

ನಿಮಗೆಲ್ಲಾ ಬ್ರಾಂಡೆಡ್ ಗೂಡ್ಸ್ ಗಳ ಬೆಲೆಯನ್ನು ಚೀನಾ ಹೇಗೆ ಜಗತ್ತಿಗೆ ತೆರೆದಿಟ್ಟಿತು ಎನ್ನುವುದು ಗೊತ್ತಿದೆ. ಹಣಕ್ಲಾಸು ಅಂಕಣ ಬರಹದಲ್ಲಿ ಅದನ್ನು ಈ ಹಿಂದೆ ಬರೆದಿದ್ದೆ. ಬ್ರಾಂಡೆಡ್ ಬಟ್ಟೆ , ಪೆರ್ಫ್ಯೂಮ್ , ವಾಚುಗಳು ಇತ್ಯಾದಿ ಎಲ್ಲವೂ ಇನ್ನೂರು, ಮುನ್ನೂರು ಪ್ರತಿಶತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಮೇರಿಕಾ ಹೇಗೆ ತನ್ನ ಜನರಿಗೆ ಮೋಸ ಮಾಡಿತು ಎನ್ನುವುದನ್ನು ಚೀನಾ ಜಗತ್ತಿಗೆ ತೆರೆದಿಟ್ಟಿತು.
ಅಮೇರಿಕಾ ಎಕಾನಮಿ, ಅದರಲ್ಲೂ ಬ್ರಾಂಡೆಡ್ ವಸ್ತುಗಳ ಮಾರುಕಟ್ಟೆ ಕುಸಿತಕ್ಕೂ ಅದು ನಾಂದಿ ಹಾಡಿತ್ತು. ಇದೀಗ ಎಐ ಸರದಿ. ಅಮೇರಿಕಾದಲ್ಲಿ ಎಐ ಸಂಸ್ಥೆಗಳ ಮೌಲ್ಯ ಆಕಾಶವನ್ನು ಛೇದಿಸಿ ಮೇಲಕ್ಕೆ ಹೋಗಿವೆ. ಅತೀ ಶೀಘ್ರದಲ್ಲಿ ಚೀನಾ ಅದನ್ನು ಭೂಮಿಗೆ ಇಳಿಸಲಿದೆ. ಹೇಗೆ ಏನು ಎತ್ತ ? ಎನ್ನುವುದನ್ನು ಕೆಳಗಿನ ಸಾಲುಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿರುವ ಒಂದು ಪ್ರಮುಖ ಪದವೆಂದರೆ “ಟೋಕನ್ಸ್”. ಸಾಮಾನ್ಯ ಜನರಿಗೆ ಇದೊಂದು ತಾಂತ್ರಿಕ , ಟೆಕ್ನಿಕಲ್ ಶಬ್ದದಂತೆ ಕೇಳಿಸಬಹುದು, ಆದರೆ ವಾಸ್ತವದಲ್ಲಿ ಇದು ನಾವು ದಿನನಿತ್ಯ ಬಳಸುತ್ತಿರುವ ಚಾಟ್‌ಜಿಪಿಟಿ, ಜೆಮಿನಿ ಅಥವಾ ಇತರ ಭಾಷಾ ಮಾದರಿಗಳ ಕಾರ್ಯವಿಧಾನದ ಮೂಲ ಘಟಕವಾಗಿದೆ. ಟೋಕನ್ಸ್ ಅನ್ನು ಸರಳವಾಗಿ ಹೇಳುವುದಾದರೆ, ಮಾನವ ಭಾಷೆಯನ್ನು ಯಂತ್ರಗಳು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿಭಜಿಸುವ ಅತಿಸಣ್ಣ ಭಾಗಗಳು ಎಂದು ಹೇಳಬಹುದು. ನಾವು ಮಾತನಾಡುವಾಗ ಪದಗಳನ್ನು ಬಳಸುವಂತೆ, ಕೃತಕ ಬುದ್ಧಿಮತ್ತೆ ಪದಗಳನ್ನು ಇನ್ನೂ ಸಣ್ಣ ಘಟಕಗಳಾಗಿ ಒಡೆದು ಅವುಗಳ ಮೂಲಕ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಉತ್ತರಗಳನ್ನು ರಚಿಸುತ್ತದೆ.
