ್ಯೂವೇಷನ್ ) ಎಚ್ಚರಿಕೆಯಿಂದ ಪರಿಗಣಿಸುವುದು ಅಗತ್ಯ.

Space X IPO
EV ಕಾರು ಕೊಳ್ಳುವುದು ಓಕೆನಾ? ಅಥವಾ ಪೆಟ್ರೋಲ್/ಡೀಸೆಲ್ ಕಾರು ಉತ್ತಮವಾ? (ಹಣಕ್ಲಾಸು)

ಭಾರತದ ಮೇಲೆ ಪರಿಣಾಮ

ಭಾರತವು ಇಂದು ವಿಶ್ವದ ಪ್ರಮುಖ ಬಾಹ್ಯಾಕಾಶ ರಾಷ್ಟ್ರಗಳಲ್ಲಿ ಒಂದಾಗಿದೆ. Indian Space Research Organisation ಅನೇಕ ಕಡಿಮೆ ವೆಚ್ಚದ ಉಡಾವಣೆಗಳ ಮೂಲಕ ಜಾಗತಿಕ ಖ್ಯಾತಿ ಗಳಿಸಿದೆ. ಸ್ಪೇಸ್‌ಎಕ್ಸ್ ಐಪಿಒ ಯಶಸ್ವಿಯಾದರೆ ಜಾಗತಿಕ ಹೂಡಿಕೆದಾರರ ಗಮನ ಬಾಹ್ಯಾಕಾಶ ಕ್ಷೇತ್ರದತ್ತ ಇನ್ನಷ್ಟು ಸೆಳೆಯಬಹುದು.ಇದರಿಂದ ಭಾರತೀಯ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು, ಉಪಗ್ರಹ ತಂತ್ರಜ್ಞಾನ ಕಂಪನಿಗಳು ಮತ್ತು ರಕ್ಷಣಾ ಕ್ಷೇತ್ರದ ಸಂಸ್ಥೆಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಬಹುದು. ಜೊತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಸಂಶೋಧನಾ ಚಟುವಟಿಕೆಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಸ್ಪೇಸ್ ಎಕ್ಸ್ ಬಹಳಷ್ಟು ವಿಚಾರಗಳಿಗೆ ಭಾರತದ ಇಸ್ರೋ ಕಡೆಗೆ ಖಂಡಿತ ಮುಖ ಮಾಡಬೇಕಾಗುತ್ತದೆ. ಭಾರತಕ್ಕೆ ಇದರಿಂದ ಅನಾನುಕೂಲಕ್ಕಿಂತ ಹೆಚ್ಚು ಅನುಕೂಲವೇ ಆಗಲಿದೆ.

ಹೋಗುವ ಮುನ್ನ : ಒಟ್ಟಾರೆ ನೋಡಿದರೆ, ಸ್ಪೇಸ್‌ಎಕ್ಸ್ ಐಪಿಒ ಮೂಲಕ ಸಂಗ್ರಹವಾಗುವ ಬಂಡವಾಳವು ಹೊಸ ತಂತ್ರಜ್ಞಾನಗಳು, ಉದ್ಯೋಗಗಳು, ಸಂಶೋಧನೆ ಮತ್ತು ಜಾಗತಿಕ ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಗೆ ನೆರವಾಗಬಹುದು. ಅದೇ ಸಮಯದಲ್ಲಿ ಅತಿಯಾದ ಮೌಲ್ಯಮಾಪನ ಮತ್ತು ಊಹಾಪೋಹದ ಹೂಡಿಕೆಗಳಿಂದ ಉಂಟಾಗಬಹುದಾದ ಅಪಾಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.ಆರ್ಥಿಕ ದೃಷ್ಟಿಯಿಂದ ಸ್ಪೇಸ್‌ಎಕ್ಸ್ ಐಪಿಒಯ ಅತ್ಯಂತ ದೊಡ್ಡ ಮಹತ್ವವೆಂದರೆ ಅದು ಬಾಹ್ಯಾಕಾಶ ಕ್ಷೇತ್ರವನ್ನು ಸರ್ಕಾರಿ ಯೋಜನೆಯಿಂದ ಜಾಗತಿಕ ವಾಣಿಜ್ಯ ಕ್ಷೇತ್ರವಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ದಶಕದಲ್ಲಿ ಇಂಟರ್ನೆಟ್ ಕ್ರಾಂತಿಯ ನಂತರದ ಅತ್ಯಂತ ದೊಡ್ಡ ಆರ್ಥಿಕ ಪರಿವರ್ತನೆಯಾಗಿ ಬಾಹ್ಯಾಕಾಶ ಆರ್ಥಿಕತೆ ಬೆಳೆಯಬಹುದಾದರೆ, ಅದರ ಕೇಂದ್ರದಲ್ಲಿ ಸ್ಪೇಸ್‌ಎಕ್ಸ್ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

ಸಾಮಾನ್ಯ ಹೂಡಿಕೆದಾರರು ಇದರಿಂದ ದೂರ ಉಳಿದುಕೊಳ್ಳುವುದು ಒಳ್ಳೆಯದು. ಏಕೆಂದರೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಮಾತ್ರ ಸಂಸ್ಥೆಯ ನಿಜವಾದ ಮೌಲ್ಯ ಗೊತ್ತಾಗುತ್ತದೆ. ಹೀಗಾಗಿ ಕಡಿಮೆ ಹಣ ಇದ್ದವರಿಗೆ ಇದು ಹೆಚ್ಚು ಅಪಾಯ. ಹೆಚ್ಚಿನ ಹಣ ಇದ್ದವರು ಅಪ್ಲೈ ಮಾಡಿ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com