ಒಂದು ವಾಕ್ಯವನ್ನು ಕೃತಕ ಬುದ್ಧಿಮತ್ತೆ ನೇರವಾಗಿ ಸಂಪೂರ್ಣವಾಗಿ ಓದುವುದಿಲ್ಲ. ಅದು ಮೊದಲು ಆ ವಾಕ್ಯವನ್ನು ಸಣ್ಣ ಸಣ್ಣ ಭಾಗಗಳಾಗಿ ವಿಭಜಿಸುತ್ತದೆ. ಕೆಲವೊಮ್ಮೆ ಒಂದು ಸಂಪೂರ್ಣ ಪದವೇ ಒಂದು ಟೋಕನ್ ಆಗಿರಬಹುದು, ಆದರೆ ಹಲವಾರು ಸಂದರ್ಭಗಳಲ್ಲಿ ಒಂದು ಪದದ ಭಾಗಗಳನ್ನೇ ಪ್ರತ್ಯೇಕ ಟೋಕನ್‌ಗಳಾಗಿ ವಿಭಜಿಸಲಾಗುತ್ತದೆ. ಉದಾಹರಣೆಗೆ ಒಂದು ದೀರ್ಘ ಪದವನ್ನು ಎರಡು ಅಥವಾ ಮೂರು ಭಾಗಗಳಾಗಿ ಒಡೆದು, ಪ್ರತಿಯೊಂದು ಭಾಗವನ್ನು ಪ್ರತ್ಯೇಕವಾಗಿ ಸಂಸ್ಕರಿಸಲಾಗುತ್ತದೆ. ಈ ರೀತಿಯ ವಿಭಜನೆಯ ಪ್ರಕ್ರಿಯೆಯೇ ಟೋಕನೈಜೆಷನ್ ಎಂದು ಕರೆಯಲ್ಪಡುತ್ತದೆ. ಇದರಿಂದ ಯಂತ್ರವು ಮಾನವ ಭಾಷೆಯ ಸಂಕೀರ್ಣತೆಯನ್ನು ತನಗೆ ಬೇಕಾದ ರೀತಿಯಲ್ಲಿ , ರೂಪದಲ್ಲಿ ಪರಿವರ್ತಿಸಿಕೊಳ್ಳುತ್ತದೆ.
ಈ ಟೋಕನ್ಸ್ ವ್ಯವಸ್ಥೆ ಕೃತಕ ಬುದ್ಧಿಮತ್ತೆಯ ಕಾರ್ಯಕ್ಷಮತೆಯ ಕೇಂದ್ರಬಿಂದು . ಏಕೆಂದರೆ ಯಂತ್ರವು ನೇರವಾಗಿ ಅರ್ಥಗಳನ್ನು ತಿಳಿಯುವುದಿಲ್ಲ; ಅದು ಸಂಖ್ಯೆಗಳ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದು ಟೋಕನ್ನನ್ನು ಸಂಖ್ಯೆಗಳ ಸರಣಿಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಆ ಸಂಖ್ಯೆಗಳ ನಡುವಿನ ಸಂಬಂಧಗಳನ್ನು ವಿಶ್ಲೇಷಿಸಿ ಯಂತ್ರವು ಉತ್ತರಗಳನ್ನು ರಚಿಸುತ್ತದೆ. ಈ ಕಾರಣದಿಂದ ಟೋಕನ್ಸ್ ಎಷ್ಟು ಹೆಚ್ಚು ಅಥವಾ ಕಡಿಮೆ ಆಗುತ್ತವೆ ಎಂಬುದು ಕೃತಕ ಬುದ್ಧಿಮತ್ತೆಯ ವೇಗ, ವೆಚ್ಚ ಮತ್ತು ಕಾರ್ಯಕ್ಷಮತೆಯನ್ನು ನೇರವಾಗಿ ಪ್ರಭಾವಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಟೋಕನ್ಸ್ ಕುರಿತು ಮತ್ತೊಂದು ಪ್ರಮುಖ ವಿಷಯ ಚರ್ಚೆಯಾಗುತ್ತಿದೆ. ಅದು ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆಯ ಬೆಲೆ ಸ್ಪರ್ಧೆ. ವಿಶೇಷವಾಗಿ ಚೀನಾ ಈ ಕ್ಷೇತ್ರದಲ್ಲಿ ಬಹಳ ವೇಗವಾಗಿ ಮುನ್ನಡೆಯುತ್ತಿದೆ ಎಂದು ತಂತ್ರಜ್ಞಾನ ವಲಯದಲ್ಲಿ ಹೇಳಲಾಗುತ್ತಿದೆ. ಇದಕ್ಕೆ ಮೂಲ ಕಾರಣ ಟೋಕನ್ಸ್ ಆಧಾರಿತ ವೆಚ್ಚ ಮಾದರಿ. ಏಕೆಂದರೆ ಕೃತಕ ಬುದ್ಧಿಮತ್ತೆ ಸೇವೆಗಳ ಬೆಲೆ ಸಾಮಾನ್ಯವಾಗಿ ಎಷ್ಟು ಟೋಕನ್ಸ್ ಬಳಸಲಾಗುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಒಂದು ಪ್ರಶ್ನೆಗೆ ಉತ್ತರ ನೀಡಲು ಹೆಚ್ಚು ಟೋಕನ್ಸ್ ಬೇಕಾದರೆ ಆಗ ನೀಡುವ ಸೇವೆಯ ಬೆಲೆ ಕೂಡ ಅದಕ್ಕೆ ತಕ್ಕಂತೆ ಹೆಚ್ಚಾಗುತ್ತದೆ. ಕಡಿಮೆ ಟೋಕನ್ಸ್ ಬಳಕೆಯಾದರೆ ವೆಚ್ಚ ಕಡಿಮೆಯಾಗುತ್ತದೆ.
ಚೀನಾದ ಕಂಪನಿಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿ ಪ್ರತಿಯೊಂದು ಟೋಕನ್ನನ್ನು ಅತಿ ಕಡಿಮೆ ವೆಚ್ಚದಲ್ಲಿ ಪ್ರಕ್ರಿಯೆಗೊಳಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿವೆ. ಅವರು ದೊಡ್ಡ ಪ್ರಮಾಣದ ಡೇಟಾ ಕೇಂದ್ರಗಳನ್ನು ನಿರ್ಮಿಸಿ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಗಣನ ಸಾಮರ್ಥ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರತಿಯೊಂದು ಟೋಕನ್ ಪ್ರಕ್ರಿಯೆಗೊಳಿಸುವ ವೆಚ್ಚ ಕಡಿಮೆಯಾಗುತ್ತದೆ ಮತ್ತು ಅದೇ ಸೇವೆಯನ್ನು ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯವಾಗುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಲಾಭ ಸಿಗುತ್ತದೆ. ಅಂದರೆ ಇದನ್ನು ಬಳಸುವ ಜನರಿಗೆ ಕಡಿಮೆ ಬೆಲೆಗೆ ಸಿಗುತ್ತದೆ.
ಅದರ ಜೊತೆಗೆ ಚೀನಾದಲ್ಲಿ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗೆ ಸರ್ಕಾರದ ಬೆಂಬಲವೂ ಬಹಳ ಮುಖ್ಯ ಪಾತ್ರವಹಿಸಿದೆ. ದೊಡ್ಡ ಪ್ರಮಾಣದ ಹೂಡಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸ್ಥಳೀಯ ತಂತ್ರಜ್ಞಾನ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ನೀತಿಗಳು ಈ ಕ್ಷೇತ್ರವನ್ನು ವೇಗವಾಗಿ ಮುಂದುವರಿಸುತ್ತಿವೆ. ಇದರ ಪರಿಣಾಮವಾಗಿ ಅವರು ಕೇವಲ ಉತ್ತಮ ಮಾದರಿಗಳನ್ನು ಮಾತ್ರವಲ್ಲ, ಕಡಿಮೆ ವೆಚ್ಚದ ಮಾದರಿಗಳನ್ನು ಕೂಡ ನಿರ್ಮಿಸಲು ಸಾಧ್ಯವಾಗುತ್ತಿದೆ. ಕಡಿಮೆ ವೆಚ್ಚದ ಟೋಕನ್ ಪ್ರಕ್ರಿಯೆಗೊಳಿಸುವ ಸಾಮರ್ಥ್ಯವು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಪರ್ಧೆಯನ್ನು ಉಂಟುಮಾಡುತ್ತಿದೆ. AI ಬಳಕೆಯಲ್ಲಿ ಕೂಡ ಚೀನಾ ಪ್ರೈಸ್ ವಾರ್ ಗೆ ಮುನ್ನುಡಿ ಬರೆಯಲು ಸಿದ್ಧವಾಗುತ್ತಿದೆ.
ಇದಕ್ಕೆ ವಿರುದ್ಧವಾಗಿ ಕೆಲವು ಪಾಶ್ಚಾತ್ಯ ದೇಶಗಳ ಕಂಪನಿಗಳು ಹೆಚ್ಚು ನಿಖರತೆ, ಸುರಕ್ಷತೆ ಮತ್ತು ಗುಣಮಟ್ಟದ ಮೇಲೆ ಹೆಚ್ಚು ಒತ್ತು ನೀಡುತ್ತಿವೆ. ಇದರಿಂದ ಅವರ ಮಾದರಿಗಳು ಬಹಳ ಶಕ್ತಿಶಾಲಿಯಾಗಿದ್ದರೂ, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಚೀನಾದ ತಂತ್ರಜ್ಞಾನ ಕಂಪನಿಗಳು ಹೆಚ್ಚು ಜನರಿಗೆ ಕಡಿಮೆ ಬೆಲೆಯಲ್ಲಿ ಸೇವೆ ನೀಡುವ ಮಾದರಿಯನ್ನು ಅನುಸರಿಸುತ್ತಿವೆ. ಇದರಿಂದ “ಪ್ರೈಸ್ ವಾರ್ ” ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಯುದ್ಧದಲ್ಲಿ ಯಾರು ಪ್ರತಿಯೊಂದು ಟೋಕನ್ನನ್ನು ಕಡಿಮೆ ವೆಚ್ಚದಲ್ಲಿ ಉತ್ತರ ನೀಡಲು ಸಿದ್ದ ಪಡಿಸಬಹುದು ಮತ್ತು ಅದೆಷ್ಟು ನಿಖರವಾಗಿದೆ ಎನ್ನುವುದರ ಆಧಾರದ ಮೇಲೆ ಯುದ್ಧದ ಫಲಿತಾಂಶ ಕೂಡ ನಿರ್ಧಾರವಾಗುತ್ತದೆ.
ಟೋಕನ್ಸ್ ವ್ಯವಸ್ಥೆಯ ಮತ್ತೊಂದು ಮುಖ್ಯ ಅಂಶವೆಂದರೆ ಅದು ಕೃತಕ ಬುದ್ಧಿಮತ್ತೆಯ ಸ್ಮರಣಾ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಒಂದು ಸಮಯದಲ್ಲಿ ಯಂತ್ರವು ಎಷ್ಟು ಮಾಹಿತಿಯನ್ನು ನೆನಪಿಡಬಹುದು ಎಂಬುದು ಟೋಕನ್ಸ್ ಸಂಖ್ಯೆಯಿಂದ ನಿರ್ಧಾರವಾಗುತ್ತದೆ. ಹೆಚ್ಚಿನ ಟೋಕನ್ಸ್ ಅಂದರೆ ಹೆಚ್ಚಿನ ಮಾಹಿತಿ, ಆದರೆ ಅದಕ್ಕೆ ಹೆಚ್ಚಿನ ಗಣನ ಶಕ್ತಿ ಬೇಕಾಗುತ್ತದೆ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಟೋಕನ್ಸ್ ಪ್ರಕ್ರಿಯೆಗೊಳಿಸುವ ತಂತ್ರಜ್ಞಾನವು ಬಹಳ ಮಹತ್ವದ್ದಾಗಿದೆ.
ಚೀನಾದ ಕಂಪನಿಗಳು ಈ ಕ್ಷೇತ್ರದಲ್ಲಿ “ಆಪ್ಟಿಮೈಜೇಶನ್” ಮೇಲೆ ಹೆಚ್ಚು ಗಮನ ನೀಡುತ್ತಿವೆ. ಅಂದರೆ ಅವರು ದೊಡ್ಡ ಮತ್ತು ಭಾರವಾದ ಮಾದರಿಗಳ ಬದಲು ಚಿಕ್ಕ ಆದರೆ ಪರಿಣಾಮಕಾರಿ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಮಾದರಿಗಳು ಕಡಿಮೆ ಗಣನ ಶಕ್ತಿಯಲ್ಲಿ ಹೆಚ್ಚು ಕೆಲಸ ಮಾಡುತ್ತವೆ. ಇದರ ಪರಿಣಾಮವಾಗಿ ಟೋಕನ್ ಪ್ರಕ್ರಿಯೆಗೊಳಿಸುವ ವೆಚ್ಚ ಬಹಳ ಕಡಿಮೆಯಾಗುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಅವರ ಸೇವೆಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ.
ಈ ಬೆಳವಣಿಗೆಯು ಮುಂದಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಇದೆ. ಟೋಕನ್ ವೆಚ್ಚ ಕಡಿಮೆಯಾದಂತೆ, ಕೃತಕ ಬುದ್ಧಿಮತ್ತೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತದೆ. ಶಿಕ್ಷಣ, ಆರೋಗ್ಯ, ವ್ಯವಹಾರ, ಸಂಶೋಧನೆ ಮತ್ತು ದಿನನಿತ್ಯದ ಜೀವನದಲ್ಲಿ ಇದರ ಬಳಕೆ ಬಹಳವಾಗಿ ಹೆಚ್ಚುತ್ತದೆ. ಇದರಿಂದ ಕೃತಕ ಬುದ್ಧಿಮತ್ತೆ ಕೇವಲ ದೊಡ್ಡ ಕಂಪನಿಗಳ ಸಾಧನವಾಗಿರದೆ ಸಾಮಾನ್ಯ ಜನರ ಸಾಧನವಾಗುತ್ತದೆ.
ಒಟ್ಟಾರೆ, ಸಿಂಪಲ್ಲಾಗಿ ಹೇಳುವುದಾದರೆ, ಟೋಕನ್ಸ್ ಕೃತಕ ಬುದ್ಧಿಮತ್ತೆಯ ಮೂಲಭಾಗವಾಗಿದ್ದು, ಅದು ಭಾಷೆಯನ್ನು ಯಂತ್ರಕ್ಕೆ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಇದೇ ಟೋಕನ್ಸ್ ಆಧಾರದ ಮೇಲೆ ಕೃತಕ ಬುದ್ಧಿಮತ್ತೆಯ ವೆಚ್ಚ, ವೇಗ ಮತ್ತು ಸಾಮರ್ಥ್ಯ ನಿರ್ಧಾರವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಚೀನಾ ಈ ಕ್ಷೇತ್ರದಲ್ಲಿ ಕಡಿಮೆ ವೆಚ್ಚದ ಟೋಕನ್ ಪ್ರಕ್ರಿಯೆಗೊಳಿಸುವ ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವುದರಿಂದ ಬೆಲೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಜಗತ್ತನ್ನು ಇನ್ನಷ್ಟು ವೇಗವಾಗಿ ಮತ್ತು ವ್ಯಾಪಕವಾಗಿ ಬದಲಾಯಿಸುವ ಸಾಧ್ಯತೆ ಇದೆ.
ಹೋಗುವ ಮುನ್ನ: ಅಮೆರಿಕಾದ ಷೇರು ಮಾರುಕಟ್ಟೆಯನ್ನು ಒಮ್ಮೆ ಗಮನಿಸಿ ನೋಡಿ. ಅಲ್ಲಿನ ಮಾರುಕಟ್ಟೆಯನ್ನು ಮುನ್ನೆಡೆಸುತ್ತಿರುವುದು ಕೇವಲ ಐದಾರು ಕಂಪನಿಗಳು ಮಾತ್ರ! ಮತ್ತು ಅವೆಲ್ಲವೂ ಐಟಿ ಮತ್ತು ಎಐ ಗೆ ಸಂಬಂಧಿಸಿದ್ದೇ ಆಗಿವೆ. ಚೀನಾ ಒಮ್ಮೆ ಕಡಿಮೆ ಬೆಲೆಗೆ ಸೇವೆಯನ್ನು ನೀಡಲು ಪ್ರಾರಂಭಿಸಿದರೆ ಅಮೇರಿಕಾ ಸಂಸ್ಥೆಗಳು ಕುಸಿತ ಕಾಣುವುದು ಖಚಿತ. ಅಮೇರಿಕಾ ಎಕಾನಮಿ, ಷೇರುಮಾರುಕಟ್ಟೆ ಮಹಾ ಕುಸಿತ ಕಾಣುವುದು ತಪ್ಪಿಸಲು ಸಾಧ್ಯವಿಲ್ಲ. ಇವತ್ತಲ್ಲ ನಾಳೆ AI ಬಬ್ಬಲ್ ಬರ್ಸ್ಟ್ ಆಗಲೇಬೇಕು. ಟ್ರಂಪ್ ಹುಚ್ಚಾಟ ,AI ,ಬೇಕಿಲ್ಲದ ಯುದ್ಧ ಮೂರು ಸೇರಿಕೊಂಡು ಅಮೇರಿಕಾ ಷೇರು ಮಾರುಕಟ್ಟೆ ಕುಸಿತವಾಗುವುದು ಪಕ್ಕಾ! ಅದೂ ಸಣ್ಣದಲ್ಲ, ಮಹಾಕುಸಿತ ಖಂಡಿತ. ಉಳಿದಂತೆ ಯಾವಾಗ? ಎನ್ನುವುದು ನಿರ್ಧಾರವಾಗಬೇಕು.
ಬೆರಳಿಗೆ ಸಿಬುರು ಚುಚ್ಚಿದಂತೆ ಇರಾನ್ ಅಮೇರಿಕಾ ಪಾಲಿಗೆ! ಜಗತ್ತಿನ ಮುಂದೆ ಬೆತ್ತಲಾಗುತ್ತಿದೆ ಅಮೇರಿಕಾ.ಬೇಕಿಲ್ಲದ ಯುದ್ಧಕ್ಕೆ ಕೈ ಹಾಕಿ ಕೈ ಸುಟ್ಟು ಕೊಳ್ಳುತ್ತಿದೆ . ಇದರ ಜೊತೆಗೆ UAE ಪೆಟ್ರೋ ಡಾಲರ್ ಲಾಭವಿಲ್ಲ ಎಂದು ಡಾಲರ್ ಮತ್ತು ಅಮೇರಿಕಾವನ್ನು ಡಿಚ್ ಮಾಡಿದರೆ ಅಲ್ಲಿಗೆ ಪತನಕ್ಕೆ ವೇಗ ಬರುತ್ತೆ. ಮೊದಲೇ ಹೇಳಿದಂತೆ ಟೈಮ್ ,ಯಾವಾಗ ಎನ್ನುವ ಮಹೂರ್ತವಷ್ಟೆ ಬಾಕಿ ಉಳಿದಿರುವುದು.
Advertisement